ಮಂಗಳವಾರ, ಜೂನ್ 17, 2008

ಹರಿಹರೇಶ್ವರ ದೇವಾಲಯ - ಹರಿಹರ


ಹರಿಹರ ನಗರದ ಮಧ್ಯದಲ್ಲೇ ಹರಿಹರೇಶ್ವರ ದೇವಾಲಯ ಇದೆ. ದೇವಾಲಯದ ಸುತ್ತಲೂ ಮನೆಗಳು. ಇಸವಿ ೧೨೨೪ರಲ್ಲಿ ಹೊಯ್ಸಳ ದೊರೆ ೨ನೇ ವೀರ ನರಸಿಂಹನ ದಂಡನಾಯಕನಾಗಿದ್ದ ಪೊಲ್ವಾಳನು ಈ ದೇವಾಲಯವನ್ನು ನಿರ್ಮಿಸಿದನೆಂದು ಶಾಸನಗಳು ಹೇಳುತ್ತವೆ.

ಗರ್ಭಗುಡಿ, ಅಂತರಾಳ, ನವರಂಗ ಮತ್ತು ವಿಶಾಲವಾದ ಮುಖಮಂಟಪಗಳನ್ನು ಈ ದೇವಾಲಯ ಹೊಂದಿದೆ. ಇಲ್ಲಿ ಮುಖಮಂಟಪವೇ ಸುಖನಾಸಿ. ಮುಖಮಂಟಪದಲ್ಲಿ ೬೦ ಕಲಾತ್ಮಕ ಕಂಬಗಳ ರಚನೆಯಿದೆ. ಇವು ಹೊಯ್ಸಳ ಶೈಲಿಯ ಪ್ರತಿಬಿಂಬ ನೇರವಾಗಿಯೂ ತಲೆಕೆಳಗಾಗಿಯೂ ಕಾಣಿಸುವ ಕಂಬಗಳು.

ಮುಖಮಂಟಪವನ್ನು ಸುಂದರವಾಗಿ ನಿರ್ಮಿಸಲಾಗಿದೆಯಲ್ಲದೇ ದೇವಾಲಯದ ಪ್ರಮುಖ ದ್ವಾರ ಮುಖಮಂಟಪಕ್ಕೇ ಇದೆ. ಅಕ್ಕ ಪಕ್ಕದಲ್ಲಿ ಇನ್ನೆರಡು ದ್ವಾರಗಳು ಮುಖಮಂಟಪಕ್ಕೆ ತೆರೆದುಕೊಳ್ಳುತ್ತವೆ. ನವರಂಗಕ್ಕೆ ೩ ದ್ವಾರಗಳಿವೆ. ನವರಂಗಕ್ಕೆ ಪ್ರಮುಖ ದ್ವಾರ ಮುಖಮಂಟಪದಿಂದ ಇದೆ. ದೇವಾಲಯದ ಎಡ ಮತ್ತು ಬಲ ಪಾರ್ಶ್ವಗಳಿಂದ ನವರಂಗಕ್ಕೆ ೨ ದ್ವಾರಗಳಿವೆ ಮತ್ತು ಇವನ್ನು ಮುಚ್ಚಲಾಗಿದೆ. ಈ ಎರಡೂ ದ್ವಾರಗಳು ಸಣ್ಣ ಸುಂದರ ಮುಖಮಂಟಪಗಳನ್ನು ಹೊಂದಿವೆ.

ಹರಿಹರೇಶ್ವರ ಮೂರ್ತಿಯು ಶಿವನ ದೇಹದ ಅರ್ಧಭಾಗ ಮತ್ತು ವಿಷ್ಣುವಿನ ದೇಹದ ಅರ್ಧಭಾಗದಿಂದ ಕೂಡಿದ್ದು, ಎರಡೂ ಸೇರಿ ಹರಿಹರೇಶ್ವರನಾಗಿದೆ. ಇದೇ ಕಾರಣದಿಂದ ದೇವಾಲಯದಲ್ಲೆಲ್ಲೂ ನಂದಿ ಕಾಣಸಿಗುವುದಿಲ್ಲ. ಆದರೆ ಹರಿಹರೇಶ್ವರ ದೇವಾಲಯದ ಬಲಕ್ಕೆ ಗರ್ಭಗುಡಿಗೆ ಸಮಾನಾಂತರವಾಗಿ ಸಣ್ಣದಾದ ಶಿವ ದೇವಾಲಯವೊಂದಿದೆ. ನಂದಿ ಈ ಸಣ್ಣ ದೇವಾಲಯದ ಹೊರಗಡೆ ಆಸೀನನಾಗಿದ್ದಾನೆ. ಅಲ್ಲೇ ಮುಂದೆ ರಾಮೇಶ್ವರನ ಗುಡಿಯೊಂದಿದೆ. ದೇವಾಲಯದ ಗೋಪುರ ಸುಣ್ಣ ಬಳಿದಿರುವ ಕಾರಣ ನೋಡಲು ಯೋಗ್ಯವಾಗಿಲ್ಲ. ಕಪ್ಪು ಬಣ್ಣದ ಹರಿಹರೇಶ್ವರನ ಮೂರ್ತಿಯು ೭ ಅಡಿಯಷ್ಟು ಎತ್ತರವಿದ್ದು ಆಕರ್ಷಕವಾಗಿದೆ.

ದೇವಾಲಯದ ಮುಂದೆ ಎರಡೂ ಪಾರ್ಶ್ವಗಳಲ್ಲಿ ಅತ್ಯಾಕರ್ಷಕವಾದ ದೀಪಸ್ತಂಭಗಳಿವೆ. ಈ ಎರಡೂ ದೀಪಸ್ತಂಭಗಳ ಬುಡದಲ್ಲಿ ಸಣ್ಣ ನಂದಿ ಮೂರ್ತಿಯನ್ನು ಕೆತ್ತಲಾಗಿದೆ.

ಮಾಹಿತಿ: ಸಾಂತೇನಹಳ್ಳಿ ಕಾಂತರಾಜ್

8 ಕಾಮೆಂಟ್‌ಗಳು:

ಹಂಸಾನಂದಿ Hamsanandi ಹೇಳಿದರು...

ರಾಜೇಶ ನಾಯ್ಕರೆ,

ಚೋಳರಾಜ ವೀರನರಸಿಂಹನ ದಂಡನಾಯಕ ಪೊಲ್ವಾಳ ೧೧೪೫ರಲ್ಲಿ ನಿರ್ಮಿಸಿದ್ದು ಎಂಬ ದಾಖಲೆ ಸರಿಯಾಗಿದೆಯೇ?

ಏಕೆ ಕೇಳುವೆನೆಂದರೆ,

೧.ಚೋಳರ ರಾಜಮನೆತನದ ಸಾಲಿನಲ್ಲಿ ಆ ಕಾಲದಲ್ಲಿದ್ದುದ್ದು ರಾಜರಾಜ ಚೋಳ/ರಾಜೇಂದ್ರ ಚೋಳರು

೨. ಈ ದೇವಾಲಯದಲ್ಲಿ (ಹೆಚ್ಚಾಗಿ ಮುಖ ಮಂಟಪದಲ್ಲಿ) ಹೊಯ್ಸಳ ಶೈಲಿಯ ಪ್ರಭಾವ ಎದ್ದು ಕಾಣುತ್ತಿದೆ. (ಇದೇ ರೀತಿಯ ಮುಖಮಂಟಪಗಳನ್ನು ಬನವಾಸಿಯ ಮಧುಕೇಶ್ವರ, ಕೋರವಂಗಲದ ಭೂಚೇಶ್ವರ, ಮತ್ತು ಬೆಳವಾಡಿಯ ತ್ರಿಕೂಟ ದೇವಾಲಯಗಳಲ್ಲೂ ನೋಡಬಹುದು)

೩.ಹೊಯ್ಸಳ ನರಸಿಂಹ (ಇವನಿಗೆ ವೀರನರಸಿಂಹನೆಂಬ ಹೆಸರೂ ಇತ್ತು - ಇವನು ಹೊಯ್ಸಳ ವಿಷ್ಣುವರ್ಧನನ ಮಗ, ಅವನ ನಂತರ ಪಟ್ಟಕ್ಕೆ ಬಂದವನು) ನ ಕಾಲ ಈ ದೇವಾಲಯಕ್ಕೆ ನೀವು ಕೊಟ್ಟಿರುವ ಕಾಲಕ್ಕೆ (೧೧೪೫) ಸರಿಹೊಂದುವಂತಿದೆ.

ಇನ್ನೂ ಹೆಚ್ಚಿನ ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿ.

-ಹಂಸಾನಂದಿ.

Harish - ಹರೀಶ ಹೇಳಿದರು...

ನಾನು ಹುಟ್ಟಿದಾಗಿನಿಂದ ೨೦ ವರ್ಷ ಹರಿಹರದಲ್ಲೇ ಇದ್ದವನು. ನನಗೆ ತಿಳಿದಿರುವ ಪ್ರಕಾರ ಇದು ಹೊಯ್ಸಳರ ದೇವಸ್ಥಾನ.

ಇನ್ನೊಂದು ವಿಷಯ: ಈ ದೇವಸ್ತಾನದ ಪಕ್ಕದಲ್ಲಿ ಒಂದು ಉದ್ಭವ ಗಣಪತಿಯಿದೆ. ದಿನೇ ದಿನೇ ಅದು ಬೆಳೆಯುತ್ತಿದೆ.

ರಾಜೇಶ್ ನಾಯ್ಕ ಹೇಳಿದರು...

ಹಂಸಾನಂದಿ,

ನಾನು ನೀಡಿರುವುದು ತಪ್ಪು ಮಾಹಿತಿ ಎಂದು ನಿಮ್ಮ ಕಮೆಂಟ್ ಓದಿದ ಬಳಿಕ ತಿಳಿದುಕೊಂಡೆ. ಪ್ರಮಾದವಾಯಿತು, ಕ್ಷಮಿಸಿ. ದೇವಾಲಯ ನಿರ್ಮಿಸಿದ ದೊರೆ ಮತ್ತು ದಂಡನಾಯಕನ ಹೆಸರುಗಳು ಸರಿಯಾಗಿವೆ ಆದರೆ 'ಹೊಯ್ಸಳ' ಆಗುವ ಬದಲು 'ಚೋಳ' ಎಂದಾಯಿತು. ತುಂಗಭದ್ರಾ ನದಿಗುಂಟ ಅಧಿಪತ್ಯ ನಡೆಸಿದವರು ಕಲ್ಯಾಣಿ ಚಾಲುಕ್ಯರು (ಉತ್ತರದಲ್ಲಿ) ಮತ್ತು ಹೊಯ್ಸಳರು (ದಕ್ಷಿಣದಲ್ಲಿ). ಹೀಗಿರುವಾಗ ಚೋಳರು ಎಲ್ಲಿಂದ ಬಂದು ಈ ದೇವಾಲಯವನ್ನು ನಿರ್ಮಿಸಿದರು ಎಂಬ ಸಂಶಯ ನನಗೆ ಬಂದಿತ್ತು. ಅದರಲ್ಲೂ ಮುಖಮಂಟಪ ಮತ್ತು ಅದರಲ್ಲಿನ ಕಂಬಗಳ ರಚನೆ ನೋಡಿದ ಬಳಿಕವಂತೂ ಚೋಳರು ಈ ದೇವಾಲಯದ ನಿರ್ಮಾತೃರು ಇರಲಾರರೆಂದು ಬಹಳ ಸಂಶಯ ಬಂದರೂ, ಪ್ರಜಾವಾಣಿಯಲ್ಲಿ ಬಂದಿದ್ದ ಲೇಖನವನ್ನು ಆಧಾರವಾಗಿಟ್ಟುಕೊಂಡು ನಾನು ದೇವಾಲಯ ನೋಡಲು ತೆರಳಿದ್ದರಿಂದ ಅದರಲ್ಲಿ ತಪ್ಪು ಮಾಹಿತಿ ನೀಡಲಾರರು ಎಂದು ಅದರಲ್ಲಿ 'ಚೋಳ' ಎಂದಿದ್ದರಿಂದ ಹಾಗೇ ಇಲ್ಲಿ ಬರೆದುಬಿಟ್ಟೆ. ಇಷ್ಟೇ ಅಲ್ಲದೆ ದೇವಾಲಯ ನಿರ್ಮಿಸಿದ ಇಸವಿಯನ್ನೂ ೧೧೪೫ ಎಂದು ಪ್ರಜಾವಾಣಿಯ ಈ ಲೇಖನದಲ್ಲಿ ತಪ್ಪಾಗಿ ನೀಡಲಾಗಿತ್ತು ಎಂಬುದು ಈಗ ಅರಿವಿಗೆ ಬಂತು. ದೇವಾಲಯ ನಿರ್ಮಾಣಗೊಂಡದ್ದು ೧೨೨೪ರಲ್ಲಿ! ಆಗ ಹೊಯ್ಸಳ ನರಸಿಂಹನ(ಒಂದನೇ ವೀರ ನರಸಿಂಹ)ಮೊಮ್ಮಗ ೨ನೇ ವೀರ ನರಸಿಂಹ ಆಡಳಿತ ನಡೆಸುತ್ತಿದ್ದ.

ಮತ್ತೊಮ್ಮೆ ಕ್ಷಮೆಯಿರಲಿ. ಎಚ್ಚರಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಟಿಪ್ಪಣಿ ಓದಿದ ಬಳಿಕ ಸಂಬಂಧಪಟ್ಟ ತಿದ್ದುಪಡಿಗಳನ್ನು ಲೇಖನದಲ್ಲಿ ಮಾಡಿರುವೆ. ಇನ್ನು ಮುಂದೆ ದೇವಾಲಯಗಳ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಬರೆಯುತ್ತೇನೆ. ಪ್ರಾಮಿಸ್.


ಹರೀಶ್,
ನಿಮಗೆ ತಿಳಿದದ್ದೇ ಸರಿ. ನಾನು ಬರೆದದ್ದು ತಪ್ಪು. ಕ್ಷಮೆ ಯಾಚಿಸುತ್ತೇನೆ. ತಪ್ಪಾಗಿದ್ದನ್ನು ಗಮನಕ್ಕೆ ತಂದುದಕ್ಕೆ ಧನ್ಯವಾದ. ತಿದ್ದುಪಡಿ ಮಾಡಿದ್ದೇನೆ.

Harish - ಹರೀಶ ಹೇಳಿದರು...

ರಾಜೇಶ್, ನನ್ನ ಮೇಲೆ ಸಿಟ್ಟಾಗಿ ಕಮೆಂಟ್ ಬರೆದಂತಿದೆ!!
ಸುಮ್ಮನೆ ಹೇಳಿದೆ ;-)

ನನ್ನ ಕಮೆಂಟಿನಲ್ಲಿ ಆ ರೀತಿ ಭಾವ ಬಂದಿದ್ದರೂ ಅದು ನನ್ನ ಮನಸ್ಸಿನಲ್ಲಿರಲಿಲ್ಲ :-) ಹಾಗೇನಾದರೂ ಅಪಾರ್ಥವಾಗಿದ್ದರೆ ಕ್ಷಮೆಯಿರಲಿ.

ರಾಜೇಶ್ ನಾಯ್ಕ ಹೇಳಿದರು...

ಹರೀಶ್,
ನಿಮ್ಮ ಕಮೆಂಟ್ ಓದಿ ಜೋರಾಗಿ ನಗು ಬಂದುಬಿಡ್ತು.
ನಿಮ್ಮ ಕಮೆಂಟ್ ಓದಿದ ಬಳಿಕ ಮತ್ತೊಮ್ಮೆ ನಾನು ಬರೆದ ಕಮೆಂಟ್-ನ್ನು ಓದಿದೆ. ಅಷ್ಟೇ ಅಲ್ಲದೆ ನನ್ನ ಸಹೋದ್ಯೋಗಿಯಲ್ಲಿ ಓದಲು ವಿನಂತಿಸಿ ಅಭಿಪ್ರಾಯ ತಿಳಿಸಲು ಹೇಳಿದಾಗ ಆತ, 'ಹೌದು, ಸಿಟ್ಟಿನಲ್ಲಿ ಬರೆದಂತಿದೆ..' ಎಂದು ಹೇಳಿದರು. ಹಾಗಾಗಿ ನಾನು ಬರೆದ ಧಾಟಿಯಲ್ಲಿ ಪ್ರಮಾದವಾಗಿದ್ದು ತಿಳಿಯಿತು. ಸಿಟ್ಟೆಲ್ಲಾ ಏನೂ ಇಲ್ಲ. ನಾನು ಬರೆದ ಧಾಟಿಯಲ್ಲಿ ಸ್ವಲ್ಪ ಎಡವಟ್ಟು.

ಜೋಮನ್ ಹೇಳಿದರು...

ನಾಯ್ಕರೇ,
ಮಾಹಿತಿಪೂರ್ಣ ಬರಹ. ಚೆಂದದ ಚಿತ್ರ ಕೂಡ. ಅಲ್ಲಾ ಮಾರಾಯ್ರೆ, ನೀವು ಈ ಪಾಟಿ ಹೇಗೆ ತಿರುಗುತ್ತೀರಿ ಅಂತ. ತಿರುಗಿ ಇದೆನ್ನೆಲ್ಲಾ ಅದ್ಯಾವ ಹೊತ್ತಿನಲ್ಲಿ ಬರೆಯುತ್ತೀರಿ ಅಂತ. ಮುಂದೆ ನಿಮ್ಮನ್ನು ಭೇಟಿಯಾದಾಗ ಕೇಳುತ್ತೇನೆ.

ಧನ್ಯವಾದಗಳು.

ಜೋಮನ್

Tina ಹೇಳಿದರು...

ರಾಜೇಶ್,
ಜೋಮನ್ ಗೆ ನೀವು ತಿರುಗೋದರ ಬಗ್ಗೆ ಬರಿ ಆಶ್ಚರ್ಯ ಇದೆ, ನನ್ಗೆ ಹೊಟ್ಟೆಕಿಚ್ಚು ಕೂಡಾ ಇದೆ!! ಕಾಲೇಜು ದಿನ್ಗಳಲ್ಲಿ ಪಕ್ಕಾ ಟ್ರೆಕಿಂಗ್ ಫ್ರೀಕ್ ಆಗಿದ್ದೆ ನಾನು. ನಿಮ್ಮೂರ ಸುತ್ತಮುತ್ತ ಏನಾದರು ಇದ್ದಿದ್ದರೆ ನಿಮ್ಮ ಅಸಿಸ್ಟೆಂಟ್ ಆಗಿರ್ತಿದ್ನೋ ಏನೊ? ಏನೆ ಆಗಲಿ ನಿಮ್ಮ ಬ್ಲಾಗ್ ಮುಂಚಿನಂತೆ ತಿರುಗಲಾಗದ ಬೇಸರವನ್ನ ಕೊಂಚವಾದರು ನೀಗಿಸಿದೆ. ಹೀಗೇ ಸುತ್ತುತ್ತ ಇರಿ,ಬರೆಯುತ್ತ ಇರಿ!!
-ಟೀನಾ

ರಾಜೇಶ್ ನಾಯ್ಕ ಹೇಳಿದರು...

ಜೋಮನ್,
ಥ್ಯಾಂಕ್ಸ್. ತಿರುಗುವುದು ಮತ್ತು ಬರೆಯುವುದೇ? ಹ್ಹ ಹ್ಹ.. ಭೇಟಿಯಾದಾಗ ಅದರ ಬಗ್ಗೆ ಕೊರೆಯೋಣ.

ಟೀನಾ,
"ಏನೆ ಆಗಲಿ ನಿಮ್ಮ ಬ್ಲಾಗ್ ಮುಂಚಿನಂತೆ ತಿರುಗಲಾಗದ ಬೇಸರವನ್ನ ಕೊಂಚವಾದರು ನೀಗಿಸಿದೆ" ಈ ಮಾತು ಕೇಳಿ ಸಂತೋಷವಾಯಿತು. ಅಲೆದಾಟ ಜಾರಿಯಲ್ಲಿರುವವರೆಗೆ ಬರೆಯುವುದು ಜಾರಿಯಲ್ಲಿರುತ್ತದೆ.