ಸೋಮವಾರ, ಫೆಬ್ರವರಿ 03, 2014

ಕರ್ನಾಟಕಕ್ಕೆ ರಣಜಿ ಕಿರೀಟ: ೨೦೧೩-೧೪.


15 ವರ್ಷಗಳು, 116 ಪಂದ್ಯಗಳು, ಒಂದು ಫೈನಲ್, ಒಂದು ಪ್ಲೇಟ್ ರಣಜಿ ಟ್ರೋಫಿ ಗೆಲುವು, 3 ಸೆಮಿ ಫೈನಲ್, 4 ಕ್ವಾರ್ಟರ್ ಫೈನಲ್, 5 ಬಾರಿ ಲೀಗ್ ಹಂತದಲ್ಲೇ ಕೊನೆ ಹಾಗೂ 51 ಕ್ರಿಕೆಟಿಗರ ಪ್ರಯತ್ನದ ಬಳಿಕ ಮತ್ತೊಮ್ಮೆ ಕರ್ನಾಟಕ, ರಾಷ್ಟ್ರದ ಅತ್ಯುನ್ನತ ಕ್ರಿಕೆಟ್ ಪ್ರಶಸ್ತಿಯಾಗಿರುವ ರಣಜಿ ಟ್ರೋಫಿಯನ್ನು ಗೆದ್ದಿದೆ.

2010ರ ಮೈನವಿರೇಳಿಸಿದ್ದ ಫೈನಲ್ ಪಂದ್ಯದ ಬಳಿಕ ರಾಜ್ಯ ತಂಡ ಮತ್ತೆ ಆ ಹಂತಕ್ಕೆ ತಲುಪಿದ್ದು ನಾಲ್ಕು ವರ್ಷಗಳ ಬಳಿಕ. ಇಸವಿ 2000ದಿಂದ ಕಾದು ಕಾದು ಸುಸ್ತಾಗಿದ್ದ ನನಗೆ, 2010ರ ಫೈನಲ್ ಅಂತೂ 2-3 ದಿನಗಳ ಕಾಲ ಮಂಕು ಬಡಿದ ಅನುಭವ ನೀಡಿತ್ತು. ಆ ಸೋಲಿನಿಂದ ಚೇತರಿಸಿಕೊಳ್ಳಲು ನಾಲ್ಕಾರು ದಿನಗಳೇ ಬೇಕಾದವು. ಆದರೆ ಈ ಬಾರಿ ನಮ್ಮ ಹುಡುಗರು ಭರ್ಜರಿ ಆಟವನ್ನಾಡಿ ಪಕ್ಕಾ ವೃತ್ತಿಪರ ಪ್ರದರ್ಶನ ನೀಡಿ ಮತ್ತೆ ರಣಜಿ ಟ್ರೋಫಿ ಕರ್ನಾಟಕಕ್ಕೆ ತಂದಿದ್ದಾರೆ.

ಈಗ ೧೫ ವರ್ಷಗಳ ಹಿಂದಕ್ಕೆ ಹೋಗೋಣ. ಆಗ ನಾನು ಚೆನ್ನೈನಲ್ಲಿ ನೌಕರಿ ಮಾಡುತ್ತಿದ್ದೆ. ಅಂದು ಎಪ್ರಿಲ್ 23, 1999. ಕರ್ನಾಟಕ - ಮಧ್ಯಪ್ರದೇಶ ನಡುವಿನ ರಣಜಿ ಫೈನಲ್ ಪಂದ್ಯದ ಕೊನೆಯ ದಿನ. ಮೊದಲ ಇನ್ನಿಂಗ್ಸಿನಲ್ಲಿ ಹಿನ್ನಡೆ ಅನುಭವಿಸಿದ್ದ ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆಲ್ಲಬೇಕಾದರೆ, ಪಂದ್ಯ ಗೆಲ್ಲಲೇಬೇಕಾಗಿತ್ತು. ಮಧ್ಯಪ್ರದೇಶಕ್ಕೆ ಟ್ರೋಫಿ ಗೆಲ್ಲಲು ಪಂದ್ಯವನ್ನು ಡ್ರಾ ಮಾಡಿಕೊಂಡರೆ ಸಾಕಿತ್ತು. ನಾಲ್ಕನೇ ದಿನದಾಟದ ಕೊನೆಗೆ ತನ್ನ ಎರಡನೇ ಇನ್ನಿಂಗ್ಸಿನಲ್ಲಿ ಕರ್ನಾಟಕ ಏಳು ಹುದ್ದರಿಗಳ ನಷ್ಟಕ್ಕೆ 321 ಓಟಗಳನ್ನು ಗಳಿಸಿ ಒಟ್ಟಾರೆ 246 ಓಟಗಳಿಂದ ಮುಂದಿತ್ತು.

ಆ ದಿನ ಆಫೀಸಿಗೆ ಹೋದಾಗ ನನ್ನ ಎಲ್ಲಾ ಸಹೋದ್ಯೋಗಿಗಳ ಮುಖದ ಮೇಲೆ ನಗು. ಕರ್ನಾಟಕ ಈಗ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ವಿಕೃತ ನಗು! ’ಯುವರ್ ಕರ್ನಾಟಕ ಹ್ಯಾಸ್ ನೋ ಚಾನ್ಸ್’, ’ಯು ಕ್ಯಾನ್ ಫರ್ಗೆಟ್ ಅಬೌಟ್ ರಣಜಿ ಟ್ರೋಫಿ’, ’ಬೆಟರ್ ಲಕ್ ನೆಕ್ಸ್ಟ್ ಇಯರ್’ ಎಂಬೆಲ್ಲಾ ಮಾತುಗಳು. ನಾನು, ಕರ್ನಾಟಕ ಕರ್ನಾಟಕ ಎಂದು ಜಪಿಸುತ್ತಿದ್ದ ಪರಿಯನ್ನು ಕಂಡು ಅವರೆಲ್ಲರಿಗೂ ಈ ಫೈನಲ್ ಪಂದ್ಯದ ಮೇಲೆ ವಿಪರೀತ ಆಸಕ್ತಿ.

ಅಂದು ಕೆಲಸದ ಮೇಲೆ ಗಮನ ಇರಲೇ ಇಲ್ಲ. ದೂರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏನಾಗುತ್ತಿರಬಹುದು ಎಂಬ ಕುತೂಹಲ. ಸಹೋದ್ಯೋಗಿಯೊಬ್ಬ ಮಧ್ಯಾಹ್ನ ಮನೆಗೆ ಹೊರಟಾಗ ಆತನಿಗೆ ಟ್ರಾನ್ಸಿಸ್ಟರ್ ತರುವಂತೆ ವಿನಂತಿಸಿದೆ. ಮಧ್ಯಾಹ್ನ 2.25ರ ಪ್ರದೇಶ ಸಮಾಚಾರದಲ್ಲಿ - "ಗೆಲ್ಲಲು 247ರ ಗುರಿ ಹೊತ್ತ ಮಧ್ಯಪ್ರದೇಶ, ಈಗ ಸ್ವಲ್ಪ ಹೊತ್ತಿನ ಮೊದಲು 3 ಹುದ್ದರಿಗಳ ನಷ್ಟಕ್ಕೆ 106 ಓಟಗಳನ್ನು ಗಳಿಸಿತ್ತು" ಎಂದು ಮಾಹಿತಿ ನೀಡಲಾಯಿತು. ಇನ್ನು ಹೆಚ್ಚೆಂದರೆ 30 ಓವರುಗಳ ಆಟವಿರಬಹುದು. ಕರ್ನಾಟಕಕ್ಕೆ ಚಾನ್ಸ್ ಇಲ್ಲ ಎಂದು ಅರಿವಾಗತೊಡಗಿತು. 106ಕ್ಕೆ 3 ಎಂಬ ಸ್ಕೋರ್ ತಿಳಿದು ಸಹೋದ್ಯೋಗಿಗಳಿಗೆಲ್ಲ ಅಪರಿಮಿತ ಸಂತೋಷ!!

ಮರುದಿನ ಬೆಳಗ್ಗೆ ’ದಿ ಹಿಂದೂ’ ಪತ್ರಿಕೆಯಲ್ಲಿ ಕರ್ನಾಟಕ ರಣಜಿ ಟ್ರೋಫಿಯೊಂದಿಗೆ ಪೋಸ್ ನೀಡಿದ ಚಿತ್ರ ನೋಡಿ ನಂಬಲಾಗಲಿಲ್ಲ. ’ವಿಜಯ್ ಭಾರದ್ವಾಜ್ ಸ್ಪಿನ್ಸ್ ಕರ್ನಾಟಕ ಟು ರಣಜಿ ಗ್ಲೋರಿ’ ಎಂಬ ಶೀರ್ಷಿಕೆ! ವಿಜಯ್ ಭಾರದ್ವಾಜ್ 15 ಓವರುಗಳಲ್ಲಿ 24 ರನ್ನುಗಳನ್ನು ನೀಡಿ 6 ಹುದ್ದರಿಗಳನ್ನು ಉಡಾಯಿಸಿಬಿಟ್ಟಿದ್ದರು. 106ಕ್ಕೆ 3 ಇದ್ದ ಮಧ್ಯಪ್ರದೇಶ 150ಕ್ಕೆ ಆಲ್ ಔಟ್ ಆಗಿಬಿಟ್ಟಿತ್ತು! ಪಂದ್ಯದ ಕೊನೆಯ 31 ಚೆಂಡುಗಳು ಮಾತ್ರ ಉಳಿದಿದ್ದವು!! ಆ ಪಂದ್ಯದ ಸ್ಕೋರ್ ಕಾರ್ಡ್ ಇಲ್ಲಿದೆ.

ಅಂದು ಆಫೀಸಿನಲ್ಲಿ, ’ಹೌ ಡಿಡ್ ದೆ ಮ್ಯಾನೇಜ್ ಟು ವಿನ್, ಮ್ಯಾನ್’, ’ಹೌ ಕ್ಯಾನ್ ಇಟ್ ಬಿ ಪಾಸಿಬಲ್’, ಎಂಬಿತ್ಯಾದಿ ಶಾಕ್ ಭರಿತ ಕಮೆಂಟುಗಳ ನಡುವೆ ಎಲ್ಲಾ ಸಹೋದ್ಯೋಗಿಗಳಿಗೂ ಸಿಹಿ ಹಂಚಿದೆ. ಕರ್ನಾಟಕದ ಪತಾಕೆಯನ್ನು ಇನ್ನಷ್ಟು ಹಾರಿಸಿದೆ.

ಆಗ ರಾಜ್ಯ ತಂಡ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆದ್ದಿತ್ತು. 1995-96 ಋತುವಿನಲ್ಲಿ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಹಾಗೂ 1997-98ರಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ರಣಜಿ ಟ್ರೋಫಿ ಕರ್ನಾಟಕದ್ದಾಗಿತ್ತು. ಮುಂದಿನ ವರ್ಷವೇ (1998-99) ಸುನಿಲ್ ಜೋಶಿ ನೇತೃತ್ವದಲ್ಲಿ ಗೆದ್ದಿದ್ದು. ತದನಂತರ 15 ವರ್ಷ ಕಾಯಬೇಕಾಗಿ ಬಂತು.

1998-99 ರ ವಿಜೇತ ತಂಡ: ಸುನಿಲ್ ಜೋಶಿ (ನಾಯಕ), ಸುಜಿತ್ ಸೋಮಸುಂದರ್, ಜೆ ಅರುಣ್ ಕುಮಾರ್, ಎ ವಿಜಯ್, ಆರ್ ವಿಜಯ್ ಭಾರದ್ವಜ್, ಸೋಮಶೇಖರ್ ಶಿರಗುಪ್ಪಿ, ತಿಲಕ್ ನಾಯ್ಡು, ಬಿ ಅಖಿಲ್, ಆನಂದ್ ಯಾಲ್ವಿಗಿ, ದೊಡ್ಡನರಸಯ್ಯ ಗಣೇಶ್ ಹಾಗೂ ಮನ್ಸೂರ್ ಅಲಿ ಖಾನ್.

2013-14ರ ಋತುವಿನ ಆರಂಭದಲ್ಲಿ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿದ್ದ ಅಮಿತ್ ವರ್ಮಾರನ್ನು ಕೈಬಿಡಲಾಯಿತು. ಅಮಿತ್, ಕಳೆದ ಋತುವಿನಲ್ಲಿ (2012-13) ಕೇವಲ 27.67 ಸರಾಸರಿಯಲ್ಲಿ 249 ರನ್ನುಗಳನ್ನು ಗಳಿಸಿದ್ದರು. ಕಳೆದ ಋತುವಿನ ನಡುವಿನಲ್ಲೇ ತಂಡದಿಂದ ಕೈಬಿಡಲ್ಪಟ್ಟಿದ್ದ ಆರಂಭಿಕ ಆಟಗಾರ ಕೆ ಬಿ ಪವನ್‌ರನ್ನು ಆಯ್ಕೆಗಾರರು ಪರಿಗಣಿಸಲೇ ಇಲ್ಲ. ತನ್ನನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂಬುವುದನ್ನು ಮೊದಲೇ ಅರಿತಿದ್ದ ಪವನ್, ಈ ಋತುವಿನಲ್ಲಿ ತ್ರಿಪುರಾ ಪರವಾಗಿ ಆಡಿದರು. ಅಲ್ಲೂ ವೈಫಲ್ಯ (ಎಂಟು ಪಂದ್ಯಗಳಲ್ಲಿ 24.93 ಸರಾಸರಿಯಲ್ಲಿ 374 ರನ್ನುಗಳು) ಕಂಡರು. ಸ್ಪಿನ್ ಬೌಲರುಗಳಾಗಿರುವ ಕೆ ಗೌತಮ್ ಹಾಗೂ ಸಯ್ಯದ್ ಮೊಯ್ನುದ್ದೀನ್‌ರನ್ನು ಕೈಬಿಡಲಾಯಿತು. ಆಲ್‌ರೌಂಡರ್ ಆಗಿರುವ ಸುನಿಲ್ ರಾಜು ಕೂಡಾ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ವೇಗದ ಬೌಲರ್ ಎಸ್ ಎಲ್ ಅಕ್ಷಯ್, ಉತ್ತಮ ಪ್ರದರ್ಶನದ ಹೊರತಾಗಿಯೂ, ಶರತ್ ಹಾಗೂ ರೋನಿತ್ ಮೋರೆಯ ಪ್ರತಿಭೆಯ ಮುಂದೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರು.

ಯುವ ಆಟಗಾರರಾಗಿರುವ ರವಿಕುಮಾರ್ ಸಮರ್ಥ್ ಹಾಗೂ ಕರುಣ್ ನಾಯರ್, ಕ್ರಮವಾಗಿ ಶಫಿ ದಾರಾಶಹಾ ಹಾಗೂ 22 ಹಾಗೂ 25ರ ವಯೋಮಿತಿ ಪಂದ್ಯಾಟಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದಾಗ, ಅವರಿಬ್ಬರನ್ನು ಕಡೆಗಣಿಸಲು ಆಯ್ಕೆಗಾರರಿಗೆ ಸಾಧ್ಯವಾಗಲಿಲ್ಲ. ಸ್ಪಿನ್ ಬೌಲರ್ ಅಬ್ರಾರ್ ಕಾಝಿ ಕೂಡಾ ತಂಡದಲ್ಲಿ ಸ್ಥಾನ ಪಡೆದರು.

ಕರ್ನಾಟಕದ ಯಶಸ್ಸಿಗೆ ಮುಖ್ಯ ಕಾರಣವೆಂದರೆ, ಎಲ್ಲಾ ಅಟಗಾರರು ರನ್ನುಗಳನ್ನು ಗಳಿಸಿರುವುದು. ಒಟ್ಟಾರೆ ಈ ಋತುವಿನಲ್ಲಿ ರಾಜ್ಯದ 9 ಆಟಗಾರರು, 15 ಶತಕಗಳನ್ನು ದಾಖಲಿಸಿದ್ದಾರೆ. ಬೇರೆ ಯಾವ ತಂಡದಿಂದಲೂ ಇಷ್ಟು ಶತಕಗಳು ದಾಖಲಿಸಲ್ಪಟ್ಟಿಲ್ಲ. ಅಷ್ಟೇ ಅಲ್ಲದೆ, ರಾಜ್ಯದ 10 ಆಟಗಾರರು, 20 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಎಂಟು ಬ್ಯಾಟ್ಸ್‌ಮನ್‌ಗಳು 40ಕ್ಕಿಂತಲೂ ಹೆಚ್ಚಿನ ಸರಾಸರಿ ಹೊಂದಿದ್ದಾರೆ. ಹೆಚ್ಚಿನ ತಂಡಗಳು ಒಂದೆರಡು ಆಟಗಾರರ ಮೇಲೆ ಅವಲಂಬಿತವಾಗಿದ್ದರೆ, ಕರ್ನಾಟಕ ತಂಡದಲ್ಲಿ ಹಾಗಿರಲಿಲ್ಲ. ಒಂದು ಪಂದ್ಯದಲ್ಲಿ ತಂಡದ ಯಾರಾದರೂ 2-3 ಬ್ಯಾಟ್ಸ್‌ಮನ್‌ಗಳು ರನ್ನುಗಳನ್ನು ಗಳಿಸಿರುವುದನ್ನು ಎಲ್ಲಾ ಪಂದ್ಯಗಳಲ್ಲಿ ಕಾಣಬಹುದು.


ಬ್ಯಾಟಿಂಗ್ ವಿಭಾಗದಲ್ಲಿ ಕೆ ಎಲ್ ರಾಹುಲ್, 10 ಪಂದ್ಯಗಳಿಂದ 68.87 ಸರಾಸರಿಯಲ್ಲಿ, 3 ಶತಕ ಹಾಗೂ 4 ಅರ್ಧಶತಕಗಳ ನೆರವಿನಿಂದ ಒಟ್ಟು 1033 ಓಟಗಳನ್ನು ಗಳಿಸಿದರು. ಈ ಋತುವಿನ ರಣಜಿ ಪಂದ್ಯಾವಳಿಯಲ್ಲಿ ಎಲ್ಲಾ ತಂಡಗಳ ಆಟಗಾರರ ಪೈಕಿ, ಅತಿ ಹೆಚ್ಚು ರನ್ನುಗಳನ್ನು ಗಳಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದರು. ಬೌಲಿಂಗಿನಲ್ಲಿ ಅಭಿಮನ್ಯು ಮಿಥುನ್ 41 ಹುದ್ದರಿಗಳನ್ನು ಉರುಳಿಸಿ, ಎಲ್ಲಾ ತಂಡಗಳ ಬೌಲರುಗಳ ಪೈಕಿ ಮೂರನೇ ಸ್ಥಾನ ಪಡೆದರು.

ಬ್ಯಾಟಿಂಗ್‍ನಂತೆಯೇ, ಬೌಲಿಂಗ್ ಕೂಡಾ ಕರ್ನಾಟಕದ ಗೆಲುವಿನಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ. ನಾಯಕ ವಿನಯ್ ಎಂಟು ಪಂದ್ಯಗಳಲ್ಲಿ 29 ವಿಕೆಟ್‍ಗಳನ್ನು, ಮಿಥುನ್ 10 ಪಂದ್ಯಗಳಲ್ಲಿ 41 ಹಾಗೂ ಶರತ್ 7 ಪಂದ್ಯಗಳಲ್ಲಿ 32 ವಿಕೆಟ್ ಗಳಿಸಿದ್ದಾರೆ. ಇಲ್ಲೂ ಮೂರೂ ಬೌಲರುಗಳು ಸಮಾನ ರೀತಿಯಲ್ಲಿ ಕರ್ನಾಟಕದ ಯಶಸ್ಸಿಗೆ ಕಾರಣರಾಗಿದ್ದಾರೆ.

ರಾಜ್ಯ ತಂಡಕ್ಕೆ ಒಬ್ಬ ಯೋಗ್ಯ ಸ್ಪಿನ್ ಬೌಲರ್‌ನ ಅವಶ್ಯಕತೆಯಿದೆ. ಅಪ್ಪಣ್ಣ ಹಾಗೂ ಕಾಝಿ ಕೇವಲ ಸಾಧಾರಣ ಪ್ರದರ್ಶನ ನೀಡಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ಸಾಮರ್ಥ್ಯದಿಂದ ಸ್ಥಾನ ಪಡೆದ ಶ್ರೇಯಸ್ ಗೋಪಾಲ್, ಕ್ರಮೇಣ ಉತ್ತಮ ಲೆಗ್ ಸ್ಪಿನ್ ಬೌಲರ್ ಆಗಿ ರೂಪುಗೊಳ್ಳುತ್ತಿದ್ದಾರೆ! ಅವರೀಗ ಬ್ಯಾಟಿಂಗ್‌ನ್ನೇ ಮರೆತಿರುವಂತೆ ಕಾಣಬರುತ್ತದೆ. ಕರ್ನಾಟಕ 19ರ ವಯಸ್ಸಿನ ತಂಡದ ನಾಯಕನಾಗಿ ಹಾಗೂ 22 ಮತ್ತು 25ರ ವಯೋಮಿತಿ ಪಂದ್ಯಗಳಲ್ಲಿ ಭರ್ಜರಿ ರನ್ನುಗಳನ್ನು ಸೂರೆಗೈದ ಆಧಾರದಲ್ಲಿ ಆಯ್ಕೆಗೊಂಡ ಶ್ರೇಯಸ್, ತನ್ನ ಪಾರ್ಟ್ ಟೈಮ್ ಲೆಗ್ ಸ್ಪಿನ್ ಬೌಲಿಂಗ್‌ನ್ನೇ ಫುಲ್ ಟೈಮ್ ಧಂಧೆಯನ್ನಾಗಿ ಮಾಡಿಕೊಂಡು ಉತ್ತಮ ಯಶಸ್ಸು ಕಂಡಿದ್ದಾರೆ (5 ಪಂದ್ಯಗಳು, ಬ್ಯಾಟಿಂಗ್ ಸರಾಸರಿ - 9.67, ಬೌಲಿಂಗ್ - 18.23 ಸರಾಸರಿಯಲ್ಲಿ 22 ವಿಕೆಟ್‌ಗಳು).

ವಿಕೆಟ್ ಕೀಪರ್ ಸಿ ಎಮ್ ಗೌತಮ್, ಹೆಚ್ಚು ರನ್ನುಗಳನ್ನು ಗಳಿಸದಿದ್ದರೂ, ವಿಕೆಟ್ ಹಿಂದೆ ಒಟ್ಟು 43 ಬಲಿಗಳನ್ನು ಪಡೆದು ಹೊಸ ರಣಜಿ ರೆಕಾರ್ಡ್‌ನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.

ಮೊದಲ 3 ಪಂದ್ಯಗಳನ್ನು ಡ್ರಾ ಮಾಡಿಕೊಂಡು ಕೇವಲ 7 ಅಂಕಗಳನ್ನು ಗಳಿಸಿ, ಅಂಕಪಟ್ಟಿಯಲ್ಲಿ ಕೊನೆಯ 2-3 ಸ್ಥಾನಗಳನ್ನು ಅಲಂಕರಿಸಿದ್ದ ಕರ್ನಾಟಕ, ನಂತರ ಎಚ್ಚೆತ್ತ ಹುಲಿಯಂತೆ ಸತತ 5 ಪಂದ್ಯಗಳನ್ನು ಗೆದ್ದು ಒಟ್ಟು 38 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದ್ದು, ನಾಕ್‌ಔಟ್ ಪಂದ್ಯಗಳನ್ನು ಆತ್ಮವಿಶ್ವಾಸದಿಂದ ಆಡಲು ಸಹಕಾರಿಯಾಯಿತು. ಸೆಮಿಫೈನಲ್ ಪಂದ್ಯ ಮಳೆಗೆ ಆಹುತಿಯಾಗದಿದ್ದಿದ್ದರೆ, ಸತತ ಎಂಟು ಜಯಗಳನ್ನು ಸಾಧಿಸಿದ ಅಭೂತಪೂರ್ವ ಸಾಧನೆ ರಾಜ್ಯ ತಂಡದ್ದಾಗುತ್ತಿತ್ತು.

ತಂಡದ ಯಶಸ್ಸಿನಲ್ಲಿ ಕೋಚ್‍ಗಳಾದ ಜೆ ಅರುಣ್ ಕುಮಾರ್ ಹಾಗೂ ಮನ್ಸೂರ್ ಅಲಿ ಖಾನ್ ಅವರ ಕೊಡುಗೆಯೂ ಅಪಾರ. ರಾಜ್ಯ ತಂಡ ಕೊನೆಯ ಬಾರಿಗೆ ರಣಜಿ ಟ್ರೋಫಿ ಗೆದ್ದಾಗ ಇವರಿಬ್ಬರು ಆಟಗಾರರಾಗಿದ್ದರು. 15 ವರ್ಷಗಳ ಬಳಿಕ ಮತ್ತೆ ರಣಜಿ ಟ್ರೋಫಿ ರಾಜ್ಯಕ್ಕೆ ಒಲಿದಾಗ ಇವರಿಬ್ಬರು ತಂಡದ ಕೋಚ್‍ಗಳಾಗಿರುವುದು ಒಂದು ಕಾಕತಾಳೀಯವೇ ಸರಿ. ಜ್ಯಾಕ್ - ಮ್ಯಾಕ್ ಎಂದು ಕರೆಯಲ್ಪಡುವ ಈ ಜೋಡಿಯ ಬಗ್ಗೆ ಲೇಖನವನ್ನು ಇಲ್ಲಿ ಓದಬಹುದು. ಹಾಗೇನೆ ಅರುಣ್ ಕುಮಾರ್ ಬಗ್ಗೆ ಈ ಬ್ಲಾಗಿನಲ್ಲಿರುವ ಲೇಖನವನ್ನು ಇಲ್ಲಿ ಓದಬಹುದು ಮತ್ತು ಮನ್ಸೂರ್ ಅಲಿ ಖಾನ್ ಬಗ್ಗೆ ಈ ಬ್ಲಾಗಿನಲ್ಲಿರುವ ಸಣ್ಣ ತುಣುಕನ್ನು ಇಲ್ಲಿ ಓದಬಹುದು.


ರಾಜ್ಯ ತಂಡ ರಣಜಿ ಪ್ರಶಸ್ತಿಯನ್ನು ಗೆಲ್ಲುತ್ತಿರುವುದು ಇದು ಏಳನೇ ಬಾರಿ. ಈ ಮೊದಲು ಈರಪ್ಪಳ್ಳಿ ಪ್ರಸನ್ನ (ಎರಡು ಬಾರಿ), ಬೃಜೇಶ್ ಪಟೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹಾಗೂ ಸುನಿಲ್ ಜೋಶಿ ವಿಜೇತ ತಂಡದ ನಾಯಕತ್ವ ವಹಿಸುವ ಸೌಭಾಗ್ಯ ಹೊಂದಿದ್ದು, ಈ ಬಾರಿ ಆ ಭಾಗ್ಯ ವಿನಯ್ ಕುಮಾರ್‌ಗೆ ಒಲಿದಿದೆ.

2013-14 ಋತುವಿನ ಹೈಲೈಟ್ಸ್‌ಗಳು.
1. ಝಾರ್ಖಂಡ್ ವಿರುದ್ಧ ಗಣೇಶ್ ಸತೀಶ್ ಹಾಗೂ ವಿನಯ್ ಕುಮಾರ್ ಲೀಡ್ ದೊರಕಿಸಿಕೊಟ್ಟಿದ್ದು.
2. ವಿದರ್ಭ ವಿರುದ್ಧ ಲೀಡ್ ದೊರಕಿಸಿಕೊಟ್ಟ ಅಬ್ರಾರ್ ಕಾಝಿ ಹಾಗೂ ಕೆ ಪಿ ಅಪ್ಪಣ್ಣ ನಡುವಿನ 72 ರನ್ನುಗಳ ಒಂಬತ್ತನೇ ವಿಕೆಟಿನ ಜೊತೆಯಾಟ.
3. ಒಡಿಶಾ ವಿರುದ್ಧ ಪಂದ್ಯದಲ್ಲಿ 11 (6+5) ಹುದ್ದರಿಗಳನ್ನು ಕಿತ್ತ ಅಭಿಮನ್ಯು ಮಿಥುನ್.
4. ಹರ್ಯಾನಾ ವಿರುದ್ಧ ಪಂದ್ಯದಲ್ಲಿ 7 (2+5) ಹುದ್ದರಿಗಳನ್ನು ಕಿತ್ತ ರೋನಿತ್ ಮೋರೆ.
5. ಹರ್ಯಾನಾ ವಿರುದ್ಧ ಸ್ಟುವರ್ಟ್ ಬಿನ್ನಿ ವಿಜಯ ದೊರಕಿಸಿಕೊಟ್ಟ 31 ಅಮೂಲ್ಯ ರನ್ನುಗಳು.
6. ಹುಬ್ಬಳ್ಳಿಯಲ್ಲಿ ನಡೆದ ಪಂಜಾಬ್ ವಿರುದ್ಧ ಪಂದ್ಯದಲ್ಲಿ ತನ್ನ ಚೊಚ್ಚಲ ಶತಕ ಗಳಿಸಿದ ವಿನಯ್ ಕುಮಾರ್.
7. ಮುಂಬೈ ವಿರುದ್ಧ ಬಿರುಸಿನ ಶತಕದ ಆಟ ಆಡಿದ ಮನೀಶ್ ಪಾಂಡೆ.
8. ಮುಂಬೈ ವಿರುದ್ಧ 8 (5+3) ಹುದ್ದರಿಗಳನ್ನು ಕಿತ್ತ ಎಚ್ ಎಸ್ ಶರತ್.
9. ದೆಹಲಿ ವಿರುದ್ಧ ಪಂದ್ಯದಲ್ಲಿ ತನ್ನ ಚೊಚ್ಚಲ ಶತಕ ಗಳಿಸಿದ ಕರುಣ್ ನಾಯರ್.
10. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶದ ವಿರುದ್ಧ ತಂಡ 15ಕ್ಕೆ 3 ಹುದ್ದರಿಗಳನ್ನು ಕಳಕೊಂಡಾಗ, ರಾಬಿನ್ ಉತ್ತಪ್ಪ ಹಾಗೂ ಕರುಣ್ ನಾಯರ್ ಜೊತೆಯಾಟ.
11. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಉತ್ತರ ಪ್ರದೇಶದ ವಿರುದ್ಧ, ಮೊದಲ ಇನ್ನಿಂಗ್ಸ್‌ನಲ್ಲಿ, ಕರ್ನಾಟಕದ ಮೊದಲ ಆರು ಆಟಗಾರರಲ್ಲಿ, ಮೂವ್ವರು ಶೂನ್ಯಕ್ಕೆ ಔಟಾದರೆ, ಮೂವ್ವರು ಸರಿಯಾಗಿ 100 ಓಟಗಳಿಗೆ ಔಟಾದರು. ಈ ಆರು ಬ್ಯಾಟ್ಸ್‌ಮನ್‌ಗಳು ಗಳಿಸಿದ ಓಟಗಳನ್ನು ಬರೆದರೆ ಬೈನರಿ ಅಂಕೆ ತರಹ ಕಾಣಬರುತ್ತದೆ - 100000100100. ಮೂರು ಶತಕಗಳ ಹೊರತಾಗಿಯೂ ಕರ್ನಾಟಕ ಗಳಿಸಿದ್ದು 349 ಓಟಗಳನ್ನು ಮಾತ್ರ! ಇದು ರಣಜಿ ಪಂದ್ಯಗಳಲ್ಲಿ ಮೂರು ಶತಕಗಳಿದ್ದರೂ ಅತಿ ಕಡಿಮೆ ರನ್ನು ದಾಖಲಿಸಿದ ದಾಖಲೆ.
12. ಪಂಜಾಬ್ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ವಿನಯ್ ಕುಮಾರ್ ಗಳಿಸಿದ 5 ಹುದ್ದರಿಗಳು.
13. ಪಂಜಾಬ್ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ, ’ಕಮ್‌ಬ್ಯಾಕ್ ಮ್ಯಾನ್’ ಅಮಿತ್ ವರ್ಮ ದಾಖಲಿಸಿದ ಅಜೇಯ ಶತಕ.
14. ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಕೆ ಎಲ್ ರಾಹುಲ್ ಹಾಗೂ ಗಣೇಶ್ ಸತೀಶ್ ನಡುವೆ 216 ಓಟಗಳ ಜೊತೆಯಾಟ.

2013-14 ರ ವಿಜೇತ ತಂಡ: ಆರ್ ವಿನಯ್ ಕುಮಾರ್ (ನಾಯಕ), ರಾಬಿನ್ ವಿ ಉತ್ತಪ್ಪ, ಕೆ ಎಲ್ ರಾಹುಲ್, ಗಣೇಶ್ ಸತೀಶ್, ಮನೀಶ್ ಕೆ ಪಾಂಡೆ, ಕರುಣ್ ಕೆ ನಾಯರ್, ಚಿದಂಬರಮ್ ಎಮ್ ಗೌತಮ್, ಅಮಿತ್ ವರ್ಮಾ, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್ ಹಾಗೂ ಶ್ರೀನಾಥ್ ಅರವಿಂದ್.
ಈ ಋತುವಿನಲ್ಲಿ ಆಡಿದ ಇತರ ಆಟಗಾರರು: ಮಯಾಂಕ್ ಎ ಅಗರ್‌ವಾಲ್, ಕುನಾಲ್ ಆರ್ ಕಪೂರ್, ಸ್ಟುವರ್ಟ್ ಟಿ ಆರ್ ಬಿನ್ನಿ, ಕೆ ಪಿ ಅಪ್ಪಣ್ಣ, ಅಬ್ರಾರ್ ಎ ಕಾಝಿ, ಹೊಸಗಾವಿ ಎಸ್ ಶರತ್, ರೋನಿತ್ ಜಿ ಮೋರೆ ಹಾಗೂ ರವಿಕುಮಾರ್ ಸಮರ್ಥ್.

ರಾಜ್ಯ ತಂಡಕ್ಕೆ ಶುಭಾಶಯಗಳು.

2 ಕಾಮೆಂಟ್‌ಗಳು:

ಪ್ರಶಾಂತ್ ಹೇಳಿದರು...

ನಿನ್ನೆ ಆಟ ಮುಗಿದಾಗಲೇ ಅಂದುಕೊಂಡೆ, ನೀವು ಗೆಲುವಿನ ಬಗ್ಗೆ ಒಂದು ಲೇಖನ ಬರೀತೀರ ಅಂತ. ಸೊಗಸಾಗಿ ಬರೆದಿದ್ದೀರ...

ರಾಜೇಶ್ ನಾಯ್ಕ ಹೇಳಿದರು...

ಪ್ರಶಾಂತ್,
ಧನ್ಯವಾದ.