೧೭-೦೨-೨೦೦೮.
ನಿರ್ಮಾಣಗೊಂಡದ್ದು: ಇಸವಿ ೧೧೪೦ರಲ್ಲಿ ಬಾಳೆಯಮ್ಮ ಹೆಗ್ಗಡೆ ಎಂಬ ಹೊಯ್ಸಳ ಮಾಂಡಲೀಕನಿಂದ.
ಹೊಯ್ಸಳ ರಾಜ ಎರಡನೇ ಬಲ್ಲಾಳನ ರಾಜಧಾನಿಯಾಗಿದ್ದ ನಾಡಕಲಸಿಯ ರಾಮೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ಒಂದೆರಡು ಲೇಖನಗಳು ನನ್ನಲ್ಲಿದ್ದವು. ರಾಮೇಶ್ವರ ದೇವಾಲಯ ಮಿಥುನ ಶಿಲ್ಪಗಳನ್ನೂ ಮತ್ತು ಮಲ್ಲಿಕಾರ್ಜುನ ದೇವಾಲಯ ನಾಟ್ಯ ಶೈಲಿಗಳನ್ನು ಬಿಂಬಿಸಿರುವುದರ ಬಗ್ಗೆ ಈ ಲೇಖನಗಳಲ್ಲಿ ತಿಳಿಸಲಾಗಿತ್ತು. ಕುತೂಹಲದಿಂದಲೇ ನಾಡಕಲಸಿ ತಲುಪಿದೆವು. ಪ್ರಾಂಗಣದೊಳಗೆ ಕಾಲಿಟ್ಟೊಡನೇ ಬಲಕ್ಕೆ ನಾಗರಾಶಿ. ಒಂದಷ್ಟು ನಾಗಕಲ್ಲುಗಳನ್ನು ಇಲ್ಲಿ ರಾಶಿ ಹಾಕಿ ಕೂರಿಸಲಾಗಿದೆ. ಎಡಕ್ಕೆ ರಾಮೇಶ್ವರ ದೇವಾಲಯವಿದ್ದರೆ, ಮುಂದೆ ಮಲ್ಲಿಕಾರ್ಜುನ ದೇವಾಲಯ.
ಈ ದೇವಸ್ಥಾನದಲ್ಲಿರುವ ಮಿಥುನ ಶಿಲ್ಪಗಳು ಆಶ್ಚರ್ಯಗೊಳಿಸಿದವು. ಸಂಭೋಗದ ಆಸನಗಳನ್ನು ನೋಡಿ ಬೆರಗಾದೆವು. ಆಗಲೂ ಪ್ರಾಣಿ ಸಂಭೋಗದ ಬಗ್ಗೆ ಇದ್ದ ಅರಿವನ್ನು ತಿಳಿದು ಅಚ್ಚರಿಯಾಯಿತು. ಸಲಿಂಗ ಕಾಮಿಗಳು, ಪ್ರಾಣಿ ಸಂಭೋಗ, ಸಮೂಹ ಸಂಭೋಗ ಎಲ್ಲ ರೀತಿಯದ್ದೂ ಇದ್ದವು! ಆ ಎಲ್ಲಾ ಆಸನಗಳನ್ನು ಸಣ್ಣ ಸಣ್ಣ ಕಿಂಡಿಯಂತಹ ಸ್ಥಳಗಳಲ್ಲಿ ಕರಾರುವಕ್ಕಾಗಿ ಕೆತ್ತಿರುವ ನೈಪುಣ್ಯತೆಯನ್ನು ಮೆಚ್ಚದೆ ಇರಲಸಾಧ್ಯ.
ಮಲ್ಲಿಕಾರ್ಜುನ ದೇವಾಲಯಕ್ಕೆ ಗೋಪುರವಿಲ್ಲ. ಹೊಯ್ಸಳ ಶೈಲಿಯ ದೇವಾಲಯಗಳಲ್ಲಿ ಗೋಪುರವಿರದೇ ಇರುವುದು ಬಹಳ ಅಪರೂಪ. ಅಲ್ಲದೇ ಸಳ ಮಹಾರಾಜ ಹುಲಿ ಕೊಲ್ಲುವ ದೃಶ್ಯದ ಕೆತ್ತನೆ ಇರದಿರುವುದು, ಇದು ಹೊಯ್ಸಳ ಕಾಲದ ದೇವಾಲಯ ಆಗಿರಲು ಅಸಾಧ್ಯ ಎಂಬ ವಾದವನ್ನು ಮುಂದಿಟ್ಟಿದೆ. ಈ ಬಗ್ಗೆ ಗೊಂದಲವಿದೆ. ಮಲ್ಲಿಕಾರ್ಜುನ ದೇವಾಲಯವನ್ನು ಕದಂಬರು ನಿರ್ಮಿಸಿದ್ದರು ಎಂಬ ಮಾತೂ ಇದೆ.
ಗೋಪುರರಹಿತ ಮಲ್ಲಿಕಾರ್ಜುನ ದೇವಾಲಯದಲ್ಲಿ ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖಮಂಟಪಗಳಿವೆ. ಮುಖಮಂಟಪದಲ್ಲಿ ಆಸೀನನಾಗಿರುವ ನಂದಿ ಬಹಳ ಸುಂದರವಾಗಿದ್ದಾನೆ. ಗರ್ಭಗುಡಿಯಲ್ಲಿ ಆಕರ್ಷಕ ಶಿವಲಿಂಗ ಮತ್ತು ಗರ್ಭಗುಡಿಯ ಇಕ್ಕೆಲಗಳಲ್ಲಿ ಕವಾಟಗಳು. ಒಂದರಲ್ಲಿ ದೇವಿಯ ಸುಂದರ ಮೂರ್ತಿಯಿದೆ. ನವರಂಗದಲ್ಲಿರುವ ಕಂಬಗಳ ಮೇಲೆ ನಾಟ್ಯಶಾಸ್ತ್ರವನ್ನು ವಿವರಿಸುವ ರೇಖಾಚಿತ್ರಗಳಿವೆ. ಇವು ಮತ್ತವೇ, ನಮ್ಮ ಪ್ರತಿಬಿಂಬ ನೇರವಾಗಿಯೂ ತಲೆಕೆಳಗಾಗಿಯೂ ಕಾಣುವ ಕಲ್ಲಿನ ಕಂಬಗಳು. ಅಂತಹ ೧೦ ಕಂಬಗಳು ಮಲ್ಲಿಕಾರ್ಜುನ ದೇವಾಲಯದಲ್ಲಿವೆ. ದೇವಾಲಯದ ಮುಖ್ಯ ದ್ವಾರ ಮುಖಮಂಟಪದ ಮುಖಾಂತರವಿದ್ದರೆ, ಉಳಿದೆರಡು ದ್ವಾರಗಳು ನವರಂಗದ ಇಕ್ಕೆಲಗಳಲ್ಲಿವೆ.
ಮಾಹಿತಿ: ಮಹಾಬಲ ಸೀತಾಳಭಾವಿ
7 ಕಾಮೆಂಟ್ಗಳು:
ನಮ್ಮೂರಿಂದ ನಾಲ್ಕೇ ಕಿಲೋಮೀಟರ್! :-)
ಆದರೂ ನಾನಿದನ್ನು ನೋಡಿರೋದು ಒಂದೇ ಸಲ :-(
ಕಲಸಿಗೆ ತುಂಬ ಸಲ ಹೋಗಿದ್ದೇನೆ.... ದೇವಸ್ಥಾನವನ್ನೂ ನೋಡಿದ್ದರೂ ಸಹ ಅದರ ಬಗ್ಗೆ ನಿಮ್ಮಷ್ಟು ವಿವರಗಳು ಗೊತ್ತಿರಲಿಲ್ಲ!!
ಉಪಯುಕ್ತ ಮಾಹಿತಿ ನೀಡಿದ್ದೀರಿ ರಾಜೇಶ್. ನಾನೂ ಕಲಸಿಗೆ ಹೋಗಬೇಕು.
- ಮಂಜುನಾಥಸ್ವಾಮಿ
ಮತ್ತೆ ನಮ್ಮೂರು, ಆರು ಕಿಲೋಮೀಟರ್! ಮುಂಚೇನೇ ಗೊತ್ತಾಗಿದ್ರೆ ಹೋಗ್ಬಹುದಾಗಿತ್ತಾ? ;)
ಹರೀಶ್,
ಒಂದು ಸಲವಾದ್ರೂ ನೋಡಿದ್ದೀರಲ್ಲಾ... ಇನ್ನೇನು? ಹಲವರು ಊರಿನ ಸಮೀಪವಿದ್ದರೂ ನೋಡಿರುವುದಿಲ್ಲ.
ಅರವಿಂದ್,
ವಿವರಗಳನ್ನೆಲ್ಲಾ ಅಲ್ಲಿಂದ ಇಲ್ಲಿಂದ ಕಲೆಹಾಕಿದ್ದು. ಅಂದರೆ ಕದ್ದದ್ದು ಎನ್ನಬಹುದು.
ಮಂಜುನಾಥ,
ಥ್ಯಾಂಕ್ಸ್.
ಸುಶ್ರುತ,
ಕಲಸಿಯಿಂದ ಉಳವಿಗೆ ಹೋಗುವ ದಾರಿಯಲ್ಲಿ ’ದೊಡ್ಡೇರಿ’ಗೆ ಹೋಗುವ ತಿರುವನ್ನು ನೋಡಿದಾಗ ನಿಮ್ಮ ನೆನಪು ಬಂದಿತ್ತು!
ನೀವು ಹಿಂದೆ ಕೆಳದಿಯ ಲೇಖನ ಬರೆದಾಗ ನಿಮಗೆ ಹೇಳಿದ್ನಲ್ಲ ಕಲಸೆ ಅದೇ ಇದು ನಾಡಕಲಸಿ, ಸಾಗರದ ಕಡೆ ಕಲಸೆ ಎಂದೆ ಪ್ರಸಿದ್ಧ ಈ ಊರು. ಮೊದಲೇ ಗೊತ್ತಿದ್ದರೆ ನಮ್ಮನೆಗೂ ಹೋಗಿ ಬರಬಹುದಿತ್ತು.
ಶರಶ್ಚಂದ್ರ,
ಮುಂದಿನ ಸಲ ಆ ಕಡೆ ಹೋಗುವಾಗ ನಿಮ್ಮ ಮನೆಗೊಂದು ಭೇಟಿ ಕೊಡೋಣವಂತೆ.
ಕಾಮೆಂಟ್ ಪೋಸ್ಟ್ ಮಾಡಿ