ಶನಿವಾರ, ಜೂನ್ 26, 2010

ಲಂಬೂ ಜಲಧಾರೆ


ಬೆಟ್ಟದ ತಪ್ಪಲಲ್ಲಿರುವ ಈ ಊರಿಗೆ ಬಸ್ಸಿನಲ್ಲಿ ಬಂದಿಳಿದಾಗ ಮುಂಜಾನೆ ೮.೧೫ರ ಸಮಯ. ಹಳ್ಳಿಗ ಹರೀಶ್ ನಮ್ಮೊಂದಿಗೆ ಮಾರ್ಗದರ್ಶಿಯಾಗಿ ಬಂದರು. ಹಳ್ಳಿಯ ಪರಿಧಿ ದಾಟಿದ ಕೂಡಲೇ ಕಾಡು ಚಾರಣಿಗರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತದೆ. ಸ್ವಲ್ಪ ದೂರ ರಸ್ತೆ ನಂತರ ಕಾಲುದಾರಿ.


ಶ್ರೀಕಾಂತರೊಂದಿಗೆ ಇದು ನನ್ನ ಮೊದಲ ಚಾರಣ. ಕಾಡಿನ ಮೌನದ ಬಗ್ಗೆ ಹರಟುತ್ತಾ ಕಾಡಿನೊಳಗೆ ಸಾಗಿದೆವು. ಕಾಡು ದಟ್ಟವಾಗಿದ್ದು ಬೃಹದಾಕಾರದ ವೃಕ್ಷಗಳು ನಮ್ಮನ್ನು ಆವರಿಸಿಕೊಂಡಂತೆ ಭಾಸವಾಗುತ್ತಿತ್ತು. ಋತುವಿನ ಮೊದಲ ಒಂದೆರಡು ಮಳೆ ಬಿದ್ದಿದ್ದರೂ ಇಂಬಳಗಳು ತಮ್ಮ ಬೇಸಗೆಯ ದೀರ್ಘ ನಿದ್ರೆಯಿಂದ ಇನ್ನೂ ಸಂಪೂರ್ಣವಾಗಿ ಎಚ್ಚರಗೊಂಡಿರಲಿಲ್ಲ. ಚಾರಣದ ಹಾದಿ ಹಳ್ಳಿಯಿಂದ ಕೇವಲ ೫೦-೭೦ ನಿಮಿಷವಷ್ಟೇ. ಒಂದು ಕಠಿಣ ಏರುಹಾದಿ ನನಗೆ ’ಚಾರಣವಾದರೂ ಯಾಕಪ್ಪಾ’ ಎನ್ನುವಷ್ಟು ಬಸವಳಿಯುವಂತೆ ಮಾಡಿತು. ಶ್ರೀಕಾಂತ್ ಸಲೀಸಾಗಿ ಮೇಲೇರುತ್ತಾ ಹೋದರೆ ನಾನು ಮುಗ್ಗರಿಸುತ್ತಿದ್ದೆ. ಅಲ್ಲಲ್ಲಿ ವಿರಮಿಸುತ್ತಾ, ವಿವಿಧ ಕಡೆ ಮಾಡಿದ ಚಾರಣಗಳ ಬಗ್ಗೆ ಒಬ್ಬರಿಗೊಬ್ಬರು ಕೊರೆಯುತ್ತಾ ಹರೀಶನನ್ನು ಹಿಂಬಾಲಿಸಿದೆವು.


ಒಂದೆಡೆ ಕೊರಕಲೊಂದನ್ನು ಇಳಿದ ಕೂಡಲೇ ಜಲಧಾರೆಯ ಶಿರಭಾಗದ ದರ್ಶನ. ಶಿಸ್ತುಬದ್ಧವಾಗಿ ಅಚೀಚೆ ಬೆಳೆದಿರುವ ಕುರುಚಲು ಸಸ್ಯಗಳು ಆ ಕಣಿವೆಯ ಸೌಂದರ್ಯಕ್ಕೆ ಇಂಬು ನೀಡಿದ್ದವು. ಇಲ್ಲಿಂದ ಸ್ವಲ್ಪ ಎಚ್ಚರಿಕೆಯಿಂದ ಮುಂದೆ ಸಾಗಬೇಕಾಗುತ್ತದೆ. ನೀರು ಹರಿದು ಬರುವ ಹಾದಿಯಲ್ಲೇ ಎಲ್ಲಾ ಗಾತ್ರಗಳ ಬಂಡೆಗಳನ್ನು ದಾಟುತ್ತಾ ಮೇಲಕ್ಕೇರಬೇಕಾಗುತ್ತದೆ.


ಜಲಧಾರೆಯ ಬುಡಕ್ಕೆ ತಲುಪಿದಾಗ ಗಮ್ಯ ಸ್ಥಾನಕ್ಕೆ ತಲುಪಿದ ಅನುಭವ. ಜಲಧಾರೆಯ ಮುಂದೆ ಇರುವ ದೊಡ್ಡ ಬಂಡೆಯ ತುದಿಯನ್ನು ಶ್ರೀಕಾಂತ್ ಏರಿ ಕುಳಿತರೆ ನಾನದರ ಬುಡದಲ್ಲಿ ಕುಳಿತು ಜಲಧಾರೆಯ ಸೌಂದರ್ಯವನ್ನು ಆನಂದಿಸತೊಡಗಿದೆವು. ಎರಡು ಹಂತಗಳಲ್ಲಿ ಸುಮಾರು ೩೫೦ ಅಡಿಗಳಷ್ಟು ಆಳಕ್ಕೆ ಈ ಜಲಧಾರೆ ಧುಮುಕುತ್ತದೆ. ಮೊದಲ ಹಂತ ೫೦ ಅಡಿಗಳಷ್ಟು ಎತ್ತರವಿದ್ದರೆ ಎರಡನೇ ಹಂತ ಸುಮಾರು ೨೭೦-೩೦೦ ಅಡಿಗಳಷ್ಟು ಎತ್ತರವಿದೆ.


ಕತ್ತೆತ್ತಿ ನೋಡಿದರೆ ಕತ್ತು ನೋಯಿಸುವಷ್ಟು ಮೇಲಕ್ಕೆ ನೋಡಬೇಕಾಗುತ್ತದೆ, ಜಲಧಾರೆಯ ಅಷ್ಟು ಸಮೀಪಕ್ಕೆ ಹೋಗಬಹುದು. ಸುಮ್ಮನೆ ಜಲಧಾರೆಯ ಮುಂದೆ ಕೂತರೆ ಮನಕ್ಕೆ ಮುದ ನೀಡುವ ಸುಂದರ ದೃಶ್ಯ. ಅಂಗಾತ ಮಲಗಿದರೆ ಆಗಸದಿಂದ ಮೈಮೇಲೆ ಜಲಧಾರೆ ಬೀಳುತ್ತಿರುವಂತಹ ಮೈನವಿರೇಳಿಸುವ ಅನುಭವ.


ಇಲ್ಲಿ ದುಸ್ಸಾಹಸ ಮಾಡಿ ಪ್ರಾಣ ಕಳಕೊಂಡವರೂ ಇದ್ದಾರೆ. ಅಂಥವರ ಬಗ್ಗೆ ಹರೀಶ ವಟಗುಟ್ಟುತ್ತಾ ಇದ್ದರೆ, ನಾವಿಬ್ಬರು ಬಳುಕುತ್ತಿರುವ ಜಲಧಾರೆಯ ಸೌಂದರ್ಯವನ್ನು ಆಸ್ವಾದಿಸುವುದರಲ್ಲಿ ಮಗ್ನರಾಗಿದ್ದೆವು.

ಭಾನುವಾರ, ಜೂನ್ 20, 2010

ಬಂಡಾಜೆಯ ಹಾವು... ರಾಯರ ನೋವು...

ಈ ಬ್ಲಾಗಿನ ಓದುಗರಿಗೆ ನನ್ನ ಗೆಳೆಯ ದಿನೇಶ್ ಹೊಳ್ಳ ಪರಿಚಿತ ಹೆಸರು. ಐದಾರು ವರ್ಷಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಚಾರಣ ಸ್ಥಳಗಳ ಬಗ್ಗೆ ದಿನೇಶ್ ಬರೆಯುತ್ತಿದ್ದರು. ಈ ಮಧ್ಯೆ ಪ್ರಜಾವಾಣಿ ಪತ್ರಿಕೆಯವರು ಚಾರಣ ಸಂಬಂಧಿತ ಏನಾದರೂ ಬರೆಯುವಂತೆ ದಿನೇಶರನ್ನು ಕೋರಿದಾಗ, ಚಾರಣ ಸ್ಥಳಗಳ ಬಗ್ಗೆ ಬರೆಯುವುದರ ಬದಲು ಚಾರಣದ ಸಮಯದಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ಬರೆಯುತ್ತಿದ್ದಾರೆ. ಪ್ರಜಾವಾಣಿ ಮಂಗಳೂರು ಆವೃತ್ತಿಯಲ್ಲಿ ಪ್ರಕಟಗೊಳ್ಳುವ ತಮ್ಮ ಈ ಲೇಖನಗಳನ್ನು ಇಲ್ಲಿ ಪ್ರಕಟಿಸಲು ಅನುಮತಿ ನೀಡಿದ ದಿನೇಶ್ ಹೊಳ್ಳರಿಗೆ ಧನ್ಯವಾದ.


ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯಲ್ಲಿ ಚಾರ್ಮಾಡಿ ಮತ್ತು ಕುದುರೆಮುಖವನ್ನು ಜೋಡಿಸುವ ದುರ್ಗದಬೆಟ್ಟದ ಬಂಡಾಜೆ ಜಲಪಾತಕ್ಕೆ ನಾವು ಚಾರಣಕ್ಕೆ ಅಣಿಯಾಗಿದ್ದಾಗ ನಮ್ಮ ಮಿತ್ರ ಬೆಂಗಳೂರಿನ ಮಹಾನಗರದ ಐಷಾರಾಮ ಬದುಕಿನಲ್ಲಿ ಮೆರೆಯುತ್ತಿದ್ದ ರಾಧಾಕೃಷ್ಣ ರಾವ್ ಎಂಬವರಿಗೆ ಸುದ್ದಿ ತಲುಪಿ ನಮ್ಮೊಂದಿಗೆ ಬಂದಿದ್ದರು. ಬೆಳ್ತಂಗಡಿಯಿಂದ ವಳಂಬ್ರ ನಾರಾಯಣ ಗೌಡರ ಮನೆಯವರೆಗೆ ಗಾಡಿಯಲ್ಲಿ ಹೋಗಿ ಅಲ್ಲಿಂದ ಕಾನನ ಶಿಖರವನ್ನೇರಿ ಸಂಜೆ ನಾಲ್ಕು ಗಂಟೆಗೆ ಬಂಡಾಜೆ ಜಲಪಾತದ ತುದಿ ತಲುಪಿದ್ದೆವು.

ರಾತ್ರಿಯ ಅಡುಗೆಗೆ ಹಾಗೂ ಶಿಬಿರಾಗ್ನಿಗೆ ಕಟ್ಟಿಗೆ ಒಟ್ಟು ಸೇರಿಸಲು ನಾವು ಹೋದಾಗ ರಾಧಾಕೃಷ್ಣ ರಾವ್ ನಮ್ಮೊಂದಿಗಿದ್ದರು. ಒಣ ಕಟ್ಟಿಗೆಯೊಂದನ್ನು ಅವರು ಎತ್ತಿದಾಗ ಅದರ ಅಡಿಯಲ್ಲಿ ಚಿಕ್ಕ ಹಾವೊಂದು ಮುದುಡಿ ಮಲಗಿತ್ತು. ಹಾವಿನ ಬಗ್ಗೆ ಏನೂ ಅರಿಯದ ಅವರಿಗೆ ಅದೊಂದು ಆಘಾತದ ಕ್ಷಣವಾಗಿತ್ತು. ಅದು ಸಾಮಾನ್ಯ ಹಾವು, ಭಯ ಪಡಬೇಡಿ ಎಂದು ನಾವು ಹೇಳಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಅವರಿರಲಿಲ್ಲ. ಅಷ್ಟರವರೆಗೆ ತುಂಬಾ ಉತ್ಸಾಹದಿಂದ ಇದ್ದ ರಾಯರಿಗೆ ಹಾವಿನ ನೋಟದಿಂದ ಎಲ್ಲವೂ ಸ್ತಬ್ಧವಾಯಿತು. ನಾವೆಷ್ಟೆ ಧೈರ್ಯ ತುಂಬಿದರೂ ಅವರ ಭಯ ಕಡಿಮೆಯಾಗುತ್ತಿರಲಿಲ್ಲ. ರಾತ್ರಿ ಊಟ ಮಾಡುವಾಗಲೂ ತನ್ನ ಪಾದದ ಅಡಿಗೆ ಟಾರ್ಚ್ ಬೆಳಕನ್ನು ಹರಡಿ ಹಾವು ಬಂದಿರಬಹುದು ಎಂದು ಸಂಶಯ ಪಡುತ್ತಿದ್ದರು.

ಊಟದ ನಂತರ ಶಿಬಿರಾಗ್ನಿಯ ಸುತ್ತಲೂ ಎಲ್ಲರೂ ಸಂತೋಷದಿಂದ ಇದ್ದಾಗ ರಾಯರಿಗೆ ಅಲ್ಲಿ ಹಾವೇ ಕಾಣಿಸುತ್ತಿತ್ತು. ನನ್ನನ್ನು ದೂರ ಕರೆದು ಅವರು ಕೇಳಿದ ಪ್ರಶ್ನೆ ಏನು ಗೊತ್ತೇ? ’ಈಗ ನಾವು ಮಲಗಿದ ಮೇಲೆ ಆ ಹಾವು ಬಂದರೆ?’ ಎಂದು. ರಾತ್ರಿ ಇಡೀ ಬೆಂಕಿ ಉರಿಯುತ್ತಿರಲಿದ್ದು ನಾವು ಬೆಂಕಿಯ ಸುತ್ತಲೂ ಮಲಗುವುದೆಂದೂ, ಬೆಂಕಿಯ ಕಾವಿಗೆ ಯಾವ ಹಾವೂ ಬರುವುದಿಲ್ಲ ಎಂದರೂ ಅವರಿಗೆ ನನ್ನ ಮಾತಲ್ಲಿ ನಂಬಿಕೆಯೇ ಇಲ್ಲ. ಅವರನ್ನು ಬೆಂಕಿಯ ಹತ್ತಿರ ಮಲಗಲು ಹೇಳಿ ಅವರ ಪಕ್ಕದಲ್ಲೇ ನಾನು ಮತ್ತು ಇತರರು ಮಲಗಿಕೊಂಡೆವು. ಆಗ ಅವರಿಗೆ ತಾನು ಹಾವಿನಿಂದ ಬಚಾವಾದರೂ ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರು. ಅವರ ಗೊಣಗಾಟ ಮುಂದುವರಿಯುತ್ತಿದ್ದಂತೆಯೇ ನಾನು ನನ್ನ ಸ್ಲೀಪಿಂಗ್ ಬ್ಯಾಗಿನ ಒಳತೂರಿ ’ಶುಭ ರಾತ್ರಿ’ ಎಂದು ಹೇಳಿ ನಿದ್ರಾಲೋಕಕ್ಕೆ ಜಾರಿದೆ.

ರಾತ್ರಿ ಒಂದೂವರೆ ಗಂಟೆಗೆ ನಾನು ಬೆಂಕಿಗೆ ಕಟ್ಟಿಗೆ ಹಾಕಲೆಂದು ಎದ್ದಾಗ ರಾಯರು ತನ್ನ ಬೆಡ್-ಶೀಟಿನಿಂದ ಮುಖ ಮಾತ್ರ ಹೊರಗೆ ಹಾಕಿ ನನ್ನನ್ನೇ ನೋಡುತ್ತಿದ್ದರು. ನಾನು ಎದ್ದಾಗ ಅವರಿಗೆ ತಾಗಿರಬಹುದು, ಅದಕ್ಕೆ ಅವರಿಗೆ ಎಚ್ಚರವಾಗಿರಬಹುದೆಂದು ಯೋಚಿಸುತ್ತಿದ್ದಾಗ ಅವರು ಹೇಳಿದ್ದು ಕೇಳಿ ಆಶ್ಚರ್ಯವಾಯಿತು. ಅವರು ಅಷ್ಟರವರೆಗೂ ನಿದ್ದೆನೇ ಮಾಡಿರಲಿಲ್ಲವಂತೆ. ಹಾವಿನ ಭಯ ಅವರನ್ನು ಕಾಡುತ್ತಲೇ ಇತ್ತು. ಅದಲ್ಲದೇ ಅವರಿಗೆ ಮೂತ್ರ ವಿಸರ್ಜನೆಗೆ ಹೋಗಲು ಇದ್ದು, ಹೋಗಲು ಹಾವಿನ ಭಯ. ಬನ್ನಿ ಎಂದಾಗ ಮನಸ್ಸಿಲ್ಲದಿದ್ದರೂ ಭಯದಿಂದಲೇ ನನ್ನೊಂದಿಗೆ ಬಂದರು. ಎರಡು ಟಾರ್ಚ್-ಗಳ ಬೆಳಕನ್ನು ಅವರ ಕಾಲ ಬುಡಕ್ಕೆ ಹಾಕಿ ’ಬನ್ನಿ... ಬನ್ನಿ...’ ಎಂದು ನಾನು ಕರೆದೊಯ್ಯುತ್ತಿರಬೇಕಾದರೆ ಟಾರ್ಚ್ ಬೆಳಕು ಆಫ್ ಆದ ಕೂಡಲೇ ಬೊಬ್ಬೆ ಹಾಕುತ್ತಿದ್ದರು. ಒಂದು ಟಾರ್ಚ್ ಬೆಳಕನ್ನು ಆ ಕಡೆ ಏನೋ ಶಬ್ದವಾಯಿತೆಂದು ಅತ್ತ ಹೊರಳಿಸಿದೆ. ಏನು ಶಬ್ದವಿರಬಹುದೆಂದು ನೀರ ಸಮೀಪವೇ ಇದ್ದ ಒಂದು ಗೆಲ್ಲನ್ನು ಹಿಡಿದು ಬಗ್ಗಿ ನೋಡಲು ನಾನು ಯತ್ನಿಸಿದಾಗ ಒಮ್ಮೆಲೇ ನಾನು ಹೆದರಿಹೋದೆ. ಯಾಕೆಂದರೆ ನಾನು ಹಿಡಿದದ್ದು ಗೆಲ್ಲಾಗಿರಲಿಲ್ಲ. ಅದು ಎರಡು ಗೆಲ್ಲುಗಳ ನಡುವೆ ಮಲಗಿದ್ದ ಹಸಿರು ಹಾವಾಗಿತ್ತು!

ಹಾವಿನ ಬಣ್ಣ ಹಸಿರಾಗಿದ್ದರಿಂದ ಆ ಕತ್ತಲಲ್ಲಿ ಅದು ಹಸಿರು ಗೆಲ್ಲುಗಳ ನಡುವೆ ಗೆಲ್ಲಿನಂತೇ ಕಾಣುತ್ತಿತ್ತು. ನಾನು ಒಮ್ಮೆಲೇ ’ಹಾವು’ ಎಂದು ಹಿಂದಕ್ಕೆ ಬಂದುದನ್ನು ರಾಯರು ಗಮನಿಸುತ್ತಲೇ ಇದ್ದು ಮತ್ತೆ ಅವರಲ್ಲಿ ಹಾವಿನ ಭಯ ವೃದ್ಧಿಯಾಗತೊಡಗಿತು. ಮೊದಲೇ ಹಾವಿನ ಭಯದಿಂದ ನಿದ್ರೆಯೂ ಮಾಡದ ಅವರು ಈಗಂತೂ ಪ್ರಜ್ಞೆ ತಪ್ಪಿ ಬೀಳುವುದೊಂದೇ ಬಾಕಿ. ನಾನು ಅವರನ್ನು ಮತ್ತೆ ಮಲಗುವ ಜಾಗಕ್ಕೆ ಕರೆದುಕೊಂಡು ಹೋಗೋಣವೆಂದು ಟಾರ್ಚ್ ಬೆಳಕು ಹಾಕಿದಾಗ ರಾಯರು ಅಲ್ಲಿ ನಾಪತ್ತೆ! ಸಂಜೆ ಚಿಕ್ಕ ಹಾವನ್ನು ನೋಡಿಯೇ ಹೆದರಿದ್ದ ಅವರು ಈಗ ಅದಕ್ಕಿಂತ ೩ ಪಟ್ಟು ದೊಡ್ಡ ಹಸಿರು ಹಾವನ್ನು ಕಂಡು ಇನ್ನಷ್ಟು ಹೆದರಿ ಓಡೋಡಿ ಬಂದು ಬೆಡ್ ಶೀಟ್ ಹೊದೆದು ಮಲಗಿಬಿಟ್ಟಿದ್ದರು.

ಬೆಳಕಾಗಿ ಚೆನ್ನಾದ ಬಿಸಿಲು ಬಿದ್ದರೂ ರಾಯರ ಅಳುಕು ಮಾತ್ರ ಕಡಿಮೆಯಾಗಲೇ ಇಲ್ಲ. ’ಚಾರಣದ ಉತ್ಸಾಹ’ವೆಲ್ಲವನ್ನೂ ಹಾವು ನುಂಗಿಬಿಟ್ಟಿತ್ತು. ಅದು ಅವರ ಮೊದಲ ಹಾಗೂ ಕೊನೆಯ ಚಾರಣವಾಗಿದ್ದು, ಇಂದಿಗೂ ಫೋನಿನಲ್ಲಿ ಕುಶಲೋಪರಿ ಮಾತನಾಡುತ್ತಿದ್ದರೆ ಚಾರಣ ಎಂದಾಕ್ಷಣ ಕಾಲ್ ಕಟ್ ಮಾಡಿಬಿಡುತ್ತಾರೆ. ಬಂಡಾಜೆಯ ಹಾವು ಅವರಿಗೆ ಆ ರೀತಿ ಕಾವು ಕೊಟ್ಟಿತ್ತು.

ದಿನೇಶ್ ಹೊಳ್ಳ.

ಗುರುವಾರ, ಜೂನ್ 17, 2010

ಭಾನುವಾರ, ಜೂನ್ 13, 2010

ಮಹಾಲಿಂಗೇಶ್ವರ ದೇವಾಲಯ - ಮಾವುತನಹಳ್ಳಿ


ಈ ದೇವಸ್ಥಾನವನ್ನು ಹುಡುಕಿ ತೆಗೆಯಬೇಕಾದರೆ ಸಾಕು ಸಾಕಾಯಿತು. ಮಾವುತನಹಳ್ಳಿ ತಲುಪಲು ಸುಮಾರು ಸಮಯ ತಗುಲಿತು. ಅಲ್ಲೇ ಮತ್ತೆ ಹಳ್ಳಿಗರೊಡನೆ ಚರ್ಚೆ. ಅಂತೂ ಕಡೆಗೆ ಮಹಾಲಿಂಗೇಶ್ವರ ದೇವಾಲಯ ತಲುಪಿದೆವೆನ್ನಿ. ಶಿಥಿಲಗೊಂಡಿರುವ ದೇವಾಲಯವಿದು. ಆದರೂ ಪೂಜೆ ನಿತ್ಯ ನಡೆಯುತ್ತದೆ.


ದೇವಾಲಯದ ಪ್ರಮುಖ ದ್ವಾರ ೫ ತೋಳಿನದ್ದಾಗಿದ್ದು ದ್ವಾರಪಾಲಕರನ್ನು ಹೊಂದಿದೆ. ಈ ದ್ವಾರಕ್ಕೆ ಸುಣ್ಣ ಬಳಿಯಲಾಗಿದೆ. ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಒಳಗೊಂಡಿರುವ ದೇವಾಲಯದ ಒಳಗೆ ಗೋಡೆಗಳಿಗೆಲ್ಲಾ ಧೂಳು ಅಂಟಿಕೊಂಡಿದೆ. ಗೋಡೆಗಳಿಗೆ ಅದೇನೋ ಬಣ್ಣ ಬಳಿದು ಅಂದಗೆಡಿಸಿದ್ದಾರೆ.


ತ್ರಿಕೂಟ ಶೈಲಿಯ ಈ ದೇವಾಲಯದ ಪ್ರಮುಖ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಉಳಿದೆರಡು ಗರ್ಭಗುಡಿಗಳಲ್ಲಿ ಒಂದರಲ್ಲಿ ಉಗ್ರನರಸಿಂಹ ಹಿರಣ್ಯಕಷಿಪುವಿನ ಉದರ ಬಗೆಯುವ ಮೂರ್ತಿ ಇದ್ದರೆ ಇನ್ನೊಂದು ಗರ್ಭಗುಡಿಯಲ್ಲಿರುವ ಸುಂದರ ಮೂರ್ತಿ ಯಾವ ದೇವರದ್ದು ಎಂದು ತಿಳಿಯಲಿಲ್ಲ. ಬಲ್ಲವರು ತಿಳಿಸಿದರೆ ಒಳ್ಳೆಯದು.


ನಾಲ್ಕು ಕಂಬಗಳ ನವರಂಗದಲ್ಲಿ ಆಸೀನನಾಗಿರುವ ಕರಿಕಲ್ಲಿನ ನಂದಿಯ ಮೂರ್ತಿ ಬಹಳ ಸುಂದರವಾಗಿದ್ದು ಫಳಫಳನೆ ಹೊಳೆಯುತ್ತದೆ. ಸಮೀಪದಲ್ಲೇ ದೊರಕಿರಬಹುದಾದ ಗಣೇಶನ ಸುಂದರ ಮೂರ್ತಿಯನ್ನು ನವರಂಗದಲ್ಲಿ ಇರಿಸಲಾಗಿದೆ. ಜೊತೆಗೆ ಇನ್ನೂ ೩ ಬೇರೆ ಬೇರೆ ಮೂರ್ತಿಗಳನ್ನೂ ಇರಿಸಲಾಗಿದೆ. ಅವೇನೆಂದು ತಿಳಿಯಲಿಲ್ಲ.


ದೇವಾಲಯದ ಹೊರಗೋಡೆ ಎಲ್ಲಾ ದಿಕ್ಕುಗಳಲ್ಲೂ ಕುಸಿಯುತ್ತಿದೆ. ಒಂದು ಕಡೆ ಅಕ್ಕಪಕ್ಕದಲ್ಲಿರುವ ಎರಡು ಕೆತ್ತನೆಗಳು ಗತವೈಭವವನ್ನು ಸಾರಿ ಹೇಳುವಂತೆ ನಿಂತುಕೊಂಡಿವೆ. ದೇವಾಲಯದ ಹೊರಗೋಡೆಯ ತುಂಬಾ ಇಂತಹ ಅಪೂರ್ವ ಕೆತ್ತನೆಗಳೇ ತುಂಬಿದ್ದವು ಎಂದು ಇವೆರಡು ಕೆತ್ತನೆಗಳನ್ನು ನೋಡಿ ಊಹಿಸಬಹುದು.


ದೇವಾಲಯದ ಹಿಂಭಾಗದಲ್ಲಿ ಪ್ರಮುಖ ಗರ್ಭಗುಡಿಯ ಆಸುಪಾಸಿನಲ್ಲಿ ಉರುಳಿಬಿದ್ದಿರುವ ಕಲ್ಲುಗಳನ್ನು ಗಮನಿಸಿದರೆ ಮೇಲೆ ಗೋಪುರವಿತ್ತೇನೋ ಎಂದು ಅನಿಸದೆ ಇರಲಾರದು. ಅಲ್ಲೆಲ್ಲ ಈಗ ಗಿಡಗಂಟಿಗಳು ಮತ್ತು ಪೊದೆಗಳು ತುಂಬಿಕೊಂಡಿವೆ. ದೇವಾಲಯ ಪುರಾತತ್ವ ಇಲಾಖೆಯ ಸುಪರ್ದಿಗೆ ಒಳಪಟ್ಟಿಲ್ಲ. ಶಿಥಿಲವಾಗಿರುವ ಹಿಂದೆ ಇದೂ ಒಂದು ಕಾರಣವಿರಬಹುದು.

ಶನಿವಾರ, ಜೂನ್ 05, 2010

ವೀರಭದ್ರೇಶ್ವರ ದೇವಾಲಯ - ನಿಲ್ಕುಂದ


ಸೂರು ಇಲ್ಲದ ಅಪರೂಪದ ದೇವಾಲಯವಿದು. ನೀಲ್ಕುಂದದ ವೀರಭದ್ರೇಶ್ವರನಿಗೆ ಮೊದಲಿನಿಂದಲೇ ಸೂರು ಇರಲಿಲ್ಲ ಎಂಬುವುದು ಹಳ್ಳಿಗರ ವಾದ. ಈಗ ೫ ವರ್ಷದ ಹಿಂದೆ ಅಲ್ಲಿ ಇಲ್ಲಿ ಕಾಡಿ ಬೇಡಿ ದೇಣಿಗೆ ಒಟ್ಟು ಮಾಡಿ ಹಳ್ಳಿಗರೇ ಕಾಂಕ್ರೀಟ್ ಸೂರನ್ನು ನಿರ್ಮಿಸಿದ್ದಾರೆ. ಈ ಕೆಲಸವಿನ್ನೂ ಪೂರ್ತಿಗೊಂಡಿಲ್ಲ. ನೀಲ್ಕುಂದ ಬಸ್ಸು ನಿಲ್ದಾಣದ ಸಮೀಪದಲ್ಲೇ ಈ ದೇವಾಲಯವಿದ್ದರೂ ಪ್ರವಾಸಿಗರ ಗಮನ ಸೆಳೆಯುವುದರಲ್ಲಿ ದೇವಾಲಯ ವಿಫಲಗೊಳ್ಳುತ್ತದೆ. ಮೊದಲ ನೋಟಕ್ಕೆ ಏನೂ ವಿಶೇಷ ಕಾಣಬರುವುದಿಲ್ಲ. ದೊಡ್ಡ ಗಾತ್ರದ ಕಪ್ಪು ಕಲ್ಲುಗಳನ್ನು ಒತ್ತೊತ್ತಾಗಿ ನಿಲ್ಲಿಸಿ ಆಯತಾಕಾರದ ಏನೋ ಒಂದು ಕಟ್ಟಡವನ್ನು ನಿರ್ಮಿಸಿದಂತೆ ತೋರುತ್ತದೆ. ಈಗ ನಿರ್ಮಿಸಲಾಗಿರುವ ಕಾಂಕ್ರೀಟ್ ಛಾವಣಿ ಮತ್ತು ಮೊದಲಿನಿಂದಲೂ ಇದ್ದ ಕರಿಕಲ್ಲಿನ ಗೋಡೆಗಳು ಒಂದಕ್ಕೊಂದು ಮ್ಯಾಚ್ ಆಗುವುದಿಲ್ಲ. ಸರಕಾರದಿಂದ ಅನುದಾನ ಬರದೇ ಅರ್ಧಕ್ಕೆ ನಿಲ್ಲಿಸಲಾಗಿರುವ ಯಾವುದೋ ಕಟ್ಟಡ ಎಂಬ ಭಾವನೆ ಬರದೇ ಇರಲಾರದು. ದೇವಾಲಯ ಅಂತ ಗೊತ್ತೇ ಆಗುವುದಿಲ್ಲ.


ಊರಿನ ಸಮೀಪವಿರುವ ಜಲಧಾರೆಯ ಕರಿಕಲ್ಲುಗಳನ್ನು ಬಳಸಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಜಲಧಾರೆಯ ಸಮೀಪ ದೇವಾಲಯಕ್ಕೆಂದು ಕಲ್ಲುಗಳನ್ನು ಕೆತ್ತಿ ಅಲ್ಲೇ ಬಿಟ್ಟಿರುವುದನ್ನು ಈಗಲೂ ಕಾಣಬಹುದು. ಜಲಧಾರೆಯಿಂದ ದೇವಾಲಯದವರೆಗೆ ಕಲ್ಲುಗಳನ್ನು ಸಾಗಿಸಿರುವುದೇ ಸೋಜಿಗದ ವಿಷಯ. ದೇವಾಲಯದ ನಿರ್ಮಾಣವನ್ನು ಅರ್ಧಕ್ಕೇ ಯಾಕೆ ನಿಲ್ಲಿಸಲಾಯಿತು ಎಂಬ ಬಗ್ಗೆ ಮಾಹಿತಿ ನನಗೆ ಸಿಗಲಿಲ್ಲ. ಹಳ್ಳಿಗರ ಪ್ರಕಾರ ನಡೆದಿರುವುದು ಇದು - ’ಒಂದೇ ರಾತ್ರಿಯಲ್ಲಿ ದೇವಾಲಯವನ್ನು ನಿರ್ಮಿಸಬೇಕೆಂದು ದೇವತೆಗಳು(!) ಪಣ ತೊಟ್ಟಿದ್ದು, ಸೂರು ನಿರ್ಮಾಣಕ್ಕೆ ಕೈ ಹಾಕಬೇಕೆನ್ನುವಾಗ ಬೆಳಕು ಹರಿದಿದ್ದರಿಂದ ದೇವಾಲಯದ ನಿರ್ಮಾಣ ಅಷ್ಟಕ್ಕೇ ನಿಂತುಹೋಯಿತು. ಜಲಧಾರೆಯ ಬಳಿ ಕಾಣುವ ಒಪ್ಪವಾಗಿ ಕೆತ್ತಲಾಗಿರುವ ಕಲ್ಲುಗಳನ್ನು ಕೂಡಾ ಬೆಳಕು ಹರಿದಿದ್ದರಿಂದ ಅಲ್ಲೇ ಬಿಟ್ಟು ದೇವತೆಗಳು ಹಾರಿಹೋದರು’ - ಅಬ್ಬಾ, ಕತೆ ಹಣೆಯುವುದು ಎಂದರೆ ಇದು!


ದೇವಾಲಯ ಎಲ್ಲಾ ರೀತಿಯಲ್ಲೂ ಅಪೂರ್ಣವಾಗಿದೆ. ಹೊರಗೋಡೆಯಲ್ಲಿರುವ ಕೆತ್ತನೆಗಳಿರಲಿ, ೩ ದ್ವಾರಗಳ ನಿರ್ಮಾಣವಿರಲಿ, ಗರ್ಭಗುಡಿಯ ಪ್ರದಕ್ಷಿಣಾ ಪಥವಿರಲಿ, ನವರಂಗದ ಕಂಬಗಳಿರಲಿ ಹೀಗೆ ಎಲ್ಲಿ ಗಮನಿಸಿದರೂ ದೇವತೆಗಳು ಅದ್ಯಾವ ಗಡಿಬಿಡಿಯಲ್ಲಿದ್ದರೋ ಎಂದು ಅಚ್ಚರಿ ಹುಟ್ಟಿಸುತ್ತದೆ. ದೇವಾಲಯ ನಿರ್ಮಾಣದಲ್ಲಿ ಎಂದೂ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಆ ಕಾಲದಲ್ಲಿ ಏನೋ ಒಂದು ಮಹತ್ತರವಾದ ಘಟನೆ ಸಂಭವಿಸಿದ್ದು ದೇವಾಲಯ ನಿರ್ಮಾಣ ಇಷ್ಟಕ್ಕೇ ನಿಂತುಹೋಗಿದ್ದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಿರಬಹುದು.


ಯಾವಾಗ ದೇವಾಲಯ ನಿರ್ಮಿಸಲಾಯಿತು ಎಂಬ ಮಾಹಿತಿಯೂ ನನಗೆ ಸಿಗಲಿಲ್ಲ. ೧೫ನೇ ಶತಮಾನದಲ್ಲಿ ವೈಭವದಿಂದ ಮೆರೆದಿದ್ದ ದೇವಾಲಯ ಎಂದಷ್ಟೇ ತಿಳಿದುಬಂತು. ಇಂದಿನ ಶೋಚನೀಯ ಸ್ಥಿತಿ ನೋಡಿದರೆ ಅಂದು ರಥೋತ್ಸವ ಮತ್ತು ಗುಗ್ಗಳ ಸೇವೆಗಳು ನಡೆಯುತ್ತಿದ್ದವು ಎಂದರೆ ನಂಬಲಾಗದು. ವೀರಭದ್ರೇಶ್ವರನಿಗೆ ಇಂದು ಪೂಜೆ ಸಲ್ಲಿಸಲು ಬರುವವರ ಸಂಖ್ಯೆ ಕೂಡಾ ವಿರಳ. ಇದೊಂದು ವೀರಶೈವ ಸಂಪ್ರದಾಯದ ದೇವಾಲಯ.


ವಿಶಾಲ ನವರಂಗ, ಅಂತರಾಳ, ಪ್ರದಕ್ಷಿಣಾ ಪಥ ಮತ್ತು ಗರ್ಭಗುಡಿಗಳನ್ನು ದೇವಾಲಯ ಹೊಂದಿದೆ. ಪ್ರಮುಖ ದ್ವಾರದ ಇಕ್ಕೆಲಗಳಲ್ಲಿ ನಿಂತಿರುವ ಭಂಗಿಯಲ್ಲಿ ತಲಾ ಎರಡು ಸಿಂಹಗಳ ಕೆತ್ತನೆಯಿದೆ. ಪಾರ್ಶ್ವಕ್ಕೊಂದರಂತೆ ಇನ್ನೆರಡು ದ್ವಾರಗಳಿದ್ದೂ, ಎಲ್ಲಾ ದ್ವಾರಗಳು ನವರಂಗಕ್ಕೇ ತೆರೆದುಕೊಳ್ಳುತ್ತವೆ. ನವರಂಗದಿಂದ ಸುಮಾರು ೩ ಅಡಿ ಎತ್ತರದಲ್ಲಿ ಅಂತರಾಳವಿದೆ. ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರಂತೆ ಕೆತ್ತನೆಗಳಿವೆ ಮತ್ತು ಇಲ್ಲಿಂದಲೇ ಪ್ರದಕ್ಷಿಣಾ ಪಥ ಆರಂಭವಾಗುತ್ತದೆ.


ಗರ್ಭಗುಡಿಯ ಇಕ್ಕೆಲಗಳಲ್ಲೂ ಇನ್ನೆರಡು ಕೆತ್ತನೆಗಳಿವೆ. ಗರ್ಭಗುಡಿಯ ದ್ವಾರದ ಮೇಲೆ ಹೆಚ್ಚಿನೆಡೆ ಗಜಲಕ್ಷ್ಮೀಗೆ ಆನೆಗಳು ನಮಸ್ಕರಿಸುವ ಕೆತ್ತನೆಯಿರುತ್ತದೆ. ಇಲ್ಲಿ ಶಿವಲಿಂಗಕ್ಕೆ ಆನೆಗಳು ನಮಸ್ಕರಿಸುವ ಕೆತ್ತನೆಯಿದೆ. ಗರ್ಭಗುಡಿಯಲ್ಲಿರುವ ವೀರಭದ್ರೇಶ್ವರನ ಮೂರ್ತಿಯನ್ನು ಕೆಂಪು ಹೊದಿಕೆಯಿಂದ ಸುತ್ತಲಾಗಿತ್ತು.


ದೇವಾಲಯದ ಕರಿಕಲ್ಲುಗಳ ಮೇಲೆ ಕಪ್ಪು ಹಾವಸೆ ಬೆಳೆದು ಇದ್ದ ಕೆತ್ತನೆಗಳೆಲ್ಲಾ ಸಮೀಪಕ್ಕೆ ಹೋಗಿ ನಿಂತರೂ ಗಮನಕ್ಕೆ ಬರುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಸುಂದರ ಕೆತ್ತನೆಗಳಿವೆ. ಬೇರೆಲ್ಲೂ ಕಾಣದ ಕೆಲವು ಎಕ್ಸ್-ಕ್ಲೂಸಿವ್ ಕೆತ್ತನೆಗಳ ಒಡೆಯ ಈ ವೀರಭದ್ರೇಶ್ವರ. ಬೇಡರ ಕಣ್ಣಪ್ಪ ತನ್ನ ಕಣ್ಣನ್ನು ಕೀಳುವ ಕೆತ್ತನೆ ಗಮನ ಸೆಳೆಯಿತು.


ಗಣೇಶನ ಕೆತ್ತನೆ, ಆಕಳು ಕರುವಿಗೆ ಹಾಲುಣಿಸುವ ಕೆತ್ತನೆ, ಹನುಮಂತನ ಕೆತ್ತನೆ, ಹುಲಿ ಜಿಂಕೆಯನ್ನು ನೋಡುತ್ತಾ ಘರ್ಜಿಸುವ ಕೆತ್ತನೆ, ಅನೇಕ ಮಿಥುನ ಶಿಲ್ಪಗಳು, ಶೌಚಕ್ಕೆ ತೆರಳಿದ ಬಳಿಕ ತೊಳೆದುಕೊಳ್ಳುವ ಕೆತ್ತನೆ, ಇತ್ಯಾದಿ.


ಪುರಾತತ್ವ ಇಲಾಖೆಯ ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿದ್ದಾರೆಯೇ ವಿನ: ಇಲಾಖೆಯ ಸುಪರ್ದಿಗೆ ಒಳಪಡಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಊರಿನವರಾದರೂ ಕೆತ್ತನೆಗಳ ಮೇಲಿರುವ ಧೂಳು, ಹಾವಸೆಗಳನ್ನು ಶುದ್ಧಗೊಳಿಸಿದರೆ ಇದ್ದದ್ದನ್ನಾದರೂ ಉಳಿಸಿಕೊಳ್ಳಬಹುದು.

ಮಾಹಿತಿ: ಸಂದೇಶ ಹೆಗಡೆ