ಬುಧವಾರ, ಡಿಸೆಂಬರ್ 05, 2007

ನಾ ಕಂಡಂತೆ 'ಕುಡ್ಲ ಕಲಾವಳಿ'


೨೨೭ ಕಲಾವಿದರು; ಐದು ಸಾವಿರಕ್ಕೂ ಅಧಿಕ ಕಲಾಕೃತಿಗಳು; ೪ ಲಕ್ಷ ರೂಪಾಯಿಗಳಷ್ಟು ಮೌಲ್ಯದ ಕಲಾಕೃತಿಗಳ ಮಾರಾಟ; ಕರಾವಳಿ ಪ್ರದೇಶವಲ್ಲದೇ ಬಾಗಲಕೋಟ, ಬದಾಮಿ, ಗುಲ್ಬರ್ಗ, ಮೂಡಿಗೆರೆ, ಬೆಂಗಳೂರು, ಮುಂಬೈ ಇಲ್ಲಿಂದಲೂ ಕಲಾವಿದರ ಆಗಮನ ಇವಿಷ್ಟು ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಕುಡ್ಲ ಕಲಾವಳಿಯ ಬಹಳ ಸಂಕ್ಷಿಪ್ತ ವಿವರ.

ಕುಡ್ಲ ಕಲಾವಳಿಯ ಮೊದಲ ದಿನ ಮುಂಜಾನೆ ೯.೩೦ಕ್ಕೆ ಉದ್ಘಾಟನ ಸಮಯಕ್ಕೆ ಸರಿಯಾಗಿ ಪತ್ನಿಯೊಡನೆ ಕದ್ರಿ ಪಾರ್ಕ್ ತಲುಪಿದಾಗ ಕಂಡದ್ದು ರಸ್ತೆಯ ಇಕ್ಕೆಲಗಳಲ್ಲಿ ಕಲಾವಿದರ ಪರದಾಟ, ಒದ್ದಾಟ ತಮ್ಮ ತಮ್ಮ ಚಿತ್ರಗಳನ್ನು ಸರಿಯಾಗಿ ಪ್ರದರ್ಶನಕ್ಕೆ ಇಡಲೋಸುಗ. ಒಂಥರಾ ವ್ಯಥೆಯಾಯಿತು. ಉರಿ ಬಿಸಿಲಿನಿಂದ ರಕ್ಷಣೆಯಿಲ್ಲದೆ ಆಚೀಚೆ ಒಡಾಡುತ್ತಿದ್ದರು ಕೆಲವರು. ಇನ್ನು ಕೆಲವರು ತಮ್ಮ ತಮ್ಮ ಚಿತ್ರಗಳನ್ನು ತೂಗುಹಾಕಿ ಬಿಸಿಲಿನಲ್ಲೇ ಕೂತಿದ್ದರು. ಕೆಲವರಿಗೆ ಮರಗಳ ನೆರಳಿನ ರಕ್ಷಣೆಯಿತ್ತು. ಕೆಲವರಿಗೆ ಆ ಭಾಗ್ಯವಿರಲಿಲ್ಲ. ಕಲಾಕೃತಿಗಳ ರಾಶಿ. ಯಾವುದನ್ನು ನೋಡುವುದೆಂದು ಗೊತ್ತಾಗುತ್ತಿರಲಿಲ್ಲ. ಆಗಲೇ 'ಫಳ್' ಎಂಬ ಸದ್ದು. ಸದ್ದು ಬಂದೆಡೆ ನೋಡಿದರೆ, ಗ್ಲಾಸ್ ಫ್ರೇಮ್ ಹಾಕಿದ ಕಲಾಕೃತಿಯೊಂದು ಕೆಳಗೆ ಬಿದ್ದು, ಫ್ರೇಮ್ ನುಚ್ಚುನೂರು. ಆ ಕಲಾವಿದನೆಡೆ ನೋಡದೇ ಮುನ್ನಡೆದೆ. ನೋಡಿದರೆ ಆತನ ಮುಖದಲ್ಲಿ ಆ ಕ್ಷಣದಲ್ಲಿ ಇರಬಹುದಾದ ನೋವನ್ನು ಸಹಿಸಲು ನನಗಾಗದು ಎಂಬ ಭಯ.


ಅಲ್ಲೇನೂ ಸರಿಯಾಗಿದ್ದಂತೆ ಕಾಣುತ್ತಿರಲಿಲ್ಲ. ಕೇವಲ ಕಲಾವಿದರು ಮಾತ್ರ ಆಚೀಚೆ ಓಡಾಡುತ್ತಿದ್ದರು. 'ಸ್ಟಾಲ್'ಗಳು ಎಲ್ಲಿವೆ ಎಂದು ಪತ್ನಿ ನನ್ನಲ್ಲಿ ಕೇಳುತ್ತಿದ್ದಳು, ನಾನು ಹುಡುಕುತ್ತಿದ್ದೆ. ಅಲ್ಲಿ 'ಸ್ಟಾಲ್'ಗಳೇ ಇರಲಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೆ ಬಿಳಿ ಬಟ್ಟೆಯನ್ನು ಕಟ್ಟಲಾಗಿತ್ತು. ಅದಕ್ಕೆ ತಮ್ಮ ತಮ್ಮ ಕಲಾಕೃತಿಗಳನ್ನು ಜೋತುಹಾಕಿ , ಉದ್ದಕ್ಕೆ ಊಟಕ್ಕೆ ಕುಳಿತಂತೆ ಪಂಕ್ತಿಯಲ್ಲಿ ಕಲಾವಿದರು. ನೋಡಿ ಏನೇನೂ ಸಂತೋಷವಾಗಲಿಲ್ಲ. ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಈ ರಸ್ತೆಯಲ್ಲಿ ೨ ದಿನಗಳ ಕಾಲ ವಾಹನ ಸಂಚಾರವನ್ನು ನಿಲ್ಲಿಸಲಾಗಿದ್ದರೂ, ವಾಹನಗಳು ಮಾತ್ರ ಓಡಾಡುತ್ತಲೇ ಇದ್ದವು. ಮಧ್ಯಾಹ್ನದ ಬಳಿಕ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ದಿನೇಶ್ ಹೊಳ್ಳ ಯಾವಾಗಲೂ ತಯಾರಿಯನ್ನು ಕೂಲಂಕುಷವಾಗಿ ಮಾಡುವ ಮನುಷ್ಯ. ಇಲ್ಲಿ ಅವರಿಗೆ ಯಾರೋ ಕೈ ಕೊಟ್ಟಿರಬೇಕು ಎಂದು ಯೋಚಿಸುತ್ತಾ ಮುನ್ನಡೆಯುತ್ತಿದ್ದೆ.


ಅಲ್ಲಿ ಒಂದೆಡೆ ಸಣ್ಣ ಗುಂಪು. ಅವರೆಲ್ಲಾ ನಿಂತ ಸ್ಟೈಲ್ ನೋಡಿಯೇ ತಿಳಿಯಿತು. ಹುಡುಗಿಯ ಹೆಸರನ್ನು ಹೋಲುವ ಕಲಾನಾಮವಿರುವ ಒಬ್ಬ ಕಲಾಕಾರ, 'ರೂ.೧೦೦' ಎಂಬ ಬೋರ್ಡ್ ತಗುಲಿಸಿ, ಅಲ್ಲಿ ಆಸೀನನಾಗಿ ರೂ.೧೦೦ ಕೊಟ್ಟು ತಮ್ಮ ಕಾರ್ಟೂನ್ (ಕ್ಯಾರಿಕೇಚರ್) ಬಿಡಿಸಿಕೊಳ್ಳುವ ಇಚ್ಛೆಯಿದ್ದವರಿಗೆ ಬಿಡಿಸಿಕೊಡುವುದರಲ್ಲಿ ಮಗ್ನನಾಗಿದ್ದಾನೆ ಎಂದು. ಉಳಿದ ಕಲಾಕಾರರು ಪರದಾಡುತ್ತಿದ್ದರೆ, ಈತನಿಗೆ ಅದ್ಯಾವ ಪ್ರಾಬ್ಲೆಮ್ಮೂ ಇಲ್ಲ. ಯಾರ ಕಲಾಕೃತಿಗಳು ಮಾರಾಟವಾದವೋ ನಾನರಿಯೆ ಆದರೆ ಈತನ ಕಿಸೆ ತುಂಬ ೧೦೦ರ ನೋಟುಗಳು. ಈತನೊಬ್ಬ ಉತ್ತಮ ಕಲಾವಿದ. ಯಾರದ್ದೇ ಆಗಲಿ, ನಾಲ್ಕೈದು ನಿಮಿಷಗಳಲ್ಲೇ ಕ್ಯಾರಿಕೇಚರ್ ಬಿಡಿಸಿ ಬಿಡುತ್ತಾರೆ. ವರ್ಣಶರಧಿಯಂತಹ ಮಾರಾಟಕ್ಕೆ ಆಸ್ಪದವಿರದಂತಹ, ಕೇವಲ ತಮ್ಮ ಕಲೆಯನ್ನು ಪ್ರದರ್ಶಿಸುವ ಮಂಚದಲ್ಲೂ 'ರೂ.೧೦೦' ಎಂಬ ಬೋರ್ಡ್ ತಗುಲಿಸಿ ಬಂದವರಲ್ಲಿ ಹಣ ಕೀಳಲು ಆರಂಭಿಸಿದಾಗ ದಿನೇಶ್ ಆಕ್ಷೇಪ ವ್ಯಕ್ತಪಡಿಸಲು, 'ಹ್ಹೆ ಹ್ಹೆ ನನಗೆ ಗೊತ್ತೇ ಇರಲಿಲ್ಲ...' ಎಂದು ಪೆಚ್ಚು ಪೆಚ್ಚಾಗಿ ಮೂರ್ಖ ನಗು ತೋರ್ಪಡಿಸಿದ ಆಸಾಮಿ ಈತ. ಇಲ್ಲಿ, ಕುಡ್ಲ ಕಲಾವಳಿಯಲ್ಲಿ ಅವರಿಗೆ ವರ್ಣಶರಧಿಯಲ್ಲಿದ್ದಂತಹ ನಿರ್ಬಂಧನೆಯಿರಲಿಲ್ಲ. ಜನ ಅವರನ್ನು ಮುತ್ತುತ್ತಾ ಇದ್ದರು. ಇವರು ಬಿಡಿಸುತ್ತಾ ಇದ್ದರು. ಕಿಸೆ ತುಂಬುತ್ತಾ ಇತ್ತು. ಪಕ್ಕದಲ್ಲೊಂದು ಚೀಲವಿತ್ತು. ಮರುದಿನ ಸಂಜೆಯಾಗುವಷ್ಟರಲ್ಲಿ ಅದೂ ತುಂಬಿತ್ತೇನೋ! ಮಂಗಳೂರಿನಲ್ಲೊಂದು ಜೋಕು. ಯಾವುದೇ ವೈಯುಕ್ತಿಕ ಸಭೆ ಸಮಾರಂಭಗಳಿಗೆ ಈತನನ್ನು ಆಮಂತ್ರಿಸಬಾರದು ಎಂದು. ಎಲ್ಲಾದರೂ ಆಮಂತ್ರಿಸಿದರೆ, ಅಲ್ಲೇ ಮೂಲೆಯಲ್ಲಿ 'ರೂ.೧೦೦' ಎಂದು ಬೋರ್ಡ್ ತಗುಲಿಸಿ ಈ ಮಹಾಶಯ ಆಸೀನನಾಗಿಬಿಟ್ಟರೆ?!


ಇನ್ನೂ ಮುಂದಕ್ಕೆ ಹೋದಾಗ ಅಲ್ಲಿ ಮರಳು ಶಿಲ್ಪ ಪ್ರದರ್ಶನ. ನಂತರ ಮತ್ತಷ್ಟು ಕಲಾಕೃತಿಗಳು. ಸರಿಯಾದ ವ್ಯವಸ್ಥೆಯಿರಲಿಲ್ಲ. ಪ್ರದರ್ಶನದ ಒಂದು ದಿಕ್ಕಿನಲ್ಲಂತೂ ಬಿಸಿಲಿನಿಂದ ಪಾರಾಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ. ಅವ್ಯವಸ್ಥೆಯ ಪರಿ ಕಂಡು ಕೆಲವು ಕಲಾವಿದರು ಭಾಗವಹಿಸದೇ ಹಿಂತಿರುಗಿದರು ಎಂದು ನಂತರ ದಿನೇಶ್ ಹೊಳ್ಳ ತಿಳಿಸಿದರು. ನಂತರ ಕದ್ರಿ ಪಾರ್ಕಿನ ಒಳಗೆ ತೆರಳಿದೆ. ಇಲ್ಲೂ ಮತ್ತಷ್ಟು ಕಲಾವಿದರು ಮತ್ತು ಕಲಾಕೃತಿಗಳು. ಅವನ್ನೆಲ್ಲಾ ನೋಡುತ್ತಾ ಸಭಾಂಗಣದತ್ತ ತೆರಳಿ ಆಸೀನನಾದೆ. ಕರ್ನಾಟಕ ಬ್ಯಾಂಕಿನ ಚೇರ್ಮನ್ ಅದೇನೋ ಮಾತನಾಡುತ್ತಿದ್ದರು. ಇತ್ತೀಚೆಗೆ ಸಿಕ್ಕಸಿಕ್ಕಲ್ಲಿ ರಿಬ್ಬನ್ ಕಟ್ ಮಾಡಲು ಇವರು ತೆರಳುವುದು ಕಡಿಮೆಯಾಗಿದೆ. ಮೊದಲೆಲ್ಲಾ ಸಣ್ಣ ಅಂಗಡಿ/ಗ್ಯಾರೇಜು ಉದ್ಘಾಟನೆಗೂ ಇವರು ತೆರಳಲು ತಯಾರು, ಆ ಅಂಗಡಿ/ಗ್ಯಾರೇಜಿನ ಖಾತೆ ಕರ್ನಾಟಕ ಬ್ಯಾಂಕಿನಲ್ಲಿದ್ದರೆ!

ಸ್ವಲ್ಪ ಸಮಯದ ಬಳಿಕ ದಿನೇಶ್ ಹೊಳ್ಳ ನನ್ನ ಬಳಿ ಬಂದು ಕುಳಿತರು. 'ಎಲ್ಲಾ ಗೊಂದಲ' ಎಂಬ ಅವರ ಎರಡೇ ಮಾತುಗಳಲ್ಲಿ ಬಹಳ ಅರ್ಥವಿತ್ತು. ಇಂತಹ ಪ್ರದರ್ಶನವನ್ನು ಆಯೋಜಿಸುವಾಗ ತಮಗೆ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಎಲ್ಲರು ಸರಿಯಾಗಿ ನಿರ್ವಹಿಸಿದರೆ ಎಲ್ಲವೂ ಸರಿಯಾಗಿರುತ್ತದೆ. ಆದರೆ ದಿನೇಶ್ ಮತ್ತು ಇನ್ನು ೪ ಜನರನ್ನು ಬಿಟ್ಟರೆ ಉಳಿದವರೆಲ್ಲಾ ಬರೀ ಮಾತುಗಾರರು. ಸತತವಾಗಿ ೪ ದಿನ ರಾತ್ರಿಯಿಡೀ ಕೆಲಸ ಮಾಡಿದ ದಿನೇಶ್, ನನ್ನಲ್ಲಿ ಮಾತನಾಡುತ್ತಾ ಅಲ್ಲೇ ನಿದ್ರಾವಶರಾಗಿಬಿಟ್ಟಿದ್ದರು. 'ಅಡವಿಯ ನಡುವೆ' ಮತ್ತು 'ವರ್ಣಶರಧಿ' ಎಂಬ ಯಶಸ್ವಿ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದೇ ದಿನೇಶರಿಗೆ ಮುಳುವಾಗಿಹೋಯಿತು. ಆಯಾ ಜವಾಬ್ದಾರಿಯನ್ನು ಹೊತ್ತ ಪ್ರತಿಯೊಬ್ಬರು, ಹೇಗೂ ದಿನೇಶರಿಗೆ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಿದ ಅನುಭವವಿದೆಯಲ್ಲ ಎಂದು, ತಮ್ಮ ತಮ್ಮ ಕೆಲಸಗಳನ್ನು ಸ್ವಲ್ಪ ಸ್ವಲ್ಪ ಮಾಡಿ ನಿಧಾನವಾಗಿ ಜಾಗ ಖಾಲಿ ಮಾಡಿದರು. ಕೊನೆಗೆ ಉಳಿದದ್ದು ದಿನೇಶ್ ಸೇರಿದಂತೆ ೫ ಮಂದಿ. ೫ ಮಂದಿ ಎಷ್ಟು ತಾನೆ ಮಾಡಿಯಾರು?


ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಬುದ್ಧಿವಂತರು (ಕರಾವಳಿಯ ಜನತೆ) ಪ್ರದರ್ಶನಕ್ಕೆ ಆಗಮಿಸಲಿಲ್ಲ. ಎರಡನೇ ದಿನ ಅಂದರೆ ಆದಿತ್ಯವಾರ ಸಂಜೆ ಹೊತ್ತಿಗೆ ಸುಮಾರು ಜನ ಸೇರಿದ್ದರು. ಇಲ್ಲಿ ಉದಯವಾಣಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಕರಾವಳಿಯ ಪ್ರಮುಖ ದಿನಪತ್ರಿಕೆಯಾಗಿ, ಕುಡ್ಲ ಕಲಾವಳಿಯ ಬಗ್ಗೆ ಸಮಗ್ರ ಸುದ್ದಿಯನ್ನು ಪ್ರಕಟಿಸಿ, ಜನರಿಗೆ ಮಾಹಿತಿ ತಲುಪಿಸಲು ಉದಯವಾಣಿ ಆಸಕ್ತಿ ತೋರಿಸಲಿಲ್ಲ. ಮಾಧ್ಯಮ ಪ್ರಾಯೋಜಕರಾಗುವಂತೆ ವಿನಂತಿಸಿದರೆ, ಸರಿಯಾದ ಉತ್ತರ ನೀಡದೆ ಕೊನೇ ಕ್ಷಣದವರೆಗೆ ನಿರ್ಧಾರ ತಗೊಳ್ಳದೆ, ಕುಡ್ಲ ಕಲಾವಳಿಯ ಆಯೋಜಕರನ್ನು ಕಾಡಿಸಿ, ಕೊನೆಗೆ 'ಬೊಡ್ಚಿ' ಎಂದು ನಿರಾಕರಿಸಿದ ಪತ್ರಿಕೆ ಈ ಉದಯವಾಣಿ. ಮಾಧ್ಯಮ ಪ್ರಾಯೋಜಕರಾಗದಿದ್ದರೂ ಪರವಾಗಿಲ್ಲ, ನಾಲ್ಕೈದು ದಿನ ಮೊದಲಿನಿಂದಲೇ ಕುಡ್ಲ ಕಲಾವಳಿಯ ಬಗ್ಗೆ ಸುದ್ದಿ ಪ್ರಕಟಿಸಿದ್ದರೆ ಕೆಲವು ಬಡ ಕಲಾವಿದರಿಗೆ ಪ್ರಯೋಜನವಾದರೂ ಆಗುತ್ತಿತ್ತು. ಅದನ್ನೂ ಮಾಡಲಿಲ್ಲ ಉದಯವಾಣಿ. ಒಳಗಿನ ಪುಟದಲ್ಲೆಲ್ಲೋ ಸಂಕ್ಷಿಪ್ತವಾಗಿ ಕುಡ್ಲ ಕಲಾವಳಿಯ ಬಗ್ಗೆ ಸುದ್ದಿ ಪ್ರಕಟಿಸಿ, 'ರಿಕ್ಷಾ ಪಲ್ಟಿ' ಮತ್ತು 'ಮನೆಯಾಕೆಯ ತಾಳಿ ಕೆಲಸದಾಕೆಯ ಕೊರಳಿನಲ್ಲಿ' ಎಂಬ ಸುದ್ದಿಗಳನ್ನು ದಪ್ಪಕ್ಷರಗಳಲ್ಲಿ ಪ್ರಕಟಿಸಿ ತನ್ನ ಲೆವೆಲ್ ಏನು ಎಂಬುದನ್ನು ಉದಯವಾಣಿ ತೋರ್ಪಡಿಸಿತು. ಸ್ವಂತ ನಿಲುವಿಲ್ಲದ (ಸಂಪಾದಕೀಯ) ಪತ್ರಿಕೆಯಿಂದ ಮತ್ತೇನನ್ನು ತಾನೆ ನಿರೀಕ್ಷಿಸಬಹುದು?

"ಪ್ರಥಮ ಪ್ರಯತ್ನ. ಬಹಳ ವಿಷಯಗಳು ತಿಳಿದವು. ಪ್ರಶಂಸೆಯ ಮಾತುಗಳಿದ್ದರೂ, ಸಹಜವಾಗಿಯೇ ದೂರುಗಳೇ ಹೆಚ್ಚಿದ್ದವು. ಯಾರು ಮಾತನಾಡುತ್ತಾರೆ ಮತ್ತು ಯಾರು ಕೆಲಸ ಮಾಡುತ್ತಾರೆ ಎಂದು ಈಗ ಚೆನ್ನಾಗಿ ತಿಳಿದಿದೆ. ಮುಂದಿನ ಸಲ ಮತ್ತೆ ಕುಡ್ಲ ಕಲಾವಳಿ ಮಾಡಬೇಕು .... ಯಾವ ದೂರಿಗೂ ಆಸ್ಪದವಿಲ್ಲದಂತೆ" ಎಂಬುದು ದಿನೇಶ್ ಹೊಳ್ಳರ ಮಾತು.

ಗುರುವಾರ, ನವೆಂಬರ್ 29, 2007

ಕರ್ನಾಟಕ ಕ್ರಿಕೆಟ್ ೭ - ಮಿಥುನ್ ಬೀರಾಲ


ಆರಂಭಿಕ ಆಟಗಾರನಾಗಿ ೬೦ರ ದಶಕದ ಕೊನೆಯಲ್ಲಿ ಮತ್ತು ೭೦ರ ದಶಕದ ಆರಂಭದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಾಜಿ ರಣಜಿ ಆಟಗಾರ ರಘುನಾಥ್ ಬೀರಾಲ ಇವರ ಮಗನೇ ಮಿಥುನ್. ಸಾಧಾರಣ ಮಟ್ಟದ ಆರಂಭಿಕ ಆಟಗಾರನಾಗಿರುವ ಮಿಥುನ್, ತನ್ನ ಚೊಚ್ಚಲ ರಣಜಿ ಪಂದ್ಯವನ್ನಾಡಿದ್ದು ೧೯೯೯-೨೦೦೦ ಋತುವಿನಲ್ಲಿ. ತನ್ನ ನೈಜ ಪ್ರತಿಭೆಯ ಬಲಕ್ಕಿಂತಲೂ ಹೆಚ್ಚಾಗಿ ತಂದೆಗೆ ಕೆ.ಎಸ್.ಸಿ.ಎ ಯಲ್ಲಿರುವ 'ಇನ್-ಫ್ಲುಯನ್ಸ್' ನಿಂದ ತಂಡಕ್ಕೆ ಬಂದವರು ಮಿಥುನ್. ಆಯ್ಕೆಗಾರರು ಎಡವಿದ್ದೇ ಇಲ್ಲಿ. ಪ್ರತಿಭೆಯುಳ್ಳ ಆಟಗಾರರಾದ ಸುಧೀಂದ್ರ ಶಿಂದೆ ಮತ್ತು ಶ್ಯಾಮ್ ಪೊನ್ನಪ್ಪ ಇವರುಗಳು ಮತ್ತಷ್ಟು ಕಾಯುವಂತಾಯಿತು.

ಮಿಥುನ್ ಬಹಳ ಕೆಟ್ಟದಾಗಿ ಆಡಲಿಲ್ಲ. ಆದರೆ ನಿರೀಕ್ಷಿತ ಮಟ್ಟಕ್ಕೆ ಅವರ ಆಟ ಬೆಳೆಯಲೂ ಇಲ್ಲ. ೯೯-೨೦೦೦, ೨೦೦೦-೦೧ ಋತುಗಳ ಎಲ್ಲಾ ಪಂದ್ಯಗಳನ್ನು ಮಿಥುನ್ ಆಡಿದರು. ತನ್ನ ಚೊಚ್ಚಲ ಋತುವಿನಲ್ಲಿ ಮಿಥುನ್ ಚೆನ್ನಾಗಿಯೇ ಆಡಿದರು. ಪ್ರಥಮ ಪಂದ್ಯದಲ್ಲೇ ಅಂಧ್ರದ ವಿರುದ್ಧ ೮೩ ಮತ್ತು ೯೪ ಓಟಗಳನ್ನು ಗಳಿಸಿದರು. ಚೊಚ್ಚಲ ಋತುವನ್ನು ೫೧.೪೧ ಸರಾಸರಿಯಲ್ಲಿ ೬೧೭ ಓಟಗಳೊಂದಿಗೆ ಮುಗಿಸಿದರು. ದುರ್ಬಲ ತಂಡಗಳ ವಿರುದ್ಧ ಚೆನ್ನಾಗಿ ಆಡುತ್ತಿದ್ದ ಮಿಥುನ್, ಬಲಶಾಲಿ ತಂಡಗಳ ವಿರುದ್ಧ ಮುಗ್ಗರಿಸುತ್ತಿದ್ದರು. ಒತ್ತಡವಿದ್ದಾಗ ಅವರ ದಾಂಡಿನಿಂದ ಓಟಗಳೇ ಬರುತ್ತಿರಲಿಲ್ಲ. ನಂತರದ ಋತುವಿನಲ್ಲಿ ಮಿಥುನ್ ತುಂಬಾ ಕಳಪೆಯಾಗಿ ಆಡಿದರು. ಆದರೂ ಕರ್ನಾಟಕದ ಪರವಾಗಿ ೨ ಋತುಗಳಲ್ಲಿ ಆಡಿದ ಮಿಥುನ್ ಸರಾಸರಿ ಮಾತ್ರ ೩೬ ರಷ್ಟಿತ್ತು. ಕರ್ನಾಟಕಕ್ಕೆ ಉತ್ತಮ ಆರಂಭವೂ ದೊರೆಯುತ್ತಿತ್ತು ಆದರೆ ಇದರ ಹಿಂದೆ ಅರುಣ್ ಕುಮಾರ್ ಅವರ ಯೋಗದಾನ ಹೆಚ್ಚು ಇರುತ್ತಿತ್ತು. ಈ ಎರಡೂ ಋತುಗಳಲ್ಲಿ ಕರ್ನಾಟಕ ತಂಡದ ಮ್ಯಾನೇಜರ್ ಆಗಿದ್ದವರು ರಘುನಾಥ್ ಬೀರಾಲ.

ರಘುನಾಥ್ ಬೀರಾಲರವರು ಎಲ್ಲಾ ಕಡೆ ಓಡಾಡಿ, ಬೇಕಾದೆಲ್ಲೆಡೆ ಮಾತಾಡಿ, ಅವಶ್ಯವಿದ್ದವರನ್ನು ಪುಸಲಾಯಿಸಿ ಮಗ ರಾಜ್ಯ ತಂಡಕ್ಕೆ ಆಯ್ಕೆಯಾಗುವುದನ್ನು ಖಾತ್ರಿಪಡಿಸಿದ್ದರು. ಬಡಪಾಯಿ ಸುಜಿತ್ ಸೋಮಸುಂದರ್ ಜಾಗ ಖಾಲಿಮಾಡಬೇಕಾಯಿತು. ಹಾಗೆ ನೋಡಿದರೆ ಸುಜಿತ್ ಆ ವೇಳೆಯಲ್ಲಿ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದರು. ಬಟ್ ಎಟ್ ಎನಿ ಗಿವನ್ ಟೈಮ್, ಸುಜಿತ್ ಸೋಮಸುಂದರ್ ಮಿಥುನ್ ಬೀರಾಲಕ್ಕಿಂತ ಒಳ್ಳೆಯ ಆಟಗಾರನಾಗಿದ್ದರು.

ಕರ್ನಾಟಕ ೧೯೯೮-೯೯ ರಣಜಿ ಟ್ರೋಫಿ ಗೆದ್ದ ಋತುವಿನಲ್ಲಿ ತಂಡದಲ್ಲಿದ್ದರೂ ಒಂದೇ ಒಂದು ಪಂದ್ಯವನ್ನು ಮಿಥುನ್ ಆಡಿರಲಿಲ್ಲ. ಮಿಥುನ್ ಸ್ವಭಾವದಿಂದ ಬಹಳ ಸೌಮ್ಯ ವ್ಯಕ್ತಿ. ಅಪ್ಪನಿಗಿರುವ ಜಂಭ, ಕೊಬ್ಬು ಮತ್ತು ಸೊಕ್ಕು ಮಗನಿಗಿಲ್ಲ. ಆದರೆ ಅಪ್ಪನ ಪ್ರಭಾವೀ ಸಂಪರ್ಕಗಳಿಂದ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದ ಮಿಥುನ್ ಗೆ ಸಹ ಆಟಗಾರರಿಂದ ಸಿಗುವ ಗೌರವ ಅಷ್ಟರಲ್ಲೇ ಇತ್ತು, ಎಷ್ಟೇ ಚೆನ್ನಾಗಿ ಆಡಿದರೂ! ತಾನು ತನ್ನ ಪ್ರಥಮ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ತನ್ನ ಬಗ್ಗೆ ಸಹ ಆಟಗಾರರಿಗಿದ್ದ ಅಸಹನೆ ಮಿಥುನ್ ಆಟದಲ್ಲಿ ಮುಂದಿನ ಋತುವಿನಲ್ಲಿ ಕಾಣಬಂತು. ಈ ಋತುವಿನಲ್ಲಿ ಮಿಥುನ್ ತುಂಬಾನೇ ಕಳಪೆಯಾಗಿ ಆಡಿದರು. ಮೊದಲಿದ್ದ ಆತ್ಮವಿಶ್ವಾಸ ಅವರ ಆಟದಲ್ಲಿ ನಂತರ ಬರಲೇ ಇಲ್ಲ. ತನ್ನ ನೈಜ ಆಟ ಪ್ರದರ್ಶಿಸುವುದರಲ್ಲಿ ಮಿಥುನ್ ಸಂಪೂರ್ಣವಾಗಿ ವಿಫಲರಾದರು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಿಥುನ್ ಒಬ್ಬ ಭರವಸೆಯ ಆರಂಭಿಕ ಆಟಗಾರನಾಗಿದ್ದರು. ಮಲ್ಲೇಶ್ವರಂ ಜಿಮ್ಖಾನದ ಪರವಾಗಿ ಇನ್ನೊಂದೆರಡು ಋತುಗಳನ್ನು ಅವರು ಆಡಿದ್ದರೆ ತಾನಾಗಿಯೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗುತ್ತಿದ್ದರೇನೋ. ಆದರೆ ರಘುನಾಥ್ ಬೀರಾಲ ದುಡುಕಿಬಿಟ್ಟರು. ಮಗನಿಗೆ ತನ್ನ ಆಟವನ್ನು ಇನ್ನಷ್ಟು ಸುಧಾರಿಸುವ ಅವಕಾಶ ನೀಡದೆ ತನ್ನ ಸಂಪರ್ಕಗಳನ್ನು ಬಳಸಿ ಕರ್ನಾಟಕಕ್ಕಾಗಿ ಆಡಿಸಿದರು. ಸಹಜವಾಗಿಯೇ ಮಿಥುನ್ ಹೆಚ್ಚು ದಿನ ಆಡಲಾಗಲಿಲ್ಲ. ಸ್ವಲ್ಪ ಸಂಯಮ ರಘುನಾಥ್ ರಿಗಿದ್ದಿದ್ದರೆ ಕರ್ನಾಟಕಕ್ಕೆ ಒಬ್ಬ ಉತ್ತಮ ಆರಂಭಿಕ ಆಟಗಾರ ಸಿಗುತ್ತಿದ್ದನೇನೊ. ಯಾವ್ಯಾವ ರೀತಿಯಲ್ಲಿ ಪ್ರತಿಭಾವಂತ ಆಟಗಾರರನ್ನು ಕರ್ನಾಟಕ ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ.

ಆದರೆ ಮಿಥುನ್ ಅದೃಷ್ಟ ಹೆಚ್ಚು ದಿನ ಓಡಲಿಲ್ಲ. ೨೦೦೨-೦೩ ಋತುವಿನಲ್ಲಿ ಅವರು ಆಯ್ಕೆಯಾಗಲಿಲ್ಲ. ನಂತರವೂ ಇದುವರೆಗೆ ಅವರು ಕರ್ನಾಟಕಕ್ಕಾಗಿ ಆಯ್ಕೆಯಾಗಿಲ್ಲ. ರಘುನಾಥ್ ಬೀರಾಲ ಎಲ್ಲಾ ಪ್ರಯತ್ನವನ್ನೂ ಮಾಡಿದರು ಮತ್ತು ಛಲ ಬಿಡದೆ ಇನ್ನೂ ಮಾಡುತ್ತಾ ಇದ್ದಾರೆ ಆದರೆ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದ ಆಟಗಾರರು ಯಾರೂ ಇರಲಿಲ್ಲವಲ್ಲ!

೨೦೦೫-೦೬ ಋತುವಿನಲ್ಲಿ ರಘುನಾಥ್, ಮಗನನ್ನು ಪ್ಲೇಟ್ ಲೀಗ್-ನ ರನ್ನರ್ಸ್ ಅಪ್ ಆದ ರಾಜಸ್ಥಾನದ ಪರವಾಗಿ ಆಡಿಸಿದರು. ಕೊನೆಯ ಲೀಗ್ ಪಂದ್ಯ, ಪ್ಲೇಟ್ ಸೆಮಿ ಫೈನಲ್ ಮತ್ತು ಪ್ಲೇಟ್ ಫೈನಲ್ ಹೀಗೆ ೩ ಪಂದ್ಯಗಳಲ್ಲಿ ಮಿಥುನ್ ಆಡಿದರು. ಗಳಿಸಿದ್ದು ೨೭.೨೫ ಸರಾಸರಿಯಲ್ಲಿ ೧೦೯ ಓಟಗಳನ್ನು. ಕಳೆದ ಋತುವಿನಲ್ಲಿ (೨೦೦೬-೦೭) ರಾಜಸ್ಥಾನದ ಪರವಾಗಿ ಆಡಲು ಇಂಗ್ಲಂಡ್ ನಿಂದ ವಿಕ್ರಮ್ ಸೋಳಂಕಿ ಆಗಮಿಸಿದ್ದರಿಂದ ಮಿಥುನ್ ಮಲ್ಲೇಶ್ವರಂ ಜಿಮ್ಖಾನಕ್ಕೆ ಹಿಂತಿರುಗಬೇಕಾಯಿತು.

ಪ್ರಸಕ್ತ ಋತುವಿನಲ್ಲಿ ಮಿಥುನ್, ಹರ್ಯಾನದ ಪರವಾಗಿ ಆಡುತ್ತಿದ್ದಾರೆ. ಕಳೆದ ಋತುವಿನಲ್ಲಿ ಉದಯಪುರದಲ್ಲೊಂದು ಪಂದ್ಯ ನಡೆಯಿತು. ಪ್ಲೇಟ್ ಲೀಗ್ ನ ಕೊನೆಯ ಸುತ್ತಿನ ಪಂದ್ಯಗಳಲ್ಲೊಂದು ಪಂದ್ಯವಾಗಿತ್ತು ಇದು. ರಾಜಸ್ಥಾನದ ಎದುರಾಳಿ ಅಸ್ಸಾಮ್. ರಾಜಸ್ಥಾನದ ಪರವಾಗಿ ಆಡುತ್ತಿದ್ದರು ಕರ್ನಾಟಕದ ಮಾಜಿ ಆರಂಭ ಆಟಗಾರ ಮಿಥುನ್ ಬೀರಾಲ. ಅಸ್ಸಾಮ್ ಪರವಾಗಿ ಆಡುತ್ತಿದ್ದರು ಕರ್ನಾಟಕದ ಮತ್ತೊಬ್ಬ ಮಾಜಿ ಆರಂಭ ಆಟಗಾರ ಅರುಣ್ ಕುಮಾರ್. ಈ ಪಂದ್ಯದ ಮ್ಯಾಚ್ ರೆಫ್ರೀ ಯಾರಾಗಿದ್ದರು ಗೊತ್ತೇ? ಅವರ ಹೆಸರು ರಘುನಾಥ್ ಬೀರಾಲ! ಮಿಥುನ್ ಮತ್ತು ಅರುಣ್ ೨ ಋತುಗಳಲ್ಲಿ ಕರ್ನಾಟಕದ ಆರಂಭಿಕ ಆಟಗಾರರಾಗಿ ಜೊತೆಯಾಗಿ ಆಡಿದ್ದರು. ಈ ಎರಡೂ ಋತುಗಳಲ್ಲಿ ಕರ್ನಾಟಕ ತಂಡದ ಮ್ಯಾನೇಜರ್ ಆಗಿದ್ದವರು ರಘುನಾಥ್ ಬೀರಾಲಾ. ಈಗ ಮೂವ್ವರೂ ಮತ್ತೆ ಒಂದೇ ಮೈದಾನದಲ್ಲಿ ಆದರೆ ಬೇರೆ ಬೇರೆ ಸಾಮರ್ಥ್ಯದಲ್ಲಿ! ಇಟ್ ಇಸ್ ಇಂಡೀಡ್ ಅ ಸ್ಮಾಲ್ ವರ್ಲ್ಡ್.

ಶುಕ್ರವಾರ, ನವೆಂಬರ್ 23, 2007

ಕರ್ನಾಟಕ ಕ್ರಿಕೆಟ್ ೬ - ಚಂದ್ರಶೇಖರ್ ರಘು


ಕರ್ನಾಟಕಕ್ಕೆ ಬೇಕಾಗಿದ್ದ ಭರವಸೆಯ ದಾಂಡಿಗ. ರಣಜಿಗೆ ಪಾದಾರ್ಪಣ ೨೦೦೨-೦೩ ಋತುವಿನಲ್ಲಿ ಮಾಡಿದರೂ ಸ್ಥಿರವಾಗಿ ತಂಡದಲ್ಲಿರಲು ರಘು ಪರದಾಡುತ್ತಿದ್ದರು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳದೇ ತಂಡದಲ್ಲಿದ್ದರೂ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುತ್ತಿರಲಿಲ್ಲ. ೪ ಋತುಗಳಲ್ಲಿ ಆಡಿದ್ದು ೯ ಪಂದ್ಯಗಳಲ್ಲಿ. ಆಗ ರಘು ಆಯ್ಕೆಯಾಗುತ್ತಿದ್ದು, ಆಫ್ ಸ್ಪಿನ್ ಬೌಲಿಂಗ್ ಮಾಡಬಲ್ಲ ಬೌಲರ್ ಮತ್ತು ಸಾಧಾರಣವಾಗಿ ಬ್ಯಾಟಿಂಗ್ ಮಾಡಬಲ್ಲ ಆಟಗಾರನಾಗಿಯೇ ವಿನ: ಪಕ್ಕಾ ಬ್ಯಾಟ್ಸ್-ಮನ್ ಆಗಿ ಅಲ್ಲ!

ಕರ್ನಾಟಕಕ್ಕಾಗಿ ತನ್ನ ಪ್ರಥಮ ಪಂದ್ಯವನ್ನು ೨೦೦೨-೦೩ನೇ ಋತುವಿನಲ್ಲಿ ಬೆಂಗಳೂರಿನಲ್ಲಿ ಜಮ್ಮು ಕಾಶ್ಮೀರದ ವಿರುದ್ಧ ಆಡಿದರು. ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಬೌಲಿಂಗ್ ನೀಡಲಿಲ್ಲ. ಒಂದು ಕ್ಯಾಚ್ ಹಿಡಿದದ್ದು ಮತ್ತು ಕ್ಷೇತ್ರರಕ್ಷಣೆ ಮಾಡಿದ್ದು ಬಿಟ್ಟರೆ ತನ್ನ ಚೊಚ್ಚಲ ಪಂದ್ಯದಲ್ಲಿ ರಘು ಬೇರೇನು ಮಾಡಲಿಲ್ಲ. ನಂತರದ ಪಂದ್ಯಗಳಲ್ಲಿ ಮಧ್ಯ ಪ್ರದೇಶದ ವಿರುದ್ಧ ೨೨; ೦ ಔಟಾಗದೆ, ವಿದರ್ಭದ ವಿರುದ್ಧ ೨೪;೦ ಮತ್ತು ಪ್ಲೇಟ್ ಫೈನಲ್ ನಲ್ಲಿ ಕೇರಳ ವಿರುದ್ಧ ೮ ಓಟಗಳು. ಈ ಋತುವಿನಲ್ಲಿ ಆಡಿದ ೪ ಪಂದ್ಯಗಳಲ್ಲಿ ೫ ಸಾರಿ ಬ್ಯಾಟಿಂಗ್ ಮಾಡಿ ಒಂದು ಬಾರಿ ನಾಟೌಟ್ ಆಗಿ ಉಳಿದು ಗಳಿಸಿದ್ದು ೧೩.೫ ಸರಾಸರಿಯಲ್ಲಿ ಕೇವಲ ೫೪ ಓಟಗಳನ್ನು. ಬೌಲಿಂಗ್ ನಲ್ಲಿ ಶೂನ್ಯ ಸಂಪಾದನೆ.

೨೦೦೩-೦೪ ಋತುವಿನಲ್ಲಿ ಆಡಿದ್ದು ಒಂದೇ ಪಂದ್ಯ, ಹೈದರಾಬಾದ್ ವಿರುದ್ಧ. ಗಳಿಕೆ ಔಟಾಗದೆ ೧೬ ಓಟಗಳು ಮತ್ತು ಶೂನ್ಯ. ೨೦೦೪-೦೫ ಋತುವಿನಲ್ಲಿ ೩ ಪಂದ್ಯಗಳು. ೭.೦೦ ಸರಾಸರಿಯಲ್ಲಿ ೨೧ ಓಟಗಳು. ಈ ಋತುವಿನಲ್ಲಿ ರಘು ಬೌಲಿಂಗನಲ್ಲಿ ೬೬.೦೦ ಸರಾಸರಿಯಲ್ಲಿ ೩ ಹುದ್ದರಿ ಗಳಿಸಿದ್ದರು. ಒಟ್ಟಾರೆ ಮತ್ತೆ ಕಳಪೆ ಪ್ರದರ್ಶನ. ೨೦೦೫-೦೬ ಋತುವಿಗೆ ಮತೆ ಆಯ್ಕೆಯಾದರು ಆದರೆ ಆಡಿದ್ದು ಒಂದೇ ಪಂದ್ಯ. ಗಳಿಸಿದ್ದು ೧೧ ಓಟಗಳನ್ನು.

೪ ಋತುಗಳು. ೯ ಪಂದ್ಯಗಳು. ೧೦.೨ ಸರಾಸರಿಯಲ್ಲಿ ೧೦೨ ಓಟಗಳು. ಸುಮಾರು ೭೫ರ ಸರಾಸರಿಯಲ್ಲಿ ೩ ಹುದ್ದರಿಗಳು. ಇವು ರಘು ಸಾಧನೆ. ಈ ಅಂಕಿ ಅಂಶಗಳ ಹಿಂದೆ ಆಯ್ಕೆಗಾರರ ಕೊಡುಗೆಯೂ ಇದೆ. ರಘು ತಾನ್ನು ಆಡಿದ ೯ ಪಂದ್ಯಗಳಲ್ಲಿ ಸ್ಥಿರವಾಗಿ ಒಂದೇ ಕ್ರಮಾಂಕದಲ್ಲಿ ಆಡಲಿಲ್ಲ. ಅವರ ಜವಾಬ್ದಾರಿ ಏನು ಎಂಬುದು ಅವರಿಗೇ ತಿಳಿಹೇಳಲಾಗಲಿಲ್ಲ. ಯುವ ಆಟಗಾರನಿಗೆ ಒಂದು ಸಲ ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿದರೆ ಮುಂದಿನ ಪಂದ್ಯದಲ್ಲಿ ೮ನೇ ಕ್ರಮಾಂಕ! ಬೌಲಿಂಗ್ ವಿಭಾಗದಲ್ಲೂ ಸರಿಯಾಗಿ ರಘು ಅವರನ್ನು ಬಳಸಲಿಲ್ಲ.

ಬೆಂಗಳೂರು ಕೆ.ಎಸ್.ಸಿ.ಎ ಲೀಗ್-ನಲ್ಲಿ ಕೆನರಾ ಬ್ಯಾಂಕ್ ಪರ ರಘು ಆಡುತ್ತಾರೆ. ಉಡುಪಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ರಘು ಬಂದಿದ್ದರು. ಕೆನರಾ ಬ್ಯಾಂಕ್ ತಂಡದ ಪ್ರತಿಯೊಂದು ಪಂದ್ಯವನ್ನು ತಪ್ಪದೇ ವೀಕ್ಷಿಸಿದ್ದೆ. ರಘು ಅವರ ಆಟದ ಶೈಲಿ ಬಹಳ ಇಷ್ಟವಾಗಿತ್ತು.

ಹೀಗೆ ರಘು ಕ್ರಿಕೆಟ್ ಭವಿಷ್ಯ ಒಟ್ಟಾರೆ ಗೊಂದಲಮಯವಾಗಿದ್ದಾಗ ೨೦೦೬-೦೭ನೇ ಋತುವಿಗೆ ವೆಂಕಟೇಶ್ ಪ್ರಸಾದ್ ತಂಡದ ಕೋಚ್ ಆಗಿ ನೇಮಕಗೊಂಡರು. ಇವೆಲ್ಲದರ ನಡುವೆ ೨೦೦೫-೦೬ ಋತುವಿನ ದಕ್ಷಿಣ ವಲಯ ಏಕದಿನ ಪಂದ್ಯಗಳಲ್ಲಿ ರಘು ಭರ್ಜರಿ ಪ್ರದರ್ಶನ ನೀಡಿದರು. ಅವರನ್ನು ಸತತವಾಗಿ ಒಂದು ನಿರ್ದಿಷ್ಟ ಕ್ರಮಾಂಕದಲ್ಲಿ ಆಡಿಸಲಾಯಿತು. ಆಯ್ಕೆಗಾರರು ಅವರಲ್ಲಿ ನಂಬಿಕೆಯಿರಿಸಿದಾಗ ರಘು ಭರವಸೆಯ ಆಟ ತೋರ್ಪಡಿಸಿದರು. ಎಲ್ಲಾ ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಘು, ೭ ಪಂದ್ಯಗಳಲ್ಲಿ ೨ ಶತಕದ ಬಾರಿಗಳೊಂದಿಗೆ ೫೭.೦೦ ಸರಾಸರಿಯಲ್ಲಿ ೩೪೨ ಓಟಗಳನ್ನು ಕಲೆಹಾಕಿದರು. ಅವರ ಈ ನಿರ್ವಹಣೆಯನ್ನು ಗಮನದಲ್ಲಿರಿಸಿ ವೆಂಕಿ ರಣಜಿ ಪಂದ್ಯಗಳಲ್ಲಿ ರಘುವನ್ನು ೩ನೇ ಕ್ರಮಾಂಕದಲ್ಲಿ ಆಡಿಸಿದರು. ಕಳೆದ ಋತುವಿನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ರಘು, ಕೋಚ್ ತನ್ನ ಮೇಲಿಟ್ಟ ನಂಬಿಕೆಗೆಗೆ ನಿರಾಸೆ ಮಾಡಲಿಲ್ಲ.

ಕಳೆದ ಋತುವಿನ ಎಲ್ಲಾ ಪಂದ್ಯಗಳಲ್ಲೂ ಆಡಿದ ರಘು, ೩೫.೮ ಸರಾಸರಿಯಲ್ಲಿ ೫೩೭ ಓಟಗಳನ್ನು ಗಳಿಸಿದರು. ಒಟ್ಟಾರೆ ಸರಾಸರಿ ಕಡಿಮೆಯಂತೆ ಕಾಣುತ್ತದೆ ಆದರೆ ರಘು ಪ್ರದರ್ಶಿಸಿದ ಆಟ ಉನ್ನತ ಮಟ್ಟದ್ದಾಗಿತ್ತು. ಉತ್ತರ ಪ್ರದೇಶದ ವಿರುದ್ಧ ಪಂದ್ಯ ನಡೆಯುತ್ತಿತ್ತು. ಗೆಲ್ಲಲು ೧೨೨ ಓಟಗಳನ್ನು ಬೆಂಬತ್ತಿದ ಕರ್ನಾಟಕ ೩ನೇ ದಿನದ ಆಟ ಮುಗಿದಾಗ ೫ ಹುದ್ದರಿ ಕಳಕೊಂಡು ೫೩ ಓಟಗಳನ್ನು ಗಳಿಸಿತ್ತು. ರಘು ಮತ್ತು ಬೇಜವಾಬ್ದಾರಿ ಆಟಗಾರ ಸ್ಟುವರ್ಟ್ ಬಿನ್ನಿ ಮರುದಿನ ಆಟ ಮುಂದುವರಿಸಿದರು. ಎಂದಿನಂತೆ ಸ್ಟುವರ್ಟ್ ಬೇಗನೆ ನಿರ್ಗಮಿಸಿದರು. ಆಗ ತಂಡದ ಮೊತ್ತ ೫೮ ಕ್ಕೆ ೬. ನಂತರ ಸುನಿಲ್ ಜೋಶಿ ನಿರ್ಗಮಿಸಿದಾಗ ಸ್ಕೋರ್ ೭೩ಕ್ಕೆ ೭. ಇನ್ನೂ ೪೯ ರನ್ನು ಗಳ ಅವಶ್ಯಕತೆ. ಗೆಲ್ಲಲೇಬೇಕು ಎಂಬ ಛಲದಿಂದ ಆಡಿದ ರಘು, ಅಖಿಲ್ ಜೊತೆಗೂಡಿ ಅಮೂಲ್ಯ ೪೭ ಓಟಗಳನ್ನು ಕಲೆಹಾಕಿ, ಗೆಲ್ಲಲು ಕೇವಲ ೨ ಓಟಗಳ ಅವಶ್ಯಕತೆ ಇದ್ದಾಗ ಔಟಾದರು. ಗಳಿಸಿದ್ದು ಅತ್ಯುತ್ತಮ ೫೦ ಓಟಗಳನ್ನು. ಆ ಪಂದ್ಯ ಕರ್ನಾಟಕ ಗೆದ್ದಿದ್ದೇ ರಘು ಆಟದಿಂದ.

ರಘು ಅವರ ಆಟದ ಮತ್ತೊಂದು ಅತ್ಯುತ್ತಮ ಪ್ರದರ್ಶನವಾದದ್ದು ಬಂಗಾಲ ವಿರುದ್ಧ ಸೆಮಿ ಫೈನಲ್ ನಲ್ಲಿ. ಪ್ರಥಮ ಬಾರಿಯಲ್ಲಿ ಜುಜುಬಿ ಮೊತ್ತಕ್ಕೆ ತನ್ನ ಇನ್ನಿಂಗ್ಸ್ ಮುಗಿಸಿದ್ದರಿಂದ ಕರ್ನಾಟಕ ಭಾರೀ ಮೊತ್ತದಿಂದ ಹಿನ್ನಡೆಯಲ್ಲಿತ್ತು. ವೇಗವಾಗಿ ಓಟಗಳನ್ನು ಗಳಿಸುವ ಅವಶ್ಯಕತೆ ಇದ್ದಲ್ಲಿ ಬಂಗಾಲದ ಬೌಲರ್ ಗಳು ಲೆಗ್-ಸ್ಟಂಪ್ ಹೊರಗೆ ಬೌಲ್ ಮಾಡುತ್ತಿದ್ದರು. ಆದರೂ ತಾಳ್ಮೆ, ಸಂಯಮ ಕಳಕೊಳ್ಳದೆ ಆಡಿದ ರಘು ಉತ್ತಮ ೮೫ ಓಟಗಳನ್ನು ಗಳಿಸಿದ್ದರು.

ರಘು ಹೊಡೆಬಡಿಯ ಆಟಗಾರನಲ್ಲ. ಹಾಗೇನೆ ನೀರಸ ಆಟವನ್ನೂ ಅವರು ಪ್ರದರ್ಶಿಸುವುದಿಲ್ಲ. ಅವಶ್ಯಕತೆಗೆ ತಕ್ಕಂತೆ ಆಡುವುದು ಅವರ ಶೈಲಿ. ಕಳೆದೆರಡು ಋತುಗಳಲ್ಲಿ ಅವರ ಬ್ಯಾಟಿಂಗ್ ಬಹಳ ಸುಧಾರಿಸಿದೆ. ತನ್ನ ಆಟವನ್ನು ಇನ್ನೂ ಸುಧಾರಿಸಿಕೊಳ್ಳುತ್ತಾ ಕರ್ನಾಟಕಕ್ಕೆ ಇನ್ನಷ್ಟು ಕಾಲ ಆಡುತ್ತಾ ಉತ್ತಮ ಪ್ರದರ್ಶನವನ್ನು ರಘು ನೀಡಲಿ.