ಬುಧವಾರ, ಫೆಬ್ರವರಿ 13, 2008

ಸೋಮೇಶ್ವರ ದೇವಾಲಯ - ಹರಳಹಳ್ಳಿ


ನಿರ್ಮಾತೃ: ಪಶ್ಚಿಮ ಚಾಳುಕ್ಯರು (ಕಲ್ಯಾಣಿ ಚಾಳುಕ್ಯರು) - ಪಶ್ಚಿಮ ಚಾಳುಕ್ಯ ವಂಶದ ಯಾವ ದೊರೆ ಹರಳಹಳ್ಳಿಯ ದೇವಾಲಯವನ್ನು ನಿರ್ಮಿಸಿದನು ಎಂಬ ಮಾಹಿತಿ ನನಗೆ ದೊರಕಲಿಲ್ಲ. ತಿಳಿದವರು ಈ ಮಾಹಿತಿ ನೀಡಿದರೆ ತುಂಬಾ ಉಪಕಾರವಾಗುವುದು.


ಇದು ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯ. ಸಿಕ್ಕಿರುವ ಶಾಸನಗಳಲ್ಲಿ ಹರಳಹಳ್ಳಿಯನ್ನು 'ವಿಕ್ರಮಪುರ' ಎಂದು ಉಲ್ಲೇಖಿಸಲಾಗಿದೆ. ತುಂಗಭದ್ರಾ ನದಿಯ ತಟದಲ್ಲಿರುವ ಈ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಸುತ್ತಲು ಚಪ್ಪಡಿ ಕಲ್ಲು ಹಾಸುವ ಕೆಲಸ ನಡೆಯುತ್ತಿದೆ. ನದಿಯಲ್ಲಿ ಆಗಾಗ ನೆರೆ ಬರುವುದರಿಂದ ಹರಳಹಳ್ಳಿಯ ಹಳ್ಳಿಗರಿಗೆ ಬೇರೆಡೆ ವಸತಿ ಸೌಕರ್ಯವನ್ನು ನೀಡಲಾಗಿದೆ. ಆದರೂ ಕೆಲವರು ಅಲ್ಲೇ ದೇವಸ್ಥಾನದ ಎದುರಿಗೇ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಸರಿಯಾದ ಸಮಯಕ್ಕೆ ಭಾರತೀಯ ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡಿದೆ. ಇನ್ನು ಸ್ವಲ್ಪ ತಡವಾಗಿದ್ದಲ್ಲಿ ಈ ಸುಂದರ ದೇವಾಲಯದ ಅತಿ ಸಮೀಪದವರೆಗೆ ಮನೆಗಳಾಗುತ್ತಿದ್ದವು.


ದೇವಾಲಯವು ೩ ಗರ್ಭಗುಡಿಗಳನ್ನು ಹೊಂದಿದ್ದು, ೩ ಗರ್ಭಗುಡಿಗಳಿಗೂ ಗೋಪುರಗಳಿವೆ ಮತ್ತು ಎಲ್ಲಾ ಗರ್ಭಗುಡಿಗಳಲ್ಲೂ ಶಿವಲಿಂಗವಿದೆ. ದೇವಸ್ಥಾನದ ನವರಂಗ ಸಣ್ಣದಾಗಿರುವುದರಿಂದ ಇದರ ಮುಖಮಂಟಪವೂ ಸಣ್ಣದಿದೆ. ಈ ನವರಂಗಕ್ಕೆ ಒಂದೇ ದ್ವಾರ ಮತ್ತು ಇದು ದೇವಾಲಯದ ಪ್ರಮುಖ ದ್ವಾರವೂ ಹೌದು.


ಈ ದೇವಾಲಯದಲ್ಲೊಂದು ವೈಶಿಷ್ಟ್ಯವಿದೆ. ಅದೆಂದರೆ ಪ್ರದಕ್ಷಿಣಾ ಪಥ. ಪ್ರಾಚೀನ ದೇವಾಲಯಗಳಲ್ಲಿ ಇದು ಬಹಳ ವಿರಳವಾಗಿ ಕಾಣಬರುತ್ತದೆ. ಮುಖಮಂಟಪದಿಂದ ಒಳಗೆ ಕಾಲಿಟ್ಟರೆ ಪ್ರದಕ್ಷಿಣಾ ಪಥ, ನವರಂಗ ಮತ್ತು ೩ ಗರ್ಭಗುಡಿಗಳು. ನವರಂಗದಲ್ಲಿ ದಿಕ್ಕಿಗೊಂದರಂತೆ ೪ ಬಾಗಿಲುಗಳಿವೆ. ಈ ಎಲ್ಲಾ ಬಾಗಿಲುಗಳು ನೇರವಾಗಿ ಸುತ್ತಲೂ ಇರುವ ಪ್ರದಕ್ಷಿಣಾ ಪಥಕ್ಕೆ ತೆರೆದುಕೊಳ್ಳುತ್ತವೆ. ಹಾಗೇನೇ ಪ್ರದಕ್ಷಿಣಾ ಪಥದಿಂದ ೪ ಬಾಗಿಲುಗಳು ತೆರೆದುಕೊಳ್ಳುತ್ತವೆ - ೩ ಗರ್ಭಗುಡಿಗಳಿಗೆ ಮತ್ತು ನಾಲ್ಕನೇಯದು ದೇವಾಲಯದ ಹೊರಗೆ/ಒಳಗೆ ಪ್ರವೇಶಿಸಲು.


ದೇವಾಲಯದ ಕೆತ್ತನೆ ಕೆಲಸ ಅದ್ಭುತ. ನವರಂಗದ ಜಗುಲಿಯ ಹೊರಭಾಗದ ಮೇಲೆ ಮಿಥುನ ಶಿಲ್ಪಗಳೂ ಇದ್ದವು. ಉಳಿದಂತೆ ೩ ಗೋಪುರಗಳ ರಚನೆ ಸುಂದರವಾಗಿದೆ ಮತ್ತು ಅವುಗಳ ಮೇಲಿನ ಶಿಲ್ಪಕಲೆ ಕೂಡಾ. ಪ್ರಮುಖ ಗರ್ಭಗುಡಿಯ ಗೋಪುರದ ಹಿಂಭಾಗ ಮಿಂಚು/ಸಿಡಿಲು ಬಡಿದು ಹಾನಿಗೊಳಗಾಗಿದೆ.

ಮಾಹಿತಿ: ಪ್ರದೀಪ ಸಾಲಗೇರಿ

5 ಕಾಮೆಂಟ್‌ಗಳು:

Shiv ಹೇಳಿದರು...

ರಾಜೇಶ್,
ಹರಳಹಳ್ಳಿ ದೇವಾಲಯ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

ಜಲಪಾತಗಳೆಲ್ಲ ಮುಗಿದವೇ..ಈಗ ದೇವಾಲಯದ ಕಡೆ ಗಮನ ಹರಿಸಿದ್ದೀರಾ :)

ಟೀನಾ ಹೇಳಿದರು...

ರಾಜೇಶ,
ನಿಮ್ಮ ಈ ಓಡಾಟಗಳ ಬಗ್ಗೆ ವಿಸ್ಮಯ. ನಮಗೂ ಚಿತ್ರ-ಮಾಹಿತಿ ಉಣಬಡಿಸುತ್ತಿರುವುದು ಚೆನ್ನಾಗಿದೆ. ನನಗೆ ಹೊಸ ಸ್ಥಳಗಳನ್ನ ನೋಡೋದು,ಚಾರಣ ಅಂದರೆ ವಿಪರೀತ ಆಸಕ್ತಿ. Wish I had all the time and leisure to go around like you.
ಧನ್ಯವಾದಗಳು.
- ಟೀನಾ.

ಹಂಸಾನಂದಿ Hamsanandi ಹೇಳಿದರು...

ರಾಜೇಶ್ ನಾಯಕರೆ,

ಸಂಪದದಲ್ಲೇ ಬರಹವನ್ನು ಓದಿದ್ದೆ. ಇಲ್ಲಿ ಇನ್ನೂ ಹೆಚ್ಚಿನ ಚಿತ್ರಗಳನ್ನು ನೋಡಿ ಬಹಳ ಖುಷಿಯಾಯಿತು!

ಇದರ ರಚನೆ ನೋಡಿದರೆ, ೧೧-೧೨ನೇ ಶತಮಾನದ ಕಲ್ಯಾಣದ ಚಾಲುಕ್ಯರ ಕಾಲದ್ದಿರಬಹುದೆಂದು ನನ್ನ ಊಹೆ.

ಹೊಯ್ಸಳರ ಟ್ರೇಡ್ ಮಾರ್ಕ್ ನಕ್ಷತ್ರಾಕಾರ ಇಲ್ಲಿಗೂ ಪ್ರವೇಶಿಸಿದೆ. ಮತ್ತೆ, ಇಲ್ಲಿರುವ ಮೂರು ಗೋಪುರಗಳಿಗೂ, ಸೋಮನಾಥಪುರ ಅಥವ ಬೆಳವಾಡಿ ಯಲ್ಲಿರುವ ಹೊಯ್ಸಳರ ತ್ರಿಕೂಟಾಚಲ ದೇವಾಲಯಗಳಿಗೂ ಬಹಳ ಹೋಲಿಕೆ ಕಂಡುಬರುತ್ತಿದೆ.

-ಹಂಸಾನಂದಿ

ಅನಾಮಧೇಯ ಹೇಳಿದರು...

Rajesh,

Neevu yaake ella viviragaLuLLa oMdu pravaasi pustaka (Guide) baribaardu? bahaLa prayojanakaari agatte nammantavarige.

iMti,
Suhruta

ರಾಜೇಶ್ ನಾಯ್ಕ ಹೇಳಿದರು...

ಶಿವ್,
ಈಗೆಲ್ಲಿಯ ಜಲಧಾರೆಗಳು? ಎಲ್ಲಾ ಸೊರಗಿ, ಕಣ್ಣೀರು ಹಾಕುತ್ತಿರುತ್ತವೆ...ಮಳೆ ಎಂದು ಎಂದು. ಆ ಜಲಧಾರೆಗಳ ಕಣ್ಣೀರು ನಿಲ್ಲಲು ಮಳೆ ಬರಬೇಕು. ಅದುವರೆಗೆ ಬೇರೆ ಏನಾದರೂ ನೋಡಬೇಕಲ್ಲವೆ...

ಟೀನಾ,
ಧನ್ಯವಾದಗಳು ಪ್ರೋತ್ಸಾಹದ ಮಾತುಗಳಿಗಾಗಿ. ಓಡಾಟ, ಅಲೆದಾಟ ಇಲ್ಲದಿದ್ದರೆ ನನಗಂತೂ ಪಂಜರದಲ್ಲಿ ಕೂಡಿಟ್ಟಂತಾಗುತ್ತದೆ. ನಿಮ್ಮ ಮೇಲ್ಕೋಟೆ ಪ್ರವಾಸ ಕಥನ ಓದಿದೆ. ತುಂಬಾ ಸೊಗಸಾಗಿತ್ತು.

ಹಂಸಾನಂದಿ,
ನೀವಂದದ್ದು ಸರಿ. ಈ ದೇವಾಲಯ ನಿರ್ಮಾಣ ೧೧-೧೨ನೇ ಶತಮಾನದಲ್ಲೇ. ಚಾಲುಕ್ಯರ ದೇವಸ್ಥಾನಗಳು ಹೆಚ್ಚಾಗಿ ಏಕಕೂಟ ಅಥವಾ ದ್ವಿಕೂಟ ಶೈಲಿಯಲ್ಲಿ ಇರುತ್ತವೆ. ಹರಳಹಳ್ಳಿಯ ಸೋಮೇಶ್ವರ ದೇವಸ್ಥಾನ ಇದಕ್ಕೊಂದು ಅಪವಾದ ಎಂಬಂತೆ ತ್ರಿಕೂಟ ಶೈಲಿಯಲ್ಲಿದೆ. ಹೊಯ್ಸಳ ಕಾಲದ ಶಿಲ್ಪಿಗಳು ಚಾಲುಕ್ಯ ಶೈಲಿಯಿಂದ ಕೆಲವೊಂದನ್ನು ತಮ್ಮ ಶೈಲಿಯಲ್ಲಿ ಅಳವಡಿಸಿಕೊಂಡಿದ್ದರು ಎನ್ನಲಾಗುತ್ತದೆ. ಇದರ ಪರಿಣಾಮವೇ ಇಲ್ಲಿರುವ ನಕ್ಷತ್ರಾಕಾರ ನಂತರ ಹೊಯ್ಸಳ ದೇವಾಲಯಗಳಲ್ಲಿ ಕಂಡುಬಂದಿರುವ ಸಾಧ್ಯತೆಯಿದೆ.

ಸುಹೃತ,
ಪುಸ್ತಕ ಬರೆಯುವ ಬಗ್ಗೆ ದಯವಿಟ್ಟು ಹೇಳಬೇಡಿ! ನಿಮಗೆ ಯಾವ ಮಾಹಿತಿ ಬೇಕೆಂದು ತಿಳಿಸಿದರೆ, ನನಗೆ ಗೊತ್ತಿದ್ದಲ್ಲಿ ಧಾರಾಳವಾಗಿ ತಮಗೆ ತಿಳಿಸುವೆ. ಆದರೆ ಪುಸ್ತಕ ಬರೆಯುವಷ್ಟು ಉತ್ತಮ ಕನ್ನಡ, ಭಾಷಾ ಸ್ಪಷ್ಟತೆ ಮತ್ತು ಶಬ್ದಗಳ ಮೇಲೆ ಹಿಡಿತ ನನ್ನಲ್ಲಿಲ್ಲ.