ಬುಧವಾರ, ಜುಲೈ 11, 2012

ಪಂಚಲಿಂಗೇಶ್ವರ ದೇವಾಲಯ - ಹೂಲಿ


ಪಂಚಲಿಂಗೇಶ್ವರ ದೇವಾಲಯ ಹೂಲಿಯ ಪ್ರಮುಖ ದೇವಾಲಯ. ಪ್ರಾಚ್ಯ ವಸ್ತು ಇಲಾಖೆ ಈ ದೇವಾಲಯವನ್ನು ಚೆನ್ನಾಗಿ ಕಾಪಾಡಿಕೊಂಡು ಬಂದಿದೆ. ಮೂರು ದಿಕ್ಕುಗಳಿಂದಲೂ ದ್ವಾರಗಳಿರುವ ಭವ್ಯವಾದ ಮುಖಮಂಟಪವನ್ನು ಹೊಂದಿರುವ ಈ ದೇವಾಲಯ ವಿರಳವಾಗಿ ಕಾಣಬರುವ ಪಂಚಕೂಟ ಶೈಲಿಯದ್ದಾಗಿದೆ.


ಮುಖಮಂಟಪದಲ್ಲಿ ೫೦ಕ್ಕೂ ಮಿಕ್ಕಿ ಕಂಬಗಳಿದ್ದು ಒಟ್ಟು ನಾಲ್ಕು ತರಹದ ಕಂಬಗಳಿವೆ. ಕಕ್ಷಾಸನದ ಮೇಲೆ ಒಂದು ವಿನ್ಯಾಸದ ಕಂಬಗಳಿದ್ದರೆ, ಮುಖಮಂಟಪದ ಒಳಗಡೆ ಎರಡನೇ ತರಹದ ಕಂಬಗಳಿವೆ. ಮುಖಮಂಟಪದ ನಟ್ಟ ನಡುವೆ ಚೌಕಾಕಾರದ ರಂಗದ ಮೇಲಿರುವ ನಾಲ್ಕು ಕಂಬಗಳು ಮೂರನೇ ತರಹದ ವಿನ್ಯಾಸವನ್ನು ಹೊಂದಿದ್ದರೆ, ನವರಂಗದ ದ್ವಾರದ ಸ್ವಲ್ಪ ಮೊದಲು ಇಕ್ಕೆಲಗಳಲ್ಲಿರುವ ೨ ಕಂಬಗಳು ನಾಲ್ಕನೇ ಮಾದರಿಯದ್ದಾಗಿವೆ. ಈ ನಾಲ್ಕನೇ ಮಾದರಿಯ ೨ ಕಂಬಗಳ ಮೇಲ್ಮೈಯಲ್ಲಿ ಮಾತ್ರ ಸೂಕ್ಷ್ಮ ಕೆತ್ತನೆಗಳನ್ನು ಮಾಡಲಾಗಿದೆ.


ನವರಂಗವು ಅಷ್ಟಶಾಖಾ ದ್ವಾರವನ್ನು ಹೊಂದಿದೆ. ದ್ವಾರದ ಮೇಲ್ಭಾಗದಲ್ಲಿ ಎಂಟು ಚೌಕಾಕಾರದ ಭಾಗಗಳಲ್ಲಿ ಅದೇನನ್ನು ಕೆತ್ತಲಾಗಿದೆ ಎಂದು ತಿಳಿಯಲಿಲ್ಲ. ನವರಂಗದೊಳಗೆ ಎರಡು ಸಾಲುಗಳಲ್ಲಿ ಒಟ್ಟು ಎಂಟು ಕಂಬಗಳಿವೆ ಮತ್ತು ನಂದಿಯು ಪ್ರಮುಖ ಶಿವಲಿಂಗಕ್ಕೆ ಮುಖ ಮಾಡಿ ನವರಂಗದ ಮಧ್ಯದಲ್ಲಿ ಆಸೀನನಾಗಿದ್ದಾನೆ.


ಒಂದೇ ಉದ್ದನೆಯ ಕೋಣೆಯನ್ನು ೩ ಗರ್ಭಗುಡಿಗಳನ್ನಾಗಿ ವಿಂಗಡಿಸಲಾಗಿದೆ. ಇಲ್ಲಿ ೩ ಶಿವಲಿಂಗಗಳನ್ನು ಕಾಣಬಹುದು. ಈ ೩ ಲಿಂಗಗಳೂ ಒಂದೇ ಗರ್ಭಗುಡಿಯಲ್ಲಿದ್ದರೂ ಮೂರಕ್ಕೂ ನವರಂಗದಿಂದ ಪ್ರತ್ಯೇಕ ದ್ವಾರಗಳಿರುವ ಕಾರಣ ೩ ಪ್ರತ್ಯೇಕ ಗರ್ಭಗುಡಿಗಳಿರುವ ಭಾವನೆಯನ್ನು ಹುಟ್ಟುಹಾಕುತ್ತವೆ. ಪ್ರಮುಖ ಶಿವಲಿಂಗದ ದ್ವಾರದ ಇಕ್ಕೆಲಗಳಲ್ಲಿರುವ ದೇವಕೋಷ್ಠಗಳಲ್ಲಿ ವಿಷ್ಣು ಮತ್ತು ಗಣೇಶನ ಮೂರ್ತಿಗಳಿವೆ.


ಉಳಿದೆರಡು ಗರ್ಭಗುಡಿಗಳು ನವರಂಗದ ಎಡಕ್ಕೆ ಮತ್ತು ಬಲಕ್ಕೆ ಇದ್ದು ಎದುರುಬದುರಾಗಿವೆ ಮತ್ತು ಶಿವಲಿಂಗಗಳನ್ನು ಹೊಂದಿವೆ. ಎಲ್ಲಾ ಗರ್ಭಗುಡಿಗಳು ಉತ್ಕೃಷ್ಟ ಕೆತ್ತನೆಗಳನ್ನೊಳಗೊಂಡಿರುವ ಆರು ಶಾಖೆಗಳ ದ್ವಾರಗಳನ್ನು ಹೊಂದಿವೆ. ಲಲಾಟಗಳಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ.


ಎಲ್ಲಾ ೫ ಶಿವಲಿಂಗಗಳ ನೆತ್ತಿಯ ಮೇಲೆ ಆಕರ್ಷಕ ಗೋಪುರಗಳನ್ನು ರಚಿಸಲಾಗಿದೆ. ದೇವಾಲಯದ ದೂರದ ನೋಟದಲ್ಲಿ ಈ ಐದು ಗೋಪುರಗಳು ಎದ್ದು ಕಾಣುತ್ತವೆ ಮತ್ತು ದೇವಾಲಯದ ರಚನೆಯ ಬಗ್ಗೆ ಕುತೂಹಲವನ್ನು ಮೂಡಿಸುತ್ತವೆ. ಪಂಚಲಿಂಗೇಶ್ವರ ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಭಿತ್ತಿಚಿತ್ರಗಳಿಲ್ಲ. ಆಕರ್ಷಕ ಮುಖಮಂಟಪ ಮತ್ತು ಅತ್ಯಾಕರ್ಷಕವಾಗಿ ಕಾಣುವ ಐದು ಗೋಪುರಗಳೇ ಪಂಚಲಿಂಗೇಶ್ವರನ ಪ್ರಮುಖ ಆಸ್ತಿ.

ಅಂದು ಇಂದು:


ಕಪ್ಪು ಬಿಳುಪು ಚಿತ್ರಗಳನ್ನು ಇಸವಿ ೧೮೭೪ರಲ್ಲಿ ತಗೆಯಲಾಗಿವೆ. ದೇವಾಲಯ ಶಿಥಿಲಗೊಳ್ಳುತ್ತಿರುವುದನ್ನು ಕಾಣಬಹುದು.


ವರ್ಣಚಿತ್ರಗಳನ್ನು ೨೦೧೦ರಲ್ಲಿ ತೆಗೆಯಲಾಗಿದೆ. ಪ್ರಾಚ್ಯ ವಸ್ತು ಇಲಾಖೆಯ ಪ್ರಯತ್ನದಿಂದ ದೇವಾಲಯ ಇಂದು ತನ್ನ ಮೂಲ ರೂಪದಲ್ಲಿದೆ.

2 ಕಾಮೆಂಟ್‌ಗಳು:

Srik ಹೇಳಿದರು...

ಕಪ್ಪು ಬಿಳುಪು ಚಿತ್ರದ ಬೆಟ್ಟ ಎಲ್ಲೋ ಮಾಯವಾಗಿದೆಯೆ?

- ಶ್ರಿಕ್.

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,
ನಾನು ತೆಗೆದ ಚಿತ್ರದ ಕೋನ ಬೇರೆಯಾಗಿರುವುದರಿಂದ ಆ ಬೆಟ್ಟ ಕಾಣುತ್ತಿಲ್ಲ. ಆಷ್ಟೇ ಅಲ್ಲದೆ ಕಪ್ಪು ಬಿಳುಪು ಚಿತ್ರವನ್ನು ಎತ್ತರದ ಸ್ಥಳದಿಂದ ತೆಗೆಯಲಾಗಿದೆ. ಆದ್ದರಿಂದ ಬೆಟ್ಟ ಕಾಣುತ್ತಿದೆ. ಧನ್ಯವಾದ.