ಗುರುವಾರ, ನವೆಂಬರ್ 14, 2013

ಸ್ವಯಂಭೂ ಸೋಮೇಶ್ವರ ದೇವಾಲಯ - ಕಲಕೇರಿ


ಕಲಕೇರಿಯಲ್ಲಿ ದೊರೆತಿರುವ ಶಾಸನಗಳ ಪ್ರಕಾರ ಹಲವು ರಾಜವಂಶಗಳು ಆಳಿದ ಪ್ರದೇಶವಿದು. ಎಲ್ಲರೂ ತಮ್ಮ ಆಳ್ವಿಕೆಯ ಸಮಯದಲ್ಲಿ ದೇವಾಲಯಗಳನ್ನು ನಿರ್ಮಿಸಿ ಅಥವಾ ಇದ್ದ ದೇವಾಲಯಗಳನ್ನು ಅಭಿವೃದ್ಧಿಪಡಿಸಿ ಕಲಕೇರಿಗೆ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.


ಇಲ್ಲಿರುವ ದೇವಾಲಯಗಳೆಂದರೆ ಸ್ವಯಂಭೂ ಸೋಮೇಶ್ವರ, ಸರಸ್ವತಿ, ಜಯಸಿಂಗೇಶ್ವರ, ಮೂಲೆ ಬಸವಣ್ಣ, ಸೋಮೇಶ್ವರ ಮತ್ತು ಲಕ್ಕಮ್ಮ ದೇವಾಲಯ. ಶಾಸನಗಳಲ್ಲಿ ಈ ಊರನ್ನು ’ಕಲ್ಲುಕೆರೆ’ ಹಾಗೂ ’ಕಲ್ಕೆರೆ’ ಎಂದು ಕರೆಯಲಾಗಿದೆ. ಈಗ ಕಲಕೇರಿ ಅಥವಾ ಕಲ್ಕೇರಿ ಎಂದು ಕರೆಯಲಾಗುತ್ತದೆ.


ಕಲ್ಯಾಣಿ ಚಾಲುಕ್ಯ, ಯಾದವ, ಹೊಯ್ಸಳ ಮತ್ತು ವಿಜಯನಗರ ಅರಸರ ಕಾಲದ ೩೦ಕ್ಕೂ ಹೆಚ್ಚು ಶಾಸನಗಳು ಇಲ್ಲಿ ದೊರೆತಿವೆ. ಇವುಗಳಲ್ಲಿ ಸುಮಾರು ೧೦ ಶಾಸನಗಳು ಸ್ವಯಂಭೂ ಸೋಮೇಶ್ವರ ದೇವಾಲಯಕ್ಕೆ ಸಂಬಂಧಪಟ್ಟ ದಾನದತ್ತಿ ವಿವರಗಳನ್ನು ಒಳಗೊಂಡಿವೆ.


ಈ ತ್ರಿಕೂಟ ದೇವಾಲಯ ಸಂಪೂರ್ಣವಾಗಿ ಪಾಳುಬಿದ್ದಿತ್ತು. ಪುರಾತತ್ವ ಇಲಾಖೆ ಈಗ ದೇವಾಲಯವನ್ನು ನವೀಕರಿಸಿದೆ. ಪಶ್ಚಿಮದಲ್ಲಿರುವ ಗರ್ಭಗುಡಿಯಲ್ಲಿ ಶಿವಲಿಂಗವಿದ್ದರೆ ಉಳಿದೆರಡು (ಉತ್ತರ ಮತ್ತು ಪೂರ್ವ) ಗರ್ಭಗುಡಿಗಳು ಖಾಲಿಯಾಗಿವೆ (ದೇವಾಲಯವು ಪಾಳುಬಿದ್ದಿದ್ದರಿಂದ, ಪೂರ್ವದ ಗರ್ಭಗುಡಿಯಲ್ಲಿ ಇದ್ದ ಸೂರ್ಯದೇವನ ವಿಗ್ರಹವನ್ನು ಬಹಳ ಹಿಂದೆನೇ, ಸಮೀಪದಲ್ಲಿರುವ ಸೂರ್ಯನಾರಾಯಣ ದೇವಾಲಯದ ಖಾಲಿ ಇದ್ದ ಗರ್ಭಗುಡಿಯೊಂದರಲ್ಲಿ ಪ್ರತಿಷ್ಠಾಪಿಸಿರುವ ಪುರಾವೆಗಳಿವೆ). ಎಲ್ಲಾ ಗರ್ಭಗುಡಿಗಳಿಗೆ ಪ್ರತ್ಯೇಕ ಅಂತರಾಳವಿದ್ದು ಸಾಮಾನ್ಯ ನವರಂಗವಿದೆ.


ಎಲ್ಲಾ ಗರ್ಭಗುಡಿಗಳ ದ್ವಾರವು ೩ ಅಲಂಕೃತ ತೋಳುಗಳನ್ನು ಹೊಂದಿದ್ದು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿವೆ. ಶಿವಲಿಂಗವಿರುವ ಗರ್ಭಗುಡಿಯ ದ್ವಾರದ ಕೆಳಗೆ ತ್ರಿಶೂಲ ಮತ್ತು ಡಮರುಗವನ್ನು ಹಿಡಿದಿರುವ ಶಿವನ ಕೆತ್ತನೆಯನ್ನು ಕಾಣಬಹುದು. ಸ್ವಯಂಭೂ ಆಗಿರುವ ಕಾರಣ ಶಿವಲಿಂಗ ತುಂಬಾ ಸಣ್ಣದಾಗಿದೆ. ಮಕರತೋರಣದಿಂದ ಅಲಂಕೃತಗೊಂಡಿರುವ ಬ್ರಹ್ಮ, ವಿಷ್ಣು, ಮಹೇಶ್ವರರ ಕೆತ್ತನೆಯನ್ನು ಎಲ್ಲಾ ಅಂತರಾಳಗಳ ಲಲಾಟದಲ್ಲಿ ಕಾಣಬಹುದಾಗಿದ್ದು ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನೂ ಕಾಣಬಹುದು.


ಚಾಲುಕ್ಯ ಶೈಲಿಯ ನವರಂಗವು ವಿಶಾಲವಾಗಿದ್ದು ಕಕ್ಷಾಸನವನ್ನು ಹೊಂದಿದೆ. ಕಕ್ಷಾಸನದ ಮೇಲಿರುವ ೧೦ ಕಂಬಗಳನ್ನೂ ಸೇರಿಸಿ ನವರಂಗದಲ್ಲಿ ಒಟ್ಟು ೨೧ ಕಂಬಗಳಿವೆ. ನಂದಿಯು ಶಿವಲಿಂಗವಿರುವ (ಪಶ್ಚಿಮಕ್ಕಿರುವ) ಗರ್ಭಗುಡಿಗೆ ಮುಖಮಾಡಿ ಆಸೀನನಾಗಿದ್ದರೂ ಪೂರ್ವದಲ್ಲಿರುವ ಖಾಲಿ ಗರ್ಭಗುಡಿಗೆ ತುಂಬಾ ಸಮೀಪದಲ್ಲಿದೆ. ನಂದಿಯ ಸಮೀಪದಲ್ಲೇ ಪಾದಗಳ ಕೆತ್ತನೆಯಿರುವ ಎರಡು ಪಾಣಿಪೀಠಗಳನ್ನು ಇರಿಸಲಾಗಿದೆ.


೧೧ನೇ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯದ ಗರ್ಭಗುಡಿಗಳ ಮೇಲೆ ಕದಂಬ ಶೈಲಿಯ ಗೋಪುರಗಳಿವೆ. ಈ ಶೈಲಿಯಲ್ಲಿ ಗೋಪುರವನ್ನು ಮೆಟ್ಟಿಲುಗಳ ರೀತಿಯಲ್ಲಿ ಯಾವುದೇ ಅಲಂಕಾರವಿಲ್ಲದೆ ನಿರ್ಮಿಸಲಾಗುತ್ತದೆ. ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಭಿತ್ತಿಚಿತ್ರಗಳಿಲ್ಲ.


ವಿಶಾಲವಾದ ಪ್ರಾಂಗಣ ಹೊಂದಿರುವ ಸ್ವಯಂಭೂ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ಉತ್ತರಾಭಿಮುಖವಾಗಿರುವ ಇನ್ನೊಂದು ದೇವಾಲಯವಿದ್ದು ಇದನ್ನು ಸರಸ್ವತಿ ದೇವಾಲಯವೆಂದು ಹೇಳಲಾಗುತ್ತದೆ. ಇಲ್ಲಿದ್ದ ಸರಸ್ವತಿ ದೇವಿಯ ಮೂರ್ತಿ ಬಹಳ ವರ್ಷಗಳ ಹಿಂದೆ ಕಳುವಾಯಿತೆಂದು ಊರವರು ತಿಳಿಸಿದರು. ಹಂಸಪೀಠವಿರುವ ಗರ್ಭಗುಡಿ ಮತ್ತು ನಾಲ್ಕು ಕಂಬಗಳ ನವರಂಗವನ್ನು ಹೊಂದಿರುವ ಈ ದೇವಾಲಯ ಈಗ ಧೂಳು ಮತ್ತು ಬಾವಲಿಗಳಿಂದ ತುಂಬಿಹೋಗಿದೆ.


ಸಮೀಪದಲ್ಲೇ ಗರ್ಭಗುಡಿ ಮತ್ತು ಅಂತರಾಳ ಮಾತ್ರ ಹೊಂದಿರುವ ಸೋಮೇಶ್ವರ ದೇವಾಲಯವಿದೆ. ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯನ್ನು ಕಾಣಬಹುದು. ಅಂತರಾಳದ ದ್ವಾರವು ಜಾಲಂಧ್ರಗಳನ್ನು ಹೊಂದಿದ್ದು ಮೇಲ್ಭಾಗದಲ್ಲಿ ಮಕರತೋರಣದಿಂದ ಸುತ್ತುವರಿದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಕೆತ್ತಲಾಗಿದೆ.


ಸ್ವಯಂಭೂ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ಹಲವಾರು ಶಾಸನಗಳನ್ನು ಮತ್ತು ವೀರಗಲ್ಲುಗಳನ್ನು ಇಡಲಾಗಿದೆ. ಇವುಗಳಲ್ಲಿ ಹೆಚ್ಚಿನ ವೀರಗಲ್ಲುಗಳಲ್ಲಿ ಸಂಬಂಧಪಟ್ಟ ವಿವರಗಳನ್ನೂ ನೀಡಲಾಗಿದೆ.


ಎರಡು ಸಾಲುಗಳಲ್ಲಿ ಇಡಲಾಗಿರುವ ಈ ವೀರಗಲ್ಲುಗಳೆಲ್ಲವೂ ಕಲಕೇರಿಯಲ್ಲೇ ದೊರೆತವು. ಇವುಗಳ ಮೇಲೆ ಬರೆದಿರುವುದನ್ನು ಓದಲು ಆಗದೇ ಅಸಹಾಯಕ ಸ್ಥಿತಿಯಲ್ಲಿರುವಾಗ ಹಳೆಗನ್ನಡ ಓದಲು ಕಲಿಯಬೇಕೆಂದು ಅನಿಸುತ್ತಿತ್ತು.


ಊರ ನಡುವೆ ಇರುವ ಲಕ್ಕಮ್ಮ ದೇವಾಲಯದ ವೈಶಿಷ್ಟ್ಯವೆಂದರೆ ಸುಮಾರು ೫ ಅಡಿ ಎತ್ತರದ ಕುಳಿತುಕೊಂಡಿರುವ ಭಂಗಿಯಲ್ಲಿರುವ ಭೈರವಿ ದೇವಿಯ ಮೂರ್ತಿ.


ದೇವಿಯ ಬಳಿಯಲ್ಲೇ ಕುಳಿತ ಭಂಗಿಯಲ್ಲಿರುವ ಭೈರವನ ಮೂರ್ತಿಯೂ ಇದ್ದು ಇದು ಸುಮಾರು ೨ ಅಡಿ ಎತ್ತರವಿರಬಹುದು. ಗರ್ಭಗುಡಿ ಮತ್ತು ಅಂತರಾಳವನ್ನು ಹೊಂದಿರುವ ದೇವಾಲಯ ಕದಂಬ ಶೈಲಿಯ ಗೋಪುರವನ್ನು ಹೊಂದಿದೆ.

ಭಾನುವಾರ, ನವೆಂಬರ್ 10, 2013

ವೀರಭದ್ರೇಶ್ವರ ದೇವಾಲಯ - ಜಯಸಿಂಹಪುರ


ಇಸವಿ ೧೦೪೦ರಲ್ಲಿ ಚಾಲುಕ್ಯ ದೊರೆ ೨ನೇ ಜಯಸಿಂಹನು ನಿರ್ಮಿಸಿದ ಊರಾಗಿರುವುದರಿಂದ ಈ ಊರಿನ ಹೆಸರು ಜಯಸಿಂಹಪುರ. ಇಲ್ಲಿರುವ ವೀರಭದ್ರೇಶ್ವರ ದೇವಾಲಯವನ್ನು ಇಸವಿ ೧೭೨೫ರಲ್ಲಿ ರಾಜಾ ರಾಮಚಂದ್ರ ಜಾಧವನು ನಿರ್ಮಿಸಿದನು.


ಸುಮಾರು ೩೦೦ ವರ್ಷ ಹಳೆಯ ದೇವಾಲಯವಾದರೂ ಒಳಗೆಲ್ಲ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ದೇವಾಲಯದ ಮಹಾದ್ವಾರವೇ ಅತ್ಯಂತ ಆಕರ್ಷಕವಾಗಿದ್ದು, ಇದರ ಎತ್ತರವೇ ಪ್ರವಾಸಿಗರ ಗಮನ ಸೆಳೆಯುತ್ತದೆ. ದೇವಾಲಯ ನಿರ್ಮಿಸಿದ ರಾಜಾ ರಾಮಚಂದ್ರ ಜಾಧವನು ಸ್ವತ: ಒಬ್ಬ ಉತ್ತಮ ವಾಸ್ತುಶಿಲ್ಪಿಯಾಗಿದ್ದರಿಂದ ಇಂತಹ ವಿಶಿಷ್ಟ ದೇವಾಲಯದ ನಿರ್ಮಾಣವಾಗಲು ಸಾಧ್ಯವಾಗಿರಬೇಕು.


ದೇವಾಲಯದ ಮಹಾದ್ವಾರದ ಇಕ್ಕೆಲಗಳಲ್ಲಿ ದ್ವಾರದಷ್ಟೇ ಎತ್ತರವಿರುವ ಪ್ರಾಕಾರದ ಗೋಡೆಯಿದ್ದು, ಇದು ದೇವಾಲಯದ ಸುತ್ತಲೂ ಹಾಗೇ ಮುಂದುವರಿದಿದೆ. ದ್ವಾರದ ಮೇಲ್ಭಾಗದಲ್ಲಿ ಮಹಡಿಯ ಸಜ್ಜೆಯಿದ್ದು, ಇದು ಕಮಾನು ರೂಪದ ಐದು ಆಕರ್ಷಕ ಭಾಗಗಳನ್ನು ಹೊಂದಿದೆ. ಸಜ್ಜೆಯ ಇಕ್ಕೆಲಗಳಲ್ಲಿ, ಮೂರು ಸ್ತರಗಳಲ್ಲಿ ಪೌರಾಣಿಕ ಘಟನಾವಳಿಗಳ ಸಣ್ಣಸಣ್ಣ ಕೆತ್ತನೆಗಳನ್ನು ಕಾಣಬಹುದು. ಸಜ್ಜೆಯ ಮೇಲ್ಭಾಗದಲ್ಲೂ ಇಂತಹ ಕೆತ್ತನೆಗಳನ್ನೊಳಗೊಂಡ ಇನ್ನೊಂದು ಸ್ತರವನ್ನು ಕಾಣಬಹುದು.


ಗರ್ಭಗುಡಿಯ ಮೇಲೆ ನಿರ್ಮಿತವಾಗಿರುವ ವೃತ್ತಾಕಾರದ ಸುಂದರ ಗೋಪುರ ಗಮನ ಸೆಳೆಯುತ್ತದೆ. ಇಲ್ಲೂ ಪ್ರತಿ ಸ್ತರದಲ್ಲಿ, ಮಹಾದ್ವಾರದ ಮೇಲ್ಭಾಗದಲ್ಲಿರುವಂತೆ, ಸಣ್ಣಸಣ್ಣ ಕೆತ್ತನೆಗಳನ್ನು ಕಾಣಬಹುದು. ಗೋಪುರದ ಮೇಲೆ ಕಮಲವನ್ನಿಟ್ಟು ಅದರ ಮೇಲೆ ಕಲಶವನ್ನಿರಿಸಲಾಗಿದೆ.


ದೇವಾಲಯದೊಳಗೆ ಎಂದಿಗೂ ಜನಜಂಗುಳಿಯಿರುತ್ತದೆ. ಭಜನೆ, ಹರಕೆ ಇತ್ಯಾದಿಗಳು ನಡೆಯುತ್ತಾ ಇರುತ್ತವೆ. ಮಹಾದ್ವಾರದಿಂದ ಒಳಗೆ ಪ್ರವೇಶಿಸಿದ ಕೂಡಲೇ ವಿಶಾಲವಾದ ಹಜಾರ. ಹಜಾರದ ಮೇಲ್ಭಾದಲ್ಲಿ ಕಟ್ಟಿಗೆಯಿಂದ ನಿರ್ಮಿತಗೊಂಡಿರುವ ಸಜ್ಜೆಯನ್ನು ಕಾಣಬಹುದು.


ಹಜಾರದಿಂದ ದೇವಾಲಯದೊಳಗೆ ಪ್ರವೇಶಿಸಿದಾಗ ಅಲ್ಲೇ ಕಟಕಟೆಯನ್ನು ಹಾಕಲಾಗಿದೆ. ಇಲ್ಲಿಂದ ದಾಟಿ ಮುಂದಿರುವ ಗರ್ಭಗುಡಿಯೊಳಗೆ ಯಾರೂ ಹೋಗುವಂತಿಲ್ಲ. ಆದರೆ ಕೆಲವರು ಹೋಗಿ ಬರುತ್ತಿದ್ದರು. ’ಸ್ಪೆಷಲ್ ಪರ್ಮಿಷನ್’ ಇದ್ದರೆ ಮಾತ್ರ ಒಳಗೆ ಹೋಗಬಹುದು ಎಂದು ಆ ಕಟಕಟೆಯನ್ನು ಕಾಯುತ್ತಿದ್ದವನು ಹೇಳಿದ. ’ಸ್ಪೆಷಲ್ ಪರ್ಮಿಷನ್’ ಎಲ್ಲಿ ಕೇಳಬೇಕು ಎಂದು ಕೇಳಿದರೆ, ಸಾಹೇಬ್ರು ಈಗ ಇಲ್ಲ ಎಂಬ ಉತ್ತರ. ಕಟಕಟೆಯ ಸಮೀಪದಿಂದ ವೀರಭದ್ರನ ದರ್ಶನ ಮಾಡಬಹುದಾದರೂ, ಜನರ ಓಡಾಟ ತಳ್ಳಾಟದ ನಡುವೆ ಸರಿಯಾಗಿ ಏನೂ ಕಾಣುತ್ತಿರಲಿಲ್ಲ. ದೂರದಿಂದ ಬಂದಿರುವುದರಿಂದ ಒಳಗೆ ಹೋಗಲು ಬಿಡುವಂತೆ ವಿನಂತಿಸಿದಾಗ, ’ಬೇಗ ಬಂದ್ಬಿಡಿ, ಒಳಗೆ ಅರ್ಚಕರು ಬೈತಾರೆ’ ಎಂದು ಕಟೆಕಟೆ ಕಾಯುತ್ತಿದ್ದವನು ಗೇಟು ತೆರೆದ.


ನಾನು ಗರ್ಭಗುಡಿಯ ಒಳಹೊಕ್ಕಾಗ ಅಲ್ಲಿನ ಸೌಂದರ್ಯ ಮತ್ತು ಅಲಂಕಾರವನ್ನು ನೋಡಿ ಅವಾಕ್ಕಾದೆ. ಅಲ್ಲೇ ಕುಳಿತು ಮಂತ್ರಪಠಣ ಮಾಡುತ್ತಿದ್ದ ಅರ್ಚಕ ಒಮ್ಮೆ ನನ್ನೆಡೆ ಕೆಂಗಣ್ಣು ಬೀರಿದ. ಅರ್ಧ ನಿಮಿಷ ವೀರಭದ್ರನಲ್ಲಿ ಬೇಡಿಕೊಂಡೆ. ನಂತರ ಚಿತ್ರವೊಂದನ್ನು ತೆಗೆದೆ. ಕೂಡಲೇ ಆಕ್ಷೇಪಿಸಲು ಬಾಯಿ ತೆರೆದ ಆ ಅರ್ಚಕನಿಂದ ಶಬ್ದಗಳು ಹೊರಬರುವಷ್ಟರಲ್ಲಿ ನಾನು ಗರ್ಭಗುಡಿಯ ಹೊರಗೆ ಕಾಲಿಟ್ಟಾಗಿತ್ತು. ಒಳಗೆ ಆತ ಚೀರಾಡುವುದು ನನಗೆ ಕೇಳಿಸುತ್ತಿತು. ಕಟಕಟೆ ಕಾಯುತ್ತಿದ್ದವನಿಗೆ ಧನ್ಯವಾದ ಹೇಳಿ ದೇವಾಲಯದಿಂದ ಹೊರಬಿದ್ದೆ.


ರಾಜಾ ರಾಮಚಂದ್ರ ಜಾಧವನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ವೀರಭದ್ರೇಶ್ವರನ ಮೂರ್ತಿಯ ಕೆತ್ತನೆ ಕೆಲಸ ಆರಂಭಿಸುವನು. ಆಗ ಆತನ ಕನಸಿನಲ್ಲಿ ಬರುವ ಶ್ರೀ ವೀರಭದ್ರೇಶ್ವರ ಸ್ವಾಮಿಯು, ’ಗದವಂತಿ’ (ಉಚ್ಚಾರ ತಪ್ಪು ಇರಬಹುದು) ಎಂಬ ಹಳ್ಳಿಯಲ್ಲಿ ತನ್ನ ಮೂರ್ತಿಯಿರುವುದಾಗಿಯೂ ಅದನ್ನು ತಂದು ಇಲ್ಲಿ ಪ್ರತಿಷ್ಠಾಪನೆ ಮಾಡುವಂತೆ ಹೇಳುವನು. ಸ್ವಾಮಿಯ ಆದೇಶದಂತೆ ರಾಜಾ ರಾಮಚಂದ್ರ ಜಾಧವನು ಖುದ್ದಾಗಿ ಗದವಂತಿ ಗ್ರಾಮಕ್ಕೆ ತೆರಳಿ, ಅಲ್ಲಿಂದ ವೀರಭದ್ರೇಶ್ವರನ ಮೂರ್ತಿಯನ್ನು ತಂದು, ಈ ದೇವಾಲಯದಲ್ಲಿ ಪ್ರತಿಷ್ಠಾಪಿಸುವನು.


ಊರಿನವರಿಗೆ ವೀರಭದ್ರೇಶ್ವರನಲ್ಲಿ ಅಪಾರ ನಂಬಿಕೆ. ಊರಿನಲ್ಲಿ ವ್ಯಾಪಾರ ನಡೆಸುವವರು ಮುಂಜಾನೆ ವೀರಭದ್ರೇಶ್ವರನ ದರ್ಶನ ಮಾಡಿ, ಪ್ರಸಾದವನ್ನು ತಂದು ಅಂಗಡಿಯಲ್ಲಿ ಇಟ್ಟ ಬಳಿಕವೇ ವ್ಯಾಪಾರ ಆರಂಭಿಸುವುದು. ವರ್ಷಕ್ಕೊಮ್ಮೆ ನಡೆಯುವ ವೀರಭದ್ರೇಶ್ವರನ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿರುತ್ತದೆ. ಆಗ ಈ ಊರಿಗೇ ಕಾಲಿಡುವಂತಿಲ್ಲ, ಅಷ್ಟು ಜನಸ್ತೋಮ!