ಭಾನುವಾರ, ಡಿಸೆಂಬರ್ 26, 2010

ಕರ್ನಾಟಕ ಕ್ರಿಕೆಟ್ ೧೦ - ಬ್ಯಾರಿಂಗ್ಟನ್ ರೋಲಂಡ್


ತನ್ನ 19ನೇ ವಯಸ್ಸಿನಲ್ಲಿ 1999ರಲ್ಲಿ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದ ಬ್ಯಾರಿಂಗ್ಟನ್, ತನ್ನ ಪ್ರಥಮ ಪಂದ್ಯದಲ್ಲೇ ಕೇರಳ ವಿರುದ್ಧ ಶತಕದ ಬಾರಿಯನ್ನು ಆಡಿದರು. ಗಳಿಸಿದ್ದು 106 ಓಟಗಳನ್ನು. ಆರಂಭಿಕ ಆಟಗಾರನಾಗಿ ಕಿರಿಯರ ಪಂದ್ಯಾಟಗಳಲ್ಲಿ ರಾಜ್ಯ ತಂಡದ ನಾಯಕತ್ವ ವಹಿಸಿ ಓಟಗಳನ್ನು ಸೂರೆಗೈದ ಬ್ಯಾರಿಂಗ್ಟನ್, ರಣಜಿ ಪಂದ್ಯಗಳಲ್ಲೂ ತನ್ನ ಉತ್ತಮ ಆಟವನ್ನು ಮುಂದುವರಿಸಿದರು. ಪ್ರಥಮ ಋತುವಿನ 6 ಪಂದ್ಯಗಳಲ್ಲಿ 46.25 ಸರಾಸರಿಯಲ್ಲಿ 370 ಓಟಗಳನ್ನು ಗಳಿಸಿದರು. 19ರ ಹುಡುಗನಿಗೆ ಭರವಸೆಯ ಆರಂಭ ಎನ್ನಬಹುದು. ಬ್ಯಾರಿಂಗ್ಟನ್ ನ ತಂದೆಯವರು, 1960ರ ದಶಕದಲ್ಲಿ ಇಂಗ್ಲಂಡ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಕೆನೆತ್ ಫ್ರಾಂಕ್ ಬ್ಯಾರಿಂಗ್ಟನ್ ಇವರ ಅಭಿಮಾನಿಯಾಗಿದ್ದರಿಂದ ತಮ್ಮ ಮಗನಿಗೂ ಅದೇ ಹೆಸರನ್ನಿಟ್ಟರು.

’ಬ್ಯಾರಿ’ ಎಂದು ಸಹ ಆಟಗಾರರಿಂದ ಕರೆಯಲ್ಪಡುವ ಬ್ಯಾರಿಂಗ್ಟನ್, ಮೊದಲೆರಡು ಋತುಗಳಲ್ಲಿ 3ನೇ ಕ್ರಮಾಂಕದಲ್ಲಿ ಆಡಿದರು. 2002-03 ಋತುವಿನಿಂದ 2007-08 ಋತುವಿನವರೆಗೆ ಆರಂಭಕಾರನಾಗಿ ಆಡಿರುವ ಬ್ಯಾರಿ, ರಾಹುಲ್ ದ್ರಾವಿಡ್ ನ ಮಹಾಭಕ್ತ. ಎಡೆಬಿಡದೆ ದ್ರಾವಿಡ್ ರನ್ನು ಕಾಡಿ, ಬೇಡಿ ಬ್ಯಾಟಿಂಗ್ ಸಲಹೆಗಳನ್ನು ಪಡೆದುಕೊಂಡು ತನ್ನ ಬ್ಯಾಟಿಂಗ್ ಸುಧಾರಿಸಿಕೊಂಡು ಭರವಸೆ ಮೂಡಿಸಿದವರು. ಸತತವಾಗಿ 9 ಋತುಗಳಲ್ಲಿ ಬ್ಯಾರಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಈ ಒಂಬತ್ತು ಋತುಗಳಲ್ಲಿ ಅವರ ಸರಾಸರಿ ಹೀಗಿದೆ - 46.25, 51.00, 85.00, 65.00, 77.00, 46.23, 19.60, 27.14 ಮತ್ತು 15.66.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ 2005-06 (19.60 ಸರಾಸರಿ) ಮತ್ತು 2006-07 (27.14 ಸರಾಸರಿ) ಋತುಗಳಲ್ಲಿ ಬ್ಯಾರಿಯ ವೈಫಲ್ಯ. ಈ ಎರಡು ಋತುಗಳ ಮೊದಲು ಅವರ ಸರಾಸರಿಯನ್ನು ಗಮನಿಸಿ. ಉತ್ತಮ ಆಟ ಪ್ರದರ್ಶಿಸುತ್ತಾ ಇದ್ದ ಬ್ಯಾರಿಂಗ್ಟನ್ ದೇವಧರ್, ದುಲೀಪ್ ಮತ್ತು ಇರಾನಿ ಟ್ರೋಫಿ ಪಂದ್ಯಾಟಗಳಿಗೂ ದಕ್ಷಿಣ ವಲಯ ಮತ್ತು ಶೇಷ ಭಾರತ ತಂಡಗಳ ಪರವಾಗಿ ಆಯ್ಕೆಯಾಗಿ ಅಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು.

ಕಲಾತ್ಮಕ ಶೈಲಿಯ ಆಟಗಾರನಾಗಿದ್ದು, ತನ್ನ ಕ್ರಿಕೆಟ್‍ನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದ ಬ್ಯಾರಿಗೆ 2005-06 ಋತು ಮುಗಿದ ನಂತರ ಎಲ್ಲೋ ಕೆಲವು ಮತಾಂಧರ ಸಂಪರ್ಕ ಉಂಟಾಗಿದೆ. ತನ್ನ ಆಟದ ಮೇಲಿರುವ ಗಮನ ಕಳೆದುಕೊಂಡಿದ್ದಾರೆ. 2006-07 ಋತು ಆರಂಭವಾಗುವ ಮೊದಲೇ ’ರಿಲಿಜನ್ ಕಮ್ಸ್ ಫರ್ಸ್ಟ್, ದೆನ್ ಎವ್ರಿಥಿಂಗ್ ಎಲ್ಸ್’ ಎಂಬರ್ಥ ಕೊಡುವ ಬೇಜವಾಬ್ದಾರಿ ಹೇಳಿಕೆಗಳು. 2006ರಲ್ಲಿ ಮೈಸೂರಿನಲ್ಲಿ ನಡೆದ ಹರ್ಯಾನ ವಿರುದ್ಧದ ಪಂದ್ಯದ ಬಳಿಕ ಅವರು ಕೊಟ್ಟ ಹೇಳಿಕೆ - ’ಕ್ರಿಕೆಟ್ ಇಸ್ ನಾಟ್ ಎವ್ರಿಥಿಂಗ್ ಇನ್ ಲೈಫ್’. ರಾಜ್ಯ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ. ಅದರಲ್ಲೂ ಯಾರ ಬೆಂಬಲವೂ ಇಲ್ಲದೇ ಸ್ವಂತ ಪರಿಶ್ರಮದಿಂದ ಪ್ರತಿಭೆಯಿಂದ ತಂಡದಲ್ಲಿ ಸ್ಥಾನ ಗಳಿಸಿ ಆಡುತ್ತಿರುವಾಗ ಹೆಮ್ಮೆಯಿಂದ ’ಕ್ರಿಕೆಟ್ ಇಸ್ ಎವ್ರಿಥಿಂಗ್’ ಅಂದುಕೊಂಡು ಆಡಬೇಕೆ ವಿನ: ಹೀಗಲ್ಲ.

2005-06 ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದರೂ, ಆಯ್ಕೆಗಾರರು ಬ್ಯಾರಿಯನ್ನು ಕಡೆಗಣಿಸದೆ 2006-07 ಋತುವಿನ ಎಲ್ಲಾ ಪಂದ್ಯಗಳಲ್ಲೂ ಆಡಿಸಿದ್ದಾರೆ. ಋತುವಿನ ಪ್ರಥಮ ಪಂದ್ಯದಲ್ಲಿ ಯೆರೆ ಗೌಡರಿಗೆ ಆಡಲಾಗದಿದ್ದಾಗ, ಆ ಪಂದ್ಯಕ್ಕೆ ಬ್ಯಾರಿಯನ್ನೇ ಆಯ್ಕೆಗಾರರು ನಾಯಕನನ್ನಾಗಿ ಮಾಡಿದ್ದರು. ಇದು ರಾಜ್ಯಕ್ಕೆ ಬ್ಯಾರಿಯಲ್ಲಿ ಎಷ್ಟು ನಂಬಿಕೆ ಮತ್ತು ಭರವಸೆ ಇತ್ತು ಎಂಬುದನ್ನು ತೋರಿಸುತ್ತದೆ. ಆದರೆ ಬ್ಯಾರಿ ಆಡುತ್ತಿದ್ದ ರೀತಿ ಮತ್ತು ಅವರ ವರ್ತನೆ ನೋಡಿದರೆ ಮುಂದೆ ಕರ್ನಾಟಕಕ್ಕಾಗಿ ಇನ್ನೂ ಆಡಬೇಕೆಂಬ ಇರಾದೆ ಅವರಿಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಜೀವನದಲ್ಲಿ ಅವರ ’ಪ್ರಯಾರಿಟಿ’ ಬದಲಾಗಿತ್ತು. ಕ್ರಿಕೆಟ್ ತೆರೆಯ ಮರೆಗೆ ಸರಿದು ರಿಲೀಜನ್ ತೆರೆಯ ಮುಂದೆ ಬಂದಿತ್ತು. ಆಧ್ಯಾತ್ಮದ ಮುಂದೆ ಕ್ರಿಕೆಟ್‍ಗಾಗಿ ಮಾಡಿದ್ದ ತ್ಯಾಗ, ಪಟ್ಟ ಶ್ರಮ ಇವೆಲ್ಲವೂ ಈಗ ಕುಬ್ಜವೆನಿಸತೊಡಗಿದವು.

ತದನಂತರ ಸಲಹೆಗಳಿಗೆ ದ್ರಾವಿಡ್ ಬಳಿ ತೆರಳುವುದು ನಿಂತುಹೋಯಿತು. ತಾನು ರನ್ನುಗಳನ್ನು ಗಳಿಸಿದರೆ ಅದು ದೇವರ ಇಚ್ಛೆ. ತಾನು ರನ್ನುಗಳನ್ನು ಗಳಿಸದಿದ್ದರೆ ಅದೂ ದೇವರ ಇಚ್ಛೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಯೀದ್ ಅನ್ವರ್ ಮತ್ತು ಸಕ್ಲೇನ್ ಮುಶ್ತಾಕ್ ರಂತಹ ಆಟಗಾರರು ಇದೇ ರೀತಿ ’ರಿಲಿಜನ್’ ಹಿಂದೆ ಓಡಿ ಆಟದ ಮೇಲೆ ಗಮನ ಕಳಕೊಂಡು ಕ್ರಿಕೆಟ್ ಜೀವನವನ್ನು ಕೆಡಿಸಿಕೊಂಡಿರುವ ಉದಾಹರಣೆ ಇರುವಾಗ ಬ್ಯಾರಿ ಹಾಗಾಗದಿರಲಿ ಎಂದು ಕನ್ನಡಿಗರ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಆಶಯವಿತ್ತು. ಆದರೆ ಬ್ಯಾರಿ ಅದ್ಯಾವ ಪರಿ ಚರ್ಚ್ ಮತ್ತು ರಿಲೀಜನ್ ಇವೆರಡರ ವ್ಯಾಮೋಹ ಮತ್ತು ಮೋಡಿಗೆ ಒಳಗಾದರೆಂದರೆ, ಅವರಿಗೆ ಸರ್ವಸ್ವವಾಗಿದ್ದ ಕ್ರಿಕೆಟ್ ಈಗ ನೀರಸವೆನಿಸತೊಡಗಿತು. ಇಷ್ಟು ಸಾಲದೆಂಬಂತೆ ತುಂಬಾ ಜೀವನ ನೋಡಿರುವವರಂತೆ ಇಂಟಲೆಕ್ಚುವಲ್ ಸ್ಟೇಟ್‍ಮೆಂಟುಗಳು! ಬ್ಯಾರಿಯ ಕ್ರಿಕೆಟ್ ಜೀವನ ಹಳಿ ತಪ್ಪುತ್ತಿರುವುದು ಎಲ್ಲರಿಗೂ ಮನವರಿಕೆಯಾಗತೊಡಗಿತ್ತು.

ಮೇಲೆ ಹೇಳಿದಂತೆ ಹಿಂದಿನ ಋತುವಿನಲ್ಲಿ ದಯನೀಯ ವೈಫಲ್ಯ ಕಂಡರೂ 2006-07ರ ಎಲ್ಲಾ ಪಂದ್ಯಗಳಲ್ಲೂ ಬ್ಯಾರಿಯನ್ನು ಆಡಿಸಲಾಯಿತು. ಆದರೂ ಬ್ಯಾರಿ ಮತ್ತೆ ವೈಫಲ್ಯ ಕಂಡರು. ರೋಲಂಡ್ ಬ್ಯಾರಿಂಗ್ಟನ್ ಒಬ್ಬ ಕಲಾತ್ಮಕ ಆರಂಭಿಕ ಆಟಗಾರ. ತನ್ನಲ್ಲಿರುವ ಪ್ರತಿಭೆಗೆ ತಕ್ಕಂತೆ ಆಡಿದರೆ ಈತನನ್ನು ಔಟ್ ಮಾಡಲು ಎದುರಾಳಿ ಬೌಲರ್ ಗಳು ಹೆಣಗಾಡಬೇಕಾಗುತ್ತದೆ. ಇದೇ ಕಾರಣಕ್ಕಾಗಿ, ಆತ ಕಳೆದೆರಡು ಋತುಗಳಲ್ಲಿ ಕ್ರಿಕೆಟ್ ಗಡೆ ಗಮನ ಕಳೆದುಕೊಂಡಿರುವುದನ್ನು ಅರಿತೂ ಆಯ್ಕೆಗಾರರು ಅವರಿಗೊಂದು ಕೊನೆಯ ಅವಕಾಶವನ್ನು (2007-08) ನೀಡಿದರು. ಇದಕ್ಕಾಗಿ ಆಯ್ಕೆ ಸಮಿತಿಯ ಅಧ್ಯಕ್ಷ ಅಶೋಕಾನಂದ್ ಅವರನ್ನು ಅಭಿನಂದಿಸಬೇಕು.

ಆದರೆ ಬ್ಯಾರಿ ಅದಾಗಲೇ ಮಾನಸಿಕವಾಗಿ ಕ್ರಿಕೆಟ್-ನಿಂದ ಬಲು ದೂರ ಹೋಗಿಬಿಟ್ಟಿದ್ದರು. 2007-08 ಋತುವಿನ ಮೊದಲೆರಡು ಪಂದ್ಯಗಳ 3 ಇನ್ನಿಂಗ್ಸ್-ಗಳಲ್ಲಿ ಅವರು ಗಳಿಸಿದ್ದು ಕೇವಲ ೪೭ ರನ್ನುಗಳನ್ನು. ಆ ಬಳಿಕ ಅವರನ್ನು ತಂಡದಿಂದ ಕೈಬಿಡಲಾಯಿತು. ಆ ನಂತರ ಅವರ ಪತ್ತೆನೇ ಇಲ್ಲ. ಅವರ ವಯಸ್ಸಾದರೂ ಎಷ್ಟಿತ್ತು? ಕೇವಲ 27! ಅವರೊಳಗಿನ ಕ್ರಿಕಿಟಿಗ ಆ ಯುವ ವಯಸ್ಸಿಗೆ ಸತ್ತುಹೋಗಿದ್ದ.

ಭಾನುವಾರ, ಡಿಸೆಂಬರ್ 05, 2010

ತಾರಕೇಶ್ವರ ದೇವಾಲಯ - ಹಾನಗಲ್


ತಾರಕೇಶ್ವರ ದೇವಾಲಯದಲ್ಲಿ ತಾವರೆಯ ಅಭೂತಪೂರ್ವ ಕೆತ್ತನೆಯಿದೆ ಎಂದು ಕೇಳಿದ್ದೆ. ಈಗ ಅದನ್ನು ನೋಡಿದ ಬಳಿಕ ತಾವರೆಯನ್ನು ಈ ರೀತಿಯಲ್ಲೂ ಅತ್ಯದ್ಭುತವಾಗಿ ಕೆತ್ತಬಹುದೇ ಎಂದು ಮತ್ತೆ ಮತ್ತೆ ನನ್ನನ್ನೇ ಕೇಳಿಕೊಳ್ಳುತ್ತಿದ್ದೇನೆ. ದೇವಾಲಯದ ಸಮೀಪ ತೆರಳಿದಂತೆ ಇದೊಂದು ಸಾಧಾರಣ ದೇವಾಲಯವಿರಬಹುದು ಎಂಬ ಕಲ್ಪನೆ ಮೂಡತೊಡಗಿತು. ಆದರೆ ಅಗಲ ಸಣ್ಣದಾಗಿದ್ದರೂ ಬಹಳ ಉದ್ದವಿರುವ ಭವ್ಯ ದೇಗುಲವಿದು.


ಮುಖಮಂಟಪ ೨ ಹಂತಗಳಲ್ಲಿದೆ. ಮೊದಲ ಹಂತದಲ್ಲಿ ೧೬ ಕಂಬಗಳಿವೆ ಮತ್ತು ಒಂದೇ ದ್ವಾರವಿದೆ, ಈ ದ್ವಾರ ದೇವಾಲಯದ ಪ್ರಮುಖ ದ್ವಾರವೂ ಹೌದು. ದೊರೆತಿರುವ ಶಾಸನಗಳನ್ನು ಇಲ್ಲೇ ಇರಿಸಲಾಗಿದೆ. ಎರಡನೇ ಹಂತದಲ್ಲಿ ೩ ದ್ವಾರಗಳಿವೆ ಮತ್ತು ೬೪ ಕಂಬಗಳಿವೆ. ನಟ್ಟನಡುವೆ ಛಾವಣಿಯಲ್ಲಿ ತಾವರೆಯ ಅದ್ಭುತ ಮತ್ತು ರಮಣೀಯ ಕೆತ್ತನೆಯಿದೆ. ತಾವರೆಯನ್ನು ಇಷ್ಟು ಸುಂದರವಾಗಿ ಮತ್ತು ಕಲಾತ್ಮಕವಾಗಿ ಕೆತ್ತಿರುವ ಪರಿಯನ್ನು ಪ್ರಶಂಸಿಸದೇ ಇರಲು ಅಸಾಧ್ಯ.


ಈ ಅದ್ಭುತ ತಾವರೆಯ ಮೊದಲ ಎಸಳಿನ ಅರ್ಧಭಾಗ ಬಿದ್ದುಹೋಗಿದೆ. ಈ ಕೆತ್ತನೆಯ ಸಂಪೂರ್ಣ ಸೌಂದರ್ಯವನ್ನು ಸವಿಯಬೇಕಾದರೆ ಅಲ್ಲೇ ನೆಲದಲ್ಲಿ ಕೂತುಕೊಳ್ಳಬೇಕು ಅಥವಾ ಅಂಗಾತ ಮಲಗಿ ಮೇಲೆಯೇ ದಿಟ್ಟಿಸಿ ನೋಡುತ್ತಾ ಕೂಲಂಕೂಷವಾಗಿ ಕೆತ್ತಲಾಗಿರುವ ತಾವರೆಯ ಪ್ರತಿ ಭಾಗದ ಕೆತ್ತನೆಯನ್ನು ಆನಂದಿಸಬೇಕು. ನಾನಂತೂ ಸುಮಾರು ಐದಾರು ನಿಮಿಷ ಅಲ್ಲೇ ಅಂಗಾತ ಬಿದ್ದುಕೊಂಡಿದ್ದೆ. ಅರಳುವ ಕಮಲವನ್ನು ಕಲ್ಪಿಸಿ ಅದನ್ನು ತೆಲೆಕೆಳಗಾಗಿ ಕೆತ್ತನೆ ಮಾಡಿರುವ ನೈಪುಣ್ಯತೆ..ವಾಹ್!


ಕಮಲವನ್ನು ಇಷ್ಟು ಸುಂದರವಾಗಿ ಗುಮ್ಮಟದಂತಹ ರಚನೆಯ ಒಳಮೇಲ್ಮೈಯಲ್ಲಿ ಕೆತ್ತಿರುವಾಗ ಆ ಗುಮ್ಮಟದ ಹೊರಮೇಲ್ಮೈಯೂ ವಿಶಿಷ್ಟವಾಗಿರಬೇಕಲ್ಲವೇ? ಹಾಗಾಗಿ ಮುಖಮಂಟಪದ ಮೇಲೆ ವಿಶಿಷ್ಟ ಮಾದರಿಯ ಗೋಪುರವೊಂದಿದೆ. ಒಳಮೇಲ್ಮೈಯಲ್ಲಿ ಕಮಲವನ್ನು ಹಂತಹಂತವಾಗಿ ಕೆತ್ತುತ್ತಿರಬೇಕಾದರೆ ಈ ಗೋಪುರವನ್ನೂ ಹೊರಗಿನಿಂದ ಹಂತಹಂತವಾಗಿ ಮೆಟ್ಟಿಲುಗಳ ಆಕೃತಿಯಲ್ಲಿ ರಚಿಸಲಾಗಿದೆ.


ಈ ಅತ್ಯಂತ ವಿಶಾಲ ಎರಡು ಹಂತಗಳ ಮತ್ತು ೮೦ ಕಂಬಗಳ ಮುಖಮಂಟಪವನ್ನು ದಾಟಿದರೆ ಸಣ್ಣ ಸುಖನಾಸಿ. ಇಲ್ಲಿರುವ ೨ ಕಂಬಗಳ ಮೇಲೆ ಸುಂದರ ಕೆತ್ತನೆ. ನಂತರ ೭ ತೋಳುಗಳುಳ್ಳ ನವರಂಗದ ದ್ವಾರ. ಪ್ರತಿ ತೋಳಿನಲ್ಲೂ ಸುಂದರ ಕೆತ್ತನೆಯಿದೆ. ಮೇಲೆ ಗಜಲಕ್ಷ್ಮೀಯ ಸುಂದರ ಕೆತ್ತನೆಯಿದೆ. ನವರಂಗದಲ್ಲಿ ನಂದಿ ಆಸೀನನಾಗಿದ್ದು ಪ್ರಭಾವಳಿ ಕೆತ್ತನೆಯಿರುವ ೪ ಸುಂದರ ಕಂಬಗಳಿವೆ. ಈ ಕೆತ್ತನೆಗಳು ಏನನ್ನು ಬಿಂಬಿಸುತ್ತಿವೆ ಎಂದು ತಿಳಿದುಕೊಳ್ಳೋಣವೆಂದರೆ ಅಲ್ಲಿ ಯಾರೂ ಇರಲಿಲ್ಲ.


ಇದೊಂದು ತ್ರಿಕೂಟಾಚಲ ದೇವಾಲಯ. ೩ ಗರ್ಭಗುಡಿಗಳಿದ್ದು ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ. ಎಲ್ಲಾ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದೆ. ಎಡಭಾಗದಲ್ಲಿರುವ ಗರ್ಭಗುಡಿಯಲ್ಲಿ ಶಿವಲಿಂಗವನ್ನಿರಿಸಲಾಗಿದೆ ಮತ್ತು ಈ ಗರ್ಭಗುಡಿಗೆ ಸುಂದರ ಮುಖಮಂಟಪವಿದೆ. ಬಲಭಾಗದಲ್ಲಿರುವ ಗರ್ಭಗುಡಿಯಲ್ಲಿರುವ ವಿಗ್ರಹ ಯಾವುದೆಂದು ತಿಳಿಯಲಿಲ್ಲ. ಈ ಗರ್ಭಗುಡಿಯ ಮುಖಮಂಟಪ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ಈಗ ಗೋಡೆಯನ್ನು ರಚಿಸಿ ಮುಚ್ಚಲಾಗಿದೆ. ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವೆಂದರೆ ನವರಂಗದ ಮೆಲೆ ಸಣ್ಣದೊಂದು ಗೋಪುರವಿದೆ. ಈ ಗೋಪುರದ ಹಿಂದೆಯೇ ಪ್ರಮುಖ ಗರ್ಭಗುಡಿಯ ಮೇಲಿರುವ ಸುಂದರ ಕೆತ್ತನೆಗಳನ್ನೊಳಗೊಂಡಿರುವ ದೊಡ್ಡ ಗೋಪುರವಿದೆ.


ದೇವಾಲಯದ ಗರ್ಭಗುಡಿ ಮತ್ತು ನವರಂಗದ ಹೊರಗೋಡೆಯಲ್ಲಿ ಸುಂದರ ಕೆತ್ತನೆಗಳಿವೆ. ಇವೆಲ್ಲಾ ನಿಧಾನವಾಗಿ ನಶಿಸಿಹೋಗುತ್ತಿವೆ. ಪುರಾತತ್ವ ಇಲಾಖೆ ಈ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರಲ್ಲಿ ಸ್ವಲ್ಪ ತಡಮಾಡಿತೇನೋ. ದೇವಾಲಯದ ಜಾಗಗಳೆಲ್ಲಾ ಒತ್ತುವರಿಗೆ ಬಲಿಯಾಗಿ ಅಲ್ಲೆಲ್ಲ ಮನೆಗಳೆದ್ದಿವೆ. ಸರಿಯಾಗಿ ಪ್ರಾಂಗಣ ಕಟ್ಟಲೂ ಆಗದ ಪರಿಸ್ಥಿತಿ. ಈಗ ಸದ್ಯಕ್ಕೆ ದೇವಾಲಯ, ಸುತ್ತಲಿನ ಮನೆಯ ಮಕ್ಕಳಿಗೆ ಕಣ್ಣಾಮುಚ್ಚಾಲೆ ಆಡುವ ಸ್ಥಳ, ಅಮ್ಮಂದಿರಿಗೆ ಮಕ್ಕಳಿಗೆ ಹಾಲುಣಿಸುವ ಸ್ಥಳ, ಹಿರಿಯರಿಗೆ ದಿನಪತ್ರಿಕೆ ಓದುವ ಸ್ಥಳ...ಇತ್ಯಾದಿ. ಪುರಾತತ್ವ ಇಲಾಖೆಯ ಸಿಬ್ಬಂದಿ ಇಲ್ಲಿ ಇದ್ದೂ ಇಲ್ಲದಂತೆ. ಆತನ ಸುಳಿವೇ ಇರುವುದಿಲ್ಲವಂತೆ.


ಇಷ್ಟೆಲ್ಲಾ ವಿಘ್ನಗಳಿದ್ದರೂ ತಾರಕೇಶ್ವರ ದೇವಾಲಯ ಅವನ್ನೆಲ್ಲಾ ಮೆಟ್ಟಿ ನಿಂತು ವಿಜೃಂಭಿಸುತ್ತಿರುವುದು ಹೆಮ್ಮೆಯ ಸಂಗತಿ. ಹಾನಗಲ್‍ನಲ್ಲಿ ಬಿಲ್ಲೇಶ್ವರ ದೇವಾಲಯ ಮತ್ತು ಒಂದು ಜೈನ ಬಸದಿ ಇರುವ ವಿಷಯ ಚಾರಣ/ಪ್ರಯಾಣ ಆಸಕ್ತ ಭರತ್ ಅವರ ಬ್ಲಾಗಿನಲ್ಲಿ ಓದಿದ ಬಳಿಕವೇ ತಿಳಿದುಬಂತು. ಮೊದಲೇ ಗೊತ್ತಿದ್ದರೆ ತಾರಕೇಶ್ವರನೊಂದಿಗೆ ಇವೆರಡನ್ನೂ ಸಂದರ್ಶಿಸುತ್ತಿದ್ದೆ.

ಭಾನುವಾರ, ನವೆಂಬರ್ 28, 2010

ಚಿಕ್ಕನಂದಿಹಳ್ಳಿಯ ಬಸವೇಶ್ವರ


ನಂದಿಗಾಗಿಯೇ ಮೀಸಲಿರುವ ದೇವಾಲಯವೊಂದಿದೆ ಎಂದು ಗೊತ್ತಾದಾಗ ಚಿಕ್ಕನಂದಿಹಳ್ಳಿಯತ್ತ ಸುಳಿದೆವು. ಈ ಸಣ್ಣ ಸುಂದರ ದೇವಾಲಯವನ್ನು ಬಸವೇಶ್ವರ ದೇವಾಲಯವೆಂದು ಕರೆಯುತ್ತಾರೆ. ದೇವಾಲಯದ ಹೆಬ್ಬಾಗಿಲಲ್ಲಿ ಹಾಕಿರುವ ಫಲಕದಲ್ಲಿ ಬಸವಣ್ಣನವರ ಚಿತ್ರವನ್ನೂ ಹಾಕಿದ್ದಾರೆ! ಅದನ್ನು ಕಂಡು ಒಂದು ಕ್ಷಣ ಗಲಿಬಿಲಿಯುಂಟಾಯಿತು. ಇದು ಈ ಬಸವ(ನಂದಿ)ನ ದೇವಾಲಯವೋ ಅಥವಾ ಆ ಬಸವ(ಬಸವಣ್ಣ)ನ ದೇವಾಲಯವೋ ಎಂದು!


ಸುಮಾರು ೬ ಅಡಿ ಎತ್ತರವಿರುವ ಸುಂದರ ನಂದಿಯ ಮೂರ್ತಿಯನ್ನು ಚೆನ್ನಾಗಿ ಅಲಂಕರಿಸಲಾಗಿತ್ತು. ಶಿವರಾತ್ರಿಯಂದು ಚಿಕ್ಕನಂದಿಹಳ್ಳಿಯ ನಂದಿಗೆ ಯೋಗ. ಆ ದಿನ ಇಲ್ಲಿ ಭರ್ಜರಿ ಜಾತ್ರೆ. ಸುತ್ತಮುತ್ತಲಿನ ಹಳ್ಳಿಯ ಜನರು ಸೇರಿ ಈ ನಂದಿಯನ್ನು ಪೂಜಿಸಿ ಹಬ್ಬದ ವಾತಾವರಣ ಸೃಷ್ಟಿಸುತ್ತಾರೆ. ನಂತರ ಮುಂದಿನ ಶಿವರಾತ್ರಿಯವರೆಗೆ ಚಿಕ್ಕನಂದಿಹಳ್ಳಿಗೆ ಜನರು ಸುಳಿಯುವುದಿಲ್ಲ.


ಗ್ರಾಮದ ಜನರು ದೇವಾಲಯವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಗರ್ಭಗುಡಿಯ ಗೋಡೆಗಳಿಗೆ ಮಾರ್ಬಲ್, ಮತ್ತು ನೆಲಕ್ಕೆ ಗ್ರಾನೈಟ್ ಹಾಕಲಾಗಿದೆ. ಗರ್ಭಗುಡಿಯ ದ್ವಾರಕ್ಕೆ ಬೆಳ್ಳಿಯ ಲೇಪನ (ಬಣ್ಣ) ಹಾಕಲಾಗಿದ್ದು ಮೇಲೆ ನಂದಿಯ ಸಣ್ಣ ಕೆತ್ತನೆಯಿದೆ. ಭಗವಾನ್ ಶಿವನ ಭಕ್ತನಿಗೆ ದೇವಾಲಯದ ಯೋಗ.

ಭಾನುವಾರ, ಅಕ್ಟೋಬರ್ 17, 2010

ಪ್ಯಾರಿಸ್ ಪ್ರಸಂಗ

ನನ್ನ ಮೊದಲ ನೌಕರಿ ಚೆನ್ನೈನಲ್ಲಿ ಆಗಿತ್ತು. ಇಸವಿ ೧೯೯೭ರ ಜುಲಾಯಿ ತಿಂಗಳು. ಈ ಘಟನೆ ನಡೆದದ್ದು ನಾನು ಚೆನ್ನೈಗೆ ಕಾಲಿಟ್ಟ ಮೊದಲ ದಿನವೇ. ಗೆಳೆಯ ವಿಕ್ರಮ್ ಪಾಟೀಲ ಅದಾಗಲೇ ಅಲ್ಲಿ ನೌಕರಿ ಮಾಡುತ್ತಿದ್ದು, ’ಬ್ಯಾಚೆಲರ್ಸ್ ಪ್ಯಾರಡೈಸ್’ ಎಂದೇ ಹೆಸರುವಾಸಿಯಾಗಿರುವ ಟ್ರಿಪ್ಲಿಕೇನ್-ನಲ್ಲಿ ವಾಸವಾಗಿದ್ದ. ಮಧ್ಯಾಹ್ನ ಸುಮಾರು ೨ ಗಂಟೆಗೆ ಚೆನ್ನೈ ತಲುಪಿದ ನನ್ನನ್ನು, ಸ್ಟೇಷನ್-ನಿಂದ ರೂಮಿಗೆ ತಲುಪಿಸಿ ಮತ್ತೆ ಆಫೀಸಿಗೆ ತೆರಳಿದ. ಸಂಜೆ ಸುಮಾರು ೫.೩೦ಕ್ಕೆ ಆಫೀಸಿನಿಂದ ಬಂದು, ’ಇಲ್ಲೇ ಹೋಗಿ ಬರುತ್ತೇನೆ. ನನ್ನ ಗೆಳೆಯನೊಬ್ಬ ಬರಲಿದ್ದಾನೆ. ಸ್ವಲ್ಪ ಕಾಯಲು ಹೇಳು’ ಎಂದು ತಿಳಿಸಿ ಎಲ್ಲೋ ಹೋದ.

ಬೆಂಗಳೂರಿನಲ್ಲಿ ’ಮಜೆಸ್ಟಿಕ್’, ಮಂಗಳೂರಿನಲ್ಲಿ ’ಸ್ಟೇಟ್-ಬ್ಯಾಂಕ್’ ಇದ್ದಂತೆ ಚೆನ್ನೈ ನಗರದ ಕೇಂದ್ರ ಬಸ್ಸು ನಿಲ್ದಾಣಕ್ಕೆ ’ಪ್ಯಾರೀಸ್’ ಎನ್ನುತ್ತಾರೆ ಎಂದು ನನಗೆ ಗೊತ್ತೇ ಇರಲಿಲ್ಲ.

ಸ್ವಲ್ಪ ಹೊತ್ತಿನಲ್ಲಿ ಆ ಗೆಳೆಯ ಆಗಮಿಸಿದ. ವಿಕ್ರಮ್ ಈಗ ಬರಲಿದ್ದಾನೆ, ಸ್ವಲ್ಪ ಹೊತ್ತು ಕಾಯುವಿರಂತೆ ಎಂದು ಕುಳಿತುಕೊಳ್ಳಲು ಹೇಳಿದೆ. ’ನೋ ಪ್ರಾಬ್ಲೆಮ್, ಐ ವಿಲ್ ವೈಟ್. ಬೈ ದ ವೇ ಐ ಯಾಮ್ ಪುರುಷೋತ್ತಮ್, ಯು ಕ್ಯಾನ್ ಕಾಲ್ ಮಿ ಪುರುಷ್’ ಎಂದು ನನ್ನನ್ನು ದಂಗುಬಡಿಸಿದ!

ನಾನು: ನೀವು ವಿಕ್ಕಿಗೆ ಹೇಗೆ ಪರಿಚಯ?

ಪುರುಷ್: ಒಟ್ಟಿಗೆ ಧಾರವಾಡದಲ್ಲಿ ಓದಿದ್ವಿ.

ನಾನು: ಈಗ ಏನು ಮಾಡ್ತಾ ಇದ್ದೀರಾ?

ಪುರುಷ್: ಸಿ.ಎ ಮಾಡ್ತಾ ಇದ್ದೀನಿ.

ನಾನು: ಎಲ್ಲಿ?

ಪುರುಷ್: ಪ್ಯಾರೀಸ್-ನಲ್ಲಿ

ನಾನು: ಓ, ಪ್ಯಾರಿಸ್! ಈಗ ’ಅಲ್ಲಿಂದಾ’ ಬಂದ್ರಾ?! (ನಾನು ಯೋಚನೆ ಮಾಡ್ತಾ ಇದ್ದಿದ್ದು ಫ್ರಾನ್ಸ್ ರಾಜಧಾನಿ - ಆತ ಪುರುಷ್ ಎಂದು ಪರಿಚಯ ಮಾಡಿಕೊಂಡಿದ್ದು ನಾನು ಈ ತರಹ ಯೋಚಿಸಲು ಇನ್ನಷ್ಟು ಪುಷ್ಟಿ ನೀಡಿತು)

ಪುರುಷ್: ಯಾ.

ನಾನು: ಮತ್ತೆ ಈಗ? ಧಾರವಾಡಕ್ಕಾ?

ಪುರುಷ್: ಧಾರ್ವಾಡಾಆ‌ಆ‌ಅ..?! ಇಲ್ಲಪ್ಪಾ. ವಾಪಸ್ ಪ್ಯಾರೀಸ್-ಗೆ.

ನಾನು: ???!!! (ಎಲಾ ಇವನಾ. ತಮಾಷೆ ಮಾಡ್ತಿದ್ದಾನೋ ಹೇಗೆ ಎಂದು ಮತ್ತಷ್ಟು ಗೊಂದಲಕ್ಕೊಳಗಾದರೂ, ಮತ್ತೆ ಕೇಳಿದೆ...) ವಾಪಸ್ ಪ್ಯಾರಿಸ್?! ಮತ್ತೆ ಅಷ್ಟು ದೂರಾ ಬಂದಿದ್ದು ಬರೀ ವಿಕ್ಕಿನ ಭೇಟಿ ಮಾಡ್ಲಿಕ್ಕೋ?!

ಪುರುಷ್: ಇಲ್ಲ. ಸ್ವಲ್ಪ ಝೆರಾಕ್ಸ್ ಮಾಡ್ಲಿಕ್ಕೆ ಇತ್ತು. ಅದ್ಕೆ ಬಂದೆ. ಹಾಗೆ ವಿಕ್ಕಿ ಭೇಟಿ ಮಾಡೋಣ ಎಂದು ಈ ಕಡೆ ಬಂದೆ.

ನಾನು: ಏನು??????????? ಝೆರಾಕ್ಸ್ ಮಾಡ್ಲಿಕ್ಕಾ!!!!!!!!!! (ಈಗಂತು ನನಗೆ ಫುಲ್ಲು ತಲೆ ಕೆಟ್ಟೋಗಿತ್ತು. ಬರೀ ಝೆರಾಕ್ಸ್ ಮಾಡ್ಲಿಕ್ಕೆ ಪ್ಯಾರಿಸ್-ನಿಂದ ಇಲ್ಲಿಗೆ ಬರೋದು ಅಂದ್ರೆ... ಎಲ್ಲಿ ವಿಮಾನದಲ್ಲಿ ಫುಲ್ ಲೋಡ್ ತಂದಿದ್ದಾನೋ ಎಂಬ ಎಕ್ಸ್-ಟ್ರೀಮ್ ಯೋಚನೆಗಳೆಲ್ಲಾ ಬರತೊಡಗಿದವು)

ಪುರುಷ್: ಹೌದು. ಬಲ್ಕ್ ಝೆರಾಕ್ಸ್ ಮಾಡಿದ್ರೆ ಇಲ್ಲಿ ಸ್ವಲ್ಪ ಕಡಿಮೆ.

ನಾನು: !!!!!!!!!!!!!!!!!!!! (ಈಗಂತೂ ತಲೆ ಕೂದಲನ್ನು ಹಿಡಿದು ಜಗ್ಗುವಷ್ಟು ತಲೆ ಕೆಟ್ಟಿತ್ತು. ಇಂವ ನನ್ನನ್ನು ಫೂಲ್ ಮಾಡ್ತಿದ್ದಾನೋ ಹೇಗೆ? ಏನ್ರೀ ತಮಾಷೆ ಮಾಡ್ತಿದ್ದೀರಾ ಎಂದು ಗದರಿಸಿಬಿಡೋಣವೆನಿಸಿದರೂ ಸುಮ್ಮನಾದೆ. ಯಾಕೆಂದರೆ ಪುರುಷ್ ಗಂಭೀರನಾಗಿ ಮಾತನಾಡುತ್ತಿದ್ದ. ಪ್ಯಾರಿಸ್ ದುಬಾರಿ ಊರಾದರೂ ಝೆರಾಕ್ಸ್-ಗೋಸ್ಕರ ಇಲ್ಲಿವರೆಗೆ.... ಛೇ ಇರಲಿಕ್ಕಿಲ್ಲ ಎಂದೆನಿಸಿತು. ಎಲ್ಲಾ ಗೊಂದಲಮಯವಾಗಿತ್ತು.)

ಆಗ ವಿಕ್ರಮ್ ಬಂದು, ಅವರಿಬ್ಬರು ಮತ್ತೆಲ್ಲೋ ಹೋದರು. ನಂತರ ವಿಕ್ರಮ್ ಮರಳಿದ ಬಳಿಕ ನಾನು ಆತನಿಗೆ ನಡೆದದ್ದನ್ನು ತಿಳಿಸಿದಾಗ, ಆತ ಹೊಟ್ಟೆ ಹುಣ್ಣಾಗುವಂತೆ ನಕ್ಕು, ’ಲೇ ಹಾಪ, ಪ್ಯಾರೀಸ್ ಇಲ್ಲೇ ಐತ್-ಲೇ. ಬಸ್-ಸ್ಟ್ಯಾಂಡಿಗೆ ಪ್ಯಾರೀಸ್ ಅಂತಾರೆ’ ಎನ್ನುತ್ತಾ ಮತ್ತೆ ಮತ್ತೆ ನಕ್ಕ. ಅಷ್ಟಕ್ಕೆ ಸುಮ್ಮನಾಗದೆ, ಟ್ರಿಪ್ಲಿಕೇನ್-ನಲ್ಲಿ ವಾಸವಾಗಿದ್ದ ಎಲ್ಲಾ ಕನ್ನಡಿಗರಿಗೆ ಮತ್ತು ಪರಿಚಯವಿದ್ದ ತಮಿಳರಿಗೆ ಮುಂದಿನ ನಾಲ್ಕೈದು ದಿನಗಳವರೆಗೆ ಈ ’ಪ್ಯಾರಿಸ್ ಪ್ರಸಂಗ’ವನ್ನು ವಿವರಿಸಿ ಇನ್ನಷ್ಟು ನಕ್ಕ. ತನ್ನ ಆಫೀಸಿನಲ್ಲೂ ಸಹೋದ್ಯೋಗಿಗಳಿಗೆ ಸಿಹಿ ಹಂಚಿದಂತೆ ಈ ಸುದ್ದಿಯನ್ನು ಹಂಚಿ ಮತ್ತಷ್ಟು ಆನಂದಿಸಿದ. ವಿಕ್ರಮ್ ಒಬ್ಬ ಮರೆಗುಳಿ. ನಾಲ್ಕು ದಿನಗಳ ಬಳಿಕ ಆ ಘಟನೆಯನ್ನೇ ಮರೆತುಬಿಟ್ಟ. ಇಲ್ಲವಾದಲ್ಲಿ ಇನ್ನೆಷ್ಟು ಜನರಿಗೆ ವಿವರಿಸಿ ನಗುದಿತ್ತೋ!

ಗುರುವಾರ, ಅಕ್ಟೋಬರ್ 07, 2010

ಅವಿತಿರುವ ಚೆಲುವೆಯತ್ತ...


ನಾಲ್ಕು ವರ್ಷಗಳ ಹಿಂದೆ ಜಲಧಾರೆಯೊಂದಕ್ಕೆ ಭೇಟಿ ನೀಡಿ ಹಿಂತಿರುಗುವಾಗ ಕಡಿದಾದ ಏರುದಾರಿಯಲ್ಲಿ ಬಳಲಿ ಒಂದೆಡೆ ಕುಳಿತು ವಿಶ್ರಮಿಸುತ್ತಿದ್ದೆ. ಆಗ ದೂರದಲ್ಲಿ ಮಗದೊಂದು ಬೆಟ್ಟದಲ್ಲಿ ಜಲಧಾರೆಯೊಂದು ನೇರ ರೇಖೆಯಂತೆ ಧುಮುಕುತ್ತಿರುವುದು ಕಾಡಿನ ನಡುವಿನಿಂದ ಅಸ್ಪಷ್ಟವಾಗಿ ಕಾಣುತ್ತಿತ್ತು. ಜೊತೆಯಲ್ಲಿದ್ದ ಹಳ್ಳಿಗರಲ್ಲಿ ವಿಚಾರಿಸಿದಾಗ ಅದೇ ಹಳ್ಳಿಯ ಪರಿಧಿಯೊಳಗಿರುವ ಇನ್ನೊಂದು ಜಲಧಾರೆಯದು ಎಂದು ತಿಳಿದುಬಂತು. ಮಳೆಗಾಲದಲ್ಲಿ ಹೋಗಲು ಅಸಾಧ್ಯ ಮತ್ತು ಮಳೆ ಸ್ವಲ್ಪ ಕಡಿಮೆಯಾದರೆ ಜಲಧಾರೆಯಲ್ಲಿ ನೀರೇ ಇರುವುದಿಲ್ಲ ಎಂಬುವುದನ್ನೂ ಹಳ್ಳಿಗರು ತಿಳಿಸಿದರು. ಅಂತೂ ನಾಲ್ಕು ವರ್ಷಗಳ ಬಳಿಕ ಮೊನ್ನೆ ರವಿವಾರ ಸರಿಯಾದ ’ಟೈಮಿಂಗ್’ ನೋಡಿ ಜಲಧಾರೆಯೆಡೆ ಹೊರಟೆ. ನನ್ನೊಡನೆ ಮೂರ್ನಾಲ್ಕು ಚಾರಣಿಗರು ಬರಬಹುದು ಎಂದುಕೊಂಡರೆ ಸಂಖ್ಯೆ ೧೪ ತಲುಪಿತ್ತು! ಆದರೆ ಎಲ್ಲರೂ ಪ್ರಕೃತಿ ಪ್ರಿಯರು ಎಂಬುವುದು ಸಮಾಧಾನದ ವಿಷಯ.


ಸಾಧಾರಣವಾಗಿರುವ ಮತ್ತು ನೇರವಾಗಿ ಧುಮುಕುವ ಸರಳ ಜಲಧಾರೆಯಾಗಿರಬಹುದೆಂಬ ನನ್ನ ಊಹೆ ತಪ್ಪಾಗಿತ್ತು! ಪ್ರಕೃತಿ ತನ್ನ ಆರಾಧಕರನ್ನು ಮತ್ತೆ ಮತ್ತೆ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ ಎಂಬ ಮಾತಲ್ಲಿ ಯಾವುದೇ ಸಂಶಯವಿಲ್ಲ. ನಾನು ಇದುವರೆಗೆ ಭೇಟಿ ನೀಡಿರುವ ಅತ್ಯುತ್ತಮ ಜಲಧಾರೆಗಳಲ್ಲಿ ಇದೂ ಒಂದು. ಆ ನೋಟ, ಆ ಅನುಭವ ಮತ್ತು ಆ ಪರಿಸರ ಎಲ್ಲವೂ ಸ್ವರ್ಗಸದೃಶ. ಈ ಜಲಧಾರೆಗೆ ದಾರಿ ಬೆಟ್ಟವೊಂದರ ಇಳಿಜಾರಿನಲ್ಲಿ ಸಾಗಿ ನಂತರ ಹಳ್ಳಗುಂಟ ಸಾಗುತ್ತದೆ. ಕೊನೆಯ ೨೦ ನಿಮಿಷಗಳ ಚಾರಣ ವಿವಿಧ ಗಾತ್ರಗಳ ಕಲ್ಲು ಬಂಡೆಗಳ ರಾಶಿಯನ್ನು ಏರುತ್ತಾ ಸಾಗಬೇಕಾಗುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಇಂತಹ ಒಂದು ಬಂಡೆಯನ್ನೇರಿ ಮುಂದಿನ ದಾರಿಗಾಗಿ ಕತ್ತೆತ್ತಿದರೆ ಕಾಣುವುದು ಜಲಧಾರೆಯ ಅದ್ಭುತ ಮತ್ತು ಅಪ್ರತಿಮ ನೋಟ. ಆ ಕ್ಷಣದಲ್ಲಿ ಕಂಡುಬಂದ ಈ ಜಲಧಾರೆಯ ಸೊಬಗು ವರ್ಣಿಸಲಸಾಧ್ಯ. ಇಂತಹ ತಾಣಗಳನ್ನು ಸೃಷ್ಟಿಸಿ, ಅಲ್ಲಿಗೆ ಭೇಟಿ ನೀಡಲು ಅವಕಾಶವನ್ನೂ ಕಲ್ಪಿಸುವ ಆ ಸೃಷ್ಟಿಕರ್ತನಿಗೆ ಅನಂತ ಧನ್ಯವಾದಗಳು.

ಗುರುವಾರ, ಸೆಪ್ಟೆಂಬರ್ 23, 2010

ಚಂದ್ರಮೌಳೇಶ್ವರ ದೇವಾಲಯ - ಅರಸೀಕೆರೆ


ಅರಸೀಕೆರೆಯ ಚಂದ್ರಮೌಳೇಶ್ವರ ದೇವಾಲಯ ತನ್ನ ವಿಶಿಷ್ಟವಾದ ಮುಖಮಂಟಪದಿಂದ ಪ್ರಸಿದ್ಧಿಯನ್ನು ಪಡೆದಿದೆ. ಹೊಯ್ಸಳ ದೇವಾಲಯಗಳೆಲ್ಲೂ ಈ ಶೈಲಿಯ ಮುಖಮಂಟಪ ಕಾಣಬರುವುದಿಲ್ಲ. ಇಸವಿ ೧೨೨೦ರಲ್ಲಿ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಪೂರ್ವಾಭಿಮುಖವಾಗಿರುವ ಈ ದೇವಾಲಯ ನಿರ್ಮಾಣಗೊಂಡಿದೆ. ಹನ್ನೊಂದನೇ ಶತಮಾನದಲ್ಲಿ ಹೊಯ್ಸಳ ದೊರೆ ತನ್ನ ಅರಸಿಯ ಹೆಸರಿನಲ್ಲಿ ಇಲ್ಲಿ ಬೃಹತ್ ಕೆರೆಯೊಂದನ್ನು ನಿರ್ಮಿಸಿದ್ದರಿಂದ ಈ ಊರಿಗೆ ಅರಸೀಕೆರೆ ಎಂಬ ಹೆಸರು ಬಂದಿದೆ. ಶಾಸನಗಳಲ್ಲಿ ಅರಸೀಕೆರೆಯನ್ನು ’ಸರ್ವಜ್ಞ ವಿಜಯ’ ಮತ್ತು ’ಬಲ್ಲಾಳಪುರ’ ಎಂದು ಕರೆಯಲಾಗಿದೆ.


ನಕ್ಷತ್ರಾಕರದ ವಿನ್ಯಾಸದಿಂದ ಕೂಡಿರುವ ಮುಖಮಂಟಪದಲ್ಲಿ ಕುಳಿತುಕೊಂಡು ಟೈಮ್ ಪಾಸ್ ಮಾಡುವುದೇ ಒಂದು ಸಂತೋಷದ ಅನುಭವ. ಸುತ್ತಲೂ ಇರುವ ಕಲ್ಲಿನ ಆಸನಗಳನ್ನು ಆನೆಗಳು ಹೊತ್ತಿರುವಂತೆ ವಿನ್ಯಾಸಗೊಳಿಸಲಾಗಿದೆ. ಈ ದೇವಾಲಯವನ್ನು ’ಶಿವಾಲಯ’ವೆಂದೂ ಕರೆಯುತ್ತಾರೆ.


ಈ ಏಕಕೂಟ ದೇವಾಲಯದ ಗೋಪುರವನ್ನು ೫ ತಾಳಗಳಲ್ಲಿ ನಿರ್ಮಿಸಲಾಗಿದ್ದು, ಇವುಗಳ ಮೇಲೊಂದು ಪದ್ಮವನ್ನಿರಿಸಿ ನಂತರ ಕಳಸವೊಂದನ್ನು ಕೂರಿಸಲಾಗಿದೆ. ಗೋಪುರದ ಮುಂಭಾಗದಲ್ಲಿ ನಂದಿಯ ಮೂರ್ತಿಯನ್ನು ನಿಲ್ಲಿಸಲಾಗಿದೆ. ಹೆಚ್ಚಾಗಿ ಸಳ ಹುಳಿಯನ್ನು ಕೊಲ್ಲುವ ಕೆತ್ತನೆ ಇರುವ ಸ್ಥಳದಲ್ಲಿ ಈ ನಂದಿಯ ಮೂರ್ತಿ ಕಂಡು ಸೋಜಿಗವಾಯಿತು. ಇಲ್ಲಿ ಮತ್ತು ಹಾರ್ನಹಳ್ಳಿಯ ಒಂದು ದೇವಾಲಯದಲ್ಲೂ ಗೋಪುರದ ಮುಂಭಾಗದಲ್ಲಿ ನಂದಿ ಆಸೀನನಾಗಿರುವುದು ಅಚ್ಚರಿ ಮೂಡಿಸಿತು.


ನವರಂಗದ ದ್ವಾರಕ್ಕೆ ಬೀಗ ಹಾಕಲಾಗಿದ್ದರಿಂದ ನಮಗೆ ದೇವಾಲಯದ ಒಳಗೆ ತೆರಳಲು ಆಗಲಿಲ್ಲ. ನವರಂಗ ಮತ್ತು ಗರ್ಭಗುಡಿಗಳ ದ್ವಾರದಲ್ಲಿ ಅಪೂರ್ವ ಕೆತ್ತನೆಗಳಿವೆಯೆಂದು ಓದಿದ್ದೆ. ದೇವಾಲಯದ ಹೊರಗೋಡೆಯ ತುಂಬಾ ಕೆತ್ತನೆಗಳ ರಾಶಿ. ಈ ದೇವಾಲಯದ ಸಮೀಪದಲ್ಲೇ ಇನ್ನೊಂದು ಶಿವ ದೇವಾಲಯವಿದೆ. ಇಲ್ಲಿರುವ ಎರಡೂ ಗರ್ಭಗೃಹಗಳಲ್ಲಿ ಶಿವಲಿಂಗವಿದ್ದು ವೀರೇಶ್ವರ ಮತ್ತು ಬಕ್ಕೇಶ್ವರ ಎಂದು ಕರೆಯಲಾಗುತ್ತದೆ.

ಮಾಹಿತಿ: ಐ.ಸೇಸುನಾಥನ್ ಮತ್ತು ಪ್ರೇಮಕುಮಾರ್

ಗುರುವಾರ, ಸೆಪ್ಟೆಂಬರ್ 09, 2010

ಚಾರಣ ಚಿತ್ರ - ೮


ಕಾನನದ ನಡುವೆ ಬೆಳ್ನೊರೆ...

ಶನಿವಾರ, ಆಗಸ್ಟ್ 21, 2010

ಹಸಿರಿನ ದೊರೆ ಈ ಜಲಧಾರೆ


ಈ ಹಳ್ಳಿಯ ದಾರಿಯಾಗಿ ಪ್ರಯಾಣಿಸುವಾಗ ಗದ್ದೆಗಳಾಚೆ ಹಸಿರನ್ನು ಹೊತ್ತು ನಿಂತಿರುವ ಬೆಟ್ಟದ ನಡುವೆ ಜಲಧಾರೆಯೊಂದು ಧುಮುಕುವುದನ್ನು ನೋಡಲು ಯಾವಾಗಲೂ ಕಾತುರದಿಂದ ಕಾಯುತ್ತಿದ್ದೆ. ಒಂದೆರಡು ಬಾರಿ ಬೈಕಿನಲ್ಲಿ ಈ ದಾರಿಯಾಗಿ ತೆರಳುವಾಗ ಈ ಜಲಧಾರೆಯ ಚಿತ್ರ ತೆಗೆದು ಪ್ರಯಾಣ ಮುಂದುವರಿಸಿದ್ದಿದೆ. ಆದರೆ ಜಲಧಾರೆಯ ಸನಿಹ ತೆರಳಿರಲಿಲ್ಲ.


ಅಗೋಸ್ಟ್ ೧೫, ೨೦೦೭. ಎಂದಿನಂತೆ ರಜಾದಿನ. ರಾಕೇಶ್ ಹೊಳ್ಳನೊಂದಿಗೆ ಈ ಜಲಧಾರೆಯತ್ತ ಹೊರಟೆ. ಇನ್ನೇನು ಹಳ್ಳಿ ಸುಮಾರು ೨೦ಕಿಮಿ ದೂರವಿರುವಾಗ ಅದೇನೋ ದೊಡ್ಡ ಸದ್ದು. ಡ್ರೈವರ್ ಬಸ್ಸನ್ನು ನಿಧಾನಗೊಳಿಸಿ ರಸ್ತೆಯ ಬದಿಗೆ ತಂದು ನಿಲ್ಲಿಸಿದ. ಹಿಂದಿನ ಗಾಲಿಯೊಂದು ಪಂಕ್ಚರ್. ೧೫ ನಿಮಿಷದಲ್ಲಿ ಬಂದ ಮತ್ತೊಂದು ಬಸ್ಸಲ್ಲಿ ಹಳ್ಳಿ ತಲುಪಿದಾಗ ೨.೩೦ ಆಗಿತ್ತು. ಅಲ್ಲಿನ ಹೋಟೇಲೊಂದರಲ್ಲಿ ಊಟ ಮುಗಿಸಿ ಹೋಟೇಲ್ ಮಾಲೀಕಳಲ್ಲಿ ಆ ಜಲಧಾರೆಗೆ ದಾರಿ ಕೇಳಿದಾಗ, ’ಜ್ವಾಗ್ ಫಾಲ್ಸಾ, ಹೋಗ್ಲಿಕ್ಕೆ ಕಷ್ಟಾತು, ಯಾರಾದ್ರು ಜೊತೆಗಿದ್ರೆ ಚಲೋದು’ ಅಂದಳು. ಪ್ರತಿ ಊರಿನವರಿಗೆ ತಮ್ಮ ತಮ್ಮ ಊರಿನ ಫಾಲ್ಸು, ಜೋಗ್ ಫಾಲ್ಸೇ! ಅಲ್ಲೊಬ್ಬರು ಸಿಕ್ಕಿದರು ರೋಹಿದಾಸ್ ಎಂದು. ನಮ್ಮಿಬ್ಬರನ್ನು ಜಲಧಾರೆಗೆ ಕರೆದೊಯ್ಯಲು ಒಪ್ಪಿದರು. ಅವರ ಮಗ ಅವಿನಾಶನೂ ಜೊತೆಗೆ ಬಂದ.


ಹಳ್ಳಿಯಲ್ಲೇ ೧೫ ನಿಮಿಷ ನಡೆದ ಬಳಿಕ ಕಾಡನ್ನು ಹೊಕ್ಕೆವು. ಕೇವಲ ೨೫ ನಿಮಿಷದಲ್ಲಿ, ಸುಮಾರು ೭೦ ಅಡಿ ಮೇಲಿನಿಂದ ನೀರು ಹಂತಹಂತವಾಗಿ ಬೀಳುವ ಸ್ಥಳವನ್ನು ತಲುಪಿದೆವು. ಸಾಧಾರಣವಾದ ನೋಟ. ಇದೇ ಜಲಧಾರೆ ಎಂದು ರೋಹಿದಾಸ್ ಎಂದಾಗ ನಂಬಲಾಗಲಿಲ್ಲ. ಹಳ್ಳಿಯಿಂದ ಅಷ್ಟು ಆಕರ್ಷಕವಾಗಿ ಜಲಧಾರೆ ಕಾಣಿಸುತ್ತಿದ್ದರೆ, ಇಲ್ಲಿ ಸಾಧಾರಣ ನೋಟ! ’ಇದೇನಾ ರಸ್ತೆಯಿಂದ ಕಾಣೋದು’ ಎಂದು ರೋಹಿದಾಸನಲ್ಲಿ ಕೇಳಿದರೆ, ’ಹ್ಹೆ ಹ್ಹೆ ಇದಲ್ಲ. ಅದಿನ್ನೂ ಮೇಲಿದೆ. ಅಲ್ಲಿಗೆ ಹೋಗೋದು ನಿಮ್ಗಾಕ್ಲಿಕ್ಕಿಲ್ಲ. ಕಷ್ಟ. ಹತ್ಬೇಕು’ ಎಂದ. ನನ್ನ ದಢೂತಿ ಆಕಾರ ನೋಡಿ ಅವರಿಗೆ ಡೌಟು.


ಕಡಿದಾದ ಕಣಿವೆಯಲ್ಲಿ ಹುಲ್ಲು ಗಿಡಗಳ ಮಧ್ಯೆ ದಾರಿ ಮಾಡಿಕೊಂಡು ಮೇಲೇರಿದೆವು. ಮುಂಜಾನೆ ಮಳೆಯಾಗಿದ್ದರಿಂದ ನೆಲವೆಲ್ಲಾ ಒದ್ದೆ ಮತ್ತು ಜಾರುತ್ತಿತ್ತು. ಜಾರಿ ಬಿದ್ದರೆ ಹಿಡಿದುಕೊಳ್ಳಲು ಬೇಕಾದಷ್ಟು ಗಿಡಗಳಿವೆ ಎಂಬ ಧೈರ್ಯದಲ್ಲಿ ನಿಧಾನವಾಗಿ ಮೇಲೇರತೊಡಗಿದೆ. ಒಂದೆರಡು ಕಡೆ ಜಾರಿದರೂ ಬಳ್ಳಿಗಳನ್ನು ಆಧಾರವಾಗಿ ಹಿಡಿದಿದ್ದರಿಂದ ಬಚಾವಾದೆ.


ಚಾರಣದ ಹಾದಿ ೪೫ ನಿಮಿಷದ್ದೇ ಆಗಿದ್ದರೂ ಕೊನೆಯ ೨೦-೨೫ ನಿಮಿಷದ ಏರುಹಾದಿ ರೋಮಾಂಚನಕಾರಿಯಾಗಿತ್ತು.ಜಲಧಾರೆಯ ಬದಿಗೆ ಬಂದು ತಲುಪಿದಾಗ ಕಂಡ ದೃಶ್ಯ ಅಮೋಘ. ಜಲಧಾರೆ ಎಣಿಸಿದ್ದಕ್ಕಿಂತ ಅದೆಷ್ಟೋ ಪಟ್ಟು ಚೆನ್ನಾಗಿತ್ತು. ಒಂದೇ ನೆಗೆತಕ್ಕೆ ಸುಮಾರು ೧೦೦ಅಡಿಯಷ್ಟು ಎತ್ತರದಿಂದ ಧುಮುಕುತ್ತಿದ್ದ ದೃಶ್ಯವನ್ನು ಅತಿ ಹತ್ತಿರದಿಂದ ಕಂಡು ಮನಸ್ಸು ಹಾರಾಡತೊಡಗಿತು. ತನ್ನ ಇಕ್ಕೆಲಗಳಲ್ಲಿ ಕಾಡಿನ ಹಸಿರನ್ನು ಕಾವಲುಗಾರರನ್ನಾಗಿರಿಸಿ ರಾಜಗಾಂಭೀರ್ಯದಿಂದ ಧುಮುಕುತ್ತಿದ್ದ ಜಲಧಾರೆಯನ್ನು ಬಹಳ ಇಷ್ಟಪಟ್ಟೆ.


ರಾಕೇಶ, ಅವಿನಾಶನೊಂದಿಗೆ ಜಲಧಾರೆಯ ತಳದ ಸಮೀಪದಲ್ಲಿದ್ದರು. ಅಲ್ಲಿ ಆಚೀಚೆ ಓಡಾಡಿ ಒಂದೆರಡು ಉತ್ತಮ ಚಿತ್ರಗಳನ್ನು ತೆಗೆದರು. ಇಲ್ಲಿ ಹಾಕಿರುವ ಚಿತ್ರ ಅವರ ಮೊಬೈಲಿನಿಂದ ತೆಗೆದದ್ದು. ಕೆಳಗಿಳಿದು ಜಲಧಾರೆಯ ಮುಂದೆ ನಿಂತರೆ ಈ ದೃಶ್ಯ ಕಾಣಬರುವುದು. ಬಂಡೆಗಳೆಲ್ಲಾ ಜಾರುತ್ತಿದ್ದರಿಂದ ಕೆಳಗಿಳಿಯುವ ಸಾಹಸ ನಾನು ಮಾಡಲಿಲ್ಲ. ಅಲ್ಲೇ ಬದಿಯಲ್ಲಿ ಕುಳಿತು ಜಲಧಾರೆಯ ಸೌಂದರ್ಯವನ್ನು ಆಸ್ವಾದಿಸತೊಡಗಿದೆ.


ನಂತರ ಹಳ್ಳಿಯಲ್ಲಿ ರೋಹಿದಾಸ ಮತ್ತು ಅವಿನಾಶನಿಗೆ ವಿದಾಯ ಹೇಳಿ ಬಸ್ಸು ನಿಲ್ದಾಣದಲ್ಲಿ ನಿಂತೆವು. ವೇಗವಾಗಿ ಬಸ್ಸೊಂದು ಬಂತು. ರಾಕೇಶ ರಸ್ತೆ ಬದಿಗೆ ಹೋಗಿ ನಿಂತರು. ಬಸ್ಸು ನಿಲ್ಲಲಿಲ್ಲ. ’ನಿಲ್ಲಿಸ್ಲೇ ಇಲ್ಲ’ ಎಂದಾಗ, ’ಕೈ ತೋರಿಸಿದ್ರಾ?’ ಎಂದು ನಾನು ಕೇಳಿದಾಗ, ’ಇಲ್ಲ. ಉಡುಪಿಯಲ್ಲಿ ನಾನು ಕೈ ತೋರಿಸುವುದೇ ಇಲ್ಲಕ್ಕು, ಬಸ್ಸು ನಿಲ್ಲಕ್ಕು (ಉಡುಪಿಯಲ್ಲಿ ನಾನು ಕೈ ಮಾಡೊದೇ ಇಲ್ಲ, ಬಸ್ಸು ನಿಲ್ಲಿಸುತ್ತಾರೆ)’ ಎಂದು ತಮ್ಮದೇ ಕುಂದಾಪ್ರ ತರಹದ ಕನ್ನಡದಲ್ಲಿ ಅಂದಾಗ ನಗಲಾರದೇ ಇರಲು ನನ್ನಿಂದ ಆಗಲಿಲ್ಲ. ನಂತರ ಇವರು ಕೈ ಮಾಡ್ಲಕ್ಕು ಟೆಂಪೋವೊಂದು ನಿಲ್ಲಕ್ಕು, ಅದರಲ್ಲಿ ರಿಟರ್ನ್ ಪ್ರಯಾಣ ಶುರು ಮಾಡಿದೆವು.

ಗುರುವಾರ, ಆಗಸ್ಟ್ 12, 2010

ಚಾರಣ ಚಿತ್ರ - ೭


ಕೊಡೆ-ಕಲ್ಲು
ಕಾರ್ಮೋಡ-ಕತ್ತಲು

ಸೋಮವಾರ, ಜುಲೈ 26, 2010

ಸಣ್ಣ ಸುಂದರ ಜಲಧಾರೆ

ನಿನ್ನೆ ಆದಿತ್ಯವಾರ ಸಣ್ಣದೊಂದು ಜಲಧಾರೆಗೆ ಹೋಗಿಬಂದೆ. ಜಲಧಾರೆ ಸಣ್ಣದಾದರೂ ಮನಸ್ಸಿಗೆ ಬಹಳ ಮುದ ನೀಡಿತು. ಅಡಿಕೆ, ತೆಂಗು ಮತ್ತು ಬಾಳೆತೋಟಗಳ ನಟ್ಟನಡುವೆ ಇರುವ ಈ ಜಲಧಾರೆ ನಾಲ್ಕು ಕವಲುಗಳಲ್ಲಿ ೩೦ ಅಡಿ ಎತ್ತರದಿಂದ ಬೀಳುತ್ತದೆ.


ಹತ್ತಿರದ ಪಟ್ಟಣದ ಜನರನ್ನು ಬಿಟ್ಟರೆ ಬೇರೆ ಯಾರೂ ಬರುವುದಿಲ್ಲ. ಈ ಜನರೇ ಅಲ್ಪ ಸ್ವಲ್ಪ ಗಲೀಜು ಮಾಡಿದ್ದಾರೆ ಎನ್ನಬಹುದು.

ಪಟ್ಟಣವೊಂದರ ಅತಿ ಸಮೀಪದಲ್ಲಿದ್ದರೂ ಇನ್ನೂ ಅಜ್ಞಾತವಾಗಿ ಉಳಿದಿರುವುದೇ ಈ ಜಲಧಾರೆಯ ಅದ್ಭುತ ಸಾಧನೆ. ಅದು ಹಾಗೇ ಅಜ್ಞಾತವಾಗಿಯೇ ಇರಲಿ ಎಂದು ಆಶಿಸುತ್ತೇನೆ.

ಶನಿವಾರ, ಜುಲೈ 03, 2010

ಚನ್ನಕೇಶವ ದೇವಾಲಯ - ಹೊನ್ನಾವರ


ಸುಂದರ ಪರಿಸರದಲ್ಲಿ ಹೊನ್ನಾವರದ ಚೆನ್ನಕೇಶವ ನೆಲೆಸಿದ್ದಾನದರೂ ಆತನ ಮನೆ ಮಾತ್ರ ಪಾಳು ಬೀಳುತ್ತಿದೆ. ಅದಾಗಲೇ ಗೋಪುರ ಕುಸಿದಿದ್ದು ಗಿಡಗಂಟಿಗಳು ನಿಧಾನಕ್ಕೆ ಅಲ್ಲಲ್ಲಿ ಬೆಳೆದು ಗುಡಿಯನ್ನು ಮರೆಮಾಚುವ ಕಾಯಕದಲ್ಲಿ ತೊಡಗಿಕೊಂಡಿವೆ.


ಸುಂದರ ಮುಖಮಂಟಪವುಳ್ಳ ದೇವಾಲಯದಲ್ಲಿರುವುದು ನವರಂಗ ಮತ್ತು ಗರ್ಭಗುಡಿ ಮಾತ್ರ. ದೇವಾಲಯದ ದ್ವಾರ ೪ ತೋಳಿನದ್ದಾಗಿದ್ದು ಮೇಲ್ಗಡೆ ಗಜಲಕ್ಷ್ಮಿಯ ಕೆತ್ತನೆಯಿದೆ. ಹೆಚ್ಚಿನೆಡೆ ಗಜಲಕ್ಷ್ಮಿಯ ಇಕ್ಕೆಲಗಳಲ್ಲಿರುವ ಆನೆಗಳು ತಮ್ಮ ಸೊಂಡಿಲನ್ನು ಮೇಲಕ್ಕೆತ್ತಿ ನಿಂತಿರುವ ಕೆತ್ತನೆಯಿರುತ್ತದೆ. ಆದರೆ ಇಲ್ಲಿ ಎರಡೂ ಆನೆಗಳು ಲಕ್ಷ್ಮಿಯ ಪಾದಕ್ಕೆ ನಮಸ್ಕರಿಸುವ ಕೆತ್ತನೆಯಿದೆ.


ಗರ್ಭಗುಡಿಯ ದ್ವಾರವೂ ನಾಲ್ಕು ತೋಳಿನದ್ದಾಗಿದ್ದು ದ್ವಾರಪಾಲಕರನ್ನು ಹೊಂದಿದೆ. ಚನ್ನಕೇಶವನ ವಿಗ್ರಹ ಬಲೂ ಸುಂದರವಾಗಿದ್ದು ಸಣ್ಣ ಪೀಠದ ಮೇಲೆ ಪ್ರತಿಷ್ಥಾಪನೆಗೊಂಡಿದೆ. ಪೀಠವನ್ನೂ ಸೇರಿಸಿದರೆ ಚನ್ನಕೇಶವನ ಎತ್ತರ ಸುಮಾರು ೭ ಅಡಿ ಆಗಬಹುದು. ಚನ್ನಕೇಶವನ ಕಾಲ ಕೆಳಗೆ ಪೀಠದ ಮುಂಭಾಗದಲ್ಲಿ ಹನುಮಂತನ ಸಣ್ಣ ಮೂರ್ತಿಯಿದೆ. ನವರಂಗದಲ್ಲಿರುವ ನಾಲ್ಕೂ ಕಂಬಗಳನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ನವರಂಗದ ಛಾವಣಿಯಲ್ಲಿ ಸುಂದರ ಕೆತ್ತನೆಗಳಿವೆ. ಒಂದೆಡೆ ಅಷ್ಟದಿಕ್ಪಾಲಕರನ್ನೂ ಚೌಕಾಕಾರದ ಪರಿಧಿಯೊಳಗಡೆ ಕೆತ್ತಲಾಗಿದೆ.


ಊರವರಿಗೆ ದೇವಾಲಯದ ಬಗ್ಗೆ ಅಷ್ಟು ಕಾಳಜಿಯಿಲ್ಲ ಎಂಬುವುದೇ ವಿಷಾದ. ಮುಖಮಂಟಪದ ಎಡಕ್ಕಿರುವ ಭಿತ್ತಿಚಿತ್ರಗಳಿಗೆ ತಾಗಿಯೇ ಸಾರಾಯಿ ಬಾಟ್ಲಿಯೊಂದು ಕೂತಿತ್ತು. ಕಣ್ಣ ಮುಂದೆನೇ ವಿರಾಜಮಾನವಾಗಿ ಕೂತಿದ್ದರೂ ಈ ಸಾರಾಯಿ ಬಾಟಲಿ ಒಂದೆರಡು ಚಿತ್ರಗಳನ್ನು ತೆಗೆದ ಬಳಿಕವೇ ನನ್ನ ಗಮನಕ್ಕೆ ಬಂತು! ಹೊರಗೋಡೆಗಳ ಮತ್ತು ಮಾಡಿನ ಮೇಲ್ಮೈಗಳಲ್ಲಿ ಗಿಡಗಂಟಿಗಳು ಅಲ್ಲಲ್ಲಿ ಬೆಳೆದುಕೊಂಡಿವೆ.


ಯಾವ ದಿಕ್ಕಿನಿಂದ ನೋಡಿದರೂ ದೇವಾಲಯ ಅಂಕುಡೊಂಕಾಗಿ ಕಾಣುತ್ತದೆ. ಛಾವಣಿಯಂತೂ ವಿಕಾರವಾಗಿ ಎಲ್ಲಾ ಬದಿಗಳಲ್ಲೂ ವಾಲಿಕೊಂಡಂತೆ ಕಾಣುತ್ತದೆ. ದೇವಾಲಯಕ್ಕೆ ತಾಗಿಕೊಂಡೇ ಮಣ್ಣಿನ ರಸ್ತೆಯೊಂದು ಹಾದುಹೋಗಿರುವುದರಿಂದ ಹಾರುವ ಧೂಳು ಅಳಿದುಳಿದ ಕೆತ್ತನೆಗಳ ಮೇಲೆ ಕುಳಿತು ಅವುಗಳು ತಮ್ಮ ಹೊಳಪು ಮತ್ತು ನೈಜತೆ ಕಳೆದುಕೊಳ್ಳುತ್ತಿವೆ.


ಮುಖಮಂಟಪದ ಮೇಲೆ ಇಟ್ಟಿಗೆಗಳನ್ನು ಸಾಲಾಗಿ ಇಟ್ಟು ಏನನ್ನೋ ಕಟ್ಟಲು ಆರಂಭಿಸಿ ಅರ್ಧಕ್ಕೆ ನಿಲ್ಲಿಸಿದಂತಿದೆ. ಈ ಏಕಕೂಟ ದೇವಾಲಯದ ಗೋಪುರವಂತೂ ಧರಾಶಾಹಿಯಾಗಿದೆ. ಗೋಪುರದ ಕಲ್ಲುಗಳು ನಿಧಾನವಾಗಿ ಕಣ್ಮರೆಯಾಗಿ ಯಾರ್ಯಾರದೋ ಮನೆಗಳನ್ನು ಸೇರುತ್ತಿವೆ. ಇವುಗಳಲ್ಲಿ ಕೆತ್ತನೆಯ ಅಂಶವಿರುವ ಒಂದೆರಡು ಕಲ್ಲುಗಳು ಗೋಪುರದಿಂದ ಕಳಚಿಬಿದ್ದು ಸ್ವಲ್ಪ ದೂರ ಉರುಳಿ ಹೋಗಿ ಅಲ್ಲೇ ಅನಾಥವಾಗಿ ಬಿದ್ದುಕೊಂಡಿವೆ.


ಇಷ್ಟೆಲ್ಲಾ ಮೈನಸ್ ಪಾಯಿಂಟ್-ಗಳಿದ್ದರೂ ದೇವಾಲಯದ ಹೊರಗೋಡೆಗಳಲ್ಲಿ ಸುಂದರವಾಗಿ ಕೆತ್ತಲಾಗಿರುವ ಭಿತ್ತಿಚಿತ್ರಗಳು ಒಂದಕ್ಕಿಂತ ಒಂದು ಅಂದ. ದೇವಾಲಯದ ಪರಿಸ್ಥಿತಿ ನೋಡಿ ಮರುಗಿದ ಮನಸುಗಳಿಗೆ ಈ ಕೆತ್ತನೆಗಳು ಸ್ವಲ್ಪವಾದರೂ ಮುದ ನೀಡುತ್ತವೆ ಎನ್ನಬಹುದು. ಭಿತ್ತಿಚಿತ್ರಗಳು ಈ ಮಟ್ಟಕ್ಕೆ ಇನ್ನೂ ಉಳಿದುಕೊಂಡಿರುವುದು ವಿಸ್ಮಯ. ಇಲ್ಲಿ ಕೂಡಾ ಈ ಕೆತ್ತನೆಗಳ ಕೈ ಕಾಲು ಮುಖ ಹೀಗೆ ಎಲ್ಲೆಂದರಲ್ಲಿ ಜಜ್ಜಿ ಹಾಕಲಾಗಿದೆ. ಮತಾಂಧರ ಹಾವಳಿಯ ಪರಿಣಾಮ.


ಈ ಕೆತ್ತನೆಗಳು ಏನನ್ನು ಹೇಳುತ್ತಿವೆ ಅಥವಾ ಯಾವ ಘಟನೆಯನ್ನು ಬಿಂಬಿಸುತ್ತಿವೆ ಎಂದು ಗೊತ್ತಾಗುವಷ್ಟು ಅರಿವು ನನಗಿಲ್ಲ. ಪುರಾತತ್ವ ಇಲಾಖೆಯ ಸುಪರ್ದಿಗೆ ಹೊನ್ನಾವರದ ಚೆನ್ನಕೇಶವ ಒಳಪಟ್ಟಿದ್ದಾನೋ ಇಲ್ಲವೋ ತಿಳಿಯದು. ಅಲ್ಲೆಲ್ಲೂ ನೀಲಿ ಫಲಕ ಕಾಣಬರಲಿಲ್ಲ. ನಾವು ಚಿತ್ರಗಳನ್ನು ತೆಗೆಯುವುದರಲ್ಲಿ ತಲ್ಲೀನರಾಗಿದ್ದಾಗ ಬೈಕೊಂದರಲ್ಲಿ ಹಾದು ಹೋಗುತ್ತಿದ್ದ ಇಬ್ಬರು ಹಳ್ಳಿಗರು ’ಸರಕಾರದಿಂದ ಅನುದಾನ ತೆಗೆಸಿಕೊಡುತ್ತೀರಾ’ ಎಂದು ಕೇಳಿ ನಮಗೆ ಮುಜುಗರ ಉಂಟುಮಾಡಿದರು.


ರಸ್ತೆಯ ಮತ್ತೊಂದು ಮಗ್ಗುಲಲ್ಲಿ ಮೆಕ್ಕೆಜೋಳವನ್ನು ಒಣಹಾಕಿದ್ದರು. ನೇಹಲ್ ಆ ಮೆಕ್ಕೆಜೋಳ ರಾಶಿಯನ್ನು ಬಿಟ್ಟು ಆಚೀಚೆ ಕದಲುತ್ತಿರಲಿಲ್ಲ. ಅಲ್ಲಿಂದ ಹೊರಟ ಸ್ವಲ್ಪ ಸಮಯದ ಬಳಿಕ ಆಕೆ ಏನನ್ನೋ ಜಗಿಯುತ್ತಿರುವುದನ್ನು ಕಂಡು ಏನೆಂದು ನೋಡಿದರೆ ಏಳೆಂಟು ಮೆಕ್ಕೆ ಜೋಳದ ಕಾಳುಗಳು!

ಶನಿವಾರ, ಜೂನ್ 26, 2010

ಲಂಬೂ ಜಲಧಾರೆ


ಬೆಟ್ಟದ ತಪ್ಪಲಲ್ಲಿರುವ ಈ ಊರಿಗೆ ಬಸ್ಸಿನಲ್ಲಿ ಬಂದಿಳಿದಾಗ ಮುಂಜಾನೆ ೮.೧೫ರ ಸಮಯ. ಹಳ್ಳಿಗ ಹರೀಶ್ ನಮ್ಮೊಂದಿಗೆ ಮಾರ್ಗದರ್ಶಿಯಾಗಿ ಬಂದರು. ಹಳ್ಳಿಯ ಪರಿಧಿ ದಾಟಿದ ಕೂಡಲೇ ಕಾಡು ಚಾರಣಿಗರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತದೆ. ಸ್ವಲ್ಪ ದೂರ ರಸ್ತೆ ನಂತರ ಕಾಲುದಾರಿ.


ಶ್ರೀಕಾಂತರೊಂದಿಗೆ ಇದು ನನ್ನ ಮೊದಲ ಚಾರಣ. ಕಾಡಿನ ಮೌನದ ಬಗ್ಗೆ ಹರಟುತ್ತಾ ಕಾಡಿನೊಳಗೆ ಸಾಗಿದೆವು. ಕಾಡು ದಟ್ಟವಾಗಿದ್ದು ಬೃಹದಾಕಾರದ ವೃಕ್ಷಗಳು ನಮ್ಮನ್ನು ಆವರಿಸಿಕೊಂಡಂತೆ ಭಾಸವಾಗುತ್ತಿತ್ತು. ಋತುವಿನ ಮೊದಲ ಒಂದೆರಡು ಮಳೆ ಬಿದ್ದಿದ್ದರೂ ಇಂಬಳಗಳು ತಮ್ಮ ಬೇಸಗೆಯ ದೀರ್ಘ ನಿದ್ರೆಯಿಂದ ಇನ್ನೂ ಸಂಪೂರ್ಣವಾಗಿ ಎಚ್ಚರಗೊಂಡಿರಲಿಲ್ಲ. ಚಾರಣದ ಹಾದಿ ಹಳ್ಳಿಯಿಂದ ಕೇವಲ ೫೦-೭೦ ನಿಮಿಷವಷ್ಟೇ. ಒಂದು ಕಠಿಣ ಏರುಹಾದಿ ನನಗೆ ’ಚಾರಣವಾದರೂ ಯಾಕಪ್ಪಾ’ ಎನ್ನುವಷ್ಟು ಬಸವಳಿಯುವಂತೆ ಮಾಡಿತು. ಶ್ರೀಕಾಂತ್ ಸಲೀಸಾಗಿ ಮೇಲೇರುತ್ತಾ ಹೋದರೆ ನಾನು ಮುಗ್ಗರಿಸುತ್ತಿದ್ದೆ. ಅಲ್ಲಲ್ಲಿ ವಿರಮಿಸುತ್ತಾ, ವಿವಿಧ ಕಡೆ ಮಾಡಿದ ಚಾರಣಗಳ ಬಗ್ಗೆ ಒಬ್ಬರಿಗೊಬ್ಬರು ಕೊರೆಯುತ್ತಾ ಹರೀಶನನ್ನು ಹಿಂಬಾಲಿಸಿದೆವು.


ಒಂದೆಡೆ ಕೊರಕಲೊಂದನ್ನು ಇಳಿದ ಕೂಡಲೇ ಜಲಧಾರೆಯ ಶಿರಭಾಗದ ದರ್ಶನ. ಶಿಸ್ತುಬದ್ಧವಾಗಿ ಅಚೀಚೆ ಬೆಳೆದಿರುವ ಕುರುಚಲು ಸಸ್ಯಗಳು ಆ ಕಣಿವೆಯ ಸೌಂದರ್ಯಕ್ಕೆ ಇಂಬು ನೀಡಿದ್ದವು. ಇಲ್ಲಿಂದ ಸ್ವಲ್ಪ ಎಚ್ಚರಿಕೆಯಿಂದ ಮುಂದೆ ಸಾಗಬೇಕಾಗುತ್ತದೆ. ನೀರು ಹರಿದು ಬರುವ ಹಾದಿಯಲ್ಲೇ ಎಲ್ಲಾ ಗಾತ್ರಗಳ ಬಂಡೆಗಳನ್ನು ದಾಟುತ್ತಾ ಮೇಲಕ್ಕೇರಬೇಕಾಗುತ್ತದೆ.


ಜಲಧಾರೆಯ ಬುಡಕ್ಕೆ ತಲುಪಿದಾಗ ಗಮ್ಯ ಸ್ಥಾನಕ್ಕೆ ತಲುಪಿದ ಅನುಭವ. ಜಲಧಾರೆಯ ಮುಂದೆ ಇರುವ ದೊಡ್ಡ ಬಂಡೆಯ ತುದಿಯನ್ನು ಶ್ರೀಕಾಂತ್ ಏರಿ ಕುಳಿತರೆ ನಾನದರ ಬುಡದಲ್ಲಿ ಕುಳಿತು ಜಲಧಾರೆಯ ಸೌಂದರ್ಯವನ್ನು ಆನಂದಿಸತೊಡಗಿದೆವು. ಎರಡು ಹಂತಗಳಲ್ಲಿ ಸುಮಾರು ೩೫೦ ಅಡಿಗಳಷ್ಟು ಆಳಕ್ಕೆ ಈ ಜಲಧಾರೆ ಧುಮುಕುತ್ತದೆ. ಮೊದಲ ಹಂತ ೫೦ ಅಡಿಗಳಷ್ಟು ಎತ್ತರವಿದ್ದರೆ ಎರಡನೇ ಹಂತ ಸುಮಾರು ೨೭೦-೩೦೦ ಅಡಿಗಳಷ್ಟು ಎತ್ತರವಿದೆ.


ಕತ್ತೆತ್ತಿ ನೋಡಿದರೆ ಕತ್ತು ನೋಯಿಸುವಷ್ಟು ಮೇಲಕ್ಕೆ ನೋಡಬೇಕಾಗುತ್ತದೆ, ಜಲಧಾರೆಯ ಅಷ್ಟು ಸಮೀಪಕ್ಕೆ ಹೋಗಬಹುದು. ಸುಮ್ಮನೆ ಜಲಧಾರೆಯ ಮುಂದೆ ಕೂತರೆ ಮನಕ್ಕೆ ಮುದ ನೀಡುವ ಸುಂದರ ದೃಶ್ಯ. ಅಂಗಾತ ಮಲಗಿದರೆ ಆಗಸದಿಂದ ಮೈಮೇಲೆ ಜಲಧಾರೆ ಬೀಳುತ್ತಿರುವಂತಹ ಮೈನವಿರೇಳಿಸುವ ಅನುಭವ.


ಇಲ್ಲಿ ದುಸ್ಸಾಹಸ ಮಾಡಿ ಪ್ರಾಣ ಕಳಕೊಂಡವರೂ ಇದ್ದಾರೆ. ಅಂಥವರ ಬಗ್ಗೆ ಹರೀಶ ವಟಗುಟ್ಟುತ್ತಾ ಇದ್ದರೆ, ನಾವಿಬ್ಬರು ಬಳುಕುತ್ತಿರುವ ಜಲಧಾರೆಯ ಸೌಂದರ್ಯವನ್ನು ಆಸ್ವಾದಿಸುವುದರಲ್ಲಿ ಮಗ್ನರಾಗಿದ್ದೆವು.