ಭಾನುವಾರ, ನವೆಂಬರ್ 26, 2006

ಕರ್ನಾಟಕದ ಮುಕುಟಕ್ಕೆ ಪ್ರವಾಸ - ೨


ಮರುದಿನ ಮುಂಜಾನೆ ಕಣ್ಣು ಬಿಟ್ಟಾಗ ರವಿ ಕಿರಣಗಳನ್ನು ಪ್ರಖರವಾಗಿ ಹೊರಸೂಸುತ್ತಿದ್ದ. ಸಮಯ ೮.೩೦ ದಾಟಿರಬೇಕು ಎಂದು ದಡಬಡಿಸಿ ಎದ್ದರೆ, ಕೈಗಡಿಯಾರ ೫.೪೫ ಸೂಚಿಸುತ್ತಿತ್ತು. ನಂಬಲಾಗಲಿಲ್ಲ, ಆದರೆ ಸಮಯ ನಿಜಕ್ಕೂ ೫.೪೫ ಆಗಿತ್ತು. ಬೀದರ್-ನಲ್ಲಿ ನೋಡಲು ಬಹಳವಿದ್ದುದರಿಂದ ಮುಂಜಾನೆ ೭ಕ್ಕೆ ವಸತಿ ಗೃಹದಿಂದ ಹೊರಟೆ. ಆಟೋ ಮಾಡಿ ಚೌಬಾರಾ ಇದ್ದಲ್ಲಿಗೆ ತೆರಳಿದೆ. ಇದೊಂದು ೭೧ ಅಡಿ ಎತ್ತರವಿರುವ ಗಡಿಯಾರ ಗೋಪುರ. ನಾಲ್ಕು ರಸ್ತೆ ಕೂಡುವಲ್ಲಿ ಚೌಬಾರಾ ಇದೆ. ಒಳಗಡೆ ಇರುವ ವೃತ್ತಾಕಾರದ ಸುಮಾರು ೮೦ ಮೆಟ್ಟಿಲುಗಳನ್ನು ಹತ್ತಿ ಚೌಬಾರಾದ ನೆತ್ತಿಗೆ ಹೋದರೆ ಬೀದರ್ ನಗರದ ವಿಹಂಗಮ ನೋಟ ಲಭ್ಯ. ಆದರೆ ಬೀದರ್ ನಗರಪಾಲಿಕೆ ಚೌಬಾರಾದ ಬಾಗಿಲಿಗೆ ಬೀಗ ಜಡಿದಿದೆ. ಹೊರಗಿನಿಂದಲೇ ಚೌಬಾರಾದ ಅಂದ ಆಸ್ವಾದಿಸಿ, ಅನತಿ ದೂರದಲ್ಲಿದ್ದ ಮಹಮೂದ್ ಗವಾನ್ ಮದರಸಾ ಕಡೆಗೆ ಹೆಜ್ಜೆ ಹಾಕಿದೆ.


ಈ ಮದ್ರಸವನ್ನು ೧೪೭೨ರಲ್ಲಿ ಮಹಮೂದ್ ಗವಾನ್ ಎಂಬವನು ಕಟ್ಟಿಸಿದನು. ಮಹಮೂದ್ ಗವಾನ್ ೧೪೫೩ರಲ್ಲಿ ಪರ್ಷಿಯಾದಿಂದ ಬಂದು ಬೀದರ್-ನಲ್ಲಿ ನೆಲೆಸಿದವನು. ಕಲೆ ಹಾಗೂ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದವನಾಗಿದ್ದನು. ಸತತ ೩ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಪ್ರಮುಖ ಹುದ್ದೆಯಲ್ಲಿದ್ದವನು. ಯಾವುದೇ ಸಮಯದಲ್ಲಿ ಇಲ್ಲಿ ೧೦೦ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ವಿದ್ಯಾಭ್ಯಾಸವನ್ನು, ಮುಸ್ಲಿಮ್ ಜಗತ್ತಿನ ಎಲ್ಲಾ ಕಡೆಯಿಂದಲೂ ಬರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ೩ ಮಹಡಿಗಳ ಈ ಕಟ್ಟಡದಲ್ಲಿ ಮಸೀದಿ, ಪ್ರಯೋಗಾಲಯ, ಗ್ರಂಥಾಲಯ, ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಇವಿಷ್ಟಿದ್ದವು. ೧೬೯೬ರಲ್ಲಿ ಮಿಂಚು ಹೊಡೆದು ಮದ್ರಸದ ಕೆಲವು ಭಾಗಗಳಿಗೆ ಅಪಾರ ಹಾನಿಯುಂಟಾಗಿದೆ. ಇದ್ದ ನಾಲ್ಕು ಸ್ತಂಭಗಳಲ್ಲಿ ಕೇವಲ ಒಂದು ಉಳಿದಿದೆ. ಇಷ್ಟೊಂದು ಇತಿಹಾಸವಿರುವ ಸ್ಮಾರಕದ ಪ್ರಾಂಗಣ ದಾಟಿದರೆ ಎಲ್ಲಾ ಕಡೆ ಹೊಲಸು. ಸುತ್ತ ವಾಸವಿರುವ ಸಾಬಿಗಳಿಗೆ ಈ ಸ್ಮಾರಕದ ಮಹತ್ವದ ಅರಿವಿಲ್ಲ ಎಂದೆನಿಸುತ್ತದೆ.


ಮಹಮೂದ್ ಗವಾನ್ ಮದರಸದಿಂದ ೧೦ ನಿಮಿಷ ನಡೆದು ಬೀದರ್ ಕೋಟೆ ತಲುಪಿದೆ. ಇದೊಂದು ಭವ್ಯವಾದ ಕೋಟೆ. ನನಗಂತೂ ಬೀದರ್ ಕೋಟೆ ಬಹಳ ಇಷ್ಟವಾಯಿತು. ಬೆಳಗ್ಗೆ ೮.೩೦ಕ್ಕೆ ಕೋಟೆ ಒಳಹೊಕ್ಕ ನಾನು, ಹೊರಬಂದಾಗ ಮಧ್ಯಾಹ್ನ ೧.೩೦ ಆಗಿತ್ತು. ಇದು ಎರಡು ಸುತ್ತಿನ ಬಲಾಢ್ಯ ಕೋಟೆ. ಪ್ರಥಮ ಸುತ್ತಿನ ಕೋಟೆಯ ಗೋಡೆಯ ಹೊರಗಡೆ ಸುತ್ತ ಕಂದಕವಿದೆ. ಮತ್ತೊಂದು ಕಂದಕ ಪ್ರಥಮ ಹಾಗೂ ದ್ವಿತೀಯ ಸುತ್ತಿನ ಕೋಟೆಯ ಗೋಡೆಗಳನ್ನು ಬೇರ್ಪಡಿಸುತ್ತದೆ. ಆರಂಭದಲ್ಲಿ ಸಿಗುವುದೇ ಪ್ರಧಾನ ಬಾಗಿಲು. ಇದನ್ನು ದಾಟಿದರೆ ನಂತರ ಸಿಗುವುದು 'ಶಾರ್ಝಾ ದರ್ವಾಝಾ'. ಪ್ರಧಾನ ಬಾಗಿಲು ಹಾಗೂ ಶಾರ್ಝಾ ದರ್ವಾಝಾ, ಈ ಎರಡೂ ಬಾಗಿಲುಗಳ ಮಧ್ಯೆ ಒಂದಕ್ಕೊಂದು ತಾಗಿಕೊಂಡೇ ಹಲವಾರು ಕೋಣೆಗಳಿವೆ. ಬಹುಶಃ ಹೆಬ್ಬಾಗಿಲುಗಳನ್ನು ಕಾಯುವ ಕಾವಲುಗಾರರ ವಸತಿ ಯಾ ವಿಶ್ರಾಂತಿ ಕೊಠಡಿಗಳಾಗಿದ್ದಿರಬಹುದು.


ಎರಡಂತಸ್ತಿನ ಶಾರ್ಝಾ ದರ್ವಾಝಾ ಆಕರ್ಷಕವಾಗಿದ್ದು, ಆ ಕಾಲಕ್ಕೆ ಬಳಿದ ಬಣ್ಣದ ಅಲ್ಪ ಸ್ವಲ್ಪ ಕುರುಹು ಈಗಲೂ ಕಾಣುತ್ತಿದೆ. ಶಾರ್ಝಾ ದರ್ವಾಝಾದ ಮೇಲ್ಗಡೆ ಎಡ ಮತ್ತು ಬಲಭಾಗಗಳಲ್ಲಿ ಒಂದೊಂದು ಕೋಣೆಗಳಿದ್ದು, ಅವುಗಳೆರಡರ ಮಧ್ಯೆ ಸುಮಾರು ೩೫ ಅಡಿ ಉದ್ದ ೧೦ ಅಡಿ ಅಗಲದ ಕೋಣೆಯೊಂದಿದೆ. ಆದರೆ ಈ ೩ ಕೋಣೆಗಳಿಗೆ ಒಂದಕ್ಕೊಂದು ನೇರ ಸಂಪರ್ಕ ಇಲ್ಲ! ಶಾರ್ಝಾ ದರ್ವಾಝಾದ ಮುಂಭಾಗದಲ್ಲಿ ಎಡಕ್ಕೆ ಇರುವ ಮೆಟ್ಟಿಲುಗಳನ್ನು ಹತ್ತಿ ಕಾವಲುಗಾರರ ಕೊಠಡಿಗಳ ತಾರಸಿಗೆ ಬಂದು, ಎಡಕ್ಕಿರುವ ಕೋಣೆಗೆ ಬರಬಹುದು. ಹಾಗೆ ಕಾವಲುಗಾರರ ಕೊಠಡಿಯ ತಾರಸಿಯ ಮೇಲೆ ಮುನ್ನಡೆದು, ಪ್ರಧಾನ ಬಾಗಿಲಿನ ಮೇಲ್ಭಾಗಕ್ಕೆ ಬಂದು ಹಾಗೆ ಅಲ್ಲಲ್ಲಿರುವ ವಿಸ್ಮಯವೆನ್ನಿಸುವ ಹತ್ತಾರು ಮೆಟ್ಟಿಲುಗಳನ್ನು ಹತ್ತಿ ಇಳಿದು ಅರ್ಧಚಂದ್ರಾಕೃತಿ ರೂಪದಲ್ಲಿ ಮುನ್ನಡೆದರೆ ಶಾರ್ಝಾ ದರ್ವಾಝಾದ ಬಲಭಾಗದ ಕೋಣೆಗೆ ಬರಬಹುದು. ಈ ಕೋಣೆಗೆ ತಾಗಿಕೊಂಡೇ ಇರುವ ಮೆಟ್ಟಿಲುಗಳನ್ನು ಇಳಿದಾಗ, ನಾನು ಶಾರ್ಝಾ ದರ್ವಾಝಾವನ್ನು ದಾಟಿ ಒಳಬಂದಾಗಿತ್ತು! ಅಲ್ಲೇ ನಿಂತು ಮಧ್ಯದಲ್ಲಿರುವ ಕೋಣೆಗೆ ದಾರಿ ಎಲ್ಲಿ ಎಂದು ಆಚೀಚೆ ನೋಡುತ್ತಿರುವಂತೆ ಬಲಕ್ಕೆ ಮೆಟ್ಟಿಲುಗಳು ಕಾಣಿಸಿ, ಹತ್ತಿದರೆ, ನೇರವಾಗಿ ಆ ಮಧ್ಯದ ಕೋಣೆಗೆ ಒಯ್ದವು. ಹೊರಗೆ ಬಿಸಿಲು ಧಗಧಗಿಸುತ್ತಿದ್ದರೂ, ಇಲ್ಲಿ ಬಹಳ ತಂಪಾಗಿತ್ತು. ಇಲ್ಲಿರುವ ಸಣ್ಣ ಕಿಂಡಿಯ ಮೂಲಕ ನಂತರ ಇರುವ ಗುಂಬಝ್ ದರ್ವಾಝ ಕಾಣಿಸುತ್ತದೆ. ಈ ಕೋಣೆಯ ಹತ್ತಿರವೇ ಇರುವ ಚಾಣಾಕ್ಷತನದಿಂದ ಕೆತ್ತಿದ ಮೆಟ್ಟಿಲುಗಳು, ಶಾರ್ಝಾ ದರ್ವಾಝದ ಮೇಲಿನ ಗುಮ್ಮಟದ ಬಳಿ ಕರೆದೊಯ್ದವು.


ನಂತರ ಬರುವುದು ಗುಂಬಝ್ ದರ್ವಾಝ. ಶಾರ್ಝಾ ದರ್ವಾಝ ಮತ್ತು ಗುಂಬಝ್ ದರ್ವಾಝಗಳ ಮಧ್ಯೆ ಇರುವುದೇ ಪ್ರಥಮ ಹಾಗೂ ದ್ವಿತೀಯ ಸುತ್ತಿನ ನಡುವೆ ಇರುವ ಕಂದಕ. ಗುಂಬಝ್ ದರ್ವಾಝದ ಸ್ವಲ್ಪ ಮೊದಲು ಎಡಕ್ಕೆ ಕೆಳಗಿಳಿದು ಹೋದರೆ ಪ್ರಥಮ ಸುತ್ತಿನ ಕೋಟೆಯ ಗೋಡೆಯ ಒಳಭಾಗದಲ್ಲಿರುವ ಹಲವಾರು ಕೋಣೆಗಳನ್ನು ಕಾಣಬಹುದು. ಅಲ್ಲಲ್ಲಿ ಸಣ್ಣ ಸಣ್ಣ ಕಿಂಡಿಗಳು ಹೊರಗಿರುವ ಕಂದಕದ ದರ್ಶನವನ್ನು ಮಾಡಿಸುತ್ತಿದ್ದವು.

ಗುಂಬಝ್ ದರ್ವಾಝ ದಾಟಿದ ಕೂಡಲೇ ಎಡಕ್ಕಿರುವುದು ರಂಗೀನ್ ಮಹಲ್. ಇದಕ್ಕೆ ಯಾವಾಗಲೂ ಬೀಗ ಹಾಕಿರುತ್ತದೆ. ಸ್ವಲ್ಪ ಮುಂದಿರುವ ಕಛೇರಿಯಲ್ಲಿ ವಿನಂತಿಸಿದರೆ, ಬೀಗ ತೆಗೆದು ರಂಗೀನ್ ಮಹಲ್ ಒಳಗಡೆ ಕರೆದೊಯ್ಯುತ್ತಾರೆ. ಆದರೆ ನನಗೆ ಆ ಭಾಗ್ಯವಿರಲಿಲ್ಲ. ವಿನಂತಿಸಿದರೂ, ಆ ದಿನ ಪಾಳಿಯಲ್ಲಿದ್ದ ಸಿಬ್ಬಂದಿ ಎಲ್ಲೊ ತೆರಳಿದ್ದರಿಂದ ಬೇರೆಯವರಿಗೆ ಬೀಗ ತೆರೆಯುವ ಅಧಿಕಾರವಿಲ್ಲದ್ದರಿಂದ ಯಾರೇನು ಮಾಡುವಂತಿರಲಿಲ್ಲ. ನನಗಿದು ಅಲ್ಲಿದ್ದ ಸೋಮಾರಿ ಸಿಬ್ಬಂದಿಗಳ ಕ್ಷುಲ್ಲಕ ಸಬೂಬು ಎಂದೆನಿಸಿತು.


ಹಾಗೆ ಸ್ವಲ್ಪ ಮುಂದೆ ಇರುವ ಪ್ರಾಂಗಣವನ್ನು ಹೊಕ್ಕಾಗ ಸುಂದರವಾದ ಹದಿನಾರು ಕಂಬಗಳ ಮಸೀದಿ ಯಾರನ್ನೂ ಆಕರ್ಷಿಸದೆ ಇರುವುದಿಲ್ಲ. 'ಸೋಲಾಹ್ ಖಂಬ ಮಸ್ಜಿದ್' ಎಂದು ಕರೆಯಲ್ಪಡುವ ಈ ಮಸೀದಿಯನ್ನು ೧೪೫೩ರಲ್ಲಿ ಕುಬ್ಲಿ ಸುಲ್ತಾನ್ ಎಂಬವನು ಕಟ್ಟಿಸಿದ್ದ. ಮುಘಲ್ ದೊರೆ ಔರಂಗಜೇಬ್, ಇಲ್ಲಿ ಪ್ರಾರ್ಥನೆ ಸಲ್ಲಿಸಿದ್ದ ಎಂಬ ದಾಖಲೆಗಳಿವೆ.


ಈ ಮಸೀದಿಗೆ ತಾಗಿಯೇ ಇರುವುದು ತರ್ಕಶ್ ಮಹಲ್. ಬಹಮನಿ ಸುಲ್ತಾನರು ಮತ್ತು ಅವರ ನಂತರ ಬೀದರ್ ಆಳಿದ ಬಾರಿದ್ ಶಾಹಿ ವಂಶದ ಸುಲ್ತಾನರು ಬೇರೆ ಬೇರೆ ದೇಶಗಳ ಸುಂದರ ಹೆಂಗಸರನ್ನು ತಮ್ಮ ವೇಶ್ಯಾಗೃಹದಲ್ಲಿ ಇಟ್ಟುಕೊಳ್ಳುತ್ತಿದ್ದರು. ತರ್ಕಶ್ ಮಹಲ್-ನ ಮೇಲ್ಮಹಡಿಗಳನ್ನು ಈ ಹೆಂಗಸರ ವಾಸ್ತವ್ಯಕ್ಕಾಗಿ ಬಳಸಲಾಗುತ್ತಿತ್ತು. ತರ್ಕಶ್ ಮಹಲ್-ನ, ಸೋಲಾಹ್ ಖಂಬ ಮಸ್ಜಿದ್-ಗೆ ತಾಗಿ ಇರುವ ಭಾಗವನ್ನು ಗಮನಿಸಿದರೆ, ಯಾವುದೇ ಕಿಟಕಿಗಳಿಲ್ಲದಿರುವುದನ್ನು ಕಾಣಬಹುದು ಮತ್ತು ಅದು ತರ್ಕಶ್ ಮಹಲ್-ನ ಹಿಂಭಾಗವಾಗಿರುವ ಸಾಧ್ಯತೆ ಹೆಚ್ಚು. ನೆಲ ಅಂತಸ್ತನ್ನು ಕಾವಲುಗಾರರ ಕೊಠದಿ ಹಾಗೂ ಆಹಾರ ವಸ್ತುಗಳ ಶೇಖರಣೆ ಪ್ರಯುಕ್ತ ಬಳಸಲಾಗುತ್ತಿತ್ತು. ಮೇಲಿನೆರಡು ಅಂತಸ್ತುಗಳ ಹಿಂಭಾಗ ಸೋಲಾಹ್ ಖಂಬ ಮಸ್ಜಿದ್ ಕಡೆಗೆ ಇದ್ದರೆ (ವೇಶ್ಯಾಗೃಹದಲ್ಲಿ ಏನು ನಡೆಯುತ್ತಿದೆ, ಯಾರ್‍ಯಾರಿದ್ದಾರೆ ಎಂಬುದು, ಮಸೀದಿಗೆ ಬರುವವರಿಗೆ ಕಾಣಿಸದಿರಲಿ ಎಂದಿರಬಹುದು), ನೆಲ ಅಂತಸ್ತಿನ ಮುಂಭಾಗ ಸೋಲಾಹ್ ಖಂಬ ಮಸ್ಜಿದ್ ಕಡೆಗಿದೆ.

ತರ್ಕಶ್ ಮಹಲ್ ಒಳಗಡೆ ಸ್ವಲ್ಪ ಹೊತ್ತು ಅಲೆದಾಡಿದರೆ ಸುಲ್ತಾನರ ಕಾಮಕೇಳಿಯ ಕಲ್ಪನಾ ಚಿತ್ರಗಳು ಮನಸ್ಸಿನಲ್ಲಿ ಮೂಡದೇ ಇರುವುದಿಲ್ಲ. ಒಂದನೇ ಮಹಡಿಯ ಪಡಸಾಲೆಯಲ್ಲಿ ನಡೆಯುತ್ತಿರುವಾಗ, ಸಾಲಾಗಿ ಬರುವ ಕೋಣೆಗಳಲ್ಲಿ ನನಗಾಗಿ ಸುಂದರಿಯರು ಮುಗುಳ್ನಗುತ್ತಾ ಕಾಯುತ್ತಿರಬಾರದೇಕೆ? ಎಂದು ಕನಸು ಕಾಣುತ್ತಾ ಒಂದೊಂದೇ ಕೋಣೆಗಳನ್ನು ನೋಡುತ್ತಾ ಮುಂದುವರಿದೆ. ಎರಡನೇ ಮಹಡಿಗೆ ಹೋಗಲು ಮೆಟ್ಟಿಲುಗಳು ಬಹಳ ಹೊತ್ತು ಹುಡುಕಾಡಿದರೂ ಸಿಗಲಿಲ್ಲ. ಐದಾರು ನಿಮಿಷ ಹುಡುಕಿದ ಬಳಿಕ ಒಂದು ಸಂದಿಯುಲ್ಲಿ ಮತ್ತದೇ ಚಾಣಾಕ್ಷತನದಿಂದ ನಿರ್ಮಿಸಿದ ಮೆಟ್ಟಿಲುಗಳು ಕಾಣಿಸಿದವು. ಅತ್ಯಂತ ಕಡಿಮೆ ಸ್ಥಳ ಬಳಸಿ ಮೆಟ್ಟಿಲುಗಳ ರಚನೆ. ಎರಡನೇ ಮಹಡಿಯಿಂದ ಸೋಲಾಹ್ ಖಂಬ ಮಸ್ಜಿದ್ ಮುಂದಿರುವ ಉದ್ಯಾನವನ ಸುಂದರವಾಗಿ ಕಾಣುತ್ತದೆ.


ಉದ್ಯಾನವನದ ಒಂದು ತುದಿಯಲ್ಲಿ ತರ್ಕಶ್ ಮಹಲ್ ಇದ್ದರೆ ಮತ್ತೊಂದು ತುದಿಯಲ್ಲಿ 'ಶಾಹಿ ಹಮಾಮ್' ಇದೆ. ಶಾಹಿ ಹಮಾಮ್ ಸುಲ್ತಾನರ ಕಾಲದ ಸ್ನಾನಗೃಹ. ಆಗಿನ ಸ್ನಾನಗೃಹವನ್ನು ಈಗ ಎ.ಎಸ್.ಐ ನ ಸಣ್ಣ ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಾಡಿಸಲಾಗಿದೆ.


ತರ್ಕಶ್ ಮಹಲ್-ನ ಸ್ವಲ್ಪ ಮುಂದೆ ಇರುವುದು ಗಗನ್ ಮಹಲ್. ಇದು ಕೂಡಾ ಸುಂದರವಾಗಿದೆ. ಯಾತಕ್ಕಾಗಿ ಉಪಯೋಗಿಸುತ್ತಿದ್ದರು ಎಂಬುದು ಗೊತ್ತಾಗಲಿಲ್ಲ. ಮನೋರಂಜನಾ ಕಾರ್ಯಕ್ರಮಗಳಿಗಾಗಿ ಸುಲ್ತಾನರು ಬಳಸುತ್ತಿದ್ದರೇನೋ ಎಂದು ಗಗನ್ ಮಹಲ್ ರಚನೆ ನೋಡಿದರೆ ಊಹೆ ಮಾಡಬಹುದು. ಇಲ್ಲಂತೂ ಮೆಟ್ಟಿಲುಗಳು ನನಗೆ ಪೂರಾ ಗಲಿಬಿಲಿಯನ್ನುಂಟುಮಾಡಿದವು. 'ರುಕ್ಕು ರುಕ್ಕು ರುಕ್ಕಮ್ಮ, ಲುಕ್ಕು ಲುಕ್ಕು ಲುಕ್ಕಮ್ಮ, ಸಿಟ್ಟ್ಯಾಕೆ ನನ್ನ ಮ್ಯಾಲೆ...' ಎಂದು ಗುನುಗುತ್ತಾ, ಮೊದಲ ಮಹಡಿಯಲ್ಲಿ ಸ್ವಲ್ಪ ಆಚೀಚೆ ಓಡಾಡಿದ ಬಳಿಕ, ಎರಡನೇ ಮಹಡಿ ತಲುಪಿದೆ. ಯಾವ ದಿಕ್ಕಿನಿಂದ ಮೆಟ್ಟಿಲುಗಳನ್ನು ಏರಿದೆ ಎಂಬುದು 'ರುಕ್ಕಮ್ಮ'ನ ಹಾಡಿನ ಗುಂಗಿನಲ್ಲಿ ಮರೆತೇಹೋಯಿತು. ಕೆಳಗಿಳಿಯುವಾಗ ಸ್ವಲ್ಪ ಗಲಿಬಿಲಿಯಾದರೂ, ದಾರಿ ಕಂಡುಕೊಂಡು ಕೆಳಗಿಳಿದುಬಂದೆ.


ತರ್ಕಶ್ ಮಹಲ್ ಮತ್ತು ಗಗನ್ ಮಹಲ್ ಎದುರು ಬದುರು ಇದ್ದು, ಮಧ್ಯದಲ್ಲಿ ಟೆನ್ನಿಸ್ ಅಂಕಣದಷ್ಟು ಚೌಕಾಕಾರದ ಜಾಗ ಇದೆ. ಈ ತೆರೆದ ಜಾಗದ ಮಧ್ಯ ನಿಂತರೆ ಒಂದು ಕಡೆ ತರ್ಕಶ್ ಮಹಲ್-ನಿಂದ ಸುಂದರಿಯರು, ಮತ್ತೊಂದು ಕಡೆ ಗಗನ್ ಮಹಲ್-ನಿಂದ ನರ್ತಕಿಯರು ದಿಟ್ಟಿಸುತ್ತಾ ಇರುವಂತೆ ಹುಚ್ಚು ಕಲ್ಪನೆ. ಆಗ ಅಲ್ಲೇ ಗೋಡೆ ಮೇಲೆ ಬೆಳೆದಿದ್ದ ಹುಲ್ಲುಗಳನ್ನು ತೆಗೆದು ಸ್ವಚ್ಛ ಮಾಡುತ್ತಿದ್ದ ಎ.ಎಸ್.ಐ ಉದ್ಯೋಗಿ ದೇವೇಂದ್ರಪ್ಪ ದಂಡಿನ, 'ಯಾಕ್ರೀ ಸರ, ಅಲ್ ನಿಂತು ಎನ್ ಯೋಚ್ನೆ ಮಾಡಾಖತ್ತೀರಿ?' ಎಂದು ಬೆಚ್ಚಿಬೀಳಿಸಿದರು. ಬಾದಾಮಿಯ ದೇವೇಂದ್ರಪ್ಪ, ಅಲ್ಲೇ ಗುಹಾ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಿಪರೀತ ಕುಡಿತದ ಚಟ ಇದ್ದಿದ್ದರಿಂದ ಮೇಲಧಿಕಾರಿಗಳು, 'ಮಗನ, ಸಿಗೊ ಪಗಾರ್-ನಾಗ ಈಗ್ ಹೆಂಗ್ ಕುಡಿತಿ? ನೋಡೇಬಿಡೋಣ' ಎಂದು ದೂರದ ಬೀದರ್-ಗೆ ಶಿಕ್ಷೆ ವರ್ಗಾವಣೆ ಮಾಡಿಬಿಟ್ಟರು. ತನ್ನ ತಪ್ಪನ್ನರಿತು ಕುಡಿತ ಬಿಟ್ಟಿರುವ ದೇವೇಂದ್ರಪ್ಪ ಈಗ ಮರಳಿ ಬಾದಾಮಿಗೆ ವರ್ಗಾ ಆಗುವ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಶುಭವನ್ನು ಕೋರಿ ನಾನು ಮನ್ನಡೆದದ್ದು 'ದೀವಾನ್-ಏ-ಆಮ್' ಕಡೆಗೆ.


'ದೀವಾನ್-ಏ-ಆಮ್', ಸುಲ್ತಾನರ ಸಭೆ, ದರ್ಬಾರ್ ಇತ್ಯಾದಿಗಳು ನಡೆಯುತ್ತಿದ್ದ ಸ್ಥಳ. ಹರಳುಗಳಿಂದ ಅಲಂಕರಿಸಲ್ಪಟ್ಟ ಸಿಂಹಾಸನ ಇಲ್ಲೇ ಇದ್ದು, ಸುಲ್ತಾನರು ಅದರ ಮೇಲೆ ಆಸೀನರಾಗುತ್ತಿದ್ದರು. ಹೊಸ ಸುಲ್ತಾನರ ಪಟ್ಟಾಭಿಷೇಕವೂ ಇಲ್ಲೇ ನಡೆಯುತ್ತಿತ್ತು. ಬೀದರ್ ಆಳಿದ ಬಹಮನಿ ಹಾಗೂ ಬಾರಿದ್ ಶಾಹಿ ವಂಶದ ಪ್ರತಿಯೊಬ್ಬ ಸುಲ್ತಾನರ ಪಟ್ಟಾಭಿಷೇಕವು ಇದೇ 'ದೀವಾನ್-ಏ-ಆಮ್'ನಲ್ಲಿ ನಡೆದಿತ್ತು. ಪಾಳುಬಿದ್ದು ಹೋಗಿದ್ದರೂ, ಆಸ್ಥಾನಕ್ಕಿರುವಂತಹ ಗಾಂಭೀರ್‍ಯ ಆಳಿದಿಲ್ಲ. ಆಸ್ಥಾನದ ನೆಲದಲ್ಲಿ ೩ ಸಾಲುಗಳಲ್ಲಿ ಗ್ರಾನೈಟ್ ಬುಡಗಳಿವೆ. ಇವುಗಳ ಮೇಲೆ ಅಲಂಕಾರಿಕ ಮರದ ಕಂಬಗಳಿದ್ದವು, ಈಗ ಗ್ರಾನೈಟ್ ಬುಡ ಮಾತ್ರ ಉಳಿದಿದೆ.


ಸ್ವಲ್ಪ ಮುಂದೆ ಇರುವುದು ಅರಮನೆ ಮತ್ತು ತಖ್ತ್ ಮಹಲ್. ಇವೆರಡು ಒಂದೇ ಪ್ರಾಂಗಣದಲ್ಲಿವೆ. ದೀವಾನ್-ಏ-ಆಮ್ ದಾಟಿ ಬಲಕ್ಕೆ ಹೊರಳಿದರೆ, ಅರಮನೆ ಹಾಗೂ ತಖ್ತ್ ಮಹಲ್ ಇರುವ ಪ್ರಾಂಗಣದ ಕಾವಲು ಬಾಗಿಲಿಗೆ ಬರಬಹುದು. ಬಲಕ್ಕೆ ಹೊರಳದೇ ನೇರ ಬಂದರೆ, ಅರಮನೆಗೆ ತಾಗಿ ಇರುವ ಸಣ್ಣ ಕಳ್ಳ ದಾರಿಯಲ್ಲಿ ೮-೧೦ ಮೆಟ್ಟಿಲುಗಳನ್ನು ಹತ್ತಿ, ಅರಮನೆಯ ಆವರಣಕ್ಕೆ ಬರಬಹುದು. ಇಲ್ಲೂ ಮುಂಭಾಗದ ಕೋಣೆಗಳಲ್ಲಿ ಕೆಲವು ಗ್ರಾನೈಟ್ ಬುಡಗಳು ಉಳಿದಿವೆ. ಅರಮನೆಯ ಮಧ್ಯದಲ್ಲಿ ಬಿಸಿ ನೀರಿನ ಈಜುಕೊಳವೊಂದಿದ್ದು, ಕೇವಲ ಸುಲ್ತಾನ ಮತ್ತು ಆತನ ಪತ್ನಿಯರಿಗಾಗಿ ಮೀಸಲಾಗಿತ್ತು. ಇಬ್ಬರು ಮಾತ್ರ ಹಾಯಾಗಿ ಜಲಕ್ರೀಡೆ ಆಡುವಷ್ಟು ದೊಡ್ಡದಿದೆ ಈ ಬಿಸಿ ನೀರಿನ ಈಜುಕೊಳ. ಅರಮನೆ ಭವ್ಯವಾಗಿದ್ದು, ಅಳಿದುಳಿದ ಕೋಣೆಗಳಲ್ಲಿ ನಡೆದಾಡಿದರೆ, ೫೦೦ ವರ್ಷಗಳಷ್ಟು ಹಿಂದಿನ ಲೋಕಕ್ಕೆ ಮನಸ್ಸು ತೆರಳುತ್ತದೆ.


ಅರಮನೆಗೆ ತಾಗಿಕೊಂಡು ಇರುವುದೇ ತಖ್ತ್ ಮಹಲ್. ಇದು ಸುಲ್ತಾನರು ಖಾಸಗಿಯಾಗಿ ತಮ್ಮ ಆಪ್ತರಿಗೆ, ಮಿತ್ರರಿಗೆ ಭೇಟಿ ನೀಡುತ್ತಿದ್ದ ಸ್ಥಳ. ಇನ್ನೂ ಸ್ವಲ್ಪ ಮುಂದೆ ತೆರಳಿದರೆ ಇರುವುದು ಹಝಾರ್ ಕೋಠ್ರಿ ಮತ್ತು ನೌಬತ್ ಖಾನ. ಹಝಾರ್ ಕೋಠ್ರಿಯಲ್ಲಿ ಹಝಾರ್ ಕೋಣೆಗಳಿರಲಿಲ್ಲ, ಬರೀ ಐದಾರಿದ್ದವು. ಅಲ್ಲೇ ಮುಂದಿರುವುದು ತುಪಾಕಿ ಬುರುಜು. ಕೋಟೆಯ ಗೋಡೆಯ ಸಮೀಪವಿರುವುದು ಚಿನ್ನಿ ಮಹಲ್.

ಮುಂದುವರಿಯುವುದು... ೩ನೇ ಭಾಗದಲ್ಲಿ.

ಒಂದನೇ ಭಾಗ ಇಲ್ಲಿದೆ.

ಶುಕ್ರವಾರ, ನವೆಂಬರ್ 17, 2006

ಕರ್ನಾಟಕದ ಮುಕುಟಕ್ಕೆ ಪ್ರವಾಸ - ೧


ಕಳೆದ ಮೇ ತಿಂಗಳಂದು ಮಂಗಳೂರಿನ ಗೆಳೆಯರಿಬ್ಬರು, ಮೂರ್ನಾಲ್ಕು ದಿನ ಎಲ್ಲಾದರೂ ಸುತ್ತಾಡಿಕೊಂಡು ಬರೋಣ ಎಂದಾಗ ಗುಲ್ಬರ್ಗ, ಬೀದರ್ ಹಾಗೂ ಬಸವಕಲ್ಯಾಣ ಸುತ್ತಾಡಿಕೊಂಡು ಬರೋಣವೆಂದು ನಿರ್ಧರಿಸಿದೆವು. ನನ್ನ ಬಳಿಯಿದ್ದ ಲೇಖನಗಳೆಲ್ಲವನ್ನೂ ಹಲವಾರು ಸಲ ಓದಿ, ಅಂತರ್ಜಾಲವನ್ನು ಜಾಲಾಡಿ, ನೋಡಬೇಕಾದ ಎಲ್ಲಾ ಸ್ಥಳಗಳ ಪಟ್ಟಿಯೊಂದನ್ನು ಅಂತಿಮಗೊಳಿಸಿದೆ. ಆದರೆ ಹೊರದುವ ಮುನ್ನಾ ದಿನ ರಾತ್ರಿ ಗೆಳೆಯರಿಬ್ಬರೂ ಕ್ಷುಲ್ಲಕ ಸಬೂಬುಗಳನ್ನು ಹೇಳಿ ಹಿಂದೆ ಸರಿದರು. ಒಬ್ಬರಿಗೆ ಮನೆಯಲ್ಲಿನ ಕೋಳಿ (!) ಪದಾರ್ಥ ಬಿಟ್ಟು ಬರಲಾಗದಿದ್ದರೆ ಮತ್ತೊಬ್ಬರಿಗೆ ತಾನು ರಜೆ ಹಾಕಿದರೆ ತನ್ನ ಸಂಸ್ಥೆಗೆ (ಸಾವಿರಾರು ನೌಕರರಿರುವ ಎಂ ಆರ್ ಪಿ ಎಲ್) ನಷ್ಟ ಉಂಟಾಗಬಹುದು ಎಂಬ ಚಿಂತೆ! ಬಹಳ ದಿನಗಳ ಆಸೆ ಈಡೇರುವಂತಿರುವಾಗ, ನಾನು ಒಬ್ಬನೇ ಹೋಗುವ ನಿರ್ಧಾರ ಮಾಡಿದೆ.

ಜೂನ್ ೨ರಂದು ಅಪರಾಹ್ನ ೧.೩೦ಕ್ಕೆ ಉಡುಪಿಯಿಂದ ಹೊರಟ ಕರ್ನಾಟಕ ಸಾರಿಗೆ ಬಸ್ಸು ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ, ಕುಮಟ, ಸಿರ್ಸಿ, ಮುಂಡಗೋಡ, ಹುಬ್ಬಳ್ಳಿ, ಧಾರವಾಡ, ಲೋಕಾಪುರ, ಸೌಂದತ್ತಿ, ರಾಮದುರ್ಗ, ಮುಧೋಳ, ಜಮಖಂಡಿ, ಬಿಜಾಪುರ, ದೇವರ ಹಿಪ್ಪರಗಿ, ಸಿಂದಗಿ, ಅಲಮೇಲ ಮತ್ತು ಅಫಜಲಪುರ ಇವಿಷ್ಟು ಊರುಗಳ ದರ್ಶನ ಮಾಡಿಸಿ ಶನಿವಾರ ಜೂನ್ ೩ರ ಮುಂಜಾನೆ ೯ ಗಂಟೆಗೆ ಗುಲ್ಬರ್ಗ ತಲುಪಿತು. ವಸತಿ ಗೃಹವೊಂದಕ್ಕೆ ನುಗ್ಗಿ, ೧೦ ಗಂಟೆಗೆ ಅಲ್ಲಿಂದ ಹೊರಬಿದ್ದೆ. ರಿಕ್ಷಾವೊಂದರಲ್ಲಿ ಕುಳಿತು ಗುಲ್ಬರ್ಗ ಕೋಟೆಗೆ ಹೋಗುವಂತೆ ಹೇಳಿದರೆ, ಆತ ಗುಲ್ಬರ್ಗ ಕೋರ್ಟಿಗೆ ಹೋಗುವುದೇ? ಆ ಸಂದರ್ಭದಲ್ಲಿ ನನ್ನ ಹಾಗೂ ರಿಕ್ಷಾ ಚಾಲಕನ ಸಂಭಾಷಣೆ ಈ ಕೆಳಗಿನಂತಿತ್ತು.

ನಾನು: ಇಲ್ಲಿಗ್ ಯಾಕ್ ತಗೊಂಡ್ ಬಂದ್ಯಪ್ಪಾ?
ಆತ: ನೀವೇ ಹೇಳಿದ್ರಲ್ಲಿ ಸರ, ಕೋರ್ಟಿಗ್ ಹೋಗ್ಬೆಕ್ ಅಂತಾ
ನಾನು: ಅಲ್ಲಪ್ಪಾ ತಮ್ಮಾ, ನಾನ್ ಅಂದಿದ್ದು ಕೋಟೆ, ಕೋರ್ಟ್ ಅಂತ ಅಂದಿಲ್ ನಾನು
ಆತ: ಏ ಇಲ್ಲ್ ಬಿಡ್ರಿ. ನೀವಂದಂಗೆ ನೀವ್ ಹೇಳಿದ್ ಜಾಗಕೇ ತಂದೀನಿ
ನಾನು: ನಿನ್ಗೆ ಕೋಟೆ ಅಂದ್ರೆ ಗೊತ್ತಿಲ್ಲ ಅನ್ಸುತ್ತೆ. ರಾಜ ಮಹಾರಾಜ್ರು ಮತ್ತೆ ಸುಲ್ತಾನ್ರು ಕಟ್ಟ್ಸಿದ್ದು ಉದ್ದ್ಕೆ ಗ್ವಾಡಿ ಹಂಗ್ ಇರುತ್ತಲ್ಲಾ, ಅದ್ಕೆ ಕೋಟೆ ಅಂತಾರ.
ಆತ: ಅದ್ಕೆ ಕೋಟೆ ಅಂತಾರೆ ಅಂತ ನಿಮ್ಗ್ ಯಾರ್ ಹೇಳಿದ್ರೀ ಸರ?
ನಾನು: ಮತ್ತೇನಂತಾರ?
ಆತ: ಅದ್ಕೆ 'ಕಿಲಾ' ಅಂತಾರ್ರೀ ಸರ, 'ಕಿಲಾ'.
ನಾನು: (ನನ್ನಷ್ಟಕ್ಕೆ ನಕ್ಕು) ಓ ಹಂಗೇನ? ಸರೀಪ್ಪಾ, ನಡೀ ಮತ್ತ, ಕಿಲಾಗ್ ಹೋಗೋಣು.

ಗುಲ್ಬರ್ಗ ಕೋಟೆಯನ್ನು ವಾರಂಗಲ್-ನ ರಾಜಾ ಗುಲ್-ಚಂದ್ ಕಟ್ಟಿಸಿದ್ದ. ದೆಹಲಿಯ ಸುಲ್ತಾನ ಮೊಹಮ್ಮದ್ ಬಿನ್ ತುಘಲಕ್ ದಂಡೆತ್ತಿ ಬಂದು ಗುಲ್ಬರ್ಗವನ್ನು ವಶಪಡಿಸಿ, ಅದರ ಮೇಲ್ವಿಚಾರಣೆಯನ್ನು ತನ್ನ ಸೇನಾಧಿಪತಿಯಾದ ಅಲ್ಲಾವುದ್ದೀನ್ ಬಹ್ಮನ್ ಶಾ, ಇವನಿಗೆ ಒಪ್ಪಿಸಿದನು. ಅತ್ತ ದೆಹಲಿಯಲ್ಲಿ ತುಘಲಕ್ ದುರ್ಬಲನಾಗುತ್ತಿದ್ದಂತೆ, ಇತ್ತ ಅಲ್ಲಾವುದ್ದೀನ್ ಬಹ್ಮನ್ ಶಾ, ಗುಲ್ಬರ್ಗವನ್ನು ತುಘಲಕ್ ಸಾಮ್ರಾಜ್ಯದಿಂದ ಬೇರ್ಪಡಿಸಿ ತನ್ನನ್ನು ತಾನೇ ಅಧಿಪತಿಯೆಂದು ಘೋಷಿಸಿ ಬಹಮನಿ ಸಾಮ್ರಾಜ್ಯವನ್ನು ೧೩೪೭ರಲ್ಲಿ ಸ್ಠಾಪಿಸಿ, ಕೋಟೆಯನ್ನು ೨೬ ಬುರುಜು ಹಾಗೂ ೧೫ ತುಪಾಕಿಗಳೊಂದಿಗೆ ಮತ್ತಷ್ಟು ಬಲಿಷ್ಠಗೊಳಿಸಿದನು. ಗುಲ್ಬರ್ಗ ಕೋಟೆಯನ್ನು ಪ್ರವೇಶಿಸಿದಂತೆ ಮೊದಲಿಗೆ ಕಾಣುವುದು ರಂಗ ಮಹಲ್. ಸುಮಾರು ಎಂಬತ್ತು ಅಡಿಯಷ್ಟು ಎತ್ತರವಿರುವ ಈ ಚೌಕಾಕಾರದ ಕಟ್ಟಡದ ಮೇಲೆ ಮೂರು ತುಪಾಕಿಗಳು ಮೂರು ದಿಕ್ಕಿಗೆ ಮುಖ ಮಾಡಿಕೊಂಡು ನಿಂತಿವೆ. ರಂಗ ಮಹಲ್ ಎಂಬ ಹೆಸರು ಯಾಕೆ ಇಟ್ಟರು ಎನ್ನುವುದು ತಿಳಿಯಲಿಲ್ಲ.


ರಂಗ ಮಹಲಿನಿಂದ ಅನತಿ ದೂರದಲ್ಲಿರುವುದೇ ಭವ್ಯವಾದ ಜಾಮಿಯ ಮಸೀದಿ. ಎರಡನೇ ಬಹಮನಿ ಸುಲ್ತಾನ ಒಂದನೇ ಮಹಮೂದ್ ಶಾ (೧೩೫೮ - ೧೩೭೫), ಈ ವಿಶಾಲವಾದ ೩೮೦೧೬ ಚ ಅ ವಿಸ್ತೀರ್ಣವಿರುವ ಜಾಮಿಯ ಮಸೀದಿಯನ್ನು ೧೩೬೭ರಲ್ಲಿ ಕಟ್ಟಿಸಿದನು. ಈ ಮಸೀದಿ ೨೧೬ ಅಡಿ ಉದ್ದ, ೧೭೬ ಅಡಿ ಅಗಲವಿದ್ದು ಸರಿಸುಮಾರು ೮೦ ಗುಮ್ಮಟಗಳನ್ನು ಹೊಂದಿದೆ. ಮಸೀದಿಯ ಒಳಗಡೆ, ದೊಡ್ಡ ಗುಮ್ಮಟದ ನೇರ ಕೆಳಗೆ ಇರುವ ಜಾಗದಲ್ಲಿ, ಈಗ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಇದೇ ಪ್ರಾರ್ಥನೆ ಸಲ್ಲಿಸುವ ಜಾಗದಲ್ಲಿ ನಾಲ್ಕನೆ ಬಹಮನಿ ಸುಲ್ತಾನನಾಗಿದ್ದ ಒಂದನೆ ದೌದ್ ಶಾನನ್ನು (೧೩೭೮), ಆತ ಶುಕ್ರವಾರದ ಪ್ರಾರ್ಥನೆ ಸಲ್ಲಿಸುವಾಗಲೇ ಕೊಲೆ ಮಾಡಲಾಗಿತ್ತು. ಒಂದನೆ ದೌದ್ ಶಾ, ಸುಲ್ತಾನನ ಪಟ್ಟವನ್ನು ತನ್ನ ಕೈಗೆ ತೆಗೆದುಕೊಳ್ಳುವ ಸಲುವಾಗಿ, ಮೂರನೆ ಬಹ್ಮನಿ ಸುಲ್ತಾನನಾದ ಅಲ್ಲಾವುದ್ದೀನ್ ಮುಜಾಹಿದ್ ಶಾನನ್ನು (೧೩೭೫ - ೧೩೭೮) ಕೊಲೆ ಮಾಡಿದ್ದನು. ಇದಕ್ಕೆ ಪ್ರತಿಕಾರವಾಗಿ, ಅಲ್ಲಾವುದ್ದೀನ್ ಮುಜಾಹಿದ್ ಶಾನ ಸೋದರಿ ರುಹ್ ಪರ್ವಾರ್ ಆಘಾ, ಸೇವಕನೊಬ್ಬನ ಮೂಲಕ ದೌದ್ ಶಾನ ಕೊಲೆ ಮಾಡಿಸಿ ಸೇಡು ತೀರಿಸಿಕೊಂಡಳು. ನಾನು ಆ ಜಾಗದಲ್ಲಿ ನಿಂತು, ಯಾವ ರೀತಿ ಕೊಲೆ ಮಾಡಿರಬಹುದು ಎಂದು ಯೋಚಿಸುತ್ತಾ, ನೆತ್ತಿಯ ಮೇಲಿದ್ದ ದೊಡ್ಡ ಗುಮ್ಮಟದ ಒಳಮೇಲ್ಮೈಯ ಅಂದವನ್ನು ಆಸ್ವಾದಿಸುತ್ತಾ ಸ್ವಲ್ಪ ಕಾಲ ಕಳೆದೆ.


ನಂತರ ಮಸೀದಿಯಿಂದ ಹೊರಬಿದ್ದು, ಸ್ವಲ್ಪವೇ ದೂರದಲ್ಲಿದ್ದ ಕೋಟೆಯ ಬುರುಜುಗಳತ್ತ ನಡೆದೆ. ಇಲ್ಲೇ ಇರುವ ಒಂದು ಬುರುಜಿನ ಮೇಲೆ ಮತ್ತೊಂದು ತುಪಾಕಿ ಇದೆ. ಈ ತುಪಾಕಿ ರಂಗ ಮಹಲಿನ ಮೇಲಿರುವ ತುಪಾಕಿಗಳಿಗಿಂತಲೂ ದೊಡ್ಡದಾಗಿದೆ. ಇಲ್ಲಿಂದಲೇ ದೂರದಲ್ಲಿ ಒಂದು ದಿಬ್ಬದ ಮೇಲಿರುವ 'ಚೋರ್ ಗುಂಬಝ್' ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕೋಟೆಯ ಗೋಡೆಗಳು ಈಗಲೂ ಸುದೃಢವಾಗಿವೆ ಆದರೆ ಸುತ್ತಲೂ ಇರುವ ಕಂದಕದಲ್ಲಿರುವ ಕೊಳಚೆ ನೋಡಿದಾಗ ಮಾತ್ರ ಅಸಹ್ಯವೆನಿಸುತ್ತದೆ. ಕೋಟೆಯೊಳಗೆ ವಾಸವಿರುವ ಮುಸಲ್ಮಾನರು ಮಾತ್ರ ಅಲ್ಲಲ್ಲಿ ಬಹಿರ್ದೆಸೆ ಮಾಡುತ್ತಾ, ಅಲ್ಲಲ್ಲಿ ಕೊಳಕನ್ನು ಎಸೆಯುತ್ತಾ, ಕೋಟೆಯನ್ನು ಮತ್ತಷ್ಟು ಅಸಹ್ಯಗೊಳಿಸುತ್ತಾ, 'ತಾವಿದ್ದಲ್ಲಿ ಕೊಳಚೆ - ಕೊಳಚೆಯಿದ್ದಲ್ಲಿ ತಾವು' ಎಂಬ ಮಾತಿಗೆ ತಕ್ಕಂತೆ ಜೀವನ ನಡೆಸುತ್ತಾ, ಬಂದವರನ್ನು ವಿಚಿತ್ರವಾಗಿ ದಿಟ್ಟಿಸುತ್ತಾ ಹಾಯಾಗಿದ್ದಾರೆ.


ಕೋಟೆಯಿಂದ ಮತ್ತೊಂದು ರಿಕ್ಷಾದಲ್ಲಿ ನನ್ನ ಸವಾರಿ ಹೊರಟಿತು ಸೂಫಿ ಸಂತ ಖ್ವಾಜಾ ಬಂದೇ ನವಾಝ್ ದರ್ಗಾದ ಕಡೆಗೆ. ಈತನನ್ನು ಹಝ್ರತ್ ಖ್ವಾಜಾ ಸ್ಯೆಯದ್ ಮೊಹಮ್ಮದ್ ಗೇಸು ದರಾಝ್ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಒಂಬತ್ತನೆ ಬಹಮನಿ ಸುಲ್ತಾನ, ಒಂದನೆ ಶಿಯಾಬುದ್ದೀನ್ ಅಹ್ಮದ್ ಶಾ ವಾಲಿ (೧೪೨೨ - ೧೪೩೬), ಈ ದರ್ಗಾವನ್ನು ೧೪೨೨ರಲ್ಲಿ ಕಟ್ಟಿಸಿದನು. ದರ್ಗಾದ ಒಳಗೆ, ಗುಮ್ಮಟದ ಒಳಮೇಲ್ಮೈಯಲ್ಲಿ ಕೆತ್ತಿರುವ ವಿಶಿಷ್ಟ ಹೊಳಪಿನ ಚಿತ್ರಗಳು ಮಾತ್ರ ಅದ್ಭುತವಾಗಿವೆ. ನನಗೆ ಇವುಗಳನ್ನು 'ಚಿತ್ರಗಳು' ಎನ್ನುವ ಬದಲು 'ಹೊಳಪಿನ ಲೇಪನಗಳು' ಅನ್ನುವುದೇ ಸೂಕ್ತ ಎಂದೆಣಿಸಿತು. ದರ್ಗಾದ ಒಳಗೆ ಕುಳಿತು ಸುಮಾರು ೧೦ ನಿಮಿಷಗಳಷ್ಟು ಕಾಲ ಈ ಹೊಳಪಿನ ಲೇಪನಗಳನ್ನು ವೀಕ್ಷಿಸಿ, ಬಂದೇ ನವಾಝನ ಗೋರಿಗೆ ನಮಸ್ಕರಿಸಿ ಹೊರಬಿದ್ದೆ. ದರ್ಗಾದ ಬಾಗಿಲಲ್ಲೇ ಹತ್ತಾರು ಹೆಂಗಸರು ಕತ್ತು ಕೊಂಕಿಸಿ ಒಳಗಿನ ದೃಶ್ಯವನ್ನು ಹಾಗೂ ಬಂದೇ ನವಾಝನ ಗೋರಿಯನ್ನು ನೋಡಲು ಹಪಿಹಪಿಸುತ್ತಿದರು. ದರ್ಗಾದ ಒಳಗೆ ಛಾಯಾಚಿತ್ರ ತೆಗೆಯುವುದು ಮತ್ತು ಹೆಂಗಸರಿಗೆ ಪ್ರವೇಶ ಇವೆರಡನ್ನು ನಿಷೇಧಿಸಲಾಗಿದೆ.


ದರ್ಗಾದ ಹೊರಗಡೆ ಎಲ್ಲಾ ಕಡೆ ಗೋರಿಗಳೇ ಗೋರಿಗಳು. ಮುಘಲರು ಕಟ್ಟಿಸಿದ್ದು ಎನ್ನಲಾದ ಒಂದು ಮಸೀದಿ ದರ್ಗಾದ ಪ್ರಾಂಗಣದೊಳಗೆ ಇದೆ. ಸಮೀಪದಲ್ಲೆ ಕೆಲವು ಹೆಂಗಸರು ಜಗಲಿಯೊಂದಕ್ಕೆ ತಲೆ ಬಡಿದುಕೊಳ್ಳುತ್ತಿದ್ದರು. ಅಲ್ಲೇ ಕೂತಿದ್ದವನೊಬ್ಬನಲ್ಲಿ ಅವರು ಹಾಗೇಕೆ ಮಾಡುತ್ತಿದ್ದಾರೆಂದು ಕೇಳಿ ಒಂದು ದೊಡ್ಡ ತಪ್ಪು ಮಾಡಿದೆ ನೋಡಿ, ಆತ ಮುಂದಿನ ೧೫ ನಿಮಿಷಗಳ ಕಾಲ ನನ್ನನ್ನು ಬಿಡಲೇ ಇಲ್ಲ. ಅದೆಷ್ಟೊ ಕೊರಕರನ್ನು ಕಂಡಿದ್ದೇನೆ, ಆದರೆ ಈತ ಮಾತ್ರ ಅವರೆಲ್ಲರನ್ನು ಮೀರಿ ನಿಲ್ಲುವ ಅನಾಹುತ ಕೊರಕ. 'ಯು ಸೀ, ದ ಮ್ಯಾಜಿಕಲ್ ಅಟ್ಮಾಸ್ಫಿಯರ್ ಆಫ್ ದಿಸ್ ಪ್ಲೇಸ್.......' ಅಂತ ಆಂಗ್ಲ ಭಾಷೆಯಲ್ಲಿ ಶುರುಮಾಡಿದವ ಮುಂದಿನ ೧೫ ನಿಮಿಷಗಳ ಕಾಲ ಹಿಂದಿ, ಕನ್ನಡ ಹಾಗೂ ಆಂಗ್ಲ ಭಾಷೆಗಳ ಮಿಶ್ರಣದಲ್ಲಿ ನನ್ನ ಕೈಯನ್ನು ಬಲವಾಗಿ ಹಿಡಿದು ಏನೇನೋ ಕೊರೆದ, ಆದರೆ ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಕೊಡಲಿಲ್ಲ. ಆತನಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ಸಾಕುಸಾಕಾಯಿತು. ಅಲ್ಲೊಬ್ಬ ತನ್ನ ಬೇಗಮ್ ಜತೆ ನಿಂತಿದ್ದ. ಆತನಲ್ಲಿ ಕೇಳಿದರೆ, ದುರುಗುಟ್ಟಿಕೊಂಡು ನೋಡಿದ. ಇಬ್ಬರು ಇಸ್ಲಾಮಿಕ್ ಸುಂದರಿಯರು ಸ್ವಲ್ಪ ದೂರ ನಿಂತು ಆ ಹೆಂಗಸರು ತಲೆ ಬಡಿದುಕೊಳ್ಳುವುದನ್ನು ತದೇಕಚಿತ್ತದಿಂದ ನೋಡುತ್ತಿದ್ದರು. ಅವರಲ್ಲಿ ಕೇಳಿದರೆ, ಉತ್ತರ ನೀಡುವುದರ ಬದಲು ಸುಂದರವಾಗಿ ನಕ್ಕರು. ಈ ಸಾಬಿಗಳೇ ವಿಚಿತ್ರ.

ನಂತರ ನಾನು ನಡೆದಿದ್ದು ಹಫ್ತ್ ಗುಂಬಝ್ ಕಡೆಗೆ. ದರ್ಗಾಕ್ಕೆ ರಿಕ್ಷಾದಲ್ಲಿ ಹೋಗುತ್ತಿರುವಾಗ, ಹಫ್ತ್ ಗುಂಬಝ್ ದಾಟಿ ಹೋಗಿದ್ದರಿಂದ ದಾರಿ ಕೇಳುವ ಅವಶ್ಯಕತೆಯಿರಲಿಲ್ಲ. ದರ್ಗಾದಿಂದ ನಡೆದರೆ ೧೦ ನಿಮಿಷದಲ್ಲಿ ಹಫ್ತ್ ಗುಂಬಝ್ ತಲುಪಬಹುದು. ಇಲ್ಲಿ ೫ ಗೋರಿಗಳಿವೆ (ಮೂರನೇ, ನಾಲ್ಕನೇ, ಆರನೇ, ಏಳನೇ ಮತ್ತು ಎಂಟನೇ ಬಹಮನಿ ಸುಲ್ತಾನರ ಗೋರಿಗಳು).


ಉಳಿದ ೩ ಗೋರಿಗಳು - ಬಹಮನಿ ಸಾಮ್ರಾಜ್ಯದ ಸಂಸ್ಥಾಪಕ ಅಲ್ಲಾವುದ್ದೀನ್ ಬಹ್ಮನ್ ಶಾ, ಎರಡನೇ ಮತ್ತು ಐದನೇ ಸುಲ್ತಾನರ ಗೋರಿಗಳು - 'ಸೆ ಗುಂಬಝ್' ಎಂಬಲ್ಲಿ ಇವೆ. ಆದರೆ ಈ ಸ್ಥಳ ಗುಲ್ಬರ್ಗಾದಲ್ಲಿ ಎಲ್ಲಿದೆ ಎನ್ನುವುದು ಎಷ್ಟು ವಿಚಾರಿಸಿದರೂ ತಿಳಿಯಲಿಲ್ಲ. ನಾನು ಕೇಳಿದವರಲ್ಲಿ ಹೆಚ್ಚಿನವರಿಗೆ 'ಸೆ ಗುಂಬಝ್' ಹೆಸರೇ ಹೊಸದಾಗಿತ್ತು, ಇನ್ನು ಕೆಲವರು ಹೆಸರು ಕೇಳಿದ್ದರು ಆದರೆ ಎಲ್ಲಿದೆ ಎಂದು ತಿಳಿಯದವರಾಗಿದ್ದರು. ಅಂತೂ ನನಗೆ 'ಸೆ ಗುಂಬಝ್' ನೋಡಲು ಆಗಲಿಲ್ಲ. ಒಂಬತ್ತನೆ ಬಹ್ಮನಿ ಸುಲ್ತಾನ ಒಂದನೆ ಶಿಯಾಬುದ್ದೀನ್ ಅಹ್ಮದ್ ಶಾ ವಾಲಿ (೧೪೨೨ - ೧೪೩೬), ೧೪೨೬ರಲ್ಲಿ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್-ಗೆ ವರ್ಗಾಯಿಸಿದ್ದರಿಂದ ಉಳಿದ ಬಹಮನಿ ಸುಲ್ತಾನರ ಗೋರಿಗಳು ಬೀದರ್ ಸಮೀಪದ ಅಶ್ತೂರ್-ನಲ್ಲಿವೆ.

ಹಫ್ತ್ ಗುಂಬಝ್ ನೋಡಿದ ನಂತರ ಅಳಂದ ರಸ್ತೆಯಲ್ಲಿರುವ ಚೋರ್ ಗುಂಬಝ್ ಕಡೆಗೆ ಆಟೋದಲ್ಲಿ ತೆರಳಿದೆ. ಎತ್ತರವಾದೊಂದು ದಿಬ್ಬದ ಮೇಲಿರುವುದರಿಂದ, ಗುಲ್ಬರ್ಗದಲ್ಲಿ ಎಲ್ಲಿಂದ ನೋಡಿದರೂ ಈ ಚೋರ್ ಗುಂಬಝ್ ಕಾಣಿಸುತ್ತದೆ. ಬಿಜಾಪುರದ ಗೋಲ್ ಗುಂಬಝ್ ಮಾದರಿಯಲ್ಲಿರುವುದರಿಂದ ಇದಕ್ಕೆ ಈ ಹೆಸರು ಬಂದಿರಬಹುದು. ಯಾರು ಕಟ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಿರ್ಜನ ಪ್ರದೇಶದಲ್ಲಿರುವ ಚೋರ್ ಗುಂಬಝ್, ಅಂತಹ ವಿಶೇಷವೇನಿಲ್ಲದ ನಾಲ್ಕು ಗೋಡೆಗಳುಳ್ಳ ಎರಡಂತಸ್ತಿನ ಪಾಳು ಬೀಳುತ್ತಿರುವ ಸಾಧಾರಣ ಸೌಧವಾದರೂ ಭೇಟಿ ನೀಡಲು ಯೋಗ್ಯವಾಗಿರುವಂತದ್ದು. ಒಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಸ್ವಾಗತಿಸಿದ್ದು ಧೂಳು, ಕಳಚಿ ಬಿದ್ದಿರುವ ಗೋಡೆಯ ಮೇಲುಕವಚಗಳು, ಗವ್ವೆಂದು ಬೀಸುತ್ತಿದ್ದ ಗಾಳಿ, ಎದ್ದು ಹೋದ ನೆಲಹಾಸು ಮತ್ತು ಕಪ್ಪನೆಯ ಬಣ್ಣ ಕಳೆದುಕೊಂಡ ಗುಮ್ಮಟದ ಒಳಮೇಲ್ಮೈ.


ಒಳಗಡೆ ಇರುವುದು ಎರಡಂತಸ್ತು ಉದ್ದದ ಒಂದೇ ದೊಡ್ಡ ಕೋಣೆ. ಗೋಡೆಗಳ ಮಧ್ಯೆ ಮನುಷ್ಯನೊಬ್ಬ ನಡೆದಾಡಲು ಅವಶ್ಯವಿರುವ ಜಾಗವನ್ನಷ್ಟೇ ಕೊರೆದು ಮೇಲಿನ ಅಂತಸ್ತುಗಳಿಗೆ ಹೋಗಲು ಮೆಟ್ಟಿಲುಗಳನ್ನು ಮಾಡಿದ್ದಾರೆ. ಕತ್ತಲೆ ಕವಿದ ಮೆಟ್ಟಿಲುಗಳನ್ನು ನೋಡಿ ಹೆದರಿಕೆಯಾದರೂ, ಹುಂಬ ಧೈರ್ಯದಿಂದ ಮೇಲಿನ ಅಂತಸ್ತುಗಳಿಗೆ ಹೋದೆ. ಒಬ್ಬನೇ ಇದ್ದಿದ್ದರಿಂದ ಚೋರ್ ಗುಂಬಝ್-ನಲ್ಲಿ 'ಚೋರ್'-ನಂತೆ ಆಚೀಚೆ ಓಡಾಡುತ್ತಿರುವಂತೆ ಭಾಸವಾಯಿತು. ಮೊದಲನೇ ಅಂತಸ್ತಿಗೆ ಒಂದು ಸುತ್ತು ಹಾಕಿ ಎರಡನೆ ಅಂತಸ್ತಿಗೆ ತೆರಳಿದೆ. ಗುಮ್ಮಟದ ಸುತ್ತ ಒಂದು ಸುತ್ತು ತಿರುಗುತ್ತಿರುವಾಗ, ರಭಸವಾಗಿ ಬೀಸುತ್ತಿದ್ದ ಗಾಳಿ ಭಯವನ್ನು ಹುಟ್ಟಿಸುತ್ತಿತ್ತು. ಮೆಟ್ಟಿಲುಗಳನ್ನು, ಸ್ಥಳ ವ್ಯರ್ಥ ಮಾಡದೆ ನಿರ್ಮಿಸಿರುವ ಪರಿಯನ್ನು ಮೆಚ್ಚಬೇಕು. ನಂತರ ಬೀದರ್ ಹಾಗೂ ಬಸವಕಲ್ಯಾಣಗಳಲ್ಲೂ ನೋಡಿದೆಲ್ಲಾ ಕಡೆ ಮೆಟ್ಟಿಲುಗಳ ರಚನೆ ನನ್ನನ್ನು ಬಹುವಾಗಿ ಆಕರ್ಷಿಸಿತು.


ಅದೇ ಆಟೋದಲ್ಲಿ ನಂತರ ತೆರಳಿದ್ದು ಶರಣ ಬಸವೇಶ್ವರ ದೇವಸ್ಥಾನಕ್ಕೆ (ಮೇಲಿರುವ ಚಿತ್ರ). ಸುಂದರವಾಗಿ ಹಾಗೂ ಅದ್ಭುತವಾಗಿ ನಿರ್ಮಿಸಲಾಗಿರುವ ಈ ದೇವಸ್ಥಾನ, ಗೋರಿ - ಗುಂಬಝ್ ನೋಡಿ ನೋಡಿ ದಣಿಯುತ್ತಿದ್ದ ನನಗೆ ಅಪರಿಮಿತ ಉಲ್ಲಾಸವನ್ನು ನೀಡಿತು. ಈ ದೇವಸ್ಥಾನವನ್ನು ಶಾರ್ಟ್ ಆಗಿ ಎಸ್.ಬಿ.ಟೆಂಪಲ್ ಎಂದೂ ಕರೆಯುತ್ತಾರೆ. ಅದ್ದೂರಿಯಾಗಿ ಖರ್ಚು ಮಾಡಿ ಈ ದೇವಸ್ಥಾನವನ್ನು ನಿರ್ಮಿಸಲಾಗಿರುವುದರಿಂದ ಆಧುನಿಕ ನಿರ್ಮಾಣ ಶೈಲಿಯ ಎಲ್ಲಾ ಕುರುಹುಗಳನ್ನು ಕಾಣಬಹುದು. ವಿಶಾಲವಾಗಿರುವ ಪ್ರಾಂಗಣ, ಪ್ರಶಾಂತ ವಾತಾವರಣ ಮತ್ತು ಕಂಬಗಳ ಮೇಲಿನ ಕರಕುಶಲ ಕೆಲಸ ಇಲ್ಲಿನ ವೈಶಿಷ್ಟ್ಯ. ಮುಂಜಾನೆಯಿಂದ ತಿರುಗಾಡಿ ದಣಿದಿದ್ದ ನನಗೆ ವಿರಮಿಸಲು ಎಸ್.ಬಿ.ಟೆಂಪಲ್ ಸೂಕ್ತ ಸ್ಥಳವಾಗಿತ್ತು.

ವಸತಿ ಗೃಹದಿಂದ 'ಚೆಕ್ ಔಟ್' ಮಾಡಿ ಗುಲ್ಬರ್ಗ ಬಸ್ ನಿಲ್ದಾಣಕ್ಕೆ ಬಂದಾಗ ಮುಗಳಖೋಡದಿಂದ ಬಂದ ಬಸ್ಸು ಬೀದರ್-ಗೆ ಹೊರಡಲು ಅಣಿಯಾಗುತ್ತಿತ್ತು. ಸಂಜೆ ೬ಕ್ಕೆ ಗುಲ್ಬರ್ಗ ಬಿಟ್ಟ ಬಸ್ಸು ಹುಮ್ನಾಬಾದ್ ಮೂಲಕ ರಾತ್ರಿ ೯.೧೫ಕ್ಕೆ ಬೀದರ್ ತಲುಪಿತು. ಇಲ್ಲೊಂದು ವಸತಿ ಗೃಹಕ್ಕೆ ತೆರಳಿ ಮರುದಿನದ ಬೀದರ್ ಸುತ್ತಾಟವನ್ನು ಎದುರುನೋಡುತ್ತಾ ನಿದ್ರಾವಶನಾದೆ.

ಮುಂದುವರಿಯುವುದು...೨ನೇ ಭಾಗದಲ್ಲಿ.

ಮಂಗಳವಾರ, ನವೆಂಬರ್ 07, 2006

'ಹ್ಹಿ ಹ್ಹಿ'ಯ ಶಾಶ್ವತ ನಿರ್ಗಮನ

ಮೊನ್ನೆ ದೀಪಾವಳಿಯಂದು ೪ ದಿನ ರಜಾ ಇದ್ದರೂ ಎಲ್ಲೂ ಚಾರಣ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿ ಇಲ್ಲಿ ಹೋಗಬೇಕೆಂಬ 'ಪ್ಲ್ಯಾನ್'ಗಳೆಲ್ಲಾ ಹಾಗೇ ಉಳಿದುಹೋದವು. ಕಾಡು ಮೇಡು ಅಲೆದಾಡುವುದು ಸಾಕು, ಹಬ್ಬದಂದಾದರೂ ಮನೆಯಲ್ಲಿರು ಎಂದು ಮನೆಯಲ್ಲಿ ಅಪ್ಪಣೆ. ೩ ದಿನ ಮನೆಯಲ್ಲೇ ಕೂತು 'ಫುಲ್ ಬೋರ್' ಹೊಡೆಸಿಕೊಂಡು, ನಾಲ್ಕನೇ ದಿನ ಸೋಮವಾರ ೨೩ ಅಕ್ಟೊಬರ್-ರಂದು 'ನಡೀಪ್ಪಾ ಮಾರಾಯ, ಆಗುಂಬೆಗಾದರೂ ಹೋಗಿಬರೋಣು' ಎಂದು ಯಮಾಹ ಏರಿದೆ.

ರಜಾದಿನವಾಗಿದ್ದರಿಂದ 'ಸನ್ ಸೆಟ್ ವ್ಯೂ ಪಾಯಿಂಟ್'ನಲ್ಲಿ ಜನಜಂಗುಳಿ. ಸ್ವಲ್ಪ ಮುಂದೆ ಸಾಗಿ ನೋಡಿದರೆ ಪಡಿಯಾರ್-ನ ಅಂಗಡಿಯಲ್ಲಿ 'ಫುಲ್ ರಶ್'. ತಲೆ ಮೇಲೆತ್ತಿ ನೋಡಲು ಕೂಡಾ ಪುರುಸೊತ್ತಿಲ್ಲದೆ, ಚಟ್ಟಂಬಡೆ ಕರಿಯಲು ಬಿಡುತ್ತಾ, ಜನ ಹೆಚ್ಚಾದಂತೆ ಹಾಲಿಗೆ ಇನ್ನಷ್ಟು ನೀರು ಬೆರೆಸುತ್ತಾ ಚಹಾ/ಕಾಫಿ/ಕಷಾಯ ಮಾಡುವುದರಲ್ಲಿ ಪಡಿಯಾರ್ ಮಗ್ನನಾಗಿದ್ದ. ಸ್ವಲ್ಪ ಸಮಯದ ಬಳಿಕ ನನ್ನನ್ನು ನೋಡಿ 'ಅರೆ ನಾಯ್ಕ್ರೆ, ಯಾವಾಗ ಬಂದ್ರಿ? ಬಹಳ ಜನ ಇವತ್ತು' ಎಂದು ಮತ್ತೆ ತನ್ನ ಕಾಯಕದಲ್ಲಿ ನಿರತನಾದ. ನನ್ನ ಕಣ್ಣುಗಳು 'ಹ್ಹಿ ಹ್ಹಿ' ಯನ್ನೇ ಹುಡುಕುತ್ತಿದ್ದವು. ವಿಪರೀತ ಜನಜಂಗುಳಿಯಿದ್ದರೆ 'ಹ್ಹಿ ಹ್ಹಿ'ಗೆ ಸಂಭ್ರಮ - ತಿನ್ನಲು ಹೆಚ್ಚು ಸಿಗತ್ತದೆಂದು. ಆತ ಎಲ್ಲೂ ಕಾಣುತ್ತಿರಲಿಲ್ಲ.

ಹಾಗೆ ಮುಂದಿರುವ 'ಚೆಕ್-ಪೋಸ್ಟ್' ದಾಟುವಾಗ ಅಲ್ಲಿನ ಸಿಬ್ಬಂದಿ ಹೊಸಬರಾಗಿದ್ದರಿಂದ ಅವರಲ್ಲಿ 'ಹ್ಹಿ ಹ್ಹಿ' ಯ ಬಗ್ಗೆ ಕೇಳುವುದು ಸಮಂಜಸವೆನಿಸಲಿಲ್ಲ. ಹಿಂತಿರುಗುವಾಗ ಪಡಿಯಾರ್-ಗೆ ಕೆಲಸದಲ್ಲಿ ಸ್ವಲ್ಪ ಬಿಡುವಾದರೆ ಅವನಲ್ಲೇ ಕೇಳಿದರಾಯಿತು ಎಂದು 'ಗೆಸ್ಟ್-ಹೌಸ್' ಕಡೆಗೆ ತೆರಳಿದೆ. ಮರಳಿ 'ಚೆಕ್-ಪೋಸ್ಟ್' ಬಳಿ ಬಂದಾಗ ಪಡಿಯಾರ್ ವಾಸ್ ಸ್ಟಿಲ್ ಬಿಝಿ. ಆಚೀಚೆ ನೋಡಿದರೆ 'ಹ್ಹಿ ಹ್ಹಿ' ಯ ಪತ್ತೆಯಿಲ್ಲ. ೧೦ ನಿಮಿಷ ಕಾದು ಉಡುಪಿಗೆ ಹಿಂತಿರುಗಿದೆ.

ನವೆಂಬರ್ ೧ ರಂದು ಮತ್ತೊಂದು ರಜೆ, ಹಾಗೇನೇ ಮತ್ತೆ ಆಗುಂಬೆಗೆ ಪಯಣ. ಈ ಬಾರಿ ಪಡಿಯಾರ್ ವಾಸ್ ನಾಟ್ ಬಿಝಿ ಎಟ್ ಆಲ್. ಕೂತು ನೊಣ ಓಡಿಸುತ್ತಿದ್ದ ಪಡಿಯಾರ್ ನನ್ನನ್ನು ನೋಡಿದ ಕೂಡಲೇ 'ಮೊನ್ನೆ ನೀವು ಯಾವಾಗ ಬಂದ್ರಿ, ಯಾವಾಗ ಹೋದ್ರಿ ಅನ್ನೋದೆ ಗೊತ್ತಾಗ್ಲಿಲ್ಲ' ಅನ್ನುತ್ತಾ ತಿನ್ನಲು ನೀಡಿದ. 'ಹ್ಹಿ ಹ್ಹಿ' ಎಲ್ಲಿ ಎಂದು ಕೇಳಲು, 'ಹೋಯ್ತ್ರಿ ಅದು, ತ್ಚ್ ತ್ಚ್ ತ್ಚ್ ಬಹಳ ಮುದ್ದಿನ ನಾಯಿ, ಎಷ್ಟು ಪ್ರೀತಿ ಮಾಡ್ತಿತ್ತು....' ಅಂದಾಗ ಆತ ನೀಡಿದ ತಿಂಡಿಗೆ ಟೇಸ್ಟೇ ಇಲ್ಲವೆನಿಸಿತು. ವರ್ಷಕ್ಕೆ ಕನಿಷ್ಟ ೧೦-೧೨ ಜಾನುವಾರುಗಳನ್ನು ಆಗುಂಬೆಯಲ್ಲಿ ಬಲಿ ತೆಗೆದುಕೊಳ್ಳುವ ಉಡುಪಿಯಿಂದ ಶಿವಮೊಗ್ಗ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು ಇತ್ಯಾದಿ ಊರುಗಳಿಗೆ ತೆರಳುವ ಮಿನಿ ಬಸ್ಸುಗಳೊಂದಕ್ಕೆ 'ಹ್ಹಿ ಹ್ಹಿ' ಬಲಿಯಾಗಿದ್ದ.

'ಗೆಸ್ಟ್-ಹೌಸ್' ಬಳಿ ತೆರಳಲು ಮನಸಾಗದೆ ಅಲ್ಲಿಂದಲೇ ಉಡುಪಿಗೆ ಹಿಂತಿರುಗಿದೆ. ಪಡಿಯಾರ್, 'ಹ್ಹಿ ಹ್ಹಿ' ಯ ಗೆಳೆಯನಾಗಿದ್ದ ಇನ್ನೊಂದು ನಾಯಿಗೆ 'ಹೆಚ್ ಹಚ್ಯಾ.. ಬದಿಗ್ ನಡಿ, ಯಾವಾಗ್ ನೋಡಿದ್ರು ರಸ್ತೆ ಮಧ್ಯದಲ್ಲೇ ಅಡ್ಡಾಡೋದು... ಮೊನ್ನೆ ಒಬ್ಬ ಹೋದ, ಈಗ ಇಂವ ಹೋಗ್ಲಿಕ್ಕೆ ತಯಾರಿ ಮಾಡ್ತಿದ್ದಾನೆ..ಬದಿಗ್ ಹೋಗ್' ಎಂದು ಬೈಯುತ್ತಾ ಉಳಿದು ಹೋಗಿದ್ದ ಇಡ್ಲಿ ಚೂರುಗಳನ್ನು ಅದಕ್ಕೆ ನೀಡುತ್ತಿದ್ದ.

ಬುಧವಾರ, ನವೆಂಬರ್ 01, 2006

ಲೈನ್ಕಜೆ ಜಲಪಾತಕ್ಕೆ ಚಾರ(ಪ್ರಯಾ)ಣ


ಅಕ್ಟೋಬರ್ ತಿಂಗಳ ಮಂಗಳೂರು ಯೂತ್ ಹಾಸ್ಟೆಲ್ ಕಾರ್ಯಕ್ರಮ ೨೯ರಂದು ಲೈನ್ಕಜೆ ಜಲಪಾತಕ್ಕೆಂದು ನಿರ್ಧಾರವಾಗಿತ್ತು. ಇದೊಂದು ಚಾರಣವಲ್ಲದೆ ಪಿಕ್-ನಿಕ್ ತರಹದ ಕಾರ್ಯಕ್ರಮವೆಂದು ತಿಳಿದಿದ್ದರೂ, ಜಲಪಾತವೊಂದನ್ನು ನೋಡಿದಂತೆ ಆಗುತ್ತದೆ ಎಂದು ಉಳಿದ ೨೦ ಚಾರಣಿಗರನ್ನು (ಪ್ರಯಾಣಿಗರನ್ನು) ಸೇರಿಕೊಂಡೆ.

ಗಣಪತಿಯವರ ಮಾರ್ಗದರ್ಶನದಲ್ಲಿ ಸುಮಾರು ೧೧೫ ಕಿ.ಮಿ ಗಳ ಪ್ರಯಾಣದ ನಂತರ ಲೈನ್ಕಜೆ ಮನೆಯಲ್ಲಿ ಮೋಹನನ ಟೆಂಪೊ ಬಂದು ನಿಂತಿತು. ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಕಾರ್ಯಕ್ರಮಕ್ಕೆ ರೆಗ್ಯುಲರ್ ಟೆಂಪೊ ಯಾವಾಗಲೂ ಮೋಹನನ 'ಶಕ್ತಿ'. ಇದೊಂದು ಹೆಸರಿಗೆ ತಕ್ಕಂತೆ ಭಲೇ ಶಕ್ತಿಯುತವಾದ ಟೆಂಪೊ. ಯಾವುದೇ ಪಾಳುಬಿದ್ದ ರಸ್ತೆಯಿರಲಿ, ನೆಗೆದುಬಿದ್ದ ರಸ್ತೆಯಿರಲಿ, ಹಳ್ಳ ಹಿಡಿದ ರಸ್ತೆಯಿರಲಿ, ಕಡಿದಾದ ತಿರುವುಗಳುಳ್ಳ ಕಲ್ಲು ಮಣ್ಣುಗಳಿಂದ ಕೂಡಿದ ಕಿರಿದಾದ ಮಣ್ಣಿನ ರಸ್ತೆಯಿರಲಿ... ಮೋಹನ ಕಿರಿಕಿರಿ ಮಾಡದೆ ತನ್ನ 'ಶಕ್ತಿ'ಯನ್ನು ಓಡಿಸುತ್ತಾನೆ. ಈ ಬಾರಿಯೂ ಅಷ್ಟೇ. ಕೊನೆಯ ಐದಾರು ಕಿ.ಮಿಗಳಷ್ಟು ರಸ್ತೆ ಜೀಪ್ ಪ್ರಯಾಣಕ್ಕೆ ಮಾತ್ರ ಸೂಕ್ತವಾಗಿತ್ತಾದರೂ, ಮೋಹನ ತನ್ನ 'ಶಕ್ತಿ'ಯನ್ನು ಹಸನ್ಮುಖಿಯಾಗಿಯೇ ಓಡಿಸಿದ. ಇದೊಂದು ಸಾಟಿಯಿಲ್ಲದ ಟೆಂಪೊ ಮತ್ತು ಮೋಹನ ಒಬ್ಬ ಸಾಟಿಯಿಲ್ಲದ ಚಾಲಕ.

ಲೈನ್ಕಜೆ ಮನೆಯಿಂದ ೧೫ ನಿಮಿಷಗಳಷ್ಟು ನಡಿಗೆಯ ಬಳಿಕ ಜಲಪಾತದ ಪ್ರಥಮ ಹಂತ. ೪೫ ಅಡಿಗಳಷ್ಟು ಎತ್ತರವಿರಬಹುದು. ಇಲ್ಲಿ ಸ್ನಾನ ಹಾಗೂ ಟೈಮ್-ಪಾಸ್ ಮಾಡಿದ ಬಳಿಕ ಎರಡನೇ ಹಂತದ ಬಳಿಗೆ ಬಂದೆವು. ಇದು ಸುಮಾರು ೩೦ ಅಡಿಯಷ್ಟಿರಬಹುದು. ಇಲ್ಲಿ ಮತ್ತೊಮ್ಮೆ ಸ್ನಾನ ಹಾಗೂ ಟೈಮ್-ಪಾಸ್ ಮಾಡಿದ ಬಳಿಕ ಬ್ಯಾಕ್ ಟು ಲೈನ್ಕಜೆ ಹೌಸ್. ನಂತರ ಲೈನ್ಕಜೆ ಮನೆಯಲ್ಲಿ ಮತ್ತಷ್ಟು ಟೈಮ್-ಪಾಸ್. ಹಳೇ ಕಾಲದ ಮನೆಯಾಗಿದ್ದರಿಂದ ಅಲ್ಲಲ್ಲಿ ಕೋಣೆಗಳು, ಉಪ್ಪರಿಗೆಗಳು, ಮಟ್ಟಿಲುಗಳು ಮತ್ತಿತರ ವಿಸ್ಮಯಗಳು. ಮನೆಯ ಅಜ್ಜ ಮುತ್ತಜ್ಜಂದಿರು ತಾವು ಶೂಟ್ ಮಾಡಿ ಕೊಂದ ಆನೆಗಳ ದಂತದೊಂದಿಗೆ ವೀರಾಧಿವೀರರಂತೆ ಪೋಸ್ ಕೊಟ್ಟು ತೆಗೆಸಿದ ಚಿತ್ರಗಳನ್ನು ನೋಡುವ ಹಿಂಸೆ. ಮನೆಯಲ್ಲಿರುವ ಪುಸ್ತಕಗಳ ಸಂಗ್ರಹ ಸಾಟಿಯಿಲ್ಲದ್ದು. ಯಾವ ವಿಷಯದ ಬಗ್ಗೆ ಪುಸ್ತಕವಿಲ್ಲ ಎಂದು ಕಂಡುಹುಡುಕುವುದೇ ಒಂದು ಚ್ಯಾಲೆಂಜ್. ಒಟ್ಟಾರೆ ಮನೆ ಮಾತ್ರ ನೋಡಲು ಯೋಗ್ಯವಿರುವಂತದ್ದು. ಪ್ರಥಮ ಸಲ ಬಂದ ಐದಾರು ಮಂದಿಗೆ 'ಚಾರಣ' ಯಾವಾಗಲೂ ಹೀಗೆ ಬಹಳ ಸುಲಭ ಎಂಬ ಕಲ್ಪನೆ. ಈ 'ಚಾರಣ' ಅದ್ಭುತವಾಗಿತ್ತು ಎಂಬ ಫೀಡ್-ಬ್ಯಾಕ್ ಬೇರೆ!