
ಅರಸೀಕೆರೆಯ ಚಂದ್ರಮೌಳೇಶ್ವರ ದೇವಾಲಯ ತನ್ನ ವಿಶಿಷ್ಟವಾದ ಮುಖಮಂಟಪದಿಂದ ಪ್ರಸಿದ್ಧಿಯನ್ನು ಪಡೆದಿದೆ. ಹೊಯ್ಸಳ ದೇವಾಲಯಗಳೆಲ್ಲೂ ಈ ಶೈಲಿಯ ಮುಖಮಂಟಪ ಕಾಣಬರುವುದಿಲ್ಲ. ಇಸವಿ ೧೨೨೦ರಲ್ಲಿ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಪೂರ್ವಾಭಿಮುಖವಾಗಿರುವ ಈ ದೇವಾಲಯ ನಿರ್ಮಾಣಗೊಂಡಿದೆ. ಹನ್ನೊಂದನೇ ಶತಮಾನದಲ್ಲಿ ಹೊಯ್ಸಳ ದೊರೆ ತನ್ನ ಅರಸಿಯ ಹೆಸರಿನಲ್ಲಿ ಇಲ್ಲಿ ಬೃಹತ್ ಕೆರೆಯೊಂದನ್ನು ನಿರ್ಮಿಸಿದ್ದರಿಂದ ಈ ಊರಿಗೆ ಅರಸೀಕೆರೆ ಎಂಬ ಹೆಸರು ಬಂದಿದೆ. ಶಾಸನಗಳಲ್ಲಿ ಅರಸೀಕೆರೆಯನ್ನು ’ಸರ್ವಜ್ಞ ವಿಜಯ’ ಮತ್ತು ’ಬಲ್ಲಾಳಪುರ’ ಎಂದು ಕರೆಯಲಾಗಿದೆ.

ನಕ್ಷತ್ರಾಕರದ ವಿನ್ಯಾಸದಿಂದ ಕೂಡಿರುವ ಮುಖಮಂಟಪದಲ್ಲಿ ಕುಳಿತುಕೊಂಡು ಟೈಮ್ ಪಾಸ್ ಮಾಡುವುದೇ ಒಂದು ಸಂತೋಷದ ಅನುಭವ. ಸುತ್ತಲೂ ಇರುವ ಕಲ್ಲಿನ ಆಸನಗಳನ್ನು ಆನೆಗಳು ಹೊತ್ತಿರುವಂತೆ ವಿನ್ಯಾಸಗೊಳಿಸಲಾಗಿದೆ. ಈ ದೇವಾಲಯವನ್ನು ’ಶಿವಾಲಯ’ವೆಂದೂ ಕರೆಯುತ್ತಾರೆ.

ಈ ಏಕಕೂಟ ದೇವಾಲಯದ ಗೋಪುರವನ್ನು ೫ ತಾಳಗಳಲ್ಲಿ ನಿರ್ಮಿಸಲಾಗಿದ್ದು, ಇವುಗಳ ಮೇಲೊಂದು ಪದ್ಮವನ್ನಿರಿಸಿ ನಂತರ ಕಳಸವೊಂದನ್ನು ಕೂರಿಸಲಾಗಿದೆ. ಗೋಪುರದ ಮುಂಭಾಗದಲ್ಲಿ ನಂದಿಯ ಮೂರ್ತಿಯನ್ನು ನಿಲ್ಲಿಸಲಾಗಿದೆ. ಹೆಚ್ಚಾಗಿ ಸಳ ಹುಳಿಯನ್ನು ಕೊಲ್ಲುವ ಕೆತ್ತನೆ ಇರುವ ಸ್ಥಳದಲ್ಲಿ ಈ ನಂದಿಯ ಮೂರ್ತಿ ಕಂಡು ಸೋಜಿಗವಾಯಿತು. ಇಲ್ಲಿ ಮತ್ತು ಹಾರ್ನಹಳ್ಳಿಯ ಒಂದು ದೇವಾಲಯದಲ್ಲೂ ಗೋಪುರದ ಮುಂಭಾಗದಲ್ಲಿ ನಂದಿ ಆಸೀನನಾಗಿರುವುದು ಅಚ್ಚರಿ ಮೂಡಿಸಿತು.


ನವರಂಗದ ದ್ವಾರಕ್ಕೆ ಬೀಗ ಹಾಕಲಾಗಿದ್ದರಿಂದ ನಮಗೆ ದೇವಾಲಯದ ಒಳಗೆ ತೆರಳಲು ಆಗಲಿಲ್ಲ. ನವರಂಗ ಮತ್ತು ಗರ್ಭಗುಡಿಗಳ ದ್ವಾರದಲ್ಲಿ ಅಪೂರ್ವ ಕೆತ್ತನೆಗಳಿವೆಯೆಂದು ಓದಿದ್ದೆ. ದೇವಾಲಯದ ಹೊರಗೋಡೆಯ ತುಂಬಾ ಕೆತ್ತನೆಗಳ ರಾಶಿ. ಈ ದೇವಾಲಯದ ಸಮೀಪದಲ್ಲೇ ಇನ್ನೊಂದು ಶಿವ ದೇವಾಲಯವಿದೆ. ಇಲ್ಲಿರುವ ಎರಡೂ ಗರ್ಭಗೃಹಗಳಲ್ಲಿ ಶಿವಲಿಂಗವಿದ್ದು ವೀರೇಶ್ವರ ಮತ್ತು ಬಕ್ಕೇಶ್ವರ ಎಂದು ಕರೆಯಲಾಗುತ್ತದೆ.
ಮಾಹಿತಿ: ಐ.ಸೇಸುನಾಥನ್ ಮತ್ತು ಪ್ರೇಮಕುಮಾರ್