ಬುಧವಾರ, ಫೆಬ್ರವರಿ 27, 2013

ನಾಟ್ಯ ಗಣೇಶ


ಗಣೇಶನ ನಾಟ್ಯರೂಪದ ಈ ಸುಂದರ ಕೆತ್ತನೆ ಮನಸೂರೆಗೊಂಡಿತು. ಗಣೇಶನನ್ನು ಎಂಟು ಕೈಗಳೊಂದಿಗೆ ತೋರಿಸಿರುವ ಅಪರೂಪದ ನಿದರ್ಶನವಿದು. ಅದ್ಭುತ ಕೆತ್ತನೆ ಎಂದೆನಿಸಿತು. ಉಡುಪಿಯಿಂದ ಬಹಳ ದೂರವಿರುವ ಈ ಹಳ್ಳಿಗೆ ತೆರಳಿದ್ದು ಹಲವಾರು ವರ್ಷಗಳಿಂದ ಕಾಡುತ್ತಿದ್ದ ಸುಂದರಿಯೊಬ್ಬಳನ್ನು ನೋಡಲೋಸುಗ. ಆದರೆ ಮನಸೂರೆಗೊಂಡಿದ್ದು ಗಣೇಶನ ಈ ಅಪ್ರತಿಮ ರೂಪ.


ಎರಡು ಕೈಗಳು ಹಾವನ್ನು ಹಿಡಿದುಕೊಂಡಿದ್ದರೆ, ಉಳಿದ ಐದರಲ್ಲಿ ಕೊಡಲಿ, ಶಂಖ, ಪದ್ಮ, ಮೋದಕ ಹಾಗೂ ಅಂಕುಶಗಳನ್ನು (ನನ್ನ ಊಹೆ ತಪ್ಪೂ ಇರಬಹುದು) ಕಾಣಬಹುದು. ಇನ್ನೊಂದು ಕೈಯಲ್ಲಿ ಏನಿದೆ ಎಂದು ನನಗೆ ತಿಳಿಯಲಿಲ್ಲ. ತನ್ನ ದೊರೆ ಅದ್ಬುತವಾಗಿ ನೃತ್ಯ ಮಾಡುತ್ತಿದ್ದರೆ, ಅದನ್ನು ನೋಡುವುದನ್ನು ಬಿಟ್ಟು,  ಮೂಷಿಕ ಏನನ್ನೋ ಕಬಳಿಸುವುದರಲ್ಲಿ ಮಗ್ನನಾಗಿದೆ!

ಭಾನುವಾರ, ಫೆಬ್ರವರಿ 17, 2013

ನೀಲಕಂಠೇಶ್ವರ ದೇವಾಲಯ - ಹೂಲಿ


ನೀಲಕಂಠೇಶ್ವರ ದೇವಾಲಯದ ಮೇಲೆಲ್ಲಾ ಗಿಡಗಂಟಿಗಳು ಬೆಳೆದುಬಿಟ್ಟಿವೆ. ದೇವಾಲಯದ ಗೋಪುರ ಅರ್ಧದಷ್ಟು ಕುಸಿದುಬಿದ್ದಿದೆ ಮತ್ತು ಮುಖಮಂಟಪವೂ ಶೋಚನೀಯ ಸ್ಥಿತಿಯಲ್ಲಿದೆ. ದೇವಾಲಯದ ಹೊರಗೋಡೆ ಮಾತ್ರ ಇನ್ನೂ ಸುಸ್ಥಿತಿಯಲ್ಲಿದೆ. ಈ ಏಕಕೂಟ ದೇವಾಲಯ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿದೆ.


ಹದಿನೆಂಟು ಕಂಬಗಳಿದ್ದ ಮುಖಮಂಟಪದಲ್ಲಿ ಈಗ ೧೦-೧೨ ಮಾತ್ರ ಉಳಿದುಕೊಂಡಿವೆ. ಮುಖಮಂಟಪವೇ ಕುಸಿದುಬೀಳದಂತೆ ಒಂದೆರಡು ಕಂಬಗಳನ್ನು ಆಸರೆಯಾಗಿ ನೀಡಲಾಗಿದೆ. ಮುಂಭಾಗ ಮತ್ತು ಪಾರ್ಶ್ವಗಳಲ್ಲಿದ್ದ ಕಕ್ಷಾಸನವೂ ಕಳಚಿಹೋಗಿದೆ.


ನವರಂಗವು ಆಕರ್ಷಕ ಕೆತ್ತನೆಗಳುಳ್ಳ ಪಂಚಶಾಖಾ ದ್ವಾರವನ್ನು ಹೊಂದಿದೆ. ಪ್ರತಿ ಶಾಖೆಯ ತಳಭಾಗದಲ್ಲಿರುವ ಮಾನವ ರೂಪದ (೩ ಹೆಣ್ಣು ಹಾಗೂ ೨ ಗಂಡು) ಕೆತ್ತನೆಗಳು ಮನಮೋಹಕವಾಗಿವೆ.


ನವರಂಗದ ದ್ವಾರದ ಪಂಚಶಾಖೆಗಳಲ್ಲಿ ಗಮನಸೆಳೆಯುವುದು ಜೋಡಿ ನೃತ್ಯಗಾರರ ಮತ್ತು ಜೋಡಿ ನಾಗಗಳ ಕೆತ್ತನೆ. ನಾಗ ಜೋಡಿಯನ್ನು ೩ ವಿಭಿನ್ನ ರೀತಿಯಲ್ಲಿ ಕೆತ್ತಿರುವುದನ್ನು ಕಾಣಬಹುದು.


ಲಲಾಟದಲ್ಲಿರುವ ಗಜಲಕ್ಷ್ಮೀಯ ಕೆತ್ತನೆಯು ಹಾನಿಗೊಳಗಾಗಿದ್ದರೂ ನೋಡುಗರ ಮನಸೂರೆಗೊಳ್ಳುವಷ್ಟು ಅಲಂಕಾರವನ್ನು ಹೊಂದಿದೆ. ಅಂದಕೇಶ್ವರ ದೇವಾಲಯದಲ್ಲಿರುವಂತೆ ಇಲ್ಲಿಯೂ ಗಜಲಕ್ಷ್ಮೀಯ ಕೆತ್ತನೆಯಲ್ಲಿ ನಾಲ್ಕು ಆನೆಗಳನ್ನು ತೋರಿಸಲಾಗಿದೆ. ಮೇಲ್ಭಾಗದ ಸಾಲಿನಲ್ಲಿ ನೃತ್ಯಗಾತಿಯರನ್ನು ಮತ್ತು ವಾದ್ಯಗಾರರನ್ನು ಕೆತ್ತಲಾಗಿದೆ. ಅಷ್ಟದಿಕ್ಪಾಲಕರ ಪೈಕಿ ಬಲಭಾಗದಲ್ಲಿರುವ ನಾಲ್ಕು ದಿಕ್ಪಾಲಕರ ಕೆತ್ತನೆ ಮಾತ್ರ ಉಳಿದುಕೊಂಡಿದ್ದು, ಎಡಭಾಗದ ನಾಲ್ಕು ಬಿದ್ದುಹೋಗಿವೆ.


ನವರಂಗದ ನಡುವೆ ಒಂದೆರಡು ಇಂಚು ಎತ್ತರದಲ್ಲಿ ನಿರ್ಮಿಸಲಾಗಿರುವ ರಂಗಮಂಟಪದ ಸುತ್ತಲೂ ನಾಲ್ಕು ಬೋಳುಕಂಬಗಳಿವೆ. ಈ ಕಂಬಗಳಿಗೆ ಆಕರ್ಷಕ ರೂಪವನ್ನು ನೀಡಲಾಗಿದೆಯಾದರೂ ಯಾವುದೇ ಶೃಂಗಾರವನ್ನು ಮಾಡಲಾಗಿಲ್ಲ. ಈ ರಂಗಮಂಟಪದ ನಡುವೆಯೂ ನಿಧಿಶೋಧನೆಗಾಗಿ ಅಗೆಯಲಾಗಿದ್ದು ಈಗ ಕಲ್ಲುಗಳನ್ನು ಜೋಡಿಸಿ ಇಡಲಾಗಿದೆ. ನವರಂಗದಲ್ಲಿ ಎಂಟು ದೇವಕೋಷ್ಠಗಳಿವೆಯಾದರೂ ಎಲ್ಲವೂ ಖಾಲಿಯಿವೆ.


ಗರ್ಭಗುಡಿಯು ಕೂಡಾ ಪಂಚಶಾಖಾ ದ್ವಾರವನ್ನು ಹೊಂದಿದ್ದು ಲಲಾಟದಲ್ಲಿ ಕಿಂಚಿತ್ತೂ ಹಾನಿಗೊಳಗಾಗದ ಗಜಲಕ್ಷ್ಮೀಯನ್ನು ಹೊಂದಿದೆ. ಎಲ್ಲಾ ರೀತಿಯಲ್ಲೂ ಗರ್ಭಗುಡಿಯ ದ್ವಾರವು ನವರಂಗದ ದ್ವಾರವನ್ನೇ ಹೋಲುತ್ತದೆ. ಆದರೆ ಬಹಳ ಮೊದಲು ಬಳಿದ ಸುಣ್ಣದ ಪ್ರಭಾವದಿಂದ ಈ ದ್ವಾರವು ಕಳಾಹೀನವಾಗಿ ಕಾಣುತ್ತಿದೆ. ತಳಭಾಗದಲ್ಲಿರುವ ಮಾನವರೂಪದ ಕೆತ್ತನೆಗಳಂತೂ ತಮ್ಮ ಅಂದಚಂದವನ್ನೇ ಕಳಕೊಂಡಿವೆ.


ಶಾಖೆಗಳ ಕೆತ್ತನೆಗಳಿಂದ ಸುಣ್ಣವನ್ನು ತೆಗೆಯಲಾಗಿದ್ದು ಅವುಗಳ ಸೌಂದರ್ಯವನ್ನು ಅಸ್ವಾದಿಸಬಹುದಾಗಿದೆ. ವಿವಿಧ ವಾದ್ಯಗಳನ್ನು ನುಡಿಸುವ ವಾದ್ಯಗಾರರ ಕೆತ್ತನೆ ಮತ್ತು ಜೋಡಿ ನೃತ್ಯಗಾರರ ಕೆತ್ತನೆ ಆಕರ್ಷಕವಾಗಿದ್ದು ಗಮನಸೆಳೆಯುತ್ತದೆ.


ಇಲ್ಲಿ ಶಿವಲಿಂಗವಿದ್ದರೂ ಪೂಜೆ ನಡೆಯುವುದಿಲ್ಲ. ನಂದಿಯ ಸುಳಿವಿಲ್ಲ. ಗರ್ಭಗುಡಿಯ ಮೇಲಿರುವ ಕದಂಬನಗರ ಶೈಲಿಯ ಗೋಪುರ ಅರ್ಧದಷ್ಟು ಕುಸಿದುಬಿದ್ದಿದೆ. ಇಷ್ಟನ್ನಾದರೂ ಉಳಿಸಿಕೊಳ್ಳುವ ಸಂಕಲ್ಪವನ್ನು ಪ್ರಾಚ್ಯ ವಸ್ತು ಇಲಾಖೆ ಮಾಡಿರುವುದು ಸಂತೋಷದ ಸುದ್ದಿ. ನನ್ನ ಮೊದಲ ಭೇಟಿಗೆ ಹೋಲಿಸಿದರೆ ಎರಡನೇ ಭೇಟಿಯ ಸಮಯದಲ್ಲಿ ದೇವಾಲಯದ ಪರಿಸರದಲ್ಲಿ ಮುಳ್ಳುಗಳ ಸಂಖ್ಯೆ ಕಡಿಮೆಯಿತ್ತು!

ಭಾನುವಾರ, ಫೆಬ್ರವರಿ 03, 2013

ಸೋಮೇಶ್ವರ ದೇವಾಲಯ - ಅಬಲೂರು


ಕನ್ನಡದ ಪ್ರಖ್ಯಾತ ವಚನ ಕವಿ ಸರ್ವಜ್ಞನ ಹುಟ್ಟೂರು ಈ ಅಬಲೂರು. ೧೭ನೇ ಶತಮಾನದಲ್ಲಿ ಸರ್ವಜ್ಞ ಜೀವಿಸಿರಬಹುದು ಎಂದು ಇತಿಹಾಸತಜ್ಞರ ಅಭಿಪ್ರಾಯ. ಶಾಸನಗಳಲ್ಲಿ ಈ ಊರನ್ನು ’ಅಂಬಲೂರು’ ಎಂದು ಕರೆಯಲಾಗಿದೆ. ಇಲ್ಲಿರುವ ಚಾಲುಕ್ಯ ಶೈಲಿಯ ಸೋಮೇಶ್ವರ ದೇವಾಲಯವನ್ನು ೧೨ನೇ ಶತಮಾನದ ಸಮಯದಲ್ಲಿ ನಿರ್ಮಿಸಿರಬಹುದು.


ಇದೊಂದು ತ್ರಿಕೂಟ ದೇವಾಲಯವಾಗಿದ್ದು ೩ ಗರ್ಭಗುಡಿಗಳನ್ನು ಮತ್ತು ೩ ಅಂತರಾಳಗಳನ್ನೊಳಗೊಂಡಿದೆ. ಸಾಮಾನ್ಯ ನವರಂಗವಿದ್ದು, ಭವ್ಯ ಮುಖಮಂಟಪ ಮತ್ತು ಸಭಾಮಂಟಪಗಳಿವೆ. ಮುಖಮಂಟಪಕ್ಕೆ ೩ ದಿಕ್ಕುಗಳಿಂದ ದ್ವಾರಗಳಿದ್ದು ಸುತ್ತಲೂ ಕಕ್ಷಾಸನವಿದೆ. ಕಕ್ಷಾಸನದ ಮೇಲೆ ಒಟ್ಟು ೧೬ ಅರ್ಧಕಂಬಗಳಿವೆ. ಸಭಾಮಂಟಪದ ಇಕ್ಕೆಲಗಳಲ್ಲಿ ತಲಾ ನಾಲ್ಕು ಸುಂದರ ಚಾಲುಕ್ಯ ಶೈಲಿಯ ಕಂಬಗಳಿವೆ.


ಆರು ಶಾಖೆಗಳಿಂದ ಅಲಂಕೃತವಾಗಿರುವ ನವರಂಗದ ದ್ವಾರದ ಮೇಲ್ಭಾಗದಲ್ಲಿ ೫ ಸಣ್ಣ ಗೋಪುರಗಳನ್ನು ಕೆತ್ತಲಾಗಿದೆ. ಪ್ರತಿ ಶಾಖೆಯ ತಳಭಾಗದಲ್ಲಿ ಮಾನವರೂಪದ ಕೆತ್ತನೆಗಳಿವೆ. ಈ ದ್ವಾರದ ಪ್ರಮುಖ ಆಕರ್ಷಣೆಯೆಂದರೆ ಇಕ್ಕೆಲಗಳಲ್ಲಿರುವ ಬೃಹತ್ ಜಾಲಂಧ್ರ ಫಲಕಗಳು. ಒಂದು ಸಾಲಿನಲ್ಲಿ ೫ ಜಾಲಂಧ್ರಗಳಂತೆ ಒಟು ೮ ಸಾಲುಗಳಿವೆ. ಪ್ರತಿ ಜಾಲಂಧ್ರದಲ್ಲೂ ನಕ್ಷತ್ರಗಳ ರಚನೆಯಿದೆ. ಹೆಚ್ಚಿನವು ೮ ಮೂಲೆಗಳ ನಕ್ಷತ್ರಗಳಾದರೆ ೧೦ ಮತ್ತು ೧೨ ಮೂಲೆಗಳ ನಕ್ಷತ್ರಗಳನ್ನೂ ಕಾಣಬಹುದು.


ಜಾಲಂಧ್ರಗಳ ಸಾಲುಗಳ ನಡುವೆ ಅಡ್ಡಕ್ಕೆ ಕೆಲವು ಘಟನೆಗಳ ಚಿತ್ರಣಗಳನ್ನು ಕೆತ್ತಲಾಗಿದ್ದು, ಉದ್ದಕ್ಕೆ ಪ್ರಾಣಿ ಪಕ್ಷಿಗಳನ್ನು ತೋರಿಸಲಾಗಿದೆ. ಈ ಜಾಲಂಧ್ರಗಳ ತಳಭಾಗದಲ್ಲಿರುವ ಫಲಕದಲ್ಲೂ ಕೆತ್ತನೆಯಿದ್ದು, ಹಳೆಗನ್ನಡ ಲಿಪಿಯಿದೆ. ಏನು ಬರೆಯಲಾಗಿದೆ ಎಂದು  ತಿಳಿದರೆ ಚೆನ್ನಾಗಿರುತ್ತಿತ್ತು.


ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ಎಲ್ಲಾ ಅಂತರಾಳಗಳ ದ್ವಾರಗಳು ಜಾಲಂಧ್ರಗಳನ್ನು ಹೊಂದಿವೆ. ಪ್ರಮುಖ ಗರ್ಭಗುಡಿಯಲ್ಲಿ ಮಾತ್ರ ಶಿವಲಿಂಗವಿದ್ದು ಉಳಿದೆರಡು ಖಾಲಿಯಿವೆ. ಪ್ರಮುಖ ಗರ್ಭಗುಡಿಯ ಮೇಲೆ ಕದಂಬ ನಗರ ಶೈಲಿಯ ಶಿಖರವಿದೆ.


ಪ್ರಮುಖ ಗರ್ಭಗುಡಿಯ ಹೊರಭಾಗದಲ್ಲಿರುವ ಎರಡು ದೇವಕೋಷ್ಠಗಳಲ್ಲಿ ಪೀಠದ ಮೇಲೆ ಕುಳಿತಿರುವ ಭಂಗಿಯಲ್ಲಿರುವ ಶಿವನ ಮೂರ್ತಿಯನ್ನು ಕಾಣಬಹುದು. ಈ ದೇವಕೋಷ್ಠಗಳು ಸುಂದರ ಗೋಪುರ ಮತ್ತು ಕಲಶವನ್ನೂ ಹೊಂದಿವೆ. ದೇವಕೋಷ್ಠದ ಎರಡೂ ಬದಿಗಳಲ್ಲಿ ನಿಂತಿರುವ ಭಂಗಿಯಲ್ಲಿರುವ ಶಿವನ ಸಣ್ಣ ಮೂರ್ತಿಗಳನ್ನೂ ಕಾಣಬಹುದು.


ಶಾಸನಗಳ ಪ್ರಕಾರ ಈ ದೇವಾಲಯವನ್ನು ’ಏಕಾಂತದ ರಾಮಯ್ಯ’ ಎಂಬ ಪ್ರಸಿದ್ಧ ಶೈವಧರ್ಮ ಪ್ರತಿಪಾದಕನು ನಿರ್ಮಿಸಿದನು. ಪ್ರಮುಖ ಗರ್ಭಗುಡಿ, ಅಂತರಾಳ ಮತ್ತು ನವರಂಗವನ್ನು ಈತ ನಿರ್ಮಿಸಿದ್ದು, ಉಳಿದೆರಡು ಗರ್ಭಗುಡಿಗಳು, ಅವುಗಳ ಅಂತರಾಳಗಳು ಮತ್ತು ಮುಖಮಂಟಪ ಹಾಗೂ ಸಭಾಮಂಟಪಗಳನ್ನು ನಂತರದ ವರ್ಷಗಳಲ್ಲಿ ನಿರ್ಮಿಸಲಾಯಿತು ಎಂದು ನಂಬಲಾಗಿದೆ.


ಪ್ರಖ್ಯಾತ ವಚನಕಾರನೂ ಆಗಿದ್ದ ಈ ರಾಮಯ್ಯನ ಬಗ್ಗೆ ಒಂದು ದಂತಕಥೆ ಪ್ರಚಲಿತದಲ್ಲಿದೆ. ಹನ್ನೆರಡನೇ ಶತಮಾನದವರೆಗೆ ಜೈನಧರ್ಮ ಉತ್ತುಂಗದಲ್ಲಿತ್ತು. ತದನಂತರ ಅದರ ಪ್ರಭಾವ ಕ್ರಮೇಣ ಕ್ಷೀಣಿಸತೊಡಗಿತು. ಶೈವಧರ್ಮದ ಪ್ರತಿಪಾದಕರಾದ ಏಕಾಂತದ ರಾಮಯ್ಯನಂಥವರು ಜೈನಧರ್ಮವನ್ನು ಪ್ರಬಲವಾಗಿ ಪ್ರತಿಭಟಿಸತೊಡಗಿದರು. ಇದೇ ವಿಷಯದಲ್ಲಿ ಜೈನರೊಂದಿಗೆ ನಡೆದ ವಾಗ್ಯುದ್ಧವೊಂದರಲ್ಲಿ ಈ ರಾಮಯ್ಯ ತನ್ನ ರುಂಡವನ್ನೇ ಕತ್ತರಿಸಿಕೊಂಡಿದ್ದು, ಆತನನ್ನು ಸಾಕ್ಷಾತ್ ಶಿವನೇ ಬದುಕಿಸಿದನು ಎಂದು ನಂಬಲಾಗಿದೆ. ಈ ದೇವಾಲಯದಲ್ಲಿ ದೊರಕಿರುವ ಇಸವಿ ೧೨೦೦ ರ ಶಿಲಾಶಾಸನವೊಂದರಲ್ಲಿ ಈ ಘಟನೆಯನ್ನು ವಿವರವಾಗಿ ತಿಳಿಸಲಾಗಿದೆ.


ಮುಖಮಂಟಪದ ಬಲಭಾಗದಲ್ಲಿರುವ ಕೆತ್ತನೆಯಲ್ಲಿ ಜೈನ ತೀರ್ಥಂಕರ ಮೂರ್ತಿಯನ್ನು ಹಾಳುಗೆಡುವ ಮತ್ತು ಶಿವಲಿಂಗವನ್ನು ಪೂಜೆಗೆ ಸಮರ್ಪಿಸುವ ಚಿತ್ರಣವಿದೆ. ಇವೆರಡರ ನಡುವೆ ಹೋರಾಟ, ವಾಗ್ಯುದ್ಧ ಇತ್ಯಾದಿಗಳು ನಡೆಯುವುದನ್ನು ತೋರಿಸಲಾಗಿದೆ.


ಮುಖಮಂಟಪದ ಎಡಭಾಗದಲ್ಲಿರುವ ಕೆತ್ತನೆಯಲ್ಲಿ ಏಕಾಂತದ ರಾಮಯ್ಯ, ಜೇಡರ ದಾಸಿಮಯ್ಯ, ಗುಂಡಯ್ಯ, ಸಿರಿಯಾಳ ಸೆಟ್ಟಿ ಇತ್ಯಾದಿ ಶಿವಶರಣರನ್ನು ತೋರಿಸಲಾಗಿದೆ. ಇವು ಶಿವಶರಣರ ಅತ್ಯಂತ ಪುರಾತನ ಕೆತ್ತನೆಗಳೆಂದು ನಂಬಲಾಗಿದೆ.


ಸಂಪೂರ್ಣವಾಗಿ ಶಿಥಿಲಗೊಂಡಿದ್ದ ದೇವಾಲಯದ ಹೊರಭಾಗವನ್ನು ಹಂತಹಂತವಾಗಿ ಪ್ರಾಚ್ಯ ವಸ್ತು ಇಲಾಖೆ ಜೀರ್ಣೋದ್ಧಾರಗೊಳಿಸಿದೆ. ಇದರ ಪ್ರತಿಫಲವಾಗಿ ಇಂದು ದೇವಾಲಯದ ಭವ್ಯ ಮೂಲ ರೂಪ ನೋಡುವ ಭಾಗ್ಯ ನಮ್ಮದಾಗಿದೆ.


ಅಬಲೂರು ಸರ್ವಜ್ಞನ ಹುಟ್ಟೂರು ಎಂದೂ ಪ್ರಸಿದ್ಧಿ ಪಡೆದಿರುವ ಸ್ಥಳ. ಈ ದೇವಾಲಯದ ಸಮೀಪವೇ ಸರ್ವಜ್ಞನ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಲಾಗಿದೆ.


ಸುಮಾರು ೮-೧೦ ಅಡಿ ಎತ್ತರವಿರುವ ಪೀಠದ ಮೇಲಿರುವ ಸರ್ವಜ್ಞ ಮೂರ್ತಿ ಚೆನ್ನಾಗಿದ್ದು, ಪೀಠದ ೩ ಪಾರ್ಶ್ವಗಳಲ್ಲಿ ಸರ್ವಜ್ಞನ ವಚನಗಳಿರುವ ಫಲಕಗಳಿವೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ