ಮಂಗಳವಾರ, ಏಪ್ರಿಲ್ 16, 2019

ಏಡಿ ಬೇಟೆಯಾಡುವವನ ಜೊತೆ ಮಾತುಕತೆ...


ಒಂದೆರಡು ಜಲಧಾರೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಬರೋಣವೆಂದು ಕಳೆದ ಮಳೆಗಾಲದ ಅಗೋಸ್ಟ್ ತಿಂಗಳ ಅದೊಂದು ರವಿವಾರ ಗೆಳೆಯರೊಬ್ಬರೊಂದಿಗೆ ಹೊರಟೆ. ಸ್ವಾಭಾವಿಕವಾಗಿ ವರ್ಷದ ಯಾವುದೇ ದಿನ ಈ ದಾರಿಯಲ್ಲಿ ಜನ ಸಂಚಾರ ವಿರಳ. ಅದರಲ್ಲೂ ಮಳೆ ಸುರಿಯುತ್ತಿರುವಾಗ ರಸ್ತೆಯಲ್ಲಿ ಯಾರೂ ಕಾಣರು. ಒಂದೆಡೆ ನಾವು ತಿರುವೊಂದನ್ನು ದಾಟಿದ ಕೂಡಲೇ, ವ್ಯಕ್ತಿಯೊಬ್ಬ ರಸ್ತೆಯ ಒಂದು ಬದಿಯಿಂದ ಮೇಲೇರಿ, ಗಡಿಬಿಡಿಯಲ್ಲಿ ರಸ್ತೆಯನ್ನು ದಾಟಿ, ಇನ್ನೊಂದು ಬದಿಯಲ್ಲಿ ಇಳಿಯುವುದನ್ನು ಕಂಡೆವು. ನಾವು ಆತ ರಸ್ತೆ ದಾಟಿದ ಸ್ಥಳವನ್ನು ಸಮೀಪಿಸಿದಾಗ ಅಲ್ಲಿತ್ತು ಒಂದು ಸಣ್ಣ ತೊರೆ. ಆ ವ್ಯಕ್ತಿ ಅದಾಗಲೇ ತೊರೆಯ ಹರಿವಿನ ದಾರಿಯ ಮೇಲ್ಭಾಗದಲ್ಲಿ ಪೊದೆಗಳ ಹಿಂದೆ ಕಣ್ಮರೆಯಾಗುತ್ತಿದ್ದ. ಆತ ನಮ್ಮಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿದ್ದ. ಎಲ್ಲಾದರೂ ಉಂಟೇ? ನಾವು ಮನುಷ್ಯನೊಬ್ಬನನ್ನು ಕಾಣದೆ ಅದಾಗಲೇ ಅರ್ಧ ಗಂಟೆಗೂ ಹೆಚ್ಚಿನ ಸಮಯವಾಗಿತ್ತು. ಕೊರೆಯಲು ಯಾರಾದರೂ ಸಿಗಬಹುದೆ ಎಂದು ಕಾಯುತ್ತಿದ್ದ ನಾವು ಅಷ್ಟು ಸುಲಭದಲ್ಲಿ ಆತನನ್ನು ಹೋಗಗೊಡಲು ತಯಾರಿರಲಿಲ್ಲ. ಅಳುಕುತ್ತಾ ತೊರೆಯಿಂದ ಮೇಲೇರಿ ನಮ್ಮೆಡೆ ಬಂದ ಆತ, ಸ್ವಲ್ಪ ಸಮಯದ ಬಳಿಕ ನಮ್ಮಿಂದ ಯಾವುದೆ ಅಪಾಯವಿಲ್ಲ ಎಂದು ಅರಿವಾದ ಬಳಿಕ ನಿರ್ಭಿಡೆಯಿಂದ ಮಾತನಾಡತೊಡಗಿದ. ಆತ ತೊರೆಗುಂಟ ಏಡಿಗಳ ಬೇಟೆಯಾಡುತ್ತಿದ್ದ!


ಆತನ ಕಾರ್ಯತಂತ್ರ ಸರಳವಾಗಿತ್ತು. ಏಡಿಯು ತನ್ನ ಅಡಗು ತಾಣದಿಂದ ಹೊರಬರುವಂತೆ ಮಾಡಲು ಸಣ್ಣ ಕಪ್ಪೆ ಅಥವಾ ಸಣ್ಣ ಮೀನನ್ನು ಆಮಿಷವಾಗಿ ಬಳಸುತ್ತಿದ್ದ. ಗಾಳಕ್ಕೆ ಕಪ್ಪೆ ಅಥವಾ ಮೀನನ್ನು ಸಿಲುಕಿಸಿ ಏಡಿಯಿರಬಹುದಾದ ಪೊಟರೆಯ ಹೊರಗೆ ತೂಗಾಡಿಸುತ್ತಿದ್ದ. ಗಾಳದ ವಾಸನೆಗೆ ಹೊರಬಂದ ಏಡಿಯನ್ನು ಹಿಡಿದು ಅದರ ಕಾಲುಗಳನ್ನು ಮತ್ತು ಕೊಂಬು(ಕೊಂಡಿ)ಗಳನ್ನು ಮುರಿಯುತ್ತಿದ್ದ. ಏಡಿಗಳನ್ನು ಬೇಟೆಯಾಡುವ ಈ ಅಪಾಯ ರಹಿತ ವಿಧಾನ ನನಗೆ ಹೊಸದಾಗಿತ್ತು.


2008ರಲ್ಲಿ ಕ್ಯಾಸಲ್‌ರಾಕ್ ಸಮೀಪ ಚಾರಣ ಮಾಡುತ್ತಿರುವಾಗ ಅಲ್ಲಿನ ಹಳ್ಳಿಗರು ಏಡಿಯನ್ನು ಹಿಡಿಯುವ ಅಪಾಯ ಭರಿತ ರೀತಿಯನ್ನು ಕಂಡು ಸೋಜಿಗವಾಗಿತ್ತು. ದಪ್ಪನೆಯ ಹುಲ್ಲಿನ ಕಡ್ಡಿಯನ್ನು ಏಡಿಯಿರಬಹುದಾದ ಪೊಟರೆಯೊಳಗೆ ತೂರಿಸಿ, ಅದರ ಕೊಂಡಿಗಳು ಯಾವ ದಿಕ್ಕಿನಲ್ಲಿವೆ ಎಂದು ತಿಳಿದುಕೊಂಡು, ನಂತರ ಪೊಟರೆಯೊಳಗೆ ಕೈ ತೂರಿಸಿ, ಏಡಿಯನ್ನು ಕೈಯಲ್ಲಿ ಹಿಡಿದು, ಹೊರಗೆಳೆದು ಅದರ ಕೊಂಡಿಗಳನ್ನು ಮುರಿಯುವುದನ್ನು ಕಂಡು ಹುಬ್ಬೇರಿಸಿದ್ದೆ.


ಈಗ ನಮಗೆ ಸಿಕ್ಕ ವ್ಯಕ್ತಿ ಸುಮಾರು ೨ ತಾಸುಗಳಿಂದ ಏಡಿಗಳನ್ನು ಬೇಟೆಯಾಡುತ್ತಿದ್ದರೂ ಐದಾರು ಏಡಿಗಳನ್ನಷ್ಟೇ ಹಿಡಿದಿದ್ದ. ಏಡಿಗಳಷ್ಟೇ ಅಲ್ಲ, ಆಮಿಷವಾಗಿ ಬಳಸಲ್ಪಡುವ ಕಪ್ಪೆ ಮತ್ತು ಮೀನುಗಳು ಕೂಡಾ ಈಗ ಸುಲಭವಾಗಿ ಸಿಗುತ್ತಿಲ್ಲ. ಆತನ ಪ್ರಕಾರ ಸುಮಾರು ಏಳೆಂಟು ವರ್ಷಗಳ ಮೊದಲು, ಬೇಟೆಯಾಡಲು ಆರಂಭಿಸಿದ ಕೇವಲ ಒಂದೇ ತಾಸಿನೊಳಗೆ ಚೀಲ ತುಂಬಾ ಏಡಿಗಳನ್ನು ಹಿಡಿದು ಆತ ಮನೆ ಸೇರಿರುತ್ತಿದ್ದ! ಕಳೆದ ಏಳೆಂಟು ವರ್ಷಗಳಲ್ಲಿ ಏಡಿಗಳು, ಕಪ್ಪೆಗಳು ಮತ್ತು ಮೀನುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಏನಾಗಿರಬಹುದು? ಏಡಿ, ಕಪ್ಪೆ. ಮೀನು, ಇವೆಲ್ಲಾ ಎಲ್ಲಿ ಕಣ್ಮರೆಯಾಗುತ್ತಿವೆ?


ಪಾರಂಪರಿಕ ಕೃಷಿ ವಿಧಾನಗಳನ್ನು ಅನುಸರಿಸುತ್ತಿದ್ದ ಪಶ್ಚಿಮ ಘಟ್ಟಗಳ ಪರಿಧಿಯಲ್ಲಿ ವಾಸಿಸುವ ರೈತರು/ಕೃಷಿಕರು, ಸುಮಾರು ಒಂದು ದಶಕದ ಹಿಂದೆ ಆಧುನಿಕ ಕೃಷಿ ವಿಧಾನಗಳನ್ನು ಅನುಸರಿಸಲು ಆರಂಭಿಸಿದರು. ಮೊದಲು ಸಾವಯವ ಗೊಬ್ಬರ ಬಳಸುತ್ತಿದ್ದ ಇವರು ನಂತರ ‘ಯೂರಿಯಾ’ ಬಳಸಲು ಆರಂಭಿಸಿದರು. ಆದರೆ ತದನಂತರ ಬಂದ ರಾಸಾಯನಿಕ ಪದಾರ್ಥಗಳು ಮತ್ತು ಕೀಟನಾಶಕಗಳು ವಿನಾಶಕ್ಕೆ ನಾಂದಿ ಹಾಡಿದವು. ಒಂದೆರಡು ವರ್ಷಗಳಲ್ಲೇ ಇವುಗಳ ಬಳಕೆ ವಿಪರೀತ ಎನ್ನುವ ಮಟ್ಟಕ್ಕೇರಿತು. ಗದ್ದೆ ಮತ್ತು ತೋಟಗಳಿಂದ ರಾಸಾಯನಿಕ ಪದಾರ್ಥಗಳು ಮತ್ತು ಕೀಟನಾಶಕಗಳಲ್ಲಿರುವ ವಿಷಕಾರಿ ಅಂಶಗಳನ್ನು ಸೇರಿಸಿಕೊಂಡೇ ತೊರೆ, ಹಳ್ಳ ಮತ್ತು ನದಿಗಳಿಗೆ ನೀರು ಹರಿದುಬಂತು. ಸೃಷ್ಟಿಯ ಸಣ್ಣ ಜೀವಿಗಳಿಗೆ ಹೆಚ್ಚು ಕಾಲ ಈ ವಿಷಕಾರಿ ಅಂಶಗಳನ್ನು ತಾಳಿಕೊಂಡು ಬದುಕುವ ಸಾಮರ್ಥ್ಯವಿರುವುದಿಲ್ಲ. ಇದು ಅವುಗಳನ್ನು ಕೊಲ್ಲುತ್ತಿದೆ ಮತ್ತು ಅವುಗಳ ಸಂತತಿಯನ್ನು ವಿನಾಶದ ಅಂಚಿಗೆ ತಳ್ಳುತ್ತಿವೆ.


ನಮಗೆ ದಾರಿಯಲ್ಲಿ ಭೇಟಿಯಾದ ಈ ವ್ಯಕ್ತಿ, ‘ಮೊದಲು ಎರಡು ವಿಧಗಳ ಏಡಿಗಳು ಸಿಗುತ್ತಿದ್ದವು, ಈಗ ಒಂದೇ ಸಿಗುತ್ತಿದೆ’ ಎಂದಾಗ, ಆ ಮತ್ತೊಂದು ಪ್ರಭೇದ ಅಳಿದುಹೋಯಿತೋ ಎಂಬ ಯೋಚನೆ ಬರತೊಡಗಿತು. ಸೃಷ್ಟಿಯ ಆಹಾರ ಸರಪಳಿಯಲ್ಲಿ ಮೀನು, ಕಪ್ಪೆ ಮತ್ತು ಏಡಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳು ಕಣ್ಮರೆಯಾಗುತ್ತಿರುವ ಬಗ್ಗೆ ಅರಿವಿದ್ದರೂ, ಈ ವೇಗದಲ್ಲಿ ಕಣ್ಮರೆಯಾಗುತ್ತಿರುವ ಬಗ್ಗೆ ಪಶ್ಚಿಮ ಘಟ್ಟಗಳಲ್ಲೇ ವಾಸಿಸುವವರಿಂದ ತಿಳಿದಾಗ ದಿಗಿಲಾಯಿತು.


ಆ ವ್ಯಕ್ತಿ ಸಿಗುವವರೆಗೆ ಎಲ್ಲವೂ ಸ್ವಚ್ಛ, ಸುಂದರ, ಹಸಿರು ಮತ್ತು ಅದ್ಭುತವಾಗಿ ಗೋಚರಿಸುತ್ತಿತ್ತು. ಕಣ್ಣಿಗೆ ಕಾಣುವ ಅದ್ಭುತ ದೃಶ್ಯಾವಳಿಯ ಹಿಂದೆ ಅಗೋಚರವಾಗಿ ವಿನಾಶಕಾರಿ ವಿಕೃತಿಯೊಂದು ಕಾರ್ಯಪ್ರವೃತ್ತವಾಗಿದೆ. ಇದು ಕೇವಲ ಒಂದು ಸಣ್ಣ ತೊರೆಯಲ್ಲಾದ ಬದಲಾವಣೆ. ಎಲ್ಲೆಡೆಯೂ ಪರಿಸ್ಥಿತಿ ಹೀಗೆ ಇದೆ ಎಂಬುವುದರಲ್ಲಿ ಸಂಶಯವಿಲ್ಲ.