
ಜನವರಿ ೭, ೨೦೦೬.
ಈ ಜಲಧಾರೆಗೆ ಚಾರಣಗೈಯುವ ಸಲುವಾಗಿ ಗೆಳೆಯ ಪುತ್ತುವಿನೊಂದಿಗೆ ಹೊರಟು, ಮಹಾದೇವ ನಾಯ್ಕರ ಮನೆ ತಲುಪಿದಾಗ ಸಂಜೆ ೭ರ ಸಮಯ. ಮನೆಯಲ್ಲಿ ಮಹಾದೇವ ನಾಯ್ಕರ ಮಗಳು ಮತ್ತು ಶ್ರೀಮತಿಯವರು ಮಾತ್ರ ಇದ್ದರು. ಚಹಾ ಹೀರುತ್ತಿರುವಂತೇ ನಾಯ್ಕರ ಮಗ ಜನಾರ್ಧನ ತಲೆಯ ಮೇಲೊಂದು ದೊಡ್ಡ ಒಣ ಮರದ ತುಂಡನ್ನು ಹೊತ್ತು ’ಹ್ವಾಯ್’ ಎನ್ನುತ್ತಾ ಆಗಮಿಸಿದರು. ಹಿಂದೆನೇ ಅವರ ತಮ್ಮ ಈಶ್ವರ. ಮಹಾದೇವ ನಾಯ್ಕರು ಎಲ್ಲೋ ಹೊರಗಡೆ ಹೋಗಿದ್ದವರು ಮರುದಿನ ಸಂಜೆವರೆಗೆ ಬರಲಿಲ್ಲ. ಜನಾರ್ಧನರ ಅಮ್ಮ ಮತ್ತು ತಂಗಿ ರುಚಿಕರವಾದ ಊಟವನ್ನು ನಮ್ಮಿಬ್ಬರಿಗಾಗಿ ರೆಡಿ ಮಾಡಿದರು. ನನ್ನ ಪ್ರಯಾಣಗಳಲ್ಲಿ ಕಳೆದ ಮತ್ತೊಂದು ಸುಂದರ ಸಂಜೆ. ಮಾತುಕತೆ, ಹರಟೆ ಮತ್ತು ಮುಖ್ಯವಾಗಿ ಆತ್ಮೀಯತೆ ಇವೆಲ್ಲಾ ನಮ್ಮಿಬ್ಬರಿಗೆ ಮತ್ತೊಮ್ಮೆ
ದೇವಕಾರದ ನೆನಪಾಗುವಂತೆ ಮಾಡಿತು.


ನೀರು ದೋಸೆ ಮತ್ತು ಬೆಲ್ಲದ ಮುಂಜಾನೆಯ ಉಪಹಾರದ ನಂತರ ೮ ಗಂಟೆಗೆ ಮಾರ್ಗದರ್ಶಿ ನವೀನನೊಂದಿಗೆ ಜಲಧಾರೆಯತ್ತ ಹೊರಟೆವು. ಈ ನವೀನನಿಗೆ ಕಾಡಿನಲ್ಲಿ ಅಲೆಯುವುದು ಎಂದರೆ ಇಷ್ಟ. ಕಾಡಿನಲ್ಲಿ ರಾಮಪತ್ರಿ ಮತ್ತು ಲವಂಗ ಹುಡುಕಿ ತೆಗೆದು, ಮಾರಿ ಜೀವನ ನಡೆಸುತ್ತಾನೆ. ಕಾಡಿನಲ್ಲಿ ಆಹಾರವಿಲ್ಲದೆ ಕೆಲವು ದಿನಗಳ ಕಾಲ ಬದುಕಬಹುದಾದ ವಿಧಾನಗಳ ಬಗ್ಗೆ ನವೀನ ಮಾತನಾಡುತ್ತಿದ್ದ. ಲಿಂಗನಮಕ್ಕಿ ಅಣೆಕಟ್ಟು ನೋಡಬೇಕೆಂಬುದು ಈತನ ಜೀವನದ ಪೂರ್ತಿಯಾಗದ ಆಸೆ.


ಸುಮಾರು ೫೦ ನಿಮಿಷಗಳ ನಡಿಗೆಯ ಬಳಿಕ ಸುಂದರ ಕಾಡಿರುವ ಕಣಿವೆಯಲ್ಲಿ ಇಳಿಯಲಾರಂಭಿಸಿದೆವು. ಸ್ವಲ್ಪ ಹೊತ್ತಿನಲ್ಲಿ ಹೊಳೆಯ ದಡದಲ್ಲಿದ್ದೆವು. ಇಲ್ಲಿಂದ ನದಿಗುಂಟ ೧೦೦ ನಿಮಿಷಗಳ ಚಾರಣದ ಬಳಿಕ ಜಲಧಾರೆಯ ೫ನೇ ಹಂತದ ದರ್ಶನ. ಸ್ವಲ್ಪ ಮೇಲೆ ೪ನೇ ಹಂತದ ಪಾರ್ಶ್ವ ನೋಟ ಲಭ್ಯ. ೩ನೇ ಹಂತದ ತುದಿಯೂ ಇಲ್ಲಿಂದ ಕಾಣುವುದು. ಆದರೆ ಜಲಧಾರೆಗೆ ಸೌಂದರ್ಯವನ್ನು ಕೊಟ್ಟಿರುವುದು ಇಲ್ಲಿರುವ ವಿಶಾಲ ಕೊಳ.



ಎಡಕ್ಕೆ ಇರುವ ಕೊರಕಲನ್ನು ಏರಿಯೇ ಉಳಿದ ಹಂತಗಳನ್ನು ವೀಕ್ಷಿಸಲು ತೆರಳಬೇಕು. ಮಳೆಗಾಲದಲ್ಲಿ ಈ ಕೊರಕಲೇ ಮತ್ತೊಂದು ಜಲಧಾರೆ. ಅಲ್ಲೇ ಒಂದು ನಾಗರಹಾವಿನ ಪೊರೆ. ಹಾವುಗಳೆಂದರೆ ನನಗೆ ತುಂಬಾ ಹೆದರಿಕೆ. ’ಹಾ..’ ಎಂದ ಕೂಡಲೇ ಅಲ್ಲಿಂದ ನಾಗಾಲೋಟಗೈಯಲು ತಯಾರಾಗಿರುತ್ತೇನೆ. ಕೊರಕಲಿನಲ್ಲಿ ೫ ನಿಮಿಷ ಏರಿದ ಬಳಿಕ ತಿರುವು ಪಡೆದು ಕಾಡಿನೊಳಕ್ಕೆ ಹೊಕ್ಕೆವು. ಮರಗಳನ್ನು, ಬೇರುಗಳನ್ನು, ಕೊಂಬೆಗಳನ್ನು ಆಧಾರವಾಗಿ ಬಳಸಿ ಮುಂದುವರಿದೆವು. ಈಗ ಕಷ್ಟಕರ ದಾರಿಯಲ್ಲಿ ಕೆಳಗಿಳಿದು ೨ನೇ ಹಂತದ ಬಳಿ ಹೋಗಬೇಕಾಗಿತ್ತು. ಈ ಇಳಿಜಾರಿನಲ್ಲಿ ಏಣಿಯಿಂದ ಇಳಿಯುವ ವಿಧಾನವನ್ನು ಬಳಸಿಯೇ ಕೆಳಗಿಳಿಯಬೇಕಾಗುತ್ತದೆ. ಸಡಿಲವಾಗಿರುವ ಮಣ್ಣು ಜಾರುವುದಲ್ಲದೇ ಅಲ್ಲಲ್ಲಿ ಕಾಲು ಹೂತು ಹೋಗುತ್ತದೆ ಕೂಡಾ.


೨ನೇ ಹಂತ ೩೦ ಅಡಿಯಷ್ಟೆತ್ತರವಿದ್ದರೂ ಸುಂದರವಾಗಿದೆ. ತಳದಲ್ಲಿರುವ ಗುಂಡಿ ಬಹಳ ಆಳವಿದೆ ಎಂದು ನವೀನನ ಅಭಿಪ್ರಾಯ. ಸುತ್ತಲೂ ಕರಿ ಕಲ್ಲಿನ ಮೇಲ್ಮೈಯಿರುವುದರಿಂದ ಈ ಗುಂಡಿಯೊಂದು ಕಾಂಕ್ರೀಟ್ ಬಾವಿ ಇದ್ದ ಹಾಗೆ. ಈ ಬಾವಿಯು ಉಕ್ಕಿ ಹರಿದು ಜಲಧಾರೆಯ ೩ನೇ ಹಂತವನ್ನು ನಿರ್ಮಿಸುತ್ತದೆ. ಮೇಲ್ಭಾಗದಿಂದ ೩ನೇ ಹಂತವನ್ನು ನೋಡಲು ಒಂದೆರಡು ಹೆಜ್ಜೆ ಹಿಂದೆ ಸರಿದರೆ ಅಲ್ಲಿ ಮತ್ತೊಂದು ಹಾವಿನ ಪೊರೆ. ನಾನು ಹೌಹಾರಿದ ಪರಿ ನೋಡಿದ ನವೀನ, ’ಇದೊಂದು ನಾಗರಹಾವುಗಳ ಮನೆ ಇದ್ದ ಹಾಗೆ’ ಎಂದಾಗ, ಆದಷ್ಟು ಬೇಗ ಅಲ್ಲಿಂದ ಹೊರಡುವುದೇ ನನ್ನ ಮುಂದಿನ ಗುರಿಯಾಗಿತ್ತು.
ಆದರೂ ೩ನೇ ಹಂತವನ್ನು ಸರಿಯಾಗಿ ವೀಕ್ಷಿಸದೇ ಅಲ್ಲಿಂದ ಹಿಂತಿರುಗಲು ಮನಸ್ಸು ಒಪ್ಪುತ್ತಿರಲಿಲ್ಲ. ಪಾರ್ಶ್ವ ನೋಟ ಸಿಕ್ಕರೂ ಸಾಕಿತ್ತು. ಆಚೀಚೆ ನೋಡುತ್ತಿರುವಾಗ ಒಂದು ದೊಡ್ಡ ಮರ ಕಾಣಿಸಿತು. ಈ ಮರ ೩ನೇ ಹಂತದ ನೇರ ಮುಂದೆ ಇರುವಂತೆ ಕಾಣುತ್ತಿತ್ತು. ನವೀನನಿಗೆ ನಮ್ಮನ್ನು ಆ ಮರದೆಡೆ ಕರೆದೊಯ್ಯಲು ವಿನಂತಿಸಿದೆ. ಆದರೆ ಆತ ’ಆ ಮರದೆಡೆ ಹೋಗೋಣ, ಆದರೆ ಮೊದ್ಲು ಇನ್ನೂ ಮೇಲೆ ಹೋಗಿ ೧ನೇ ಫಾಲ್ಸ್ ನೋಡೋಣ’ ಎಂದು ಮುನ್ನಡೆದ.
ಎರಡನೇ ಹಂತದ ಕಲ್ಲಿನ ಮೇಲ್ಮೈಯನ್ನು ಆತನೇನೋ ಸಲೀಸಾಗಿ ಹತ್ತಿದ. ಅಲ್ಲಿ ಹಿಡಿದುಕೊಳ್ಳಲು ಸರಿಯಾಗಿ ಗ್ರಿಪ್ ಸಿಗದೆ ನಾನು ಪರದಾಡುತ್ತಿದ್ದೆ. ಬಲಬದಿಯಲ್ಲಿ ಕೈಗೆಟುಕುವಷ್ಟು ಅಂತರದಲ್ಲಿ ೨ನೇ ಹಂತ ಧುಮುಕುತ್ತಿತ್ತು. ಪುತ್ತು ಹೇಗೋ ಮಾಡಿ ಮೇಲೇರಿದ. ನಾನಿನ್ನೂ ಅರ್ಧ ದಾರಿಯಲ್ಲಿದ್ದೆ. ಒಂದು ಕಡೆ ಮನದ ತುಂಬಾ ನಾಗರಹಾವುಗಳು ತುಂಬಿದ್ದವು. ಕಲ್ಲಿನ ಎಡೆಯಿಂದ ’ಭುಸ್ಸ್’ ಎಂದು ಪ್ರತ್ಯಕ್ಷವಾಗುತ್ತವೋ ಎಂಬ ಹೆದರಿಕೆ. ಮತ್ತೊಂದೆಡೆ ಜಾರಿದರೆ ಕೆಳಗೆ ಬಾಯಿ ತೆರೆದು ಕಾಯುತ್ತಿರುವ ಆಳವಾಗಿರುವ ಗುಂಡಿ. ಮೇಲಕ್ಕೆ ತಲುಪಿದ ಪುತ್ತು, ’ಇದು ನಮ್ಮಿಂದ ಆಗೋ ಮಾತಲ್ಲ. ಆ ನವೀನ್ ಇಲ್ಲಿ ಬೆರಳುಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ಮತ್ತೆ ರಾಕ್ ಕ್ಲೈಂಬಿಂಗ್ ಮಾಡ್ತಾ ಇದ್ದಾನೆ’ ಎಂದಾಗ, ನವೀನನಿಗೆ ಹಿಂತಿರುಗಿ ಬರಲು ಹೇಳುವಂತೆ ಸೂಚಿಸಿ ಕೆಳಗಿಳಿದೆ. ಅಲ್ಲಿ ಮೇಲಕ್ಕೆ ಹತ್ತುವುದೇ ಹುಚ್ಚುತನದ ನಿರ್ಧಾರವೆಂದು ನನಗನಿಸತೊಡಗಿತ್ತು. ಅಷ್ಟೆಲ್ಲಾ ರಿಸ್ಕ್ ತಗೊಳ್ಳುವ ಬದಲು ನೋಡದೇ ಇರುವುದೇ ಲೇಸು.


೩ನೇ ಹಂತದ ಮುಂದಿರುವಂತೆ ತೋರುತ್ತಿದ್ದ ಆ ಮರವನ್ನು ಗಮನದಲ್ಲಿರಿಸಿ ನವೀನ ಆ ಕಡೆ ದಾರಿ ಮಾಡಿಕೊಂಡು ಮುನ್ನಡೆದ. ಸ್ವಲ್ಪ ಸಮಯದ ಬಳಿಕ ಹಿಂತಿರುಗಿದ ಆತ, ’ಆ ಮರದ ಕಡೆಯಿಂದ ತುಂಬಾ ಚಂದ ಕಾಣಿಸ್ತದ್ರಾ, ಇಷ್ಟು ಚಂದ್ಕೆ ನಾನೂ ನೋಡಿರ್ಲಿಲ್ಲ’ ಎಂದು ನಮ್ಮನ್ನು ಕರೆದೊಯ್ದ. ಜಾರುತ್ತಾ, ಬೀಳುತ್ತಾ ಮೈಯನ್ನೆಲ್ಲಾ ನೋವು ಮಾಡಿಕೊಂಡು ಆ ಮರದತ್ತ ತಲುಪಿದೆವು. ಈ ಮರದ ಬುಡದಲ್ಲೇ ಒಬ್ಬನೇ ನಿಂತುಕೊಳ್ಳಬಹುದಾದಷ್ಟು ಸ್ಥಳಾವಕಾಶವಿದೆ. ಇಲ್ಲಿಂದ ಸುಮಾರು ೮೦ ಅಡಿ ಎತ್ತರವಿರುವ ೩ನೇ ಹಂತದ ಸೌಂದರ್ಯವನ್ನು ಮನಸಾರೆ ಸವಿಯಬಹುದು. ನೀರು ಬೀಳುವಲ್ಲಿರುವ ಗುಂಡಿಯ ನೇರ ಮೇಲೆ ನಾವು ನಿಂತಿದ್ದೆವು. ಈ ಗುಂಡಿಗೆ ಧುಮುಕುವ ನೀರು ಅಲ್ಲೇ ಸುಳಿಯಂತೆ ತಿರುಗಿ ನಂತರ ಹೊರಬಿದ್ದು ೨ನೇ ಹಂತವನ್ನು ಸೃಷ್ಟಿಸುತ್ತದೆ.


ಮರಳಿ ೫ನೇ ಹಂತದ ಬಳಿ ಬಂದಾಗ ಸಮಯ ಮಧ್ಯಾಹ್ನ ೧.೦೦ ಆಗಿತ್ತು. ೫ನೇ ಹಂತವೆ ಎಲ್ಲಾ ಹಂತಗಳಿಗಿಂತ ಸುಂದರವಾಗಿರುವುದು. ನೀರಿನ ಸದ್ದು, ಪ್ರಕೃತಿಯ ಮೌನ ಮತ್ತು ಹಕ್ಕಿಗಳ ಸಂಗೀತ ಕೇಳುತ್ತಾ ಬಂಡೆಗಳೆಡೆಯಲ್ಲಿ ಮೈಯನ್ನು ಒರಗಿಸಿ ಜಲಧಾರೆಯ ಅತಿಥಿಗಳಾಗಿ ಅವಿಸ್ಮರಣೀಯ ಸಮಯವನ್ನು ಕಳೆದೆವು. ಸುಮಾರು ೨ ಗಂಟೆಗೆ ಅಲ್ಲಿಂದ ಹೊರಟು ಕಣಿವೆಯೇರುವಲ್ಲಿ ತಲುಪಿ, ಸ್ವಲ್ಪ ವಿಶ್ರಮಿಸಿದ ಬಳಿಕ ಕಣಿವೆಯನ್ನೇರಲಾರಂಭಿಸಿದೆವು. ನನಗಂತೂ ಇದು ಸಾಕುಮಾಡಿತು. ಕೊನೆಕೊನೆಗೆ ಎರಡೂ ಕಾಲುಗಳು ಶಕ್ತಿ ಕಳಕೊಂಡು ಅವುಗಳನ್ನು ಎಳೆದುಕೊಂಡು ಬರುವ ಸ್ಥಿತಿ ತಲುಪಿದ್ದೆ. ೫.೩೦ಕ್ಕೆ ನಾಯ್ಕರ ಮನೆಯಲ್ಲಿದ್ದೆವು.


ಹಿಂತಿರುಗುವಾಗ ದಾರಿಯುದ್ದಕ್ಕೂ ಬೇಗ ಬೇಗ ಎಂದು ಅವಸರ ಮಾಡುತ್ತಿದ್ದ ಪುತ್ತು, ಈಗ ಇನ್ನಷ್ಟು ಅವಸರ ಮಾಡತೊಡಗಿದ. ಆತನಿಗೆ ಅಂದು ಆರಂಭಗೊಳ್ಳುವ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯೊಂದರಲ್ಲಿ ರೆಫ್ರೀ ಆಗಿ ಕಾರ್ಯಮಾಡಲಿತ್ತು. ಬಿಸಿ ನೀರಿನ ಸ್ನಾನದ ಬಳಿಕ ನಮಗೆ ಊಟಕ್ಕೆ ಬರುವಂತೆ ಹೇಳಲಾಯಿತು. ಅದುವರೆಗೆ ಅವಸರ ಮಾಡುತ್ತಿದ್ದ ಪುತ್ತು ಈಗ ಮೌನವ್ರತ ಧರಿಸಿದ ಸನ್ಯಾಸಿಯಂತಾಗಿದ್ದ. ’ಊಟ’ ಎಂಬ ಎರಡು ಅಕ್ಷರಗಳ ಶಬ್ದ ತನ್ನ ಮಾಯೆಯನ್ನು ಮಾಡಿತ್ತು. ’ಟು ಹೆಲ್ ವಿತ್ ವಾಲಿಬಾಲ್ ಟುರ್ನಾಮೆಂಟ್’ ಅನ್ನುತ್ತಾ ಊಟಕ್ಕೆ ಕುಳಿತೇಬಿಟ್ಟ! ’ಏನನ್ನಾದರೂ ಬಿಟ್ಟೆನು, ಆದರೆ ತಿನ್ನುವ ಅವಕಾಶ ಬಿಡೆನು’ ಇದುವೇ ಪುತ್ತು ಸ್ಟೈಲ್.
೭ ಗಂಟೆಗೆ ವಾಲಿಬಾಲ್ ಪಂದ್ಯಾಟದಲ್ಲಿರಬೇಕಾದವನನ್ನು ಅಲ್ಲಿ ತಲುಪಿಸಿದಾಗ ಸಮಯ ೭.೩೦. ರಾತ್ರಿ ೧೧ಕ್ಕೆ ನಾನು ಉಡುಪಿ ತಲುಪಿದಾಗ ನನ್ನನ್ನು ಸ್ವಾಗತಿಸಿದ್ದು ಮಳೆ! ಜನವರಿಯಲ್ಲಿ ಮಳೆ!