ಗುರುವಾರ, ಏಪ್ರಿಲ್ 30, 2015

ಈ ಕಡಲತೀರ... ಅಂದ... ಅಪಾಯ...


ಈ ಊರಿನಲ್ಲಿ ನನ್ನ ಗೆಳೆಯ ಅನಿಲ ವಾಸವಾಗಿದ್ದಾನೆ. ಅದೊಂದು ಶನಿವಾರ ಮುಂಜಾನೆ ಆತನ ಆಹ್ವಾನದ ಮೇರೆಗೆ ನಾನು ಮತ್ತು ಸಂಬಂಧಿ ಅರುಣಾಚಲ ಆ ಕಡೆ ಹೊರಟೆವು. ಫುಲ್ ರಿಲ್ಯಾಕ್ಸ್ ಮಾಡಿ, ನೋಡಬೇಕೆಂದಿದ್ದ ಮೂರ್ನಾಲ್ಕು ಸ್ಥಳಗಳನ್ನು ನೋಡಿ ಮರುದಿನ ಸಂಜೆ ಉಡುಪಿಗೆ ಹಿಂತಿರುಗುವ ಪ್ಲ್ಯಾನ್ ನನ್ನದಾಗಿತ್ತು.


ಮೊದಲು ಈ ಕಡಲತೀರಕ್ಕೆ ತೆರಳಿದೆವು. ಮೂರ್ನಾಲ್ಕು ವರ್ಷಗಳ ಮೊದಲು ಉದ್ಯಮಿಯೊಬ್ಬರಿಗೆ ಈ ಕಡಲತೀರವನ್ನು ಜಿಲ್ಲಾ ಪ್ರಾಧಿಕಾರ ಅನಧಿಕೃತವಾಗಿ ಮಾರಾಟ ಮಾಡಿದೆ ಎಂಬ ಸುದ್ದಿ ದಿನಪತ್ರಿಕೆಯಲ್ಲಿ ಬಂದಿತ್ತು. ಸುದ್ದಿಯು ನಿಜವೋ ಅಥವಾ ತದನಂತರ ಏನಾಯಿತು ನನಗೆ ಗೊತ್ತಿಲ್ಲ. ಈ ಸ್ಥಳವೇ ಅಷ್ಟು ರಮಣೀಯವಾಗಿದೆ. ಕಡಲೊಳಗೆ ಚಾಚಿರುವ ಎರಡು ಬೆಟ್ಟಗಳ ನಡುವೆ ಇರುವ ಸುಮಾರು ಒಂದು ಕಿಮಿ ಉದ್ದವಿರುವ ಈ ಕಡಲತೀರವನ್ನು ಖರೀದಿಸಿ ಇಲ್ಲೇ ಒಂದು ರೆಸಾರ್ಟ್ ಸ್ಥಾಪಿಸಿ ರೊಕ್ಕ ಮಾಡುವ ವಿಚಾರ ಯಾರಿಗೂ ಬರಬಹುದು. ಆದರೆ ಅದಕ್ಕೆ ಕುಮ್ಮಕ್ಕು ನೀಡದೆ ಈ ಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಬೇಕಾದ್ದು ಜಿಲ್ಲೆಯ ಕರ್ತವ್ಯ.

 
ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದರೆ ಈ ಸ್ಥಳ ಕೆಟ್ಟು ರಾಡಿಯಾಗುವುದರಲ್ಲಿ ಸಂದೇಹವೇ ಇಲ್ಲ. ಸದ್ಯಕ್ಕೆ ಪ್ರವಾಸಿಗರು ಯಾರೂ ಇತ್ತ ಸುಳಿಯುವುದಿಲ್ಲ. ಸಂಜೆ ಹೊತ್ತಿಗೆ ಆಸುಪಾಸಿನ ಜನರು ಬರುತ್ತಾರಷ್ಟೆ. ಅದು ಕೂಡಾ ಬಹಳ ವಿರಳ. ಆದರೆ ಹಾಗೆ ಬಂದವರು ಇಲ್ಲಿ ಮಜಾ ಉಡಾಯಿಸಿ ಅವಶೇಷಗಳನ್ನು ಬಿಟ್ಟು ಹೋಗುತ್ತಾರೆ ಎನ್ನುವುದು ವಿಪರ್ಯಾಸ.


ಕಡಲತೀರದ ಉದ್ದಕ್ಕೂ ಹೆಜ್ಜೆ ಹಾಕಿದೆವು. ಎಡಬದಿಯಲ್ಲಿರುವ ಬೆಟ್ಟವನ್ನು ಸುತ್ತು ಬಳಸಿ, ಬಂಡೆಗಳನ್ನು ದಾಟಿ, ಆ ಕಡೆ ತೆರಳಿದರೆ ಅಲ್ಲಿಂದ ಸುಂದರ ದೃಶ್ಯವನ್ನು ಕಾಣಬಹುದು.


ಅಂದ ಹಾಗೆ ಈ ಕಡಲತೀರಕ್ಕೆ ಭೇಟಿ ಸುಂದರ ದೃಶ್ಯವನ್ನು ಕಣ್ತುಂಬಾ ಸವಿಯುವುದಕ್ಕೆ ಮತ್ತು ನೆರಳಿನಲ್ಲಿ ಕುಳಿತು ಆನಂದಿಸುವುದಕ್ಕೆ ಮಾತ್ರ ಸೀಮಿತವಾಗಿರಬೇಕು. ನೀರಿಗಿಳಿಯುವುದು ತುಂಬಾನೇ ಅಪಾಯಕಾರಿ. ಈ ಕಡಲತೀರ ತಟದಿಂದಲೇ ಆಳವಾಗಿದೆ. ನಾನೆಂದಿಗೂ ಎಲ್ಲೂ ನೀರಿಗಿಳಿಯುವುದಿಲ್ಲ. ಹಾಗಿರುವಾಗ ಇಲ್ಲಂತೂ ಅಲೆಗಳ ರಭಸ ಮತ್ತು ಆಳವನ್ನು ನೋಡಿ ನೀರಿನಿಂದ ಸುಮಾರು ಅಂತರ ಕಾಯ್ದುಕೊಂಡೇ ತೀರದುದ್ದಕ್ಕೂ ಹೆಜ್ಜೆ ಹಾಕಿದೆ.


ಇಲ್ಲಿ ಎರಡನೇ ಬಾರಿ ಸಂಸಾರ ಸಮೇತ ತೆರಳಿದ್ದೆ. ಅರುಣಾಚಲನೂ ಸಂಸಾರ ಸಮೇತನಾಗಿ ಬಂದಿದ್ದ. ನೀರಿನಲ್ಲಿ ಕಾಲಿಡಬೇಕೆಂದು ನೇಹಲ್ ತುಂಬಾನೇ ಹಟ ಮಾಡುತ್ತಿದ್ದಳು. ಅಪಾಯದ ಅರಿವಿದ್ದರಿಂದ, ನೀರು ಕಾಲಿಗೆ ಸ್ವಲ್ಪ ತಾಗಿದ ಕೂಡಲೇ ಓಡಿ ಬರುವುದು ಎಂಬ ಷರತ್ತಿನೊಂದಿಗೆ ಆಕೆಯ ಕೈ ಹಿಡಿದು ನೀರಿನೆಡೆ ನಡೆದೆ. ಆದರೆ ನನ್ನ ಅಮ್ಮ ನಮ್ಮ ಹಿಂದೆನೇ ಬಂದಿದ್ದನ್ನು ನಾನು ಗಮನಿಸಲೇ ಇಲ್ಲ! ನೀರು ಕ್ಷಣಾರ್ಧದಲ್ಲಿ ರಭಸವಾಗಿ ನುಗ್ಗಿ ಬಂತು. ಕೂಡಲೇ ನಾವಿಬ್ಬರೂ ಓಡಿಬಂದೆವು. ನಾವು ನೀರಿನಿಂದ ದೂರ ಓಡಿ ಬರುತ್ತಿದ್ದರೆ, ಅರುಣಾಚಲ ನೀರಿನೆಡೆ ಓಡುತ್ತಿದ್ದ! ಯಾಕೆಂದು ಹಿಂತಿರುಗಿ ನೋಡಿದರೆ ಅಮ್ಮ ಸೊಂಟದ ತನಕ ನೀರಿನಲ್ಲಿ! ನೀರು ಬಂದಷ್ಟೇ ರಭಸದಿಂದ ಹಿಂದೆ ಸರಿಯಿತು. ಕಾಲುಗಳು ಮರಳಿನಲ್ಲಿ ಹೂತುಹೋಗಿದ್ದರಿಂದ ಅಮ್ಮ ಅಂದು ಅಪಾಯದಿಂದ ಪಾರಾದರು.


ಮುಂಜಾನೆ ಬಂದು, ವಿರಮಿಸಿ, ಮಧ್ಯಾಹ್ನದ ಊಟವನ್ನು ನೆರಳಿನಲ್ಲಿ ಮುಗಿಸಿ, ಪ್ರಕೃತಿಯ ಅಂದವನ್ನು ಆನಂದಿಸಿ, ಅಲ್ಲೇ ಚಾಪೆ ಹಾಸಿ, ಸಣ್ಣ ನಿದ್ರೆ ಹೊಡೆದು ಹಿಂತಿರುಗಲು ಈ ಕಡಲತೀರ ಸೂಕ್ತ ಸ್ಥಳ. ನೀರಿನಿಂದ ದೂರವುಳಿದಷ್ಟು ಒಳ್ಳೆಯದು.

6 ಕಾಮೆಂಟ್‌ಗಳು:

ಕನಸು ಕಂಗಳ ಹುಡುಗ ಹೇಳಿದರು...

ರಾಜೇಶ್ ಅವರೇ.... ಚನ್ನಾಗಿದೆ...

ಆದರೆ ಇದು ಯಾವ ಕಡಲ ತೀರ ಗೊತ್ತಾಗಲಿಲ್ಲ....

ಸಿಂಧು sindhu ಹೇಳಿದರು...

Oh... and uhh.. too.. ! thanks to your friend Aruanachala!

ಸಿಂಧು sindhu ಹೇಳಿದರು...

Forgot to mention. After a few years, you should take me here. :) after Srushti n Amogha are grown a little, and ready to stay on their own.. :) I would love this place any time. just looking at the sea, horizon, and the sky!shades of blue everywhere!

ಅನಾಮಧೇಯ ಹೇಳಿದರು...

ನಮಸ್ಕಾರ, ದೇವಸ್ಥಾನದಲ್ಲಿ ಸುಖನಾಸಿ, ಅಂತರಾಳ ಮುಂತಾದ ಭಾಗಗಳ ಬಗ್ಗೆ ಮಾಹಿತಿ ಬೇಕಿತ್ತು. ದಯವಿಟ್ಟು ನಿಮ್ಮನ್ನು ಹೇಗೆ ಸಂಪಕರ್ಕಿಸಬೇಕು ತಿಳಿಸಿ.

ರಾಜೇಶ್ ನಾಯ್ಕ ಹೇಳಿದರು...

ರಾಘವೇಂದ್ರ,
ಮತ್ತೆ ಭೇಟಿಯಾದಾಗ ತಿಳಿಸುವೆ.

ಸಿಂಧು,
ಯಾವಾಗ ಹೇಳ್ತೀರೋ....ಆಗ.

ಅನಾಮಧೇಯ,
ಬ್ಲಾಗಿನಲ್ಲೇ ಸ್ವಲ್ಪ ಹುಡುಕಾಡಿದರೆ ಇಮೈಲ್ ಇದೆ. ಅಲ್ಲಿ ಸಂಪರ್ಕಿಸಬಹುದು.

Raymond D'souza ಹೇಳಿದರು...

Nice Beach Rajesh Naik. What is name of beach.