ಶನಿವಾರ, ಜೂನ್ 30, 2007

ಬಾಳೆ ಜಲಧಾರೆ ಮತ್ತು ಒಂದು ಕೋಟೆ


ರಸ್ತೆಯ ಪಕ್ಕದಲ್ಲೇ ಸುಮಾರು ೧೨೦ ಅಡಿಯೆತ್ತರದಿಂದ ಧುಮುಕುವ ಜಲಪಾತವೊಂದು ಕಾಣಬರುವುದು. ಅಗೋಸ್ಟ್ ೮, ೨೦೦೪ರಂದು ನನ್ನ ಯಮಾಹವನ್ನು ಇತ್ತ ಓಡಿಸಿದೆ. ಊರು ದಾಟಿದ ಕೂಡಲೇ ಆರಂಭವಾಗುವ ಘಟ್ಟದ ರಸ್ತೆಯಲ್ಲಿ ೮ಕಿಮಿ ಸಾಗಿದ ನಂತರ ರಸ್ತೆಯ ಪಕ್ಕದಲ್ಲೇ ಕಾಣಬರುವುದು ಈ ಜಲಪಾತ. ವಾಹನದಿಂದ ಇಳಿಯುವ ಅವಶ್ಯಕತೆಯೇ ಇಲ್ಲ. ರಸ್ತೆಗೆ ಅಷ್ಟು ಸಮೀಪದಲ್ಲಿದೆ ಈ ಜಲಧಾರೆ. ಇದೊಂದು 'ಮಳೆಗಾಲದ ಜಲಧಾರೆ'.



ಜುಲಾಯಿ ೩೦, ೨೦೦೬ರಂದು ಒಂದು ಕೋಟೆಗೆ ಹೋಗುವಾಗ ಮತ್ತದೇ ದಾರಿಯಲ್ಲಿ ಪಯಣ. ಈ ಬಾರಿ ನೀರಿನ ಪ್ರಮಾಣ ನಾನು ಕಳೆದ ಬಾರಿ ತೆರಳಿದ್ದಕ್ಕಿಂತ ಕಡಿಮೆಯಿತ್ತು.



ಹಾಗೆ ಮುಂದೆ ಮತ್ತೆ ೧೪ಕಿಮಿ ಕ್ರಮಿಸಿ ಹೋಟೆ ಇರುವ ನಗರ ತಲುಪಿದೆ. ಆ ದಿನ ಇಲ್ಲೆಲ್ಲಾ ವಿಪರೀತ ಮಳೆ. ನನಗೆ ಮಳೆಯಲ್ಲಿ ಬೈಕು ಓಡಿಸುವುದೆಂದರೆ ತುಂಬಾ ಇಷ್ಟ. ಆ ಸವಾರಿಯನ್ನು ನಾನು ಬಹಳ ಎಂಜಾಯ್ ಮಾಡಿದೆ. ಜಲಪಾತವನ್ನು ನೋಡಿ ಒಂದೆರಡು ಕಿಮಿ ಕ್ರಮಿಸಿದ ಕೂಡಲೇ ಶುರುವಾದ ಮಳೆ, ನಾನು ಕೋಟೆ ನೋಡಿ ಹಿಂತಿರುಗುವವರೆಗೂ ಕ್ಷೀಣಿಸಲಿಲ್ಲ. ಮಳೆಯಲ್ಲೇ ನಿಧಾನವಾಗಿ ಬೈಕನ್ನು ಚಲಾಯಿಸುತ್ತಾ ನಗರ ತಲುಪಿದೆ. ಮಳೆ ಕಡಿಮೆಯಾದ ನಂತರ ಕೋಟೆಯೊಳಗೆ ಹೋಗೋಣವೆಂದು ಬೈಕನ್ನು ಕೋಟೆಯ ಹೆಬ್ಬಾಗಿಲನ್ನು ದಾಟಿ ಕೋಟೆಯ ಮತ್ತೊಂದು ಬದಿಯಿರುವ ಕೋಟೆಕೆರೆಯತ್ತ ಓಡಿಸಿದೆ.


ಕೋಟೆಕೆರೆ ಮೈದುಂಬಿ ಉಕ್ಕಿ ಹರಿಯುತ್ತಿತ್ತು. ಈ ಕೆರೆಯ ಆ ಬದಿಯಲ್ಲಿ ಬೈಕನ್ನು ನಿಲ್ಲಿಸಿ ಅಲ್ಲಿಂದ ಕೋಟೆಯ ಸೌಂದರ್ಯವನ್ನು ಆಸ್ವಾದಿಸತೊಡಗಿದೆ. ಮಳೆ ಸ್ವಲ್ಪ ಹೊತ್ತು ನಿಂತಿತು. ಕೂಡಲೇ ಹತ್ತಾರು ಫೋಟೊ ತೆಗೆದೆ. ನಂತರ ಮತ್ತೆ ಮಳೆ ಶುರು. ಅಲ್ಲೇ ೨೦ನಿಮಿಷ ಕಾದರೂ ಮಳೆ ಕಡಿಮೆಯಾಗಲಿಲ್ಲ. ಮತ್ತೆ ನಿಧಾನವಾಗಿ ಬೈಕನ್ನು ಕೋಟೆಯತ್ತ ಚಲಿಸಿದೆ. ಕೋಟೆಯ ಪಾರ್ಶ್ವದಲ್ಲಿ ಇನ್ನೂ ಸ್ವಲ್ಪ ಹೊತ್ತು ಬೈಕು ನಿಲ್ಲಿಸಿದೆ. ಮಳೆ ಹೊಯ್ಯುತ್ತಲೇ ಇತ್ತು. ಇನ್ನೂ ಕಾದು ಪ್ರಯೋಜನವಿಲ್ಲವೆಂದು ಬೈಕನ್ನು ಕೋಟೆಯ ಹೆಬ್ಬಾಗಿಲಿನ ಹೊರಗೆ ನಿಲ್ಲಿಸಿ ಕೋಟೆಯೊಳಗೆ ಹೆಜ್ಜೆಯಿಟ್ಟೆ. ಎಡೆಬಿಡದೆ ಒಂದೇ ಸವನೆ ಸುರಿಯುತ್ತಿದ್ದ ಮಳೆಯಲ್ಲಿ ಕೋಟೆ ವಿಜೃಂಭಿಸುತ್ತಿತ್ತು ಮತ್ತು ಒಳಗಿನ ನೋಟ ನಾನು ಬೆರಗಾಗುವಷ್ಟು ಬದಲಾಗಿತ್ತು. ಭಾರತೀಯ ಪುರಾತತ್ವ ಇಲಾಖೆ ಇಲ್ಲಿ ಪ್ರಶಂಸನೀಯ ಕೆಲಸ ಮಾಡಿದೆ.


೨೦೦೩ರ ಜುಲಾಯಿ ತಿಂಗಳಲ್ಲಿ ತೀರ್ಥಹಳ್ಳಿ ಸಮೀಪ 'ಅರಳ ಸುರಳಿ' ಎಂಬಲ್ಲಿರುವ ಅಚ್ಚಕನ್ಯಾ ಜಲಧಾರೆಯನ್ನು ನೋಡಿಬರೋಣವೆಂದು ತೆರಳಿದ್ದೆ. ತೀರ್ಥಹಳ್ಳಿ - ಸಾಗರ ರಸ್ತೆಯಲ್ಲಿ ಸಿಗುವ ಕೋಣಂದೂರಿನಲ್ಲಿ ಮುಖ್ಯ ರಸ್ತೆ ಬಿಟ್ಟು ತೆರಳಿದರೆ ಅರಳ ಸುರಳಿ. ತೀರ್ಥಹಳ್ಳಿಯಿಂದ ೨೫ಕಿಮಿ ದೂರ. ಅರಳ ಸುರಳಿಯಿಂದ ಒಂದೆರಡು ಕಿಮಿ ಮಣ್ಣಿನ ರಸ್ತೆಯಲ್ಲಿ ತೆರಳಿದರೆ ಅಚ್ಚಕನ್ಯಾ ಜಲಧಾರೆ. ಇದು ಕೇವಲ ೧೨ಅಡಿ ಎತ್ತರವಿರುವ ಸಣ್ಣ ಜಲಧಾರೆಯಾಗಿದ್ದರೂ ಶಿವಮೊಗ್ಗ ಜಿಲ್ಲಾ ಗಜೆಟೀಯರ್-ನಲ್ಲಿ ಪ್ರವಾಸಿ ತಾಣವೆಂದು ದಾಖಲಾಗಿದೆ. ಇದರ ಒಂದೇ ಪ್ರಾಮುಖ್ಯತೆಯೆಂದರೆ, ಇಲ್ಲಿಂದ ಹಳ್ಳಗುಂಟ ೩ಕಿಮಿ ಮೇಲ್ಗಡೆ ಅಂಬುತೀರ್ಥದಲ್ಲಿ ಉದ್ಭವಿಸುವ ಶರಾವತಿ ನದಿಯಿಂದ ಉಂಟಾಗುವ ಪ್ರಥಮ ಜಲಪಾತವಿದು! ನದಿಯ ಅಗಲ ನೋಡಿ ಇದು ಶರಾವತಿ ಇರಬಹುದೇ ಎಂದು ಆಶ್ಚರ್ಯವಾಯಿತು. ಉಗಮ ಸ್ಥಳದಿಂದ ಸ್ವಲ್ಪವೇ ದೂರವಿರುವುದರಿಂದ ಅಗಲ ಇಷ್ಟು ಕಿರಿದಾಗಿರಬಹುದು.

ಅರಳ ಸುರಳಿಯಲ್ಲಿ ಹಳ್ಳಿಗರೊಬ್ಬರ ಸಲಹೆಯಂತೆ ಶಾರ್ಟ್-ಕಟ್ ತಗೊಂಡು ಈ ಕೋಟೆಯಿರುವ ಊರಿಗೆ ಬಂದು ತಲುಪಿದೆ. ಮುಂದೆ ಕೋಟೆಯ ದ್ವಾರ ಭವ್ಯವಾಗಿ ಕಾಣಿಸಿದಾಗ ಒಳಗೆ ತೆರಳಿದೆ, ಆಘಾತಗೊಂಡೆ. ಎಲ್ಲಾ ಕಡೆ ಗಲೀಜು, ಮುಳ್ಳು, ಪೊದೆಗಳು ಇಡೀ ಕೋಟೆಯನ್ನು ಆವರಿಸಿಕೊಂಡಿದ್ದವು. ಅಲ್ಲಿಂದಲೇ ಹಿಂತಿರುಗಿದೆ.


ಆದರೆ ಈ ಬಾರಿ ಒಳಗೆ ಯಾವುದೇ ಪೊದೆಗಳಿಲ್ಲ. ಎಲ್ಲಾ ಕ್ಲೀನ್. ಶಿವಪ್ಪ ನಾಯಕ ಮತ್ತು ಇತರರು ದರ್ಬಾರು ನಡೆಸುತ್ತಿದ್ದ ಸ್ಥಳ ಕೋಟೆಯ ಮಧ್ಯದಲ್ಲೇ ಇದೆ. ಉಳಿದ ಕೆಲವು ನೆಲಗಟ್ಟುಗಳ ಮಹತ್ವ ಗೊತ್ತಾಗಲಿಲ್ಲ. ಅಲ್ಲೇನಿತ್ತು ಎಂದು ಫಲಕಗಳನ್ನು ಹಾಕಿದರೆ ಚೆನ್ನಾಗಿರುತ್ತಿತ್ತು. ಮಳೆಯ ನಡುವೆಯೇ ಎಲ್ಲಾ ಕಡೆ ಅಡ್ಡಾಡಿದೆ. ಬುರುಜುಗಳನ್ನು ಹತ್ತಿ ಕೋಟೆಕೆರೆಯ ಅಂದವನ್ನು ವೀಕ್ಷಿಸಿದೆ. ಅಲ್ಲೊಂದೆರಡು ಬಾವಿಗಳು. ಉತ್ಖನನ ಇನ್ನೂ ನಡೆದಿತ್ತು.

ಸುಮಾರು ೩೦ನಿಮಿಷ ಕೋಟೆಯೊಳಗೇ ಕೂತು ಮಳೆ ಕಡಿಮೆಯಾಗಲೆಂದು ಕಾದೆ. ನನಗೆ ಫೋಟೊ ತೆಗೆಯಬೇಕಿತ್ತು. ಆದರೆ ಮಳೆಗೆ ಅದನ್ನು ಹೇಳುವರು ಯಾರು? ಅದಂತೂ ಪುರುಸೊತ್ತಿಲ್ಲದಂತೆ ಸುರಿಯುತ್ತಿತ್ತು. ಆದರೂ ಹೇಗಾದರೂ ಮಾಡಿ ಮಳೆಯಲ್ಲೇ ಒಂದೆರಡು ಫೋಟೋ ತೆಗೆದೆ. ಮಳೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣದಿದ್ದಾಗ ಮರಳಿ ಉಡುಪಿಯತ್ತ ಹೊರಟೆ.

ಮಾಹಿತಿ: ಎಂ.ಶರಾಮ್

ಬುಧವಾರ, ಜೂನ್ 27, 2007

ದೊಡ್ಡ ಗಣೇಶನಿಗೊಂದು ವಿದಾಯ


ಕಳೆದ ರಣಜಿ ಋತುವಿಗೆ ಕರ್ನಾಟಕ ತಂಡದ ಆಯ್ಕೆ ಆದಾಗ ದೊಡ್ಡ ಗಣೇಶ್ ಹೆಸರು ಇರದಿರುವುದನ್ನು ನೋಡಿ ಆಶ್ಚರ್ಯವಾಯಿತು. ಹೊಸದಾಗಿ ಕೋಚ್ ಆಗಿ ನೇಮಕಗೊಂಡಿದ್ದ ವೆಂಕಟೇಶ್ ಪ್ರಸಾದ್ ತಂಡವನ್ನು ಆಯ್ಕೆ ಮಾಡುವಾಗ ಮುಖ್ಯ ಆಯ್ಕೆಗಾರ ಅಶೋಕಾನಂದ್ ಅವರಿಗೆ ತಿಳಿಸಿದ ವಿಷಯವೇನೆಂದರೆ 'ನನಗೆ ಇವರು ಬೇಕು ಮತ್ತು ಇವರು ಬೇಡ' ಎಂದು. ದೊಡ್ಡ ಗಣೇಶ್ ಹೆಸರು 'ಇವರು ಬೇಡ' ಪಟ್ಟಿಯಲ್ಲಿತ್ತು. ಇದಕ್ಕೆ ಪ್ರಮುಖ ಕಾರಣ ಗಣೇಶನ ಕ್ಷೇತ್ರರಕ್ಷಣೆ. ಕಳೆದೆರಡು ಋತುಗಳಲ್ಲಿ ಅವರ ಕ್ಷೇತ್ರರಕ್ಷಣೆಯ ಗುಣಮಟ್ಟ ಕಡಿಮೆಯಾಗಿತ್ತು ಆದರೆ ಕಳಪೆಯಾಗಿರಲಿಲ್ಲ. ಬೌಲಿಂಗ್ ನಲ್ಲಿ ಹುದ್ದರಿ ಕೀಳುವ ಕ್ಷಮತೆ ಸ್ವಲ್ಪ ಮಟ್ಟಿಗೆ ಕ್ಷೀಣಿಸಿದ್ದರೂ, 'ಕರ್ನಾಟಕಕ್ಕೆ ಇಗೊಂದು ಹುದ್ದರಿಯ ಅವಶ್ಯಕತೆ ಇದೆ' ಎನ್ನುವಾಗ, ಆ ಹುದ್ದರಿ ಬೀಳಿಸುವ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಇನ್ನೂ ಇತ್ತು ಗಣೇಶನಲ್ಲಿ.

ವೆಂಕಿ ಕೋಚ್ ಆಗಿ ನೇಮಕಗೊಂಡಾಗ ಅವರು ಒತ್ತು ಕೊಟ್ಟಿದ್ದು ೩ ಅಂಶಗಳಿಗೆ - ಉತ್ತಮ ಬ್ಯಾಟಿಂಗ್, ಉತ್ತಮ ಬೌಲಿಂಗ್ ಮತ್ತು ಉತ್ತಮ ಫೀಲ್ಡಿಂಗ್. ತಾನು ಈ ಬಾರಿ ರಾಜ್ಯ ತಂಡ ರಣಜಿ ಟ್ರೋಫಿ ಗೆಲ್ಲುವಂತೆ ಮಾಡುತ್ತೇನೆ ಎಂದೇ ಈ ಹುದ್ದೆಯನ್ನು ದಕ್ಕಿಸಿಕೊಂಡಿದ್ದ ವೆಂಕಿ, ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಅವುಗಳಲ್ಲಿ ಶಿಷ್ಯನೂ, ಗೆಳೆಯನೂ ಆಗಿದ್ದ ದೊಡ್ಡ ಗಣೇಶನನ್ನು ಕೈ ಬಿಡುವ ನಿರ್ಧಾರವೂ ಒಂದು. ಗಣೇಶ್ ತನ್ನ ಪ್ರಥಮ ರಣಜಿ ಪಂದ್ಯ ಆಡಿದಂದಿನಿಂದ ಅವರ ಆಟವನ್ನು ಗಮನಿಸುತ್ತಾ ಬಂದಿದ್ದ ನನಗೆ, ಆತನನ್ನು ಕೈ ಬಿಟ್ಟು ವೆಂಕಿ ಎಡವಿರಬಹುದೆಂದು ಅನಿಸತೊಡಗಿತ್ತು.

ಸೆಮಿ ಫೈನಲ್ ಪಂದ್ಯದಲ್ಲಿ ಬಂಗಾಲದ ಮನೋಜ್ ತಿವಾರಿ ಮತ್ತು ಅಭಿಷೇಕ್ ಝುಂಝುನ್-ವಾಲಾ ಇವರಿಬ್ಬರ ನಡುವಿನ ಜೊತೆಯಾಟವನ್ನು ಮುರಿಯಲು ನಮ್ಮ ಬೌಲರುಗಳು ಸಫಲರಾಗಿದ್ದರೆ ಕರ್ನಾಟಕ ಪಂದ್ಯವನ್ನು ಗೆಲ್ಲುತ್ತಿತ್ತು. ಆ ಪಂದ್ಯದಲ್ಲಿ ಆಡುತ್ತಿದ್ದ ರಾಜು ಭಟ್ಕಳ್ ಮತ್ತು ಶ್ರೀನಿವಾಸ ಧನಂಜಯ ಇವರಿಗೆ ಮತ್ತು ಒಬ್ಬ ಬೌಲರ್ ಆಗಿ ಗಣೇಶನಿಗೆ ಹೋಲಿಕೆಯೇ ಇಲ್ಲ! ಗಣೇಶ್ ಎಷ್ಟೋ ಪಟ್ಟು ಉತ್ತಮ. ಎದುರಾಳಿ ಬ್ಯಾಟ್ಸ್ ಮನ್ ಗಳು ಔಟಾಗದೇ ರನ್ನುಗಳನ್ನು ಪೇರಿಸುತ್ತಿರುವಾಗ, ಅಲ್ಲಿ ಅವಶ್ಯಕತೆ ಇರುವುದು ಒಬ್ಬ ಬುದ್ಧಿವಂತ ಎಸೆಗಾರನದ್ದು. 'ಗಣೇಶನಿದ್ದಿದ್ದರೆ...' ಎಂಬ ಯೋಚನೆ ಆಗಾಗ ಬರುತ್ತಿತ್ತು.

ಸಂಪೂರ್ಣವಾಗಿ ಪಕ್ವವಾಗುವ ಮೊದಲೇ ರಾಷ್ಟ್ರೀಯ ತಂಡಕ್ಕೆ ಗಣೇಶನನ್ನು ಆಯ್ಕೆ ಮಾಡಲಾಗಿತ್ತು. ಈ ಪ್ರಮಾದವೆಸಗಿದ್ದು ಆಗ ಆಯ್ಕೆಗಾರರ ಮುಖ್ಯಸ್ಥರಾಗಿದ್ದ ಗುಂಡಪ್ಪ ವಿಶ್ವನಾಥ್. ೧೯೯೭ರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಎಲ್ಲಾ ೪ ವೇಗಿಗಳು ಕರ್ನಾಟಕದವರೇ! ಶ್ರೀನಾಥ್, ವೆಂಕಿ, ಡೇವಿಡ್ ಜಾನ್ಸನ್ ಮತ್ತು ಗಣೇಶ್. ವಿಶಿ ಮಾಡಿದ ತಪ್ಪಿನಿಂದ ಗಣೇಶ್, ನಂತರ ಅದೆಷ್ಟೇ ಉತ್ತಮವಾಗಿ ಬೌಲಿಂಗ್ ಮಾಡಿ ಪ್ರಯತ್ನಪಟ್ಟರೂ ಮರಳಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲಿಲ್ಲ. ಸತತವಾಗಿ ೫ ವರ್ಷಗಳ ಕಾಲ ಭರ್ಜರಿ ಬೌಲಿಂಗ್ ಮಾಡಿ, ರಾಶಿ ರಾಶಿ ವಿಕೆಟ್ ಕಿತ್ತರೂ ಗಣೇಶನನ್ನು ಆಯ್ಕೆಗಾರರು ಪರಿಗಣಿಸಲಿಲ್ಲ. ಇದೇ ಸಮಯದಲ್ಲಿ ಗಣೇಶರಿಗಿಂತ ಕಡಿಮೆ ಸಾಮರ್ಥ್ಯದ ಇಕ್ಬಾಲ್ ಸಿದ್ದಿಕಿ, ಟಿನು ಯೋಹಾನನ್, ದೇಬಾಶಿಶ್ ಮೊಹಾಂತಿ, ಹರ್ವಿಂದರ್ ಸಿಂಗ್, ಟಿ.ಕುಮಾರನ್, ಅಮಿತ್ ಭಂಡಾರಿ ಮುಂತಾದವರಿಗೆ ಅವಕಾಶಗಳನ್ನು ನೀಡಲಾಯಿತು. ಆದರೂ ಛಲ ಬಿಡದೆ ಗಣೇಶ್ ಪ್ರಯತ್ನಿಸಿದರು, ಯಾವುದೇ ಪ್ರಯೋಜನವಾಗಲಿಲ್ಲ.

೧೯೯೮ರಿಂದ ೨೦೦೪ರವರೆಗೆ ದೇಶೀಯ ಕ್ರಿಕೆಟ್ ನಲ್ಲಿ ಗಣೇಶ್ ತೋರಿಸಿದ ನಿರ್ವಹಣೆ ಅತ್ಯುತ್ತಮ. ಕರ್ನಾಟಕದ ಬೌಲಿಂಗ್ ಬೆನ್ನೆಲುಬಾಗಿ ಅವರ ನಿರ್ವಹಣೆಗೆ ತಲೆ ತೂಗದವರೆಂದರೆ ಆಯ್ಕೆಗಾರರು ಮಾತ್ರ. ಈ ಬಾರಿ ಗಣೇಶ್ ಆಯ್ಕೆ ಖಚಿತ ಎಂದು ಎಲ್ಲರೂ ಎದುರುನೋಡುತ್ತಿದ್ದರೆ, ಅವರ ಹೆಸರು ಮಾತ್ರ ತಂಡದಲ್ಲಿರುತ್ತಿರಲಿಲ್ಲ. ಬೌಲರ್ ಆಗಿ ಸಂಪೂರ್ಣವಾಗಿ ಬೆಳೆಯುವ ಮೊದಲೇ ಗಣೇಶನನ್ನು ರಾಷ್ಟ್ರ ತಂಡಕ್ಕೆ ಆಯ್ಕೆ ಮಾಡಿ ಒಂದು ತಪ್ಪೆಸಗಿದ ಆಯ್ಕೆಗಾರರು, ಆತ ರಾಷ್ಟ್ರದಲ್ಲೇ ಬುದ್ಧಿವಂತ ಬೌಲರ್ ಎಂದು ಸಾಬೀತುಪಡಿಸಿದಾಗ ಆಯ್ಕೆ ಮಾಡದೇ ಮತ್ತೊಂದು ತಪ್ಪನ್ನೆಸಗಿದರು. ರಾಷ್ಟ್ರಾದ್ಯಂತ ದೇಶೀಯ ಕ್ರಿಕೆಟ್ ನಲ್ಲಿ ಆಡುತ್ತಿದ್ದ ಆಟಗಾರರಿಗೆ ಕಾಡುತ್ತಿದ್ದ ಏಕೈಕ ಪ್ರಶ್ನೆಯೆಂದರೆ ಗಣೇಶ್ ಆಯ್ಕೆ ಯಾಕೆ ಆಗುತ್ತಿಲ್ಲವೆಂದು. ಆದರೆ ಈ ಎಲ್ಲಾ ಆಟಗಾರರಿಗೂ ಮತ್ತು ಕೆಲವು ಪತ್ರಕರ್ತರಿಗೆ ಗಣೇಶನನ್ನು ಯಾತಕ್ಕಾಗಿ ಆಯ್ಕೆ ಮಾಡಲಾಗುತ್ತಿಲ್ಲ ಎಂಬುದರ ಒಳಗುಟ್ಟು ಗೊತ್ತಿತ್ತು!

ಸಂಪೂರ್ಣ ಬೌಲರ್ ಆಗಿ ಬೆಳೆದು ನಿಂತ ಗಣೇಶನಿಗೆ ಈಗ ತಿಪ್ಪರಲಾಗ ಹಾಕಿದರೂ ರಾಷ್ಟ್ರೀಯ ತಂಡಕ್ಕೆ ಬರಲು ಸಾಧ್ಯವಿರಲಿಲ್ಲ. ಇದಕ್ಕೆ ಕಾರಣ ಸಚಿನ್ ತೆಂಡುಲ್ಕರ್ ಮತ್ತು ಒಬ್ಬ ಹೆಸರಾಂತ ಅಂಪಾಯರ್ ರವರ ವಿರೋಧ. ಈ ಇಬ್ಬರಿಗೆ ಗಣೇಶ್ ಮೊದಲ್ನಿಂದಲೂ ಇಷ್ಟವಿರಲಿಲ್ಲ. ಪತ್ರಕರ್ತರಿಗೆ ಮತ್ತು ದೇಶೀಯ ಕ್ರಿಕೆಟ್ ನಲ್ಲಿ ಆಡುತ್ತಿದ್ದ ಎಲ್ಲಾ ಆಟಗಾರರಿಗೆ ಗೊತ್ತಿದ್ದ ವಿಷಯವಿದು. ಗಣೇಶನಿಗೂ ಇದು ಗೊತ್ತಿತ್ತು, ಆದರೂ ತನ್ನ ಪರ್-ಫಾರ್-ಮೆನ್ಸ್ ಬಲದಿಂದ ತಾನು ಆಯ್ಕೆಯಾಗಬಹುದು ಎಂದು ಪ್ರಯತ್ನಪಟ್ಟರು.

೧೯೯೭ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡದಲ್ಲಿ ೭ ಕನ್ನಡಿಗರು ಮತ್ತು ತಂಡದ ನಾಯಕ ತೆಂಡುಲ್ಕರ್. ಗಣೇಶನಿಗೆ ಎಲ್ಲವೂ ಹೊಸದು. ಕನ್ನಡದಲ್ಲಿ ಮಾತ್ರ ಮಾತನಾಡಿ ಗೊತ್ತಿದ್ದ ಗಣೇಶ್, ಸಹಜವಾಗಿಯೇ ತನ್ನ ಪ್ರಥಮ ಪ್ರವಾಸದಲ್ಲಿ ಕರ್ನಾಟಕದವರಿಗೇ ಅಂಟಿಕೊಂಡರು. ಸಚಿನ್ ಹೇಳಿದ್ದು ಈತನಿಗೆ ಅರ್ಥವಾದರೆ ತಾನೆ? ಸಚಿನ್ ಯಾವಾಗಲೂ ಒಬ್ಬ ಉತ್ತಮ ನಾಯಕನಾಗಿರಲಿಲ್ಲ. ಕರ್ನಾಟಕದವರೆಂದರೆ ಮೊದಲಿನಿಂದಲೂ ಕಿಡಿಕಾರುವ ಸಚಿನ್, ಗಣೇಶನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ವಿನಾಕಾರಣ ಆತನ ಬಗ್ಗೆ ತಪ್ಪು ನಿಲುವನ್ನು ತಾಳಿಕೊಂಡರು. ಗಣೇಶನೊಬ್ಬ 'ಪ್ರಯೋಜನವಿಲ್ಲದ ಬೌಲರ್, ಟೀಮ್ ಸ್ಪಿರಿಟ್ ಇಲ್ಲ, ಅಟಿಟ್ಯೂಡ್ ಸರಿಯಿಲ್ಲ, ಪ್ರಯತ್ನವನ್ನೇ ಮಾಡುವುದಿಲ್ಲ, ತನ್ನ ರಾಜ್ಯದವರೊಂದಿಗೆ ಮಾತ್ರ ಮಾತನಾಡುತ್ತಾನೆ' ಎಂದು ತನಗೆ ತಾನೇ ಹೇಳಿಕೊಂಡು ಅದನ್ನು ಸಮರ್ಥಿಸಿಕೊಂಡರು ಕೂಡಾ.

ಆ ಪ್ರವಾಸಕ್ಕೆ ಸಚಿನ್-ಗೆ ತನ್ನದೇ ಮುಂಬೈ ತಂಡದ ಅಬೇ ಕುರುವಿಲ್ಲಾ ಬೇಕಾಗಿತ್ತು. ಆವಾಗ ಕುರುವಿಲ್ಲಾ, ಗಣೇಶನಿಗಿಂತ ಉತ್ತಮ ಬೌಲರ್ ಆಗಿದ್ದು ಹೆಚ್ಚು ಅನುಭವ ಉಳ್ಳವರಾಗಿದ್ದರು ಮತ್ತು ಅವರ ಆಯ್ಕೆ ಆಗಬೇಕಾಗಿತ್ತು ಕೂಡಾ. ಆದರೆ ವಿಶ್ವನಾಥ್, ಸಚಿನ್ ಮಾತನ್ನು ಪರಿಗಣಿಸದೆ ಗಣೇಶನನ್ನು ಆಯ್ಕೆ ಮಾಡಿಬಿಟ್ಟರು. ಸಿಟ್ಟಿಗೆದ್ದ ಸಚಿನ್, ವಿಶಿ ಮೇಲಿನ ಸಿಟ್ಟನ್ನು ಬಡಪಾಯಿ ಗಣೇಶನ ಮೇಲೆ ಹಿಗ್ಗಾಮುಗ್ಗಾ ತೀರಿಸಿಕೊಂಡರು. ಹಸಿದ ಹುಲಿ ಬಾಯಿಗೆ ಸಿಕ್ಕಿದ ಬಡಪಾಯಿ ಮೇಕೆಯ ಪರಿಸ್ಥಿತಿ ಗಣೇಶನದ್ದು. ಇದಕ್ಕೆಲ್ಲಾ ಸರಿಯಾಗಿ ಒಬ್ಬ ಬೌಲರ್ ಆಗಿ ಗಣೇಶ್ ಸಾಮರ್ಥ್ಯ ಕೂಡಾ ಆಗ ಅಂತರಾಷ್ಟ್ರೀಯ ಕ್ರಿಕೆಟ್ ಆಡುವಷ್ಟು ಮಟ್ಟದಲ್ಲಿರಲಿಲ್ಲ.

ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಭಾರತ ತಂಡ ಅಲ್ಲಿಂದಲೇ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿತ್ತು. ಈ ೨ ಪ್ರವಾಸಗಳಿಗಾಗಿಯೇ ತಂಡವನ್ನು ಆಯ್ಕೆ ಮಾಡಲಾಗಿದ್ದರಿಂದ ಗಣೇಶ್ ವೆಸ್ಟ್ ಇಂಡೀಸ್-ಗೂ ತೆರಳಿದರು. ಇಲ್ಲಿ ತಂಡದ ಒಬ್ಬ ಸದಸ್ಯ ಗಾಯಾಳಾದಾಗ ತನ್ನ ಜಿದ್ದಿಗೆ ಬಿದ್ದ ಸಚಿನ್, ಅಬೇ ಕುರುವಿಲ್ಲಾರನ್ನು ಕರೆಸಿಕೊಂಡರು. ಕುರುವಿಲ್ಲಾರಿಗೆ ನ್ಯಾಯವಾಗಿ ದೊರಕಬೇಕಾಗಿದ್ದ ಸ್ಥಾನ ಅಂತೂ ಕೊನೆಗೆ ಸಿಕ್ಕಿತು. ಗಮನಿಸಬೇಕಾದ ಅಂಶವೆಂದರೆ ಈ ೨ ಪ್ರವಾಸಗಳಲ್ಲಿ ಗಣೇಶ್ ಎಲ್ಲೂ ಕಳಪೆಯಾಗಿ ಬೌಲಿಂಗ್ ಮಾಡಲಿಲ್ಲ. ನಿರೀಕ್ಷಿತ ಮಟ್ಟಕ್ಕೆ ಬೌಲಿಂಗ್ ಮಾಡುವ ಸಾಮರ್ಥ್ಯ ಅವರಲ್ಲಿರಲಿಲ್ಲ. ಇದಕ್ಕೆಲ್ಲಾ ಕಲಶವಿಟ್ಟಂತೆ ಕುರುವಿಲ್ಲಾ ಪ್ರಕರಣ ಮತ್ತು ಸಚಿನ್ ಸಿಟ್ಟು. ಒಬ್ಬ ಆಯ್ಕೆಗಾರರಾಗಿ 'ಜೆಂಟ್ಲ್ ಮ್ಯಾನ್' ವಿಶಿ ಮಾಡಿದ ತಪ್ಪಿನಿಂದಾಗಿ ಗಣೇಶ್ ಕಳಕೊಂಡದ್ದು ಅಪಾರ.

ಮೊಹಮ್ಮದ್ ಅಜರುದ್ದೀನ್ ಗಣೇಶ್ ಸಾಮರ್ಥ್ಯವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಆದರೆ ಅದಾಗಲೇ ಅವರ ತಲೆ ಮೇಲಿಂದ ನಾಯಕತ್ವ ಪಟ್ಟ ತೊಲಗಿತ್ತು ಮತ್ತು ನಂತರ ಅವರದೇ ಆದ ತೊಂದರೆಗಳಲ್ಲಿ ಅವರು ಸಿಲುಕಿಕೊಂಡರು. ಅಜರ್ ನಾಯಕನಾಗಿದ್ದಿದ್ದರೆ ಗಣೇಶ್ ಮತ್ತೆ ಭಾರತಕ್ಕಾಗಿ ಆಡುತ್ತಿದ್ದರು. ಒಟ್ಟಾರೆ ದೊಡ್ಡನರಸಯ್ಯ ಗಣೇಶ್ ಒಬ್ಬ ನತದೃಷ್ಟ ಕ್ರಿಕೆಟಿಗ.

ನಂತರ ಕೆಲವು ಸಂದರ್ಶನಗಳಲ್ಲಿ ಸಚಿನ್ ಪರೋಕ್ಷವಾಗಿ ಗಣೇಶ್ ವಿರುದ್ಧ ಹೇಳಿಕೆ ನೀಡಿದ್ದು ಮಾತ್ರ ಆಘಾತಕಾರಿ. 'ಡೇವಿಡ್ ಜಾನ್ಸನ್ ಒಬ್ಬ ಉತ್ತಮ ಬೌಲರ್. ಬಹಳ ಪ್ರಯತ್ನ ಮಾಡುತ್ತಾರೆ. ಒಬ್ಬ ಬೌಲರ್-ಗೆ ಇರಬೇಕಾದ ಮುಖ್ಯ ಗುಣ ಅದು. ಆದ್ರೆ ಪ್ರಯತ್ನವೇ ಮಾಡದ ಬೌಲರುಗಳಿದ್ದರೆ ಒಬ್ಬ ನಾಯಕನಾಗಿ ನೀವೇನೂ ಮಾಡಲು ಸಾಧ್ಯವಿಲ್ಲ' ಎಂದು ಗಣೇಶನನ್ನು ಮತ್ತು ವಿಶಿಯನ್ನು ತೆಗಳುವ ಸಲುವಾಗಿ ಕಳಪೆ ಪ್ರದರ್ಶನ ನೀಡಿದ್ದ ಡೇವಿಡ್ ಜಾನ್ಸನ್-ರನ್ನು ಹೊಗಳಿದ್ದು ಮಾತ್ರ ಹಾಸ್ಯಾಸ್ಪದ. ಗಣೇಶ್ ಪ್ರಯತ್ನ ಮಾಡದ ಬೌಲರ್? ಹ್ಹಾ! ಆಯ್ಕೆಗಾರರ ಮೇಲಿನ ಸಿಟ್ಟನ್ನು ಸಚಿನ್, ಗಣೇಶನಂತಹ ಯುವ ಆಟಗಾರನ ಮೇಲೆ ತೋರಿಸಿದ್ದು ನಾಚಿಕೆಗೇಡು. ಗಣೇಶ್ ಆಯ್ಕೆಗೆ ನಂತರದ ದಿನಗಳಲ್ಲಿ ತೊಡಕಾಗಿದ್ದ ಆ ಅಂಪಾಯರ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಎಲ್ಲಾ ಕಡೆ ವಿಚಾರಿಸಿದರೂ ಎಲ್ಲರೂ ಹೇಳುವುದು ಒಂದೇ, 'ಒಬ್ಬರಿದ್ದಾರೆ..ಆದರೆ ಯಾರೆಂದು ಗೊತ್ತಿಲ್ಲ' ಎಂದು.

ಅದೆಲ್ಲಾ ಏನೇ ಇರಲಿ. ಕರ್ನಾಟಕಕ್ಕೆ ಗಣೇಶ್ ನೀಡಿದಷ್ಟು ಕಳೆದ ದಶಕದಲ್ಲಿ ಬೇರ್ಯಾರೂ ನೀಡಿಲ್ಲ. ಬಹಳ ಬಡ ಕುಟುಂಬದಿಂದ ಬಂದಿದ್ದರೂ ಮತ್ತು ವಿದ್ಯಾಭಾಸದ ಕೊರತೆಯಿದ್ದರೂ ಉತ್ತಮ ನಡತೆ ಮತ್ತು ವಿನಯ ಗಣೇಶರಿಗಿದ್ದ ಗುಣಗಳು. ತನ್ನ ಸ್ವಾರ್ಥಕಾಗಿ ಯಾವಾಗಲೂ ಆಡಿದವರಲ್ಲ ಗಣೇಶ್. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಲ್ಲಿನ 'ಗ್ರೌಂಡ್ಸ್ ಮೆನ್' ಮತ್ತು ಇತರ ಸಿಬ್ಬಂದಿಗಳು ಗಣೇಶನನ್ನು ಮಾತಿಗೆಳೆಯುವುದು 'ಏನ್ ಗುರು?' ಎಂದೇ. ಯಾವ ಕ್ರಿಕೆಟಿಗ ಇಂತಹ ಸರಳ ಸಂಬಂಧಗಳನ್ನು ಇಟ್ಟುಕೊಂಡಿರುತ್ತಾನೆ? ಕ್ರಿಕೆಟ್ ನಿಂದ ಗಣೇಶ್ ಜೀವನದಲ್ಲಿ ಎಲ್ಲವನ್ನೂ ಗಳಿಸಿದ್ದಾರೆ - ಹಣ, ಕಾರು, ಮನೆ, ಮೆಚ್ಚಿದ ಹುಡುಗಿ, ಇಂಡಿಯನ್ ಏರ್-ಲೈನ್ಸ್ ನಲ್ಲಿ ಆಫೀಸರ್ ಹುದ್ದೆ ಎಲ್ಲಾ. ಭಾರತಕ್ಕಾಗಿ ಮತ್ತೊಂದು ಸಲ ಆಡುವುದನ್ನು ಬಿಟ್ಟು.

ನಾನು ಬಹುವಾಗಿ ಮೆಚ್ಚುವ ಕ್ರಿಕೆಟಿಗರೆಂದರೆ ಅನಿಲ್ ಕುಂಬ್ಳೆ ಮತ್ತು ಗಣೇಶ್. ಅನಿಲ್ ಈಗಾಗಲೇ ಒಂದು ದಿನದ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಈಗ ಗಣೇಶ ಕೂಡಾ ನಿವೃತ್ತಿ ಹೊಂದಿ ರಾಜಕೀಯ ಸೇರಲು ಹೊರಟಿದ್ದಾರೆ. ಜೂನ್ ೨೭, ೨೦೦೭ರಂದು ಅವರು ಜಾತ್ಯಾತೀತ ಜನತಾದಳ ಪಕ್ಷವನ್ನು ಸೇರಲಿದ್ದಾರೆ. ಇದುವರೆಗೆ ಭ್ರಷ್ಟನಾಗದೆ ಸರಳ ಜೀವನವನ್ನು ವಿನಯದಿಂದ ಸಾಗಿಸಿದ್ದ ಗಣೇಶ ಈ ರಾಜಕೀಯವೆಂಬ ಕೂಪಕ್ಕೆ ಬಿದ್ದು ಬದಲಾಗದೆ ಇದುವರೆಗಿದ್ದ ಗಣೇಶನಾಗಿಯೇ ಇರಲಿ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಸಿಬ್ಬಂದಿಗಳು 'ಏನ್ ಗುರು?' ಎಂದೇ ಕರೆಯುವಷ್ಟು ಸರಳತೆಯಿರಲಿ ಎಂಬ ಶುಭಹಾರೈಕೆ.

ಭಾನುವಾರ, ಜೂನ್ 24, 2007

ಅವಳಿ ಜಲಧಾರೆಗಳು


ರಸ್ತೆ ಬದಿಯಲ್ಲೇ ೨ ಜಲಧಾರೆಗಳು 'ಮಳೆಗಾಲದಲ್ಲಿ ಮಾತ್ರ' ಧುಮುಕುತ್ತಾ ಪ್ರಯಾಣಿಗರ ಗಮನ ಸೆಳೆಯುತ್ತಿರುತ್ತವೆ. ಜುಲಾಯಿ ೨೦೦೫ ಮತ್ತು ಆಗೋಸ್ಟ್ ೨೦೦೬, ಹೀಗೆ ೨ ಬಾರಿ ಮಳೆಗಾಲದಲ್ಲಿ ಈ ದಾರಿಯಾಗಿ ತೆರಳಿ ಈ ೨ ಜಲಧಾರೆಗಳ ಅಂದವನ್ನು ಮನಸಾರೆ ಆನಂದಿಸಿದ್ದೇನೆ.



'ಯು' ತಿರುವೊಂದರಲ್ಲಿ ಸೇತುವೆಯೊಂದರ ಬದಿಯಲ್ಲೇ ಇರುವ ಮೊದಲ ಜಲಧಾರೆಯ ನೋಟ ರಮ್ಯ. ರಸ್ತೆ ಬದಿಯಲ್ಲೇ ಕಾಣುವ ಸುಮಾರು ೪೦ಅಡಿಯಷ್ಟೆತ್ತರದಿಂದ ಎರಡು ಕವಲುಗಳಲ್ಲಿ ಧುಮುಕುವುದು ಈ ಜಲಧಾರೆಯ ಎರಡನೇ ಹಂತ.


ಸುಮಾರು ೭೦ ಅಡಿಯಷ್ಟೆತ್ತರವಿರುವ ಮೊದಲನೇ ಹಂತ ಮೇಲ್ಗಡೆ ಕಾಡಿನ ಮರೆಯಲ್ಲಿ ಅಡಗಿದೆ. ಮೊದಲನೇ ಬಾರಿ ತೆರಳಿದಾಗ ನಾನು ಮೊದಲನೇ ಹಂತವನ್ನು ಗಮನಿಸಿರಲಿಲ್ಲ. ಎರಡನೇ ಬಾರಿ ತೆರಳಿದಾಗ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಾಗ ಮೇಲ್ಗಡೆ ಕಾಡಿನ ಮರೆಯಲ್ಲಿ ಬಿಳಿಯಾಗಿ ಅದೇನೋ ಕಾಣುತ್ತಿತ್ತು. 'ಆಗಸ'ವಿರಬಹುದೇನೋ, ಎಂದು ಮತ್ತೆ ಮತ್ತೆ ನೋಡಿದೆ. ರಸ್ತೆಯಲ್ಲಿ ಸ್ವಲ್ಪ ಹಿಂದಕ್ಕೆ ನಡೆದು ಗಮನಿಸಿದರೆ ಸಂಶಯವೇ ಇಲ್ಲ. ರಭಸದಿಂದ ಭೋರ್ಗರೆಯುತ್ತಿದ್ದ ಮೊದಲನೇ ಹಂತ! ಫೋಟೋ ತೆಗೆದೆ. ಚಿತ್ರ 'ಶೇಕ್' ಆಗಿ ಕೆಟ್ಟದಾಗಿ ಬಂತಲ್ಲದೇ, ಕಾಡಿನ ಮರೆಯಲ್ಲಿ ಕಣ್ಣಿಗೇ ಸರಿಯಾಗಿ ಕಾಣದ ಆ ಮೊದಲನೇ ಹಂತವನ್ನು ಚಿತ್ರದಲ್ಲಿ ಗುರುತಿಸಿವುದು ಕಷ್ಟಸಾಧ್ಯ. ಮೊದಲನೇ ಹಂತವನ್ನು ಸಮೀಪದಿಂದ ವೀಕ್ಷಿಸಲು ಮೇಲೆ ತೆರಳಲು ದಾರಿಯಿರಲಿಲ್ಲ. ನನ್ನೊಂದಿಗೆ ಯಾರಾದರು ಇದ್ದಿದ್ದರೆ ದಾರಿ ಮಾಡಿ ಹೋಗುವ ಪ್ರಯತ್ನ ಮಾಡುತ್ತಿದ್ದೆ.


೩ಕಿಮಿ ಮತ್ತೆ ಕ್ರಮಿಸಿದರೆ ಸುಮಾರು ೮೦ಅಡಿ ಎತ್ತರದ ಮತ್ತೊಂದು ಜಲಧಾರೆ. ಚೆನ್ನಾಗಿ ಮಳೆಯಾದರೆ ಮಾತ್ರ ಈ ಜಲಧಾರೆಯ ಸುಂದರ ನೋಟ ಲಭ್ಯ. ಈ ಜಲಧಾರೆ ಎರಡು ಹಂತಗಳಲ್ಲಿ ಧುಮುಕುತ್ತದೆ.

ಗುರುವಾರ, ಜೂನ್ 21, 2007

ಅಕ್ಷರ ಅವಾಂತರ ೩ - ಎಲ್ಲವೂ 'ಬಾಲ'ಮಯ!


ಧರ್ಮಸ್ಥಳ ಮಂಜುನಾಥೇಶ್ವರನ ಮಹಿಮೆಯಿರಬೇಕು....ಉಳಿದ ಊರುಗಳ ಹೆಸರಿನಲ್ಲಿ 'ದ' ಇರಬೇಕಾದ್ದಲ್ಲಿ 'ಬಾಲ'ವೊಂದು ವಕ್ಕರಿಸಿಬಿಟ್ಟಿದೆ.

ಬುಧವಾರ, ಜೂನ್ 20, 2007

ರಾಜಹಂಸಘಡ ಕೋಟೆಗೆ


ಜೂನ್ ೧೫ ಮತ್ತು ೧೬ರಂದು ಕೆಲಸದ ನಿಮಿತ್ತ ಹುಬ್ಬಳ್ಳಿಯಲ್ಲಿದ್ದೆ. ೧೭ನೇ ತಾರೀಕು ಆದಿತ್ಯವಾರವಾಗಿದ್ದರಿಂದ, ಧಾರವಾಡದ ಗೆಳೆಯರು ಎಲ್ಲಾದರೂ ಹೊರಟಿರಬಹುದೇ ಎಂದು ಕೇಳಿ ನೋಡೋಣವೆಂದು ವಿವೇಕ್ ಯೇರಿಗೊಂದು ಫೋನ್ ಮಾಡಿದ್ರೆ, 'ಎಳ್ಳೂರುಘಡ್ ಹೊಂಟಿವ್ರಿ. ನೀವ ಉಡುಪಿಯಿಂದ ಬರೋವಷ್ಟು ಮಸ್ತ್ ಇಲ್ರಿ ಅದ....ಅದ್ಕೇ ನಿಮ್ಗೆ ತಿಳ್ಸಿಲ್ಲ' ಎಂದರು. ಹೇಗಿದ್ರೂ ಹುಬ್ಬಳ್ಳಿವರೆಗೆ ಬಂದಿದ್ದೇನಲ್ಲ.... ಈ ಸಣ್ಣ ಚಾರಣವನ್ನು ಮುಗಿಸಿಯೇ ಹೋಗೋಣವೆಂದು ನಿರ್ಧರಿಸಿದೆ.

ಅಂದು ನಾವು ಹೊರಟಿದ್ದು ಶಿವಾಜಿ ಕಟ್ಟಿಸಿದ 'ರಾಜಹಂಸಘಡ' ಎಂಬ ಕೋಟೆಗೆ. ಸಣ್ಣ ಬೆಟ್ಟದ ಶಿಖರದಲ್ಲಿ ಸುತ್ತಲೂ ನಡೆಯಲು ಸಾಕಾಗುವಷ್ಟು ಜಾಗವನ್ನು ಮಾತ್ರ ಬಿಟ್ಟು ಈ ಕೋಟೆಯನ್ನು ಕಟ್ಟಲಾಗಿದೆ. ಎಳ್ಳೂರು ಎಂಬ ಹಳ್ಳಿಯ ಸಮೀಪವಿರುವುದರಿಂದ ಈ ಕೋಟೆಯನ್ನು ಎಳ್ಳೂರುಘಡ್ ಎಂದೂ ಕರೆಯಲಾಗುತ್ತದೆ.

ಖಾನಾಪುರ ಸಮೀಪದ ದೇಸೂರ್ ಎಂಬಲ್ಲಿಂದ ಕೋಟೆಗೆ ಚಾರಣ ಆರಂಭಿಸಿ, ಬೆಳಗಾವಿ ಸಮೀಪದ ಎಳ್ಳೂರು ಎಂಬಲ್ಲಿಗೆ ಇಳಿಯುವುದೆಂದು ನಿರ್ಧರಿಸಲಾಗಿತ್ತು. ರಾಣಿ ಚೆನ್ನಮ್ಮ ಎಕ್ಸ್-ಪ್ರೆಸ್ ನಲ್ಲಿ ಅಂದು ಮುಂಜಾನೆ ಹೊರಟ ೩೨ ಜನರ ತಂಡ ಖಾನಾಪುರ ರೈಲು ನಿಲ್ದಾಣದಲ್ಲಿ ಇಳಿದಾಗ ಸಮಯ ೮.೪೫. ಉಪಹಾರ ಮುಗಿಸಿ ಟೆಂಪೋವೊಂದರಲ್ಲಿ ೧೨ಕಿಮಿ ದೂರವಿರುವ ದೇಸೂರ ತಲುಪಿ ಚಾರಣ ಆರಂಬಿಸಿದಾಗ ೧೦.೧೫ ಆಗಿತ್ತು.

ದೇಸೂರದಿಂದಲೇ ದೂರದಲ್ಲಿ ಬೆಟ್ಟದ ತುದಿಯಲ್ಲಿ ವಿರಾಜಮಾನವಾಗಿರುವ ರಾಜಹಂಸಘಡ ಕಾಣುತ್ತದೆ. ದೇಸೂರವನ್ನು ಎಳ್ಳೂರು ಮೂಲಕ ಬೆಳಗಾವಿಗೆ ಸಂಪರ್ಕಿಸುವ ರಸ್ತೆಯಲ್ಲಿ ಒಂದೆರಡು ಕಿಮಿ ನಡೆದು ನಂತರ ರಸ್ತೆ ಬಿಟ್ಟು, ಗದ್ದೆ, ಬಯಲುಗಳನ್ನು ದಾಟಿ ಬೆಟ್ಟದ ಬುಡ ತಲುಪಿ ಸ್ವಲ್ಪ ವಿರಾಮ ಪಡೆದೆವು. ಪರಸ್ಪರ ಪರಿಚಯ ಮಾಡಿಕೊಳ್ಳುವ ಕಾರ್ಯಕ್ರಮ ಇಲ್ಲಿ ನಡೆಯಿತು. ಮಕ್ಕಳ ಸಂಖ್ಯೆ ೮-೧೦ ಇದ್ದಿದ್ದು ಗಮನಾರ್ಹ. ಸಣ್ಣ ವಯಸ್ಸಿನಲ್ಲೇ ಈ ಹವ್ಯಾಸ ಮತ್ತು ಪರಿಸರದ ಬಗ್ಗೆ ಕಾಳಜಿ ಮೂಡಿದರೆ ಅದೊಂದು ಒಳ್ಳೆಯ ಬೆಳವಣಿಗೆ. ಈ ಮಕ್ಕಳ ಸೈನ್ಯದಲ್ಲೊಬ್ಬ ೩ನೇ ತರಗತಿಯ ಪೋರನಿದ್ದ. ತನ್ನ ಪರಿಚಯವನ್ನು 'ನನ್ ಹೆಸ್ರು ಶ್ರೀಕಾಂತ್ ಅಂತದ, ಆದ್ರ ನೀವೆಲ್ರೂ ನನ್ನ ಡಾನ್ ಅಂತ ಕರೀಬೇಕ್ರಿ' ಎಂದೇ ಮಾಡಿಕೊಂಡ. ಚಾರಣದುದ್ದಕ್ಕೂ ಅಗಾಗ, 'ನನ್ನನ್ನು ಗುರುತಿಸಿ ........ ನಾನು ಡಾನ್' ಎಂದು ಹಾಡುತ್ತಿದ್ದ!

೧೧.೪೫ರ ಹೊತ್ತಿಗೆ ಕೋಟೆಯ ಒಳಗಿದ್ದೆವು. ಕೊನೆಯ ೨೦ನಿಮಿಷದ ಹಾದಿ ಮಾತ್ರ ಏರುಹಾದಿಯಾಗಿತ್ತು. ಚಾರಣದ ಹಾದಿಯಲ್ಲಿ ಅಲ್ಲಲ್ಲಿ ಕೆಲವು ಪೊದೆಗಳು ಮತ್ತು ಸಣ್ಣ ಗಿಡಗಳು. ಕೋಟೆ ಸಮೀಪಿಸಿದಂತೆ ಕೆಲವೊಂದು ಕಡೆ ನೆಟ್ಟು ಬೆಳೆಸಿದಂತಿರುವ ಸಾಲು ಮರಗಳು. ಇದು ಶಿವಾಜಿಯ ಪಾಳೇಗಾರನಿಗಾಗಿ ಕಟ್ಟಿಸಿದ ಕೋಟೆಯಾಗಿತ್ತು. ಕೋಟೆಯಿಂದ ಬೆಳಗಾವಿ, ಖಾನಾಪುರ, ಗೋವಾ ಕರ್ನಾಟಕ ಗಡಿಯಲ್ಲಿರುವ ಕಾಡಿನ ದೃಶ್ಯ ಕಾಣಸಿಗುತ್ತದೆ. ಕೋಟೆಯೊಳಗೊಂದು ಶಿವ ದೇವಾಲಯ, ಅಲ್ಲೇ ಪಕ್ಕದಲ್ಲೊಂದು ಮೆಟ್ಟಿಲುಗಳಿರುವ ಬಾವಿ ಮತ್ತು ಒಂದೆರಡು ನೆಲಗಟ್ಟುಗಳಿವೆ. ಇವಿಷ್ಟು ಬಿಟ್ಟರೆ ಮತ್ತೇನೂ ಇಲ್ಲ.

ರಾಜಹಂಸಘಡದ ಸುತ್ತಲೂ ಈಗ ಹಳ್ಳಿಗಳು ಬೆಳೆದಿರುವುದರಿಂದ ಕಾಡಿದ್ದ ಯಾವುದೇ ಕುರುಹು ಉಳಿದಿಲ್ಲ. ದೂರದಲ್ಲಿ ಖಾನಾಪುರದ ಆಚೆ ಗೋವಾ ಗಡಿಯಲ್ಲಿ ಕಾಡಿನಿಂದ ಆವೃತವಾದ ಬೆಟ್ಟಗಳು ಕಾಣಿಸುತ್ತಿದ್ದವು. ಮತ್ತೊಂದು ಕಡೆ ವಿಶಾಲವಾಗಿ ಬೆಳೆದು ನಿಂತಿದ್ದ ಬೆಳಗಾವಿ ನಗರ.

ಕೆಳಗಿಳಿಯುವಾಗ ಸಣ್ಣ ಜಾಗದಲ್ಲಿ ಬಣ್ಣ ಬಣ್ಣದ ಹೂವುಗಳು. ಆ ಒಂದು ಸಣ್ಣ ಜಾಗ ಬಿಟ್ಟರೆ ಬೇರೆ ಎಲ್ಲೂ ಅವು ನಮಗೆ ಗೋಚರಿಸಲಿಲ್ಲ. ಒಂದೇ ತಾಸಿನಲ್ಲಿ ಎಳ್ಳೂರು ತಲುಪಿ, ೪ ಗಂಟೆಯ ಬಸ್ಸಿನಲ್ಲಿ ೭ ಕಿಮಿ ದೂರವಿರುವ ಬೆಳಗಾವಿಯೆಡೆ ಹೊರಟೆವು.

ರಾಜಹಂಸಘಡದ ಚಿತ್ರಗಳನ್ನು ಇಲ್ಲಿ ಕಾಣಬಹುದು.

ಸೋಮವಾರ, ಜೂನ್ 18, 2007

ಗುಂಡಿಗೊಂದು ಭೇಟಿ


ಮೊನ್ನೆ ಶನಿವಾರ ಜೂನ್ ೯ರಂದು ಜಗದೀಶ್ ಕಾಮತ್ ಫೋನಾಯಿಸಿ, 'ಸಂಜೆ ೭ಕ್ಕೆ ಬರುತ್ತೇವೆಂದು ಜೋಶಿಯವರಿಗೆ ತಿಳಿಸಿದ್ದೇನೆ. ಅಲ್ಲಿಂದ ನಾಳೆ ಬೆಳಗ್ಗೆ ಟ್ರೆಕ್ ಮಾಡುವ' ಎಂದಾಗ ಸಂಜೆ ೪.೩೦ರ ಸಮಯ ಮತ್ತು ನಾನಿನ್ನೂ ಮಂಗಳೂರಿನಲ್ಲಿದ್ದೆ. ಕೂಡಲೇ ಮೈಗೆ ಕರೆಂಟ್ ತಾಗಿದಂತೆ ಫಾಸ್ಟ್ ಆಗಿ ಎಲ್ಲಾ ಕೆಲಸ ಮುಗಿಸಿ, ಉಡುಪಿಗೆ ಬಂದು, ಟ್ರೆಕ್ ಬ್ಯಾಗ್ ರೆಡಿ ಮಾಡಿ, ಸ್ನಾನ ಮಾಡಿ ಫ್ರೆಶ್ ಆಗಿ, ಎಲ್ಲರನ್ನೂ ಸೇರಿಕೊಂಡಾಗ ರಾತ್ರಿ ೮.೩೦ ಆಗಿತ್ತು. ಕಡೆಗೆ ಎಲ್ಲಾ ೯ ಮಂದಿ ಬಂದು ಹೊರಡುವಾಗ ರಾತ್ರಿ ೯ ಆಗಿತ್ತು. ೨ ಓಮ್ನಿಗಳಲ್ಲಿ ಹೊರಟ ನಾವು, ಒಂದೆಡೆ ಊಟ ಮುಗಿಸಿ ಜೋಶಿಯವರ ಮನೆ ರಾತ್ರಿ ೧೧.೪೫.

ನಮ್ಮನ್ನು ೧೦.೩೦ರವರೆಗೆ ಕಾದು ಶ್ರೀ ಗಂಗಾಧರ ಜೋಶಿಯವರು, ಹೊರಗಿನ ಲೈಟನ್ನು ಆನ್ ಇಟ್ಟು ಮಲಗಿದ್ದರು. ವಾಹನಗಳ ಸದ್ದು ಕೇಳಿ, ಎದ್ದು ಬಂದು ನಮ್ಮನ್ನು ಸ್ವಾಗತಿಸಿದರು. ಹೆಚ್ಚು ತಡಮಾಡದೇ ಅವರ ಮನೆಯ ವಿಶಾಲ ಜಗಲಿಯಲ್ಲಿ ನಿದ್ರಾದೇವಿಗೆ ಶರಣಾದೆವು. ಮುಂಜಾನೆ ನಮಗೆ ಯಾರೂ ಮಾರ್ಗದರ್ಶಿಗಳು ಸಿಗಲಿಲ್ಲ. ಜೋಶಿಯವರಿಗೆ, ನಾವು ಬರುತ್ತಿದ್ದೇವೆಂದು ತಡವಾಗಿ ತಿಳಿಸಿದ್ದರಿಂದ ಅವರಿಗೂ ಒಬ್ಬ ಮಾರ್ಗದರ್ಶಿಯನ್ನು ರೆಡಿ ಮಾಡಿ ಇಡಲು ಅಸಾಧ್ಯವಾಗಿತ್ತು. ಗೋವಿಂದ ಎಂಬ ನಮ್ಮ ರೆಗ್ಯುಲರ್ ಗೈಡ್ ಆ ದಿನ ಬೇರೆ ಕಡೆ ಬಿಝಿ. ಕಡೆಗೆ ಎಲ್ಲಿ ಹೋಗಬೇಕೆಂದು ಇದ್ದೇವೋ ಆ ಚಾರಣವನ್ನು ರದ್ದು ಮಾಡಿ, ಅಲ್ಲೇ ಸಮೀಪದಲ್ಲಿರುವ ಗುಂಡಿ ಜಲಪಾತಕ್ಕೆ ಹೋಗೋಣವೆಂದು ನಿರ್ಧರಿಸಿದೆವು.

ಮುಂಜಾನೆ ೮.೩೦ರ ಸುಮಾರಿಗೆ ನಾವು ಹೊರಟ ಕೂಡಲೇ ಮಳೆ ಬಿರುಸಾಗಿ ಬೀಳಲಾರಂಭಿಸಿತು. ಸುಮಾರು ಒಂದು ತಾಸು ಅಲ್ಲಲ್ಲಿ ಅಲೆದು ದಾರಿ ತಪ್ಪಿ, ಜಲಪಾತಕ್ಕೆ ದಾರಿ ಸಿಗದೇ ಮತ್ತೆ ಮರಳಿ ಜೋಶಿಯವರ ಮನೆಗೆ ಬಂದೆವು. ಈಗ ಮಳೆ ನಿಂತು, ಬಿಸಿಲು ಶುರುವಾಗಿತ್ತು. ಈ ಬಾರಿ ಜೋಶಿಯವರ ಮಗ ಡುಂಡಿರಾಜ, ತಾನು ಜಲಪಾತ ತೋರಿಸುವೆನೆಂದು ನಮ್ಮೊಂದಿಗೆ ಬಂದ. ತೋಟಗಳ ನಡುವೆ ೧೦ನಿಮಿಷ ನಡೆದು, ನಂತರ ಕಾಡಿನಲ್ಲಿ ೧೫ ನಿಮಿಷ ನಡೆದು ಗುಂಡಿ ಜಲಪಾತಕ್ಕೆ ತಲುಪಿದೆವು. ಜೋಶಿಯವರ ಮನೆಯಿಂದ ಕೇವಲ ೨೦-೨೫ ನಿಮಿಷದ ನಡಿಗೆ.

ಸುಮಾರು ೪೦ ಅಡಿ ಎತ್ತರದಿಂದ ಬೀಳುವ ಸಣ್ಣ ಜಲಧಾರೆ ಗುಂಡಿ ಜಲಪಾತ. ಇದೇ ತೊರೆ ಮೇಲ್ಗಡೆ ಸುಮಾರು ೧೦೦ ಅಡಿಯಷ್ಟು ಜಲಪಾತವನ್ನು ನಿರ್ಮಿಸಿದ್ದು, ಹಳ್ಳಗುಂಟ ಇನ್ನೂ ೧೫೦ ನಿಮಿಷದಷ್ಟು ನಡೆದರೆ ಅಲ್ಲಿಗೆ ತಲುಪಬಹುದು. ಆದ್ದರಿಂದ ನಾವು ನೋಡಿದ ೪೦ ಅಡಿ ಎತ್ತರದ ಜಲಧಾರೆಯನ್ನು, 'ಗುಂಡಿ ೨ನೇ ಜಲಪಾತ' ಎನ್ನಬಹುದು. ಜಟ್ಟಿಗಳೆಲ್ಲರೂ ನೀರಿಗಿಳಿದು ಜಲಕ್ರೀಡೆಯಾಡಲು ಶುರುಮಾಡಿದರು. ಒಂದು ತಾಸಿನ ಬಳಿಕ ಮರಳಿ ಜೋಶಿಯವರ ಮನೆಗೆ. ತಾವು ಬೆಳೆದಿದ್ದ ತರಕಾರಿ ಇತ್ಯಾದಿಗಳನ್ನು ಶ್ರೀಮತಿ ಜೋಶಿಯವರು, 'ತಗೊಂಡುಹೋಗಿ' ಎಂದು ನಮ್ಮ ಮುಂದೆ ಇಟ್ಟಾಗ, ಅಲ್ಲಿ ನಡೆದಿತ್ತು 'ಫ್ರೀ ಫಾರ್ ಆಲ್' ತಳ್ಳಾಟ, ನುಗ್ಗಾಟ, ಜಗ್ಗಾಟ. ಎಲ್ಲರೂ ಸಿಕ್ಕಿದಷ್ಟನ್ನು ಬಾಚಿಕೊಂಡೆವು. ಪುಕ್ಕಟೆ ಸಿಕ್ಕಿದ್ದಕ್ಕೆ ರುಚಿ ಹೆಚ್ಚಂತೆ.

ಮತ್ತೆ ಯಾವಾಗಲಾದರೂ ಮತ್ತೊಂದು ಚಾರಣಕ್ಕೆ ಬರುತ್ತೇವೆಂದು ಜೋಶಿಯವರಿಗೆ ವಿದಾಯ ಹೇಳಿ, ಉಡುಪಿ ತಲುಪಿದಾಗ ಮಧ್ಯಾಹ್ನ ೨.೧೫. ಇಷ್ಟು ಬೇಗ ಯಾವುದೇ ಚಾರಣದಿಂದ ಹಿಂತಿರುಗಿರಲಿಲ್ಲ!

ಭಾನುವಾರ, ಜೂನ್ 10, 2007

ಶಿಂಗಾಣಿಬೆಟ್ಟವನ್ನೇರಿ


ಮೇ ೨೦೦೭ರ ಮಂಗಳೂರು ಯೂತ್ ಹಾಸ್ಟೆಲ್ ಚಾರಣ 'ಶಿಂಗಾಣಿಬೆಟ್ಟ'ಕ್ಕೆ. ಕಳೆದೆರಡು ವರ್ಷಗಳಲ್ಲಿ ಇಲ್ಲಿಗೆ ಇದು ನಮ್ಮ ನಾಲ್ಕನೇ ಭೇಟಿ. ಮೇ ೨೦೦೫ರಲ್ಲಿ ಎತ್ತಿನಭುಜ, ಜನವರಿ ೨೦೦೬ರಲ್ಲಿ ಅಮೇದಿಕಲ್ಲು, ಮೇ೨೦೦೬ರಲ್ಲಿ ಉದಯಗಿರಿ ಮತ್ತು ಈಗ ಶಿಂಗಾಣಿಬೆಟ್ಟ.

ಎಂದಿನಂತೆ ಈ ಸಲ ಕೂಡಾ ಗೋಪು ಗೋಖಲೆಯವರ ಮನೆಯಲ್ಲಿ ನಮಗೆ ಊಟ, ಉಪಹಾರ ಇತ್ಯಾದಿಗಳ ವ್ಯವಸ್ಥೆ. ಮೇ ೧೯ರಂದು ಮೋಹನನ 'ಶಕ್ತಿ'ಯಲ್ಲಿ ೨೪ ಚಾರಣಿಗರ ನಮ್ಮ ತಂಡ ಮಂಗಳೂರು ಬಿಟ್ಟಾಗ ಸಂಜೆ ೬.೧೫. ಗೋಪು ಗೋಖಲೆಯವರ ಮನೆ ರಾತ್ರಿ ೯.೧೫ ಕ್ಕೆ ತಲುಪಿದಾಗ ನಮಗಾಗಿ ಕಾಯುತ್ತಿತ್ತು ರುಚಿಯಾದ ಊಟ. ನಂತರ ಸಮೀಪದಲ್ಲೇ ಇದ್ದ ಶಾಲೆಯ ವಠಾರಕ್ಕೆ ತೆರಳಿ ಕ್ಯಾಂಪ್ ಫಯರ್. ಕಳೆದ ಎಪ್ರಿಲ್ ನಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿ ನವದಂಪತಿಗಳೆನಿಸಿಕೊಂಡಿದ್ದ ನಮಗೆ(ನನಗೆ ಮತ್ತು ನನ್ನವಳಿಗೆ) ಸನ್ಮಾನ. ನಂತರ ಕಳೆದ ಐದು ವರ್ಷಗಳಿಂದ ಮಂಗಳೂರು ಯೂತ್ ಹಾಸ್ಟೆಲ್ ಆಯೋಜಿಸಿದ ಎಲ್ಲಾ ಚಾರಣಗಳಲ್ಲೂ ಒಂದನ್ನೂ ತಪ್ಪಿಸದೆ ಪಾಲ್ಗೊಂಡ ರಮೇಶ್ ಕಾಮತರಿಗೆ ಸನ್ಮಾನ. ನಂತರ ಎಂಟರ್-ಟೈನ್-ಮೆಂಟ್ ಶುರು. ಸುಮಾರು ೧೧.೩೦ಕ್ಕೆ ಕ್ಯಾಂಪ್ ಫಯರ್ ಮುಗಿಸಿ ಶಾಲಾ ವಠಾರದಲ್ಲೇ ನಿದ್ರೆ.

ಮುಂಜಾನೆ ಗೋಖಲೆಯವರ ಮನೆಯಲ್ಲಿ ಉಪಹಾರ ಮುಗಿಸಿ ೭.೧೫ಕ್ಕೆ ಚಂದಪ್ಪನ ಮಾರ್ಗದರ್ಶನದಲ್ಲಿ ಶಿಂಗಾಣಿಬೆಟ್ಟಕ್ಕೆ ಚಾರಣ ಶುರು. ಎಂದಿನಂತೆ ನಾನು ಹಿಂದೆ. ಕಾಡು ಕೆಲವೊಂದು ಕಡೆ ದಟ್ಟವಾಗಿತ್ತು. ಬೇಗನೇ ಹೊರಟಿದ್ದರಿಂದ ಮತ್ತು ಕಾಡಿನ ನಡುವೆನೇ ಏರುಹಾದಿ ಇದ್ದಿದ್ದರಿಂದ ಬಿಸಿಲಿನ ಉರಿಯಿಂದ ತಪ್ಪಿಸಿಕೊಂಡೆವು.

ಎರಡು ತಾಸು ಕಳೆದರೂ ಇನ್ನೂ ಕಾಡು ಮುಗಿಯುತ್ತಿರಲಿಲ್ಲ. ಕೊನೆಕೊನೆಗೆ ಈ ಕಾಡಿನ ಸಹವಾಸ ಸಾಕಪ್ಪ ಎನ್ನುವಷ್ಟು ಮಟ್ಟಿಗೆ 'ಮೊನೊಟೊನಸ್' ಆಗುತ್ತಿತ್ತು ಚಾರಣ. ಮಧ್ಯದಲ್ಲಿ ಸಿಕ್ಕಿದ ನೀರಿನ ಸೆಲೆಯೊಂದು ಆಯಾಸ ಪರಿಹಾರ ಮಾಡಿತು. ನಂತರ ಮತ್ತೆ ಏರುಹಾದಿ. ಚಂದಪ್ಪ ದಾರಿ ಮಾಡಿಕೊಂಡು ಮುಂದೆ ಸಾಗುತ್ತಿದ್ದ. ಆದರೆ ಕಾಡಿನಿಂದ ಹೊರಗೆ ನಮ್ಮನ್ನು ಕರಕೊಂಡು ಹೋಗುವ ವಿಚಾರ ಆತನಿಗೆ ಇದ್ದಂತಿರಲಿಲ್ಲ.


ಸರಿಯಾಗಿ ೩ ತಾಸಿನ ಬಳಿಕ ಒಂದೆಡೆ ಎಡ ತಿರುವು ತಗೊಂಡು ಇಪ್ಪತ್ತು ಹೆಜ್ಜೆ ಇಟ್ಟು ಒಮ್ಮೆಲೇ ಕಾಡಿನಿಂದ ಹೊರಗೆ ಬೋಳು ಗುಡ್ಡ ಪ್ರದೇಶಕ್ಕೆ ಬಂದುಬಿಟ್ಟೆವು. ಅಲ್ಲೇ ಮುಂದೆ ಕೇವಲ ೫ ನಿಮಿಷದ ನಡಿಗೆಯಷ್ಟು ದೂರದಲ್ಲಿ ರಾರಾಜಿಸುತ್ತಿತ್ತು ಶಿಂಗಾಣಿಬೆಟ್ಟದ ತುದಿ. ಸಂತೋಷ ಮತ್ತು ನಿರಾಸೆ ಒಟ್ಟಿಗೆ ಆಯಿತು. ಅದ್ಭುತವಾಗಿ ಕಾಣುತ್ತಿದ್ದ ಶಿಂಗಾಣಿಬೆಟ್ಟದ ತುದಿ, ಸುತ್ತಮುತ್ತಲಿನ ಗ್ರೇಟ್ ನೋಟ ಮತ್ತು ಯಶಸ್ವಿಯಾಗಿ ಮತ್ತೊಂದು ಬೆಟ್ಟವನ್ನೇರಿದ ಸಂತೋಷ ಒಂದೆಡೆಯಾದರೆ ಬೋಳುಗುಡ್ಡದಲ್ಲಿ ಕೇವಲ ೫ ನಿಮಿಷದ ನಡಿಗೆಯಿದ್ದರಿಂದ ನಿರಾಸೆಯಾಯಿತು. ಶಿಂಗಾಣಿಬೆಟ್ಟದ ತುದಿಯಿಂದ ಸ್ವಲ್ಪ ಕೆಳಗಿನವರೆಗೆ ಕಾಡು ಹಬ್ಬಿಕೊಂಡಿದೆ. ಶಿಂಗಾಣಿಬೆಟ್ಟದ ತುದಿ ತಲುಪಿದಾಗ ಸಮಯ ೧೦.೨೦.


ಕೆಳಗೆ ಶಿಶಿಲದ ಶಿಶಿಲೇಶ್ವರ ದೇವಸ್ಥಾನ ಮತ್ತು ಅಲ್ಲೇ ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಿಂಡಿ ಅಣೆಕಟ್ಟು ಸ್ಪಷ್ಟವಾಗಿ ಕಾಣುತ್ತಿತ್ತು. ಕಪಿಲಾ ನದಿಯ ಹರಿವಿನ ಮಾರ್ಗ, ಅದರ ಹುಟ್ಟಿನ ಸ್ಥಳದಿಂದ ಬಹೂ ದೂರದವರೆಗೂ ಗೋಚರಿಸುತ್ತಿತ್ತು. ಮತ್ತೊಂದು ಕಡೆಯಲ್ಲಿ ಅಮೇದಿಕಲ್ಲು ಮತ್ತು ಎತ್ತಿನಭುಜ ಶಿಖರಗಳು ಕಾಣಿಸುತ್ತಿದ್ದವು. ಮಾರ್ಚ್ ತಿಂಗಳಲ್ಲಿ ನಾವು ಚಾರಣಗೈದ ಏರಿಕಲ್ಲು ದೂರದಲ್ಲಿ ಕಾಣುತ್ತಿದ್ದರೆ, ಮೇ ೨೦೦೬ರಲ್ಲಿ ನಾವು ಚಾರಣಗೈದ ಉದಯಗಿರಿ ಸಮೀಪದಲ್ಲೇ ಕಾಣುತ್ತಿತ್ತು. ಬಿಸಿಲಿದ್ದರೂ, ಬೀಸುತ್ತಿದ್ದ ತಂಗಾಳಿಯಿಂದ ಶಿಂಗಾಣಿಬೆಟ್ಟದ ಮೇಲೆ ಕಳೆದ ಸಮಯ ಹಿತವಾಗಿತ್ತು.

ಮಿಥುನ್, ವೇಣು ವಿನೋದ್, ಸುಧೀರ್ ಕುಮಾರ್ ಮತ್ತು ಅನಂತ್ ತಮ್ಮ ತಮ್ಮ ಕ್ಯಾಮರಾಗಳಲ್ಲಿ ಸುತ್ತಲಿನ ಅದ್ಭುತ ದೃಶ್ಯಾವಳಿಯನ್ನು ಸೆರೆಹಿಡಿಯುವುದರಲ್ಲಿ ಮಗ್ನರಾಗಿದ್ದರೆ, ವಿನಯ್ ಮತ್ತು ವಿದ್ಯಾ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಹಾಡು ಕೇಳುತ್ತಾ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದರು. ಯಾವಾಗಲೂ ಆ ಬೆಟ್ಟ ಯಾವುದು ಈ ಬೆಟ್ಟ ಯಾವುದು ಎಂದು ಕಿರಿಕಿರಿ ಮಾಡಿ ಎಲ್ಲರ ತಲೆ ತಿನ್ನುವ ರಮೇಶ್ ಕಾಮತ್ ಇಂದೇಕೋ ಮೌನಿಯಾಗಿ ಶಿಖರದಿಂದ ಸ್ವಲ್ಪ ಕೆಳಗೆ ಬಂಡೆಯೊಂದರ ಮರೆಯಲ್ಲಿ ವಿಶ್ರಮಿಸುತ್ತಿದ್ದರು. ದಿನೇಶ್ ಹೊಳ್ಳ ತಮ್ಮ ಶಿಶ್ಯೆ ರೇಷ್ಮಾಳಿಗೆ ಚಾರಣದ ಬಗ್ಗೆ ಕೊರೆಯುತ್ತಿದ್ದರು. ಯತೀಶ್ ಮತ್ತು ಪ್ರಶಾಂತ್ ಬಂಡೆಯೊಂದರ ಮೇಲೆ ಹತ್ತುವುದು ಹೇಗೆ ಎಂದು ಅದಕ್ಕೆ ಸುತ್ತು ಹೊಡೆಯುತ್ತಿದ್ದರು. ಗುಡ್ಡಗಾಡು ಓಟಗಾರ ದಾಮೋದರ್, 'ಎಂಚಿನ ಸೀನತ್ತೆ' (ಎಂಥಾ ದೃಶ್ಯವಲ್ಲವಾ) ಎನ್ನುತ್ತಾ ಅಚೀಚೆ ಓಡಾಡುತ್ತಿದ್ದರು.

೧೧.೪೫ಕ್ಕೆ ಆಯೋಜಕ ದಿನೇಶ್ ಹೊಳ್ಳರು ಕೆಳಗಿಳಿಯುವ ಆರ್ಡರ್ ಕೊಟ್ಟರು. ಗೋಪು ಗೋಖಲೆಯವರ ಮನೆ ತಲುಪಿದಾಗ ಸಮಯ ೩.೧೫ ಆಗಿತ್ತು. ಅಲ್ಲೇ ಅವರ ಮನೆಯ ಹಿಂದೆ ಹರಿಯುವ ಕಪಿಲಾ ನದಿಯಲ್ಲಿ ಮಿಂದ ನಂತರ ಮತ್ತೆ ಭರ್ಜರಿ ಊಟ. ಶಿಶಿಲೇಶ್ವರ ದೇವಸ್ಥಾನಕ್ಕೊಂದು ಭೇಟಿ ನೀಡಿ ೪.೪೫ಕ್ಕೆ ಶಿಶಿಲ ಬಿಟ್ಟ ಮೋಹನನ 'ಶಕ್ತಿ', ಉಪ್ಪಿನಂಗಡಿಯಲ್ಲಿ ಚಾ ವಿರಾಮದ ಬಳಿಕ ೮ಕ್ಕೆ ಮಂಗಳೂರು ತಲುಪಿತು. ಗಂಗಾವತಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಉಡುಪಿ ತಲುಪಿ ೯.೩೦ಕ್ಕೆ ಮನೆಯಲ್ಲಿ.

'ನೀವ್ಯಾಕೆ ಸುಮ್ನೆ ಗುಡ್ಡ ಹತ್ತುವುದು, ಜಲಪಾತ ನೋಡುವುದು ಇತ್ಯಾದಿ ಮಾಡುತ್ತೀರಿ?... ತಿಂಗಳ ಎಲ್ಲಾ ಸಂಡೇ ನೀವು ಬರೀ ಇದೇ ಮಾಡ್ತಾ ಇದ್ರೆ ಹ್ಯಾಗೆ...?' ಎಂದು ಮದುವೆಯ ಮುಂಚೆ ಕಿರಿಕಿರಿ ಮಾಡುತ್ತಿದ್ದ ನನ್ನಾಕೆ, ಈಗ ತನ್ನ ಜೀವನದ ಮೊದಲ ಚಾರಣವನ್ನು ಯಶಸ್ವಿಯಾಗಿ ಸಂತೋಷದಿಂದ ಪೂರ್ಣಗೊಳಿಸಿದ ಬಳಿಕ, 'ನಿಮಗಿರುವ ಒಳ್ಳೆಯ ಹವ್ಯಾಸವೆಂದರೆ ಇದೊಂದೆ' ಎನ್ನುವುದೇ?!

ಈ ಚಾರಣದ ಇನ್ನೊಂದು ಲೇಖನವನ್ನು ಇಲ್ಲಿ ಓದಬಹುದು.

ಮಂಗಳವಾರ, ಜೂನ್ 05, 2007

ಜಲಧಾರೆಯ ಜಿಗಿತದ ಸೌಂದರ್ಯ


ನವೆಂಬರ್ ೨೧, ೨೦೦೪ರಂದು ನಮ್ಮ ಈ ಜಲಪಾತಕ್ಕೆ. ಮಂಗಳೂರು ಯೂತ್ ಹಾಸ್ಟೆಲ್ ನವೆಂಬರ್ ತಿಂಗಳ ಚಾರಣಕ್ಕೆ ಯಾವುದಾದರೊಂದು ಸ್ಥಳ ಸೂಚಿಸಿ ಎಂದು ಗೆಳೆಯ ದಿನೇಶ್ ಹೊಳ್ಳರು ವಿನಂತಿಸಿದಾಗ, ಈ ಜಲಪಾತಕ್ಕೆ ಭೇಟಿ ನೀಡುವ ಬಗ್ಗೆ ಸೂಚಿಸಿದೆ. ನಮ್ಮಲ್ಲಿ ಯಾರೂ ಅಲ್ಲಿಗೆ ತೆರಳಿರಲಿಲ್ಲ. ಈ ಜಲಪಾತಕ್ಕೆ ಚಾರಣ ಆರಂಭಿಸುವ ಸ್ಥಳವಾದ ಚಕ್ತಿಕಲ್ ಎಂಬಲ್ಲಿಗೆ ಅಲ್ಲೆಲ್ಲೋ ದಾರಿ ಇದೆ ಎಂದು ನಾರಾಯಣ ಕಲ್ಲಿಕೋಣೆ ಹೇಳಿದ್ದು ನೆನಪಿತ್ತು. ದಾರಿ ಗೊತ್ತಿಲ್ಲದೆ, ಚಾರಣಕ್ಕೆ ಹೊರಟ ದಿನ ವಿನಾ ಕಾರಣ ತೊಂದರೆಗೆ ಒಳಗಾಗುವುದು ಬೇಡವೆಂದು ಚಾರಣ ನಿಗದಿಪಡಿಸಿದ ದಿನದ ಹಿಂದಿನ ಆದಿತ್ಯವಾರ ಚಕ್ತಿಕಲ್ ಕಡೆ ಯಮಾಹ ಓಡಿಸಿದೆ.

ಚಕ್ತಿಕಲ್ ನಲ್ಲಿ ಕೊನೆಯ ಮನೆಯ ತೋಟದಲ್ಲಿ ಸ್ವಲ್ಪ ನಡೆದು, ಬೇಲಿ ಹಾರಿ, ಮತ್ತೆ ಒಂದೆರಡು ನಿಮಿಷ ನಡೆದರೆ ಸಿಗುವ ಹಳ್ಳಗುಂಟ ಮೇಲ್ಗಡೆ ನಡೆದರೆ ೧೫೦ನಿಮಿಷಗಳ ಬಳಿಕ ಈ ಜಲಪಾತ ತಲುಪಬಹುದು. ತೂದಳ್ಳಿಯಿಂದ ಚಕ್ತಿಕಲ್ ಕಡೆಗೆ ತೆರಳುವಾಗ ಎಡಕ್ಕೆ ದೂರದಲ್ಲಿ ೨ ಜಲಪಾತಗಳು ಧುಮುಕುವ ಸುಂದರ ದೃಶ್ಯ ಲಭ್ಯ.


ನಾನು ಚಕ್ತಿಕಲ್ಲಿನ ಕೊನೆಯ ಮನೆಯನ್ನು ತಲುಪಿದಾಗ ಮನೆಯೊಡತಿ ಮತ್ತು ಆಕೆಯ ಮಗಳು ಮಾತ್ರ ಅಲ್ಲಿದ್ದರು. ಅವರಿಬ್ಬರು ನನಗೆ ಮನೆ ದಾಟಿ ಮುಂದಕ್ಕೆ ಹೋಗಲು ಬಿಡಲೇ ಇಲ್ಲ. 'ನಿಮ್ಗೆ ನಾವು ಹೋಗ್ಲಿಕ್ಕೆ ಬಿಡುದಿಲ್ಲ. ಎರಡು ವಾರಗಳ ಹಿಂದಷ್ಟೆ ಅಲ್ಲಿ ಬೆಂಗ್ಳೂರಿನ ಒಬ್ರು ತೀರ್ಕೊಂಡ್ರು. ಅವ್ರಿಬ್ರೇ ಹೋಗಿದ್ರು. ನೀವೊಂದು ಐದಾರು ಜನ ಬಂದ್ರೆ ಸರಿ' ಎಂದು ಹೇಳಿ, ಚಹಾ ಕುಡಿಸಿ ವಾಪಾಸ್ ಕಳಿಸಿದರು. ನನಗಂತೂ ಒಬ್ಬನೇ ಹೋಗುವ ಇರಾದೆ ಇರಲಿಲ್ಲ. ಆ ಮನೆಯಲ್ಲಿನ ಗಂಡಸರೆಲ್ಲರೂ ಹೊರಗೆ ತೆರಳಿದ್ದರಿಂದ ನಾನು ಬೇರೇನೂ ಮಾಡುವಂತಿರಲಿಲ್ಲ. ಮುಂದಿನ ವಾರ ೧೫ ಚಾರಣಿಗರೊಂದಿಗೆ, 'ನೀವು ಐದು ಅಂದ್ರಿ, ನಾನು ಹದಿನೈದು ಜನರೊಂದಿಗೆ ಬಂದಿದ್ದೇನೆ' ಎನ್ನುತ್ತಾ ಮತ್ತೆ ಹಾಜರಾದ ನನ್ನನ್ನು ಕಂಡು ಅವರಿಗೆ ಆಶ್ಚರ್ಯ.

ದೊಡ್ಡ ದೊಡ್ಡ ಬಂಡೆಗಳು ಮತ್ತು ಹಳ್ಳದ ಎರಡೂ ಬದಿ ದಟ್ಟ ಕಾಡು. ದಾರಿಯಲ್ಲಿ ಹಳ್ಳದ ನಡುವೆ ಸಣ್ಣ ಬಂಡೆಯೊಂದರ ಅಡಿಯಲ್ಲಿ ಮರಿ ಹೆಬ್ಬಾವೊಂದು ಮುದುಡಿ ಕುಳಿತಿತ್ತು. ನಾವು ಹಿಂತಿರುಗುವಾಗಲೂ ಅದು ಹಾಗೇ ಅದೇ ಸ್ಥಿತಿಯಲ್ಲಿ ಇತ್ತು.

ಕೂಸಳ್ಳಿಗಿಂತ ಕಷ್ಟದ ಚಾರಣವಿದು. ಕೆಲವೊಂದು ಕಡೆ ಅಗಾಧ ಗಾತ್ರದ ಬಂಡೆಗಳನ್ನು ದಾಟಲು ಬಹಳ ಶ್ರಮಪಡಬೇಕಾಗುತ್ತಿತ್ತು. ಮೊದಮೊದಲು ಸಾಧಾರಣವಾಗಿದ್ದ ಏರುಹಾದಿ ನಂತರ ಕಠಿಣಗೊಳ್ಳತೊಡಗಿತು. ನೀರಿನ ಹರಿವನ್ನೇ ಮರೆಮಾಚಿ ನಿಂತಿದ್ದ ದೈತ್ಯ ಗಾತ್ರದ ಬಂಡೆಗಳು ಎಲ್ಲಾ ಕಡೆ. ಒಂದೆರಡು ಕಡೆ ಬಂಡೆಗಳು ಅದೆಷ್ಟು ದೊಡ್ಡವಿದ್ದವೆಂದರೆ, ಅವುಗಳ ಮೇಲೇರಲು ನಾವು ಸ್ವಲ್ಪ ಹಿಂದಕ್ಕೆ ಸರಿದು, ವೇಗವಾಗಿ ಓಡಿ ಬಂದು, ೪೫ ಡಿಗ್ರಿ ಆಕಾರದಲ್ಲಿದ್ದ ಬಂಡೆಗಳ ಮೇಲೆ ಸುಮಾರು ೮-೧೦ ಹೆಜ್ಜೆಗಳಷ್ಟು ಓಡಿ ಅವುಗಳ ಮೇಲೆ ತಲುಪಬೇಕಿತ್ತು. ಈ ಬಂಡೆಗಳ ಮೇಲ್ಮೈ ನಯವಾಗಿದ್ದರಿಂದ ಜಾರುತ್ತಿತ್ತು. ಆದ್ದರಿಂದ ಕೆಲವೊಮ್ಮೆ ವೇಗ ಸಾಲದೆ, ಮೇಲೆ ತಲುಪಲು ಇನ್ನೂ ಒಂದೆರಡು ಅಡಿ ಇರುವಾಗಲೇ ಜಾರಿ, ಪಾರ್ಕುಗಳಲ್ಲಿ ಮಕ್ಕಳು ಜಾರುಗುಂಡಿಯಲ್ಲಿ ಜಾರಿ ಕೆಳಗೆ ಬರುವಂತೆ ಮತ್ತೆ ಬಂಡೆಯ ಬುಡಕ್ಕೆ ಬರುವುದು. ನಾನೂ ಒಂದು ಸಾರಿ ಜಾರಿ ಮರಳಿ ಕೆಳಗೆ ಬಂದೆ. ಎರಡನೇ ಪ್ರಯತ್ನದಲ್ಲಿ ಮತ್ತೆ ಜಾರುವೆ ಎನ್ನುವಷ್ಟರಲ್ಲಿ ಅದಾಗಲೇ ಮೇಲೇರಿದ್ದ ಪ್ರವೀಣ್, ನನ್ನ ಮುಂಚಾಚಿದ ಕೈಯನ್ನು ಹಿಡಿದು ಮೇಲೆಳೆದುಕೊಂಡರು. ರಮೇಶ್ ಕಾಮತರಂತೂ ೨ ಬಾರಿ ವೇಗ ಸಾಲದೆ ಬಂಡೆಯ ನಯವಾದ ಮೇಲ್ಮೈ ಮೇಲೆ ಕುಳಿತು ಮಕ್ಕಳಂತೆ ಕೆಳಗೆ ಜಾರಿಹೋದರು.


ಎಷ್ಟೇ ನಡೆದರೂ ಬಂಡೆಗಳ ರಾಶಿ ಮುಗಿಯುತ್ತಿರಲಿಲ್ಲ. ಕೊನೆಕೊನೆಗೆ ಜಲಪಾತ ಸಮೀಪಿಸಿದಂತೆ ಏರುಹಾದಿ ಮತ್ತಷ್ಟು ಕಠಿಣಗೊಂಡಿತು. ನಮ್ಮ ತಂಡದ ಕೆಲವು ಸದಸ್ಯರು ಜಲಪಾತದ ಬುಡದ ಸಮೀಪ ನಿಂತು ನಮ್ಮತ್ತ ಕೈ ಬೀಸುತ್ತಿದ್ದರು. ಅವರು ಸಮೀಪದಲ್ಲೇ ಇದ್ದಂತೆ ಕಂಡರೂ, ನಾವು ಅವರ ಸಮೀಪ ತಲುಪುತ್ತಿರುವಂತೆ ಅನಿಸುತ್ತಿರಲಿಲ್ಲ. ಕಣ್ಣ ಮುಂದೆ ಜಲಪಾತ ಧುಮುಕುತ್ತಿರುವುದು ಕಾಣಿಸುತ್ತಿದ್ದರೂ, ಅದರ ಸಮೀಪ ತಲುಪಲು ಬಹಳ ಪರದಾಡಬೇಕಾಯಿತು. ಕೊನೆಯ ೩೦ ನಿಮಿಷಗಳ ಏರುಹಾದಿ ಬಹಳ ಕಷ್ಟಕರವಾಗಿತ್ತು.


ಈ ಜಲಪಾತ ಒಂದೇ ನೆಗೆತಕ್ಕೆ ೩೦೦ ಅಡಿಯಷ್ಟು ಆಳಕ್ಕೆ ಧುಮುಕುತ್ತದೆ. ಒಂದೇ ಹಂತ. ಒಂದೇ ನೆಗೆತ. ಅದ್ಭುತ ನೋಟ. ಎಲ್ಲರೂ ಮನಸಾರೆ ಜಲಕ್ರೀಡೆಯಾಡಿದರು. ನಂತರ ಜಲಪಾತದ ಮುಂದೆ ಇರುವ ಸಣ್ಣ ದಿಬ್ಬದ ಮೇಲೆ ಕುಳಿತು ಸೌಂದರ್ಯವನ್ನು ಅಸ್ವಾದಿಸುತ್ತಾ ಊಟ ಮುಗಿಸಿದೆವು. ಇಲ್ಲಿ ಸುಮಾರು ೨ ತಾಸಿನಷ್ಟು ಸಮಯವನ್ನು ಕಳೆದೆವು. ಸುಮ್ಮನೆ ಬಂಡೆಯ ಮೇಲೆ ಮೈ ಚಾಚಿ ಆಗಸಕ್ಕೆ ಮುಖ ಮಾಡಿ ಆಷ್ಟು ಎತ್ತರದಿಂದ ನೀರು ಧುಮುಕುವುದನ್ನು ನೋಡುತ್ತ ಮಲಗಿದರೆ ಅದೊಂದು ಬೇರೆನೇ ಲೋಕ. ಅಕ್ಟೋಬರ್ ನಿಂದ ಜನವರಿಯವರೆಗೆ ಸಂದರ್ಶಿಸಲು ಸೂಕ್ತ ಸಮಯ.