ಗುರುವಾರ, ಆಗಸ್ಟ್ 06, 2009

ಶಂಭುಲಿಂಗೇಶ್ವರ ದೇವಾಲಯ - ಕುಂದಗೋಳ


೨೦-೦೧-೨೦೦೯.

ಕುಂದಗೋಳದ ಶಂಭುಲಿಂಗೇಶ್ವರ ದೇವಾಲಯ ಎಲೆಮರೆಯ ಕಾಯಿಯಂತೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುವುದಿಲ್ಲ. ಬಸ್ಸು ನಿಲ್ದಾಣದಿಂದ ಹತ್ತು ನಿಮಿಷಕ್ಕೂ ಕಡಿಮೆ ನಡೆದರೆ ದೇವಾಲಯದ ಆವರಣದಲ್ಲಿರಬಹುದು. ಈ ದೇವಾಲಯವನ್ನು ಆಧುನೀಕರಣಗೊಳಿಸುವ ನೆಪದಲ್ಲಿ ಅಂದಗೆಡಿಸಲಾಗಿದೆ ಎನ್ನಬಹುದು. ಈ ಏಕಕೂಟ ದೇವಾಲಯದ ಗೋಪುರವನ್ನು ನೂತನವಾಗಿ ರಚಿಸಲಾಗಿದೆ. ಮುಖಮಂಟಪದ ಮೇಲೂ ಅರ್ಧಗೋಡೆ ತರಹದ ರಚನೆಯನ್ನು ನಿರ್ಮಿಸಲಾಗಿದೆ ಮತ್ತು ಮುಖಮಂಟಪದ ಛಾವಣಿಯ ಕಲ್ಲಿನ ಹೊರಚಾಚುಗಳಿಗೆ ಈಗ ಕಂಬಗಳನ್ನು ಆಧಾರದಂತೆ ಇಟ್ಟು ಚಂದಗಾಣಿಸಲು ಹೋಗಿ ಅಸಹ್ಯಗೊಳಿಸಿಬಿಟ್ಟಿದ್ದಾರೆ.


ಮುಖಮಂಟಪ, ನವರಂಗ ಮತ್ತು ಗರ್ಭಗುಡಿಗಳನ್ನು ಹೊಂದಿರುವ ಈ ದೇವಾಲಯದ ’ಹೈ ಲೈಟ್’ ಎಂದರೆ ಮುಖಮಂಟಪದಲ್ಲಿರುವ ಕಂಬಗಳು. ಈ ಕಂಬಗಳು ಬಹಳ ನಯವಾದ ಮೇಲ್ಮೈಯನ್ನು ಹೊಂದಿದ್ದು ಬೆರಗುಗೊಳಿಸುವಂತಹ ಹೊಳಪನ್ನು ಇನ್ನೂ ಕಾಪಾಡಿಕೊಂಡಿವೆ. ಕೋಟೆಪುರದ ಕೈಟಭೇಶ್ವರ ದೇವಾಲಯದ ಕಂಬಗಳೂ ಇದೇ ರೀತಿಯ ಹೊಳಪನ್ನು ಕಾಪಾಡಿಕೊಂಡಿವೆ. ಪ್ರಾಚೀನ ದೇವಾಲಯಗಳಲ್ಲಿ ಇದೇ ತರಹದ ಕಂಬಗಳು ಮಾಮೂಲು. ಆದರೆ ಈ ತರಹದ ಹೊಳಪು... ಬಹಳ ಬಹಳ ಅಪರೂಪ. ಒಂದೆರಡು ಭಗ್ನಗೊಂಡಿರುವ ಕಂಬಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಂಬಗಳು ಅದ್ಭುತವಾದ ಹೊಳಪನ್ನು ಹೊಂದಿದ್ದವು.


ಮುಖಮಂಟಪದಲ್ಲಿ ಲೆಕ್ಕದ ಪ್ರಕಾರ ೬೦ ಕಂಬಗಳಿರಬೇಕಿತ್ತು. ಆದರೆ ೫೨ ಮಾತ್ರ ಇವೆ. ನವರಂಗದ ದ್ವಾರದ ಹೊರಗೆ ಆಸೀನನಾಗಿರುವ ನಂದಿಯ ಇಕ್ಕೆಲಗಳಲ್ಲಿ ೪ ಕೋಣೆಗಳನ್ನು ನಿರ್ಮಿಸಲಾಗಿದೆ. ಈ ಕೋಣೆಗಳನ್ನು ಆಚೀಚೆ ಇರುವ ೮ ಕಂಬಗಳನ್ನು ಬಳಸಿ ರಚಿಸಲಾಗಿದೆ ಎಂಬುದು ಖೇದಕರ.


ನವರಂಗ ಮತ್ತು ಗರ್ಭಗುಡಿಯ ನೆಲಕ್ಕೆ ಮಾರ್ಬಲ್ ಹಾಸಲಾಗಿದೆ. ಗರ್ಭಗುಡಿಯ ಗೋಡೆಗೂ ಅರ್ಧದಷ್ಟು ಎತ್ತರದವರೆಗೆ ಮಾರ್ಬಲ್ ಹಾಕಲಾಗಿದೆ. ಗರ್ಭಗುಡಿಯ ದ್ವಾರ ೬ ತೋಳಿನದ್ದಾಗಿದ್ದು ಇಕ್ಕೆಲಗಳಲ್ಲಿ ಕವಾಟಗಳಿವೆ. ಒಂದು ಕವಾಟದಲ್ಲಿ ಗಣೇಶನ ಆಕರ್ಷಕ ಮೂರ್ತಿಯಿದ್ದರೆ ಇನ್ನೊಂದರಲ್ಲಿ ಪಾರ್ವತಿಯ ಮೂರ್ತಿಯಿದೆ. ನವರಂಗದ ದ್ವಾರದ ಬಳಿಯೇ ಆಸೀನನಾಗಿರುವ ನಂದಿಯ ಕರಿಕಲ್ಲಿನ ಮೂರ್ತಿ ಕೂಡಾ ನಯವಾಗಿದ್ದು ಬಹಳ ಚೆನ್ನಾಗಿದೆ.


ಚಾಲುಕ್ಯ ಕಾಲದ ನಿರ್ಮಾಣವೋ ಅಥವಾ ಹೊಯ್ಸಳ ಕಾಲದ ನಿರ್ಮಾಣವೋ ಎಂದು ತಿಳಿಯಲಿಲ್ಲ. ಮುಖಮಂಟಪದ ಸುತ್ತಲೂ ಹೊರಗೋಡೆಯಲ್ಲಿ ಉತ್ತಮ ಸಣ್ಣ ಸಣ್ಣ ಅಸಂಖ್ಯಾತ ಕೆತ್ತನೆಗಳಿವೆ. ಇಲ್ಲಿ ಎಲ್ಲಾ ಕಡೆ ಹೊಯ್ಸಳ ಸಿಂಹವೇ ರಾರಾಜಿಸುತ್ತಿದೆ. ಆದರೆ ಮುಖಮಂಟಪದ ಒಳಭಾಗದ ಛಾವಣಿಯಲ್ಲಿ ಎಲ್ಲೆಡೆ ಕಲ್ಯಾಣಿ ಚಾಲುಕ್ಯ ಸಂಕೇತವಾಗಿರುವ ತಾವರೆಗಳ ಕೆತ್ತನೆಯಿವೆ. ಚಾಲುಕ್ಯರು ನಿರ್ಮಿಸಿ ಹೊಯ್ಸಳರು ಅಭಿವೃದ್ಧಿಪಡಿಸಿದ ದೇವಾಲಯವಿರಬಹುದು.

3 ಕಾಮೆಂಟ್‌ಗಳು:

Srik ಹೇಳಿದರು...

ಆಕ್ರಮಣಕಾರರು, ದರೋಡೆಕೋರರು, ಕಳ್ಳ ಕಾಕರರು, ಧೂರ್ತ ಆಡಳಿತಗಾರರು ಎಲ್ಲರ ಹೊರತಾಗಿ ನಮ್ಮ ಮಗ್ಗುಲಲ್ಲೇ ಇಷ್ಟೊಂದು ವೈಶಿಷ್ಟ್ಯಗಳು ಇನ್ನೂ ಉಳಿದಿರುವುದು ನಮ್ಮ ಶ್ರೀಮಂತ ಸಂಸ್ಕೃತಿಗೆ ಒಂದು ಉದಾಹರಣೆ. ನಿಮ್ಮ ಈ ಪರ್ಯಟನೆಯನ್ನು ಮುಂದುವರಿಸಿ, ನಮಗೆ ಇವುಗಳ ಪರಿಚಯ ಮಾಡಿಕೊಡುತ್ತಿರುವದು ಪ್ರಶಂಸನೀಯ ಕಾರ್ಯ.

Umesh Balikai ಹೇಳಿದರು...

ರಾಜೇಶ್,

ನಮ್ಮೂರಿನ ಶಂಭುಲಿಂಗೇಶ್ವರ ದೇವಾಲಯದ ಬಗೆಗೆ ನಾನು ನನ್ನ ಬ್ಲಾಗಿನಲ್ಲಿ ಬರೆಯ ಬೇಕೆಂದುಕೊಂಡಿದ್ದೆ. ಆದರೆ, ನಾನು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ನೀವು ಬರೆದಿದ್ದೀರ. ಆಧುನೀಕರಣ, ರಿಪೇರಿ ಮುಂತಾದ ನೆಪದಲ್ಲಿ ದೇವಸ್ಥಾನದ ಅಂದವನ್ನು ಹಾಳು ಮಾಡಿರುವುದಂತೂ ನಿಜ. ನಾನು ಓದಿದ ಪ್ರಾಥಮಿಕ ಶಾಲೆ ದೇವಸ್ಥಾನಕ್ಕೆ ತುಂಬಾ ಹತ್ತಿರದಲ್ಲಿ ಇದ್ದುದರಿಂದ ನಾನು ಚಿಕ್ಕವ ನಿದ್ದಾಗಿನಿಂದ ದೇವಸ್ಥಾನವನ್ನು ಗಮನಿಸಿದ್ದೇನೆ. ಮಧಾಹ್ನ ಹೊತ್ತು ಅಲ್ಲಿ ಇಸ್ಪೀಟು ಆಡುವವರ ಮತ್ತು ನಿದ್ದೆ ಮಾಡುವವರ ಕಾಟ ಜಾಸ್ತಿ. ದೇವಸ್ಥಾನಕ್ಕೆ ಒಂದು ರಕ್ಷಣಾ ಗೋಡೆ ಎಂಬುದಿಲ್ಲ. ಗುಡಿಗೆ ಹತ್ತಿಕೊಂಡೆ ಬಾಲಕಿಯರ ಪ್ರಾಥಮಿಕ ಶಾಲೆಯಿದೆ. ದೇವಸ್ಥಾನದ ಮಹತ್ವ ತಿಳಿಯದ ಚಿಕ್ಕ ಮಕ್ಕಳು ಕಲ್ಲಿನಿಂದ ಹೊಡೆದು ದೇವಸ್ಥಾನದ ಅಂದ ಕೆಡಿಸುತ್ತಾರೆ. ಎಲ್ಲ ತಿಳಿದ ದೊಡ್ಡವರು ಸಹ ಕಾಳಜಿ ವ್ಯಕ್ತಪಡಿಸುವುದಿಲ್ಲ. ಅದನ್ನೆಲ್ಲ ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತೆ. ಇದನ್ನೆಲ್ಲ ತಡೆಯಲು ಏನಾದರೂ ಮಾಡಲೇ ಬೇಕಾಗಿದೆ. ಇಲ್ಲದಿದ್ದರೆ ನಮ್ಮೂರಿನ ಶಂಭುಲಿಂಗೇಶ್ವರ ದೇವಾಲಯ ಇತಿಹಾಸದ ಪುಟ ಸೇರುವ ಸಮಯ ತುಂಬಾ ದೂರವಿಲ್ಲ ಅನ್ಸುತ್ತೆ.

ದೇವಸ್ಥಾನದ ಸುಂದರ ಚಿತ್ರಗಳಿಗೆ ಮತ್ತು ಲೇಖನದಲ್ಲಿ ನೀವು ವ್ಯಕ್ತಪಡಿಸಿರುವ ಕಳಕಳಿಗೆ ಧನ್ಯವಾದಗಳು.

- ಉಮೇಶ್

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,
ಧನ್ಯವಾದಗಳು. ದೇವಾಲಯಗಳ ಬಗ್ಗೆ ಮಾಹಿತಿ ಬರುತ್ತಿರುತ್ತದೆ. ನೀವೂ ಬರ್ತಾ ಇರಿ ಇಲ್ಲಿಗೆ.

ಉಮೇಶ್,
ಬ್ಲಾಗಿಗೆ ಸ್ವಾಗತ. ಶಂಭುಲಿಂಗೇಶ್ವರ ದೇವಾಲಯದ ಬಗ್ಗೆ ನೀವೂ ಬರೆದರೆ ಚೆನ್ನ. ಅದೇ ಊರಿನವರಾಗಿರುವ ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಗೊತ್ತಿರುತ್ತವೆ. ಇಲ್ಲಿ ಟಿಪ್ಪಣಿ ಮೂಲಕ ಕೆಲವೊಂದು ಮಾಹಿತಿಗಳನ್ನು ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು. ನಾನು ಅಲ್ಲಿಗೆ ತೆರಳಿದಾಗ ದೇವಾಲಯದ ಪ್ರಾಂಗಣದೊಳಗೆ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ದೇವಾಲಯ ನೋಡಿಕೊಳ್ಳುತ್ತಿರುವ ಅರ್ಚಕರು ಅದೆಲ್ಲೋ ತೆರಳಿದ್ದರು. ಅವರು ಬಂದು ಈ ಮಕ್ಕಳನ್ನು ಅಲ್ಲಿಂದ ಹೊರಗೆ ಕಳುಹಿಸಿದರು. ಊರಿನವರೇ ಇದೆಲ್ಲಾ ಆಗದಂತೆ ಎಚ್ಚರವಹಿಸಿ ದೇವಾಲಯದ ಸಂರಕ್ಷಣೆಯೆಡೆ ಗಮನ ಹರಿಸಿದರೆ ದೇವಾಲಯ ಉಳಿಯಬಹುದು.