ಸೋಮವಾರ, ಡಿಸೆಂಬರ್ 04, 2006

ಬಿದಿರು ಜಲಧಾರೆ


ಎಲ್ಲೂ ತಿರುಗಾಡಾಲು ಹೋಗದೆ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿತ್ತು. ಮೊನ್ನೆ ಶನಿವಾರ ಬಿಡುವು ಸಿಕ್ಕೊಡನೆ ಗೆಳೆಯ ಮಾಧವರೊಂದಿಗೆ ಈ ಜಲಪಾತ ನೋಡಲು ತೆರಳಿದೆ. ದಾರಿಯಲ್ಲಿ ಒಂದೆಡೆ, ದೂರದಲ್ಲಿ ಪರ್ವತವೊಂದರ ಮೇಲೆ ಕಾಣುವ ಅಸ್ಪಷ್ಟ ಆಕೃತಿಗಳ ಬಗ್ಗೆ ಮಾಧವ್ ಕೇಳಿದರು. ಅದು 'ಕರಿಕಾನು' ಬೆಟ್ಟದ ಮೇಲಿರುವ 'ಕರಿಕಾನಮ್ಮ' ದೇವಿಯ ದೇವಸ್ಥಾನ. ಮೊದಲು ದಟ್ಟ ಕಾಡಿನ ನಡುವೆ ಈ ದೇವಸ್ಥಾನ ಇದ್ದಿದ್ದರಿಂದ, ಕರಿಕಾನಮ್ಮ ದೇವಿ ಎಂದು ಕರೆಯಲಾಗುತ್ತಿತ್ತು. ಈಗ ದುರ್ಗಾಪರಮೇಶ್ವರಿ ಎನ್ನುತ್ತಾರೆ. ನಾನು ಹಲವಾರು ಬಾರಿ ಈ ದೇವಸ್ಥಾನ ನೋಡಿದ್ದರೂ, ಮಾಧವ ಅಲ್ಲಿಗೆ ತೆರಳುವ ಇಚ್ಛೆ ವ್ಯಕ್ತಪಡಿಸಿದರು. ಬೆಟ್ಟದ ಮೇಲೆ ತಲುಪಿದಾಗ ೬.೧೫ರ ಸಮಯ. ಮುಸ್ಸಂಜೆ. ರಮಣೀಯ ದೃಶ್ಯ ಇಲ್ಲಿಂದ ಲಭ್ಯ.

ರಾತ್ರಿ ತಂಗಲು ಚಂದಾವರ ತಲುಪಿದೆವು. ಚಂದಾವರದಲ್ಲಿ ಸಂಜೆ ಕಳೆಯದೆ ೧೩ ವರ್ಷಗಳಾಗಿದ್ದವು. ಮರುದಿನ ಮುಂಜಾನೆ ೮.೩೦ಕ್ಕೆ ಚಂದಾವರದಿಂದ ಹೊರಟು ಜಲಧಾರೆ ಇರುವ ಹಳ್ಳಿ ತಲುಪಿದಾಗ ೧೦.೩೦ ಆಗಿತ್ತು. ಜಲಧಾರೆಗೆ ಹಾದಿ ಕೇಳಿ, ಕಣಿವೆಯಲ್ಲಿ ಇಳಿಯಲಾರಂಭಿಸಿದೆವು. ಸ್ವಲ್ಪ ದೂರ ತೆರಳಿದಾಗ ಸರಿಯಾದ ದಾರಿಯ ಬಗ್ಗೆ ಸಂಶಯ ಬಂದು ಮತ್ತೊಮ್ಮೆ ವಿಚಾರಿಸಿ ಬರೋಣವೆಂದು ಹಿಂದಿರುಗುವಾಗ ಸಿಕ್ಕಿದರು ಶಂಕರ ಹಾಗೂ ಈಶ್ವರ.

ಇಬ್ಬರನ್ನು ನಮ್ಮೊಂದಿಗೆ ಬರಲು ಕೇಳಿಕೊಂಡೆವು. ನಾವು ಕೆಳಗೆ ಇಳಿಯುತ್ತಿದ್ದ ದಾರಿಯೇ ಸರಿಯಾದ ದಾರಿಯಾಗಿತ್ತು. ಶಂಕರ ಹಾಗೂ ಈಶ್ವರ ಅದೇ ದಾರಿಯಲ್ಲಿ ನಮ್ಮಿಬ್ಬರನ್ನು ಕರೆದೊಯ್ದರು. ಕೆಲವು ಕಡೆ ವಾಟೆ (ಕಳಪೆ ಬಿದಿರು) ಗಿಡಗಳು ದಾರಿಗೆ ಅಡ್ಡವಾಗಿದ್ದವು. ಕತ್ತಿಯಿಂದ ದಾರಿ ಮಾಡುತ್ತಾ ಶಂಕರ ಮುನ್ನಡೆದ. ೧೫ ನಿಮಿಷದ ಇಳಿಜಾರಿನ ಹಾದಿಯಲ್ಲಿ ಜಾರಿ ಜಾರಿಕೊಂಡೇ ಕೆಳಗೆ ತಲುಪಿದೆವು. ಕಾಡಿನಲ್ಲಿ ತಾವು ಗುರುತಿಸಿಟ್ಟ ಕಾಡುತ್ಪತ್ತಿಯುಳ್ಳ ಮರಗಳನ್ನು ಬೇರೆಯವರು ಗುರುತಿಸುವ ಮೊದಲೇ ಅದರ ಉತ್ಪತ್ತಿಗಳನ್ನು ಶೇಖರಿಸುವ ಹೊಟ್ಟೆಪಾಡಿನ ಕೆಲಸವಿದ್ದುದರಿಂದ ನಮ್ಮನ್ನು ಕೆಳಗಿನವರೆಗೆ ದಾರಿ ಮಾಡಿಕೊಂಡು ತಲುಪಿಸಿ ಶಂಕರ ಮಾತು ಈಶ್ವರ ಹಿಂತಿರುಗಿದರು.

ಈ ಜಲಪಾತದಲ್ಲಿ ೪ ಹಂತಗಳಿವೆ. ಕಣಿವೆಯಲ್ಲಿ ಇಳಿದಾಗ, ಎರಡನೆ ಜಲಪಾತದ ಬುಡಕ್ಕೆ ಬಂದು ತಲುಪಿದೆವು. ಸ್ವಲ್ಪ ಮೇಲೆ ಒಂದನೆ ಹಂತ ಧುಮುಕುತ್ತಿತ್ತು. 1 ಮತ್ತು 2ನೇ ಹಂತಗಳ ಒಟ್ಟು ಎತ್ತರ ಸುಮಾರು ೧೫೦ ಅಡಿ ಇರಬಹುದು. ಮಾಧವ್, ಬಂಡೆಗಳನ್ನು ಆಧರಿಸಿ ನೇರವಾಗಿ ಹಿಮ್ಮುಖವಾಗಿ ಕೆಳಗಿಳಿದು 3ನೇ ಹಂತದ ಕೆಳಭಾಗಕ್ಕೆ ಬಂದರು. ನನಗೆ ಹಾಗೆ ಇಳಿಯಲು ಧೈರ್ಯ ಸಾಲದೆ ಬದಿಯಲ್ಲಿ ಕಾಡು, ಬಂಡೆಗಳ ನಡುವೆ ದಾರಿ ಮಾಡಿಕೊಂಡು, ಸುತ್ತು ಬಳಸಿ 3ನೇ ಹಂತದ ಕೆಳಭಾಗಕ್ಕೆ ಬಂದೆ. ಇದು ಸುಮಾರು ೩೫ ಅಡಿ ಎತ್ತರವಿದೆ. ನಂತರ ಮುಂದಿರುವ ನಾಲ್ಕನೇ ಹಂತ ಉಳಿದ 3 ಹಂತಗಳನ್ನು ಮೀರಿಸುವಷ್ಟು ಚೆನ್ನಾಗಿದೆ. ೧೦೦ ಅಡಿಯಷ್ಟು ಎತ್ತರವಿರುವ ಈ ಹಂತದ ಬುಡಕ್ಕೆ ತೆರಳಲು ಸರಿಯಾದ ದಾರಿ ಸಿಗಲಿಲ್ಲ. ಆಯಕಟ್ಟಿನ ಜಾಗವೊಂದರಲ್ಲಿ ಒಂದೆರಡು ಮರಗಳಿದ್ದಲ್ಲಿ ಹೇಗಾದರೂ ಮಾಡಿ ಇಳಿಯುತ್ತಿದ್ದೆವು. ಗಿಡ ಮರಗಳ ನಡುವೆಯಿಂದ ಈ ಹಂತದ ಚೆಲುವನ್ನು ಪಾರ್ಶ್ವದಿಂದ ನೋಡಿ ತೃಪ್ತಿಪಡಬೇಕಾಯಿತು. ಮಾಧವ್ ಆಚೀಚೆ ಓಡಾಡಿ ಬೇರಾವುದಾದರು ದಾರಿ ಇದೆಯೆ ಎಂದು ಸುಮಾರು ಹುಡುಕಾಡಿದರು. ಆದರೆ ನೋ ಯೂಸ್.

3ನೇ ಹಂತದ ಬುಡದಲ್ಲಿರುವ ವಿಶಾಲವಾದ ಬಂಡೆಯೊಂದರ ಮೇಲೆ ೧೫ ನಿಮಿಷ ವಿಶ್ರಾಂತಿ ಪಡೆದು, ಮೇಲಕ್ಕೆ ಬಂದೆವು. ಮೊದಲೆರಡು ಹಂತಗಳ ಬುಡದಲ್ಲಿ ಇನ್ನಷ್ಟು ಕಾಲ ವಿರಮಿಸಿದೆವು. ಪ್ರಶಾಂತವಾದ ಕಣಿವೆಯಲ್ಲಿ ನೀರಿನ ಭೋರ್ಗರೆತ ಬಿಟ್ಟು ಬೇರಾವ ಸದ್ದು ಇರಲಿಲ್ಲ. ನೀರವ ಮೌನದ ನಡುವೆ ನಮ್ಮಿಬ್ಬರ ಮಾತೇ ಕರ್ಕಶವೆನಿಸುತ್ತಿತ್ತು.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Hi Rajesh,

Good to know that you could get down that valley to actually get near the falls. I had tried this during September this year and I coudn't make it. I was so steep, slippery due to rains and there were simply too many leeches for our comfort. And after descending half distance, I lost my way.

Bharata.

ರಾಜೇಶ್ ನಾಯ್ಕ ಹೇಳಿದರು...

Hi Bharata,

I can imagine what you might have gone through. While we were making our way down, we were talking about 'how difficult it is to get down this valley in rains'. i guess, after mid november is the right time to visit this falls.