೨೦೧೫ರ ಜನವರಿ ತಿಂಗಳಂದು ಉಡುಪಿ ಯೂತ್ ಹಾಸ್ಟೆಲ್ ವತಿಯಿಂದ ಏರಿಕಲ್ಲಿಗೆ ಚಾರಣ ಆಯೋಜಿಸಲಾಗಿತ್ತು. ನಾನೂ ಸೇರಿಕೊಂಡೆ.
ಈ ಮೊದಲು ೨೦೦೭ರಲ್ಲಿ ಒಮ್ಮೆ ಏರಿಕಲ್ಲಿಗೆ ತೆರಳಿದ್ದೆ. ಆ ಚಾರಣದ ಸುಂದರ ನೆನಪುಗಳು ಮತ್ತೊಮ್ಮೆ ಏರಿಕಲ್ಲಿನೆಡೆ ತೆರಳಲು ನನಗೆ ಪ್ರೇರಕವಾದವು. ಈ ರಮೇಶ್ ಕಾಮತ್ ಎಲ್ಲೆಲ್ಲೋ ಸುತ್ತಾಡುತ್ತಿರುತ್ತಾರೆ. ಅವರೊಂದಿಗೆ ಸುಧೀರ್ ಕುಮಾರ್ ಕೂಡಾ. ಉಡುಪಿ ಯೂತ್ ಹಾಸ್ಟೆಲ್‍ಗೆ ಏರಿಕಲ್ಲಿಗೆ ದಾರಿ ತಿಳಿದಿರಲಿಲ್ಲ. ಆದರೆ ಈ ಇಬ್ಬರು ಮತ್ತೆ ಮತ್ತೆ ಏರಿಕಲ್ಲನ್ನು ಏರಿಳಿದಿದ್ದರಿಂದ ಅವರನ್ನು ಚಾರಣಕ್ಕೆ ಬರುವಂತೆ ವಿನಂತಿಸಲಾಯಿತು.
ಕಾಡಿನೊಳಗೆ ಸುಮಾರು ೪೫ ನಿಮಿಷ ನಡೆದ ಬಳಿಕ, ನಂತರದ ಒಂದುವರೆ ತಾಸು ಚಾರಣ ತೆರೆದ ಪ್ರದೇಶದಲ್ಲಿ. ಅಸಲಿಗೆ ಈ ಚಾರಣ ಸುಲಭದ್ದು. ಆದರೆ ಅಂದು ಬಿಸಿಲು ನಮ್ಮನ್ನು ಹೈರಾಣಾಗಿಸಿತು. ಚಾರಣದುದ್ದಕ್ಕೂ ಎಲ್ಲಿಯೂ ನೀರು ಸಿಗದಿರುವುದರಿಂದ, ಕೊನೆಕೊನೆಗೆ ಅಲ್ಲಿ ನೀರಿಗೆ ಹಾಹಾಕಾರ.
ಚಾರಣದ ಒಂದು ಭಾಗದಲ್ಲಿ ಎರಡು ದಾರಿಗಳಿವೆ. ಸುತ್ತುಬಳಸಿ ತೆರಳಿದರೆ ದಾರಿ ’ಯು’ ಆಕಾರದಲ್ಲಿ ತಿರುಗಿ ಬೆಟ್ಟದ ಮೇಲೆ ಬರುವುದು. ಇಲ್ಲವಾದಲ್ಲಿ ನೇರವಾಗಿ ಮೇಲೆ ಹತ್ತಿ ಆ ಸುತ್ತಿ ಬಳಸಿ ಬರುವ ದಾರಿಯನ್ನು ಸೇರಿಕೊಳ್ಳಬಹುದು. ಏಳು ವರ್ಷಗಳ ಹಿಂದೆ ಈ ಶಾರ್ಟ್‍ಕಟ್ ಮೂಲಕ ತೆರಳಿದ್ದೆ. ಇಂದು ಒಂದಿಬ್ಬರು ತರುಣರನ್ನು ಹೊರತುಪಡಿಸಿ ಉಳಿದೆಲ್ಲರೂ ಸುತ್ತಿಬಳಸಿ ಬರುವ ದಾರಿ ಮೂಲಕವೇ ತೆರಳಿದ್ದರೂ, ನಾನು ಹುಂಬತನದಿಂದ ಆ ಶಾರ್ಟ್‍ಕಟ್ ಮೂಲಕ ನೇರವಾಗಿ ಮೇಲೇರತೊಡಗಿದೆ. ಚಾರಣದಲ್ಲಿ ನಾನೇ ಹಿಂದೆ ಇದ್ದಿದ್ದು ಕೂಡಾ ನನ್ನನ್ನು ಈ ನಿರ್ಧಾರ ಕೈಗೊಳ್ಳುವಂತೆ ಮಾಡಿತು.
ಅರ್ಧ ದಾರಿ ಏರುವಷ್ಟರಲ್ಲಿ ಯಾಕಾದರೂ ಈ ದಾರಿಯಾಗಿ ಬಂದೆನೋ ಎಂದು ಪರಿತಪಿಸತೊಡಗಿದೆ. ಹಿಂದಿರುಗಿ ನೋಡಿದರೆ ನಾನು ಸುಮಾರಾಗಿ ಮೇಲೆ ಬಂದಾಗಿತ್ತು. ಮತ್ತೆ ಕೆಳಗಿಳಿದು, ಮತ್ತೊಂದು ದಾರಿಯಲ್ಲಿ ಬರುವಷ್ಟರಲ್ಲಿ ತುಂಬಾನೇ ತಡವಾಗುವುದು ಎಂದರಿತು ಬೇರೆ ದಾರಿಯಿಲ್ಲದೆ ಮುನ್ನಡೆದೆ. ಮೇಲೇರಿದಂತೆ ದಾರಿ ಇನ್ನಷ್ಟು ಕಠಿಣ ಮತ್ತು ನೇರ. ಎರಡು ಕಡೆ, ಆ ಪೊದೆಗಳ ನಡುವೆ ಎಲ್ಲಿ ಕಾಲಿಡುವುದೆಂದು ಕಾಣದೆ ಎಡವಿಬಿದ್ದೆ.
ಸುಮಾರು ಮುಕ್ಕಾಲು ಭಾಗ ಮೇಲೇರಿದಾಗ, ಮತ್ತೊಂದು ದಾರಿಯಿಂದ ಬರುತ್ತಿದ್ದ ನನ್ನ ಸಹಚಾರಣಿಗರು ಕಾಣಸಿಕ್ಕರು. ಆಹಾ..... ನನಗಿಂತ ಎಷ್ಟೋ ಮುಂದಿದ್ದ ಇವರನ್ನು ನಾನು ಈಗ ಸೇರಿಕೊಂಡೆ ಎಂಬ ಉತ್ಸಾಹ, ಸಂತೋಷದಿಂದ ಮತ್ತೆ ಮೇಲೇರಲು ಆರಂಭಿಸಿದೆ. ಆದರೆ ದಾರಿ ಇನ್ನಷ್ಟು ಕಠಿಣವಾಗತೊಡಗಿತು. ಕೊನೆಗೆ ಒದ್ದಾಡಿ, ಗುದ್ದಾಡಿ, ತಡಬಡಿಸಿ, ಮತ್ತೊಂದೆರಡು ಸಲ ಜಾರಿಬಿದ್ದು, ಉಳಿದವರನ್ನು ಸೇರಿಕೊಂಡೆ.
ಏರಿಕಲ್ಲು ಇನ್ನೂ ದೂರವಿತ್ತು. ಆದರೆ ಅಷ್ಟರಲ್ಲಿ ನನ್ನ ದೇಹ ವಿಶ್ರಾಂತಿಗೆ ಬೊಬ್ಬಿಡಲಾರಂಭಿಸಿತ್ತು. ಸುಮಾರು ಹೊತ್ತು ಆ ಬಿಸಿಲಿನಲ್ಲಿಯೇ ವಿಶ್ರಮಿಸಿದೆ. ಆ ಶಾರ್ಟ್‍ಕಟ್ ನನ್ನ ಬೆವರಿಳಿಸಿತ್ತು.
ಅಲ್ಲಿಂದ ಮುಂದೆ ನಿಧಾನವಾಗಿ ನಡೆದು ಇನ್ನೊಂದು ೨೦ ನಿಮಿಷದಲ್ಲಿ ಏರಿಕಲ್ಲಿನ ಬುಡವನ್ನು ತಲುಪಿದೆ. ನಾನೇ ಕೊನೆಯವನೆಂದು ಮತ್ತೆ ಬೇರೆ ಹೇಳಬೇಕೆ? ಇಲ್ಲಿ ಮತ್ತೆ ವಿಶ್ರಾಂತಿ. ಸುತ್ತಲಿನ ಬೆಟ್ಟ ಗುಡ್ಡಗಳ ದೃಶ್ಯದ ಅವಲೋಕನ. ಹರಟೆ. ಕೊರೆತ. ಉದರ ಪೋಷಣೆ. ಜಿಹ್ವಾ ಚಪಲ ಪೂರೈಕೆ. ಇತ್ಯಾದಿ.
ಈ ಚಾರಣ ಸುಲಭದ್ದು ಎಂದು ಹೊರಟ ನಮಗೆ ಪ್ರಕೃತಿ ಅಂದು ತಕ್ಕ ಪಾಠ ಕಲಿಸಿತ್ತು. ಸೂರ್ಯದೇವನ ಪ್ಲ್ಯಾನ್ ಬೇರೆನೇ ಇತ್ತು. ಆತ ನಮ್ಮನ್ನು ಸಿಕ್ಕಾಪಟ್ಟೆ ಕಾಡಿದ. ತನ್ನನ್ನು ಗಣನೆಗೆ ತಗೆದುಕೊಳ್ಳದೇ ಚಾರಣ ಆರಂಭಿಸಿದ ನಮ್ಮನ್ನು ತರಾಟೆಗೆ ತೆಗೆದುಕೊಂಡ, ಚಾರಣದ ಹೊಸ ಅನುಭವವನ್ನು ನೀಡಿದ ಮತ್ತು ಸ್ವಲ್ಪ ಜೋರಾಗಿಯೇ ಎಚ್ಚರಿಕೆಯನ್ನೂ ನೀಡಿದ.