ಭಾನುವಾರ, ಸೆಪ್ಟೆಂಬರ್ 21, 2008

ಚಾರ್ಮಾಡಿಯಲ್ಲೊಂದು ಜಲಪಾತ


ದಿನಾಂಕ: ೨೧ ಸೆಪ್ಟೆಂಬರ್ ೨೦೦೩.

ಮಲೆಕುಡಿಯರ ನಾಡು, ಚಾರ್ಮಾಡಿ-ಬಿಸಿಲೆ ಅರಣ್ಯಗಳಲ್ಲಿ ಅಲೆದಾಡುವ ಆನೆಗಳ ಬೀಡು, ಅಣಿಯೂರು ನದಿಯ ಮೂಲಸ್ಥಾನ - ದಟ್ಟ ಕಾಡಿನಲ್ಲಿ ಅಡಗಿ ಕುಳಿತಿರುವ ಮಲೆಕುಡಿಯರೇ ವಾಸವಾಗಿರುವ ಈ ಪುಟ್ಟ ಹಳ್ಳಿ. ಇಲ್ಲಿಗೆ ಚಾರಣಗೈಯುವುದೇ ಒಂದು ವಿಶಿಷ್ಟ ಅನುಭವ.

ಈ ಜಲಧಾರೆಯನ್ನು ನೋಡಲು ಖಾಸಗಿ ಸಂಸ್ಥೆಯೊಂದರ ಎಸ್ಟೇಟ್ ಮೂಲಕ ಹಾದುಹೋಗಬೇಕಾಗಿರುವುದರಿಂದ ಮುಂಚಿತವಾಗಿ ಆ ಎಸ್ಟೇಟ್ ಧಣಿಗಳಿಂದ ಅನುಮತಿ ಅಗತ್ಯ. ಕಾಡಿನ ನಡುವೆ ಧುತ್ತೆಂದು ಎದುರಾಗುವ ಈ ಎಸ್ಟೇಟ್ ಮಾಲೀಕರು ಪ್ರಖ್ಯಾತ ಕಾಡುಕಳ್ಳರು. ಈ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಕಾಡು ಕಡಿದು ನಾಶ ಮಾಡಿರುವ ಕುಖ್ಯಾತಿ ಇವರದ್ದು.


ಮುಖ್ಯ ರಸ್ತೆಯಿಂದ ಸುಮಾರು ೧೫೦ ನಿಮಿಷಗಳ ಚಾರಣ. ಎಸ್ಟೇಟ್ ಬಿಟ್ಟರೆ ಚಾರಣದ ಉಳಿದ ಹಾದಿ ಸುಂದರ ಕಾಡಿನ ನಡುವೆ ಆನೆಗಳ ಲದ್ದಿಗಳ ದರ್ಶನ ನೀಡುತ್ತಾ ಮಲೆಕುಡಿಯರ ಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ. ಹಳ್ಳಿಯಿಂದ ತುಸು ಮುಂದೆ ಸಾಗಿ ಕಣಿವೆಯನ್ನು ಸ್ವಲ್ಪ ಕಷ್ಟಪಟ್ಟು ಇಳಿದರೆ ಈ ಸುಂದರ ಜಲಧಾರೆ. ಒಂದೇ ನೆಗೆತಕ್ಕೆ ಸುಮಾರು ೧೦೦ ಅಡಿ ಆಳಕ್ಕೆ ಧುಮುಕುವ ಅಂದದ ಜಲಧಾರೆ ಇದು.


ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಚಾರಣ ತಾಣಗಳ ಬಗ್ಗೆ ಬರೆಯುತ್ತಿದ್ದ ದಿನೇಶ್ ಹೊಳ್ಳರನ್ನು ಮೊದಲ ಬಾರಿ ಭೇಟಿಯಾದಾಗ, ೨ ದಿನಗಳ ಬಳಿಕ ಈ ಜಲಧಾರೆಗೆ ಚಾರಣವಿರುವುದೆಂದು ತಿಳಿಸಿದ್ದರು. ಮಂಗಳೂರು ಯೂತ್ ಹಾಸ್ಟೆಲ್-ನೊಂದಿಗೆ ಇದು ನನ್ನ ಮೊದಲ ಚಾರಣ.

4 ಕಾಮೆಂಟ್‌ಗಳು:

Aravind GJ ಹೇಳಿದರು...

ಬಹಳ ಸುಂದರವಾದ ಜಲಪಾತ. ಎಸ್ಟೇಟ್ ಧಣಿಗಳದ್ದೇ ಸಮಸ್ಯೆ. ಯಾವಾಗಲಾದರೂ ನೋಡಬೇಕು ಈ ಜಲಪಾತವನ್ನ.

Parisarapremi ಹೇಳಿದರು...

ಮೊದಲ ಚಾರಣದ (ಯಾವುದೇ ಗುಂಪಿನೊಡನೆ) ನೆನಪು ಚಿರವಾಗಿ ಉಳಿಯುತ್ತೆ ಯಾವಾಗಲೂ, ಅಲ್ವಾ?

ಜೋಮನ್ ಹೇಳಿದರು...

ಕಲ್ಲರ್ಬಿ ಅನುಭವ ಚೆನ್ನಾಗಿದೆ. ಚಿತ್ರದ ಮೇಲೆಲ್ಲಾ ಕಾಪಿರೈಟ್ ಹಾಕಿದ್ದೀರಲ್ಲಾ, ನಾವು copy ಮಾಡಿಕೊಳ್ಳುವುದಿಲ್ಲ ಬಿಡಿ.:) ಸುಮ್ಮನೆ ನೋಡಿ ಖುಷಿ ಪಡುತ್ತೇವೆ.

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ಅನುಮತಿ ಸುಲಭದಲ್ಲೇ ಸಿಗುತ್ತೆಯಾದರೂ ಅದೊಂದು ಕಿರಿಕಿರಿ.

ಅರುಣ್,
ಸರಿಯಾದ ಮಾತು!

ಜೋಮನ್,
ನೀವು ಕಾಪಿ ಮಾಡುವುದಿಲ್ಲವೆಂದಾದ ಮೇಲೆ ನಾನು ಕಾಪಿರೈಟ್ ಹಾಕಿದರೆಷ್ಟು..ಬಿಟ್ರೆಷ್ಟು..! ಎಲ್ಲಾದರೂ ಯಾವಗಾದರೂ ಯಾವುದಾದರೂ ಚಿತ್ರದ ಅವಶ್ಯಕತೆ ಬಿದ್ದಲಿ ದಯವಿಟ್ಟು ಕೇಳುವಿರಂತೆ. ಕಾಪಿರೈಟ್ ಮಾರ್ಕ್ ಇಲ್ಲದ ಚಿತ್ರವನ್ನೇ ಕಳುಹಿಸುತ್ತೇನೆ.