ರವಿವಾರ, ಜುಲೈ 27, 2014

ಬೆಟ್ಟಗಳ ನಡುವೆ ಕಡಲತೀರ


ಬೆಟ್ಟದ ಅಂಚಿನಿಂದ ಕಾಣುವ ಈ ಕಡಲತೀರದ ಮೇಲಿನ ಚಿತ್ರದಲ್ಲಿರುವ ದೃಶ್ಯವನ್ನು ಸವಿಯಲು ಕಳೆದ ಸುಮಾರು ೨೫ ವರ್ಷಗಳಲ್ಲಿ ಅದೆಷ್ಟೋ ಸಲ ಇಲ್ಲಿಗೆ ಬಂದು ತೆರಳಿದ್ದು ಇದೆ. ಆದರೆ ಒಂದೇ ಒಂದು ಸಾರಿ ಕೆಳಗಿಳಿದು ಕಡಲತೀರಕ್ಕೆ ತೆರಳುವ ಪ್ರಯತ್ನ ದೂರವಿರಲಿ, ಆ ಯೋಚನೆಯನ್ನೂ ಮಾಡಿದ್ದಿರಲಿಲ್ಲ.


ಈ ಬಾರಿ ಬೆಟ್ಟವಿಳಿದು ತೀರಕ್ಕೇ ತೆರಳಬೇಕೆಂಬ ಇರಾದೆಯಿಂದ ಮತ್ತೊಮ್ಮೆ ಈ ಕಡಲತೀರದತ್ತ ತೆರಳಿದೆ. ಬೆಟ್ಟದ ತುದಿಯಿಂದ ಬಹಳ ದೂರವಿದ್ದಂತೆ ತೋರಿದರೂ, ಕೇವಲ ಐದಾರು ನಿಮಿಷಗಳಲ್ಲಿ ನಾವು ಕೆಳಗಿಳಿದಾಗಿತ್ತು.


ಕಡಲೊಳಗೆ ನುಗ್ಗಿರುವ ಎರಡು ಬೆಟ್ಟಗಳ ನಡುವೆ ಅಡಗಿರುವ ಸುಂದರ ಸ್ಥಳವಿದು. ಕೇವಲ ೮೦೦ ಮೀಟರ್ ಉದ್ದವಿರುವ ಈ ಕಡಲತೀರದ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯಿಲ್ಲ.


ಈ ಭಾಗದಲ್ಲಿ ’ಬೀಚ್ ಟ್ರೆಕ್’ ಮಾಡಿದವರು, ಈ ಕಡಲತೀರವನ್ನು ದಾಟಿಹೋಗುವ ಸಾಧ್ಯತೆಯಿದೆಯೇ ವಿನ:, ಬೇರೆ ಯಾರೂ ಇಲ್ಲಿಗೆ ಬರುವ ಚಾನ್ಸ್ ಇಲ್ಲ. ಸ್ಥಳೀಯರು ಕೂಡಾ ಬೆಟ್ಟದ ಅಂಚಿನಿಂದ ಕಾಣುವ ದೃಶ್ಯವನ್ನು ಆನಂದಿಸುತ್ತಾರೆಯೇ ಹೊರತು, ಕೆಳಗಿಳಿದು ಕಡಲತೀರಕ್ಕೆ ಹೋಗುವುದಿಲ್ಲ.


ಶುಭ್ರವಾಗಿದ್ದ ತೀರದ ಒಂದು ತುದಿಯಿಂದ ಇನ್ನೊಂದು ತುದಿಗೆ ವಾಕ್ ಮಾಡಿದೆವು. ಈ ಕಡಲತೀರದ ಆಕರ್ಷಣೆಯೇ ಎರಡು ತುದಿಗಳಲ್ಲಿರುವ ಸಣ್ಣ ಬೆಟ್ಟಗಳು. ಪ್ರಕೃತಿಯೇ ಎರಡು ಕಡೆ ಗೋಡೆ ರಚಿಸಿ, ನಡುವೆ ಈ ಕಡಲತೀರವನ್ನು ಬಂಧಿಸಿದೆ. ಒಂದು ಪಾರ್ಶ್ವದಲ್ಲಿರುವ ಬೆಟ್ಟವನ್ನು ಕಲ್ಲಿಗಾಗಿ ಕೊರೆಯಲಾಗುತ್ತಿದ್ದು, ಸುಮಾರಾಗಿ ನಾಶಮಾಡಲಾಗಿದೆ. ಇಲ್ಲಿನ ಸೌಂದರ್ಯಕ್ಕೆ ಇದೊಂದು ಕಪ್ಪುಚುಕ್ಕೆ. 


ಬೆಟ್ಟದ ಆ ಕಡೆ ಇರುವ ಬೀಚ್ ಸುಮಾರಾಗಿ ಪ್ರಸಿದ್ಧಿ ಪಡೆದಿದ್ದು, ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಲ್ಲಿ, ಪ್ರವಾಸಿಗರ ಹಾವಳಿಯಿಲ್ಲ. ಪ್ರವಾಸಿಗರಿಲ್ಲವೆಂದ ಬಳಿಕ, ಕಸಗಳಿಲ್ಲ, ಗೌಜಿಯಿಲ್ಲ, ಗಲಾಟೆಯಿಲ್ಲ. ಕೇವಲ ನಾವು ಮತ್ತು ಕಡಲಿನಲೆಗಳ ಸದ್ದು ಮಾತ್ರ.

ರವಿವಾರ, ಜುಲೈ 20, 2014

ನೆನಪು


ಕಲಕೇರಿಯಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಲು ೨೦೧೧ರಲ್ಲಿ ತೆರಳಿದಾಗ ಶಿವನಂದಪ್ಪ ಕಮ್ಮಾರರ ಪರಿಚಯವಾಗಿತ್ತು. ಅಂದು ಅಲೆದಾಡಿ, ತಿರುಗಾಡಿ ಹಸಿದು ಹೈರಾಣಾಗಿದ್ದ ನನಗೆ ಹಾಗೂ ನನ್ನ ಟ್ಯಾಕ್ಸಿ ಚಾಲಕನಿಗೆ ಹೊಟ್ಟೆ ತುಂಬಾ ಊಟ ಹಾಕಿ ಆ ಋಣ ಬಾಕಿ ಉಳಿಸಿಕೊಂಡವರು ಈ ಕಮ್ಮಾರರು. ಅಂದು ಊಟದ ರೂಪದಲ್ಲಿ ಅವರು ನೀಡಿದ ಮೊಸರು, ಪಡ್ಡು, ತೆಂಗಿನಕಾಯಿ ಚಟ್ಣಿ, ರೊಟ್ಟಿ, ಶೇಂಗಾ ಚಟ್ಣಿಯ ನೆನಪು ಎಂದೂ ಮಾಸುವುದಿಲ್ಲ. ಕಲಕೇರಿಯ ಇತಿಹಾಸದ ಬಗ್ಗೆ, ಹಾವೇರಿ ಜಿಲ್ಲೆಯ ದೇವಾಲಯಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದಲ್ಲದೇ, ರಾಜ್ಯದಲ್ಲಿರುವ ಪ್ರಾಚೀನ ದೇವಾಲಯಗಳ ಬಗ್ಗೆ ಮಾಹಿತಿ ಎಲ್ಲಿ ದೊರಕುತ್ತದೆ ಎಂದು ತಿಳಿಸಿ, ನನಗೆ ತುಂಬಾ ಸಹಕರಿಸಿ ಉಪಕಾರ ಮಾಡಿದವರೂ ಈ ಕಮ್ಮಾರರೇ.


ಅವರ ಆತಿಥ್ಯ ಸವಿಯಲು ೨೦೧೩ರ ಜೂನ್ ತಿಂಗಳಲ್ಲಿ ಇನ್ನೊಮ್ಮೆ ಕಲಕೇರಿಗೆ ಹೋಗುವ ಪ್ಲ್ಯಾನ್ ಕೊನೆಯ ಹಂತದಲ್ಲಿ ರದ್ದಾಯಿತು. ಬರಲಾಗುವುದಿಲ್ಲವೆಂದು ತಿಳಿಸಿದಾಗ ಅವರು ಬೇಜಾರು ಮಾಡಿಕೊಂಡರು. ಈಗ್ಗೆ ಸುಮಾರು ನಾಲ್ಕು ತಿಂಗಳ ಹಿಂದೆ ಕಮ್ಮಾರರು ವಿಧಿವಶಗೊಂಡಿದ್ದಾರೆ ಎಂದು ಕಳೆದ ವಾರ ತಿಳಿಯಿತು. ಇದೇ ಅಗೋಸ್ಟ್ ಅಥವಾ ಸೆಪ್ಟ್ಂಬರ್ ತಿಂಗಳಲ್ಲಿ ಆ ಕಡೆ ತೆರಳುವ ಇರಾದೆಯಿದ್ದು, ಶೀಘ್ರದಲ್ಲೇ ಅವರಿಗೆ ಫೋನ್ ಮಾಡುವವನಿದ್ದೆ. ಈಗ, ತುಂಬಾನೇ ತಡಮಾಡಿಬಿಟ್ಟೆ ಎಂದೆನಿಸುತ್ತಿದೆ. ಪರಿಚಯವಿದ್ದವರು ತೀರಿಕೊಂಡಾಗ, ಅವರ ನೆನಪಿಗಾಗಿ ಹೆಸರು ಮತ್ತು ಸಂಖ್ಯೆಯನ್ನು ನಾನು ’ಡಿಲೀಟ್’ ಮಾಡುವುದಿಲ್ಲ. ಶಿವನಂದಪ್ಪ ಕಮ್ಮಾರರ ಹೆಸರು ಮತ್ತು ಮೊಬೈಲ್ ಸಂಖ್ಯೆ ನನ್ನ ಮೊಬೈಲಿನಲ್ಲಿ ಹಾಗೇ ಉಳಿಯಲಿದೆ.

ರವಿವಾರ, ಜುಲೈ 13, 2014

ಜೋಶಿ ಶಂಕರ ದೇವಾಲಯ ಹಾಗೂ ಅಡಿಕೆ ನಾರಾಯಣ ದೇವಾಲಯ - ಭಟ್ಕಳ


ಭಟ್ಕಳದಲ್ಲಿನ ಹೆಚ್ಚಿನ ದೇವಾಲಯಗಳನ್ನು ಸರಿಸುಮಾರು ೨೫ ವರ್ಷಗಳ (ಇಸವಿ ೧೫೪೨-೧೫೬೭) ಅಂತರದೊಳಗೆ ನಿರ್ಮಿಸಲ್ಪಟ್ಟಂಥವು. ಇವುಗಳನ್ನು ನಿರ್ಮಿಸಿದವರು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಜನರು. ಗೋವಾದಲ್ಲಿ ಪೋರ್ಚುಗೀಸರ ಹಾವಳಿ ಅತಿಯಾದಾಗ ಅಲ್ಲಿಂದ ಕರ್ನಾಟಕದ ಕರಾವಳಿ ಭಾಗಕ್ಕೆ ವಲಸೆ ಬಂದು ನೆಲೆಸಿದ ಸಮುದಾಯಗಳಲ್ಲಿ ಈ ಸಮುದಾಯವೂ ಒಂದು.

ಜೋಶಿ ಶಂಕರನಾರಾಯಣ ದೇವಾಲಯ


ಈ ದೇವಾಲಯವನ್ನು ’ಜೋಶಿ’ ಎನ್ನುವವರು ಇಸವಿ ೧೫೫೪ರಲ್ಲಿ ನಿರ್ಮಿಸಿದರು. ನಂದಿಮಂಟಪ ಮತ್ತು ಅಂತರಾಳ ಹಾಗೂ ಗರ್ಭಗುಡಿ ಮಾತ್ರ ಹೊಂದಿರುವ ಅತಿ ಸಣ್ಣ ದೇವಾಲಯವಿದು.


ನಂದಿಮಂಟಪ ಮತ್ತು ದೇವಾಲಯದ ಆಕಾರ ಮತ್ತು ಗಾತ್ರ ಒಂದೇ ರೀತಿಯಿದ್ದು, ನಂದಿಮಂಟಪ ತೆರೆದ ರಚನೆಯಾಗಿದ್ದರೆ. ದೇವಾಲಯದ ಸುತ್ತಲೂ ಹೊರಗೋಡೆಯಿದೆ.


ನಂದಿಮಂಟಪದಲ್ಲಿರಬೇಕಾಗಿದ್ದ ನಂದಿ ಕಣ್ಮರೆಯಾಗಿದೆ! ಗರ್ಭಗುಡಿಯಲ್ಲಿ ಶಂಕರನಾರಾಯಣನ ಸಣ್ಣ ಮೂರ್ತಿಯಿದೆ. ಇಲ್ಲಿ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.

ಅಡಿಕೆ ನಾರಾಯಣ ದೇವಾಲಯ

 
ಅಡಿಕೆ ವ್ಯಾಪಾರಿಗಳು ನೀಡಿದ ದೇಣಿಗೆಯಿಂದ ನಿರ್ಮಿಸಲಾಗಿರುವುದರಿಂದ ಈ ದೇವಾಲಯವನ್ನು ಅಡಿಕೆ ನಾರಾಯಣ ದೇವಾಲಯವೆಂದು ಕರೆಯಲಾಗುತ್ತದೆ. ಇಸವಿ ೧೫೫೦ರಲ್ಲಿ ನಿರ್ಮಿಸಲಾಗಿರುವ ದೇವಾಲಯವು ಮುಖಮಂಟಪ, ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿದೆ.


ದೇವಾಲಯದ ಮುಂಭಾಗದಲ್ಲಿ ದೀಪಸ್ತಂಭವಿದೆ. ದೇವಾಲಯದ ಹೊರಗೋಡೆಯ ಸುತ್ತಲೂ ಎರಡು ಅಡಿ ಅಂತರದಲ್ಲಿ ರಕ್ಷಾಕವಚದಂತೆ ಕಲ್ಲಿನ ಗೋಡೆಯಿದ್ದು, ಈಗ ಕೇವಲ ಒಂದು ಪಾರ್ಶ್ವದಲ್ಲಿ ಮಾತ್ರ ಉಳಿದುಕೊಂಡಿದೆ. ಮುಖಮಂಟಪದ ಮೆಟ್ಟಿಲುಗಳ ಬಳಿ ದ್ವಾರಪಾಲಕರನ್ನು ಕಾಣಬಹುದು.


ಗರ್ಭಗುಡಿಯ ಛಾವಣಿಯಲ್ಲಿ ಕಮಲದ ಕೆತ್ತನೆಯನ್ನೂ ಹಾಗೂ ದ್ವಾರದಲ್ಲಿ ಅಲಂಕಾರಿಕಾ ಕೆತ್ತನೆಗಳನ್ನೂ ಕಾಣಬಹುದು. ಮುಖಮಂಟಪದ ಛಾವಣಿಯಲ್ಲಿ ಅಷ್ಟದಿಕ್ಪಾಲಕರಿಂದ ಸುತ್ತುವರಿದ ಕಮಲದ ಕೆತ್ತನೆಯಿದೆ.


ಮುಖಮಂಟಪದಲ್ಲಿರುವ ನಾಲ್ಕು ಕಂಬಗಳ ಪೈಕಿ ಎರಡರಲ್ಲಿ ಹಲವಾರು ಕೆತ್ತನೆಗಳನ್ನು ಕಾಣಬಹುದು.
 

ದೇವಾಲಯದಲ್ಲಿ ನಿತ್ಯ ಪೂಜೆ ಮಾಡುವವರು ಸಮೀಪದ ಮನೆಯವರು. ಇಲ್ಲಿನ ಎಲ್ಲಾ ದೇವಾಲಯಗಳನ್ನು, ದೇವಾಲಯವಿರುವ ಪ್ರಾಂಗಣದಲ್ಲಿರುವ ಮನೆಯವರೇ ನೋಡಿಕೊಳ್ಳುತ್ತಾರೆ. ದೇವಾಲಯದ ನಿರ್ಮಾಣದ ಸಮಯದಿಂದಲೂ ಈ ಮನೆಗಳ ಪೂರ್ವಜರು ಪೂಜೆ ಸಲ್ಲಿಸುತ್ತ ಬಂದ ಸಂಪ್ರದಾಯ ಇಂದಿಗೂ ಹಾಗೇ ಮುಂದುವರಿದಿದೆ.