ಭಾನುವಾರ, ಜನವರಿ 26, 2014

ಮಾಂಗ್ಟೇಶ್ವರನ ಕಡಲತೀರ


ಈ ಕಡಲತೀರಕ್ಕೆ ಯಾರೂ ಬರುವುದೇ ಇಲ್ಲ. ಊರಿನವರಲ್ಲಿ ಈ ಕಡಲತೀರಕ್ಕೆ ದಾರಿ ಕೇಳಿದರೆ, ಸ್ವಲ್ಪ ದೂರದಲ್ಲಿರುವ ಇದೇ ಹೆಸರುಳ್ಳ ಇನ್ನೊಂದು ಕಡಲತೀರಕ್ಕೆ ಕಳುಹಿಸುತ್ತಾರೆ. ನಿಖರವಾಗಿ ಕೇಳಿದರೆ ಮಾತ್ರ ಈ ಕಡಲತೀರ ನೋಡುವ ಭಾಗ್ಯ. ಇದು ನನಗೆ ಲೀನಾ ನೀಡಿದ ಮಾಹಿತಿ.


ಲೀನಾ, ಇದೇ ಊರಿನಲ್ಲಿ ನಾಲ್ಕೈದು ವರ್ಷ ಇದ್ದುದರಿಂದ ನನಗೆ ಕಡಲತೀರಕ್ಕೆ ದಾರಿ ಕೇಳುವ ಪ್ರಮೇಯ ಬರಲಿಲ್ಲ. ಆದರೂ ನೋಡೋಣವೆಂದು ಎರಡು ಕಡೆ ದಾರಿ ಕೇಳಿದೆ. ಊರವರು ಮತ್ತು ಪ್ರವಾಸಿಗರು ತೆರಳುವ ಆ ಮತ್ತೊಂದು ಕಡಲತೀರಕ್ಕೇ ನನಗೆ ದಾರಿ ತೋರಿಸಲಾಯಿತು. ಮತ್ತೆ ನಿಖರವಾಗಿ ಕೇಳಿದೆ. ಆಗ ನನಗೆ ಈ ಕಡಲತೀರದ ಬಗ್ಗೆ ತಿಳಿಸಲಾಯಿತು!!


ಅದೇನೇ ಇರಲಿ. ಯಾರೂ ಬರದಿದ್ದರೆ ಒಳ್ಳೆಯದೆ ತಾನೆ? ಇಲ್ಲಿ ತೀರಗುಂಟ ಜನವಸತಿ ಪ್ರದೇಶವಾಗಿದ್ದು, ಇವರ ಮುಖ್ಯ ಕಸುಬೇ ಮೀನು ಹಿಡಿಯುವುದು. ಮಣ್ಣಿನ ನೆಲ ಮುಗಿಯುವವರೆಗೆ ಮನೆಗಳಿದ್ದು, ಮರಳಿನ ನೆಲ ಆರಂಭವಾಗುವಲ್ಲಿ ಸಾಲಾಗಿ ದೋಣಿಗಳನ್ನು ನಿಲ್ಲಿಸಲಾಗಿತ್ತು. ಇಲ್ಲಿಗೆ ಬಸ್ಸು ಸೌಕರ್ಯ ಇಲ್ಲ. ಊರಿನಿಂದ ಕೇವಲ ೩ ಕಿಮಿ ದೂರ ಇರುವ ಈ ಸ್ಥಳಕ್ಕೆ ರಿಕ್ಷಾಗಳು ಓಡಾಡುತ್ತವೆ.


ಈ ಸ್ಥಳಕ್ಕೆ ಬರಲು ಇರುವ ಒಂದೇ ಕಾರಣವೆಂದರೆ ತೀರದಿಂದ ಸುಮಾರು ನೂರು ಮೀಟರುಗಳಷ್ಟು ದೂರದಲ್ಲಿರುವ ಒಂದು ನಡುಗುಡ್ಡೆ. ಇಲ್ಲಿಗೆ ತೆರಳಲು ಕಲ್ಲುಗಳನ್ನು ಹಾಕಿ ಕಲ್ಲುಸೇತು ನಿರ್ಮಿಸಲಾಗಿದೆ. ಈ ನಡುಗುಡ್ಡೆಯಲ್ಲಿ ಸ್ಥಳೀಯರಿಗೆ ಆಪ್ತನಾಗಿರುವ ಮಾಂಗ್ಟೇಶ್ವರನ ದೇವಾಲಯವಿದೆ. ಬರತದ ಸಮಯದಲ್ಲಿ ಕಲ್ಲುಸೇತು ಮುಳುಗುವುದರಿಂದ ಈ ನಡುಗುಡ್ಡೆಗೆ ಹೋಗಲು ಸಾಧ್ಯವಿಲ್ಲ.


ಅಲ್ಲೊಬ್ಬ ಯುವಕನ ಬಳಿ ಕೇಳಿದಾಗ, ’ಬೇಗ ಹೋಗಿ ಬನ್ನಿ, ನೀರು ಬರುವ ಸಮಯ ಆಯ್ತು’ ಎಂದ. ಆಗ ಅಲ್ಲೇ ಇದ್ದ ವಯಸ್ಕರೊಬ್ಬರು, ’ಇನ್ನು ತಡಾ ಅದೆ. ಸಾವ್ಕಾಶ ಹೋಗ್ಬನ್ನಿ’ ಎಂದಾಗ ಯಾರನ್ನು ನಂಬುವುದು ಎಂದೇ ತಿಳಿಯದಾಯಿತು. ವಯಸ್ಕ ವ್ಯಕ್ತಿ ಅನುಭವದ ಆಧಾರದ ಮೇಲೆಯೇ ಮಾತನಾಡುತ್ತಿರುವಂತೆ ತೋರಿದ ಕಾರಣ, ಅವರಿಬ್ಬರಿಗೂ ಧನ್ಯವಾದ ಹೇಳಿ, ಸಾವ್ಕಾಶ ಹೋಗಿಬರುವ ನಿರ್ಧಾರ ಮಾಡಿದೆ.


ಈ ಕಲ್ಲುಸೇತುವಿನ ಕಲ್ಲುಗಳು, ಎರಡೂ ಕಡೆಯಿಂದ ಅಲೆಗಳ ಹೊಡೆತಕ್ಕೆ ಚದುರಿಕೊಂಡು ಬಿದ್ದಿವೆ. ಒಂದರ ಮೇಲೊಂದನ್ನು ಪೇರಿಸಿ ಇಡಲಾಗಿದ್ದ ಕಲ್ಲುಗಳು ಈಗ ಒಂದರ ಬದಿಯಲ್ಲಿ ಒಂದು ಇವೆ. ಒಂದು ಬದಿಯಲ್ಲಿ ಬಹುದೂರದವರೆಗೂ ಸಾಲಾಗಿ ಇಡಲಾಗಿರುವ ದೋಣಿಗಳು ಮತ್ತು ದೂರದಲ್ಲಿ ಪಶ್ಚಿಮ ಘಟ್ಟಗಳ ಸಾಲು, ಇನ್ನೊಂದೆಡೆ ನದಿಯೊಂದು ಬಂದು ಸಮುದ್ರಕ್ಕೆ ಸೇರುವ ತಾಣ ಹಾಗೂ ನಂತರ ಸಮುದ್ರಕ್ಕೆ ತಾಗಿಕೊಂಡೇ ಉದ್ದಕ್ಕೆ ಚಾಚಿರುವ ಬೆಟ್ಟಗಳು.


ಇದು ಪ್ರವಾಸೀ ತಾಣವಾಗಿರದ ಕಾರಣ, ಸ್ಥಳೀಯರಿಗೆ ಶರಧಿ ತೀರವೇ ಶೌಚಾಲಯ! ನೋಡಲು ಕಡಲತೀರ ಶುಭ್ರವಾಗಿ ಕಂಡುಬಂದರೂ, ಅಲ್ಲಲ್ಲಿ ಸ್ಥಳೀಯರು ’ಚುಕ್ಕೆ’ಗಳನ್ನು ಹಾಕಿರುತ್ತಾರೆ. ಉಬ್ಬರದ ಸಮಯದಲ್ಲಿ ಶರಧಿ ಈ ಎಲ್ಲಾ ಚುಕ್ಕೆಗಳನ್ನು ಗುಡಿಸಿ ಸಾರಿಸಿಬಿಡುತ್ತದೆ. ಆದರೂ ಸ್ವಲ್ಪ ಜಾಗರೂಕರಾಗಿ ಹೆಜ್ಜೆ ಹಾಕುವುದು ಎಂದಿಗೂ ಒಳ್ಳೆಯದು. ನಾನು ನಡೆದು ಹೋಗುತ್ತಿರಬೇಕಾದರೆ ಒಬ್ಬ ಚುಕ್ಕೆ ಹಾಕುತ್ತಿದ್ದ, ಇನ್ನೊಬ್ಬ ಹಾಕಲು ಹೋಗುತ್ತಿದ್ದ. ಹಿಂತಿರುಗಬೇಕಾದರೆ ಮಗದೊಬ್ಬ, ನಾನು ಬರುತ್ತಿರುವುದನ್ನು ಕಂಡು ನನಗೆ ಬೆನ್ನು ಮಾಡಿ ಕೂತೇಬಿಟ್ಟ!


ಕಲ್ಲಿನಿಂದ ಕಲ್ಲಿಗೆ ಜಿಗಿಯುತ್ತಾ ನಡುಗುಡ್ಡೆ ತಲುಪಿದೆ. ಅಲ್ಲಿ ಮಾಂಗ್ಟೇಶ್ವರನ ಸಣ್ಣ ದೇವಾಲಯ. ಸಮೀಪವೇ ಸಣ್ಣ ಬಾವಿ. ಬದಿಯಲ್ಲೇ ಒಂದು ಶಿವಲಿಂಗ.


ಮೊದಲು ಮಾಂಗ್ಟೇಶ್ವರನಿಗೆ ನಮಸ್ಕರಿಸಿದೆ. ಬಳಿಕ ನಡುಗುಡ್ಡೆಯಿಂದ ಕಾಣಬರುವ ದೃಶ್ಯಗಳ ಚಿತ್ರಗಳನ್ನು ತೆಗೆದೆ. ತದನಂತರ ಸುಮಾರು ೨೦ ನಿಮಿಷ ಶಿವಲಿಂಗದ ಬಳಿ ಕುಳಿತು ನನ್ನ ಜೀವನದ ಬಗ್ಗೆ ಅವಲೋಕನ ಮಾಡಿದೆ!


ಎದುರಿನಲ್ಲಿರುವ ಸಣ್ಣ ಬೆಟ್ಟಕ್ಕೆ ತೆರಳುವುದು ನನ್ನ ಮುಂದಿನ ಗುರಿಯಾಗಿತ್ತು. ಈ ಬೆಟ್ಟ ಸಮೀಪದಲ್ಲೇ ಇದ್ದರೂ, ಅಲ್ಲಿ ನದಿ ಸಮುದ್ರ ಸೇರುವ ಸ್ಥಳವಾಗಿದ್ದರಿಂದ, ಆ ಕಡೆ ದಾಟುವುದು ಅಸಾಧ್ಯ. ಇರುವ ಒಂದೇ ದಾರಿಯೆಂದರೆ, ಮರಳಿ ೩ ಕಿಮಿ ದೂರವಿರುವ ಊರಿಗೆ ಬಂದು, ನಂತರ ಮತ್ತೆ ೫ ಕಿಮಿ ಕ್ರಮಿಸಿ ಬೆಟ್ಟದ ತುದಿ ತಲುಪುವುದು.


ಈ ಬೆಟ್ಟದ ತುದಿಯಿಂದ ಸಮುದ್ರ ತೀರದ ಮತ್ತು ಮಾಂಗ್ಟೇಶ್ವರನ ನಡುಗುಡ್ಡೆಯ ವಿಹಂಗಮ ನೋಟ ಲಭ್ಯ. ಮೋಡಗಳ ಮರೆಯಿಂದ ಸೂರ್ಯದೇವ, ಮಾಂಗ್ಟೇಶ್ವರನ ವಾಸಸ್ಥಾನದ ಮೇಲೆ ಮಾತ್ರ ಬೆಳಕು ಚೆಲ್ಲುತ್ತಿರುವಂತೆ ಕಾಣುತ್ತಿತ್ತು!


ಈ ಗುಡ್ಡದ ತುದಿಯವೆರೆಗೂ ಮಣ್ಣಿನ ರಸ್ತೆಯಿದೆ. ಈ ರಸ್ತೆ ಹಾಗೇ ಮುಂದುವರೆದು ಬೆಟ್ಟದ ಇನ್ನೊಂದು ಪಾರ್ಶ್ವದ ಕೆಳಗಿರುವ ಕಡಲತೀರದ ಸಮೀಪ ಕೊನೆಗೊಳ್ಳುತ್ತದೆ.


ಬೆಟ್ಟದ ತುದಿಯಿಂದ ಮಾಂಗ್ಟೇಶ್ವರನ ಕಡಲತೀರ ಸಂಸ್ಕೃತ ಅಕ್ಷರ ’ಓಂ’ ತರಹ ಕಾಣುತ್ತದೆ. ಇಲ್ಲಿ ಸುಮಾರು ೩೦ ನಿಮಿಷಗಳಷ್ಟು ಸಮಯ ಕಳೆದೆ. ಅಲ್ಲಿ ಯಾರೂ ಇರಲಿಲ್ಲ, ಯಾರೂ ಬರಲಿಲ್ಲ. ಅಲ್ಲಿ ಕೆಳಗೆ, ಬರತದ ಸಮಯವಾಗಿದ್ದರಿಂದ ಕಡಲು ನಿಧಾನವಾಗಿ ಕಲ್ಲುಸೇತುವೆಯನ್ನು ಆವರಿಸಿಕೊಳ್ಳುತ್ತಿತ್ತು.

ಮಾಹಿತಿ: ಡಾ! ಎಸ್.ಡಿ.ನಾಯ್ಕ

3 ಕಾಮೆಂಟ್‌ಗಳು:

Aravind GJ ಹೇಳಿದರು...

ಸೊಗಸಾದ ಜಾಗ!!

ಸಿಂಧು sindhu ಹೇಳಿದರು...

ಪ್ರಿಯ ರಾಜೇಶ್,

ಈ ವರ್ಷ ಅಲ್ಲಿಗೆ ನಮ್ಮನ್ನ ಕರೆದುಕೊಂಡು ಹೋಗಲು ಅಂಬಲಪಾಡಿಯಲ್ಲಿರುವ ನನ್ನ ಸ್ನೇಹಿತರಲ್ಲಿ ವಿನಂತಿ ಸಲ್ಲಿಸಲಾಗಿದೆ.
ತುಂಬ ಕುತೂಹಲಗೊಂಡಿರುವೆ.. ಈ ಸಾಲುಗಳ ವಿಸ್ತ್ರತ ವಿವರಣೆಗಾಗಿ.. (ಮುಖತಃ)
"ಮೊದಲು ಮಾಂಗ್ಟೇಶ್ವರನಿಗೆ ನಮಸ್ಕರಿಸಿದೆ. ಬಳಿಕ ನಡುಗುಡ್ಡೆಯಿಂದ ಕಾಣಬರುವ ದೃಶ್ಯಗಳ ಚಿತ್ರಗಳನ್ನು ತೆಗೆದೆ. ತದನಂತರ ಸುಮಾರು ೨೦ ನಿಮಿಷ ಶಿವಲಿಂಗದ ಬಳಿ ಕುಳಿತು ನನ್ನ ಜೀವನದ ಬಗ್ಗೆ ಅವಲೋಕನ ಮಾಡಿದೆ!"

ಸಾವ್ಕಾಶ ಹೋಗಿಬರುವ ನಿರ್ಧಾರಕ್ಕೆ ಬಂದ ಪರಿ ನನ್ನ ತಲೆನೋವು ಕವಿದ ಸಮಯಕ್ಕೆ ಹಾಯೆನ್ನಿಸಿತು.

ಈ ಎಲ್ಲ ಪನ್ನುಗಳ ಹೊರತಾಗಿ.... ನಿಮ್ಮ ಫೋಟೋ ಮತ್ತು ವಿವರಣೆ ನೀವು ಹೋಗಿ ಬಂದ ಜಾಗದ ಜೀವಂತ ವಿವರಣೆ ನೀಡುತ್ತದೆ. ನಮ್ಮ ಮನಸ್ಸನ್ನು ಅಲ್ಲಿ ಹೋಗಲು ಹಂಬಲಿಸುವಂತೆ ಮಾಡುತ್ತದೆ.

ಪ್ರೀತಿಯಿಂದ,
ಸಿಂಧು

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ಧನ್ಯವಾದ.

ಸಿಂಧು,
ಖಂಡಿತ. ಅಲ್ಲಿಗೂ ಹೋಗೋಣ. ಆ ನಡುಗುಡ್ಡೆಯಲ್ಲಿ ಕುಳಿತೇ ಸಾಲುಗಳ ವಿವರಣೆಯನ್ನೂ ನೀಡೋಣ. ಧನ್ಯವಾದ.