ಬುಧವಾರ, ಅಕ್ಟೋಬರ್ 01, 2008

ಮಲೆನಾಡಿನ ಜಲಧಾರೆ


ದಿನಾಂಕ: ಅಗೋಸ್ಟ್ ೨೦, ೨೦೦೮.

ಕೆಲಸದ ನಿಮಿತ್ತ ಮಲೆನಾಡಿಗೆ ಹೋಗಬೇಕಿತ್ತು. ಕೆಲಸವೇನೋ ಅರ್ಧ ದಿನದ್ದು. ಉಳಿದರ್ಧ ದಿನ ಎಲ್ಲಾದರೂ ಸಣ್ಣ ಮಟ್ಟದ ಚಾರಣ ಅಥವಾ ಪ್ರಯಾಣ ಮಾಡಿ ಬರೋಣವೆಂದು ಲೇಖನಗಳ ಸಂಗ್ರಹವನ್ನು ಜಾಲಾಡಿದಾಗ ಕಣ್ಣಿಗೆ ಬಿದ್ದದ್ದು ಈ ಜಲಧಾರೆ. ಜಲಧಾರೆಗೆ ಭೇಟಿ ನಾನು ಮೊದಲೇ ನಿಗದಿ ಮಾಡಿದ್ದರಿಂದ ಉಡುಪಿಯಿಂದ ಗೆಳೆಯ ಮಾಧವರನ್ನು ಕರೆದುಕೊಂಡೇ ಹೋಗಿದ್ದೆ.


ಹಳ್ಳಿ ತಲುಪಿ ಜಲಧಾರೆಗೆ ಕೇವಲ ಇಪ್ಪತ್ತು ನಿಮಿಷದ ನಡಿಗೆ. ಎಲ್ಲೋ ಕಾಡಿನೊಳಗಿನಿಂದ ಹರಿದು ಬರುತ್ತಿದ್ದ ಹಳ್ಳ ಮೈದುಂಬಿ ಹರಿಯುತ್ತಿತ್ತು. ನೀರಿನ ಹರಿವು ತುಂಬಾ ಇದ್ದಿದ್ದರಿಂದ ಜಲಧಾರೆಯ ಎತ್ತರ ಕಡಿಮೆ ಆದಂತೆ ತೋರುತ್ತಿತ್ತು. ನೀರು ಹರಿಯುವಲ್ಲೇ ಬದಿಯಲ್ಲಿ ಕಲ್ಲಿನ ಮೇಲ್ಮೈ ಮೇಲೆ ಸಾವಕಾಶವಾಗಿ ಎಚ್ಚರಿಕೆಯಿಂದ ಇಳಿದರೆ ಕೆಳಗೆ ತಲುಪಬಹುದು.


ಮಳೆಯೂ ಆಗಾಗ ಬಿರುಸಾಗಿ ಬೀಳುತ್ತಿತ್ತು. ಎರಡು ಹಂತಗಳ ಈ ಜಲಧಾರೆ ಸುಮಾರು ೩೫ ಅಡಿ ಎತ್ತರವಿರಬಹುದು. ಬಹಳ ಮೌನ ವಾತಾವರಣವಿತ್ತು. ಮಳೆಯ ಸದ್ದು ಮತ್ತು ರಭಸದಿಂದ ಹರಿಯುವ ನದಿಯ ಭೋರ್ಗರೆತ ಮಾತ್ರ.


ಮಾಧವರಿಗೆ ನೀರು ಕೆಸರಿನಿಂದ ಕೆಂಪಾಗಿ ಹರಿಯುತ್ತಿದ್ದನ್ನು ಕಂಡು ನಿರಾಸೆ. ಆದರೆ ಜಲಧಾರೆ ಕೆಂಪಗೆ ಕಾಣಿಸಿದಾಗಲೇ ಅದೊಂದು ರೀತಿಯ ಚಂದ. ಮಳೆಯ ನಡುವೆ ಕೊಡೆಯ ಆಸರೆಯಲ್ಲಿ ನಿಂತು ಜಲಧಾರೆಯ ಅಂದವನ್ನು ಆ ಮೌನ ಕಣಿವೆಯಲ್ಲಿ ಸುಮಾರು ಹೊತ್ತು ಆನಂದಿಸಿ ನಂತರ ವಾಹನ ನಿಂತಲ್ಲಿಗೆ ಹಿಂತಿರುಗಿದೆವು.

ಶುಕ್ರವಾರ, ಸೆಪ್ಟೆಂಬರ್ 26, 2008

ನಗರೇಶ್ವರ ದೇವಸ್ಥಾನ - ಬಂಕಾಪುರ


೨೧-೦೬-೨೦೦೮

ನಗರೇಶ್ವರ ದೇವಸ್ಥಾನ ತಲುಪಿದಾಗ ನನಗೆ ಕಂಡದ್ದು ಒಂದು ಭವ್ಯ ದೇವಸ್ಥಾನದ ಮುಖಮಂಟಪದಲ್ಲಿ ಕೂತು ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮತ್ತು ಜತನದಿಂದ ದೇವಾಲಯವನ್ನು ಕಾಯುವ ಕಾಯಕದಡಿ ಸುತ್ತಲೂ ಗುಡಿಸುತ್ತಿದ್ದ ಪುರಾತತ್ವ ಇಲಾಖೆಯ ಉದ್ಯೋಗಿ ಗುರುರಾಜ. ಆ ವಿದ್ಯಾರ್ಥಿಯೇನೋ ನನ್ನನ್ನು ನೋಡಿದ ಆದರೆ ಗುರುರಾಜ ತನ್ನ ಕೆಲಸದಲ್ಲಿ ಅದೆಷ್ಟು ಮಗ್ನರಾಗಿದ್ದರೆಂದರೆ ನಾನು ದೇವಾಲಯದ ಒಂದು ಸುತ್ತು ಹಾಕಿ ನಂತರ ದೇವಾಲಯವನ್ನು ಪ್ರವೇಶಿಸುವವರೆಗೂ ಅವರು ನನ್ನನ್ನು ಗಮನಿಸಿಯೇ ಇರಲಿಲ್ಲ.


ಅದೆಷ್ಟೋ ದಿನಗಳ ಬಳಿಕ ದೇವಾಲಯ ನೋಡಲು ಒಬ್ಬ ಪ್ರವಾಸಿಗ ಬಂದ ಎಂದು ನನ್ನನ್ನು ಕಂಡು ಗುರುರಾಜರಿಗೆ ಎಲ್ಲಿಲ್ಲದ ಸಂತೋಷ. ೧೧ನೇ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರ ಸಮಯದಲ್ಲಿ ಈ ದೇವಾಲಯದ ನಿರ್ಮಾಣವಾಗಿತ್ತೆಂಬ ವಿಷಯ ಬಿಟ್ಟರೆ ಇವರಿಗೆ ಈ ದೇವಾಲಯದ ಬಗ್ಗೆ ಬೇರೇನೂ ಗೊತ್ತಿಲ್ಲ.


ಭೂ ಮಟ್ಟದಿಂದ ಐದಾರು ಅಡಿ ಕೆಳಗಿರುವ ದೇವಾಲಯ ಶಾಂತ ಮತ್ತು ಸುಂದರ ಪರಿಸರದಲ್ಲಿದೆ. ಮುಖಮಂಟಪದಲ್ಲಿ ೬೬ ಸುಂದರ ಕಲಾತ್ಮಕ ಕಂಬಗಳಿರುವುದರಿಂದ ಇದನ್ನು ೬೬ ಕಂಬಗಳ ದೇವಾಲಯವೆಂದೂ ಕರೆಯುತ್ತಾರೆ. ವಿಶಾಲ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಈ ದೇವಾಲಯ ಹೊಂದಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿಲ್ಲ. ದೇವಾಲಯದಲ್ಲೆಲ್ಲೂ ನಂದಿಯೂ ಕಾಣಬರುವುದಿಲ್ಲ. ಛಾವಣಿಯಲ್ಲಿ ಎಲ್ಲೆಲ್ಲಿ ಜಾಗ ಲಭ್ಯವಿದೆಯೋ ಅಲ್ಲೆಲ್ಲಾ ಬೇರೆ ಬೇರೆ ಆಕಾರದಲ್ಲಿ ಸುಂದರವಾಗಿ ಕಮಲಗಳನ್ನು ಕೆತ್ತಲಾಗಿದೆ. ಮುಖಮಂಟಪದ ನಟ್ಟ ನಡುವೆ ಛಾವಣಿಯಲ್ಲಿ ಅತಿ ಸುಂದರ ಕಮಲವನ್ನು ಕೆತ್ತಲಾಗಿದೆ. ಗುರುರಾಜರ ಅನುಮತಿ ಪಡೆದು ಅಲ್ಲೇ ಅಂಗಾತ ಮಲಗಿ ಕಮಲದ ಈ ಅದ್ಭುತ ಕೆತ್ತನೆಯ ಸೌಂದರ್ಯವನ್ನು ಸವಿದೆ. ಮುಖಮಂಟಪಕ್ಕೆ ೩ ಕಡೆಗಳಿಂದ ದ್ವಾರವಿದೆ.


ಮುಖಮಂಟಪದ ಬಳಿಕ ಸಣ್ಣ ಸುಖನಾಸಿ. ಸುಖನಾಸಿಯಲ್ಲಿ ಅದ್ಭುತ ಮತ್ತು ಸೂಕ್ಷ್ಮ ಕೆತ್ತನೆ ಕೆಲಸವಿರುವ ೨ ಆಕರ್ಷಕ ಕಂಬಗಳಿವೆ. ಮುಖಮಂಟಪದ ೬೬ ಕಂಬಗಳೂ ಈ ೨ ಕಂಬಗಳಿಗೆ ಸಾಟಿಯಾಗಲಾರವು. ಸುಖನಾಸಿ ದಾಟಿದರೆ ೩ ದ್ವಾರಗಳುಳ್ಳ ನವರಂಗ. ನವರಂಗದ ಪ್ರಮುಖ ಬಾಗಿಲು ೫ ತೋಳಿನದ್ದಾಗಿದ್ದು, ಎಲ್ಲಾ ತೋಳುಗಳಲ್ಲೂ ಸುಂದರ ಕೆತ್ತನೆಯಿದೆ. ಮೇಲ್ಗಡೆಯಿದ್ದ ಗಜಲಕ್ಷ್ಮೀಯ ಕೆತ್ತನೆ ನಶಿಸಿಹೋಗಿದೆ. ಇಕ್ಕೆಲಗಳಲ್ಲಿದ್ದ ಸುಂದರ ಜಾಲಂಧ್ರಗಳೂ ಬಿದ್ದುಹೋಗಿವೆ. ದೇವಾಲಯದ ಬಲಭಾಗದಿಂದ ನವರಂಗಕ್ಕಿದ್ದ ದ್ವಾರ ಸಂಪೂರ್ಣವಾಗಿ ಬಿದ್ದುಹೋಗಿದ್ದು, ಪುರಾತತ್ವ ಇಲಾಖೆ ಅಲ್ಲಿ ತೇಪೆ ಸಾರಿಸಿ ಆ ದ್ವಾರವನ್ನು ಮುಚ್ಚಿಬಿಟ್ಟಿದೆ. ಆದರೆ ದೇವಾಲಯದ ಎಡಭಾಗದಿಂದ ನವರಂಗಕ್ಕಿದ್ದ ದ್ವಾರ ಇನ್ನೂ ಗಟ್ಟಿಮುಟ್ಟಾಗಿ ಸುಂದರವಾಗಿದ್ದು ಸಣ್ಣ ಮುಖಮಂಟಪವನ್ನು ಹೊಂದಿದೆ. ಇದೂ ೫ ತೋಳಿನದ್ದಾಗಿದ್ದು, ಎಲ್ಲಾ ತೋಳುಗಳಲ್ಲೂ ಸುಂದರ ಕೆತ್ತನೆಯಿದೆ ಮತ್ತು ಮೇಲ್ಗಡೆ ಗಜಲಕ್ಷ್ಮೀಯ ಕೆತ್ತನೆಯಿದೆ. ಈ ದ್ವಾರದ ಮುಖಮಂಟಪದ ಸುತ್ತಲೂ ಅಪೂರ್ವ ಕೆತ್ತನೆಯಿದೆ.

ನವರಂಗದಲ್ಲಿ ೪ ಕಂಬಗಳಿವೆ. ಇಲ್ಲಿಯೂ ಛಾವಣಿಯಲ್ಲಿ ಕಮಲಗಳ ಹಾವಳಿ. ಅಂತರಾಳದ ದ್ವಾರ ಜಾಲಂಧ್ರಗಳನ್ನು ಹೊಂದಿದ್ದು, ಮೇಲೆ ಏನೋ ಕೆತ್ತನೆಗಳಿವೆ. ಈ ಜಾಲಂಧ್ರಗಳಿಗೆ ತಾಗಿಕೊಂಡೇ ಶಾಸನಗಳನ್ನು ಕೆತ್ತಲಾಗಿದೆ. ಅಂತರಾಳ ದಾಟಿದರೆ ಖಾಲಿ ಗರ್ಭಗುಡಿ.


ಬಂಕಾಪುರದಲ್ಲಿ ದೇವಾಲಯವಿದೆ ಎಂದು ತಿಳಿದಾಗ ಅದಿಷ್ಟು ಭವ್ಯವಾಗಿರಬಹುದೆಂಬ ಎಳ್ಳಷ್ಟೂ ಕಲ್ಪನೆಯಿರಲಿಲ್ಲ. ಇಲ್ಲಿಗೆ ಪ್ರವಾಸಿಗರು ಬರುವುದು ಬಹಳ ಕಡಿಮೆ. ಆದರೆ ಪಾನಮತ್ತರಾಗಿ ದಾಂಧಲೆಯಿಬ್ಬಿಸುವವರು, ಇಸ್ಪೀಟ್ ಆಡುವವರು, ಕೋಳಿ/ಮಾಂಸ/ಸಾರಾಯಿ ಇತ್ಯಾದಿಗಳನ್ನು ತಂದು ಪಾರ್ಟಿ ಮಾಡುವವರು ಇಲ್ಲಿಗೆ ಬರುತ್ತಲೇ ಇರುತ್ತಾರೆ ಮತ್ತು ತಾನು ಆಕ್ಷೇಪಿಸಿದರೆ, ’ನೀ ಯಾರ ಹೇಳೂವ....ಈ ಜಾಗ ನಿನ್ನಪ್ಪಂದೇನ...’ ಎಂದು ತನಗೇ ಗದರಿಸುತ್ತಾರೆ ಎಂದು ಗುರುರಾಜ ತನ್ನ ಅಳಲು ತೋಡಿಕೊಂಡರು. ’ಆದರೂ ಅಂಥವರೆಲ್ಲಾ ಬಂದಾಗ, ತಾನು ಆಕ್ಷೇಪಿಸಿದಾಗ ಅವರಿಂದ ಏನು ಉತ್ತರ ಬರುತ್ತದೆಂದು ಗೊತ್ತಿದ್ದೂ, ಆಕ್ಷೇಪಿಸುವುದನ್ನು ನಿಲ್ಲಿಸಿಲ್ಲ....ನಿಲ್ಲಿಸುವುದೂ ಇಲ್ಲ’ ಎಂದು ಗುರುರಾಜ್ ಹೇಳಿದಾಗ ಮೆಚ್ಚಿದೆ. ಸ್ವಲ್ಪವೇ ಹೊತ್ತಿನ ಬಳಿಕ ಇಂತಹ ಸನ್ನಿವೇಶಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂದು ಪ್ರತ್ಯಕ್ಷ ಕಂಡೆ.

ಅಲ್ಲಿಗೆ ಬಂದಿದ್ದ ೩ ಸಾಬಿ ಯುವಕರು ಮುಖಮಂಟಪದಲ್ಲಿ ಕೂತು ಬೀಡಿ ಸೇದುತ್ತಿದ್ದರು! ಉತ್ತರ, ಪ್ರತ್ಯುತ್ತರಗಳ ಬಳಿಕ ಗುರುರಾಜರ ಕೊನೆಯ ಮಾತಿಗೆ ಆ ಯುವಕರು ಬಾಲ ಮುದುಡಿದ ನಾಯಿಗಳಂತೆ ತೆಪ್ಪಗೆ ಅಲ್ಲಿಂದ ಹೊರಗೆ ಹೋಗಿ ಬೀಡಿ ಸೇದಲಾರಾಂಭಿಸಿದರು. ’ಎಲ್ಲಿಯ ಗುಡಿ..ದೇವ್ರೇ ಇಲ್ಲ..’ ಎಂಬ ಆ ಯುವಕರ ಮಾತಿಗೆ, ’ಮಸೀದಿಯಲ್ಲೂ ದೇವರ ಮೂರ್ತಿಯಿರೋಲ್ಲ, ಆದರೆ ಅಲ್ಲಿ ದೇವರಿಲ್ಲ ಅನ್ನೋದಿಕ್ಕೆ ಆಗುತ್ಯೇ? ..ಅಲ್ಲಿ ಹೇಗೆ ದೇವರಿದ್ದಾನೆ..ಹಾಗೇನೇ ಇಲ್ಲೂ ದೇವರಿದ್ದಾನೆ. ದೇವರಿರ್ಬೇಕಾದ್ರೆ ಮೂರ್ತಿ ಇರ್ಬೇಕು ಅಂತಾ ಇಲ್ಲ. ಮಸೀದಿಯಲ್ಲಿ ಬೀಡಿ ಸೇದೋ ಧೈರ್ಯ ಇದೆಯಾ ನಿಮ್ಗೆ..’ ಎಂಬ ಗುರುರಾಜರ ಮಾತಿಗೆ ಅವರಲ್ಲಿ ಉತ್ತರವಿರಲಿಲ್ಲ. ಆ ಸನ್ನಿವೇಶವನ್ನು ಗುರುರಾಜ್ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ನನಗಿತ್ತು. ಅವರು ನಿಭಾಯಿಸಿದ ರೀತಿಯನ್ನು ಬಹಳ ಮೆಚ್ಚಿ, ಅವರನ್ನು ಅಭಿನಂದಿಸಿ ಅಲ್ಲಿಂದ ಹೊರಟೆ.

ಭಾನುವಾರ, ಸೆಪ್ಟೆಂಬರ್ 21, 2008

ಚಾರ್ಮಾಡಿಯಲ್ಲೊಂದು ಜಲಪಾತ


ದಿನಾಂಕ: ೨೧ ಸೆಪ್ಟೆಂಬರ್ ೨೦೦೩.

ಮಲೆಕುಡಿಯರ ನಾಡು, ಚಾರ್ಮಾಡಿ-ಬಿಸಿಲೆ ಅರಣ್ಯಗಳಲ್ಲಿ ಅಲೆದಾಡುವ ಆನೆಗಳ ಬೀಡು, ಅಣಿಯೂರು ನದಿಯ ಮೂಲಸ್ಥಾನ - ದಟ್ಟ ಕಾಡಿನಲ್ಲಿ ಅಡಗಿ ಕುಳಿತಿರುವ ಮಲೆಕುಡಿಯರೇ ವಾಸವಾಗಿರುವ ಈ ಪುಟ್ಟ ಹಳ್ಳಿ. ಇಲ್ಲಿಗೆ ಚಾರಣಗೈಯುವುದೇ ಒಂದು ವಿಶಿಷ್ಟ ಅನುಭವ.

ಈ ಜಲಧಾರೆಯನ್ನು ನೋಡಲು ಖಾಸಗಿ ಸಂಸ್ಥೆಯೊಂದರ ಎಸ್ಟೇಟ್ ಮೂಲಕ ಹಾದುಹೋಗಬೇಕಾಗಿರುವುದರಿಂದ ಮುಂಚಿತವಾಗಿ ಆ ಎಸ್ಟೇಟ್ ಧಣಿಗಳಿಂದ ಅನುಮತಿ ಅಗತ್ಯ. ಕಾಡಿನ ನಡುವೆ ಧುತ್ತೆಂದು ಎದುರಾಗುವ ಈ ಎಸ್ಟೇಟ್ ಮಾಲೀಕರು ಪ್ರಖ್ಯಾತ ಕಾಡುಕಳ್ಳರು. ಈ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಕಾಡು ಕಡಿದು ನಾಶ ಮಾಡಿರುವ ಕುಖ್ಯಾತಿ ಇವರದ್ದು.


ಮುಖ್ಯ ರಸ್ತೆಯಿಂದ ಸುಮಾರು ೧೫೦ ನಿಮಿಷಗಳ ಚಾರಣ. ಎಸ್ಟೇಟ್ ಬಿಟ್ಟರೆ ಚಾರಣದ ಉಳಿದ ಹಾದಿ ಸುಂದರ ಕಾಡಿನ ನಡುವೆ ಆನೆಗಳ ಲದ್ದಿಗಳ ದರ್ಶನ ನೀಡುತ್ತಾ ಮಲೆಕುಡಿಯರ ಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ. ಹಳ್ಳಿಯಿಂದ ತುಸು ಮುಂದೆ ಸಾಗಿ ಕಣಿವೆಯನ್ನು ಸ್ವಲ್ಪ ಕಷ್ಟಪಟ್ಟು ಇಳಿದರೆ ಈ ಸುಂದರ ಜಲಧಾರೆ. ಒಂದೇ ನೆಗೆತಕ್ಕೆ ಸುಮಾರು ೧೦೦ ಅಡಿ ಆಳಕ್ಕೆ ಧುಮುಕುವ ಅಂದದ ಜಲಧಾರೆ ಇದು.


ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಚಾರಣ ತಾಣಗಳ ಬಗ್ಗೆ ಬರೆಯುತ್ತಿದ್ದ ದಿನೇಶ್ ಹೊಳ್ಳರನ್ನು ಮೊದಲ ಬಾರಿ ಭೇಟಿಯಾದಾಗ, ೨ ದಿನಗಳ ಬಳಿಕ ಈ ಜಲಧಾರೆಗೆ ಚಾರಣವಿರುವುದೆಂದು ತಿಳಿಸಿದ್ದರು. ಮಂಗಳೂರು ಯೂತ್ ಹಾಸ್ಟೆಲ್-ನೊಂದಿಗೆ ಇದು ನನ್ನ ಮೊದಲ ಚಾರಣ.