ಸೋಮವಾರ, ಫೆಬ್ರವರಿ 18, 2008

ಅಮೃತೇಶ್ವರ ದೇವಾಲಯ - ಅಣ್ಣಿಗೇರಿ


ಇಸವಿ ೯೦೨ ರಲ್ಲಿ ಆದಿ ಕವಿ ಪಂಪ ಹುಟ್ಟಿದ ಸ್ಥಳವೇ ಈ ಅಣ್ಣಿಗೇರಿ. ಕಳಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಪಶ್ಚಿಮ ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಬೆಳವಲನಾಡಿನ ಕೇಂದ್ರ ಕೂಡಾ ಅಣ್ಣಿಗೇರಿಯಾಗಿತ್ತು. ಪ್ರಾಚೀನ ಶಾಸನಗಳಲ್ಲಿ ದಕ್ಷಿಣದ ವಾರಣಾಸಿ ಎಂದೇ ಈ ಊರನ್ನು ಉಲ್ಲೇಖಿಸಲಾಗಿದೆ. ಇಲ್ಲಿ ೨೫ ಶಿಲಾಶಾಸನಗಳು ದೊರಕಿವೆ. ಇವುಗಳಲ್ಲಿ ಇಸವಿ ೭೫೦ರ ದಿನಾಂಕ ಇರುವ ಬದಾಮಿ ಚಾಲುಕ್ಯ ದೊರೆ ಎರಡನೇ ಕೀರ್ತಿವರ್ಮನ ಆಳ್ವಿಕೆಯ ಸಮಯದ ಶಾಸನವೇ ಹಳೆದು. ಶಾಸನಗಳಲ್ಲಿ ಈ ಊರನ್ನು ’ಅನ್ಯತತಾಕ’ ಎಂದೂ ಕರೆಯಲಾಗಿದೆ.


ಅಣ್ಣಿಗೇರಿಯೊಳಗೆ ತಿರುವು ಪಡೆದು ಕಿರಿದಾದ ಅಂಕುಡೊಂಕಾಗಿರುವ ರಸ್ತೆಯಲ್ಲಿ ಊರೊಳಗೆ ತೆರಳಿದರೆ ಭವ್ಯ ಅಮೃತೇಶ್ವರ ದೇವಾಲಯ ಕಾಣಬರುವುದು. ಪೂರ್ವಾಭಿಮುಖವಾಗಿರುವ ಈ ದೇವಾಲಯ ಪಶ್ಚಿಮ ಚಾಲುಕ್ಯ ದೊರೆ ಒಂದನೇ ಸೋಮೇಶ್ವರನ ಆಳ್ವಿಕೆಯ ಸಮಯದಲ್ಲಿ ಇಸವಿ ೧೦೫೦ರಲ್ಲಿ ನಿರ್ಮಾಣಗೊಂಡಿತು. ದೇವಾಲಯವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಣೆ ಮಾಡಲಾಗಿರುವುದರಿಂದ ಅಣ್ಣಿಗೇರಿ ಬೆಳೆದರೂ ದೇವಾಲಯದ ಪ್ರಾಂಗಣ ಒತ್ತುವರಿಯಿಂದ ಮುಕ್ತವಾಗಿದೆ.


ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿರುವ ಈ ದೇವಾಲಯದ ಛಾವಣಿ ೭೬ ಕಂಬಗಳ ಅಧಾರದಲ್ಲಿ ನಿಂತಿದೆ. ದೇವಾಲಯದ ಪ್ರಾಂಗಣದೊಳಗೆ ಪ್ರವೇಶಿಸಲು ಅಕ್ಕ ಪಕ್ಕದಲ್ಲೇ ೨ ದ್ವಾರಗಳಿವೆ. ಒಂದು ದ್ವಾರದ ಪ್ರವೇಶದಲ್ಲಿರುವ ಜಗಲಿಯಲ್ಲಿ ೨ ಕಲ್ಲಿನ ಕಂಬಗಳನ್ನಿರಿಸಲಾಗಿರುವುದರಿಂದ ಬಗ್ಗಿಕೊಂಡೇ ಒಳಗೆ ಪ್ರವೇಶಿಸಬೇಕು.


ಪಶ್ಚಿಮ ಚಾಲುಕ್ಯರ ವಾಸ್ತುಶೈಲಿಯನ್ನು ಹೊಂದಿರುವ ಈ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ, ವಿಶಾಲ ಸಭಾಮಂಟಪ ಮತ್ತು ಮುಖಮಂಟಪಗಳನ್ನು ಹೊಂದಿದೆ. ಇಲ್ಲಿರುವ ಒಂದು ವೈಶಿಷ್ಟ್ಯವೆಂದರೆ ಏಕಕೂಟ ದೇವಾಲಯವಾದರೂ ಎರಡು ಶಿಖರಗಳ ಉಪಸ್ಥಿತಿ. ಗರ್ಭಗುಡಿಯ ಗೋಪುರ, ಮುಖಮಂಟಪದ ಗೋಪುರಕ್ಕಿಂತ ಎತ್ತರವಿದ್ದು ಆಕರ್ಷಕ ಶಿಲ್ಪಕಲೆಯನ್ನು ಹೊಂದಿದೆ.


ಅಲ್ಲಿದ್ದ ಪ್ರಾಚ್ಯ ವಸ್ತು ಇಲಾಖೆ ಸಿಬ್ಬಂದಿ ನನಗೆ ದೇವಾಲಯದ ಒಳಗಡೆ ಚಿತ್ರಗಳನ್ನು ತೆಗೆಯಲು ಅನುಮತಿ ನೀಡಲಿಲ್ಲ. ಆತ ಅಲ್ಲಿರದಿರುವಾಗ ಚಿತ್ರಗಳನ್ನು ತೆಗೆಯಲಾಗುತ್ತದೆ. ಗರ್ಭಗುಡಿಯಲ್ಲಿ ಸ್ವಯಂಭೂ ಶಿವಲಿಂಗವಿದೆ ಮತ್ತು ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕಾಣಬಹುದು. ಅಂತರಾಳದ ದ್ವಾರವು ಪಂಚಶಾಖೆಗಳಿಂದ ಅಲಂಕೃತಗೊಂಡಿದ್ದು ಜಾಲಂಧ್ರಗಳನ್ನು ಮತ್ತು ಗಜಲಕ್ಷ್ಮೀಯನ್ನು ಹೊಂದಿದೆ. ನವಶಾಖೆಗಳಿರುವ ನವರಂಗದ ದ್ವಾರ (ದೇವಾಲಯದ ಮುಖ್ಯ ದ್ವಾರ) ಈ ದೇವಾಲಯದ ಪ್ರಮುಖ ಆಕರ್ಷಣೆ. ಪ್ರತಿ ಶಾಖೆಯಲ್ಲೂ ಅದ್ಭುತ ಕೆತ್ತನೆಗಳನ್ನು ಹೊಂದಿರುವ ಈ ದ್ವಾರ ಆಸಕ್ತರ ಮನಸೂರೆಗೊಳ್ಳುವುದರಲ್ಲಿ ಸಂಶಯವೇ ಇಲ್ಲ.


ಆರು ಕಂಬಗಳ ಸುಂದರ ಮುಖಮಂಟಪವನ್ನು ದಾಟಿ ಒಳಬಂದರೆ ನವರಂಗ. ನವರಂಗದ ಎಡಕ್ಕೆ ಅಂತರಾಳ ಮತ್ತು ಗರ್ಭಗುಡಿಗಳಿದ್ದರೆ ಬಲಕ್ಕಿರುವ ದ್ವಾರದ ಮೂಲಕ ಒಳಹೊಕ್ಕರೆ ವಿಶಾಲ ಸಭಾಮಂಟಪ. ಸಭಾಮಂಟಪವು ವಿಶಾಲವಾಗಿದ್ದರೂ ತುಂಬಾನೇ ಸರಳವಾಗಿದ್ದು ನಂದಿಯೂ ಇಲ್ಲೇ ಆಸೀನನಾಗಿದ್ದಾನೆ. ಮೂಲ ದೇವಾಲಯ ನಿರ್ಮಾಣಗೊಂಡ ನಂತರದ ವರ್ಷಗಳಲ್ಲಿ ನಿರ್ಮಾಣಗೊಂದಿರುವ ಸಭಾಮಂಟಪ, ನಾಲ್ಕು ದಿಕ್ಕೂಗಳಲ್ಲೂ ಸುಂದರ ದ್ವಾರಗಳನ್ನು ಹೊಂದಿದೆ.


ಗರ್ಭಗುಡಿಯ ಹೊರಗೋಡೆಯಲ್ಲಿ ಮಕರತೋರಣಗಳ ಮತ್ತು ಗೋಪುರಗಳ ಕೆತ್ತನೆಯಿದೆ. ಇರುವ ಮೂರು ದೇವಕೋಷ್ಠಗಳ ಒಳಗಿದ್ದ ಮೂರ್ತಿಗಳು ಕಣ್ಮರೆಯಾಗಿವೆ. ಈ ದೇವಕೋಷ್ಠಗಳಿಗೆ ಕೆತ್ತಲಾಗಿರುವ ಗೋಪುರಗಳು ಆಕರ್ಷಕವಾಗಿವೆ. ದೇವಾಲಯದ ಪ್ರಾಂಗಣದೊಳಗೆ ಗಣೇಶನ ದೇವಾಲಯವಿದೆ ಹಾಗೂ ಸಣ್ಣ ಪುಷ್ಕರಿಣಿಯಿದೆ.

ಮಾಹಿತಿ: ಮಹೇಶ ಮನಯ್ಯನವರಮಠ, ಎ.ಲೋಕೇಶಪ್ಪ ಹಾಗೂ ಪ್ರಾಚ್ಯ ವಸ್ತು ಇಲಾಖೆ.

ಬುಧವಾರ, ಫೆಬ್ರವರಿ 13, 2008

ಸೋಮೇಶ್ವರ ದೇವಾಲಯ - ಹರಳಹಳ್ಳಿ


ನಿರ್ಮಾತೃ: ಪಶ್ಚಿಮ ಚಾಳುಕ್ಯರು (ಕಲ್ಯಾಣಿ ಚಾಳುಕ್ಯರು) - ಪಶ್ಚಿಮ ಚಾಳುಕ್ಯ ವಂಶದ ಯಾವ ದೊರೆ ಹರಳಹಳ್ಳಿಯ ದೇವಾಲಯವನ್ನು ನಿರ್ಮಿಸಿದನು ಎಂಬ ಮಾಹಿತಿ ನನಗೆ ದೊರಕಲಿಲ್ಲ. ತಿಳಿದವರು ಈ ಮಾಹಿತಿ ನೀಡಿದರೆ ತುಂಬಾ ಉಪಕಾರವಾಗುವುದು.


ಇದು ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯ. ಸಿಕ್ಕಿರುವ ಶಾಸನಗಳಲ್ಲಿ ಹರಳಹಳ್ಳಿಯನ್ನು 'ವಿಕ್ರಮಪುರ' ಎಂದು ಉಲ್ಲೇಖಿಸಲಾಗಿದೆ. ತುಂಗಭದ್ರಾ ನದಿಯ ತಟದಲ್ಲಿರುವ ಈ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಸುತ್ತಲು ಚಪ್ಪಡಿ ಕಲ್ಲು ಹಾಸುವ ಕೆಲಸ ನಡೆಯುತ್ತಿದೆ. ನದಿಯಲ್ಲಿ ಆಗಾಗ ನೆರೆ ಬರುವುದರಿಂದ ಹರಳಹಳ್ಳಿಯ ಹಳ್ಳಿಗರಿಗೆ ಬೇರೆಡೆ ವಸತಿ ಸೌಕರ್ಯವನ್ನು ನೀಡಲಾಗಿದೆ. ಆದರೂ ಕೆಲವರು ಅಲ್ಲೇ ದೇವಸ್ಥಾನದ ಎದುರಿಗೇ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಸರಿಯಾದ ಸಮಯಕ್ಕೆ ಭಾರತೀಯ ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡಿದೆ. ಇನ್ನು ಸ್ವಲ್ಪ ತಡವಾಗಿದ್ದಲ್ಲಿ ಈ ಸುಂದರ ದೇವಾಲಯದ ಅತಿ ಸಮೀಪದವರೆಗೆ ಮನೆಗಳಾಗುತ್ತಿದ್ದವು.


ದೇವಾಲಯವು ೩ ಗರ್ಭಗುಡಿಗಳನ್ನು ಹೊಂದಿದ್ದು, ೩ ಗರ್ಭಗುಡಿಗಳಿಗೂ ಗೋಪುರಗಳಿವೆ ಮತ್ತು ಎಲ್ಲಾ ಗರ್ಭಗುಡಿಗಳಲ್ಲೂ ಶಿವಲಿಂಗವಿದೆ. ದೇವಸ್ಥಾನದ ನವರಂಗ ಸಣ್ಣದಾಗಿರುವುದರಿಂದ ಇದರ ಮುಖಮಂಟಪವೂ ಸಣ್ಣದಿದೆ. ಈ ನವರಂಗಕ್ಕೆ ಒಂದೇ ದ್ವಾರ ಮತ್ತು ಇದು ದೇವಾಲಯದ ಪ್ರಮುಖ ದ್ವಾರವೂ ಹೌದು.


ಈ ದೇವಾಲಯದಲ್ಲೊಂದು ವೈಶಿಷ್ಟ್ಯವಿದೆ. ಅದೆಂದರೆ ಪ್ರದಕ್ಷಿಣಾ ಪಥ. ಪ್ರಾಚೀನ ದೇವಾಲಯಗಳಲ್ಲಿ ಇದು ಬಹಳ ವಿರಳವಾಗಿ ಕಾಣಬರುತ್ತದೆ. ಮುಖಮಂಟಪದಿಂದ ಒಳಗೆ ಕಾಲಿಟ್ಟರೆ ಪ್ರದಕ್ಷಿಣಾ ಪಥ, ನವರಂಗ ಮತ್ತು ೩ ಗರ್ಭಗುಡಿಗಳು. ನವರಂಗದಲ್ಲಿ ದಿಕ್ಕಿಗೊಂದರಂತೆ ೪ ಬಾಗಿಲುಗಳಿವೆ. ಈ ಎಲ್ಲಾ ಬಾಗಿಲುಗಳು ನೇರವಾಗಿ ಸುತ್ತಲೂ ಇರುವ ಪ್ರದಕ್ಷಿಣಾ ಪಥಕ್ಕೆ ತೆರೆದುಕೊಳ್ಳುತ್ತವೆ. ಹಾಗೇನೇ ಪ್ರದಕ್ಷಿಣಾ ಪಥದಿಂದ ೪ ಬಾಗಿಲುಗಳು ತೆರೆದುಕೊಳ್ಳುತ್ತವೆ - ೩ ಗರ್ಭಗುಡಿಗಳಿಗೆ ಮತ್ತು ನಾಲ್ಕನೇಯದು ದೇವಾಲಯದ ಹೊರಗೆ/ಒಳಗೆ ಪ್ರವೇಶಿಸಲು.


ದೇವಾಲಯದ ಕೆತ್ತನೆ ಕೆಲಸ ಅದ್ಭುತ. ನವರಂಗದ ಜಗುಲಿಯ ಹೊರಭಾಗದ ಮೇಲೆ ಮಿಥುನ ಶಿಲ್ಪಗಳೂ ಇದ್ದವು. ಉಳಿದಂತೆ ೩ ಗೋಪುರಗಳ ರಚನೆ ಸುಂದರವಾಗಿದೆ ಮತ್ತು ಅವುಗಳ ಮೇಲಿನ ಶಿಲ್ಪಕಲೆ ಕೂಡಾ. ಪ್ರಮುಖ ಗರ್ಭಗುಡಿಯ ಗೋಪುರದ ಹಿಂಭಾಗ ಮಿಂಚು/ಸಿಡಿಲು ಬಡಿದು ಹಾನಿಗೊಳಗಾಗಿದೆ.

ಮಾಹಿತಿ: ಪ್ರದೀಪ ಸಾಲಗೇರಿ

ಸೋಮವಾರ, ಫೆಬ್ರವರಿ 11, 2008

ಗಳಗೇಶ್ವರ ದೇವಾಲಯ - ಗಳಗನಾಥ


ನಿರ್ಮಾತೃ: ಐದನೇ ಪಶ್ಚಿಮ ಚಾಳುಕ್ಯ ದೊರೆ ಒಂದನೇ ಸೋಮೇಶ್ವರ (೧೦೪೨-೧೦೬೮)
ಗಳಗೇಶ್ವರ ದೇವಾಲಯವಿರುವುದರಿಂದ ಗಳಗನಾಥ ಎಂಬ ಹೆಸರು ಊರಿಗೆ. ಕನ್ನಡ ಕಾದಂಬರಿಗಳ ಪಿತಾಮಹ ಎಂದು ಕರೆಯಲಾಗುತ್ತಿದ್ದ ಗಳಗನಾಥರ ಹುಟ್ಟೂರು ಕೂಡಾ ಈ ಊರೇ. ಹಳ್ಳಿಯಲ್ಲಿ ಇನ್ನೊಂದು ಕಿಮಿ ಚಲಿಸಿ ತುಂಗಭದ್ರಾ ನದಿಯ ದಂಡೆಗೆ ಬಂದರೆ ಭವ್ಯವಾದ ಗಳಗೇಶ್ವರ ದೇವಾಲಯ. ನದಿ ತಟದ ಪ್ರಶಾಂತ ಮತ್ತು ಸುಂದರ ಪರಿಸರದಲ್ಲಿ ಊಟ ಮುಗಿಸಿ ನಂತರ ದೇವಾಲಯ ನೋಡಲು ತೆರಳಿದೆ.


ತುಂಗಭದ್ರಾ ನದಿ ತಟದಲ್ಲಿ ಎತ್ತರದ ಅಧಿಷ್ಠಾನದ ಮೇಲೆ ಗಳಗೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ನೋಡಲು ಅತ್ಯಾಕರ್ಷಕವಾಗಿರುವ ದೇವಸ್ಥಾನ. ಶಿಲ್ಪಕಲೆಯಲ್ಲಿ ಅಷ್ಟೇನೂ ವೈಶಿಷ್ಟ್ಯತೆಯಿರದಿದ್ದರೂ, ದೇವಾಲಯದ ಆಕಾರ ಮತ್ತು ಗರ್ಭಗುಡಿಯ ಮೇಲಿನ ಗೋಪುರದ ನಿರ್ಮಾಣ ಶೈಲಿ ಬೆರಗುಗೊಳಿಸುತ್ತವೆ.


ಹನ್ನೊಂದನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇವಾಲಯ ಚಾಳುಕ್ಯ ಶೈಲಿಯಲ್ಲಿದೆ. ಗರ್ಭಗುಡಿ ಮತ್ತು ವಿಶಾಲವಾದ ಅಂತರಾಳವನ್ನು ಹೊಂದಿರುವ ಈ ದೇವಾಲಯವನ್ನು ಪ್ರವಾಹದಿಂದ ಹಾನಿಯಾಗದಿರಲಿ ಎಂದು ಎತ್ತರವಾದ ಅಧಿಷ್ಠಾನದ ಮೇಲೆ ಭವ್ಯವಾಗಿ ನಿರ್ಮಿಸಲಾಗಿದೆ. ನಕ್ಷತ್ರಾಕಾರದ ಅಡಿಪಾಯ ಮೇಲಕ್ಕೆ ಹೋದಂತೆ ಕಿರಿದಾಗುತ್ತಾ ಹೋಗುವುದು. ನವರಂಗವು ವಿಶಾಲವಾಗಿರುವುದರಿಂದ ಮುಖಮಂಟಪವೂ ವಿಶಾಲವಾಗಿದ್ದು ಬಹಳ ಸುಂದರವಾಗಿದೆ. ನವರಂಗವನ್ನು ೩ ಕಡೆಗಳಿಂದ ಪ್ರವೇಶಿಸಬಹುದು. ಈ ದೇವಾಲಯದಲ್ಲಿ ೨ ನಂದಿ ಮೂರ್ತಿಗಳಿವೆ. ನವರಂಗದಲ್ಲೊಂದು ದೊಡ್ಡ ನಂದಿ ವಿಗ್ರಹವಿದ್ದರೆ ದೇವಾಲಯದ ಹೊರಗಡೆ ಅಂದರೆ ನವರಂಗದ ಮುಖ್ಯ ದ್ವಾರದ ಮುಂದೆ ಸಣ್ಣ ಸ್ತಂಭದ ಮೇಲೆ ಮತ್ತೊಂದು ನಂದಿಯ ಮೂರ್ತಿಯನ್ನು ಇರಿಸಲಾಗಿದೆ.


ಇಲ್ಲಿ ಎಲ್ಲವೂ ದೊಡ್ಡ ಆಕಾರದ್ದೇ! ನವರಂಗದಲ್ಲಿ ೪ ದೊಡ್ಡ ಗಾತ್ರದ ಚಾಳುಕ್ಯ ಕಾಲದ ಕಂಬಗಳಿವೆ. ನವರಂಗದಲ್ಲಿರುವ ನಂದಿ ಬೃಹತ್ ಆಕಾರದ್ದು. ನಂತರ ದೇವಾಲಯದ ಬಾಗಿಲು ೧೨ ಅಡಿ ಎತ್ತರವಿದೆ. ಬಾಗಿಲಿನೊಳಗೆ ಕಾಲಿರಿಸಿದರೆ ಅಂತರಾಳದಲ್ಲಿ ೫ ಅಡಿ ಎತ್ತರವಿರುವ ವಿಷ್ಣು, ಗಣಪತಿ ಮತ್ತು ಸೂರ್ಯನ ಶಿಲ್ಪಗಳಿವೆ. ನಂತರ ಮುಂದೆ ಗರ್ಭಗುಡಿಯಲ್ಲಿ ಸುಮಾರು ಎರಡುವರೆ ಅಡಿ ಎತ್ತರವಿರುವ ಶಿವಲಿಂಗ. ಇಲ್ಲಿ ದೊರಕಿರುವ ಕೆಲವು ಶಾಸನಗಳಲ್ಲಿ ನದಿಯ ರೇಖಾಚಿತ್ರಗಳಿವೆ. ಇಲ್ಲೆ ಸಮೀಪದಲ್ಲಿ ಮಲ್ಲೇಶ್ವರ, ಹೊನ್ನೇಶ್ವರ ಮತ್ತು ದತ್ತಾತ್ರೇಯ ಗುಡಿಗಳಿದ್ದು ಇವುಗಳಲ್ಲಿ ಹೊನ್ನೇಶ್ವರ ಮತ್ತು ದತ್ತಾತ್ರೇಯ ಗುಡಿಗಳು ಒತ್ತುವರಿಗೆ ಗುರಿಯಾಗಿವೆ.


ದೇವಸ್ಥಾನದ ನವರಂಗದಲ್ಲಿ ಕುಳಿತುಕೊಂಡರೆ ಅದೊಂದು ಸುಂದರ ದೃಶ್ಯ. ಮುಂದೆ ವಿಶಾಲವಾಗಿ ಹರಿಯುವ ತುಂಗಭದ್ರಾ ನದಿ. ಬೀಸುವ ತಣ್ಣನೆಯ ಗಾಳಿ. ಅಲ್ಲಿಂದ ಎದ್ದು ಬರಲು ಮನಸೇ ಆಗುತ್ತಿರಲಿಲ್ಲ. ಆ ದಿನ ನಾನು ಭೇಟಿ ನೀಡಿದ ಎಲ್ಲಾ ಸ್ಥಳಗಳಲ್ಲಿ ನನಗೆ ಬಹಳ ಇಷ್ಟವಾದದ್ದು ಗಳಗನಾಥದ ಗಳಗೇಶ್ವರ ದೇವಾಲಯ. ಶಿಲ್ಪಕಲೆಯಲ್ಲಿ ಕೊಂಡಾಡುವಷ್ಟು ಏನೂ ವೈಶಿಷ್ಟ್ಯವಿಲ್ಲದಿದ್ದರೂ, ದೇವಾಲಯದ ಆಕಾರ, ೨ ನಂದಿಗಳಿರುವ ವಿಶೇಷ ಮತ್ತು ಎಲ್ಲದಕ್ಕೂ ಮಿಗಿಲಾಗಿ ಶತಮಾನಗಳಿಂದಲೂ ದೇವಾಲಯದ ಮುಂದೆ ಹರಿಯುತ್ತಿರುವ ತುಂಗಭದ್ರಾ ನದಿಯ ಮೋಹಕ ದೃಶ್ಯ; ಇವೆಲ್ಲವನ್ನೂ ಪರಿಗಣಿಸಿದರೆ ಇಂತಹ ಸ್ಥಳ ಮತ್ತೊಂದಿರಲಾರದು.

ಮಾಹಿತಿ: ಅಮೃತ್ ಜೋಗಿ