ಇದು ಭೀಮೇಶ್ವರ ಜಲಧಾರೆಯ ಚಿತ್ರ. ೨೦೦೩ ಜೂನ್ ಮೊದಲ ವಾರದಲ್ಲಿ ಮಡೆನೂರು ಅಣೆಕಟ್ಟಿಗೆ ತೆರಳುವಾಗ ಭೀಮೇಶ್ವರಕ್ಕೆ ಮೊದಲ ಭೇಟಿ ನೀಡಿದ್ದೆ. ಹಳೇಯ ಶಿವ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಪಾಂಡವರು ವನವಾಸದಲ್ಲಿದ್ದಾಗ ಯುಧಿಷ್ಠಿರ ಶಿವನ ಪೂಜೆ ಮಾಡುವ ಇಚ್ಛೆ ವ್ಯಕ್ತಪಡಿಸಿದಾಗ ಭೀಮನು ನಿರ್ಮಿಸಿದ ಶಿವ ದೇವಾಲಯ ಇದಾಗಿರುವುದರಿಂದ ಇದಕ್ಕೆ ಭೀಮೇಶ್ವರ ಎಂದು ಹೆಸರು. ಪ್ರಕೃತಿಯ ಮಡಿಲಲ್ಲಿ ಅಡಗಿ ಕೂತಿರುವ ಪುಟ್ಟ ಊರು. ಇಳಿಜಾರಿನ ದಾರಿಯ ಬಳಿಕ ಸಿಗುವ ಸಣ್ಣ ತೊರೆಯೊಂದನ್ನು ದಾಟಿ ಮುಂದೆ ದಾರಿ ಕವಲೊಡೆಯುವಲ್ಲಿ ಎಡಕ್ಕೆ ತೆರಳಿದರೆ ಭೀಮೇಶ್ವರ ದೇವಳದಿಂದ ಸ್ವಲ್ಪ ಕೆಳಗೆ ಇರುವ ಅರ್ಚಕರ ಮನೆ ಸಿಗುವುದು. ಇನ್ನೊಂದೆರಡು ನಿಮಿಷ ನಡೆದು, ೬೦ ಮೆಟ್ಟಿಲುಗಳನ್ನೇರಿದರೆ ಸುಂದರ ದೇಗುಲ ಮತ್ತು ಮಳೆಗಾಲವಾದಲ್ಲಿ ಪುಟ್ಟ ೩೫ ಅಡಿಯೆತ್ತರವಿರುವ ಜಲಧಾರೆ. ಕೆಲವು ವರ್ಷಗಳ ಹಿಂದೆ ಬಂಡೆಯೊಂದು ಉರುಳಿಬಿದ್ದು ಕಲ್ಲಿನ ಮೇಲ್ಛಾವಣೆ ಸ್ವಲ್ಪ ಹಾನಿಯಾಗಿರುವುದನ್ನು ಹೊರತುಪಡಿಸಿದರೆ ದೇವಾಲಯ ಈಗಲೂ ಗಟ್ಟಿಮುಟ್ಟಾಗಿದೆ. ಎದುರಿಗಿರುವ ನಂದಿಗೂ ಒಂದು ಮಂಟಪ.
ಇಲ್ಲಿ ಶಿವರಾತ್ರಿ ಉತ್ಸವ ೫ ದಿನಗಳವರೆಗೆ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಶನಿವಾರ ಮುಂಜಾನೆ ದೇವರಿಗೆ ಪೂಜೆ ಮಾಡಿ ತನ್ನ ಊರಾದ ಸಿದ್ಧಾಪುರಕ್ಕೆ ತೆರಳುವ ಅರ್ಚಕರು ಆದಿತ್ಯವಾರ ಸಂಜೆ ಮರಳಿ ಬರುತ್ತಾರೆ. ನಾನು ಮೊದಲ ಬಾರಿ ತೆರಳಿದಾಗ ವೃದ್ಧ ಅರ್ಚಕರೊಬ್ಬರಿದ್ದರು. ಅನಾರೋಗ್ಯದ ಕಾರಣ ಅವರು ಈಗ ಇಲ್ಲಿ ಪೂಜೆ ಸಲ್ಲಿಸುತ್ತಿಲ್ಲ. ಈಗ ಮಧ್ಯ ವಯಸ್ಕ ಅರ್ಚಕರೊಬ್ಬರಿದ್ದಾರೆ. ಅರ್ಚಕರ ಮನೆಯಲ್ಲಿ ರಾತ್ರಿ ತಂಗಬಹುದು.
ಜುಲಾಯಿ ೨೦೦೭ರ ಮಂಗಳೂರು ಯೂತ್ ಹಾಸ್ಟೆಲ್ ಕಾರ್ಯಕ್ರಮ ಜೋಗ ಮತ್ತು ಭೀಮೇಶ್ವರಕ್ಕೆ ೨೧ ಮತ್ತು ೨೨ರಂದು ದಿನೇಶ್ ಹೊಳ್ಳರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ೩೬ ಜನರ ತಂಡ ಮಂಗಳೂರಿನಿಂದ ೨೧ರ ಮಧ್ಯಾಹ್ನ ೨ ಗಂಟೆಗೆ ಹೊರಟು ಉಡುಪಿಯಲ್ಲಿ ನನ್ನನ್ನೂ ಸೇರಿಸಿ ೮ ಜನರನ್ನು 'ಪಿಕ್' ಮಾಡಿ ಚೆನ್ನೆಕಲ್ಲಿನ ಜಲಧಾರೆಯ ಬಳಿ ತಲುಪಿದಾಗ ೬.೪೫ ಆಗಿತ್ತು. ಜಲಧಾರೆಯ ಅಂದವನ್ನು ವೀಕ್ಷಿಸಿ ಜೋಗ ತಲುಪಿದಾಗ ರಾತ್ರಿ ೮.೧೫. ಅಲ್ಲೇ ಯೂತ್ ಹಾಸ್ಟೆಲ್ ನಲ್ಲಿ ರಾತ್ರಿ ತಂಗಲು ವ್ಯವಸ್ಥೆ ಮಾಡಲಾಗಿತ್ತು.
ಮರುದಿನ ನನ್ನನ್ನು ಮಾತ್ರ ಹೊರತುಪಡಿಸಿ ಉಳಿದೆಲ್ಲರೂ ಜೋಗದ ಅಂದವನ್ನು ಸವಿಯಲು ಜಲಪಾತದ ಬುಡಕ್ಕೆ ತೆರಳಿದರು. ಅವರೆಲ್ಲರಿಗೆ ಹಿಂತಿರುಗಲು ಕನಿಷ್ಟವೆಂದರೆ ಇನ್ನೆರಡು ತಾಸು ಬೇಕಾಗುವುದರಿಂದ ಅಲ್ಲೇ ಆಚೀಚೆ ಅಲೆದಾಡತೊಡಗಿದೆ. ಶರಾವತಿಯ ಕಣಿವೆಯ ನೋಟ, ಜೋಗದ ಕಣಿವೆಯಲ್ಲಿ ಸ್ವಲ್ಪ ಮುಂದೆ ಮಳೆಗಾಲದಲ್ಲಿ ಮಾತ್ರ ದರ್ಶನ ನೀಡುವ ಮೂರ್ನಾಲ್ಕು ಜಲಧಾರೆಗಳು ಇತ್ಯಾದಿಗಳನ್ನು ನೋಡುತ್ತ ಎರಡು ತಾಸು ಕಳೆದೆ.
ನಂತರ ಟೀಮು ವಿಶ್ವೇಶ್ವರಯ್ಯ ಪಾಯಿಂಟ್ ಬಳಿ ತೆರಳಿತು. ಮುಂಗಾರು ಮಳೆ ಚಿತ್ರದಿಂದ ಇಲ್ಲಿ ಜನರ 'ಅತಿರೇಕ' ನಂಬಲಸಾಧ್ಯ. ಬಂಡೆಯ ಮೇಲ್ಮೈಯಲ್ಲಿ ಮಲಗಿ ಕತ್ತನ್ನು ಮಾತ್ರ ಹೊರಚಾಚಿ ಜಲಧಾರೆ ಧುಮುಕುವುದನ್ನು ನೋಡುವುದೇ ಇದ್ದದ್ದರಲ್ಲಿ ಸುರಕ್ಷಿತ ವಿಧಾನ. ಆದರೆ ಹೆಚ್ಚಿನವರು 'ರಾಜ' ಧುಮುಕುವಲ್ಲಿ ಪ್ರಪಾತದ ಅಂಚಿಗೆ ತೆರಳಿ ಬಗ್ಗಿ ನೋಡುವುದು, 'ರಾಜ'ನ ಪಾರ್ಶ್ವದಲ್ಲಿ ಪ್ರಪಾತದಂಚಿನಲ್ಲಿ ನಿಂತು ಫೋಟೊ ತೆಗೆಯುವುದು, ಅಲ್ಲಿಂದ ನಿಂತುಕೊಂಡೇ ಬಗ್ಗಿ ನೋಡುವುದು ಇವೆಲ್ಲಾ ಮಾಡುತ್ತಿದ್ದರು. ಕಾಲು ಸ್ವಲ್ಪ ಜಾರಿದರೆ ಸಾಕು ೯೦೦ ಅಡಿಯಾಳದ ಗುರುತ್ವಾಕರ್ಷಣೆ ಶಕ್ತಿಯನ್ನು ಗೆಲ್ಲುವ ಸಾಮರ್ಥ್ಯ ಮನುಷ್ಯನ ದೇಹಕ್ಕೆ ಇಲ್ಲ ಎಂಬುದನ್ನು ಅರಿಯದೆ ಮತ್ತೆ ಮತ್ತೆ ಬಗ್ಗಿ ನೋಡುವುದು ನಡೆಯುತ್ತಲೇ ಇತ್ತು.
ಇಲ್ಲಿ ಹೆಚ್ಚು ಹೊತ್ತು ಕಳೆಯಲು ನನ್ನ ಮನಸ್ಸು ಹಿಂಜರಿಯುತ್ತಿತ್ತು. 'ರಾಜ'ನ ಹತ್ತಿರ ತೆರಳಲು ಧೈರ್ಯ ಸಾಲಲಿಲ್ಲ. ಬದಿಯಲ್ಲೊಂದು ಕಡೆ ಮಲಗಿ ಕತ್ತನ್ನು ಹೊರಚಾಚಿ ಪ್ರಪಾತವನ್ನು ನೋಡಿ ದಂಗಾದೆ. ಒಂದೆರಡು ಚಿತ್ರ ಕ್ಲಿಕ್ಕಿಸಿ ಹದಿನೈದೇ ನಿಮಿಷದಲ್ಲಿ ನಮ್ಮ ಟೆಂಪೋಗೆ ಹಿಂತಿರುಗಿದೆ. ಅರ್ಧ ಗಂಟೆಯ ಬಳಿಕ ಉಳಿದವರು ಒಬ್ಬೊಬ್ಬರಾಗಿ ಹಿಂತಿರುಗಿದರು. ನಾನು ಹಿಂತಿರುಗಿದ ಬಳಿಕ ಅಲ್ಲೊಂದು ಘಟನೆ ನಡೆದಿತ್ತು. ಅದನ್ನು ಕೇಳಿಯೇ ಮೈ ನಡುಕ ಬಂದಿತ್ತು. 'ರಾಜ' ಧುಮುಕುವ ಅಂಚಿನಿಂದ ಸ್ವಲ್ಪ ಮೇಲಿರುವ ನೀರಿನ ಗುಂಡಿಯಲ್ಲಿ ಯಾರೋ ಒಬ್ಬ ಅಧಿಕಪ್ರಸಂಗಿ ಈಜಾಡುತ್ತಿದ್ದ. ಸ್ವಲ್ಪ ಮುಂದೆ, 'ರಾಜ' ಧುಮುಕುವ ಎರಡು ಅಡಿ ಮೊದಲು ಇರುವ ಬಂಡೆಯೊಂದರಲ್ಲಿ ನಮ್ಮ ತಂಡದ ಮಹೇಶ ಮತ್ತು ರಾಕೇಶ್ 'ಜಿರಾಫೆ' ಹೊಳ್ಳ ಒಳಗೊಂಡಂತೆ ಐದಾರು ಮಂದಿ ಕೂತಿದ್ದರು. ಜನರೆಲ್ಲಾ ನೋಡುತ್ತಿದ್ದಂತೆಯೇ ಈಜಾಡುತ್ತಿದ್ದ ಆ ಯುವಕ ನೀರಿನ ಸೆಳೆತದಲ್ಲಿ ಸಿಕ್ಕುಬಿದ್ದ. ನೀರಿನ ಸೆಳೆತ ಆತನನ್ನು ಪ್ರಪಾತದ ಅಂಚಿನೆಡೆ ಎಳೆದೊಯ್ಯತೊಡಗಿತು.
ಅಂತ್ಯ ಕಣ್ಣೆದುರೇ ಕಾಣುತ್ತಿದ್ದರಿಂದ ಆ ಯುವಕ ತನ್ನ ಕೈಗಳನ್ನು ಹೊರಚಾಚಿ ಸಿಕ್ಕಿದ್ದನ್ನು ಹಿಡಿದುಕೊಳ್ಳಲು ಪ್ರಯತ್ನಿಸತೊಡಗಿದ. ಆಗ ಅಲ್ಲಿದ್ದ ಒಬ್ಬರು ತನ್ನ ರೈನ್-ಕೋಟನ್ನು ಆತನೆಡೆ ಎಸೆದರು. ಅದರ ಒಂದು ಬದಿಯನ್ನು ಹೇಗೋ ಹಿಡಿದುಕೊಂಡ ಆತ ನೀರಿನ ಸೆಳೆತದಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿದ್ದ. ರೈನ್-ಕೋಟ್ ಎಸೆದ ವ್ಯಕ್ತಿಗೆ ತಾನು ನಿಂತಲ್ಲಿಂದ ಒಂದು ಹೆಜ್ಜೆ ಹಿಂದೆ ಚಲಿಸುವಷ್ಟು ಸ್ಥಳಾವಕಾಶವೂ ಇದ್ದಿರಲಿಲ್ಲ. ಅತ್ತ ನೀರಿನಲ್ಲಿದ್ದ ಯುವಕನ ಹಿಡಿತ ನೀರಿನ ರಭಸಕ್ಕೆ ರೈನ್-ಕೋಟ್ ನಿಂದ ಜಾರುತ್ತಿತ್ತು. ಇನ್ನೇನು ಆತ 'ರಾಜ'ನೊಂದಿಗೆ ಕೆಳಗೆ ಬೀಳಲಿದ್ದಾನೆ ಎನ್ನುವಷ್ಟರಲ್ಲಿ, ಪ್ರಪಾತದಂಚಿನಿಂದ ಕೇವಲ ನಾಲ್ಕೈದು ಅಡಿ ಮೊದಲು ರಾಕೇಶ್, ತನ್ನ ಉದ್ದನೆಯ ದೇಹವನ್ನು ಹೊರಚಾಚಿ ಆ ಯುವಕನ ಕೈಯನ್ನು ಬಲವಾಗಿ ಹಿಡಿದು ತಾನು ಕೂತಿದ್ದ ಬಂಡೆಯೆಡೆ ಎಳೆದುಬಿಟ್ಟ. ನಂತರ ಉಳಿದವರು ಆತನನ್ನು ಮೇಲಕ್ಕೆಳೆದುಕೊಂಡರು. ಚಿತ್ರದುರ್ಗದಿಂದ ಬಂದಿದ್ದ ಆ ಯುವಕನಿಗೆ ಇದೊಂದು ಪುನರ್ಜನ್ಮ ಎನ್ನಬಹುದು. ಕಂಗಾಲಾಗಿ 'ಶಾಕ್' ನಲ್ಲಿದ್ದ ಆತ ತನ್ನ ಜೀವ ಉಳಿಸಿದವನಿಗೆ ಧನ್ಯವಾದ ಹೇಳಲು ಮರೆತೇಬಿಟ್ಟ!
'ಅಂದ ಇದ್ದಲ್ಲಿ ಅಪಾಯವೂ ಇರುವುದು' ಎಂಬುದನ್ನು ನಾವು ಅರಿತರೆ ಚೆನ್ನ.
ಮಾಹಿತಿ: ಪ್ರೇಮಕಲಾ ಎ ಮಧ್ಯಸ್ಥ