ಭಾನುವಾರ, ಅಕ್ಟೋಬರ್ 17, 2010

ಪ್ಯಾರಿಸ್ ಪ್ರಸಂಗ

ನನ್ನ ಮೊದಲ ನೌಕರಿ ಚೆನ್ನೈನಲ್ಲಿ ಆಗಿತ್ತು. ಇಸವಿ ೧೯೯೭ರ ಜುಲಾಯಿ ತಿಂಗಳು. ಈ ಘಟನೆ ನಡೆದದ್ದು ನಾನು ಚೆನ್ನೈಗೆ ಕಾಲಿಟ್ಟ ಮೊದಲ ದಿನವೇ. ಗೆಳೆಯ ವಿಕ್ರಮ್ ಪಾಟೀಲ ಅದಾಗಲೇ ಅಲ್ಲಿ ನೌಕರಿ ಮಾಡುತ್ತಿದ್ದು, ’ಬ್ಯಾಚೆಲರ್ಸ್ ಪ್ಯಾರಡೈಸ್’ ಎಂದೇ ಹೆಸರುವಾಸಿಯಾಗಿರುವ ಟ್ರಿಪ್ಲಿಕೇನ್-ನಲ್ಲಿ ವಾಸವಾಗಿದ್ದ. ಮಧ್ಯಾಹ್ನ ಸುಮಾರು ೨ ಗಂಟೆಗೆ ಚೆನ್ನೈ ತಲುಪಿದ ನನ್ನನ್ನು, ಸ್ಟೇಷನ್-ನಿಂದ ರೂಮಿಗೆ ತಲುಪಿಸಿ ಮತ್ತೆ ಆಫೀಸಿಗೆ ತೆರಳಿದ. ಸಂಜೆ ಸುಮಾರು ೫.೩೦ಕ್ಕೆ ಆಫೀಸಿನಿಂದ ಬಂದು, ’ಇಲ್ಲೇ ಹೋಗಿ ಬರುತ್ತೇನೆ. ನನ್ನ ಗೆಳೆಯನೊಬ್ಬ ಬರಲಿದ್ದಾನೆ. ಸ್ವಲ್ಪ ಕಾಯಲು ಹೇಳು’ ಎಂದು ತಿಳಿಸಿ ಎಲ್ಲೋ ಹೋದ.

ಬೆಂಗಳೂರಿನಲ್ಲಿ ’ಮಜೆಸ್ಟಿಕ್’, ಮಂಗಳೂರಿನಲ್ಲಿ ’ಸ್ಟೇಟ್-ಬ್ಯಾಂಕ್’ ಇದ್ದಂತೆ ಚೆನ್ನೈ ನಗರದ ಕೇಂದ್ರ ಬಸ್ಸು ನಿಲ್ದಾಣಕ್ಕೆ ’ಪ್ಯಾರೀಸ್’ ಎನ್ನುತ್ತಾರೆ ಎಂದು ನನಗೆ ಗೊತ್ತೇ ಇರಲಿಲ್ಲ.

ಸ್ವಲ್ಪ ಹೊತ್ತಿನಲ್ಲಿ ಆ ಗೆಳೆಯ ಆಗಮಿಸಿದ. ವಿಕ್ರಮ್ ಈಗ ಬರಲಿದ್ದಾನೆ, ಸ್ವಲ್ಪ ಹೊತ್ತು ಕಾಯುವಿರಂತೆ ಎಂದು ಕುಳಿತುಕೊಳ್ಳಲು ಹೇಳಿದೆ. ’ನೋ ಪ್ರಾಬ್ಲೆಮ್, ಐ ವಿಲ್ ವೈಟ್. ಬೈ ದ ವೇ ಐ ಯಾಮ್ ಪುರುಷೋತ್ತಮ್, ಯು ಕ್ಯಾನ್ ಕಾಲ್ ಮಿ ಪುರುಷ್’ ಎಂದು ನನ್ನನ್ನು ದಂಗುಬಡಿಸಿದ!

ನಾನು: ನೀವು ವಿಕ್ಕಿಗೆ ಹೇಗೆ ಪರಿಚಯ?

ಪುರುಷ್: ಒಟ್ಟಿಗೆ ಧಾರವಾಡದಲ್ಲಿ ಓದಿದ್ವಿ.

ನಾನು: ಈಗ ಏನು ಮಾಡ್ತಾ ಇದ್ದೀರಾ?

ಪುರುಷ್: ಸಿ.ಎ ಮಾಡ್ತಾ ಇದ್ದೀನಿ.

ನಾನು: ಎಲ್ಲಿ?

ಪುರುಷ್: ಪ್ಯಾರೀಸ್-ನಲ್ಲಿ

ನಾನು: ಓ, ಪ್ಯಾರಿಸ್! ಈಗ ’ಅಲ್ಲಿಂದಾ’ ಬಂದ್ರಾ?! (ನಾನು ಯೋಚನೆ ಮಾಡ್ತಾ ಇದ್ದಿದ್ದು ಫ್ರಾನ್ಸ್ ರಾಜಧಾನಿ - ಆತ ಪುರುಷ್ ಎಂದು ಪರಿಚಯ ಮಾಡಿಕೊಂಡಿದ್ದು ನಾನು ಈ ತರಹ ಯೋಚಿಸಲು ಇನ್ನಷ್ಟು ಪುಷ್ಟಿ ನೀಡಿತು)

ಪುರುಷ್: ಯಾ.

ನಾನು: ಮತ್ತೆ ಈಗ? ಧಾರವಾಡಕ್ಕಾ?

ಪುರುಷ್: ಧಾರ್ವಾಡಾಆ‌ಆ‌ಅ..?! ಇಲ್ಲಪ್ಪಾ. ವಾಪಸ್ ಪ್ಯಾರೀಸ್-ಗೆ.

ನಾನು: ???!!! (ಎಲಾ ಇವನಾ. ತಮಾಷೆ ಮಾಡ್ತಿದ್ದಾನೋ ಹೇಗೆ ಎಂದು ಮತ್ತಷ್ಟು ಗೊಂದಲಕ್ಕೊಳಗಾದರೂ, ಮತ್ತೆ ಕೇಳಿದೆ...) ವಾಪಸ್ ಪ್ಯಾರಿಸ್?! ಮತ್ತೆ ಅಷ್ಟು ದೂರಾ ಬಂದಿದ್ದು ಬರೀ ವಿಕ್ಕಿನ ಭೇಟಿ ಮಾಡ್ಲಿಕ್ಕೋ?!

ಪುರುಷ್: ಇಲ್ಲ. ಸ್ವಲ್ಪ ಝೆರಾಕ್ಸ್ ಮಾಡ್ಲಿಕ್ಕೆ ಇತ್ತು. ಅದ್ಕೆ ಬಂದೆ. ಹಾಗೆ ವಿಕ್ಕಿ ಭೇಟಿ ಮಾಡೋಣ ಎಂದು ಈ ಕಡೆ ಬಂದೆ.

ನಾನು: ಏನು??????????? ಝೆರಾಕ್ಸ್ ಮಾಡ್ಲಿಕ್ಕಾ!!!!!!!!!! (ಈಗಂತು ನನಗೆ ಫುಲ್ಲು ತಲೆ ಕೆಟ್ಟೋಗಿತ್ತು. ಬರೀ ಝೆರಾಕ್ಸ್ ಮಾಡ್ಲಿಕ್ಕೆ ಪ್ಯಾರಿಸ್-ನಿಂದ ಇಲ್ಲಿಗೆ ಬರೋದು ಅಂದ್ರೆ... ಎಲ್ಲಿ ವಿಮಾನದಲ್ಲಿ ಫುಲ್ ಲೋಡ್ ತಂದಿದ್ದಾನೋ ಎಂಬ ಎಕ್ಸ್-ಟ್ರೀಮ್ ಯೋಚನೆಗಳೆಲ್ಲಾ ಬರತೊಡಗಿದವು)

ಪುರುಷ್: ಹೌದು. ಬಲ್ಕ್ ಝೆರಾಕ್ಸ್ ಮಾಡಿದ್ರೆ ಇಲ್ಲಿ ಸ್ವಲ್ಪ ಕಡಿಮೆ.

ನಾನು: !!!!!!!!!!!!!!!!!!!! (ಈಗಂತೂ ತಲೆ ಕೂದಲನ್ನು ಹಿಡಿದು ಜಗ್ಗುವಷ್ಟು ತಲೆ ಕೆಟ್ಟಿತ್ತು. ಇಂವ ನನ್ನನ್ನು ಫೂಲ್ ಮಾಡ್ತಿದ್ದಾನೋ ಹೇಗೆ? ಏನ್ರೀ ತಮಾಷೆ ಮಾಡ್ತಿದ್ದೀರಾ ಎಂದು ಗದರಿಸಿಬಿಡೋಣವೆನಿಸಿದರೂ ಸುಮ್ಮನಾದೆ. ಯಾಕೆಂದರೆ ಪುರುಷ್ ಗಂಭೀರನಾಗಿ ಮಾತನಾಡುತ್ತಿದ್ದ. ಪ್ಯಾರಿಸ್ ದುಬಾರಿ ಊರಾದರೂ ಝೆರಾಕ್ಸ್-ಗೋಸ್ಕರ ಇಲ್ಲಿವರೆಗೆ.... ಛೇ ಇರಲಿಕ್ಕಿಲ್ಲ ಎಂದೆನಿಸಿತು. ಎಲ್ಲಾ ಗೊಂದಲಮಯವಾಗಿತ್ತು.)

ಆಗ ವಿಕ್ರಮ್ ಬಂದು, ಅವರಿಬ್ಬರು ಮತ್ತೆಲ್ಲೋ ಹೋದರು. ನಂತರ ವಿಕ್ರಮ್ ಮರಳಿದ ಬಳಿಕ ನಾನು ಆತನಿಗೆ ನಡೆದದ್ದನ್ನು ತಿಳಿಸಿದಾಗ, ಆತ ಹೊಟ್ಟೆ ಹುಣ್ಣಾಗುವಂತೆ ನಕ್ಕು, ’ಲೇ ಹಾಪ, ಪ್ಯಾರೀಸ್ ಇಲ್ಲೇ ಐತ್-ಲೇ. ಬಸ್-ಸ್ಟ್ಯಾಂಡಿಗೆ ಪ್ಯಾರೀಸ್ ಅಂತಾರೆ’ ಎನ್ನುತ್ತಾ ಮತ್ತೆ ಮತ್ತೆ ನಕ್ಕ. ಅಷ್ಟಕ್ಕೆ ಸುಮ್ಮನಾಗದೆ, ಟ್ರಿಪ್ಲಿಕೇನ್-ನಲ್ಲಿ ವಾಸವಾಗಿದ್ದ ಎಲ್ಲಾ ಕನ್ನಡಿಗರಿಗೆ ಮತ್ತು ಪರಿಚಯವಿದ್ದ ತಮಿಳರಿಗೆ ಮುಂದಿನ ನಾಲ್ಕೈದು ದಿನಗಳವರೆಗೆ ಈ ’ಪ್ಯಾರಿಸ್ ಪ್ರಸಂಗ’ವನ್ನು ವಿವರಿಸಿ ಇನ್ನಷ್ಟು ನಕ್ಕ. ತನ್ನ ಆಫೀಸಿನಲ್ಲೂ ಸಹೋದ್ಯೋಗಿಗಳಿಗೆ ಸಿಹಿ ಹಂಚಿದಂತೆ ಈ ಸುದ್ದಿಯನ್ನು ಹಂಚಿ ಮತ್ತಷ್ಟು ಆನಂದಿಸಿದ. ವಿಕ್ರಮ್ ಒಬ್ಬ ಮರೆಗುಳಿ. ನಾಲ್ಕು ದಿನಗಳ ಬಳಿಕ ಆ ಘಟನೆಯನ್ನೇ ಮರೆತುಬಿಟ್ಟ. ಇಲ್ಲವಾದಲ್ಲಿ ಇನ್ನೆಷ್ಟು ಜನರಿಗೆ ವಿವರಿಸಿ ನಗುದಿತ್ತೋ!

13 ಕಾಮೆಂಟ್‌ಗಳು:

ಪಾಚು-ಪ್ರಪಂಚ ಹೇಳಿದರು...

:-) :-) :-)

ಶರಶ್ಚಂದ್ರ ಕಲ್ಮನೆ ಹೇಳಿದರು...

ಹ್ಹ ಹ್ಹ ಹ್ಹ.. ಪ್ಯಾರಿಸ್ ಪ್ರಸಂಗ ಚನ್ನಾಗಿದೆ :)

Lakshmipati ಹೇಳಿದರು...

ರಾಜೇಶ್,

ನಿಮ್ಮ ಪ್ಯಾರಿಸ್ ಪ್ರಸಂಗ ತುಂಬಾ ಚನ್ನಾಗಿದೆ. ನಾನು ೨೦೦೪ ನೇ ಇಸವಿಯಲ್ಲಿ ಚೆನ್ನೈನಲ್ಲಿ ಕೆಲಸಕ್ಕೆ ಸೇರಿದ್ದಾಗ ನನಗೂ ಮೊದ ಮೊದಲು ಇಂತಹುದೆ ಅನುಭವವಾಗಿತ್ತು. ಆದರೆ ನಾನು ಬೇರೆಯವರ ಬಳಿ ಹೇಳಿಕೊಳ್ಳಲಿಲ್ಲ (ಮುಜುಗರವನ್ನು ತಪ್ಪಿಸಲು).

ಲಕ್ಷ್ಮೀಪತಿ

sunaath ಹೇಳಿದರು...

ಪ್ಯಾರಿಸ್ ಪ್ರಸಂಗವನ್ನು ನಮ್ಮ ಜೊತೆಗೆ ಸಿಹಿ ಹಂಚಿದಂತೆ ಹಂಚಿಕೊಂಡಿದ್ದಕ್ಕಾಗಿ ತುಂಬ ಥ್ಯಾಂಕ್ಸ್!

Srik ಹೇಳಿದರು...

Hahahhahaaha LOL!!! I havent yet stopped laughing!

Srik

Tina ಹೇಳಿದರು...

ರಾಜೇಶ,
ಪುರುಷ್ಷೂ ಜೆರಾಕ್ಸೂ ಪ್ಯಾರಿಸ್ಸೂ!! ನಗಾಡುತ್ತಲೆ ಇದೇನೆ!!

ವಿ.ರಾ.ಹೆ. ಹೇಳಿದರು...

ಚೆನ್ನೈನಲ್ಲಿ ಇದ್ಯಾಕೆ ಈ ಪ್ಯಾರೀಸ್ ಹೆಸರು ಅಂತ ನಂಗೂ ಅನ್ನಿಸಿತ್ತು. ಕೆಲವರನ್ನ ಕೇಳಿದ್ದೆ. ಉತ್ತರ ಸಿಕ್ಕಿರಲಿಲ್ಲ. ಅದೇನೋ ಬೇರೆ ಪದ ಅಪಭ್ರಂಶವಾಗಿ ಹಾಗೆ ಆಗಿರಬೇಕು. ನಿಮ್ಮ ಪ್ರಸಂಗ ಮಜಾ ಇದೆ.

Lakshmipati ಹೇಳಿದರು...

ಚೆನ್ನೈನಲ್ಲಿ ಪ್ಯಾರೀಸ್ ಕಾರ್ನರ್ ಎನ್ನುವ ಒಂದು ಶಾಪಿಂಗ್ ಕಾಂಪ್ಲೆಕ್ಸ್ ಇದೆ. ಅದರ ಬಳಿ ಇರುವ ಬಸ್ ನಿಲ್ದಾಣಕ್ಕೆ ಪ್ಯಾರಿಸ್ ನಿಲ್ದಾಣ ಎಂದು ಹೆಸರು. ಈ ಎರಡು ಹೆಸರುಗಳು ಸೇರಿ ಪ್ಯಾರಿಸ್ ಎಂದು ಮಾತ್ರ ಉಳಿದುಕೊಂಡಿದೆ. ಅದನ್ನು ಎಲ್ಲರು ಪ್ಯಾರಿಸ್ ಅಂತಲೆ ಕರೆಯುತ್ತಾರೆ.ಅದರಿಂದಾಗಿ ಈ ಹೆಸರು ಬಂದಿದೆ.

ಲಕ್ಷ್ಮೀಪತಿ

Shiv ಹೇಳಿದರು...

ರಾಜೇಶ್,

ಪ್ಯಾರಿಸ್ ಪ್ರಕರಣ ಚೆನ್ನಾಗಿದೆ :)

venkat.bhats ಹೇಳಿದರು...

wow...

ಮನಮುಕ್ತಾ ಹೇಳಿದರು...

hahaha....:)

ರಾಜೇಶ್ ನಾಯ್ಕ ಹೇಳಿದರು...

ಪ್ರತಿಕ್ರಿಯಿಸಿದ ಗೆಳೆಯರೆಲ್ಲರಿಗೂ ಧನ್ಯವಾದಗಳು.

santhosh devananda ಹೇಳಿದರು...

humurous.... if anyone goes to chennai then they can see paris without much expenditure... LOL