ಭಾನುವಾರ, ಮೇ 04, 2014

ಚನ್ನಕೇಶವ ದೇವಾಲಯ - ಆನೆಕೆರೆ


ದೊಡ್ಡ ಪ್ರಾಕಾರ ಹಾಗೂ ದೊಡ್ಡ ಕಲಶವನ್ನು ಹೊಂದಿರುವ ಈ ದೇವಾಲಯವು ಶಿಲ್ಪಕಲೆಯನ್ನು ಹೊರತುಪಡಿಸಿ ಉಳಿದೆಲ್ಲಾ ರೀತಿಯಲ್ಲೂ ಹುಲ್ಲೇಕೆರೆಯ ದೇವಾಲಯವನ್ನು ಹೋಲುತ್ತದೆ. ದೇವಾಲಯದ ೭೦% ಹೊರಭಾಗವನ್ನು ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‍ನ ನೆರವಿನಿಂದ ಜೀರ್ಣೋದ್ಧಾರಗೊಳಿಸಲಾಗಿದೆ.


ದೇವಾಲಯದ ಪ್ರಾಕಾರದ ಮುಂಭಾಗದಲ್ಲಿ ಕಲ್ಲಿನ ಆಸನವನ್ನು ಹೊಂದಿರುವ ಎರಡು ಕಂಬಗಳ ಹೊರಮಂಟಪವಿದೆ. ಅಕ್ಷರಶ: ಕುಸಿದುಬಿದ್ದಿದ್ದ ಪ್ರಾಕಾರವನ್ನು ಪುನ: ರಚಿಸಲಾಗಿದೆ. ಒಳಭಾಗದಲ್ಲಿ ವಿಶಾಲ ಪೌಳಿಯನ್ನು (ಪಡಸಾಲೆ) ಕಾಣಬಹುದು. ಈ ಪೌಳಿಯ ಹಲವು ಕಂಬಗಳನ್ನು ಜೀರ್ಣೋದ್ಧಾರದ ಸಮಯದಲ್ಲಿ ನಿರ್ಮಿಸಲಾಗಿವೆ.


ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯವಿದು. ಮುಖಮಂಟಪದ ಮೇಲ್ಭಾಗದಲ್ಲಿ ಆಕರ್ಷಕ ಕೆತ್ತನೆಯಿದೆ.


ನವರಂಗದ ದ್ವಾರಕ್ಕೆ ಗಜಲಕ್ಷ್ಮೀಯ ಕೆತ್ತನೆಯಿದೆ. ನವರಂಗದಲ್ಲಿ ನಾಲ್ಕು ಕಂಬಗಳನ್ನು ಮತ್ತು ಛಾವಣಿಯಲ್ಲಿ ಉತ್ತಮ ಕೆತ್ತನೆಗಳನ್ನು ಕಾಣಬಹುದು.


ನಾಲ್ಕು ತೋಳುಗಳ ಅಂತರಾಳದ ದ್ವಾರವು ಅಲಂಕಾರರಹಿತವಾಗಿದೆ. ಮೇಲ್ಭಾಗದಲ್ಲಿದ್ದ ಗಜಲಕ್ಷ್ಮೀಯ ಕೆತ್ತನೆ ನಶಿಸಿಹೋಗಿದೆ. ದ್ವಾರದ ತಳಭಾಗದಲ್ಲಿ ಇಕ್ಕೆಲಗಳಲ್ಲಿ ಶಂಖಚಕ್ರಪದ್ಮಗದಾಧಾರಿಯಾಗಿರುವ ಚನ್ನಕೇಶವನನ್ನು ಕಾಣಬಹುದು. ದ್ವಾರದ ಮೇಲಿನ ಸ್ತರದಲ್ಲಿ ಸಣ್ಣ ಗೋಪುರಗಳನ್ನು ಮತ್ತು ನಾಲ್ಕು ದೇವದೇವಿಯರ ಸಣ್ಣ ಮೂರ್ತಿಗಳನ್ನು ಕಾಣಬಹುದು.


ಗರ್ಭಗುಡಿಯ ದ್ವಾರ ಎಲ್ಲಾ ರೀತಿಯಲ್ಲೂ ಅಂತರಾಳದ ದ್ವಾರವನ್ನೇ ಹೋಲುತ್ತದೆ. ಆದರೆ ಇಲ್ಲಿ ಗಜಲಕ್ಷ್ಮೀಯ ಕೆತ್ತನೆ ಇನ್ನೂ ತನ್ನ ಮೂಲ ರೂಪದಲ್ಲಿ ಅತ್ಯಾಕರ್ಷವಾಗಿ ಕಾಣುತ್ತಿದೆ. ಇಲ್ಲೂ ದ್ವಾರದ ಮೇಲಿನ ಸ್ತರದಲ್ಲಿ ಗೋಪುರಗಳನ್ನು, ದೇವದೇವಿಯರ ಮೂರ್ತಿಗಳನ್ನು, ತಳಭಾಗದಲ್ಲಿ ಚನ್ನಕೇಶವನ ಮೂರ್ತಿಯನ್ನು ಕಾಣಬಹುದು.


ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಸುಮಾರು ಐದು ಅಡಿ ಎತ್ತರವಿರುವ ಚನ್ನಕೇಶವನ ವಿಗ್ರಹವಿದೆ. ಇಕ್ಕೆಲಗಳಲ್ಲಿ ಶ್ರೀದೇವಿ ಹಾಗೂ ಭೂದೇವಿಯರಿದ್ದಾರೆ. ಪ್ರಭಾವಳಿ ಕೆತ್ತನೆಯೂ ಇದೆ. ಮೇಲ್ಭಾಗದಲ್ಲಿ ಸುತ್ತಲೂ ಅಷ್ಟದಿಕ್ಪಾಲಕರನ್ನು ತೋರಿಸಲಾಗಿರುವ ಕಮಲದ ಮೊಗ್ಗಿನ ಚಿತ್ರಣವಿದೆ.


ದೇವಾಲಯದ ಹೊರಗೋಡೆಯಲ್ಲಿ ಕೆತ್ತನೆಗಳಿಲ್ಲ ಅಥವಾ ಉಳಿದಿಲ್ಲ. ಕೇವಲ ಎರಡು ಸ್ತರಗಳನ್ನು ಹೊಂದಿರುವ ಗೋಪುರದ ಮೇಲ್ಭಾಗದಲ್ಲಿ ತಲೆಕೆಳಗಾಗಿರುವ ಕಮಲದ ಮೇಲೆ ಸುಂದರ ಕುಂಭವನ್ನು ಕಾಣಬಹುದು.

ಕಾಮೆಂಟ್‌ಗಳಿಲ್ಲ: