ಧಾರವಾಡದಿಂದ ಗಂಗಾಧರ್ ಕಲ್ಲೂರ್ ಫೋನ್ ಮಾಡಿ 'ಸರ, ಹೊಸ ಫಾಲ್ಸ್ ಕಂಡ್-ಹುಡ್ಕೀನಿ, ಈ ಸಂಡೆ ಹೊಂಟೀವಿ, ಬರಾಕ್-ಹತ್ತೀರಿ?' ಎಂದಾಗ, 'ನಡ್ರಿ ಸರ' ಎಂದೆ. ಕಲ್ಲೂರ್-ರೊಂದಿಗೆ ದೂರವಾಣಿಯಲ್ಲಿ ೪ ತಿಂಗಳಿಂದ ಮಾತುಕತೆ ನಡೆದಿದ್ದರೂ ಭೇಟಿಯಾಗಿರಲಿಲ್ಲ. ಈ ಕಲ್ಲೂರ್, ಕೊರಳಿಗೊಂದು 'ಕಂಪಾಸ್' ಮತ್ತು ಬೆನ್ನಿಗೊಂದು 'ಬ್ಯಾಕ್-ಪ್ಯಾಕ್' ಏರಿಸಿಕೊಂಡು ಹೊರಟರೆಂದರೆ, ನಡೆದದ್ದೆ ದಾರಿ. ದಾಂಡೇಲಿ ಸಮೀಪ, ಬೆಳಗಾವಿ ಜಿಲ್ಲೆಯ ಗಡಿಗೆ ತಾಗಿಕೊಂಡೇ ಹರಿಯುವ ಹಳ್ಳ 'ಭರ್ಚಿ ನಾಲಾ'. ಈ ಹಳ್ಳಗುಂಟ ಬೇಸಗೆಯಲ್ಲಿ ಚಾರಣ ಮಾಡಿದ್ದ ಕಲ್ಲೂರ್, ಈ ಜಲಪಾತವನ್ನು ಕಂಡುಹುಡುಕಿದ್ದರು.
ನಿನ್ನೆ ಆದಿತ್ಯವಾರ ಬೆಳಗ್ಗೆ ೯ ಜನರ ನಮ್ಮ ತಂಡ (ವಿವೇಕ್ ಯೇರಿ, ಡಾಕ್ಟರ್ ಗುತ್ತಲ್, ಕಲ್ಲೂರ್, ಡಾಕ್ಟರ್ ಕುಲಕರ್ಣಿ, ಕುಮಾರ್, ವಿನಯ್, ನಾನು ಮತ್ತು ಮಕ್ಕಳಾದ ಓಂಕಾರ್ ಹಾಗೂ ಮಿಂಚು) ಮುಂಜಾನೆ ೬ಕ್ಕೆ ಧಾರವಾಡದಿಂದ ಹೊರಟು ಸುಮಾರು ೯ಕ್ಕೆ 'ಹಂಡಿ ಭಡಂಗನಾಥ' ಮಂದಿರಕ್ಕೆ ಬಂದೆವು.
ಇಲ್ಲಿಂದ ೯.೪೦ಕ್ಕೆ ಚಾರಣ ಆರಂಭ. ಬೆಳಗಾವಿ ಜಿಲ್ಲೆಯಿಂದ ಆರಂಭವಾಗುವ ಚಾರಣ ೩ ತಾಸುಗಳ ಕಠಿಣ ಚಾರಣದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊನೆಗೊಳ್ಳುವುದು. ಸುಮಾರು ೪೦ ನಿಮಿಷಗಳ ಚಾರಣದ ಬಳಿಕ ಎದುರಾಗುವುದೊಂದು ಇಳಿಜಾರು. ಸುಮಾರು ೧೦-೧೨ ಅಡಿ ಎತ್ತರಕ್ಕೆ ಬೆಳೆದಿರುವ ಸಸ್ಯರಾಶಿಯ ನಡುವೆ, ಎದ್ದು ಬಿದ್ದು, ದಾರಿ ಮಾಡಿಕೊಂಡು ಅರ್ಧ ಗಂಟೆಯ ಕಾಲ ಕಡಿದಾದ ಇಳಿಜಾರಿನ ಚಾರಣದ ವಿಶಿಷ್ಟ ಅನುಭವ. ನಂತರ ಕಾಡಿನ ದಾರಿಯಲ್ಲಿ ಮತ್ತೆ ಚಾರಣ. ಕಲ್ಲೂರ್ ಮುಂದೆ, ನಾವು ಅವರ ಹಿಂದೆ. ಕಲ್ಲೂರ್-ರವರ 'ಸೆನ್ಸ್ ಆಫ್ ಫಾರೆಸ್ಟ್' ಅದ್ಭುತ. ಅವರೊಂದಿಗೆ ಮಾತುಕತೆಗಿಳಿದರೆ ತಿಳಿದುಕೊಳ್ಳುವ ವಿಚಾರಗಳು ಹಲವಾರು.
ಜನವರಿಯಲ್ಲಿ ಅಮೇದಿಕಲ್ಲು ಚಾರಣದ ಬಳಿಕ, ಇಷ್ಟು ಕಠಿಣ ಚಾರಣ ಮಾಡಿರಲಿಲ್ಲ. ಕಾಲುಗಳು ಸೋತು ಇನ್ನೇನು ಮುಂದೆ ನಡೆಯಲಾಗದು ಎನ್ನುವಷ್ಟರಲ್ಲಿ ಬಂದೇ ಬಿಟ್ಟಿತು 'ಭರ್ಚಿ ನಾಲಾ ಜಲಪಾತ'. ಸುಮಾರು ೪೫ ಅಡಿಗಳಷ್ಟು ಎತ್ತರವಿದ್ದು, ಎರಡು ಕವಲುಗಳಾಗಿ ಧುಮುಕುವ ಜಲಪಾತದ ಮುಂದೆ ಇರುವ ವಿಶಾಲವಾದ ಜಾಗದಲ್ಲಿ ಮನಸಾರೆ ಜಲಕ್ರೀಡೆಯಾಡಿದರು ಎಲ್ಲರು. ಇದೊಂದು ಫಂಟಾಸ್ಟಿಕ್ ಪ್ಲೇಸ್. ಜನರ, ಸಾಕು ಜಾನುವಾರುಗಳ ಸುಳಿವು, ಕುರುಹು ಇಲ್ಲದ ಎಕ್-ದಂ ಶಾಂತ ಸ್ಥಳ. ಇದು ಭರ್ಚಿ ನಾಲಾ ಜಲಪಾತದ ಎರಡನೇ ಹಂತ. ಮೊದಲನೇ ಹಂತ ಸ್ವಲ್ಪ ಮೇಲ್ಗಡೆ ಇದ್ದು ಸುಮಾರು ೩೦ ಆಡಿ ಎತ್ತರವಿದೆ. ನಂತರದ ಎರಡು ಹಂತಗಳು ಇನ್ನೂ ಸ್ವಲ್ಪ ಮುಂದಿದ್ದು, ಅವು ಕೇವಲ ೧೦-೨೦ ಅಡಿಗಳಷ್ಟು ಎತ್ತರವಿದ್ದಿದ್ದರಿಂದ ನಾವು ಅಲ್ಲಿಗೆ ತೆರಳಲಿಲ್ಲ.
ನಂತರ ಹಿಂತಿರುಗುವಾಗ ನನಗೆ 'ಕ್ರಾಂಪ್ಸ್' ಬಂದು ಬಹಳ ತೊಂದರೆಯಾಯಿತು. ಆದರೂ ಹೇಗಾದರೂ ಮಾಡಿ, ಉಳಿದವರ ಸಹಾಯದಿಂದ, ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ, ಕುಮಾರ್ ಆಗಾಗ 'ಇನ್ಸ್ಟಂಟ್ ಎನರ್ಜಿರಿ' ಅನ್ನುತ್ತಾ ನೀಡುತ್ತಿದ್ದ ಬೆಲ್ಲ ತಿನ್ನುತ್ತಾ, ನಿಧಾನವಾಗಿ ಕಾಲೆಳೆದುಕೊಳ್ಳುತ್ತಾ ಮತ್ತೆ 'ಹಂಡಿ ಭಡಂಗನಾಥ' ಮಂದಿರಕ್ಕೆ ಬಂದಾಗ ಸಂಜೆ ೬:೦೦ ಆಗಿತ್ತು.
ನನ್ನಿಂದಾಗಿ ಸುಮಾರು ೬೦ ನಿಮಿಷ ವಿಳಂಬವಾಯಿತು. ಯಾವಾಗಲೂ ಬರದ 'ಕ್ರ್ಯಾಂಪ್ಸ್' ಅಂದೇ ಬರಬೇಕಿತ್ತೆ? ಆದರೂ ಎಲ್ಲರೂ ಬಹಳ 'ಸ್ಪೋರ್ಟಿವ್' ಆಗಿ ವರ್ತಿಸಿ ನನಗೆ ಮುಜುಗರ ಉಂಟಾಗದಂತೆ ನೋಡಿಕೊಂಡರು. ಕುಂಭಾರ್ಡಾ ಗ್ರಾಮದಲ್ಲಿ ಸವಿಯಾದ ಚಹಾ ಹಾಗೂ ಮಂಡಕ್ಕಿ ಸವಿದು, ೯:೩೦ಕ್ಕೆ ಲ್ಯಾಂಡೆಡ್ ಇನ್ ಧಾರವಾಡ್.