ಮೊದಲು ’ಅಳರಿಗುಪ್ಪೆ’ ಎಂದಾಗಿದ್ದು ಇಂದು ಅರಳಗುಪ್ಪೆ ಎಂದು ಕರೆಯಲ್ಪಡುವ ಹಳ್ಳಿಯಲ್ಲಿನ ಚನ್ನಕೇಶವ ದೇವಾಲಯವನ್ನು ೧೩ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಪೂರ್ವಾಭಿಮುಖವಾಗಿರುವ ಈ ಏಕಕೂಟ ದೇವಾಲಯವು ಗರ್ಭಗುಡಿ, ನವರಂಗ ಮತ್ತು ಸುಕನಾಸಿಗಳನ್ನು ಹೊಂದಿದ್ದು ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಾಣಗೊಂಡಿದೆ.
ದೇವಾಲಯದ ಒಳಗೆ ಸುಂದರ ಕೆತ್ತನೆಯುಳ್ಳ ಒಟ್ಟು ೯ ಕಂಬಗಳಿವೆ. ನವರಂಗದ ಮೇಲ್ಛಾವಣಿಯಲ್ಲಿ ತಲೆಕೆಳಗಾಗಿರುವ ಹೂವಿನ ಮೊಗ್ಗಿನ ಅದ್ಭುತ ರಚನೆಯಿದೆ. ಇಲ್ಲಿರುವ ಎರಡು ದೇವಕೋಷ್ಠಗಳಲ್ಲಿ ಗಣೇಶ ಮತ್ತು ಮಹಿಷಮರ್ದಿನಿಯ ಮೂರ್ತಿಗಳಿವೆ. ಗರ್ಭಗುಡಿಯಲ್ಲಿ ಪೀಠದ ಮೇಲೆ ಆರು ಅಡಿ ಎತ್ತರದ ಚನ್ನಕೇಶವನ ವಿಗ್ರಹವಿದ್ದು ಇದರ ಪ್ರಭಾವಳಿ ಕೆತ್ತನೆಯಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ಬಿಂಬಿಸಲಾಗಿದೆ. ಚನ್ನಕೇಶವನ ಇಕ್ಕೆಲಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರ ಕೆತ್ತನೆಯಿದೆ. ಸುಕನಾಸಿಯ ದ್ವಾರದಲ್ಲಿ ಜಾಲಂಧ್ರಗಳಿದ್ದು, ಸಂಗೀತಗಾರರ(ವಾದ್ಯಗಾರರ) ಕೆತ್ತನೆಗಳಿವೆ.
ಶಿಖರವು ನಾಲ್ಕು ಸ್ತರ(ತಾಳ)ಗಳನ್ನು ಹೊಂದಿದ್ದು ಮೇಲೊಂದು ಪದ್ಮವಿದೆ. ಕಲಶವು ಎಂದೋ ಬಿದ್ದುಹೋಗಿದೆ. ಶಿಖರದ ಎಲ್ಲಾ ನಾಲ್ಕು ಸ್ತರಗಳಲ್ಲಿಯೂ ಸುತ್ತಲೂ ಸಣ್ಣ ಸಣ್ಣ ಮಂಟಪಗಳಲ್ಲಿ ಯಕ್ಷ ಯಕ್ಷಿಯರನ್ನು ಕೆತ್ತಲಾಗಿದೆ. ಈ ರೀತಿ ಕಂಡುಬರುವುದು ಬಹಳ ಅಪರೂಪ ಮತ್ತು ಇದು ಈ ದೇವಾಲಯದ ವೈಶಿಷ್ಟ್ಯ ಎನ್ನಬಹುದು.
ಶಿಖರದ ಮುಂಭಾಗದಲ್ಲಿದ್ದ ಸಳ ಸಿಂಹದೊಡನೆ ಸೆಣಸಾಡುವ ಕೆತ್ತನೆ ಎಂದೋ ಕಣ್ಮರೆಯಾಗಿದ್ದು, ಈ ಕೆತ್ತನೆಯಿರಬೇಕಾದ ಪೀಠ ಮಾತ್ರ ಉಳಿದುಕೊಂಡಿದೆ. ಈ ಪೀಠದ ಮುಂಭಾಗದಲ್ಲಿ ಬಹಳ ಅಪರೂಪದ ಶಿಖರ ಲಾಂಛನ ಫಲಕ ಇನ್ನೂ ಉಳಿದುಕೊಂಡಿದೆ.
ದೇವಾಲಯಕ್ಕಿರುವ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಸಣ್ಣ ಗೋಪುರಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಸುತ್ತಲೂ ಕೈಪಿಡಿಯ ರಚನೆಯಿದ್ದು ಇಲ್ಲೂ ಎಲ್ಲೆಡೆ ವಿಷ್ಣುವಿನ ಕೆತ್ತನೆಗಳೇ ಇವೆ. ಈ ದೇವಾಲಯಕ್ಕೆ ತಾಗಿಕೊಂಡೇ ದಕ್ಷಿಣ ಭಾಗದಲ್ಲಿ ಉಗ್ರನರಸಿಂಹನ ದೇವಾಲಯವನ್ನು ನಿರ್ಮಿಸಲಾಗಿದೆ.
ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಹೊರಗೋಡೆಯಲ್ಲಿರುವ ಭಿತ್ತಿ ಚಿತ್ರಗಳ ಕೆತ್ತನೆ. ದೇವಾಲಯದ ಸುತ್ತಲೂ ತಳಭಾಗದಿಂದ - ಆನೆ, ಅಶ್ವ, ಬಳ್ಳಿ ಸುರುಳಿ, ಪೌರಾಣಿಕ ಕಥೆಗಳು, ಮಕರ ಮತ್ತು ಹಂಸಗಳ ಸುಂದರ ಕೆತ್ತನೆಗಳಿರುವ ಆರು ಪಟ್ಟಿಕೆಗಳಿವೆ. ಪೌರಾಣಿಕ ಕಥೆಗಳನ್ನು ಕೆತ್ತಲಾಗಿರುವ ನಾಲ್ಕನೇ ಪಟ್ಟಿಕೆಯಲ್ಲಿ ರಾಮಾಯಣ ಮತ್ತು ಭಗವತದ(ಕೃಷ್ಣನ) ಕಥೆಗಳನ್ನು ಬಿಂಬಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ ಸುಕನಾಸಿಯ ಹೊರಗೋಡೆಯಲ್ಲಿ ಮಾತ್ರ ಐದನೇ ಪಟ್ಟಿಕೆಯಲ್ಲಿ ಮಕರದ ಬದಲು ಕುಳಿತಿರುವ ಭಂಗಿಯಲ್ಲಿರುವ ಯಕ್ಷ ಯಕ್ಷಿಯರು ಮತ್ತು ಆರನೇ ಪಟ್ಟಿಕೆಯಲ್ಲಿ ಹಂಸದ ಬದಲು ಸಣ್ಣ ಸಣ್ಣ ಗೋಪುರಗಳನ್ನು ಕೆತ್ತಲಾಗಿದೆ. ನಂತರ ಸಂಗೀತಗಾರರ ಕೆತ್ತನೆಗಳಿವೆ.
ಪಟ್ಟಿಕೆಗಳ ನಂತರ ತೋರಣವುಳ್ಳ ಭಿತ್ತಿಚಿತ್ರಗಳಿವೆ. ಇವುಗಳಲ್ಲಿ ಈಗ ೯೦ ಭಿತ್ತಿಚಿತ್ರಗಳನ್ನು ಮಾತ್ರ ಹೊರಗಿನಿಂದ ನೋಡಬಹುದು. ಉಳಿದ ೩೩ (ಅಂದಾಜು) ಭಿತ್ತಿಚಿತ್ರಗಳನ್ನು ಉಗ್ರನರಸಿಂಹನ ದೇವಾಲಯ ನುಂಗಿಬಿಟ್ಟಿದ್ದು, ಅವುಗಳನ್ನು ನೋಡಬೇಕಾದರೆ ಉಗ್ರನರಸಿಂಹ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಬೇಕು.
ಈ ಭಿತ್ತಿಚಿತ್ರಗಳಲ್ಲಿ ವಿಷ್ಣುವಿನ ಕೆತ್ತನೆಗಳದ್ದೇ ಮೇಲುಗೈ. ವಿಷ್ಣುವನ್ನು ಬಿಟ್ಟು ಉಳಿದ ಕೆತ್ತನೆಗಳೆಂದರೆ - ನಾಟ್ಯ ಗಣೇಶ, ವೇಣುಗೋಪಾಲ, ಲಕ್ಷ್ಮೀನರಸಿಂಹ, ಉಗ್ರನರಸಿಂಹ, ಸರಸ್ವತಿ, ಕಾಳಿಂಗಮರ್ದನ, ಇತ್ಯಾದಿ.
ಇಲ್ಲಿರುವ ಹದಿನೈದು ಭಿತ್ತಿಚಿತ್ರಗಳ ಪೀಠಭಾಗದಲ್ಲಿ ’ಹೊನ್ನೋಜ’ ಎಂದು ಬರೆಯ(ಕೆತ್ತ)ಲಾಗಿದ್ದು, ಈ ದೇವಾಲಯ ನಿರ್ಮಿಸಿದ ಶಿಲ್ಪಿಯ ಹೆಸರು ಅದಾಗಿರಬೇಕು ಎಂದು ನಂಬಲಾಗಿದೆ. ಇನ್ನೂ ೧೨ ಕೆತ್ತನೆಗಳ ಪೀಠಭಾಗದಲ್ಲಿ ಕೇವಲ ’ಹೊ’ ಎಂದಷ್ಟೇ ಬರೆಯಲಾಗಿದೆ. ಹೊನ್ನೋಜವನ್ನೇ ಸಂಕ್ಷಿಪ್ತವಾಗಿ ’ಹೊ’ ಎಂದು ಬರೆದಿರಬಹುದು.
ಯಾವ ವರ್ಷದಲ್ಲಿ ಈ ದೇವಾಲಯದ ನಿರ್ಮಾಣವಾಯಿತು ಎಂಬ ಬಗ್ಗೆ ಖಚಿತ ಮಾಹಿತಿ ಇರುವ ಶಾಸನ ಎಲ್ಲೂ ದೊರಕಿಲ್ಲ. ಶಿಲ್ಪಿಯು ತನ್ನ ಹೆಸರನ್ನು ಕೆತ್ತಿರುವ ರೀತಿಯನ್ನು ಅಧ್ಯಯನ ಮಾಡಿ (ಹಳೆಯ ಕೈಬರಹಗಳ ಅಧ್ಯಯನ) ೧೩ನೇ ಶತಮಾನದ ಮಧ್ಯಭಾಗದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ ಎಂದು ಊಹಿಸಲಾಗಿದೆ.