ಭಾನುವಾರ, ಫೆಬ್ರವರಿ 14, 2016

ಮಲ್ಲಿಕಾರ್ಜುನ ದೇವಾಲಯ - ಕಾಳಗಿ


ಊರ ನಟ್ಟನಡುವೆ ಇರುವ ಮಲ್ಲಿಕಾರ್ಜುನ ದೇವಾಲಯವು ಮುಖಮಂಟಪ, ನವರಂಗ, ಅಂತರಾಳ ಹಾಗೂ ಗರ್ಭಗುಡಿಯನ್ನೊಳಗೊಂಡಿದೆ. ಸುಮಾರು ನಾಲ್ಕು ಅಡಿ ಎತ್ತರದ ಅಧಿಷ್ಠಾನದ ಮೇಲೆ ನಿರ್ಮಾಣಗೊಂಡಿರುವ ಈ ದೇವಾಲಯವನ್ನು ಇಸವಿ ೧೧೬೩ರಲ್ಲಿ ಬಾಣವಂಶದ ಪ್ರಸಿದ್ಧ ದೊರೆ ಮಹಾಮಂಡಲೇಶ್ವರ ವೀರ ಗೊಂಕರಸನು ನಿರ್ಮಿಸಿದನು ಎಂದು ಶಾಸನಗಳು ತಿಳಿಸುತ್ತವೆ.



 
ಸುತ್ತಲೂ ಕಕ್ಷಾಸನವಿರುವ ಮುಖಮಂಟಪವು ವಿಶಾಲವಾಗಿದ್ದು, ನಟ್ಟನಡುವೆ ನಾಲ್ಕು ಕಂಬಗಳ ನವರಂಗವಿದೆ. ನವರಂಗದ ನಡುವೆ ನಂದಿಯ ಮೂರ್ತಿಯಿದೆ. ಮುಖಮಂಟಪದ ಕೆಲವು ಕಂಬಗಳ ಮೇಲೆ ಕೆತ್ತನೆಗಳನ್ನು ಕಾಣಬಹುದು.



ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕಿಯರಿದ್ದಾರೆ ಮತ್ತು ಜಾಲಂಧ್ರಗಳ ರಚನೆಯಿದೆ. ದ್ವಾರದ ಮೇಲ್ಭಾಗದಲ್ಲಿ ತಾಂಡವೇಶ್ವರನ ಚಿತ್ರಣವಿದೆ. ಇದಕ್ಕೆ ಕೆಂಪು ಬಣ್ಣ ಬಳಿದು ವಿರೂಪಗೊಳಿಸಿದ್ದಾರೆ. ದ್ವಾರದ ಸ್ವಲ್ಪ ಮೊದಲು ನೆಲದಲ್ಲೇ ಬರೆಯಲಾಗಿರುವ ಎರಡು ಸಾಲುಗಳ ಶಾಸನವಿದೆ.

 
ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯನ್ನೂ ಮತ್ತು ಇಕ್ಕೆಲಗಳಲ್ಲಿ ಚನ್ನಕೇಶವನನ್ನು ಕಾಣಬಹುದು. ಚನ್ನಕೇಶವನ ಇಕ್ಕೆಲಗಳಲ್ಲಿ ಚಾಮರ ಬೀಸುವ ಪರಿಚಾರಿಕೆಯರಿದ್ದಾರೆ. ಗರ್ಭಗುಡಿಯಲ್ಲಿ ದೊಡ್ಡ ಪೀಠದ ಮೇಲೆ ಆಕರ್ಷಕ ಮುಖವಾಡ ತೊಟ್ಟಿರುವ ಶಿವಲಿಂಗವಿದೆ.


 
ಈ ದೇವಾಲಯವನ್ನು ರಾಮೋಜ ಎಂಬ ಶಿಲ್ಪಿಯ ನೇತೃತ್ವದಲ್ಲಿ ಹನ್ನೆರಡು ಶಿಲ್ಪಿಗಳು ನಿರ್ಮಿಸಿದರು ಎಂದು ಶಾಸನದಲ್ಲಿ ತಿಳಿಸಲಾಗಿದೆ.

ಸೋಮವಾರ, ಫೆಬ್ರವರಿ 08, 2016

ಏರಿಕಲ್ಲನ್ನು ಏರಿ... ಮತ್ತೊಮ್ಮೆ...


೨೦೧೫ರ ಜನವರಿ ತಿಂಗಳಂದು ಉಡುಪಿ ಯೂತ್ ಹಾಸ್ಟೆಲ್ ವತಿಯಿಂದ ಏರಿಕಲ್ಲಿಗೆ ಚಾರಣ ಆಯೋಜಿಸಲಾಗಿತ್ತು. ನಾನೂ ಸೇರಿಕೊಂಡೆ. ಈ ಮೊದಲು ೨೦೦೭ರಲ್ಲಿ ಒಮ್ಮೆ ಏರಿಕಲ್ಲಿಗೆ ತೆರಳಿದ್ದೆ. ಆ ಚಾರಣದ ಸುಂದರ ನೆನಪುಗಳು ಮತ್ತೊಮ್ಮೆ ಏರಿಕಲ್ಲಿನೆಡೆ ತೆರಳಲು ನನಗೆ ಪ್ರೇರಕವಾದವು. ಈ ರಮೇಶ್ ಕಾಮತ್ ಎಲ್ಲೆಲ್ಲೋ ಸುತ್ತಾಡುತ್ತಿರುತ್ತಾರೆ. ಅವರೊಂದಿಗೆ ಸುಧೀರ್ ಕುಮಾರ್ ಕೂಡಾ. ಉಡುಪಿ ಯೂತ್ ಹಾಸ್ಟೆಲ್‍ಗೆ ಏರಿಕಲ್ಲಿಗೆ ದಾರಿ ತಿಳಿದಿರಲಿಲ್ಲ. ಆದರೆ ಈ ಇಬ್ಬರು ಮತ್ತೆ ಮತ್ತೆ ಏರಿಕಲ್ಲನ್ನು ಏರಿಳಿದಿದ್ದರಿಂದ ಅವರನ್ನು ಚಾರಣಕ್ಕೆ ಬರುವಂತೆ ವಿನಂತಿಸಲಾಯಿತು.



ಕಾಡಿನೊಳಗೆ ಸುಮಾರು ೪೫ ನಿಮಿಷ ನಡೆದ ಬಳಿಕ, ನಂತರದ ಒಂದುವರೆ ತಾಸು ಚಾರಣ ತೆರೆದ ಪ್ರದೇಶದಲ್ಲಿ. ಅಸಲಿಗೆ ಈ ಚಾರಣ ಸುಲಭದ್ದು. ಆದರೆ ಅಂದು ಬಿಸಿಲು ನಮ್ಮನ್ನು ಹೈರಾಣಾಗಿಸಿತು. ಚಾರಣದುದ್ದಕ್ಕೂ ಎಲ್ಲಿಯೂ ನೀರು ಸಿಗದಿರುವುದರಿಂದ, ಕೊನೆಕೊನೆಗೆ ಅಲ್ಲಿ ನೀರಿಗೆ ಹಾಹಾಕಾರ.



ಚಾರಣದ ಒಂದು ಭಾಗದಲ್ಲಿ ಎರಡು ದಾರಿಗಳಿವೆ. ಸುತ್ತುಬಳಸಿ ತೆರಳಿದರೆ ದಾರಿ ’ಯು’ ಆಕಾರದಲ್ಲಿ ತಿರುಗಿ ಬೆಟ್ಟದ ಮೇಲೆ ಬರುವುದು. ಇಲ್ಲವಾದಲ್ಲಿ ನೇರವಾಗಿ ಮೇಲೆ ಹತ್ತಿ ಆ ಸುತ್ತಿ ಬಳಸಿ ಬರುವ ದಾರಿಯನ್ನು ಸೇರಿಕೊಳ್ಳಬಹುದು. ಏಳು ವರ್ಷಗಳ ಹಿಂದೆ ಈ ಶಾರ್ಟ್‍ಕಟ್ ಮೂಲಕ ತೆರಳಿದ್ದೆ. ಇಂದು ಒಂದಿಬ್ಬರು ತರುಣರನ್ನು ಹೊರತುಪಡಿಸಿ ಉಳಿದೆಲ್ಲರೂ ಸುತ್ತಿಬಳಸಿ ಬರುವ ದಾರಿ ಮೂಲಕವೇ ತೆರಳಿದ್ದರೂ, ನಾನು ಹುಂಬತನದಿಂದ ಆ ಶಾರ್ಟ್‍ಕಟ್ ಮೂಲಕ ನೇರವಾಗಿ ಮೇಲೇರತೊಡಗಿದೆ. ಚಾರಣದಲ್ಲಿ ನಾನೇ ಹಿಂದೆ ಇದ್ದಿದ್ದು ಕೂಡಾ ನನ್ನನ್ನು ಈ ನಿರ್ಧಾರ ಕೈಗೊಳ್ಳುವಂತೆ ಮಾಡಿತು.



ಅರ್ಧ ದಾರಿ ಏರುವಷ್ಟರಲ್ಲಿ ಯಾಕಾದರೂ ಈ ದಾರಿಯಾಗಿ ಬಂದೆನೋ ಎಂದು ಪರಿತಪಿಸತೊಡಗಿದೆ. ಹಿಂದಿರುಗಿ ನೋಡಿದರೆ ನಾನು ಸುಮಾರಾಗಿ ಮೇಲೆ ಬಂದಾಗಿತ್ತು. ಮತ್ತೆ ಕೆಳಗಿಳಿದು, ಮತ್ತೊಂದು ದಾರಿಯಲ್ಲಿ ಬರುವಷ್ಟರಲ್ಲಿ ತುಂಬಾನೇ ತಡವಾಗುವುದು ಎಂದರಿತು ಬೇರೆ ದಾರಿಯಿಲ್ಲದೆ ಮುನ್ನಡೆದೆ. ಮೇಲೇರಿದಂತೆ ದಾರಿ ಇನ್ನಷ್ಟು ಕಠಿಣ ಮತ್ತು ನೇರ. ಎರಡು ಕಡೆ, ಆ ಪೊದೆಗಳ ನಡುವೆ ಎಲ್ಲಿ ಕಾಲಿಡುವುದೆಂದು ಕಾಣದೆ ಎಡವಿಬಿದ್ದೆ.



ಸುಮಾರು ಮುಕ್ಕಾಲು ಭಾಗ ಮೇಲೇರಿದಾಗ, ಮತ್ತೊಂದು ದಾರಿಯಿಂದ ಬರುತ್ತಿದ್ದ ನನ್ನ ಸಹಚಾರಣಿಗರು ಕಾಣಸಿಕ್ಕರು. ಆಹಾ..... ನನಗಿಂತ ಎಷ್ಟೋ ಮುಂದಿದ್ದ ಇವರನ್ನು ನಾನು ಈಗ ಸೇರಿಕೊಂಡೆ ಎಂಬ ಉತ್ಸಾಹ, ಸಂತೋಷದಿಂದ ಮತ್ತೆ ಮೇಲೇರಲು ಆರಂಭಿಸಿದೆ. ಆದರೆ ದಾರಿ ಇನ್ನಷ್ಟು ಕಠಿಣವಾಗತೊಡಗಿತು. ಕೊನೆಗೆ ಒದ್ದಾಡಿ, ಗುದ್ದಾಡಿ, ತಡಬಡಿಸಿ, ಮತ್ತೊಂದೆರಡು ಸಲ ಜಾರಿಬಿದ್ದು, ಉಳಿದವರನ್ನು ಸೇರಿಕೊಂಡೆ.



ಏರಿಕಲ್ಲು ಇನ್ನೂ ದೂರವಿತ್ತು. ಆದರೆ ಅಷ್ಟರಲ್ಲಿ ನನ್ನ ದೇಹ ವಿಶ್ರಾಂತಿಗೆ ಬೊಬ್ಬಿಡಲಾರಂಭಿಸಿತ್ತು. ಸುಮಾರು ಹೊತ್ತು ಆ ಬಿಸಿಲಿನಲ್ಲಿಯೇ ವಿಶ್ರಮಿಸಿದೆ. ಆ ಶಾರ್ಟ್‍ಕಟ್ ನನ್ನ ಬೆವರಿಳಿಸಿತ್ತು.




ಅಲ್ಲಿಂದ ಮುಂದೆ ನಿಧಾನವಾಗಿ ನಡೆದು ಇನ್ನೊಂದು ೨೦ ನಿಮಿಷದಲ್ಲಿ ಏರಿಕಲ್ಲಿನ ಬುಡವನ್ನು ತಲುಪಿದೆ. ನಾನೇ ಕೊನೆಯವನೆಂದು ಮತ್ತೆ ಬೇರೆ ಹೇಳಬೇಕೆ? ಇಲ್ಲಿ ಮತ್ತೆ ವಿಶ್ರಾಂತಿ. ಸುತ್ತಲಿನ ಬೆಟ್ಟ ಗುಡ್ಡಗಳ ದೃಶ್ಯದ ಅವಲೋಕನ. ಹರಟೆ. ಕೊರೆತ. ಉದರ ಪೋಷಣೆ. ಜಿಹ್ವಾ ಚಪಲ ಪೂರೈಕೆ. ಇತ್ಯಾದಿ.



ಈ ಚಾರಣ ಸುಲಭದ್ದು ಎಂದು ಹೊರಟ ನಮಗೆ ಪ್ರಕೃತಿ ಅಂದು ತಕ್ಕ ಪಾಠ ಕಲಿಸಿತ್ತು. ಸೂರ್ಯದೇವನ ಪ್ಲ್ಯಾನ್ ಬೇರೆನೇ ಇತ್ತು. ಆತ ನಮ್ಮನ್ನು ಸಿಕ್ಕಾಪಟ್ಟೆ ಕಾಡಿದ. ತನ್ನನ್ನು ಗಣನೆಗೆ ತಗೆದುಕೊಳ್ಳದೇ ಚಾರಣ ಆರಂಭಿಸಿದ ನಮ್ಮನ್ನು ತರಾಟೆಗೆ ತೆಗೆದುಕೊಂಡ, ಚಾರಣದ ಹೊಸ ಅನುಭವವನ್ನು ನೀಡಿದ ಮತ್ತು ಸ್ವಲ್ಪ ಜೋರಾಗಿಯೇ ಎಚ್ಚರಿಕೆಯನ್ನೂ ನೀಡಿದ.

ಭಾನುವಾರ, ಜನವರಿ 24, 2016

ಚಿಕ್ಕೇಶ್ವರ ದೇವಾಲಯ - ಚಿನ್ನ ಮುಳಗುಂದ

 

ಚಿನ್ನ ಮುಳಗುಂದದ ಶಾಲೆಯ ಬಳಿ ನಿಂತು ನೋಡಿದರೆ ಗದ್ದೆಗಳ ಅಂಚಿನಲ್ಲಿ ಅಸ್ಪಷ್ಟವಾಗಿ ದೇವಾಲಯದ ಒಂದು ಭಾಗ ಮಾತ್ರ ಕಾಣುತ್ತದೆ. ಗಿಡಗಳು, ಪೊದೆಗಳು ದೇವಾಲಯವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಮೊದಲ ನೋಟಕ್ಕೆ ದೇವಾಲಯದ ಇರುವಿಕೆಯ ಬಗ್ಗೆಯೇ ಅನುಮಾನ ಹುಟ್ಟುತ್ತದೆ.



ಶಾಲೆಯನ್ನು ದಾಟಿ ಗದ್ದೆಗಳ ಅಂಚಿನಲ್ಲಿ ನಡೆಯುತ್ತಾ ದೇವಾಲಯವನ್ನು ಸಮೀಪಿಸಿದರೆ ಇದೊಂದು ಪಾಳುಬಿದ್ದ ದೇವಾಲಯವೆಂಬ ಭಾವನೆ ಮೂಡತೊಡಗಿತು. ದೇವಾಲಯದ ಗೋಪುರವನ್ನು ಮರವೊಂದು ಸಂಪೂರ್ಣವಾಗಿ ಮರೆಮಾಚಿದೆ. ಇಕ್ಕೆಲಗಳಲ್ಲಿ ದೇವಾಲಯದ ಛಾವಣಿಯಷ್ಟು ಎತ್ತರದವರೆಗೂ ಗಿಡಗಳು ಬೆಳೆದಿವೆ.


ದೇವಾಲಯದ ಒಂದು ಪಾರ್ಶ್ವದಲ್ಲಿ ಗದ್ದೆಗಳಿದ್ದರೆ ಇನ್ನೊಂದು ಪಾರ್ಶ್ವದಲ್ಲಿ ಪೊದೆಗಳ ರಾಶಿ. ಪಾರ್ಶ್ವನೋಟದ ಚಿತ್ರ ತೆಗೆಯಲು ಈ ಪೊದೆಗಳ ನಡುವೆ ದಾರಿಮಾಡುತ್ತಾ ಸಾಗಬೇಕಾದರೆ ಸ್ವಲ್ಪ ಎಚ್ಚರ ವಹಿಸಬೇಕು. ದೇವಾಲಯದ ಈ ಪಾರ್ಶ್ವ ಬಹಿರ್ದೆಸೆ ಮಾಡುವ ತಾಣ!



೧೩ನೇ ಶತಮಾನದಲ್ಲಿ ನಿರ್ಮಿತ ಈ ದೇವಾಲಯವನ್ನು ಶಾಸನಗಳಲ್ಲಿ ’ಚಿಕ್ಕನಾಥ’ ದೇವಾಲಯವೆಂದು ಮತ್ತು ಚಿನ್ನ ಮುಳಗುಂದವನ್ನು ’ಮುನಿಗುಂದ’ವೆಂದೂ ಕರೆಯಲಾಗಿದೆ. ಈ ಏಕಕೂಟ ದೇವಾಲಯ ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನೊಳಗೊಂಡಿದೆ. ಗರ್ಭಗುಡಿಯ ಹೊರಗೋಡೆ ಮಾತ್ರ ಗಿಡಗಂಟಿಗಳಿಂದ ಮುಕ್ತವಾಗಿದೆ.



ಪಾಳು ಬಿದ್ದ ದೇವಾಲಯವೆಂದು ಒಳಗೆ ಕಾಲಿರಿಸಿದರೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಒಳಗಿನ ನೋಟ ಹೊರಗಿನ ನೋಟಕ್ಕೆ ತದ್ವಿರುದ್ಧ. ದಿನಾಲೂ ಚಿಕ್ಕೇಶ್ವರನಿಗೆ ಪೂಜೆ ಸಲ್ಲಿಸಲಾಗುತ್ತದೆ. ನವರಂಗ, ಅಂತರಾಳ ಮತ್ತು ಗರ್ಭಗುಡಿಗಳು ಬಹಳ ಸ್ವಚ್ಛವಾಗಿವೆ.



ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ಕಾಣುವುದು ನಾಲ್ಕೇ ಕಂಬಗಳಾದರೂ, ಇದು ೧೬ ಕಂಬಗಳನ್ನು ಬಳಸಿ ನಿರ್ಮಿಸಲಾಗಿರುವ ನವರಂಗ. ಇಷ್ಟು ಸಣ್ಣ ದೇವಾಲಯಕ್ಕೆ ವಿಶಾಲ ನವರಂಗ ಎನ್ನಬಹುದು.



ತ್ರಿಶಾಖ ಶೈಲಿಯ ಅಂತರಾಳದ ದ್ವಾರ ಜಾಲಂಧ್ರಗಳನ್ನು ಹೊಂದಿದೆ. ಅಂತರಾಳದಲ್ಲೇ ನಂದಿಯ ಸಣ್ಣ ವಿಗ್ರಹವಿದೆ. ದ್ವಾರದ ಇಕ್ಕೆಲಗಳಲ್ಲಿರುವ ಎರಡೂ ದೇವಕೋಷ್ಠಗಳು ಖಾಲಿ ಇವೆ.


ಗರ್ಭಗುಡಿಯಲ್ಲಿ ಚಾಲುಕ್ಯ ಶೈಲಿಯ ಪೀಠದ ಮೇಲೆ ಸುಮಾರು ಒಂದು ಅಡಿ ಎತ್ತರದ ಶಿವಲಿಂಗವಿದೆ. ಗರ್ಭಗುಡಿಯ ದ್ವಾರ ಅಲಂಕಾರರಹಿತವಾಗಿದೆ. ಲಲಾಟದಲ್ಲಿ ಇದ್ದ ಕೆತ್ತನೆ (ಗಜಲಕ್ಷ್ಮೀಯದ್ದಾಗಿರಬಹುದು) ನಶಿಸಿದೆ. ದ್ವಾರದ ತಳಭಾಗದಲ್ಲಿರುವ ಮೂರ್ತಿಗಳೂ ಅಸ್ಪಷ್ಟವಾಗಿದ್ದು ನಶಿಸಿಹೋಗಿವೆ.



ದೇವಾಲಯದ ಹೊರಗೋಡೆಯಲ್ಲಿ ೩ ದೇವಕೋಷ್ಠಗಳಿದ್ದು ಅವೂ ಖಾಲಿ ಇವೆ. ಈ ದೇವಕೋಷ್ಠಗಳ ಮೇಲೆ ಸಣ್ಣ ಶಿಖರಗಳ ರಚನೆಯಿದೆ. ದೇವಾಲಯದ ಗೋಪುರದ ಮೇಲೆ ಬೆಳೆದಿರುವ ಮರ ಗೋಪುರವನ್ನೇ ಬಲಿ ತೆಗೆದುಕೊಂಡಿದೆ. ಮರವನ್ನು ಪೂರ್ಣವಾಗಿ ಕಡಿದುಹಾಕಿ, ಗೋಪುರವನ್ನು ಸಂಪೂರ್ಣವಾಗಿ ಕಳಚಿ ಪುನ: ನಿರ್ಮಿಸುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲ.



ಆದರೂ ಗಿಡಮರಗಳು ಈ ಪರಿ ದೇವಾಲಯವನ್ನು ಆವರಿಸಿಕೊಳ್ಳುತ್ತಿರಬೇಕಾದರೆ ಹಳ್ಳಿಗರು ಕಡ್ಲೆಕಾಯಿ ತಿನ್ನುತ್ತಿದ್ದರೇ? ಪೂಜೆ ಸಲ್ಲಿಸುವ ಭಕ್ತಿ ಇರುವಾಗ ದೇವಾಲಯವನ್ನು ಸ್ವಚ್ಛಗೊಳಿಸಲು ಯಾಕೆ ಅಸಡ್ಡೆ? ಈಗ ಪರಿಸ್ಥಿತಿ ಕೈಮೀರಿದೆ. ದೇವಾಲಯದ ಮೇಲ್ಭಾಗವನ್ನು ಸಂಪೂರ್ಣವಾಗಿ ಬಿಚ್ಚಿ ಮತ್ತೆ ನಿರ್ಮಿಸುವುದೇ ಉಳಿದಿರುವ ದಾರಿ. ಪ್ರಾಚ್ಯ ವಸ್ತು ಇಲಾಖೆ ದೇವಾಲಯದ ಜೀರ್ಣೋದ್ಧಾರಕ್ಕೆ ತಯಾರಾಗಿದೆ. ಆದರೆ ಹಳ್ಳಿಗರು ದೇವಾಲಯವನ್ನು ಬಿಚ್ಚಲು ಬಿಡರು. ಆದ್ದರಿಂದ ಚಿಕ್ಕೇಶ್ವರ ಇನ್ನೂ ಗಿಡಮರಪೊದೆಗಳಿಂದ ಆವೃತನಾಗಿಯೇ ಇದ್ದಾನೆ.