ಶನಿವಾರ, ಜುಲೈ 03, 2010

ಚನ್ನಕೇಶವ ದೇವಾಲಯ - ಹೊನ್ನಾವರ


ಸುಂದರ ಪರಿಸರದಲ್ಲಿ ಹೊನ್ನಾವರದ ಚೆನ್ನಕೇಶವ ನೆಲೆಸಿದ್ದಾನದರೂ ಆತನ ಮನೆ ಮಾತ್ರ ಪಾಳು ಬೀಳುತ್ತಿದೆ. ಅದಾಗಲೇ ಗೋಪುರ ಕುಸಿದಿದ್ದು ಗಿಡಗಂಟಿಗಳು ನಿಧಾನಕ್ಕೆ ಅಲ್ಲಲ್ಲಿ ಬೆಳೆದು ಗುಡಿಯನ್ನು ಮರೆಮಾಚುವ ಕಾಯಕದಲ್ಲಿ ತೊಡಗಿಕೊಂಡಿವೆ.


ಸುಂದರ ಮುಖಮಂಟಪವುಳ್ಳ ದೇವಾಲಯದಲ್ಲಿರುವುದು ನವರಂಗ ಮತ್ತು ಗರ್ಭಗುಡಿ ಮಾತ್ರ. ದೇವಾಲಯದ ದ್ವಾರ ೪ ತೋಳಿನದ್ದಾಗಿದ್ದು ಮೇಲ್ಗಡೆ ಗಜಲಕ್ಷ್ಮಿಯ ಕೆತ್ತನೆಯಿದೆ. ಹೆಚ್ಚಿನೆಡೆ ಗಜಲಕ್ಷ್ಮಿಯ ಇಕ್ಕೆಲಗಳಲ್ಲಿರುವ ಆನೆಗಳು ತಮ್ಮ ಸೊಂಡಿಲನ್ನು ಮೇಲಕ್ಕೆತ್ತಿ ನಿಂತಿರುವ ಕೆತ್ತನೆಯಿರುತ್ತದೆ. ಆದರೆ ಇಲ್ಲಿ ಎರಡೂ ಆನೆಗಳು ಲಕ್ಷ್ಮಿಯ ಪಾದಕ್ಕೆ ನಮಸ್ಕರಿಸುವ ಕೆತ್ತನೆಯಿದೆ.


ಗರ್ಭಗುಡಿಯ ದ್ವಾರವೂ ನಾಲ್ಕು ತೋಳಿನದ್ದಾಗಿದ್ದು ದ್ವಾರಪಾಲಕರನ್ನು ಹೊಂದಿದೆ. ಚನ್ನಕೇಶವನ ವಿಗ್ರಹ ಬಲೂ ಸುಂದರವಾಗಿದ್ದು ಸಣ್ಣ ಪೀಠದ ಮೇಲೆ ಪ್ರತಿಷ್ಥಾಪನೆಗೊಂಡಿದೆ. ಪೀಠವನ್ನೂ ಸೇರಿಸಿದರೆ ಚನ್ನಕೇಶವನ ಎತ್ತರ ಸುಮಾರು ೭ ಅಡಿ ಆಗಬಹುದು. ಚನ್ನಕೇಶವನ ಕಾಲ ಕೆಳಗೆ ಪೀಠದ ಮುಂಭಾಗದಲ್ಲಿ ಹನುಮಂತನ ಸಣ್ಣ ಮೂರ್ತಿಯಿದೆ. ನವರಂಗದಲ್ಲಿರುವ ನಾಲ್ಕೂ ಕಂಬಗಳನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ನವರಂಗದ ಛಾವಣಿಯಲ್ಲಿ ಸುಂದರ ಕೆತ್ತನೆಗಳಿವೆ. ಒಂದೆಡೆ ಅಷ್ಟದಿಕ್ಪಾಲಕರನ್ನೂ ಚೌಕಾಕಾರದ ಪರಿಧಿಯೊಳಗಡೆ ಕೆತ್ತಲಾಗಿದೆ.


ಊರವರಿಗೆ ದೇವಾಲಯದ ಬಗ್ಗೆ ಅಷ್ಟು ಕಾಳಜಿಯಿಲ್ಲ ಎಂಬುವುದೇ ವಿಷಾದ. ಮುಖಮಂಟಪದ ಎಡಕ್ಕಿರುವ ಭಿತ್ತಿಚಿತ್ರಗಳಿಗೆ ತಾಗಿಯೇ ಸಾರಾಯಿ ಬಾಟ್ಲಿಯೊಂದು ಕೂತಿತ್ತು. ಕಣ್ಣ ಮುಂದೆನೇ ವಿರಾಜಮಾನವಾಗಿ ಕೂತಿದ್ದರೂ ಈ ಸಾರಾಯಿ ಬಾಟಲಿ ಒಂದೆರಡು ಚಿತ್ರಗಳನ್ನು ತೆಗೆದ ಬಳಿಕವೇ ನನ್ನ ಗಮನಕ್ಕೆ ಬಂತು! ಹೊರಗೋಡೆಗಳ ಮತ್ತು ಮಾಡಿನ ಮೇಲ್ಮೈಗಳಲ್ಲಿ ಗಿಡಗಂಟಿಗಳು ಅಲ್ಲಲ್ಲಿ ಬೆಳೆದುಕೊಂಡಿವೆ.


ಯಾವ ದಿಕ್ಕಿನಿಂದ ನೋಡಿದರೂ ದೇವಾಲಯ ಅಂಕುಡೊಂಕಾಗಿ ಕಾಣುತ್ತದೆ. ಛಾವಣಿಯಂತೂ ವಿಕಾರವಾಗಿ ಎಲ್ಲಾ ಬದಿಗಳಲ್ಲೂ ವಾಲಿಕೊಂಡಂತೆ ಕಾಣುತ್ತದೆ. ದೇವಾಲಯಕ್ಕೆ ತಾಗಿಕೊಂಡೇ ಮಣ್ಣಿನ ರಸ್ತೆಯೊಂದು ಹಾದುಹೋಗಿರುವುದರಿಂದ ಹಾರುವ ಧೂಳು ಅಳಿದುಳಿದ ಕೆತ್ತನೆಗಳ ಮೇಲೆ ಕುಳಿತು ಅವುಗಳು ತಮ್ಮ ಹೊಳಪು ಮತ್ತು ನೈಜತೆ ಕಳೆದುಕೊಳ್ಳುತ್ತಿವೆ.


ಮುಖಮಂಟಪದ ಮೇಲೆ ಇಟ್ಟಿಗೆಗಳನ್ನು ಸಾಲಾಗಿ ಇಟ್ಟು ಏನನ್ನೋ ಕಟ್ಟಲು ಆರಂಭಿಸಿ ಅರ್ಧಕ್ಕೆ ನಿಲ್ಲಿಸಿದಂತಿದೆ. ಈ ಏಕಕೂಟ ದೇವಾಲಯದ ಗೋಪುರವಂತೂ ಧರಾಶಾಹಿಯಾಗಿದೆ. ಗೋಪುರದ ಕಲ್ಲುಗಳು ನಿಧಾನವಾಗಿ ಕಣ್ಮರೆಯಾಗಿ ಯಾರ್ಯಾರದೋ ಮನೆಗಳನ್ನು ಸೇರುತ್ತಿವೆ. ಇವುಗಳಲ್ಲಿ ಕೆತ್ತನೆಯ ಅಂಶವಿರುವ ಒಂದೆರಡು ಕಲ್ಲುಗಳು ಗೋಪುರದಿಂದ ಕಳಚಿಬಿದ್ದು ಸ್ವಲ್ಪ ದೂರ ಉರುಳಿ ಹೋಗಿ ಅಲ್ಲೇ ಅನಾಥವಾಗಿ ಬಿದ್ದುಕೊಂಡಿವೆ.


ಇಷ್ಟೆಲ್ಲಾ ಮೈನಸ್ ಪಾಯಿಂಟ್-ಗಳಿದ್ದರೂ ದೇವಾಲಯದ ಹೊರಗೋಡೆಗಳಲ್ಲಿ ಸುಂದರವಾಗಿ ಕೆತ್ತಲಾಗಿರುವ ಭಿತ್ತಿಚಿತ್ರಗಳು ಒಂದಕ್ಕಿಂತ ಒಂದು ಅಂದ. ದೇವಾಲಯದ ಪರಿಸ್ಥಿತಿ ನೋಡಿ ಮರುಗಿದ ಮನಸುಗಳಿಗೆ ಈ ಕೆತ್ತನೆಗಳು ಸ್ವಲ್ಪವಾದರೂ ಮುದ ನೀಡುತ್ತವೆ ಎನ್ನಬಹುದು. ಭಿತ್ತಿಚಿತ್ರಗಳು ಈ ಮಟ್ಟಕ್ಕೆ ಇನ್ನೂ ಉಳಿದುಕೊಂಡಿರುವುದು ವಿಸ್ಮಯ. ಇಲ್ಲಿ ಕೂಡಾ ಈ ಕೆತ್ತನೆಗಳ ಕೈ ಕಾಲು ಮುಖ ಹೀಗೆ ಎಲ್ಲೆಂದರಲ್ಲಿ ಜಜ್ಜಿ ಹಾಕಲಾಗಿದೆ. ಮತಾಂಧರ ಹಾವಳಿಯ ಪರಿಣಾಮ.


ಈ ಕೆತ್ತನೆಗಳು ಏನನ್ನು ಹೇಳುತ್ತಿವೆ ಅಥವಾ ಯಾವ ಘಟನೆಯನ್ನು ಬಿಂಬಿಸುತ್ತಿವೆ ಎಂದು ಗೊತ್ತಾಗುವಷ್ಟು ಅರಿವು ನನಗಿಲ್ಲ. ಪುರಾತತ್ವ ಇಲಾಖೆಯ ಸುಪರ್ದಿಗೆ ಹೊನ್ನಾವರದ ಚೆನ್ನಕೇಶವ ಒಳಪಟ್ಟಿದ್ದಾನೋ ಇಲ್ಲವೋ ತಿಳಿಯದು. ಅಲ್ಲೆಲ್ಲೂ ನೀಲಿ ಫಲಕ ಕಾಣಬರಲಿಲ್ಲ. ನಾವು ಚಿತ್ರಗಳನ್ನು ತೆಗೆಯುವುದರಲ್ಲಿ ತಲ್ಲೀನರಾಗಿದ್ದಾಗ ಬೈಕೊಂದರಲ್ಲಿ ಹಾದು ಹೋಗುತ್ತಿದ್ದ ಇಬ್ಬರು ಹಳ್ಳಿಗರು ’ಸರಕಾರದಿಂದ ಅನುದಾನ ತೆಗೆಸಿಕೊಡುತ್ತೀರಾ’ ಎಂದು ಕೇಳಿ ನಮಗೆ ಮುಜುಗರ ಉಂಟುಮಾಡಿದರು.


ರಸ್ತೆಯ ಮತ್ತೊಂದು ಮಗ್ಗುಲಲ್ಲಿ ಮೆಕ್ಕೆಜೋಳವನ್ನು ಒಣಹಾಕಿದ್ದರು. ನೇಹಲ್ ಆ ಮೆಕ್ಕೆಜೋಳ ರಾಶಿಯನ್ನು ಬಿಟ್ಟು ಆಚೀಚೆ ಕದಲುತ್ತಿರಲಿಲ್ಲ. ಅಲ್ಲಿಂದ ಹೊರಟ ಸ್ವಲ್ಪ ಸಮಯದ ಬಳಿಕ ಆಕೆ ಏನನ್ನೋ ಜಗಿಯುತ್ತಿರುವುದನ್ನು ಕಂಡು ಏನೆಂದು ನೋಡಿದರೆ ಏಳೆಂಟು ಮೆಕ್ಕೆ ಜೋಳದ ಕಾಳುಗಳು!

10 ಕಾಮೆಂಟ್‌ಗಳು:

The wild ಹೇಳಿದರು...

Nice post -rajesh avare. Nehal tumba muddagiddale :)

ಸಾಗರದಾಚೆಯ ಇಂಚರ ಹೇಳಿದರು...

Rajesh

tumbaa chennagide baraha

Srikanth - ಶ್ರೀಕಾಂತ ಹೇಳಿದರು...

ನಾನು ಹೊನ್ನಾವರಕ್ಕೆ ಹೋದಾಗ ಒಬ್ಬ ಗೆಳೆಯ "ಇಲ್ಲಿ ಚೆನ್ನಕೇಶವ ದೇವಾಲಯ ತುಂಬ ಚೆನ್ನಾಗಿದ್ಯಂತೆ" ಅಂತ ಹೇಳಿದ. ಅವನ ಮಾತು ಕೇಳಿಕೊಂಡು ಬಸ್ ನಿಲ್ದಾಣದ ಹತ್ತಿರ ಆಟೋದವರನ್ನು ವಿಚಾರಿಸಿದರೆ ಅಂಥ ದೇವಾಲಯ ಇಲ್ಲವೇ ಇಲ್ಲ ಎಂದು ಹೇಳಿದರು. ಆಚೀಚೆ ಮೂರ್ನಾಲ್ಕು ಜನರನ್ನೂ ಕೇಳಿದೆವು. ಯಾರಿಗೂ ಗೊತ್ತಿರಲಿಲ್ಲ. ಪೆಚ್ಚು ಮೋರೆ ಹಾಕಿಕೊಂಡು ಅಲ್ಲಿಂದ ಭಟ್ಕಳದ ಬಸ್ ಹತ್ತಿದೆವು...

ಈ ದೇವಾಲಯಕ್ಕೆ ಹೋಗುವ ದಾರಿಯನ್ನು ಮೈಲ್ ಮಾಡ್ತೀರಾ? ಮುಂದಿನ ಬಾರಿ ಹೋದಾಗ ನೋಡಿಕೊಂಡು ಬರ್ತೀನಿ.

neelanjana ಹೇಳಿದರು...

@Srikanth

ರಾಜೇಶ ನಾಯ್ಕರು ಬರೆದಿರುವ ಹೊನ್ನಾವರ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಅಲ್ಲ. ಹಾಸನ ಜಿಲ್ಲೆಯದು.

ಹಾಸನ ಜಿಲ್ಲೆಯ ದುದ್ದದಿಂದ ೨-೩ ಕಿಮೀ ದೂರದಲ್ಲಿದೆ ಹೊನ್ನಾವರ. ಹಾಸನಕ್ಕೆ ೧೬-೧೭ ಕಿಮೀ ಆಗುತ್ತದೆಂದು ನೆನಪು.

manoj ಹೇಳಿದರು...

ಹೊನ್ನಾವರದಲ್ಲಿ ಚೆನ್ನಕೇಶವ ಎಲ್ಲಿಂದ ಬಂದ ಅಂತ ಭಾರಿ ತಲೆ ಕೆಡಿಸಿಕೊಂಡಿದ್ದೆ (ನಾನು ಹೊನ್ನಾವರದವನು). ಇದು ಹಾಸನದ ಹತ್ತಿರದ ಹೊನ್ನಾವರ ಅಂತ ತಿಳಿಸಿಕೊಟ್ಟಿದ್ದಕ್ಕೆ ಹಂಸಾನಂದಿಯವರಿಗೆ ಧನ್ಯವಾದಗಳು.
ಕೆಲವು ಪ್ರಮುಖವಾದ ದೇವಾಲಯಗಳನ್ನು ಬಿಟ್ಟರೆ ಮಿಕ್ಕವುಗಳ ಗತಿ ಇದೇ. ಬೇಸರವಾಗುತ್ತದೆ.

ಪುಚ್ಚಪ್ಪಾಡಿ ಹೇಳಿದರು...

ಚೆನ್ನಾಗಿದೆ. . . .

PaLa ಹೇಳಿದರು...

ನನಗೂ ಹಂಸಾನಂದಿಯವರ ಕಾಮೆಂಟ್ ಓದೋಕೆ ಮುಂಚೆ ತಲೆಗೆ ಬಂದಿದ್ದು.. ಉ.ಕ.ದ ಹೊನ್ನಾವರ.. ಹಾಸನದ ಬಳಿ ಹೊನ್ನಾವರಕ್ಕೆ ಒಮ್ಮೆಯೂ ಭೇಟಿಕೊಟ್ಟಿದ್ದಿಲ್ಲ.. ಏಳು ಅಡಿಯ ಚೆನ್ನಕೇಶವನ ಮೂರ್ತಿ ತುಂಬಾ ಚೆನ್ನಾಗಿದೆ.. ಜೊತೆಗೆ ಹೊರಾವರಣದ ಕೆತ್ತನೆಗಳೂ.. ನಿಮ್ಮ ಹುಡುಕಾಟಕ್ಕೆ ಧನ್ಯವಾದ

ರಾಜೇಶ್ ನಾಯ್ಕ ಹೇಳಿದರು...

ಅರ್ಜುನ್, ಗುರು
ಧನ್ಯವಾದ.

ಶ್ರೀಕಾಂತ್,
ಹಂಸಾನಂದಿಯವರೇ ನಿಮಗೆ ಎಲ್ಲಾ ಮಾಹಿತಿ ನೀಡಿಬಿಟ್ಟಿದ್ದಾರೆ.

ಹಂಸಾನಂದಿ,
ಆಸಕ್ತಿ ಉಳ್ಳವರು ಹುಡುಕಾಡಿಕೊಂಡು ’ಹೊನ್ನಾವರ’ ಎಲ್ಲಿದೆ, ಯಾವ ಹೊನ್ನಾವರದಲ್ಲಿ ಚನ್ನಕೇಶವ ನೆಲೆಸಿದ್ದಾನೆ ಎಂದು ಕಂಡುಕೊಂಡು ನಂತರ ಭೇಟಿ ನೀಡುತ್ತಾರೆ. ಯಾವ ಮಾಹಿತಿಯನ್ನೂ ಸುಲಭವಾಗಿ ನೀಡಬಾರದು. ಹಿಂಟ್ ಕೊಡಬೇಕು ಆಷ್ಟೇ. ಆಸಕ್ತಿ ಉಳ್ಳವರಿಗೆ ಹಿಂಟ್ ಸಾಕಾಗುತ್ತದೆ. ’ಸ್ವಲ್ಪ ಕಷ್ಟಪಡಬೇಕು’ ಎಂದು ನನ್ನ ಅಭಿಪ್ರಾಯ. ಹಾಗಾಗಿ ದೂರ, ದಾರಿ ಇತ್ಯಾದಿಗಳನ್ನು ಇಲ್ಲಿ ನಾನು ಹಾಕುವುದಿಲ್ಲ!

ಮನೋಜ್, ಮಹೇಶ್,
ಧನ್ಯವಾದ.

ಪಾಲಚಂದ್ರ,
ಹೊರಾವರಣದ ಕೆತ್ತನೆಗಳ ಅಂದ ನನ್ನನ್ನೂ ಅಚ್ಚರಿಗೊಳಿಸಿದವು. ಅವಿನ್ನೂ ಸುಸ್ಥಿತಿಯಲ್ಲಿರುವುದೇ ಸೋಜಿಗ. ಧನ್ಯವಾದ.

ತೇಜಸ್ವಿನಿ ಹೆಗಡೆ ಹೇಳಿದರು...

ನೀವು ಸಣ್ಣ ಜಲಧಾರೆಯ ಕುರಿತಾಗಿ ಪೋಸ್ಟ್ ಒಂದನ್ನು ಹಾಕಿ ಡಿಲೀಟ್ ಮಾಡೀದ್ದೀರಿ. ಆ ಜಲಧಾರೆಯ ಕುರಿತು ತಿಳಿದು ಕೊಳ್ಳುವ ಕುತೂಹಲವಾಗಿದೆ. ಅದು ಇಲ್ಲೇ ಸುತ್ತಮುತ್ತಲಿದ್ದರೆ ಹೋಗಿ ನೋಡಿ ಬರುವ ಆಶಯ ಕೂಡ. ನಾನೂ ಪರಿಸರಪ್ರೇಮಿ. ಸರಿಯೆನಿಸಿದಲ್ಲಿ ನನಗೆ ಹೆಚ್ಚಿನ ಮಾಹಿತಿಗಳನ್ನು ಮೈಲ್ ಮಾಡಿ ತಿಳಿಸಿ.

ಧನ್ಯವಾದಗಳು.

PN Subramanian ಹೇಳಿದರು...

Beautiful blog as also post. Only problem is with the language.