ಮೊಸಳೆಯಲ್ಲಿ ಎರಡು ಪುರಾತನ ದೇವಾಲಯಗಳಿವೆ - ನಾಗೇಶ್ವರ ಹಾಗೂ ಚನ್ನಕೇಶವ. ಒಂದೇ ಪ್ರಾಂಗಣದಲ್ಲಿ ಅಕ್ಕಪಕ್ಕದಲ್ಲಿರುವ ಈ ದೇವಾಲಯಗಳು ಸಮಾನ ಗಾತ್ರ ಮತ್ತು ಆಕಾರದಲ್ಲಿದ್ದು, ಏಕಕೂಟ ಶೈಲಿಯದ್ದಾಗಿವೆ. ಇಸವಿ ೧೨೫೦ರ ಸುಮಾರಿಗೆ ಆಗಿನ ಹೊಯ್ಸಳ ದೊರೆ ವೀರ ಸೋಮೇಶ್ವರನ ದಂಡಾಧಿಪತಿಯಾಗಿದ್ದ ನಾಗಣ್ಣ ನಾಯಕನೆಂಬುವನಿಂದ ನಿರ್ಮಿಸಲಾಗಿರುವ ಈ ಅವಳಿ ದೇವಾಲಯಗಳು ಒಂದೇ ರೀತಿಯ ವಿನ್ಯಾಸವನ್ನು ಹೊಂದಿವೆ. ಎರಡೂ ದೇವಾಲಯಗಳು ಏಕಪ್ರಕಾರದ ಇಕ್ಕೆಲಗಳಲ್ಲಿ ಜಗತಿಯುಳ್ಳ ಮುಖಮಂಟಪ, ನವರಂಗ, ಅಂತರಾಳ, ಗರ್ಭಗುಡಿ ಹಾಗೂ ಶಿಖರಗಳನ್ನು ಹೊಂದಿವೆ. ಎರಡೂ ದೇವಾಲಯಗಳ ಹೊರಗೋಡೆಯಲ್ಲಿ ಹೊಯ್ಸಳ ಶಿಲ್ಪಕಲಾ ಶೈಲಿಯು ಅತ್ಯುನ್ನತವಾಗಿ ಬಿಂಬಿತವಾಗಿದೆ.
ನಾಗೇಶ್ವರ ದೇವಾಲಯ
ಮುಖಮಂಟಪದ ಇಕ್ಕೆಲಗಳಲ್ಲಿರುವ ಜಗತಿಯ ಕವಚಗಳು ಬಿದ್ದುಹೋಗಿವೆ. ಮುಖ್ಯದ್ವಾರದ ಎಲ್ಲಾ ನಾಲ್ಕು ತೋಳುಗಳು ಸುಂದರವಾಗಿರುವ ಬಳ್ಳಿ ಸುರುಳಿ ಹಾಗೂ ಇತರ ಅಲಂಕಾರಿಕಾ ಕೆತ್ತನೆಗಳನ್ನು ಹೊಂದಿವೆ. ಮೇಲ್ಭಾಗದಲ್ಲಿ ಐದು ಸಣ್ಣ ಗೋಪುರಗಳು ಮತ್ತು ನೈಪುಣ್ಯತೆಯಿಂದ ಕೆತ್ತಲಾಗಿರುವ ಹೊರಚಾಚು ಗಜಲಕ್ಷ್ಮೀಯ ಕೆತ್ತನೆಯಿದೆ. ತಳಭಾಗದಲ್ಲಿ ದ್ವಾರಪಾಲಕರಿದ್ದಾರೆ.
ಮುಖಮಂಟಪದ ಮೇಲ್ಚಾವಣಿಯಲ್ಲಿ ಚಚ್ಚೌಕದ ಒಳಗೆ ಕಮಲದ ಕೆತ್ತನೆಯಿದೆ. ಕಮಲದ ಮೊಗ್ಗು ಇರುವಲ್ಲಿ ತಾಂಡವೇಶ್ವರನನ್ನು ಕೆತ್ತಲಾಗಿದೆ. ಕಮಲದ ಸುತ್ತಲೂ ಅಷ್ಟದಿಕ್ಪಾಲಕರು, ವಾದ್ಯಗಾರರು, ನಾಟ್ಯಗಾರರು, ಮಕರತೋರಣ ಇತ್ಯಾದಿಗಳ ಚಿತ್ರಣವಿದೆ.
ಮೇಲ್ಭಾಗದಲ್ಲಿರುವ ಕೈಪಿಡಿಯ ಸುಂದರ ಕೆತ್ತನೆ ಗಮನ ಸೆಳೆಯುತ್ತದೆ. ಇಲ್ಲಿ ನೃತ್ಯರೂಪದಲ್ಲಿರುವ ಶಿವನ ಸುತ್ತಲೂ ನಾಟ್ಯಗಾರರು, ವಾದ್ಯಗಾರರು ಹಾಗೂ ಯಕ್ಷ ಯಕ್ಷಿಯರನ್ನು ತೋರಿಸಲಾಗಿದೆ. ಕೈಪಿಡಿಯ ಬಲಭಾಗದ ಕಲಶ ಮಾತ್ರ ಉಳಿದುಕೊಂಡಿದೆ.
ನವರಂಗದಲ್ಲಿರುವ ನಾಲ್ಕು ಕಂಬಗಳ ನಡುವೆ ನಂದಿಯ ಆಕರ್ಷಕ ಮೂರ್ತಿಯಿದೆ. ಮೇಲ್ಛಾವಣಿಯಲ್ಲಿ ಒಂಬತ್ತು ಪದ್ಮಗಳ ನಡುವೆ ಗಣೇಶನ ನೃತ್ಯ ರೂಪಕವನ್ನು ತೋರಿಸಲಾಗಿದೆ.
ನವರಂಗದಲ್ಲಿರುವ ದೇವಕೋಷ್ಠಗಳಲ್ಲಿ ಗಣೇಶ, ಶಾರದೆ, ಮಹಿಷಮರ್ದಿನಿ, ಕೇಶವ ಹಾಗೂ ಸಪ್ತಮಾತೃಕೆಯರ ವಿಗ್ರಹಗಳನ್ನು ಕಾಣಬಹುದು.
ಅಂತರಾಳದ ದ್ವಾರವು ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಹಾಗೂ ದ್ವಾರಪಾಲಕರನ್ನು ಹೊಂದಿದೆ. ಮೇಲ್ಭಾಗದಲ್ಲಿ ಮಕರತೋರಣದಿಂದ ಅಲಂಕೃತ ಉಮಾಮಹೇಶ್ವರನ ಚಿತ್ರಣವಿದೆ. ಉಮಾಮಹೇಶ್ವರನ ಸಮೀಪದಲ್ಲಿ ಗಣೇಶ, ಹಂಸ, ನಂದಿ ಹಾಗೂ ನಾಗದೇವರನ್ನೂ ತೋರಿಸಲಾಗಿದೆ.
ಗರ್ಭಗುಡಿಯ ದ್ವಾರವು ಸರಳವಾಗಿದ್ದು, ಮೇಲ್ಭಾಗದಲ್ಲಿ ಗಜಲಕ್ಷ್ಮೀ ಹಾಗೂ ೫ ಸಣ್ಣ ಗೋಪುರಗಳನ್ನು ಹೊಂದಿದೆ. ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ.
ದೇವಾಲಯದ ಹೊರಗೋಡೆಯಲ್ಲಿ ಸುಂದರ ಭಿತ್ತಿಚಿತ್ರಗಳಿವೆ. ಇವುಗಳಲ್ಲಿ ಹೆಚ್ಚಿನವು ಶಿವನ ವಿವಿಧ ರೂಪಗಳು. ಉಳಿದಂತೆ ಗೌರಿ, ಮಹೇಶ್ವರಿ, ದುರ್ಗಾ, ಶ್ರೀದೇವಿ ಹಾಗೂ ಭೂದೇವಿಯರ ಕೆತ್ತನೆಗಳನ್ನೂ ಕಾಣಬಹುದು.
ದೇವಾಲಯದ ಮೂರೂ ಪಾರ್ಶ್ವಗಳಲ್ಲಿ ಕೈಪಿಡಿಯ ರಚನೆ ಹಾನಿಯಾಗದೆ ಉಳಿದಿರುವುದು ಸಂತಸದ ವಿಷಯ. ಕೈಪಿಡಿಯ ಕೆತ್ತನೆಯಿಲ್ಲದಿದ್ದರೆ ಹೊರಗೋಡೆಯ ಕೆತ್ತನೆ ಅಪೂರ್ಣ ಎನ್ನಲಾಗುತ್ತದೆ.
ದೇವಾಲಯದ ಶಿಖರವನ್ನು ಮೂರು ಸ್ತರಗಳನ್ನು ನಿರ್ಮಿಸಲಾಗಿದ್ದು, ಮೇಲ್ಭಾಗದಲ್ಲಿರುವ ಕಮಲದ ಮೇಲೆ ಆಕರ್ಷಕ ಕಲಶವಿದೆ. ಶಿಖರದ ತುಂಬಾ ಸುಂದರ ಕೆತ್ತನೆಗಳನ್ನು ಕಾಣಬಹುದು.
ಶಿಖರದ ಮುಂಭಾಗದಲ್ಲಿ ಹೊಯ್ಸಳ ಲಾಂಛನವಾದ ಸಳ ಹುಲಿಯೊಡನೆ ಹೋರಾಡುವ ಕೆತ್ತನೆಯಿದೆ. ಈ ಕೆತ್ತನೆಯ ಮುಂಭಾಗದಲ್ಲಿ ಶಿವನ ನೃತ್ಯರೂಪಕವನ್ನು ತೋರಿಸುವ ಶಿಖರ ಲಾಂಛನ ಫಲಕವಿದೆ.
ಚನ್ನಕೇಶವ ದೇವಾಲಯ
ಎರಡು ಕಂಬಗಳ ಮುಖಮಂಟಪವು ಇಕ್ಕೆಲಗಳಲ್ಲಿ ಜಗತಿಯನ್ನು ಹೊಂದಿದೆ. ಜಗತಿಯ ಹೊರಕವಚದಲ್ಲಿ ನಾಟ್ಯಗಾರರು ಮತ್ತು ಸಂಗೀತಗಾರರ ಕೆತ್ತನೆಗಳಿವೆ. ಈ ಕೆತ್ತನೆಗಳನ್ನು ಅಲಂಕಾರಿಕಾ ಬಳ್ಳಿಗಳ ಕೆತ್ತನೆಗಳಿಂದ ಆವರಿಸಲಾಗಿದೆ. ತಳಭಾಗದಲ್ಲಿ ಮಿಥುನ ಶಿಲ್ಪಗಳಿವೆ. ನಡುವೆ ಇದ್ದ ಕೆಲವು ಶಿಲ್ಪಗಳು ನಶಿಸಿರುವುದನ್ನು ಕಾಣಬಹುದು.
ನಾಲ್ಕು ತೋಳುಗಳ ಮುಖ್ಯದ್ವಾರವು ದ್ವಾರಪಾಲಕರನ್ನು ಹೊಂದಿದ್ದು, ಮೇಲ್ಭಾಗದಲ್ಲಿ ೫ ಸಣ್ಣ ಗೋಪುರಗಳನ್ನು ಹೊಂದಿದೆ. ಗಜಲಕ್ಷ್ಮೀಯ ಕೆತ್ತನೆ ನಶಿಸಿದೆ.
ಮುಖಮಂಟಪದ ಮೇಲ್ಛಾವಣಿಯಲ್ಲಿ ಅಷ್ಟದಿಕ್ಪಾಲಕರಿಂದ ಸುತ್ತುವರಿಯಲ್ಪಟ್ಟ ಕಮಲದ ಕೆತ್ತನೆಯಿದೆ. ಈ ಕಮಲದ ಸುತ್ತಲೂ ವಾದ್ಯಗಾರರ ಹಾಗೂ ನಾಟ್ಯಗಾರರ ಕೆತ್ತನೆಯನ್ನೂ ಕಾಣಬಹುದು.
ನವರಂಗದಲ್ಲಿ ನಾಲ್ಕು ಕಂಬಗಳ ನಡುವಿರುವ ಭುವನೇಶ್ವರಿಯಲ್ಲಿ ಇನ್ನೊಂದು ಆಕರ್ಷಕ ಕಮಲದ ಕೆತ್ತನೆಯನ್ನು ಕಾಣಬಹುದು. ಇದರ ಸುತ್ತಲೂ ಅಷ್ಟದಿಕ್ಪಾಲಕರು, ವಾದ್ಯಗಾರರು ಹಾಗೂ ನಾಟ್ಯಗಾರರನ್ನೂ ಕಾಣಬಹುದು.
ನವರಂಗದಲ್ಲಿರುವ ಉಳಿದ ೮ ಭುವನೇಶ್ವರಿಗಳಲ್ಲಿ ವಿಭಿನ್ನ ರೀತಿಯ ಕೆತ್ತನೆಗಳನ್ನು ಕಾಣಬಹುದು. ಒಂದಕ್ಕಿಂತ ಒಂದು ಮಿಗಿಲಾಗಿರುವ ಈ ಕೆತ್ತನೆಗಳು, ಹೊಯ್ಸಳ ಶಿಲ್ಪಿಗಳು ಭುವನೇಶ್ವರಿಗೆ ನೀಡುವ ಮಹತ್ವವನ್ನು ತಿಳಿಸುತ್ತವೆ.
ನವರಂಗದಲ್ಲಿರುವ ದೇವಕೋಷ್ಠಗಳಲ್ಲಿ ಲಕ್ಷ್ಮೀನಾರಾಯಣ, ಯೋಗನರಸಿಂಹ, ಸರಸ್ವತಿ, ಲಕ್ಷ್ಮೀ, ಗಣೇಶ ಹಾಗೂ ಪಾರ್ವತಿಯ ವಿಗ್ರಹಗಳಿವೆ.
ಅಂತರಾಳದ ದ್ವಾರವು ಜಾಲಂಧ್ರಗಳನ್ನು ಹಾಗೂ ದ್ವಾರಪಾಲಕರನ್ನು ಹೊಂದಿದೆ. ಮೇಲ್ಭಾಗದಲ್ಲಿ ಮಕರತೋರಣದಿಂದ ಅಲಂಕೃತ ವಿಷ್ಣುವಿನ ಕೆತ್ತನೆಯಿದೆ. ಮಕರಗಳ ಮೇಲೆ ಸವಾರಿ ಮಾಡುತ್ತಿರುವ ಯಕ್ಷ ಹಾಗೂ ಯಕ್ಷಿಯರನ್ನು ಕಾಣಬಹುದು. ಅಂತರಾಳದ ಭುವನೇಶ್ವರಿಯಲ್ಲಿ ಉಗ್ರನರಸಿಂಹನ ಚಿತ್ರಣವಿದೆ.
ನಾಲ್ಕುತೋಳುಗಳ ಗರ್ಭಗುಡಿಯ ದ್ವಾರವು ದ್ವಾರಪಾಲಕರನ್ನು, ಗಜಲಕ್ಷ್ಮೀಯನ್ನು ಹಾಗೂ ೫ ಸಣ್ಣ ಗೋಪುರಗಳನ್ನು ಹೊಂದಿದೆ. ದೇವಾಲಯದ ಅರ್ಚಕ ಚನ್ನಕೇಶವನ ವಿಗ್ರದ ಚಿತ್ರ ತೆಗೆಯಲು ಅನುಮತಿ ನೀಡಲಿಲ್ಲ. ಗರುಡ ಪೀಠದ ಮೇಲಿರುವ ಈ ವಿಗ್ರಹವು ಆರು ಅಡಿ ಎತ್ತರವಿದ್ದು, ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆಯನ್ನು ಹೊಂದಿದೆ.
ಈ ದೇವಾಲಯದಲ್ಲೂ ಕೈಪಿಡಿ ಕೆತ್ತನೆ ನಶಿಸದೆ ಉಳಿದುಕೊಂಡಿದೆ. ಮೂರು ಪಾರ್ಶ್ವಗಳಲ್ಲಿರುವ ಕೈಪಿಡಿಯಲ್ಲಿ ವೇಣುಗೋಪಾಲನನ್ನು ತೋರಿಸಲಾಗಿದೆ.
ಹೊರಗೋಡೆಯಲ್ಲಿ ಚನ್ನಕೇಶವನ ಹಲವು ರೂಪಗಳನ್ನು ತೋರಿಸಲಾಗಿದೆ. ಲಕ್ಷ್ಮೀನರಸಿಂಹ, ವೇಣುಗೋಪಾಲ, ವರಾಹ, ಕಾಳಿಂಗಮರ್ದನ, ಉಗ್ರನರಸಿಂಹ, ನಾರಾಯಣ, ಗೋವರ್ಧನಧಾರಿ ಕೃಷ್ಣ, ಯೋಗನರಸಿಂಹ ಇತ್ಯಾದಿ ಕೆತ್ತನೆಗಳನ್ನು ಕಾಣಬಹುದು. ದೇವಾಲಯದ ತುಂಬಾ ಈ ಕೆತ್ತನೆಗಳೇ ತುಂಬಿವೆ. ಗರುಡನ ಕೆತ್ತನೆಯನ್ನೂ ಕಾಣಬಹುದು.
ಶಿಖರವನ್ನು ಮೂರು ಸ್ತರಗಳನ್ನು ನಿರ್ಮಿಸಲಾಗಿದ್ದು, ಮೇಲ್ಭಾಗದಲ್ಲಿರುವ ಕಮಲದ ಮೇಲೆ ಆಕರ್ಷಕ ಕಲಶವಿದೆ. ಶಿಖರದ ಮುಂಭಾಗದಲ್ಲಿ ಸಳ ಹುಲಿಯೊಡನೆ ಹೋರಾಡುವ ಕೆತ್ತನೆ ಹಾಗೂ ಶಿಖರ ಲಾಂಛನ ಫಲಕಗಳಿವೆ.
ಪುರಾತನ ಕಾಲದಲ್ಲಿ ಋಷಿ ಜಮದಗ್ನಿಯು ಈ ಸ್ಥಳದಲ್ಲಿ ಆಶ್ರಮವನ್ನು ಹೊಂದಿದ್ದನು ಎಂಬ ದಂತಕಥೆಯಿದೆ. ಆಗಿನ ಕಾಲದಲಿ ಈ ಸ್ಥಳವನ್ನು ’ಮುಸಳ’ ಎಂದು ಕರೆಯಲಾಗಿತ್ತಿತ್ತು. ಮುಸಳ ಎಂದರೆ ಒಂದು ಬಗೆಯ ಬೊಗಾಣಿ(ಪಾತ್ರೆ). ಸಾಂಬಾರ್ ಪದಾರ್ಥಗಳನ್ನು ಕುಟ್ಟಲು ಬಳಸುವ ಸಣ್ಣ ಪಾತ್ರೆ ಮತ್ತು ಹಿಡಿಕೆಗೆ ಮುಸಳ ಎನ್ನಲಾಗುತ್ತಿತ್ತು. ಈ ಶಬ್ದವೇ ಕಾಲಕ್ರಮೇಣ ಮೊಸಳೆಯಾಗಿ ಪರಿವರ್ತಿತವಾಗಿದೆ ಎಂದು ನಂಬಲಾಗಿದೆ.