
ಕೋರವಂಗಲದ ಬುಚೇಶ್ವರ ದೇವಾಲಯವನ್ನು ಕ್ರಿ.ಶ ೧೧೭೩ರಲ್ಲಿ ಹೊಯ್ಸಳ ದೊರೆ ಎರಡನೇ ಬಲ್ಲಾಳನ ಆಳ್ವಿಕೆಯ ಕಾಲದಲ್ಲಿ ಆತನ ಮಂತ್ರಿಯಾಗಿದ್ದ (ಕೆಲವೆಡೆ ದಂಡನಾಯಕನಾಗಿದ್ದ ಎಂದೂ ಹೇಳಲಾಗಿದೆ) ಬುಚಿರಾಜ ಎಂಬವನು ನಿರ್ಮಿಸಿದನು. ಹಾಗಾಗಿ ದೇವರಿಗೆ ’ಬುಚೇಶ್ವರ’ ಎಂಬ ಹೆಸರು!


ದೇವಾಲಯ ೩೨ ಕಂಬಗಳ ಮುಖಮಂಟಪ, ೪ ಕಂಬಗಳುಳ್ಳ ನವರಂಗ, ಸುಖನಾಸಿ ಮತ್ತು ಗರ್ಭಗೃಹಗಳನ್ನು ಒಳಗೊಂಡಿದೆ. ಈ ದೇವಾಲಯದಲ್ಲೂ ಗರ್ಭಗುಡಿಗೆ ಮುಖಮಾಡಿ ಮತ್ತು ಮುಖಮಂಟಪಕ್ಕೆ ತಾಗಿಕೊಂಡೇ ಸೂರ್ಯನಾರಾಯಣ ದೇವರ ಗರ್ಭಗುಡಿಯಿದೆ. ಹಾಗಾಗಿ ದೇವಾಲಯದ ಪ್ರವೇಶದ್ವಾರ ಮುಂದಿನಿಂದ ಇರದೆ ಎರಡೂ ಪಾರ್ಶ್ವಗಳಿಂದ ಇದೆ.


ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಸ್ವರ್ಣರಂಗಿನ ನಾಗನ ಹೆಡೆಯನ್ನು ಗ್ರಾಮಸ್ಥರು ಅಳವಡಿಸಿದ್ದಾರೆ. ನವರಂಗದ ಛಾವಣಿಯಲ್ಲಿ ಉತ್ತಮ ಕೆತ್ತನೆಗಳಿವೆ. ನವರಂಗದಲ್ಲೇ ಇರುವ ಕವಾಟಗಳಲ್ಲಿ ಗಣಪನ ಮತ್ತು ದೇವಿಯೊಬ್ಬಳ ವಿಗ್ರಹಗಳಿವೆ. ಎಲ್ಲಿಂದಲೋ ಒಂದು ನಂದಿಯ ಸಣ್ಣ ಮೂರ್ತಿಯನ್ನು ತಂದು ನವರಂಗದಲ್ಲೇ ಇರಿಸಲಾಗಿದೆ.


ನವರಂಗದ ದ್ವಾರ ೫ ತೋಳುಗಳದ್ದಾಗಿದ್ದು, ಒಂದೊಂದು ತೋಳಿನಲ್ಲೂ ವೈವಿಧ್ಯತೆಯ ಕೆತ್ತನೆ ಕೆಲಸ. ನವರಂಗ ಮತ್ತು ಸೂರ್ಯನಾರಾಯಣ ದೇವರ ಗರ್ಭಗುಡಿಗಳ ದ್ವಾರಗಳ ದ್ವಾರಪಾಲಕರನ್ನು ಸುಂದರವಾಗಿ ಕೆತ್ತಲಾಗಿದೆ. ಮುಖಮಂಟಪದಲ್ಲಿ ಸುತ್ತಲೂ ಕುಳಿತುಕೊಳ್ಳಲು ವ್ಯವಸ್ಥೆಯಿದ್ದು, ಚೆನ್ನೆಮಣೆಯಂತಹ ಆಟಗಳನ್ನು ಆಡಲು ಕಲ್ಲಿನ ಆಸನದಲ್ಲೇ ಬೇಕಾದ ಹಾಗೆ ವ್ಯವಸ್ಥೆ ಮಾಡಲಾದ ಕುರುಹುಗಳಿವೆ. ಹೆಚ್ಚಿನ ಪ್ರಾಚೀನ ದೇವಾಲಯಗಳಲ್ಲಿ ಇವನ್ನು ಕಾಣಬಹುದು.



ಏಕಕೂಟ ರಚನೆಯ ಈ ದೇವಾಲಯದ ಹೊರಗೋಡೆಯಲ್ಲಿ ಪೌರಾಣಿಕ ಪಾತ್ರ ಮತ್ತು ಘಟನೆಗಳನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಗೋಪುರದ ರಚನೆಯೂ ಸುಂದರವಾಗಿದೆ. ಎರಡೂ ಪ್ರಮುಖ ದ್ವಾರಗಳ ಇಕ್ಕೆಲಗಳಲ್ಲಿ ಅನೆಗಳ ಕೆತ್ತನೆಯಿದೆ ಮತ್ತು ದ್ವಾರಪಾಲಕರೂ ಇದ್ದಾರೆ.



ಎಲ್ಲಾ ಕೆತ್ತನೆಗಳನ್ನು ಒಂದಲ್ಲ ಒಂದು ರೀತಿಯಲ್ಲಿ ವಿರೂಪಗೊಳಿಸಲಾಗಿದೆ. ಒಂದು ವಿಗ್ರಹದ ಕೈ ಭಗ್ನಗೊಂದರೆ ಇನ್ನೊಂದರ ಕಾಲು. ಕೆಲವೆಡೆ ಮುಖವನ್ನೇ ಜಜ್ಜಿ ಹಾಕಲಾಗಿದೆ. ಇದು ಈ ದೇವಾಲಯದಲ್ಲಿ ಮಾತ್ರವಲ್ಲ, ರಾಜ್ಯದ ಹೆಚ್ಚಿನ ಕಡೆಯೂ ಇದೇ ರೀತಿಯ ದೃಶ್ಯ ಕಾಣಸಿಗುತ್ತದೆ. ಎಂತಹ ವಿಕೃತ ಮನಸ್ಸಿನ ಮತ್ತು ಮೊಣಕಾಲ ಕೆಳಗೆ ಬುದ್ಧಿ ಇರುವ ದುರುಳರು!



ಬುಚೇಶ್ವರ ದೇವಾಲಯದಲ್ಲಿ ದಿನಾಲೂ ಪೂಜೆ ನಡೆಯುತ್ತದೆ. ಎದುರಲ್ಲೇ ಕಾಲಭೈರವ ದೇವರ ಗುಡಿಯಿದೆ. ಪುರಾತತ್ವ ಇಲಾಖೆ ಸುತ್ತಲೂ ಉದ್ಯಾನವನ ನಿರ್ಮಿಸಿ ದೇವಾಲಯವನ್ನು ಚೆನ್ನಾಗಿ ಕಾಪಾಡಿಕೊಂಡು ಬಂದಿದೆ. ಬುಚೇಶ್ವರ ದೇವಾಲಯದಿಂದ ಅನತಿ ದೂರದಲ್ಲೇ ಬುಚಿರಾಜನ ಸಹೋದರನು ಕ್ರಿ.ಶ. ೧೧೬೦ರಲ್ಲಿ ಕಟ್ಟಿಸಿರುವ ನಕೇಶ್ವರ ಮತ್ತು ಗೋವಿಂದೇಶ್ವರ ದೇವಾಲಯಗಳಿದ್ದು, ಅವೀಗ ಪಾಳು ಬೀಳುತ್ತಿವೆ.