ಭಾನುವಾರ, ಮಾರ್ಚ್ 17, 2019

ಗುಹೆಯೊಂದ ಹೊಕ್ಕು...


೨೦೧೦ರ ಫೆಬ್ರವರಿ ತಿಂಗಳ ಅದೊಂದು ಮುಂಜಾನೆ ನಾನು ಮತ್ತು ಗೆಳೆಯ ರಾಕೇಶ್ ಹೊಳ್ಳ ಮಣ್ಣಿನ ರಸ್ತೆಯಲ್ಲಿ ಧೂಳೆಬ್ಬಿಸುತ್ತಾ, ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದೆವು. ಎಲ್ಲಿಗೆ ಹೋಗಬೇಕೆಂದು ನನಗೆ ಗೊತ್ತಿತ್ತು. ಆದರೆ ದಾರಿಯ ಬಗ್ಗೆ ಸ್ವಲ್ಪ ಮಾಹಿತಿ ಮಾತ್ರ ಇತ್ತು. ಈ ಹಳ್ಳಿಗಳ ಒಳರಸ್ತೆಗಳಲ್ಲಿ ಜನ ಸಂಚಾರ ಬಹಳ ವಿರಳ. ಕೇವಲ ಊಹೆಯ ಅಧಾರದ ಮೇಲೆ ಒಂದೆರಡು ತಿರುವು ತಗೊಂಡು, ಐದಾರು ಕಿಮಿ ಕ್ರಮಿಸಿದ ಬಳಿಕ ಒಂದು ಮನೆಯ ಬಳಿ ರಸ್ತೆ ಕೊನೆಗೊಂಡಿತು.


ಆ ಮನೆಯಲ್ಲಿ ಒಬ್ಬ ಅಜ್ಜಿ ಮಾತ್ರ ಇದ್ದರು. ಅವರು ಏನನ್ನೋ ಗೊಣಗುತ್ತಾ ಅಲ್ಲೇನೋ ಕೆಲಸ ಮಾಡುತ್ತಿದ್ದರು. ಈ ಗುಹೆಯ ಬಗ್ಗೆ ಮಾಹಿತಿ ಕೇಳಿದಾಗ, ನಮ್ಮನ್ನೇ ದಿಟ್ಟಿಸಿ ನೋಡಿ, ಕೆಲಸವನ್ನು ಅಲ್ಲಿಯೇ ಕೈಬಿಟ್ಟು, ಜಗಲಿಯ ಮೇಲೆ ಬೇರೆಲ್ಲೋ ದಿಟ್ಟಿಸುತ್ತಾ ಕುಳಿತುಬಿಟ್ಟರು. ಅವರ ವರ್ತನೆ ಕಂಡು ಅವಕ್ಕಾದ ನಾನು, ಮತ್ತೊಮ್ಮೆ ಗುಹೆಯ ಬಗ್ಗೆ ಕೇಳಿದೆ. ಅವರಿಂದ ಯಾವ ಉತ್ತರವೂ ಇಲ್ಲ. ಅಳುಕುತ್ತಾ ಮೂರನೇ ಬಾರಿಗೆ ಕೇಳಿದಾಗ, ತಮ್ಮ ಮನೆಯ ತೋಟದ ಕಡೆ ಕೈ ತೋರಿಸಿದರು.


ಅವರು ಕೈ ತೋರಿಸಿದತ್ತ ಸುಮಾರು ಮುಂದೆ ನಡೆದಾಗ ಮತ್ತೊಂದು ಮನೆ. ಅಲ್ಲಿ ಒಬ್ಬ ಹದಿಹರೆಯದ ಪೋರ ಮಾತ್ರ ಇದ್ದು, ತೆರೆದ ಹಜಾರದಲ್ಲಿದ್ದ ಮಂಚದ ಮೇಲೆ ಅಂಗಾತ ಮಲಗಿ ಕಾಲಹರಣ ಮಾಡುತ್ತಿದ್ದ. ನಮ್ಮನ್ನು ಕಂಡು, ಆಲಸ್ಯದಿಂದ ನಿಧಾನವಾಗಿ ನಮ್ಮೆಡೆ ಹೊರಳಿದ. ಗುಹೆಗೆ ದಾರಿ ಕೇಳಿದಾಗ, ’ಹಂಗೇ ಹೋಗ್ರಿ’ ಎಂದು ಮಲಗಿದ್ದಲ್ಲಿಂದಲೇ ಉತ್ತರಿಸಿದ. ನಾವು ಇನ್ನೂ ಸ್ವಲ್ಪ ಮಾತನಾಡಿದ ಬಳಿಕ ನಿಧಾನವಾಗಿ ಎದ್ದು ಮನೆಯಿಂದ ಹೊರಗೆ ಬಂದ. ಈತನ ಹೆಸರು ಅರ್ಜುನ. ಆಕಳಿಸುತ್ತಾ, ಮೈಯೆಲ್ಲಾ ಆಲಸ್ಯವೇ ಮನೆಮಾಡಿದಂತಿದ್ದ ಉತ್ತರಗಳನ್ನು ನೀಡುತ್ತಿದ್ದ. ’ಅಪ್ಪ ಮತ್ತು ಅಮ್ಮ ಕೆಲಸಕ್ಕೆ ಹೋಗಿದ್ದಾರೆ, ನಾನು ಎಸ್‍ಎಸ್‍ಎಲ್‍ಸಿ ಫೇಲು. ಈಗ ಮನೆಯಲ್ಲೇ ಇದ್ದೇನೆ. ನನಗೆ ಓದ್ಲಿಕ್ಕೂ ಇಂಟ್ರೆಸ್ಟ್ ಇಲ್ಲ. ಕೆಲಸ ಮಾಡ್ಲಿಕ್ಕೆ ಇನ್ನೂ ಟೈಮಿದೆ’ ಎಂದು ಹೇಳಿ ನಮ್ಮ ಹುಬ್ಬೇರಿಸಿದ.


ಈ ಅರ್ಜುನನ ಮಾತುಗಳನ್ನು ಕೇಳಿ ನಾವಿಬ್ಬರು ಮುಖ ಮುಖ ನೋಡಿಕೊಂಡೆವು. ನೋಡಲು ಬೆಳ್ಳಗೆ ಇದ್ದು ಸ್ಫುರದ್ರೂಪಿಯಾಗಿರುವ ಈತನಿಗೆ, ಊರವರೆಲ್ಲಾ ಸೇರಿ ವರ್ಷಕ್ಕೊಂದು ಸಲ ಕೈಗೊಳ್ಳುವ ಕಾಡುಕೋಣ ಶಿಕಾರಿಯಲ್ಲಿ ಪಾಲ್ಗೊಳ್ಳುವುದೆಂದರೆ ಭಾರೀ ಇಷ್ಟ. ಈತನ ಪ್ರಕಾರ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಮತದಿಂದಲೇ ನಡೆಯುವ ಈ ವಾರ್ಷಿಕ ಕಾಡುಕೋಣ ಶಿಕಾರಿಗೆ ದೊಡ್ಡ ಸಂಖ್ಯೆಯಲ್ಲಿ ಜನರು ಒಟ್ಟುಗೂಡುತ್ತಾರೆ. ನಂತರ ರಾತ್ರಿಯಿಡೀ ನಡೆಯುವ ಬಾಡೂಟ. ಮತ್ತೆ ಮುಂದಿನ ವರ್ಷಗಳಲ್ಲಿ ಶಿಕಾರಿ ಮಾಡಲು ಕಾಡುಕೋಣಗಳು ಉಳಿಯಬೇಕೆಂದು ಮರಿಗಳನ್ನೆಲ್ಲಾ ಇವರು ಹೊಡೆಯುವುದಿಲ್ಲವಂತೆ!! ಈ ಶಿಕಾರಿ ನಡೆಯುವ ಜಾಗದ ಹೆಸರನ್ನೂ ಆತ ತಿಳಿಸಿದ. ಆ ಸ್ಥಳ ನನಗೆ ಗೊತ್ತು. ನನಗೂ ಒಂದು ಸಲ ಈತನ ಕಾಡುಕೋಣ ಶಿಕಾರಿಗೆ ತೆರಳಿ ಎಲ್ಲವನ್ನೂ ವಿಡಿಯೋ ಮೂಲಕ ಸೆರೆಹಿಡಿಯಬೇಕೆಂಬ ಮಹಾದಾಸೆ ಇದೆ.


ನಮ್ಮ ಜೊತೆ ಮಾರ್ಗದರ್ಶಿಯಾಗಿ ಬರಲು ಈ ಸೋಮಾರಿಯ ಮನವೊಲಿಸಲು ನಮಗೆ ಅರ್ಧ ಗಂಟೆ ಬೇಕಾಯಿತು. ಕಡೆಗೂ ಒಲ್ಲದ ಮನಸಿನಿಂದ ಒಪ್ಪಿಕೊಂಡ. ಈತನ ಮನೆಯಿಂದ ಅನತಿ ದೂರದಲ್ಲಿ ಹರಿಯುವ ಹಳ್ಳಗುಂಟ ಮೇಲಕ್ಕೆ ನಡೆಯುತ್ತಾ ಸಾಗಿದೆವು. ಹಳ್ಳದಲ್ಲೇ ಸುಮಾರು ೧೫-೨೦ ನಿಮಿಷ ನಡೆಯಬೇಕು. ಈ ತೊರೆಯ ದೃಶ್ಯ ಅಲ್ಲಲ್ಲಿ ಸುಂದರವಾಗಿತ್ತು. ತೊರೆಯ ತಟದಲ್ಲೇ ನೆಲೆಗೊಂಡಿದೆ ಈ ಪ್ರಾಕೃತಿಕ ಗುಹೆ.


ದೊಡ್ಡ ಬಂಡೆಯ ಬುಡದಲ್ಲಿ ಕವಾಟದಂತಹ ತೆರೆದ ರಚನೆ. ಬಲಭಾಗದಲ್ಲಿ ವ್ಯಕ್ತಿಯೊಬ್ಬ ತೆವಳಿಹೋಗಬಹುದಾದಷ್ಟೇ ದೊಡ್ಡದಾಗಿರುವ, ನೆಲಕ್ಕೆ ತಾಗಿಕೊಂಡೇ ಇರುವ ರಂಧ್ರ. ಅರ್ಜುನ ಮೊದಲು, ನಂತರ ರಾಕೇಶ್, ಕೊನೆಗೆ ನಾನು ತೆವಳಿಕೊಂಡು ಗುಹೆಯೊಳಗೆ ಸೇರಿಕೊಂಡೆವು. ಅಬ್ಬಾ. ಅದೇನು ಕತ್ತಲು. ಒಂದಷ್ಟು ಬಾವಲಿಗಳು ನಮ್ಮ ಮೈಯನ್ನು ಸವರಿಕೊಂಡು ಅಚೀಚೆ ಹಾರಾಡಿದವು.


ಒಂದೆರಡು ನಿಮಿಷಗಳ ಕಾಲ, ನಾವು ಒಳಗೆ ತೆವಳಿಕೊಂಡು ಬಂದ ಬಿಲದಂತಹ ದ್ವಾರದ ಬಳಿ ನಿಂತುಕೊಂಡೇ, ಟಾರ್ಚ್ ಬೆಳಕಿನಲ್ಲಿ ಗುಹೆಯ ಆಂತರಿಕ ಸೌಂದರ್ಯವನ್ನು ನೋಡತೊಡಗಿದೆವು. ಗುಹೆಯ ಒಳಗೆ ಎಲ್ಲೆಡೆ ತುಂಬಾ ಸ್ವಚ್ಚವಾಗಿತ್ತು. ನೆಲವಂತೂ ತುಂಬಾನೇ ನಯವಾಗಿತ್ತು. ಊರಿನವರು ಆಗಾಗ ಇಲ್ಲಿಗೆ ಬರುವುದಲ್ಲದೆ, ವರ್ಷಕ್ಕೆರಡು ಸಲ ಇಲ್ಲಿ ವಿಶೇಷ ಪೂಜೆ ಕೂಡಾ ನಡೆಯುತ್ತದೆ.


ನನಗೋ ಎಲ್ಲಿ ತೆರಳಿದರೂ ಹಾವುಗಳ ಭಯ. ನಾನು ಆ ಗುಹೆಯೊಳಗೆ ತೆರಳಿದ್ದೇ ನನಗೆ ದೊಡ್ಡ ಸಾಹಸ ಮಾಡಿದಂತಾಗಿತ್ತು. ಅರ್ಜುನನ ಪ್ರಕಾರ ಹಾವುಗಳು ಈ ಗುಹೆಯತ್ತ ಸುಳಿಯುವುದಿಲ್ಲವಂತೆ. ಆದರೂ ಆ ಅಳುಕು ಅಲ್ಲಿಂದ ಹೊರಗೆ ಬರುವವರೆಗೂ ಇತ್ತು.


ಈ ಗುಹೆಯಲ್ಲಿ ಎರಡು ಭಾಗಗಳಿವೆ. ಒಳಗೆ ಬಂದ ಕೂಡಲೇ ಮೊದಲು ಕಾಣಬರುವುದು ಸುಮಾರು ಐದು ಅಡಿ ಸುತ್ತಳತೆಯ ಕೋಣೆ. ಇದೊಂದು ಬೇರೆನೇ ಲೋಕ. ವಿಶಿಷ್ಟವಾಗಿ ವಿನ್ಯಸಿಸಲ್ಪಟ್ಟಂತಹ ಕಲ್ಲಿನ ಪದರಗಳನ್ನು ಕಾಣಬಹುದು. ಅಲ್ಲಲ್ಲಿ ಬಾವಲಿಗಳು. ಸಣ್ಣ ಸಣ್ಣ ರಂಧ್ರಗಳು. ಒಳಗಿನ ಕತ್ತಲೆಗೆ ನಮ್ಮ ಕಣ್ಣುಗಳು ಹೊಂದಿಕೊಳ್ಳಲು ಸುಮಾರು ಸಮಯ ಬೇಕಾಯಿತು. ಅದುವರೆಗೆ ಅಲ್ಲಿ ನಿಂತುಕೊಂಡೇ ಚಿತ್ರಗಳನ್ನು ತೆಗೆಯುತ್ತಾ ಇದ್ದೆವು.


ಗುಹೆಯ ಎರಡನೇ ಭಾಗ ಇನ್ನೂ ಆಕರ್ಷಕ ಹಾಗೂ ರೋಮಾಂಚಕ. ನಮಗೆ ಈ ಎರಡನೇ ಭಾಗದ ಕಲ್ಪನೆಯಿರಲಿಲ್ಲ. ’ಮೇಲೆ ಹೋಗುವಾ’ ಎಂದು ಅರ್ಜುನ ಹೇಳಿದಾಗಲೇ, ಈ ಗುಹೆಯಲ್ಲಿ ಇನ್ನೊಂದು ಕೋಣೆಯಿದೆ ಎಂದು ನಮಗೆ ಅರಿವಾದದ್ದು.


ಅರ್ಜುನ ಮೇಲೆ ಹತ್ತಿ ಅಲ್ಲೊಂದು ರಂಧ್ರದ ಬಳಿ ಕುಕ್ಕರಿಸಿ ಕುಳಿತು, ಅಲ್ಲಿಂದ ಒಳಗೆ ತೆವಳಬೇಕು ಎಂದಾಗ ಹೆದರಿಕೆ, ಆಶ್ಚರ್ಯ, ಸಂತೋಷ ಎಲ್ಲಾ ಒಟ್ಟಿಗೆ ಉಂಟಾಯಿತು. ಟಾರ್ಚ್ ಬೆಳಕಿನಲ್ಲಿ ಅಲ್ಲಿ ಮೇಲೆ ಏನೋ ಒಂದು ರಂಧ್ರ ಇದೆ ಎಂದು ನೋಡಿದ್ದೆ. ಆದರೆ ಅದು ಆಚೆ ಇರುವ ಕೋಣೆಗೆ ದಾರಿ ಎಂದು ತಿಳಿದಾಗ ಮುಂದುವರಿಯಬೇಕೋ ಬೇಡವೋ ಎಂದು ಹಿಂಜರಿಯಲಾರಂಭಿಸಿದೆ. ಅವರಿಬ್ಬರು ತೆಳುಕಾಯದವರು. ಸಲೀಸಾಗಿ ಎಲ್ಲಿಬೇಕಾದಲ್ಲಿ ತೆವಳಿಕೊಂಡು ಹೋಗಬಲ್ಲರು. ನನ್ನದು ಸ್ವಲ್ಪ ದಢೂತಿ ದೇಹ. ಸೊಂಟದಲ್ಲಿ ಒಂದೆರಡು ಬೆಲ್ಟು. ತೆವಳಿಕೊಂಡು ಹೋಗುವಾಗ ನಡುವೆ ಸಿಕ್ಕಿಬಿದ್ದರೆ, ಏನು ಮಾಡುವುದು ಎಂಬ ಚಿಂತೆಯೇ ನನ್ನನ್ನು ಕಾಡುತ್ತಿತ್ತು.  ’ಆ ಕೋಣೆ ಇನ್ನೂ ಚೆನ್ನಾಗಿದೆ’ ಎಂದು ಅರ್ಜುನ ಹೇಳಿದಾಗ ಮತ್ತು ರಾಕೇಶ್ ಸ್ವಲ್ಪ ಹುರಿದುಂಬಿಸಿದಾಗ, ನೋಡೇಬಿಡೋಣ ಎಂದು ನಿರ್ಧರಿಸಿದೆ.




ಈ ಎರಡನೇ ಕೋಣೆ ಸ್ವಲ್ಪ ಮೇಲ್ಭಾಗದಲ್ಲಿದೆ. ಅಲ್ಲಲ್ಲಿ ಹೊರಚಾಚಿರುವ ಕಲ್ಲಿನ ಪದರಗಳನ್ನು ಹಿಡಿದು ಸುಮಾರು ಹತ್ತು ಅಡಿ ಮೇಲೇರಿದ ಬಳಿಕ ಒಂದು ಬಾಲ್ಕನಿ ತರಹದ ಸ್ಥಳವಿದೆ. ಈ ಬಾಲ್ಕನಿಯ ಒಂದು ಕೊನೆಯಲ್ಲಿ ಈ ಮಹಡಿ ಮೇಲಿರುವ ಕೋಣೆಗೆ ಹೋಗುವ ರಂಧ್ರ. ಅವರಿಬ್ಬರು ತೆವಳುತ್ತಾ ಒಳಗೆ ತೆರಳಿದರು. ನಾನೂ ಅವರನ್ನು ಹಿಂಬಾಲಿಸಿದೆ.


ಈ ಕೋಣೆ ವಿಶಾಲವಾಗಿಯೂ ಸುಂದರವಾಗಿಯೂ ಇದೆ. ಇಲ್ಲಿ ಕಲ್ಲಿನ ಪದರಗಳ ರಚನೆ ಇನ್ನೂ ಸುಂದರ. ಅಲ್ಲೊಂದು ಪೀಠದಂತಹ ರಚನೆ. ಹಿಂದೆಲ್ಲಾ ಅಲ್ಲಿ ಕುಳಿತು ಧ್ಯಾನ ಮಾಡಲಾಗುತ್ತಿತ್ತಂತೆ! ನಾವೂ ಧ್ಯಾನನಿರತ ಶಯ್ಯೆಯಲ್ಲಿ ಅಲ್ಲಿ ಕುಳಿತು ಟಾರ್ಚ್ ಆರಿಸಿದೆವು. ನಾನು ಟಾರ್ಚ್ ಆರಿಸಿದ ಕೂಡಲೇ ಗವ್ವೆಂದು ಕತ್ತಲು ನಮ್ಮನ್ನು ಆವರಿಸಿಕೊಂಡುಬಿಟ್ಟಿತು. ಬೆಳಕಿನ ಒಂದು ಕಿಡಿಯೂ ಅಲ್ಲಿಲ್ಲ. ಕತ್ತಲೆಗೆ ನಮ್ಮ ಕಣ್ಣುಗಳು ಹೊಂದಿಕೊಂಡ ಬಳಿಕವೂ ಏನೇನೂ ಕಾಣಿಸುತ್ತಿರಲಿಲ್ಲ.


ಈ ಎರಡನೇ ಕೋಣೆಯಲ್ಲಿ ಬಹಳಷ್ಟು ಸಮಯ ಕಳೆದೆವು. ತ್ರಿಕೋಣಾಕಾರದಲ್ಲಿರುವ ಈ ಕೋಣೆಯು ಅಲ್ಲಲ್ಲಿ ಕವಾಟದಂತಹ ರಚನೆಗಳನ್ನು ಹೊಂದಿದೆ. ಧ್ಯಾನಾಸಕ್ತರಿಗೆ ಹೇಳಿ ಮಾಡಿಸಿದಂತಹ ಸ್ಥಳವಿದು. ಸದ್ದಿಲ್ಲ, ಬೆಳಕಿಲ್ಲ, ಒಬ್ಬಿಬ್ಬರಿಗೆ ಉಸಿರಾಡಲು ಸರಾಗವಾಗಿರುವ ಗಾಳಿ, ಜಂತುಗಳ ಕಾಟವಿಲ್ಲ. ಜನವಸತಿ ಪ್ರದೇಶಕ್ಕೆ ಸಮೀಪದಲ್ಲೇ ಇದೆ.


ಗುಹೆಯನ್ನು ಪ್ರವೇಶಿಸಿ ಸುಮಾರು ಒಂದು ತಾಸು ಕಳೆದಿತ್ತು. ಗಾಳಿ ಮತ್ತು ಬೆಳಕಿಲ್ಲದ ಗುಹೆಯೊಳಗಿನ ವಾತಾವರಣ ಈಗ ನಮ್ಮ ಬೆವರು ಸುರಿಸತೊಡಗಿತ್ತು. ಸುಮಾರು ಸಮಯವಾಗಿದ್ದರಿಂದ ಸೆಕೆ ಕೂಡಾ ಬೇಗಬೇಗನೇ ಹೆಚ್ಚಾಗತೊಡಗಿತು. ಬೆವರುತ್ತಿದ್ದ ನಮ್ಮ ದೇಹಗಳು, ಗುಹೆಯಿಂದ ಹೊರಗೆ ಹೋಗುವ ಸಮಯ ಬಂದಿದೆ ಎಂದು ನಮಗೆ ಪರೋಕ್ಷವಾಗಿ ಹೇಳುತ್ತಿದ್ದವು.


ಗುಹೆಯಿಂದ ಹೊರಬಂದಾಗ, ಹಾಯ್ ಎನಿಸಿತು. ಬೆಳಕು, ಕಾಡು, ನೀರು, ಗಾಳಿ, ಆಕಾಶ, ಗಿಡಮರಗಳು, ಇವನ್ನೆಲ್ಲಾ ಕಂಡಾಗ, ಅದ್ಯಾವುದೋ ಲೋಕದಿಂದ ವಾಸ್ತವಕ್ಕೆ ಮರಳಿದ ಅನುಭವವಾಗತೊಡಗಿತು.


ನಂತರ ಮತ್ತೆ ಅರ್ಜುನನ ಬಡಾಯಿ ಮಾತುಗಳನ್ನು ಕೇಳುತ್ತಾ ಅತನ ಮನೆ ತಲುಪಿದೆವು. ಅಲ್ಲೊಂದಷ್ಟು ಸಮಯ ಕಳೆದು ನಮ್ಮ ಬೈಕನ್ನು ಇಟ್ಟಲ್ಲಿ ಮುಂದುವರಿದೆವು. ದಾರಿಯಲ್ಲಿ ಆ ಅಜ್ಜಿಯ ಮನೆ ಮುಂದಿನಿಂದ ಹಾದುಹೋಗುವಾಗ, ಆಕೆ ಎಲ್ಲೂ ಕಾಣಬರಲಿಲ್ಲ. ಆಕೆಯ ಬಗ್ಗೆ ನಾನು ಅರ್ಜುನನಲ್ಲಿ ಕೇಳಿದ್ದೆ. ಕೆಲವು ವರ್ಷಗಳ ಹಿಂದೆ ಮನೆಯಲ್ಲಿ ಅನಾಹುತವೊಂದು ಘಟಿಸಿದಾಗ ಆಘಾತಗೊಂಡು, ಮನದ ಸ್ಥಿಮಿತ ಕಳಕೊಂಡು, ಮಾತನ್ನೂ ಮರೆತಿದ್ದ ಅಜ್ಜಿ, ತದನಂತರ ಮಾತನಾಡಲು ಶಕ್ತಳಾದರೂ, ಮಾನಸಿಕ ಸ್ಥಿತಿ ಮೊದಲಿನಂತಾಗಲೇ ಇಲ್ಲ. ಈ ಇಳಿವಯಸ್ಸಿನಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಸುಖವಾಗಿ ಇರುವ ಸಮಯದಲ್ಲಿ, ಆಕೆಯ ಇಂತಹ ಪರಿಸ್ಥಿತಿ ಯಾರಿಗೂ ಬರಕೂಡದು.

5 ಕಾಮೆಂಟ್‌ಗಳು:

Aravind GJ ಹೇಳಿದರು...

ಬಹಳ ಸಮಯದ ನ೦ತರ ನಿಮ್ಮ ಲೇಋನ ನೋಡಿ ತು೦ಬ ಸ೦ತೋಷವಾಯಿತು.

Amaresh ಹೇಳಿದರು...

ಇಂತಹ ಗುಹೆಗೆ ಹೋಗೋಕೆ ತುಂಬಾ ಧೈರ್ಯ ಬೇಕು. ಚಾರಣ ಆ ಧೈರ್ಯ ಕೊಡುತ್ತೆ ಅನ್ಸುತ್ತೆ.

Unknown ಹೇಳಿದರು...

ಅರವಿಂದ - ಧನ್ಯವಾದ.

ಅಮರೇಶ - ಚಾರಣ ಸ್ವಲ್ಪ ಮಟ್ಟಿಗೆ ಧೈರ್ಯ ಕೊಡಬಹುದು ಅನಿಸುತ್ತದೆ. ಆದರೆ ಅದು ಸಣ್ಣಾ ಗುಹೆಗಳಿಗೆ ಮಾತ್ರ ಸೀಮಿತ.

Srinath ಹೇಳಿದರು...

ಸುಮಾರು ೨ ವರ್ಷಗಳ ನಂತರ ನಿಮ್ಮ ಬ್ಲಾಗ್ ನ್ನು ನೋಡಿ ತುಂಬಾ ಸಂತೋಷವಾಯಿತು

sachin ಹೇಳಿದರು...

ಚನ್ನಾಗಿ ಬರೆದಿದ್ದೀರಿ ..

ನಿಮಗೆ ಗೊತ್ತೇ ಕನ್ನಡದ ಬ್ಲಾಗ್ ಬೆಳಗಾವಿ ಕುಂದ belagavikunda.in
ಹಾಗು ಮ್ಯಾಟ್ರಿಮೋನಿ ಸೈಟ್ nodowryindia.com ಕನ್ನಡದ ಸೈಟ್ ಇದೆ ..