ಲಕ್ಷ್ಮೀನಾರಾಯಣ ದೇವಾಲಯದ ಮೂರು ದಿಕ್ಕಿನಲ್ಲಿ ರಸ್ತೆಗಳಿವೆ ಹಾಗೂ ನಾಲ್ಕನೇ ದಿಕ್ಕಿನಲ್ಲಿ ಮನೆಯೊಂದಿದೆ. ದೇವಾಲಯದ ಪ್ರಾಂಗಣಕ್ಕೆ ಬೀಗ ಜಡಿದಿರುತ್ತದೆ. ಆ ಬೀಗದ ಕೈ ಇರುವ ವ್ಯಕ್ತಿಯ ಮನೆ ಹುಡುಕಿಕೊಂಡು ಊರಿನ ಇನ್ನೊಂದು ಮೂಲೆಗೆ ಹೋಗುವಷ್ಟು ಸಮಯ ನನ್ನಲ್ಲಿರಲಿಲ್ಲ. ದೇವಾಲಯದ ಯಾವ ದಿಕ್ಕಿನಿಂದ ಪ್ರಾಕಾರವನ್ನು ಹಾರಿ ಒಳಗೆ ತೆರಳಬಹುದು ಎಂದು ನಾನು ಸಮೀಕ್ಷೆ ನಡೆಸುತ್ತಿರುವಾಗ, ಅಲ್ಲೇ ತನ್ನ ಮನೆಯ ಮುಂದೆ, ತನ್ನ ಶಾಲಾ ಸಮವಸ್ತ್ರ ಧರಿಸಿಕೊಂಡೇ ಪಾತ್ರೆ ತೊಳೆಯುತ್ತಿದ್ದ ಭೀಮವ್ವ, ’ಸರ, ಅ ಕಡಿ ಗ್ವಾಡಿ ಬಿದ್ದೈತ್ರಿ, ಅಲ್ಲಿಂದ ಒಳಗ ಹೋಗ್ರಿ’ ಎಂದು ದೇವಾಲಯದ ಹಿಂಭಾಗದೆಡೆ ಕೈ ತೋರಿಸಿದಳು. ಆಕೆಗೆ ಧನ್ಯವಾದ ಹೇಳಿ, ಆಕೆ ಹೇಳಿದಂತೆ ಮಾಡಿ, ನೇರವಾಗಿ ದೇವಾಲಯದ ನವರಂಗಕ್ಕೇ ಎಂಟ್ರಿ ಕೊಟ್ಟೆ!
ದೇವಾಲಯದ ನವರಂಗದ ಹೊರಗೋಡೆ ಒಂದು ಪಾರ್ಶ್ವದಲ್ಲಿ ಮಾತ್ರ ಇದೆ. ಇನ್ನೊಂದು ದಿಕ್ಕಿನಲ್ಲಿ ಗೋಡೆಯೇ ಇಲ್ಲ! ಇಲ್ಲಿಂದಲೇ ನಾನು ದೇವಾಲಯದೊಳಗೆ ತೆರಳಿದ್ದು. ದೇವಾಲಯದ ಗರ್ಭಗುಡಿ ಮಾತ್ರ ಇನ್ನೂ ಹಾನಿಯಾಗದೇ ತನ್ನ ಮೂಲ ರೂಪದಲ್ಲಿದೆ.
ನವರಂಗ, ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿರುವ ದೇವಾಲಯದ ಮುಖ್ಯ ದ್ವಾರವು ಪಂಚಶಾಖೆಗಳನ್ನು ಹೊಂದಿದೆ. ಕುಸಿಯುತ್ತಿದ್ದ ಗೋಡೆಗಳನ್ನು ಸುದೃಢಗೊಳಿಸಿರುವುದನ್ನು ಕಾಣಬಹುದು. ನವರಂಗವು ನಾಲ್ಕು ಸುಂದರ ಕಂಬಗಳನ್ನು ಹೊಂದಿದೆ. ಒಂದು ಪಾರ್ಶ್ವದ ಗೋಡೆ ಇಲ್ಲದಿರುವುದರಿಂದ ನವರಂಗದಲ್ಲಿ ಆರು ಕಂಬಗಳು ಈಗ ಕಾಣಬರುತ್ತವೆ.
ಅಂತರಾಳದ ದ್ವಾರವು ಅತ್ಯಾಕರ್ಷಕವಾಗಿದೆ. ಸುಣ್ಣ ಬಳಿಯಲಾಗಿದ್ದರೂ ಈ ದ್ವಾರದ ಸೌಂದರ್ಯ ಕಿಂಚಿತ್ತೂ ಕ್ಷೀಣಿಸಿಲ್ಲ.
ಎರಡು ಸ್ತಂಭಗಳ ನಡುವೆ ಇರುವ ತ್ರಿಶಾಖಾ ದ್ವಾರವು ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಹೊಂದಿದೆ. ಜಾಲಂಧ್ರಗಳ ನಂತರ ಇನ್ನೊಂದು ಪಟ್ಟಿಯಿದ್ದು ಇದರಲ್ಲಿ ಬಳ್ಳಿ ಸುರುಳಿಯ ಕೆತ್ತನೆಯಿದೆ. ದ್ವಾರದ ತಳಭಾಗದಲ್ಲಿ ದ್ವಾರಪಾಲಕರಿದ್ದು, ಬಲಭಾಗದ ದ್ವಾರಪಾಲಕನ ಮೇಲೆ ಶಾಸನವನ್ನು ಕಾಣಬಹುದು.
ದ್ವಾರದ ಮೇಲ್ಭಾಗದಲ್ಲಿ ಪ್ರಭಾವಳಿ ಕೆತ್ತನೆಯಿಂದ ಅಲಂಕೃತ ವೇಣುಗೋಪಾಲನ ವೈಭವಪೂರ್ಣ ಚಿತ್ರಣವಿದೆ. ವೇಣುಗೋಪಾಲನ ಕೊಳಲೇ ಮಾಯವಾಗಿರುವುದನ್ನು ಕಾಣಬಹುದು! ವೇಣುಗೋಪಾಲನ ಮೇಲೆ ಕೀರ್ತಿಮುಖನಿದ್ದರೆ, ಕಾಲಿನ ಬಳಿಯಲ್ಲಿ ಗೋವುಗಳನ್ನು, ಗೋಪಿಕೆಯರನ್ನು ಮತ್ತು ಗೊಲ್ಲರನ್ನು ಕಾಣಬಹುದು.
ವೇಣುಗೋಪಾಲನ ಬಲಭಾಗದಲ್ಲಿ ವರಾಹನನ್ನು ಹಾಗೂ ಎಡಭಾಗದಲ್ಲಿ ಉಗ್ರನರಸಿಂಹನನ್ನು ಕೆತ್ತಲಾಗಿದೆ. ಇಕ್ಕೆಲಗಳಲ್ಲಿ ಮಕರಗಳಿದ್ದು, ಅವುಗಳ ಮೇಲೆ ಆಸೀನರಾಗಿರುವ ಯಕ್ಷ ಹಾಗೂ ಯಕ್ಷಿಯರನ್ನೂ ಕಾಣಬಹುದು. ದ್ವಾರದ ಇಕ್ಕೆಲಗಳಲ್ಲಿ ಪಾಣಿಪೀಠದ ಮೇಲೆ ಗೋಪುರವುಳ್ಳ ಅತಿ ಸುಂದರ ಮಂಟಪಗಳಿವೆ.
ಗರ್ಭಗುಡಿಯ ದ್ವಾರವು ಅಲಂಕಾರರಹಿತ ಪಂಚಶಾಖೆಗಳನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಗಜಲಕ್ಷ್ಮೀಯ ಅಸ್ಪಷ್ಟ ಕೆತ್ತನೆಯಿದೆ. ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ, ಕೀರ್ತಿಮುಖದಿಂದ ಆವೃತ, ಶಂಖಚಕ್ರಪದ್ಮಗದಾಧಾರಿಯಾಗಿರುವ ನಾರಾಯಣನ ಮೂರ್ತಿಯಿದೆ.
ಗರ್ಭಗುಡಿಯ ಹೊರಗೋಡೆಯಲ್ಲಿ ದಿಕ್ಕಿಗೊಂದರಂತೆ ಮೂರು ಮಂಟಪಗಳಿವೆ. ಈ ಮಂಟಪಗಳು ಖಾಲಿಯಿವೆ. ಶಿಖರವನ್ನು ೩ ಸ್ತರಗಳಲ್ಲಿ ನಿರ್ಮಿಸಲಾಗಿದೆ. ಮೇಲ್ಭಾಗದಲ್ಲಿ ಪದ್ಮದ ಮೇಲೆ ಕಲಶವಿದೆ.
ಶಿಖರದ ತುಂಬಾ ಉತ್ತಮ ಕೆತ್ತನೆಗಳನ್ನು ಕಾಣಬಹುದು. ಇವುಗಳಲ್ಲಿ ಹೆಚ್ಚಿನವು ವಿಷ್ಣುವಿನ ಹಲವು ರೂಪಗಳಾಗಿವೆ.