ಸೋಮವಾರ, ಮಾರ್ಚ್ 07, 2016

ನೀಲಕಂಠೇಶ್ವರ ದೇವಾಲಯ - ಲಕ್ಕುಂಡಿ

 

ನೀಲಕಂಠೇಶ್ವರ ದೇವಾಲಯವು ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಶಿಥಿಲಾವಸ್ಥೆಯನ್ನು ತಲುಪಿರುವ ದೇವಾಲಯವಿದು. ನವರಂಗದ ಹೊರಗೋಡೆಗಳು ಕಣ್ಮರೆಯಾಗಿದ್ದು, ಮೂರೂ ದಿಕ್ಕುಗಳಿಂದಲೂ ನವರಂಗಕ್ಕೆ ಮುಕ್ತ ಪ್ರವೇಶ.

 

ಗರ್ಭಗುಡಿಯ ದ್ವಾರವು ಪಂಚಶಾಖೆಗಳನ್ನು ಹೊಂದಿದ್ದು, ಲಲಾಟದಲ್ಲಿ ಅದೇನೋ ವಿಶಿಷ್ಟ ಮತ್ತು ಅಪರೂಪದ ಕೆತ್ತನೆಯಿದೆ. ದ್ವಾರಕ್ಕೆ ಕೆಂಪು ಬಣ್ಣ ಬಳಿಯಲಾಗಿದ್ದರಿಂದ ಈ ಕೆತ್ತನೆ ಅದೇನೆಂದು ತಿಳಿದುಕೊಳ್ಳಲಾಗಲಿಲ್ಲ.


ಗರ್ಭಗುಡಿಯಲ್ಲಿ ಎತ್ತರದ ಪಾಣಿಪೀಠದ ಮೇಲೆ ಉದ್ದನೆಯ ಶಿವಲಿಂಗವಿದೆ. ಗರ್ಭಗುಡಿಯಲ್ಲೇ ನಂದಿಯ ಸಣ್ಣ ಮೂರ್ತಿಯಿದೆ.



 
ದೇವಾಲಯದ ಹೊರಗೋಡೆಗಳ ಕಲ್ಲಿನ ಕವಚ ಕಣ್ಮರೆಯಾಗುತ್ತಿವೆ. ಹೊರಗೋಡೆಯಲ್ಲಿ ದೊಡ್ಡ ಗೋಪುರವಿರುವ ಮಂಟಪಗಳನ್ನು ಹಾಗೂ ಕಿರುಗೋಪುರವಿರುವ ಸ್ತಂಭಗಳನ್ನು ಕಾಣಬಹುದು.



 
ಈ ದೇವಾಲಯ ಪ್ರಸಿದ್ಧಿ ಪಡೆಯಲು ಇನ್ನೊಂದು ಕಾರಣವಿದೆ. ಮುಂಗಾರು ಮಳೆ ಚಲನಚಿತ್ರದ ಹಾಡೊಂದರಲ್ಲಿ ಈ ದೇವಾಲಯದ ಹೊರಗೋಡೆ ಮತ್ತು ನವರಂಗದ ಕಂಬಗಳು ೨೧ ಸೆಕೆಂಡುಗಳ ಕಾಲ (೩:೨೧ರಿಂದ) ಮಿಂಚಿ ಕಣ್ಮರೆಯಾಗುತ್ತವೆ!

ಭಾನುವಾರ, ಫೆಬ್ರವರಿ 28, 2016

ಕಲ್ಲೇಶ್ವರ ದೇವಾಲಯ - ಚನ್ನಗಿರಿ

 

ಚನ್ನಗಿರಿಯಲ್ಲಿ ಈ ದೇವಾಲಯವನ್ನು ಹುಡುಕುವುದೇ ತ್ರಾಸದಾಯಕ. ಸುತ್ತಲೂ ಮನೆಗಳಿಂದ, ಕಟ್ಟಡಗಳಿಂದ ಆವೃತವಾಗಿರುವ ಕಲ್ಲೇಶ್ವರನ ಸನ್ನಿಧಿ ದ್ವಿಕೂಟ ರಚನೆಯಾಗಿದ್ದು, ಪಶ್ಚಿಮದಲ್ಲಿ ಆಕರ್ಷಕ ಶಿವಲಿಂಗ ಮತ್ತು ಉತ್ತರದಲ್ಲಿ ಚನ್ನಕೇಶವನ ಸುಂದರ ಮೂರ್ತಿಯನ್ನು ಹೊಂದಿದೆ.


ಕಲಾಸಕ್ತರಿಗೆ ಈ ದೇವಾಲಯದಲ್ಲಿ ನೋಡಲು ಏನೂ ಇಲ್ಲ. ತೀರಾ ಸಾಧಾರಣ ದೇವಾಲಯದ ಛಾವಣಿಗೆ ಪುರಾತತ್ವ ಇಲಾಖೆ ತೇಪೆ ಸಾರಿಸಿ, ಹೊರಗೋಡೆಗಳನ್ನು ದುರಸ್ತಿಪಡಿಸಿ ತಕ್ಕಮಟ್ಟಿಗೆ ಕಾಪಾಡಿಕೊಂಡಿದೆ.



ದಕ್ಷಿಣಾಭಿಮುಖವಾಗಿರುವ ದ್ವಾರದಿಂದ ಒಳಪ್ರವೇಶಿಸಿದರೆ ನಾಲ್ಕು ಕಂಬಗಳ ನವರಂಗ. ಈ ಹೊಯ್ಸಳ ಶೈಲಿಯ ಕಂಬಗಳು ಸುಂದರ ಅಲಂಕಾರಿಕಾ ಕೆತ್ತನೆಗಳನ್ನು ಹೊಂದಿವೆ. ಎರಡೂ ಗರ್ಭಗುಡಿಗಳು ಅಲಂಕಾರವಿಲ್ಲದ ನಾಲ್ಕು ತೋಳುಗಳ ದ್ವಾರಗಳನ್ನು ಹೊಂದಿವೆ.



ಅತ್ಯಾಕರ್ಷಕ ಪೀಠದ ಮೇಲಿರುವ ಶಿವಲಿಂಗ ಸುಂದರವಾಗಿ ಕಾಣುತ್ತದೆ. ಗರ್ಭಗುಡಿಯ ಹೊರಗೆ ನಂದಿ ಇದೆ. ಶಂಖಚಕ್ರಪದ್ಮಗದಾಧಾರಿಯಾಗಿರುವ ಚನ್ನಕೇಶವನ ಮೂರ್ತಿಯೂ ಚೆನ್ನಾಗಿದ್ದು, ಪ್ರಭಾವಳಿ ಕೆತ್ತನೆಗಳನ್ನು ಮತ್ತು ಶ್ರೀದೇವಿ ಭೂದೇವಿಯರನ್ನು ಹೊಂದಿದೆ.



ನವರಂಗದ ನಾಲ್ಕು ಕಂಬಗಳು ಮತ್ತು ಹೊರಗೋಡೆಯ ಕೆಲವು ಭಾಗಗಳು ಮಾತ್ರ ಉಳಿದಿದ್ದ ದೇವಾಲಯವನ್ನು ಪುರಾತತ್ವ ಇಲಾಖೆ ಶ್ಲಾಘನೀಯವಾಗಿ ದುರಸ್ತಿಪಡಿಸಿದೆ.

ಭಾನುವಾರ, ಫೆಬ್ರವರಿ 21, 2016

ವೀರಭದ್ರ ದೇವಾಲಯ - ಲಕ್ಕುಂಡಿ


ವೀರಭದ್ರ ದೇವಾಲಯವು ಆಧುನಿಕತೆಯ ಎಲ್ಲಾ ರೀತಿಯ ಸ್ಪರ್ಶಗಳನ್ನೂ ಕಂಡಿದೆ. ಶಿಥಿಲಗೊಂಡಿದ್ದ ದೇವಾಲಯವನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಾಡಿಸಿ ಊರವರು ದಿನಾಲೂ ಪೂಜೆ ಸಲ್ಲಿಸಿ, ಊರದೇವರ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಟ್ಟಿದ್ದಾರೆ.


ಬೃಹತ್ ಸ್ವಾಗತ ದ್ವಾರವನ್ನು ಕಂಡಾಗ ವೀರಭದ್ರ ದೇವಾಲಯ ಹೌದೋ ಅಲ್ಲವೋ ಎಂಬ ಸಂಶಯ ಕಾಡಲಾರಂಭಿಸಿತು. ಈ ಸ್ವಾಗತ ದ್ವಾರವನ್ನು ದಾಟಿ ಪ್ರವೇಶಿಸಿದೊಡನೆ ಬಲಭಾಗದಲ್ಲಿ ಗೋಚರಿಸುವುದು ನಾಲ್ಕು ಕಂಬಗಳು, ಜಗಲಿ, ಜಾಲಂಧ್ರಗಳಿರುವ ಎರಡು ಕಿಟಕಿಗಳು ಮತ್ತು ಎರಡು ದ್ವಾರಗಳಿರುವ, ಮನೆಯಂತೆ ಕಾಣುವ ವೀರಭದ್ರ ದೇವಾಲಯ.


 
ದೇವಾಲಯಕ್ಕೆ ಕಪ್ಪು ಬಣ್ಣವನ್ನು ಬಳಿಯಲಾಗಿತ್ತು. ಎರಡು ದ್ವಾರಗಳಿಗೆ ಚಿನ್ನದ ಬಣ್ಣದ ಲೇಪ. ಜಗಲಿಯಲ್ಲಿ, ಹಿಡಿಕೆಯಿಲ್ಲದ ಕುಟ್ಟುವ ಮುಸಳವೊಂದನ್ನು ಇರಿಸಲಾಗಿತ್ತು.




ದೇವಾಲಯದಲ್ಲಿ ಎರಡು ದ್ವಾರಗಳಿರುವುದು ಇಲ್ಲಿರುವ ಎರಡು ಗರ್ಭಗುಡಿಗಳಿಗಾಗಿ. ಒಂದು ಗರ್ಭಗುಡಿಯಲ್ಲಿ ವೀರಭದ್ರನ ಮೂರ್ತಿಯಿದ್ದು, ಇನ್ನೊಂದರಲ್ಲಿ ಶಿವಲಿಂಗವಿದೆ. ಎರಡೂ ಗರ್ಭಗುಡಿಗಳು ಆಧುನಿಕತೆಯ ಪರಿಪೂರ್ಣತೆಯನ್ನು ಹೊಂದಿದ್ದು, ಪ್ರತ್ಯೇಕ ನಾಲ್ಕು ಕಂಬಗಳ ನವರಂಗ ಹಾಗೂ ಅಂತರಾಳವನ್ನು ಹೊಂದಿವೆ.



ವೀರಭದ್ರನ ನವರಂಗದಲ್ಲಿ ಎರಡು ಪಾದುಕೆಗಳಿವೆ. ಶಿವಲಿಂಗದ ನವರಂಗದ ಕಂಬವೊಂದರಲ್ಲಿ ಶಾಸನವೊಂದನ್ನು ಕಾಣಬಹುದು.