ಭಾನುವಾರ, ಡಿಸೆಂಬರ್ 21, 2008

ಒಂಬತ್ತು ಹಂತಗಳ ಜಲಧಾರೆ

ನವೆಂಬರ್ ೧೩, ೨೦೦೫.

ಹೊಸಗೋಡು ಜಲಪಾತ ನೋಡೋಣವೆಂದು ಉಡುಪಿಯಿಂದ ಯಮಾಹಾದಲ್ಲಿ ಹೊರಟು ಗೆಳೆಯ ಲಕ್ಷ್ಮೀನಾರಾಯಣ (ಪುತ್ತು) ನನ್ನು ಪಿಕ್ ಮಾಡಿ ದಾರಿಯಲ್ಲಿ ಹೋಟೇಲೊಂದಕ್ಕೆ ನುಗ್ಗಿದೆವು. ಇಲ್ಲಿ ನಮ್ಮ ಬೆಳಗಿನ ಉಪಹಾರ ನೆನಪಿನಲ್ಲಿರುವಂತದ್ದು. ೬೦ ರೂಪಾಯಿಯವರೆಗೆ ಬಿಲ್ ಆಗಬಹುದೆಂದು ನಿರೀಕ್ಷಿಸಿದ್ದೆ. ಆದರೆ ಬಿಲ್ ಆದದ್ದು ಕೇವಲ ರೂ.೨೮!! ದೇವಕಾರದ ಮಧುಕರ್ ಮನೆಯ ಊಟವನ್ನು ನೆನೆಸಿ ಪುತ್ತು ಭಾವೋದ್ವೇಗಕ್ಕೊಳಗಾದ. ಈತನಿಗೆ ಎಲ್ಲಿ ಹೋದರೂ ತಿಂದದ್ದು ಮಾತ್ರ ನೆನಪಿರುವುದು, ಪ್ರಕೃತಿ ನೋಡಿದ್ದೆಲ್ಲಾ ಅದೇ ಕ್ಷಣ ಮರೆತುಬಿಟ್ಟಿರುತ್ತಾನೆ. ಆದರೂ ಜೊತೆಗೊಬ್ಬ ಇದ್ದರೆ ಯಾವಾಗಲೂ ಒಳಿತು ಎಂಬ ಮಾತ್ರಕ್ಕೆ ಈತನನ್ನು ನಾನು ಕರೆದೊಯ್ಯುವುದು.

ಮುಂದೆ ದಾರಿಯಲ್ಲಿ ಸುಂದರ ಯುವಕನೊಬ್ಬ ಬಜಾಜ್ ಎಮ್-೮೦ ವಾಹನದಲ್ಲಿ ನಮ್ಮ ಸಮಾನಾಂತರಕ್ಕೆ ಬಂದು ನಿಧಾನಿಸಿದ. ಈತ ಜನಾರ್ಧನ, ಹೀರೇಬೈಲಿನ ಮಹಾದೇವ ನಾಯ್ಕರ ಮಗ. ಪರಸ್ಪರ ಪರಿಚಯ ಮಾಡಿಕೊಂಡು ನಂತರ ಅವರ ಮನೆಯತ್ತ ತೆರಳಿದೆವು. ಮಹಾದೇವ ನಾಯ್ಕರ ಮನೆ ಕಲಾವಿದರ ಮನೆ. ಜನಾರ್ಧನ ಒಬ್ಬ ಯಕ್ಷಗಾನ ಕಲಾವಿದ. ಸಾಲಿಗ್ರಾಮ ಮೇಳದೊಂದಿಗೆ ೨ ವರ್ಷ ತಿರುಗಾಟ ಮಾಡಿದ್ದರು. ಮಹಾದೇವ ನಾಯ್ಕರೂ ಉತ್ತಮ ಕಲಾವಿದರು. ಇಲ್ಲಿ ಕುಡಿಯಲು ಚಹಾ ಸಿಕ್ಕಿತು ನಂತರ ಎಳನೀರೂ ಸಿಕ್ಕಿತು. ’ಮುಂದಿನ ಸಲ ಮುಕ್ತಿ ಹೊಳೆ ಜಲಧಾರೆ ನೋಡ್ಲಿಕ್ಕೆ ಬನ್ನಿ, ಆಗ ನಮ್ಮ ಮನೆಗೆ ಬಂದು ಉಳ್ಕೊಳ್ಳಬೇಕು’ ಎಂದು ಜನಾರ್ಧನ ಆಗಲೇ ಅಹ್ವಾನ ನೀಡಿ, ’ಮುಂದೆ ತಿಮ್ಮಾ ಗೌಡರ ಮನೆಯಲ್ಲಿ ವಿಚಾರಿಸಿ, ಅವರ ಮನೆಯವರಲ್ಲೊಬ್ಬರು ದಾರಿ ತೋರಿಸಲು ಬರಬಹುದು’ ಎಂದು ಬೀಳ್ಕೊಟ್ಟರು.

ತಿಮ್ಮಾ ಗೌಡರ ಮನೆ ತಲುಪಿದಾಗ ಅವರ ಮಗ ಗಣಪತಿ ಪುತ್ತುವನ್ನು ಕಣ್ಣು ಮಿಟುಕಿಸದೇ ನೋಡುತ್ತಿದ್ದ. ಪುತ್ತು ಹಳದೀಪುರದವನೆಂದು ಹೇಳಿದ ಕೂಡಲೇ ಗಣಪತಿಯ ಮುಖದಲ್ಲಿ ದೊಡ್ಡ ನಗು. ಪುತ್ತು ರಾಷ್ಟ್ರೀಯ ಮಟ್ಟದ ಕ್ವಾಲಿಫೈಡ್ ವಾಲಿಬಾಲ್ ರೆಫ್ರೀ. ಕರ್ನಾಟಕ, ಗೋವಾಗಳಲ್ಲೆಲ್ಲಾ ವಾಲಿಬಾಲ್ ಪಂದ್ಯಾವಳಿಗಳಲ್ಲಿ ರೆಫ್ರೀಯಾಗಿ ಹೋಗುತ್ತಾನೆ. ಹಳದೀಪುರದಲ್ಲಿ ವ್ಯಾಸಂಗ ಮಾಡಿದ್ದ ಗಣಪತಿ, ಸ್ಥಳೀಯ ವಾಲಿಬಾಲ್ ಪಂದ್ಯಾಟಗಳಲ್ಲಿ ಪುತ್ತುವನ್ನು ನೋಡಿದ್ದ. ಹೀಗಾಗಿ ಆ ಒಂದು ಮುಹೂರ್ತದಲ್ಲಿ ಇಬ್ಬರು ಆಗಂತುಕರು ಗೆಳೆಯರಾದರು. ಈ ಹಳ್ಳಿಯಲ್ಲೂ ತನ್ನನ್ನು ಗುರುತಿಸಿದರಲ್ಲಾ ಎಂದು ಪುತ್ತುವಿಗೆ ಖುಷಿಯೋ ಖುಷಿ. ಬೈಕನ್ನು ಗಣಪತಿಯ ಮನೆಯಲ್ಲೇ ಇರಿಸಿ ಜಲಧಾರೆಯತ್ತ ಹೊರಟೆವು. ಅದಾಗಲೇ ಇಬ್ಬರು ಹೊಸ ಗೆಳೆಯರು ಮಾತುಕತೆಯಲ್ಲಿ ತೊಡಗಿಯಾಗಿತ್ತು.


ಮುಂದೆ ಶಾಲೆಯ ಬಳಿಯೇ ಗಣಪತಿಯ ಸಂಬಂಧಿ ಹನ್ಮಂತ ನಮಗೆ ಜೊತೆಯಾದ. ಸುಮಾರು ೪೦೦ ಅಡಿ ಎತ್ತರದಿಂದ ೯ ಹಂತಗಳಲ್ಲಿ ಧುಮುಕುವ ಜಲಧಾರೆಯ ದೃಶ್ಯ ನೋಡಿ ಇನ್ನಷ್ಟು ವೇಗವಾಗಿ ನಡೆಯತೊಡಗಿದೆವು.


ಜಲಧಾರೆಯ ಮೊದಲ ೩ ಹಂತಗಳಿಗೆ ಮರಗಿಡಗಳು ಚೆನ್ನಾದ ಚಪ್ಪರ ಹಾಕಿವೆ. ಎಂದಿನಂತೆ ನಾನು ನಿಧಾನ ಬರತೊಡಗಿದಾಗ ಇನ್ನು ಮುಂದಕ್ಕೆ ಹೋಗುವುದು ಕಷ್ಟಕರ ಎಂದು ಹನ್ಮಂತ ವಟಗುಟ್ಟತೊಡಗಿದ. ಹಾಗೆ ೬ನೇ ಹಂತ ತಲುಪಿದಾಗ ಹನ್ಮಂತ ಮತ್ತದೇ ಮಾತನ್ನು ಪುನರಾವರ್ತಿಸಿದರೂ ನಾನದನ್ನು ಕಡೆಗಣಿಸಿದೆ.


ಮುಂದೆ ೫ನೇ ಹಂತವನ್ನು ತಲುಪಿದೆವು. ಇದು ೫೦ ಅಡಿ ಅಂತರದಲ್ಲಿ ೨ ಧಾರೆಗಳಾಗಿ ಧುಮುಕುತ್ತಿತ್ತು. ಹನ್ಮಂತನ ವಿರೋಧದ ನಡುವೆಯೂ ಮುಂದುವರಿಸಿದೆವು. ಇಲ್ಲಿ ನಡೆದದ್ದೇ ದಾರಿ. ಕಲ್ಲಿನ ಮೇಲ್ಮೈಯಲ್ಲಿ ಬೆಳೆದಿರುವ ಹುಲ್ಲುಗಳನ್ನು ಆಧಾರವಾಗಿ ಬಳಸಿ ಎಚ್ಚರಿಕೆಯಿಂದ ಮುಂದುವರಿದರಾಯಿತು. ೫ನೇ ಹಂತದ ಮೇಲೆ ತಲುಪಿದಾಗ ಇನ್ನು ಮುಂದಕ್ಕೆ ಹೋಗುವುದು ನಮ್ಮಿಂದ ಸಾಧ್ಯವೇ ಇಲ್ಲ ಎಂದು ಹನ್ಮಂತ ಕೂತುಬಿಟ್ಟ. ಪುತ್ತುವಿಗೆ ಬೆಳಗ್ಗೆ ತಿಂದದ್ದು ಮತ್ತು ಕುಡಿದ ಎಳನೀರೆಲ್ಲಾ ಕರಗಿ ಹೋಗಿರಬೇಕು. ಮೇಲೆ ಹತ್ತಿ ಹತ್ತಿ ಸಾಕಾದ ಆತನೂ ಹನ್ಮಂತನ ಮಾತಿಗೆ ಒಪ್ಪಿಗೆ ಸೂಚಿಸಿದ! ಇನ್ನೂ ಮೇಲಕ್ಕೆ ಹೋಗಲೇಬೇಕೆಂದು ನಾನು ಪಟ್ಟು ಹಿಡಿದೆ. (ನಂತರ ಹನ್ಮಂತನ ಮನೆಯಲ್ಲಿ ವಿಶ್ರಮಿಸುವಾಗ ಮೇಲೆ ಹೋಗುವುದು ಬೇಡವೆಂದು ತಾನೇಕೆ ಪದೇ ಪದೇ ಹೇಳುತ್ತಿದ್ದೆ ಎಂದು ಹನ್ಮಂತ ತಿಳಿಸಿದ. ನನ್ನ ೯೫ ಕೆ.ಜಿ. ಧಡೂತಿ ದೇಹವನ್ನು ನೋಡಿ ಆತನಿಗೆ ಅನುಮಾನವಿತ್ತಂತೆ ಈತನಿಂದಾಗದು ಎಂದು).


ಸುಂದರವಾಗಿರುವ ನಾಲ್ಕನೇ ಹಂತದ ಸನಿಹ ತಲುಪಬೇಕಾದರೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಕೇವಲ ೩ ಅಡಿ ಅಗಲವಿರುವ ಬಂಡೆಯ ಹಾದಿಯಲ್ಲಿ ೫೦ ಅಡಿಗಳಷ್ಟು ದೂರ ನಡೆದುಕೊಂಡು ಹೋಗಬೇಕು. ಈ ಹಾದಿಯ ಎರಡೂ ಬದಿಯಲ್ಲಿ ನೀರು ಹರಿಯುತ್ತದೆ. ನಿಧಾನವಾಗಿ ಈ ತೊಡಕನ್ನು ದಾಟಿ ಮುಂದುವರಿದೆ. ಜಲಧಾರೆಯ ಎರಡನೇ ಹಂತದ ಬಳಿಕ ನೀರಿನ ಹರಿವು ಇಬ್ಭಾಗವಾಗುತ್ತದೆ. ಒಂದು ಭಾಗ ಜಲಧಾರೆಯ ೩ನೇ ಹಂತವನ್ನು ನಿರ್ಮಿಸಿದರೆ ಮತ್ತೊಂದು ಭಾಗ ನಾಲ್ಕನೇ ಹಂತವನ್ನು ನಿರ್ಮಿಸುತ್ತದೆ. ಜಲಧಾರೆಯ ೫ನೇ ಹಂತದ ಮೊದಲು ೨ ಭಾಗಗಳು ಮತ್ತೆ ಒಂದುಗೂಡುತ್ತವೆ.

ನಾಲ್ಕನೇ ಹಂತವನ್ನು ದಾಟಿ ೧೦ ನಿಮಿಷ ಮತ್ತೆ ಬಂಡೆಯ ಮೇಲ್ಮೈಯನ್ನೇರಿದರೆ ಜಲಧಾರೆಯ ೩ ನೇ ಮತ್ತು ಪ್ರಮುಖ ಹಂತ. ಇದು ಸುಮಾರು ೧೦೦ ಅಡಿಯಷ್ಟು ಎತ್ತರವಿದ್ದು ತಳದಲ್ಲಿ ಸಣ್ಣ ಗುಂಡಿಯನ್ನು ಹೊಂದಿದೆ. ಇಲ್ಲಿ ೩ ಜನರಿಗೆ ಮಾತ್ರ ನೀರಿನಲ್ಲಿಳಿಯುವಷ್ಟು ಸ್ಥಳಾವಕಾಶವಿದೆ. ೯ನೇ ಹಂತದಿಂದ ೩ನೇ ಹಂತದ ತಳದವರೆಗೆ ಬರಲು ಸುಮಾರು ೬೦ ನಿಮಿಷ ಬೇಕಾಗುವುದು. ಬಿಸಿಲಲ್ಲಿ ಒಂದು ತಾಸು ನೇರವಾಗಿ ಮೇಲೇರಿ ಈಗ ತ್ರಾಣವೇ ಇರಲಿಲ್ಲ. ಅಲ್ಲೇ ಕುಳಿತು ವಿಶ್ರಮಿಸಿದೆವು. ಅರ್ಧ ಗಂಟೆಯ ಬಳಿಕ ಕೆಳಗಿಳಿಯಲಾರಂಭಿಸಿದೆವು.


ಹನ್ಮಂತ ನಮ್ಮನ್ನು ಆತನ ಮನೆಗೆ ಕರೆದೊಯ್ದ. ಮನೆಯಂಗಳದಲ್ಲೇ ಇದ್ದ ಗಿಡದಿಂದ ನಿಂಬೆ ಹಣ್ಣನ್ನು ಕಿತ್ತು ಅದರಿಂದ ಪಾನಕ ಮಾಡಿ ನಮಗೆ ಕೊಡಲಾಯಿತು. ಎಷ್ಟು ತಾಜಾವಾಗಿತ್ತೆಂದರೆ ಲೋಟದ ತುದಿಯಲ್ಲಿ ಪಾನಕ ಹನಿಗಳು ಮೇಲಕ್ಕೆ ಪುಟಿಯುತ್ತಿದ್ದವು. ಗಣಪತಿ ತೆಂಗಿನ ಮರವೊಂದನ್ನು ಏರಿ ಸೀಯಾಳ ಕೊಯ್ದು ಎಳನೀರು ಕುಡಿಸಿದ. ಲೀಟರ್ ಗಟ್ಟಲೆ ನೀರಿದ್ದವೇನೋ ಆ ಸೀಯಾಳಗಳಲ್ಲಿ. ಎಷ್ಟು ಕುಡಿದರೂ ಮುಗಿಯುತ್ತಿರಲಿಲ್ಲ. ಹನ್ಮಂತನ ಮಗಳು ರಕ್ಷಿತಾಳ ರಂಗು ಮತ್ತು ರೂಪ ಕಂಡು ಪುತ್ತುವಿಗೆ ಫುಲ್ಲು ಡೌಟು - ಆಕೆ ನಿಜವಾಗಿಯೂ ಹನ್ಮಂತನ ಮಗಳು ಹೌದೋ ಅಲ್ಲವೋ ಎಂದು!


ನಂತರ ಗಣಪತಿಯ ಮನೆಯಲ್ಲಿ ಆತ ಮತ್ತೆ ಸೀಯಾಳ ಬೀಳಿಸಿ ಕುಡಿಸಿದ! ದಿನವೆಂದರೆ ಹೀಗಿರಬೇಕು ನೋಡಿ! ಸೀಯಾಳದ ಮೇಲೆ ಸೀಯಾಳ. ತಾಜಾ ಲಿಂಬೆ ಪಾನಕ. ವ್ಹಾ! ಹಿರೇಬೈಲು ತಲುಪಿದಾಗ ಮಹಾದೇವ ನಾಯ್ಕರು ಮನೆಯ ದಣಪೆ(ಗೇಟು)ಯ ಬಳಿಯೇ ನಿಂತಿದ್ದರು. ಅಲ್ಲಿ ಬೈಕು ನಿಲ್ಲಿಸಿದಾಗ ಮತ್ತೆ ಅವರು ಬಿಟ್ಟಾರೆಯೇ. ಪುನ: ಒಳಗೆ ಕರೆದು ಮತ್ತೊಂದು ಬಾರಿ ಚಹಾ ಕುಡಿಸಿದರು. ಸ್ವಲ್ಪ ಹೊತ್ತು ಮಾತನಾಡಿ, ಮುಕ್ತಿ ಹೊಳೆ ಜಲಧಾರೆ ನೋಡಲು ಶೀಘ್ರವೇ ಬರಲಿದ್ದೇವೆಂದು ತಿಳಿಸಿ ಹೊರಟೆವು.

11 ಕಾಮೆಂಟ್‌ಗಳು:

sunaath ಹೇಳಿದರು...

ರಕ್ಷಿತಾ ಎಷ್ಟು ಮುದ್ದಾಗಿದ್ದಾಳಲ್ಲ!

Ashok Uchangi ಹೇಳಿದರು...

ರಾಜೇಶ್ ನಿಮ್ಮ ಪ್ರವಾಸ ಕಥನದ ನಿರೂಪಣಾ ಶೈಲಿ ಚೆನ್ನಾಗಿದೆ.ನಮ್ಮ ಕಡೆನೂ ಬನ್ನಿ (ಮೈಸೂರು)...ಸುತ್ತೋಣ.
ಅಶೋಕ ಉಚ್ಚಂಗಿ
http://mysoremallige01.blogspot.com/

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ರಜೇಶ್...
ನಿಮ್ಮ ಪ್ರವಸ ಕಥನ ತುಂಬಾ ಚೆನ್ನಾಗಿದೆ...
ಚಂದವಾದ ನಿರೂಪಣಾ ಶೈಲಿ..
ಓದಿಸಿಕೊಂಡು ಹೋಗುತ್ತದೆ...

ಪುಟ್ಟಿಗೊಂದು "ದ್ರಷ್ಟಿ" ತೆಗಿಯಲಿಕ್ಕೆ ಹೇಳಿ ಬಿಡಿ..

ಅಭಿನಂದನೆಗಳು...

Aravind GJ ಹೇಳಿದರು...

ಸೊಗಸಾಗಿ ಬರೆದಿದ್ದೀರ. ಮುಕ್ತಿ ಹೊಳೆಯ ಕಡೆ ಒಮ್ಮೆ ಹೋಗಬೇಕು ... ಯಾವಾಗಲೋ ಗೊತ್ತಿಲ್ಲ.

ನವೆಂಬರ್ ತಿಂಗಳಲ್ಲೂ ಅಷ್ಟಾಗಿ ನೀರು ಇಲ್ಲದಿರುವುದನ್ನು ನೋಡಿದರೆ ಹೊಸಗೋಡು ಮಳೆಗಾಲದ ಜಲಪಾತವಿರಬಹುದೆಂದು ಅನಿಸುತ್ತದೆ.

Srik ಹೇಳಿದರು...

very nice commentary on a day's excitement!

"Slow and steady wins the race" - Hanmanthu must have realised this that day!

Mukthi Hole reference reminds me of "KempoLe" of Jugari Cross by Pu ChaM Te.

ತೇಜಸ್ವಿನಿ ಹೆಗಡೆ- ಹೇಳಿದರು...

ಜಲಪಾತದಷ್ಟೇ ಗಂಭೀರ, ಸೌಮ್ಯ, ಸುಂದರವಾಗಿದ್ದಾಳೆ ರಕ್ಷಿತ. ಗಂಭೀರತೆಯ ಮುಸುಕೆಳದ ಅವಳ ತುಂಟ ಮುಖ ಜಲಪಾತಕ್ಕಿಂತಲೂ ಆಕರ್ಷಣೀಯವಾಗಿದೆ :) ಮನಮೋಹಕ ಚಿತ್ರಗಳು.

Srik ಹೇಳಿದರು...

Read this story: http://thatskannada.oneindia.in/literature/my-karnataka/2008/1223-who-stole-my-fish-curry-kumata-reporter.html#cmntTop

Very disturbing :(((

Prashanth M ಹೇಳಿದರು...

wonderful narration...

BTW nimma jillege bandidde monne.. koDachaadri chaarana maadi arishinagundiyalli mindu vaapas bande :)

ಪ್ರಮೋದ ನಾಯಕ ಹೇಳಿದರು...

ಪರೀಕ್ಷೆ ಒಳ್ಳೆದಾಯಿತು. ನಿಮ್ಮ ಬ್ಲಾಗ್ ನ ಒಂದೊಂದು ಪೋಸ್ಟ್ ಅನ್ನು ಓದುತ್ತಿದ್ದರೆ ಕೂತಲ್ಲೇ ಕರ್ನಾಟಕ ಸುತ್ತಿ ಬಂದಂತೆ ಅನುಭವವಾಗುತ್ತದೆ. ನಮ್ಮ ಉತ್ತರಕನ್ನಡದ ಅನೇಕ ಸ್ಥಳಗಳ ಬಗ್ಗೆ ಮಾಡಿದ ಅನೇಕ ಪೋಸ್ಟ್ ಗಳಿಗೆ ಧನ್ಯವಾದಗಳು.ನಿಮ್ಮ ಮಿರ್ಜಾನ ಕೋಟೆಯ ಪೋಸ್ಟ್ ಓದಿ ಕೋಟೆಯನ್ನು ನೋಡಲು ಹೋಗಿದ್ದೆ. ಅದರ ಬಗ್ಗೆ ಸದ್ಯವೇ ಬರೆಯುವೆ.

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,
ತುಂಬಾ ಮುದ್ದಾಗಿದ್ದಾಳೆ.

ಅಶೋಕ್,
ಥ್ಯಾಂಕ್ಸ್. ಖಂಡಿತ ಬರುವೆ. ಸುತ್ತಾಡೋಣ.

ಪ್ರಕಾಶ್,
ಧನ್ಯವಾದ. ನಿಮ್ಮ ಹಾಸ್ಯ ಲೋಕಕ್ಕೆ(ಇಟ್ಟಿಗೆ ಸಿಮೆಂಟು) ಮರುಳಾಗಿದ್ದೇನೆ.

ಅರವಿಂದ್,
ಸರಿಯಾಗಿ ಹೇಳಿದ್ದೀರಿ. ಮಳೆಗಾಲ ಕಳೆದು ಒಂದೆರಡು ತಿಂಗಳಷ್ಟೇ ಈ ಜಲಧಾರೆಯಲ್ಲಿ ನೀರು.

ಶ್ರೀಕಾಂತ್,
ಧನ್ಯವಾದ.

ತೇಜಸ್ವಿನಿ,
ರಕ್ಷಿತಾಳ ಮುದ್ದು ಮುಖಕ್ಕೆ ನಾವೂ ಮರುಳಾಗಿದ್ದೆವು. ಆ ಗೊಂಬೆಯನ್ನು ಆ ಹಳ್ಳಿಯಲ್ಲಿ ನಾವು ನಿರೀಕ್ಷಿಸಿರಲಿಲ್ಲ.

ಪಯಣಿಗ ಪ್ರಶಾಂತ್,
ಯಾವಾಗ ಪಯಣಿಗದಲ್ಲಿ ಆ ಬಗ್ಗೆ ಬರೆಯುವಿರಿ?

ಪ್ರಮೋದ್,
ಥ್ಯಾಂಕ್ಸ್. ಬೇಗನೇ ಬರೆಯಿರಿ. ಓದಲು ಕಾತುರನಾಗಿದ್ದೇನೆ.

nagaraj ಹೇಳಿದರು...

kindly give the details about all the places.
thnaks