ಬುಧವಾರ, ಮಾರ್ಚ್ 10, 2010

ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೪)


ದ್ರಾವಿಡ್ ಒಬ್ಬ ಮಹಾನ್ ಆಟಗಾರ ಎನ್ನುವುದು ನಿಜ. ಆದರೆ ನಾಯಕನಾಗಿ ಅವರು ಅಷ್ಟೇ ವೈಫಲ್ಯವನ್ನು ಕಂಡರು. ಭಾರತ ತಂಡದ ನಾಯಕನಾಗಿದ್ದಾಗ ಸಹ ಆಟಗಾರರ ಬೆಂಬಲ ದೊರಕಲಿಲ್ಲ. ಯಾಕೆಂದರೆ ದ್ರಾವಿಡ್ ಯಾರೊಂದಿಗೂ ಭಾವನಾತ್ಮಕವಾಗಿ ಸಂಬಂಧ ಬೆಸೆದುಕೊಳ್ಳಲಿಲ್ಲ. ಪ್ರೊಫೆಷನಲ್ ಆಗಿ ಇದ್ದರು. ಇದು ಕೆಲವು ಆಟಗಾರರಿಗೆ ಇಷ್ಟವಾಗಲಿಲ್ಲ. ನಾಯಕನಾದವನಿಗೆ ನರಿ ಬುದ್ಧಿ ಇರಬೇಕು. ದ್ರಾವಿಡ್-ಗೆ ಎಲ್ಲಿಯ ನರಿ ಬುದ್ಧಿ? ದ್ರಾವಿಡ್ ಎಂದಿಗೂ ಯಾವ ಆಟಗಾರನನ್ನೂ ಸಪೋರ್ಟ್ ಮಾಡಿದವರಲ್ಲ. ಯಾರೇ ಆಗಲಿ ತನ್ನ ಸ್ವಂತ ಪರಿಶ್ರಮ ಮತ್ತು ಸಾಮರ್ಥ್ಯದ ಬಲದಿಂದ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕು ಮತ್ತು ಒಮ್ಮೆ ತಂಡಕ್ಕೆ ಆಯ್ಕೆಯಾದ ಬಳಿಕ ನಿಷ್ಠನಾಗಿ ಆಡಬೇಕು ಎಂಬುದು ಅವರ ನಿಲುವು. ಯಾಕೆಂದರೆ ಅವರು ಅದೇ ರೀತಿಯಲ್ಲಿ ಮೇಲೆ ಬಂದಿದ್ದರು. ಈ ನಿಲುವು ಒಂದು ಕಾರ್ಪೊರೇಟ್ ಸಂಸ್ಥೆಯನ್ನು ನಡೆಸುವುದಿದ್ದರೆ ಸರಿಯಾದ ನಿಲುವು. ಒಂದು ತಂಡವನ್ನು ನಡೆಸುವುದಾದರೆ? ಆ ತಂಡದ ಎಲ್ಲರೂ ದ್ರಾವಿಡ್ ತರಹದವರೇ ಆಗಿರಬೇಕು! ಆದರೆ ಎಲ್ಲರಿಗೂ ದ್ರಾವಿಡ್-ಗಿರುವ ವೃತ್ತಿಪರತೆ ಇಲ್ಲವಲ್ಲ. ಅದಕ್ಕೇ ಹೇಳಿದ್ದು ಎಷ್ಟು ಸಾಧ್ಯವೋ ಅಷ್ಟು ದ್ರಾವಿಡ್ ಆಟವನ್ನು ಕಣ್ತುಂಬಾ ನೋಡಿಬಿಡಿ ಎಂದು.


ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ ೨೦೦೭ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದದ್ದು ಅವರ ಕ್ರಿಕೆಟ್ ಜೀವನದ ಅತ್ಯಂತ ಲೋ ಪಾಯಿಂಟ್. ಇಲ್ಲೂ ದ್ರಾವಿಡ್-ಗೆ ಸಹ ಆಟಗಾರರ ಬೆಂಬಲ ದೊರಕಲಿಲ್ಲ. ತಾನು ಉತ್ತಮವಾಗಿ ಆಡಿದರೂ ಉಳಿದ ಆಟಗಾರರ ವೈಫಲ್ಯದಿಂದ ದ್ರಾವಿಡ್ ತಂಡದ ಕೆಟ್ಟ ಪ್ರದರ್ಶನಕ್ಕೆ ಹೊಣೆಯಾಗಬೇಕಾಯಿತು.

ಮೇಲೆ ಹೇಳಿದಂತೆ ದ್ರಾವಿಡ್ ಎಂದಿಗೂ ಯಾರನ್ನೂ ಬೆಂಬಲಿಸಿದವರಲ್ಲ. ಆತ ತನ್ನ ಗೆಳೆಯನೇ ಆಗಿರಲಿ, ಅಥವಾ ತನ್ನ ರಾಜ್ಯದವನೇ ಆಗಿರಲಿ, ತನ್ನ ಪರಿಚಯದವನೇ ಆಗಿರಲಿ, ಯಾರೇ ಆಗಿರಲಿ ಶಿಫಾರಸು ಎಂಬುವುದು ಎಂದಿಗೂ ದ್ರಾವಿಡ್ ಕಡೆಯಿಂದ ಬಂದಿಲ್ಲ. ವಿಷಯ ಸಿಂಪಲ್. ದ್ರಾವಿಡ್ ಎಂದೂ ಯಾರ ಶಿಫಾರಸಿನ ಮೇಲೂ ನಿರ್ಭರರಾದವರಲ್ಲ. ಸ್ವಂತ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಮುಂದೆ ಬಂದು ತನ್ನ ತಂಡದಲ್ಲಿ ಆಡಲು ಅರ್ಹರೆನಿಸಿದವರು. ಇದೇ ಅವರ ನಿಲುವು. ನೀವು ಆಡಲು ಅರ್ಹರಿದ್ದರೆ ನಿಮಗೆ ಸಪೋರ್ಟ್ ಯಾಕೆ?


ದ್ರಾವಿಡ್ ತನ್ನ ಆಪ್ತ ಗೆಳೆಯ ಅನಿಲ್ ಕುಂಬ್ಳೆಗೂ ಸಪೋರ್ಟ್ ಮಾಡಿದವರಲ್ಲ! ಅದೊಂದು ಸಮಯವಿತ್ತು. ಏಕದಿನ ಪಂದ್ಯಗಳಲ್ಲಿ ಹರ್ಭಜನ್ ಸಿಂಗ್ ಭಾರತದ ನಂಬರ್ ವನ್ ಬೌಲರ್ ಆಗಿದ್ದರು. ಒಂದೇ ಸ್ಪಿನ್ನರ್ ಆಡುವ ಸಮಯದಲ್ಲಿ ಅನಿಲ್ ಕುಂಬ್ಳೆ ತಂಡದಿಂದ ಹೊರಗಿರಬೇಕಾಗುತ್ತಿತ್ತು. ಸ್ಪರ್ಧಾತ್ಮಕ ಕ್ರೀಡಾಳಾಗಿರುವ ಕುಂಬ್ಳೆಗೆ ಇದು ಸ್ವಲ್ಪನೂ ಇಷ್ಟವಾಗುತ್ತಿರಲಿಲ್ಲ. ಸೌರವ್ ಗಂಗೂಲಿ ನಾಯಕನಾಗಿದ್ದಾಗ ಇದು ಶುರುವಾಗಿತ್ತು. ಆಗ ಕುಂಬ್ಳೆಗೆ ತಿಳಿಹೇಳುವ ಜವಾಬ್ದಾರಿಯನ್ನು ಸೌರವ್, ದ್ರಾವಿಡ್-ಗೆ ವಹಿಸಿಕೊಡುತ್ತಿದ್ದರು. ನಂತರ ಸ್ವತ: ದ್ರಾವಿಡ್ ನಾಯಕರಾಗಿದ್ದಾಗ ಎಲ್ಲರೂ ಈಗ ಕುಂಬ್ಳೆ ಆಡಲಿದ್ದಾರೆ ಎಂದು ಊಹಿಸಿದ್ದರು. ಆದರೆ ಆಡಿದ್ದು ಮತ್ತೆ ಹರ್ಭಜನ್ ಸಿಂಗ್! ಕುಂಬ್ಳೆ ಅಂತಿಮ ಹನ್ನೊಂದರಲ್ಲಿ ಇಲ್ಲವೇ ಇಲ್ಲ. ಏಕದಿನ ಪಂದ್ಯಗಳಲ್ಲಿ ಕುಂಬ್ಳೆ ಸಾಮರ್ಥ್ಯ ಕ್ಷೀಣಿಸುತ್ತಿದ್ದ ಸಮಯವದು. ಇದರ ಅರಿವಿದ್ದ ದ್ರಾವಿಡ್ ಕುಂಬ್ಳೆಯನ್ನು ಆರಿಸಲಿಲ್ಲ. ದ್ರಾವಿಡ್ ಅದೆಷ್ಟು ಡಿಪ್ಲೊಮ್ಯಾಟಿಕ್ ಎಂದು ಇಲ್ಲೇ ಗೊತ್ತಾಗುತ್ತದೆಯಲ್ಲವೇ? ಒಂದು ಕಡೆಯಿಂದ ಕುಂಬ್ಳೆಯನ್ನು ಸಪೋರ್ಟ್ ಮಾಡಲಿಲ್ಲ, ಆದರೂ ಕುಂಬ್ಳೆಯೊಂದಿಗೆ ತನ್ನ ಸ್ನೇಹಕ್ಕೆ ಏನೇನೂ ಧಕ್ಕೆಯಾಗದಂತೆ ನೋಡಿಕೊಂಡರು.

ಇಸವಿ ೨೦೦೦ದ ಇಂಗ್ಲೀಷ್ ಕೌಂಟಿ ಸೀಸನ್ನಿನಲ್ಲಿ ’ಕೆಂಟ್’ ತಂಡದ ಪರವಾಗಿ ದ್ರಾವಿಡ್ ಆಡಿದ್ದರು. ಆಗ ಅವರ ವೃತ್ತಿಪರತೆ ಕಂಡು ಬೆರಗಾದ ಕೆಂಟ್ ಕೌಂಟಿ ಕ್ಲಬ್ಬಿನ ಅಧಿಕಾರಿಗಳು ಇನ್ನೊಂದು ವರ್ಷ ತಮ್ಮ ಪರವಾಗಿ ಆಡುವಂತೆ ಮನವಿಯನ್ನು ದ್ರಾವಿಡ್ ಮುಂದಿಟ್ಟರು. ಇಂಗ್ಲೀಷ್ ಕೌಂಟಿ ಸೀಸನ್ನಿನಲ್ಲಿ ಬಹಳ ಪಂದ್ಯಗಳನ್ನು ಆಡಬೇಕಾಗುವುದರಿಂದ ಕ್ರೀಡಾಳುವಿನ ದೇಹದ ಮೇಲೆ ಇದು ಬಹಳ ಪರಿಣಾಮವನ್ನು ಬೀರುತ್ತದೆ. ಇದೇ ಕಾರಣದಿಂದ ದ್ರಾವಿಡ್ ಕೆಂಟ್ ಕೌಂಟಿಯ ಕೋರಿಕೆಯನ್ನು ತಿರಸ್ಕರಿಸಬೇಕಾಯಿತು. ನಂತರದ ವರ್ಷಗಳಲ್ಲಿ ದ್ರಾವಿಡ್ ಇತರ ಕೌಂಟಿ ತಂಡಗಳಿಂದ ಆಫರ್-ಗಳನ್ನು ತಿರಸ್ಕರಿಸಿದರು.

ಕ್ರಿಕೆಟ್ ಜಗತ್ತಿನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಸ್ಕಾಟ್ಲಂಡ್ ತಂಡ ಕೂಡಾ ಇಂಗ್ಲೀಷ್ ಕೌಂಟಿಯಲ್ಲಿ ಆಡುತ್ತದೆ. ತನ್ನ ಅನನುಭವಿ ಮತ್ತು ಯುವ ಆಟಗಾರರಿಗೆ ಸರಿಯಾದ ಮಾರ್ಗದರ್ಶನ ನೀಡಲು ಈ ತಂಡಕ್ಕೆ ಒಬ್ಬ ಅನುಭವಿ, ಮೇಧಾವಿ ಮತ್ತು ಪ್ರೊಫೆಷನಲ್ ಕ್ರಿಕೆಟಿಗನೊಬ್ಬನ ಅವಶ್ಯಕತೆಯಿತ್ತು. ಕೆಂಟ್ ಪರವಾಗಿ ಆಡುವಾಗ ರಾಹುಲ್ ದ್ರಾವಿಡ್ ತೋರ್ಪಡಿಸಿದ ತಂಡದ ಪರ ನಿಷ್ಠೆ ಮತ್ತು ವೃತ್ತಿಪರತೆಯಿಂದ ಅದಾಗಲೇ ಪ್ರಭಾವಿತರಾಗಿದ್ದ ಸ್ಕಾಟ್ಲಂಡ್ ತಂಡದ ಅಧಿಕಾರಿಗಳು ಬೆಂಗಳೂರಿಗೆ ಬಂದಿಳಿದರು. ತಮ್ಮ ತಂಡದ ಪರವಾಗಿ ಒಂದು ಸೀಸನ್ ಆಡುವಂತೆ ಕೋರಿದರು. ಈ ಆಫರ್ ಸ್ವಲ್ಪ ಬೇರೆ ತರಹದಾಗಿತ್ತು. ಕೆಂಟ್ ಪರ ಆಡುವಾಗ ಎಲ್ಲಾ ಪಂದ್ಯಗಳಲ್ಲೂ ದ್ರಾವಿಡ್ ಆಡಬೇಕಾಗಿತ್ತು. ಆದರೆ ಇಲ್ಲಿ ೩ ತಿಂಗಳಲ್ಲಿ ಸ್ಕಾಟ್ಲಂಡ್ ಪರವಾಗಿ ೧೧ ಪಂದ್ಯಗಳಲ್ಲಿ ಮಾತ್ರ ಆಡಿದರೆ ಸಾಕಿತ್ತು. ವಿಶ್ವದ ಅಗ್ರಮಾನ್ಯ ಆಟಗಾರನೊಬ್ಬನ ಜೊತೆಯಲ್ಲಿ ಒಂದು ಸೀಸನ್ ಕಳೆದರೆ ತಂಡದ ಆಟಗಾರರಿಗೆ ಆಗುವ ಪ್ರಯೋಜನವನ್ನು ಅರಿತ ಸ್ಕಾಟ್ಲೆಂಡ್, ಪ್ಲೇಯರ್ ಕಮ್ ಟೀಚರ್ ಆಧಾರದಲ್ಲಿ ದ್ರಾವಿಡ್-ನನ್ನು ಒಂದು ಸೀಸನ್ ಆಡುವಂತೆ ಸಹಿ ಹಾಕಿಕೊಂಡಿತು.


ದ್ರಾವಿಡ್ ಆಗಷ್ಟೇ ವಿವಾಹಿತರಾಗಿದ್ದರು. ಮಧುಚಂದ್ರಕ್ಕೆ ಎಲ್ಲಾದರೂ ತೆರಳಬೇಕಿತ್ತು. ಆದರೆ ಎರಡನೇ ಹೆಂಡತಿಯಾದ ಕ್ರಿಕೆಟನ್ನು ಸಂಪೂರ್ಣವಾಗಿ ಬದಿಗಿಡಲೂ ಮನಸ್ಸು ಒಪ್ಪಲಿಲ್ಲ. ಇತ್ತ ಮಧುಚಂದ್ರವೂ ಆಯಿತು ಅತ್ತ ಸ್ಕಾಟ್ಲಂಡ್ ಪರ ಆಡುತ್ತಾ ತನ್ನ ೨ನೇ ಹೆಂಡತಿಯೊಂದಿಗೆ ಟಚ್ಚಲ್ಲಿ ಇದ್ದಂತೆಯೂ ಆಯಿತು! ಈ ಸರಣಿಯ ಮೊದಲ ಭಾಗದಲ್ಲಿ ಹೇಳಿದಂತೆ ದ್ರಾವಿಡ್ ಯಶಸ್ಸಿಗೆ ಇಂತಹ ಪ್ಲ್ಯಾನಿಂಗ್-ಗಳೇ ಕಾರಣ. ಎಲ್ಲೆಡೆಯೂ ಪ್ಲ್ಯಾನಿಂಗ್. ಮಧುಚಂದ್ರದಲ್ಲೂ!

ದ್ರಾವಿಡ್ ಕೆಂಟ್ ಪರವಾಗಿ ಆಡುತ್ತಿರುವಾಗ ಒಂದು ಪಂದ್ಯದ ಬಗ್ಗೆ ಇಲ್ಲಿ ಹೇಳಬೇಕು. ಆ ಪಂದ್ಯ ಶೇನ್ ವಾರ್ನ್ ನೇತೃತ್ವದ ಹ್ಯಾಂಪ್-ಷಯರ್ ತಂಡದ ವಿರುದ್ಧ ನಡೆದಿತ್ತು. ಕೆಂಟ್ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಹ್ಯಾಂಪ್-ಷಯರ್ ತನ್ನ ಮೊದಲ ಇನ್ನಿಂಗ್ಸನ್ನು ೩೨೦ಕ್ಕೆ ಕೊನೆಗೊಳಿಸಿತು. ನಂತರ ಶೇನ್ ವಾರ್ನ್ ದಾಳಿಗೆ ತರೆಗೆಲೆಗಳಂತೆ ಕೆಂಟ್ ಬ್ಯಾಟ್ಸ್-ಮನ್ನುಗಳು ಉದುರಲಾರಂಭಿಸಿದರು. ಕೆಂಟ್ ೨೫೨ಕ್ಕೆ ಆಲ್ ಔಟ್ ಆದರೂ ದ್ರಾವಿಡ್ ೧೩೭ ಓಟಗಳನ್ನು ಗಳಿಸಿದರು. ದ್ವಿತೀಯ ಇನ್ನಿಂಗ್ಸಿನಲ್ಲಿ ಅಲ್ಪ ಮೊತ್ತಕ್ಕೆ ಔಟಾದ ಹ್ಯಾಂಪ್-ಷಯರ್, ಪಂದ್ಯ ಗೆಲ್ಲಲು ಕೆಂಟ್-ಗೆ ೨೦೫ ರನ್ನುಗಳ ಟಾರ್ಗೆಟ್ ನೀಡಿತು. ಮತ್ತೆ ಸುಂದರ ಆಟ ಪ್ರದರ್ಶಿಸಿದ ದ್ರಾವಿಡ್ ೭೩ ರನ್ನುಗಳನ್ನು ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ವಿಜಯದ ಗುರಿಯತ್ತ ಒಯ್ದರು. ಶೇನ್ ವಾರ್ನ್ ಮತ್ತು ರಾಹುಲ್ ದ್ರಾವಿಡ್ ಇಬ್ಬರೂ ದಿಗ್ಗಜರು. ಮೇಲುಗೈ ಸಾಧಿಸಲು ಇಬ್ಬರದ್ದೂ ಹಠ. ಶೇನ್ ವಾರ್ನ್ ತನ್ನ ಬತ್ತಳಿಕೆಯಲ್ಲಿದ್ದ ಎಲ್ಲಾ ಪ್ರಯೋಗಗಳನ್ನೂ ದ್ರಾವಿಡ್ ಮೇಲೆ ಪರೀಕ್ಷಿಸಿದರೂ ಅವರಿಗೆ ಸಫಲತೆ ಸಿಗಲಿಲ್ಲ. ಕೊನೆಗೂ ದ್ರಾವಿಡ್ ಕೈ ಮೇಲಾಯಿತು. ಇಬ್ಬರು ದಿಗ್ಗಜರ ಸೆಣಸಾಟವನ್ನು ಅಂದು ಇತ್ತಂಡಗಳ ಎಲ್ಲಾ ಆಟಗಾರರು ಮತ್ತು ಪ್ರೇಕ್ಷಕರು ಮನಸಾರೆ ಆನಂದಿಸಿದರು.


ದ್ರಾವಿಡ್ ಕೆಂಟ್ ಕೌಂಟಿ ಕ್ಲಬ್ಬಿಗಾಗಿ ಆಡುತ್ತಿರುವಾಗ ಕೆಂಟ್ ತಂಡದ ಕೋಚ್ ಆಗಿದ್ದವರು ಜಾನ್ ರೈಟ್. ಅವರ ಕೋಚಿಂಗ್ ವಿಧಾನಗಳಿಂದ ತುಂಬಾ ಪ್ರಭಾವಿತರಾದ ದ್ರಾವಿಡ್, ನಂತರ ಭಾರತದ ಕ್ರಿಕೆಟ್ ಮಂಡಳಿ ರಾಷ್ಟ್ರೀಯ ತಂಡಕ್ಕೆ ಕೋಚ್ ಒಬ್ಬನ ಹುಡುಕಾಟದಲ್ಲಿದ್ದಾಗ ಜಾನ್ ರೈಟ್ ಹೆಸರನ್ನು ಸೂಚಿಸಿದರು. ನಂತರ ಜಾನ್ ರೈಟ್ ಮತ್ತು ಸೌರವ್ ಗಂಗೂಲಿ ಜೊತೆಯಾಟ ಒಂದು ಉತ್ತಮ ಕೋಚ್-ಕ್ಯಾಪ್ಟನ್ ಜೊತೆಯಾಟಗಳಲ್ಲಿ ಒಂದಾದದ್ದು ಇತಿಹಾಸ. ದ್ರಾವಿಡ್ ಬಗ್ಗೆ ಜಾನ್ ರೈಟ್ ಚುಟುಕಾಗಿ ಒಮ್ಮೆ ಹೀಗೆ ಹೇಳಿದ್ದರು - "When Rahul does well, India do well , Tendulkar is Tendulkar but in all conditions Rahul Dravid is the man". ಕ್ರಿಕಿನ್ಫೋ ಬರಹಗಾರ ಸಿದ್ಧಾರ್ಥ್ ವೈದ್ಯನಾಥನ್, ೨೦೦೬ರಲ್ಲಿ ದ್ರಾವಿಡ್ ಜಮೈಕಾದಲ್ಲಿ ಆಡಿದ ೨ ಅದ್ಭುತ ಇನ್ನಿಂಗ್ಸ್-ಗಳ ಬಗ್ಗೆ ಇಲ್ಲಿ ಬರೆದಿದ್ದಾರೆ.


ಹೇಗೆ ಆಡಬೇಕೆಂದು ದ್ರಾವಿಡ್-ನಿಂದ ಯುವ ಆಟಗಾರರು ಕೇಳಿಸಿಕೊಳ್ಳಬೇಕಾಗಿಲ್ಲ. ಅವರು ಆಡುವ ರೀತಿಯನ್ನು ಗಮನಿಸಿದರೂ ಸಾಕು, ತುಂಬಾ ಕಲಿಯಬಹುದು. ೨೦೦೬-೦೭ ರಣಜಿ ಋತುವಿನಲ್ಲಿ ಮುಂಬೈ ವಿರುದ್ಧ ಕರ್ನಾಟಕ ಮುಂಬೈನಲ್ಲಿ ಆಡುತ್ತಿತ್ತು. ದ್ರಾವಿಡ್ ದ್ವಿಶತಕದ ಬಾರಿಯನ್ನು ಆಡಿ ಕರ್ನಾಟಕವನ್ನು ಸೋಲಿನಿಂದ ಪಾರು ಮಾಡಿದರು. ಆಗ ಮುಂಬೈ ನಾಯಕ ವಾಸಿಂ ಜಾಫರ್ ಹೇಳಿದ್ದು, "ದ್ರಾವಿಡ್-ನನ್ನು ಆದಷ್ಟು ಬೇಗ ಔಟ್ ಮಾಡಲು ನಾವು ಪ್ರಯತ್ನಿಸಬೇಕು. ಅದರಲ್ಲಿ ನಾವು ವಿಫಲರಾದರೆ ಅದರ ಲಾಭವನ್ನಾದರೂ ಪಡೆದುಕೊಳ್ಳೋಣ. ಆತ ಆಡುವ ರೀತಿಯನ್ನು ಗಮನಿಸಿ, ನಮಗೆಲ್ಲಾ ಕಲಿಯಲು ತುಂಬಾ ಇದೆ. ಆತನ ಆಟವನ್ನು ಜಸ್ಟ್ ಎಂಜಾಯ್ ಮಾಡಿ, ಸಾಧ್ಯವಾದಷ್ಟನ್ನು ಕಲಿಯಿರಿ ಎಂದು ನಮ್ಮ ತಂಡದ ಯುವಕರಿಗೆ ನಾನು ಹೇಳುತ್ತಿದ್ದೆ".


ಕ್ರಿಕೆಟಿಗರಲ್ಲಿ ಎರಡು ಗುಂಪುಗಳಿವೆ. ನಿರ್ಲಿಪ್ತ ಭಾವನೆಯೊಂದಿಗೆ ಭಾರತಕ್ಕಾಗಿ ಆಡುವುದು ಮತ್ತು ದೇಶಪ್ರೇಮದಿಂದ ಭಾರತಕ್ಕಾಗಿ ಆಡುವುದು ಇವೆರಡು ಬೇರೆ ವಿಷಯಗಳು. ದ್ರಾವಿಡ್ ಎರಡನೇ ಗುಂಪಿಗೆ ಒಳಪಟ್ಟವರು. ಭಾರತ ಪಂದ್ಯಗಳನ್ನು ಸೋತಾಗ ಅವರ ಮುಖದಲ್ಲಿ ನಿರಾಸೆ, ದು:ಖ ಎದ್ದು ಕಾಣುತ್ತದೆ. ತನ್ನ ದೇಶ ಪಂದ್ಯ ಸೋತಿತಲ್ಲಾ ಎಂಬಾ ವಿಷಾದದ ಛಾಯೆ ಅವರ ಹಾವಭಾವದಲ್ಲಿ ಕಾಣಬಹುದು. ಸಚಿನ್ ಮತ್ತು ಲಕ್ಷ್ಮಣ್ ಕೂಡಾ ಇದೇ ಗುಂಪಿಗೆ ಸೇರಿದವರು.

ದ್ರಾವಿಡ್ ಎಂದೂ ಅನಾವಶ್ಯಕವಾಗಿ ಅಥವಾ ಕಾಟಾಚಾರಕ್ಕಾಗಿ ಯಾವುದೇ ಹೇಳಿಕೆಯನ್ನು ಕೊಟ್ಟವರಲ್ಲ. ಕ್ರಿಕೆಟಿಗನೊಬ್ಬನಿಗೆ ಭಾರತಕ್ಕೆ ಆಡುವ ಎಲ್ಲಾ ಅರ್ಹತೆ ಇದ್ದರೆ ಮಾತ್ರ ದ್ರಾವಿಡ್ ಆ ಬಗ್ಗೆ ಮಾತನಾಡುತ್ತಾರೆಯೇ ಹೊರತು ಸುಮ್ಮಸುಮ್ಮನೆ ಹೇಳಿಕೆ ನೀಡುವುದಿಲ್ಲ. ವಿಜಯ್ ಭಾರದ್ವಾಜ್ ಮತ್ತು ದ್ರಾವಿಡ್ ಒಟ್ಟಿಗೆ ಆಡಿದವರು. ವಿಜಯ್ ಆಟವನ್ನು ದ್ರಾವಿಡ್ ಹತ್ತಿರದಿಂದ ಬಲ್ಲವರಾಗಿದ್ದರು. ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವಿಜಯ್ ಭಾರದ್ವಜ್ ರನ್ನುಗಳನ್ನು ಸೂರೆಗೊಳ್ಳುತ್ತಿರುವಾಗ ಎಲ್ಲರೂ ಈತ ಇನ್ನು ಸದ್ಯಕ್ಕೆ ಭಾರತಕ್ಕೆ ಆಡಲಿದ್ದಾನೆ ಎಂದು ಭವಿಷ್ಯವಾಣಿ ನುಡಿದುಬಿಟ್ಟಿದ್ದರು. ಆದರೆ ವಿಜಯ್ ಭಾರದ್ವಾಜ್-ಗೆ ಭಾರತಕ್ಕೆ ಆಡಲು ಅರ್ಹತೆ ಇದೆ ಎಂದು ಎಲ್ಲೂ ದ್ರಾವಿಡ್ ಮಾತ್ರ ಹೇಳಲಿಲ್ಲ. ಏಕೆಂದರೆ ದ್ರಾವಿಡ್ ಗೆ ಗೊತ್ತಿತ್ತು - ವಿಜಯ್ ಫುಟ್ ವರ್ಕ್ ತುಂಬಾ ಸಡಿಲವಾಗಿದೆ ಮತ್ತು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ವಿಜಯ್ ಮುಗ್ಗರಿಸಲಿದ್ದಾರೆ ಎಂದು. ಹಾಗೇ ಆಯಿತು ಕೂಡಾ. ಇನ್ನೊಂದು ಉದಾಹರಣೆ ವಿನಯ್ ಕುಮಾರ್. ವಿನಯ್ ಒಬ್ಬ ಉತ್ತಮ ಕ್ರಿಕೆಟಿಗ. ಯಾವಗಲೂ ತಂಡಕ್ಕೆ ೧೦೦% ಕೊಡುಗೆ ನೀಡುವ ಹಾರ್ಡ್ ವರ್ಕರ್. ಆದರೆ ಅವರ ಬೌಲಿಂಗ್ ವೇಗ ಅಂತರಾಷ್ಟ್ರೀಯ ಮಟ್ಟಕ್ಕೆ ಸಾಲದು. ಇದರ ಅರಿವಿರುವ ದ್ರಾವಿಡ್ ವಿನಯ್ ಭಾರತಕ್ಕೆ ಆಡಲು ಯೋಗ್ಯ ಎಂದು ಹೇಳಿಲ್ಲ. ಆದರೆ ಅವರೊಬ್ಬ ಪ್ರಾಮಾಣಿಕ ಮತ್ತು ಕಮಿಟೆಡ್ ಕ್ರಿಕೆಟಿಗ ಎಂದು ಹಲವು ಬಾರಿ ಹೇಳಿದ್ದಾರೆ. ವಿನಯ್ ಯಾಕೆ ಭಾರತ ತಂಡಕ್ಕೆ ಆಯ್ಕೆ ಆಗುತ್ತಿಲ್ಲ ಎಂದು ಎಲ್ಲಾ ಕನ್ನಡಿಗರು ತೆಲೆಕೆಡಿಸಿಕೊಳ್ಳುತ್ತಿದ್ದರೆ ಉತ್ತರ ಅವರ ಬೌಲಿಂಗಿನಲ್ಲೇ ಇದೆ. ಆ ವೇಗ ಸಾಲದು.

ಮನೀಷ್ ಪಾಂಡೆ ಮತ್ತು ಅಭಿಮನ್ಯು ಮಿಥುನ್ ಬಗ್ಗೆ ದ್ರಾವಿಡ್ ಒಳ್ಳೆಯ ಮಾತುಗಳನ್ನಾಡಿದ್ದಾರೆಂದರೆ ಅವರಿಬ್ಬರ ಅರ್ಹತೆ ಅದ್ಯಾವ ಮಟ್ಟದಲ್ಲಿದೆ ಎಂದು ಊಹಿಸಬಹುದು. ಮನೀಷ್ ಸಂಯಮವನ್ನು ಕಳಕೊಳ್ಳದೆ ತನ್ನ ಆಟದತ್ತ ಇರುವ ಗಮನವನ್ನು ಬೇರೆಡೆ ಹೋಗಕೊಡದೆ ಉತ್ತಮ ಪ್ರದರ್ಶನ ನೀಡಿದರೆ ಆತ ಭಾರತಕ್ಕೆ ಆಡಲು ಅರ್ಹ ಎನ್ನುವುದು ದ್ರಾವಿಡ್ ಮಾತು. ಹಾಗೇಯೆ ಮಿಥುನ್ ತನ್ನ ವೇಗ ಮತ್ತು ಫಿಟ್ನೆಸ್ ಇವೆರಡನ್ನೂ ಕಳಕೊಳ್ಳದೆ ಇನ್ನೆರಡು ಸೀಸನ್ ಉತ್ತಮ ಪ್ರದರ್ಶನ ನೀಡಿ ತನ್ನ ಬೌಲಿಂಗನ್ನು ಇನ್ನಷ್ಟು ಸುಧಾರಿಸಿಕೊಂಡರೆ ಭಾರತಕ್ಕೆ ಆಡುವ ಎಲ್ಲಾ ಅರ್ಹತೆ ಅವರಲ್ಲಿದೆ ಎಂಬುದು ದ್ರಾವಿಡ್ ಮಾತು. ಈ ಇಬ್ಬರೂ ಈ ಬಾರಿ ರಣಜಿ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮುಂದಿನ ಸೀಸನ್ನಿನಲ್ಲಿ ಮಿಥುನನಿಗೆ ಬ್ಯಾಟ್ಸುಮನ್ನುಗಳು ಮತ್ತು ಪಾಂಡೆಗೆ ಬೌಲರುಗಳು ತಂತ್ರಗಳೊಂದಿಗೆ ತಯಾರಾಗಿರುತ್ತಾರೆ. ಆಗ ಅವರ ನಿರ್ವಹಣೆ ಹೇಗಿರುತ್ತದೆ ಎಂದು ಕಾದು ನೋಡಬೇಕು. ಆಯ್ಕೆಗಾರರು ಅನಾವಶ್ಯಕವಾಗಿ ಮಿಥುನನನ್ನು ಭಾರತಕ್ಕೆ ಆಡಿಸಿದರು. ಆತ ಇನ್ನೂ ಅಪೂರ್ಣ ಬೌಲರ್.

ಕ್ರಿಕೆಟಿಗನೊಬ್ಬನಿಗೆ ದೇಶೀಯ ಪಂದ್ಯಾವಳಿಗಳಲ್ಲಿ ಮೂರ್ನಾಲ್ಕು ಸೀಸನ್ ಆಡಲು ಬಿಡಬೇಕು. ಒಂದೇ ಸೀಸನ್ನಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೂಡಲೇ ಆಕಾಶಕ್ಕೆ ಏರಿಸಬಾರದು. ವೈಫಲ್ಯವನ್ನು ನಿಭಾಯಿಸಿ ಮತ್ತೆ ಸಫಲನಾಗುವವರೆಗೆ ಕಾದು ನಂತರ ಆಯ್ಕೆಗೆ ಪರಿಗಣಿಸಬೇಕು. ದ್ರಾವಿಡ್ ೬ ಸೀಸನ್ ದೇಶೀಯ ಪಂದ್ಯಾವಳಿಗಳಲ್ಲಿ ಆಡಿದ ಬಳಿಕ ಭಾರತಕ್ಕೆ ಆಡಿದವರು. ಅವರಿಗೆ ಅದರ ಬೆಲೆ ಗೊತ್ತು. ಒಂದನೇ ಕ್ಲಾಸಿನ ಬಳಿಕ ಎರಡನೇ ಕ್ಲಾಸು ಮುಗಿಸಿ ನೇರವಾಗಿ ಏಳು ನಂತರ ಹತ್ತನೇ ಕ್ಲಾಸಿಗೆ ಬರಲಾಗುವುದಿಲ್ಲ. ಹಾಗೆ ಬಂದವರು ಸಫಲರಾಗದೆ ಹಾಗೇ ಬೇಗನೆ ಮರೆಯಾಗುತ್ತಾರೆ. ಆದರೆ ಹಂತಹಂತವಾಗಿ ಒಂದೊಂದೇ ಮೆಟ್ಟಿಲು ಏರುತ್ತಾ ಹೆಚ್ಚೆಚ್ಚು ಕಲಿಯುತ್ತಾ ಇಂಪ್ರೂವ್ ಆಗುತ್ತಾ ಬಂದವರು ಸಫಲರಾಗುವ ಎಲ್ಲಾ ಚಾನ್ಸ್ ಇರುತ್ತದೆ.


’ಏಕಾಗ್ರತೆ’ ಎಂಬ ಶಬ್ದವನ್ನು ಮನಸಲ್ಲಿ ಮತ್ತು ಎದೆಯಲ್ಲಿ ಮುದ್ರಿಸಿಯೇ ರಾಹುಲ್ ದ್ರಾವಿಡ್ ಜನ್ಮ ತಾಳಿದ್ದರು ಎಂದೆನಿಸುತ್ತದೆ. ತಾನು ಎಲ್ಲಿಗೆ ಹೋಗಿ ಮುಟ್ಟಬೇಕು ಎಂಬುದನ್ನು ಸ್ಪಷ್ಟವಾಗಿ ಅರಿತು ಆ ಗುರಿಯತ್ತ ಓಡುವುದು ಸುಲಭದ ಮಾತಲ್ಲ. ಎಷ್ಟು ಏಕಾಗ್ರತೆ ಇದ್ದರೂ ಕಡಿಮೆಯೇ. ೧೮-೨೩ ಈ ವಯಸ್ಸಿನಲ್ಲಿ ಉಳಿದ ವಿಷಯಗಳೆಡೆ ಆಕರ್ಷಿತರಾಗುವುದು ಸಹಜ. ಆದರೆ ಏಕಾಗ್ರತೆಯನ್ನು ಕಳೆದುಕೊಳ್ಳದೆ ಕಠಿಣ ಪರಿಶ್ರಮದಿಂದ ತನ್ನ ಜೀವನದ ಗುರಿಯನ್ನು ಮುಟ್ಟಿರುವ ಅಪೂರ್ವ ಕ್ರೀಡಾಳು ದ್ರಾವಿಡ್.


ತುಂಬಾ ಆಯಿತು ದ್ರಾವಿಡ್ ಬಗ್ಗೆ ಬರೆದದ್ದು. ಇನ್ನೂ ಬೇಕಾದಷ್ಟು ಬರೆಯಬಹುದು. ಇಲ್ಲಿವರೆಗೆ ಓದಿರುವ ನಿಮಗೂ ಬೋರ್ ಬಂದಿರಬಹುದು. ಹಾಗಾಗಿ ಇಷ್ಟು ಸಾಕು. ದ್ರಾವಿಡ್ ಆಡುವಷ್ಟು ದಿನಗಳವರೆಗೆ ಸ್ಟೈಲ್, ಟೆಕ್ನಿಕ್, ಎಲೆಗನ್ಸ್ ಇತ್ಯಾದಿಗಳ ರಸದೌತಣ ಮುಂದುವರೆಯಲಿದೆ. ಈಗಾಗಲೇ ದ್ರಾವಿಡ್-ಗೆ ೩೭ರ ಹರೆಯ. ಆದರೂ ಇನ್ನು ೨-೩ ವರ್ಷ ಕಾಲ ಆಡುವ ದೈಹಿಕ ಸಾಮರ್ಥ್ಯ ಅವರಲ್ಲಿದೆ. ಶ್ರೇಷ್ಠರು ತಾವಿನ್ನೂ ಶ್ರೇಷ್ಠ ಪ್ರದರ್ಶನ ನೀಡುತ್ತಿರುವಾಗಲೇ ’ಇನ್ನು ಸಾಕು’ ಎಂದು ನಿಲ್ಲಿಸಿಬಿಡುತ್ತಾರೆ. ಆನಂತರ ಆ ಸ್ಟೈಲ್, ಟೆಕ್ನಿಕ್ ಮತ್ತು ಎಲೆಗನ್ಸ್ ಇವೆಲ್ಲಾ ರಾಹುಲ್ ದ್ರಾವಿಡ್-ನೊಂದಿಗೆ ಕ್ರಿಕೆಟ್ ಮೈದಾನದಿಂದ ಕಣ್ಮರೆಯಾಗಲಿವೆ. ಆಗ ಟೆಸ್ಟ್ ಕ್ರಿಕೆಟ್ ನನಗಂತೂ ಸ್ವಲ್ಪ ಮಟ್ಟಿಗಾದರೂ ನೀರಸವೆನಿಸಲಿದೆ.

ಭಾಗ ಮೂರು.

7 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

No doubt . he is truly a legend cricketer

we love him
nice article

Mahantesh ಹೇಳಿದರು...

yes!!!After 3-4 years,Indian Cricket will miss Rahul Dravid in the middle order and slip.

After that no more reason to watch test Cricket...

Rajesh,

tuMba chennagi baradidira!!!!!!!!!!

RaGa ಹೇಳಿದರು...

dravid lekhanagala sarani tumba chennagide. idakke innastu adhyaya serisi pustaka madidare sangrahyavagiruthade.

Karthik CS ಹೇಳಿದರು...

Bahala vishya tilidu konda haage aaytu.. Thanks for writing..

Subrahmanya ಹೇಳಿದರು...

ಉತ್ತಮ ಮತ್ತು ಸಮಗ್ರ ಮಾಹಿತಿಯ ಲೇಖನ. ರಾಹುಲ್ ಇಲ್ಲದ ಕ್ರಿಕೆಟ್ ನಲ್ಲಿ ಕಲಾತ್ನಕತೆಯೇ ಇರುವುದಿಲ್ಲ. ಈಗಂತೂ ಬರೀ ಹೊಡಿ-ಬಡಿ ಅಷ್ಟೆ.

Parisarapremi ಹೇಳಿದರು...

nija. dravid illade test match antu nODOke bore aage aagutte.

ರಾಜೇಶ್ ನಾಯ್ಕ ಹೇಳಿದರು...

ಪ್ರತಿಕ್ರಿಯಿಸಿದ ಎಲ್ಲ ಗೆಳೆಯರಿಗೂ ಧನ್ಯವಾದಗಳು. ಮೇರು ವ್ಯಕ್ತಿತ್ವದ ಕ್ರಿಕೆಟಿಗನ ಆಟವನ್ನು ಸಾಧ್ಯವಾದಷ್ಟು ಆನಂದಿಸೋಣ. ಮತ್ತೆ ಅಂತಹ ಆಟ ನೋಡಲು ಸಿಗಲಾರದು.