ಭಾನುವಾರ, ಡಿಸೆಂಬರ್ 22, 2013

ಅನಂತಶಯನ ದೇವಾಲಯ - ಅನಂತಶಯನಗುಡಿ


ಅನಂತಶಯನಗುಡಿ ಎಂಬಲ್ಲಿರುವ ಈ ದೇವಾಲಯವನ್ನು ಕೃಷ್ಣದೇವರಾಯನು, ಅಕಾಲ ಮರಣ ಹೊಂದಿದ ತನ್ನ ಮಗ ತಿರುಮಲರಾಯನ ನೆನಪಿಗಾಗಿ ಇಸವಿ ೧೫೨೪ರಲ್ಲಿ ನಿರ್ಮಿಸಿದನು ಎಂದು ಶಾಸನಗಳು ಹೇಳುತ್ತವೆ. ಕೃಷ್ಣದೇವರಾಯನು ಈ ಸ್ಥಳಕ್ಕೆ (ಊರಿಗೆ) ’ಶಾಲೆ ತಿರುಮಲ ಮಹಾರಾಯಪುರ’ ಎಂಬ ನಾಮಕರಣ ಮಾಡಿದ್ದನು. ಆ ಊರೇ ಇಂದು ಅನಂತಶಯನಗುಡಿ ಎಂದು ಕರೆಯಲ್ಪಡುತ್ತದೆ. ವಿಜಯನಗರ ಶೈಲಿಯಲ್ಲಿ ಭವ್ಯವಾಗಿ ನಿರ್ಮಿಸಲ್ಪಟ್ಟಿರುವ ದೇವಾಲಯವಿದು.


ಬಹಳ ಎತ್ತರವಿರುವ ಪ್ರಾಕಾರದ ರಾಜ ದ್ವಾರವನ್ನು ಹಾಗೂ ಈ ದ್ವಾರವನ್ನು ಕಾಯುತ್ತಿರುವ ಅಸಹಜ ನಡುವನ್ನು ಹೊಂದಿರುವ ದ್ವಾರಪಾಲಕಿಯರನ್ನು ದಾಟಿ ಒಳಗೆ ಪ್ರವೇಶಿಸಿದರೆ, ವಿಶಾಲ ಜಾಗದಲ್ಲಿ ಚೌಕಾಕಾರದಲ್ಲಿ ನಿರ್ಮಿಸಲಾಗಿರುವ ದೇವಾಲಯದ ವಿಶಿಷ್ಟ ರೂಪ ಕಣ್ಸೆಳೆಯುತ್ತದೆ.


ದ್ವಾರಗಳಿಲ್ಲದ ತೆರೆದ ಅತ್ಯಂತ ವಿಶಾಲ ಸಭಾಮಂಟಪ ನಲವತ್ತಕ್ಕೂ ಅಧಿಕ ಕಂಬಗಳನ್ನೊಳಗೊಂಡಿದೆ. ಪ್ರತಿ ಕಂಬದ ಮೇಲೂ ಭಿನ್ನ ವಿಭಿನ್ನ ಕೆತ್ತನೆಗಳು. ಈ ಕೆತ್ತನೆಗಳನ್ನು ಗಮನಿಸಿದರೆ ಪರಿಪೂರ್ಣವಾಗಿ ಕೆತ್ತದಿರುವುದನ್ನು ಕಾಣಬಹುದು.


ಪುರಾತತ್ವ ಇಲಾಖೆ ದೇವಾಲಯದ ಎರಡೂ ಪಾರ್ಶ್ವಗಳಲ್ಲಿ ಗೋಡೆಗಳನ್ನು ನಿರ್ಮಿಸಿ, ಮೂಲ ಗೋಡೆಗೆ ಆಧಾರವನ್ನು ಹಾಗೂ ಬಲವನ್ನು ಕೊಡುವ ಕಾರ್ಯ ಮಾಡಿದೆ. ಅಂತೆಯೇ ದೇವಾಲಯವನ್ನು ಪ್ರವೇಶಿಸುವಲ್ಲಿಯೂ ಶಿಲೆಕಲ್ಲುಗಳಿಂದ ನಿರ್ಮಿತ ಕಂಬವೊಂದನ್ನು ತಳದಿಂದ ಮೇಲಿನವರೆಗೆ ನೇರವಾಗಿ ನಿರ್ಮಿಸಿ ಛಾವಣಿಗೆ ಆಧಾರ ರೂಪದಲ್ಲಿ ನೀಡಲಾಗಿದೆ.


ಸಭಾಭವನದ ಅಂಚಿನುದ್ದಕ್ಕೂ ಕೈಪಿಡಿಯ ರಚನೆಯಿದ್ದರೂ ಅದು ಆಕರ್ಷಕವಾಗಿಲ್ಲ. ಹತ್ತು ಮೀಟರ್‌ನಷ್ಟು ಎತ್ತರವಿರುವ ದೇವಾಲಯದ ಗೋಪುರದ ಆಕಾರ ವಿಶಿಷ್ಟವಾಗಿದ್ದು, ಗಮನ ಸೆಳೆಯುತ್ತದೆ.


ಸಭಾಮಂಟಪದ ನಂತರ ಆಯತಾಕಾರದ ಅಂತರಾಳ. ನಂತರ ಆಯತಾಕಾರದ ವಿಶಾಲ ಗರ್ಭಗೃಹ. ಅಂತರಾಳದಿಂದ ಗರ್ಭಗುಡಿ ಪ್ರವೇಶಿಸಲು ಮೂರು ದ್ವಾರಗಳಿವೆ. ಇದರರ್ಥವೇನೆಂದರೆ ಅನಂತಶಯನನ ಇಕ್ಕೆಲಗಳಲ್ಲಿ ಇನ್ನೆರಡು ದೇವದೇವಿಯರ ಮೂರ್ತಿಗಳಿದ್ದವು. ನಡುವಿರುವ ದ್ವಾರದಿಂದ ಅನಂತಶಯನ ದರ್ಶನ ನೀಡುತ್ತಿದ್ದರೆ, ಇನ್ನುಳಿದೆರಡು ದ್ವಾರಗಳಿಂದ ಬೇರೆ ದೇವರುಗಳು ದರ್ಶನ ನೀಡುತ್ತಿದ್ದರು. ಈಗ ಬರೀ ಪೀಠದ ದರ್ಶನ ಮಾತ್ರ ಲಭ್ಯ.

 

ಸಭಾಮಂಟಪದ ಮುಂದಿನ ಸಾಲಿನಲ್ಲಿ ಆರು ಸುಂದರ ರಾಜ ಕಂಭಗಳಿವೆ. ಇವುಗಳಲ್ಲಿ ಎರಡರಲ್ಲಿ ಸಿಂಹಗಳನ್ನು ಕಾಣಬಹುದು. ದೇವಾಲಯಕ್ಕೆ ಪ್ರವೇಶಿಸುವಲ್ಲೇ ಇಕ್ಕೆಲಗಳಲ್ಲಿರುವ ಈ ಸಿಂಹ ಕಂಭಗಳು ಬಹಳ ಆಕರ್ಷಕವಾಗಿವೆ.


ದೇವಾಲಯದ ಮುಂಭಾಗದಲ್ಲಿ ಹನುಮಂತನ ಸಣ್ಣ ದೇವಾಲಯ ಮತ್ತು ಗರುಡಗಂಭ ಇವೆ. ದೇವಾಲಯದ ಬದಿಯಲ್ಲಿ ಒಂದು ಸಣ್ಣ ದೇವಾಲಯವಿದೆ. ಇದು ಯಾವ ದೇವಾಲಯವೆಂದು ನನಗೆ ಮಾಹಿತಿ ದೊರಕಲಿಲ್ಲ.


ಕೆಲವು ಇತಿಹಾಸಕಾರರು ಇದೊಂದು ಅಪೂರ್ಣ ದೇವಾಲಯ ಎಂಬ ಸಂಶಯ ವ್ಯಕ್ತಪಡಿಸುತ್ತಾರೆ. ನೈಜತೆಯಿಲ್ಲದ ಕೈಪಿಡಿ, ಆಕಾರ ಆಕರ್ಷಕವಾಗಿದ್ದರೂ ಶಿಲ್ಪಿಯ ಕೈಚಳಕವಿಲ್ಲದ ಗೋಪುರ, ಪಾರ್ಶ್ವಗಳಿಂದ ದೇವಾಲಯದಂತೆ ಕಾಣಬರದ ರಚನೆ, ಇವನ್ನೆಲ್ಲ ಗಮನಿಸಿದರೆ ಈ ವಾದಕ್ಕೆ ಪುಷ್ಟಿ ಬರುತ್ತದೆ. ದೇವಾಲಯದ ನಿರ್ಮಾಣವನ್ನು ಅರ್ಧದಲ್ಲಿಯೇ ಕೈಬಿಡಲಾಗಿದ್ದರಿಂದ ಇಲ್ಲಿ ಯಾವ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿಲ್ಲ ಎನ್ನುವ ಅಭಿಪ್ರಾಯವಿದೆ.


ಆದರೆ ಪ್ರಬಲ ಸಾಕ್ಷಿಯಿರುವ ಇನ್ನೊಂದು ವಾದದ ಪ್ರಕಾರ ದೇವಾಲಯ ನಿರ್ಮಾಣ ಪೂರ್ತಿಗೊಂಡಿದ್ದು, ಸಮಯದ ಜೊತೆಗೆ ಪರಿಪೂರ್ಣ ಕೆತ್ತನೆ ನಶಿಸಿದೆ. ದೇವಾಲಯದಲ್ಲೇ ಇರುವ ಶಾಸನದ ಪ್ರಕಾರ ಇಲ್ಲಿ ಇಸವಿ ೧೫೪೯ರವರೆಗೂ ಪೂಜೆ ಸಲ್ಲಿಸಲಾಗುತ್ತಿತ್ತು. ಅದು ಸದಾಶಿವರಾಯ ವಿಜಯನಗರವನ್ನು ಆಳುತ್ತಿದ್ದ ಕಾಲ. ತದನಂತರ ಏನಾಯಿತು ಎಂಬ ವಿವರವಿರುವ ಶಾಸನ ದೊರಕಿಲ್ಲ.


ಬಹುಶ: ೧೫೬೫ರ ತಾಳಿಕೋಟೆ ಕದನದಲ್ಲಿ ವಿಜಯನಗರ ಸಾಮ್ರಾಜ್ಯದ ಪರಾಜಯದ ನಂತರದ ದಿನಗಳಲ್ಲಿ ದಂಗೆಕೋರ ದುಷ್ಟ ಮುಸಲ್ಮಾನರು ಇಲ್ಲಿನ ಮೂರ್ತಿಗಳನ್ನು ಹಾನಿಗೊಳಿಸಿ ನಾಶಗೊಳಿಸಿರಬಹುದು ಅಥವಾ ಇನ್ನೂ ನಂತರದ ದಿನಗಳಲ್ಲಿ ಬ್ರಿಟಿಷರು ಅವನ್ನು ಭಾರತದ ಹೊರಗೆ ಸಾಗಿಸಿ ಮಾರಾಟ ಮಾಡಿರಬಹುದು.