ಭಾನುವಾರ, ಮೇ 26, 2013
ಸೋಮವಾರ, ಮೇ 13, 2013
ಬನಶಂಕರಿ ದೇವಾಲಯ - ಅಮರಗೋಳ
ಇಲ್ಲಿ ದೊರೆತಿರುವ ಒಂದೇ ಒಂದು ಶಾಸನದಲ್ಲಿ ಅಮರಗೋಳವನ್ನು ’ಆಂಬರಗೋಳ’ವೆಂದು ಕರೆಯಲಾಗಿದೆ. ಮೊದಲು ಪ್ರತ್ಯೇಕ ಊರಾಗಿದ್ದ ಅಮರಗೋಳ ಇಂದು ತನ್ನ ಅಕ್ಕಪಕ್ಕದಲ್ಲಿರುವ ಅವಳಿ ನಗರಗಳ ವ್ಯಾಪಕ ಬೆಳವಣಿಗೆಯಿಂದ ಅವುಗಳಲ್ಲಿ ಒಂದಾಗಿಹೋಗಿದೆ. ಇಲ್ಲಿರುವ ಬನಶಂಕರಿ ದೇವಾಲಯ ಭೇಟಿ ನೀಡಲು ಯೋಗ್ಯವಾದಂತಹ ಆಕರ್ಷಕ ದೇವಾಲಯ.
ಇದೊಂದು ದ್ವಿಕೂಟ ದೇವಾಲಯ. ಗರ್ಭಗುಡಿಗಳು, ಪ್ರತ್ಯೇಕ ತೆರೆದ ಅಂತರಾಳಗಳನ್ನು ಮತ್ತು ಸಾಮಾನ್ಯ ನವರಂಗವನ್ನು ಹೊಂದಿವೆ. ದೇವಾಲಯದ ಎರಡು ಮುಖಮಂಟಪಗಳು ಗರ್ಭಗುಡಿಗಳಿರುವ ದಿಕ್ಕಿಗೇ ಇವೆ ಮತ್ತು ಇವು ನವರಂಗಕ್ಕೇ ತೆರೆದುಕೊಳ್ಳುತ್ತವೆ. ಶಿಖರವು ಬಿದ್ದುಹೋಗಿದ್ದು ಹೊರಗೋಡೆಯಲ್ಲಿ ಸಣ್ಣ ಸಣ್ಣ ಗೋಪುರಗಳನ್ನು ಮತ್ತು ಖಾಲಿಯಿರುವ ದೇವಕೋಷ್ಠಗಳನ್ನು ಕಾಣಬಹುದು.
ಭಾಗಶ: ಪಾಳುಬಿದ್ದಿದ್ದ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ದುರಸ್ತಿಪಡಿಸಿ ಈಗ ಚೆನ್ನಾಗಿ ಕಾಪಾಡಿಕೊಂಡಿದೆ. ದೇವಾಲಯದ ಸುತ್ತಲೂ ಸ್ಥಳವಿದ್ದು ಪ್ರಾಂಗಣ ರಚಿಸಲಾಗಿದೆ. ದೇವಾಲಯ ನೋಡಿಕೊಳ್ಳಲು ಮತ್ತು ಪ್ರವಾಸಿಗರು ಬಂದಾಗ ಗರ್ಭಗುಡಿಗಳ ಬೀಗ ತೆಗೆಯಲು ಒಬ್ಬ ನೌಕರನೂ ಇದ್ದಾನೆ.
ನವರಂಗದಲ್ಲಿ ಒಟ್ಟು ೧೬ ಕಂಬಗಳಿವೆ. ಇವುಗಳಲ್ಲಿ ನಟ್ಟನಡುವೆ, ’ನಾಟ್ಯರಂಗ’ ಎಂದು ಕರೆಯಲ್ಪಡುವ ಅರ್ಧ ಅಡಿ ಎತ್ತರವಿರುವ ವೇದಿಕೆಯ ಮೇಲಿರುವ ನಾಲ್ಕು ಕಲಾತ್ಮಕ ಕಂಬಗಳೇ ಈ ದೇವಾಲಯದ ಪ್ರಮುಖ ಆಕರ್ಷಣೆ. ಸುಂದರ ಕೆತ್ತನೆಗಳ ಮೂಲಕ ಈ ಕಂಬಗಳಿಗೆ ಅತ್ಯದ್ಭುತ ರೂಪವನ್ನು ನೀಡಲಾಗಿದೆ.
ನಾಲ್ಕೂ ಕಂಬಗಳು ಮೇಲ್ಭಾಗದಲ್ಲಿ ವಿವಿಧ ರೀತಿಯ ತೋರಣಗಳನ್ನೂ, ಮಧ್ಯಭಾಗದಲ್ಲಿ ಕುಸುರಿ ಮತ್ತು ಕಲಾತೋರಣಗಳನ್ನೂ ಹಾಗೂ ತಳಭಾಗದಲ್ಲಿ ಪ್ರಭಾವಳಿ ಕೆತ್ತನೆಗಳನ್ನು ಹೊಂದಿವೆ. ಪ್ರತಿ ಕಂಬದ ಕೆತ್ತನೆಯೂ ಆಕರ್ಷಕ, ಮನಮೋಹಕ.
ಈ ಕಂಬಗಳ ನಾಲ್ಕೂ ಪಾರ್ಶ್ವಗಳ ಕಲಾಸೌರಭವನ್ನು ಆಸ್ವಾದಿಸುವುದರಲ್ಲಿ ಸಮಯ ಸರಿದ ಅರಿವೇ ಆಗುವುದಿಲ್ಲ. ಪ್ರಭಾವಳಿ ಕೆತ್ತನೆಗಳಂತೂ ಮನಸೂರೆಗೊಳ್ಳುತ್ತವೆ.
ಬ್ರಹ್ಮ, ವಿಷ್ಣು, ವರಾಹ, ಈಶ್ವರ, ಗಣೇಶ, ಉಗ್ರನರಸಿಂಹ, ಸೂರ್ಯದೇವ, ಲಕ್ಷ್ಮೀ, ನರಸಿಂಹ, ಸರಸ್ವತಿ ಮತ್ತು ಚಾಮುಂಡಿ ಇಷ್ಟು ದೇವ ದೇವಿಯರ ಕೆತ್ತನೆಗಳನ್ನು ಈ ಕಂಬಗಳಲ್ಲಿ ಕಾಣಬಹುದು.
ಪಶ್ಚಿಮದಲ್ಲಿರುವ ಪ್ರಮುಖ ಗರ್ಭಗುಡಿಯು ಪಂಚಶಾಖಾ ದ್ವಾರವನ್ನು ಹೊಂದಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯನ್ನು ಹೊಂದಿದೆ. ಶಾಖೆಗಳಲ್ಲಿ ವಜ್ರತೋರಣ, ನಾಟ್ಯಗಾರರು, ವಾದ್ಯಗಾರರು, ಪ್ರಾಣಿಗಳು ಮತ್ತು ಬಳ್ಳಿತೋರಣಗಳ ಕೆತ್ತನೆಗಳನ್ನು ಕಾಣಬಹುದು.
ಮೂರನೇ ಶಾಖೆಯ ನಡುಭಾಗದಲ್ಲಿ ಪೂರ್ಣಕುಂಭ ಕಲಶವನ್ನು ಸರ್ವ ಅಲಂಕಾರಗಳೊಂದಿಗೆ ಸಾಂಕೇತಿಕವಾಗಿ ತೋರಿಸಿರುವುದು ಕೂಡಾ ಇಲ್ಲಿನ ವೈಶಿಷ್ಟ್ಯತೆ. ಪಂಚಶಾಖೆಗಳಿಗೆ ಸಮನಾಗಿ ದ್ವಾರದ ಮೇಲ್ಭಾಗದಲ್ಲಿ ಪಂಚಶಿಖರಗಳಿವೆ. ಇಲ್ಲಿ ಗಣೇಶ, ತ್ರಿಮೂರ್ತಿಗಳು ಮತ್ತು ದೇವಿಯೊಬ್ಬಳ ಚಿತ್ರಣವನ್ನು ನೀಡಲಾಗಿದೆ. ದ್ವಾರದ ತಳಭಾಗದಲ್ಲಿ ರತಿ ಮನ್ಮಥರನ್ನು ಅವರ ಸೇವಕ ಸೇವಕಿಯರೊಂದಿಗೆ ಚಿತ್ರಿಸಲಾಗಿದೆ.
ಉತ್ತರದಲ್ಲಿರುವ ಇನ್ನೊಂದು ಗರ್ಭಗುಡಿಯು ಅಲಂಕಾರರಹಿತ ಪಂಚಶಾಖಾ ದ್ವಾರವನ್ನು ಹೊಂದಿದ್ದು, ಲಲಾಟದಲ್ಲಿ ಗಜಲಕ್ಷ್ಮೀಯನ್ನೂ ಮತ್ತು ಮೇಲ್ಭಾಗದಲ್ಲಿ ಪಂಚಶಿಖರಗಳನ್ನೂ ಹೊಂದಿದೆ. ಇಲ್ಲೂ ಪಂಚಶಿಖರಗಳಲ್ಲಿ ಗಣೇಶ, ತ್ರಿಮೂರ್ತಿಗಳು ಮತ್ತು ದೇವಿಯೊಬ್ಬಳ ಕೆತ್ತನೆಯನ್ನು ಕಾಣಬಹುದು.
ಈ ದೇವಾಲಯದಲ್ಲಿ ಈಗ ಇರುವ ಬನಶಂಕರಿ ಮತ್ತು ಶಿವಲಿಂಗ ಇವೆರಡೂ ಮೂಲ ಮೂರ್ತಿಗಳಲ್ಲ. ಅಮರಗೋಳದಲ್ಲಿ ದೊರೆತಿರುವ ಏಕೈಕ ಶಿಲಾಶಾಸನದ (ಇಸವಿ ೧೧೨೦ರ) ಪ್ರಕಾರ ಪಶ್ಚಿಮ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ’ಜಕ್ಕರಸ’ ಎಂಬವನು ಕೇಶವ ಮತ್ತು ಭೈರವ ದೇವರ ಮೂರ್ತಿಗಳನ್ನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಿದನು.
ಕಾಲಕ್ರಮೇಣ ಈ ಎರಡೂ ಮೂರ್ತಿಗಳು ಇಲ್ಲಿಂದ ಕಣ್ಮರೆಯಾದವು. ತದನಂತರ ಬನಶಂಕರಿಯ ವಿಗ್ರಹವನ್ನು ಮುಖ್ಯ ಗರ್ಭಗುಡಿಯಲ್ಲಿರಿಸಿ ಪೂಜೆ ಸಲ್ಲಿಸಲಾಗುತ್ತಿದೆ. ತೀರಾ ಇತ್ತೀಚೆಗೆ (೧೦-೧೫ ವರ್ಷಗಳ ಮೊದಲು) ಶಿವಲಿಂಗವನ್ನು ಉತ್ತರದಲ್ಲಿರುವ ಗರ್ಭಗುಡಿಯಲ್ಲಿರಿಸಿ ಪೂಜೆ ಸಲ್ಲಿಸಲಾಗುತ್ತಿದೆ.
ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ.
ಭಾನುವಾರ, ಮೇ 05, 2013
ನಾರಾಯಣ ದೇವಾಲಯ - ನರೇಗಲ್
ಕರ್ನಾಟಕದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಈ ದೇವಾಲಯವೂ ಒಂದು. ರಾಷ್ಟ್ರಕೂಟರ ಆಳ್ವಿಕೆಯ ಸಾಮಯದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ಗರ್ಭಗುಡಿ, ತೆರೆದ ಅಂತರಾಳ, ನವರಂಗ ಮತ್ತು ವಿಶಾಲವಾದ ಸಭಾಮಂಟಪವನ್ನು ಹೊಂದಿದೆ.
ರಾಷ್ಟ್ರಕೂಟರ ಕಾಲದ ದೇವಾಲಯಗಳಲ್ಲಿ ಗರ್ಭಗುಡಿ ಮತ್ತು ಗೋಪುರವನ್ನು ಇಟ್ಟಿಗೆ ಬಳಸಿ ನಿರ್ಮಿಸಲಾಗುತ್ತಿತ್ತು. ನಾರಾಯಣ ದೇವಾಲಯದ ಗೋಪುರದ ತುದಿಯಲ್ಲಿ ಇಟ್ಟಿಗೆ ಬಳಸಿರುವುದು ಸ್ಪಷ್ಟವಾಗಿ ಕಾಣಬರುತ್ತದೆ. ಗೋಪುರದ ತುದಿಭಾಗವು ಹಾನಿಗೊಂಡಿದ್ದು ಕಲ್ಲಿನ ಹೊರಕವಚ ಎಂದೋ ಬಿದ್ದುಹೋಗಿದೆ.
ಅಲಂಕಾರರಹಿತ ಪಂಚಶಾಖಾ ದ್ವಾರವಿರುವ ಗರ್ಭಗುಡಿಯಲ್ಲಿ ಸುಂದರ ಪಾಣಿಪೀಠದ ಮೇಲೆ ಶಿವಲಿಂಗವಿದೆ. ದೇವರಿಗೆ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ. ತೆರೆದ ಅಂತರಾಳದಲ್ಲಿ ನಂದಿಯ ಸಣ್ಣ ಮೂರ್ತಿಯಿದೆ. ನವರಂಗವು ಸಾಧಾರಣವಾಗಿದ್ದು ನಾಲ್ಕು ಕಂಬಗಳನ್ನು ಹೊಂದಿದೆ. ಗರ್ಭಗುಡಿ, ಅಂತರಾಳ ಮತ್ತು ನವರಂಗಗಳಿಗೆ ಬಣ್ಣ ಬಳಿದು ಅಂದಗೆಡಿಸಲಾಗಿದೆ.
ನವರಂಗದ ದ್ವಾರವು ಅಲಂಕಾರರಹಿತ ಪಂಚಶಾಖೆಗಳನ್ನು ಹೊಂದಿದೆ. ದ್ವಾರದ ಇಕ್ಕೆಲಗಳಲ್ಲಿರುವ ದೇವಕೋಷ್ಠಗಳು ಉತ್ತಮ ಅಲಂಕಾರ ಕೆತ್ತನೆಗಳನ್ನು ಹೊಂದಿವೆಯಾದರೂ ಖಾಲಿಯಿವೆ.
ಸಭಾಮಂಟಪದಲ್ಲಿರುವ ೧೬ ಕಂಬಗಳು ಈ ದೇವಾಲಯದ ಪ್ರಮುಖ ಆಕರ್ಷಣೆ. ಆಕರ್ಷಕವಾಗಿ ಕೆತ್ತಲಾಗಿರುವ ಈ ಕಂಬಗಳ ಸೌಂದರ್ಯವನ್ನು ಆಸ್ವಾದಿಸುವುದಕ್ಕೆ ಆಸಕ್ತಿ ಇದ್ದವರಿಗೆ ಬಹಳ ಸಮಯ ಬೇಕು. ಕಂಬಗಳ ಮೇಲ್ಮೈಯಲ್ಲೆಲ್ಲಾ ಉತ್ಕೃಷ್ಟ ಅಲಂಕಾರಿಕ ಕೆತ್ತನೆ ಮಾಡಲಾಗಿದ್ದು, ಈ ಕೆತ್ತನೆಗಳೇ ಕಂಬಗಳಿಗೆ ಒಂದು ರೂಪ ನೀಡಿವೆ.
ಸಭಾಮಂಟಪದ ನಟ್ಟನಡುವೆ ಇರುವ ನಾಲ್ಕು ಕಂಬಗಳಲ್ಲಿ ಮಾತ್ರ ತಲೆಯಿಂದ ತಳದವರೆಗೆ ಒಂದು ಚೂರು ಸ್ಥಳಾವಕಾಶ ಇಲ್ಲದಂತೆ ಆಕರ್ಷಕವಾಗಿ ಕೆತ್ತಲಾಗಿದೆ. ಉಳಿದ ಕಂಬಗಳ ತಳಭಾಗದಲ್ಲಿ ಕೆತ್ತನೆಗಳಿಲ್ಲ. ಈ ನಾಲ್ಕು ಕಂಬಗಳಿಗೆ ಸುತ್ತಲೂ ಹುರಿಹಗ್ಗವನ್ನು ಕಟ್ಟಲಾಗಿದ್ದು, ಅದರಲ್ಲಿ ವಿವಿಧ ತರಕಾರಿಗಳ ಚಿತ್ರಗಳು, ಕನ್ನಡ ವರ್ಣಮಾಲೆ, ಹಣ್ಣುಗಳ ಚಿತ್ರಗಳು ಇತ್ಯಾದಿಗಳನ್ನು ತೂಗುಹಾಕಲಾಗಿತ್ತು. ಅಕ್ಕಪಕ್ಕದ ಮಕ್ಕಳಿಗೆ ಈ ದೇವಾಲಯವೇ ಆಂಗನವಾಡಿ! ಚಿತ್ರ ತೆಗೆಯಲು ಬಹಳ ಕಷ್ಟಕೊಡುತ್ತಿದ್ದ ಈ ಎಲ್ಲಾ ಚಾರ್ಟ್‍ಗಳನ್ನು ತೆಗೆದು ಬದಿಗಿರಿಸಿದೆ.
ಈ ದೇವಾಲಯದಲ್ಲಿ ಒಂದು ಕುತೂಹಲಕಾರಿ ಅಂಶವಿದೆ. ಸಭಾಮಂಟಪದ ಎರಡೂ ಪಾರ್ಶ್ವಗಳಲ್ಲಿ ಆಯತಾಕಾರದ ಕೋಣೆಗಳಿವೆ. ಈ ಕೋಣೆಗಳು ಆಕರ್ಷಕ ಕೆತ್ತನೆಗಳುಳ್ಳ ಪಂಚಶಾಖಾ ದ್ವಾರಗಳನ್ನು ಹೊಂದಿವೆ. ಲಲಾಟದಲ್ಲಿ ಹೂವಿನ ಕೆತ್ತನೆ ಇದ್ದು, ಇದರ ಇಕ್ಕೆಲಗಳಲ್ಲಿ ಹೂವಿನ ಮೊಗ್ಗುಗಳ ಅತ್ಯುತ್ತಮ ಕೆತ್ತನೆಯನ್ನು ಕಾಣಬಹುದು. ದ್ವಾರಗಳ ಎರಡೂ ಪಾರ್ಶ್ವಗಳಲ್ಲಿ ಅಲಂಕಾರಭರಿತ ವಿಶಾಲ ಜಾಲಂಧ್ರಗಳಿವೆ.
ಎಡಭಾಗದ ಕೋಣೆಯಲ್ಲಿ ಶಿವಲಿಂಗವಿದೆ ಮತ್ತು ಬಲಭಾಗದಲ್ಲಿರುವ ಕೋಣೆಯಲ್ಲಿ ನಾರಾಯಣ ಮತ್ತು ಲಕ್ಷ್ಮೀಯ ವಿಗ್ರಹಗಳಿವೆ. ದೇವಾಲಯದ ಒಳಗೆ ಎಲ್ಲೆಡೆ ನಿರ್ಮಲವಾಗಿದ್ದರೂ ಈ ಎರಡು ಕೋಣೆಗಳು ಮಾತ್ರ ಸ್ವಚ್ಛವಾಗಿಲ್ಲ.
ಮೇಲೆ ಹೇಳಿದಂತೆ ಕುತೂಹಲಕಾರಿ ಅಂಶಕ್ಕೆ ಈಗ ಬರೋಣ. ಈ ಎರಡೂ ಕೋಣೆಗಳ ಒಳಗೆ ಆಯತಾಕಾರದ ಉದ್ದನೆಯ ಪೀಠವಿದೆ. ಈ ಪೀಠಗಳ ಮೇಲೆ ತಲಾ ೧೨ರಂತೆ ಎರಡೂ ಕೋಣೆಗಳಲ್ಲಿ ಒಟ್ಟು ೨೪ ಮೂರ್ತಿಗಳನ್ನು ಇಡುವ ಸ್ಠಳಾವಕಾಶ ಮಾಡಿರುವುದು ಸ್ಪಷ್ಟವಾಗಿ ಕಾಣಬರುತ್ತದೆ. ಈಗಿನ ನಾರಾಯಣ ದೇವಾಲಯ ಅಂದು ೨೪ ತೀರ್ಥಂಕರರ ಮೂರ್ತಿಯನ್ನು ಹೊಂದಿದ್ದ ಜೈನ ದೇವಾಲಯವಾಗಿದ್ದಿರಬಹುದು ಎಂದು ಇತಿಹಾಸಕಾರರ ಅಭಿಪ್ರಾಯ. ಇಲ್ಲಿದ್ದ ತೀರ್ಥಂಕರರ ಮೂರ್ತಿಗಳಲ್ಲಿ ಈಗ ಒಂದೂ ಕಾಣಬರುವುದಿಲ್ಲ.
ರಾಷ್ಟ್ರಕೂಟರ ಆಳ್ವಿಕೆಯ ಸಮಯದಲ್ಲಿ ಜೈನಧರ್ಮ ಉತ್ತುಂಗದಲ್ಲಿ ಮೆರೆದಿದ್ದ ಕಾಲ. ಊರಿನಲ್ಲಿ ದೊರೆತಿರುವ ಶಾಸನವೊಂದರಲ್ಲಿ ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣನ ರಾಣಿಯಾಗಿದ್ದ ’ಪದ್ದಬ್ಬರಸಿ’ ಎಂಬವಳು ಇಸವಿ ೯೫೦ರಲ್ಲಿ ಬಸದಿಯೊಂದನ್ನು ನಿರ್ಮಿಸಿದ್ದಳು ಎಂಬ ಮಾಹಿತಿ ದೊರಕಿದೆ. ಆ ಬಸದಿಯೇ ಇಂದಿನ ನಾರಾಯಣ ದೇವಾಲಯವಾಗಿರಬಹುದು.
ದೇವಾಲಯದ ಪರಿಸರವನ್ನು ಊರವರು ಚೆನ್ನಾಗಿ ಇಟ್ಟುಕೊಂಡಿಲ್ಲ. ದೇವಾಲಯದ ಒಂದು ಪಾರ್ಶ್ವ ಕಸ ಎಸೆಯುವ ಸ್ಥಳವಾಗಿದೆ. ಉಳಿದ ಮೂರು ಪಾರ್ಶ್ವಗಳಲ್ಲಿ ರಸ್ತೆಗಳು (ಓಣಿಗಳೂ/ಗಲ್ಲಿಗಳು) ಹಾದುಹೋಗಿವೆ. ರಾಜ್ಯದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾದ ಈ ದೇವಾಲಯದ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ಪ್ರಾಚ್ಯ ವಸ್ತು ಇಲಾಖೆಯಿಂದ ಸಂರಕ್ಷಣೆಗೂ ಈ ದೇವಾಲಯ ಒಳಪಟ್ಟಿಲ್ಲ. ಇನ್ನೆಷ್ಟು ವರ್ಷ ಈ ಅಪರೂಪದ ದೇವಾಲಯ ಉಳಿಯಬಹುದು?
ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)