ಭಾನುವಾರ, ಏಪ್ರಿಲ್ 24, 2011

ಚಾರಣ ಚಿತ್ರ - ೧೦


ಪ್ರಕೃತಿಯ ಅಟ್ಟಣಿಗೆಯಲ್ಲಿ...

ಭಾನುವಾರ, ಏಪ್ರಿಲ್ 17, 2011

ಮಲ್ಲಿಕಾರ್ಜುನ ದೇವಾಲಯ - ಕುರುವತ್ತಿ


ಕುರುವತ್ತಿಯ ದಾರಿಯಲ್ಲಿ ಬಣ್ಣಬಣ್ಣದ ಜಟಕಾ ಬಂಡಿಗಳು ನಮಗೆ ಎದುರಾಗುತ್ತಿದ್ದವು. ಅವುಗಳನ್ನು ಎಳೆಯುತ್ತಿದ್ದ ಎತ್ತುಗಳ ಸಿಂಗಾರವೇನೂ ಕಡಿಮೆಯಿರಲಿಲ್ಲ. ಕೋಡುಗಳಿಗೆ ಬಣ್ಣ, ಹಣೆಯಲ್ಲಿ ಕುಂಕುಮ ಮತ್ತು ಮೈತುಂಬಾ ಬಣ್ಣದ ಚಿತ್ತಾರ. ಅವುಗಳಿಗೂ ಮತ್ತು ಜಟಕಾ ಬಂಡಿಯೊಳಗಿದ್ದವರಿಗೂ ಸಂಭ್ರಮ. ಕೆಲವೊಂದೆಡೆ ಹೊಲಗಳಲ್ಲಿ, ಮರದ ನೆರಳಲ್ಲಿ ಜಟಕಾ ಬಂಡಿಗಳನ್ನು ನಿಲ್ಲಿಸಿ, ಸಂಸಾರ ಸಮೇತ ಪ್ರಯಾಣಿಸುತ್ತಿದ್ದವರು ಒಟ್ಟಾಗಿ ಊಟ ಮಾಡುವುದು, ಆಯಾಸ ಪರಿಹಾರ ಮಾಡಿಕೊಳ್ಳುವುದು ಕಾಣಬರುತ್ತಿತ್ತು. "ಏನ್ಪಾ ಇದು? ಜಾತ್ರಿ ಐತೇನು ಎಲ್ಲಾರ?’ ಎಂದು ಗೆಳೆಯ ನಿರಂಜನ ಪಾಟೀಲನ ಪ್ರಶ್ನೆ. ಕುರುವತ್ತಿ ತಲುಪಿದಾಗ ಅಲ್ಲಿ ಜಾತ್ರೆ! ಕುರುವತ್ತಿಯ ಮಲ್ಲಿಕಾರ್ಜುನ ದೇವಾಲಯದ ವರ್ಷದ ಜಾತ್ರೆ. ದೇವಾಲಯದಲ್ಲಿ ಪೂಜೆಯ ಭರಾಟೆ. ಎಲ್ಲೆಲ್ಲೂ ಜನಸಮೂಹ.


ಮಲ್ಲಿಕಾರ್ಜುನ ದೇವಾಲಯ ಗರ್ಭಗುಡಿ ಮತ್ತು ನವರಂಗಗಳನ್ನು ಹೊಂದಿದೆ. ನವರಂಗಕ್ಕೆ ಮುಖಮಂಟಪಗಳಿರುವ ೩ ದ್ವಾರಗಳಿವೆ. ಜಾತ್ರೆ ಪ್ರಯುಕ್ತ ಜನಜಂಗುಳಿ ಎಷ್ಟಿತ್ತೆಂದರೆ ಕಷ್ಟದಲ್ಲಿ ಒಂದೇ ದ್ವಾರವನ್ನು ಕೂಲಂಕುಷವಾಗಿ ವೀಕ್ಷಿಸಲು ಸಾಧ್ಯವಾಯಿತು. ಈ ದ್ವಾರ ಅಪೂರ್ವ ಕೆತ್ತನೆಯನ್ನು ಹೊಂದಿದ್ದು ೭ ತೋಳುಗಳನ್ನು ಹೊಂದಿದೆ. ದ್ವಾರದ ಇಕ್ಕೆಲಗಳಲ್ಲಿ ಸುಂದರ ಕೆತ್ತನೆ ಕೆಲಸವಿರುವ ಕಲ್ಲಿನ ೭ ಪದರಗಳು/ಹಂತಗಳು. ಪ್ರತಿ ಹಂತದ ತಳಭಾಗದಲ್ಲಿ ದ್ವಾರಪಾಲಕೆಯರ ಸುಂದರ ಕೆತ್ತನೆ. ಹಾಗಾಗಿ ಒಟ್ಟು ಇಕ್ಕೆಲಗಳಲ್ಲಿ ೧೪ ದ್ವಾರಪಾಲಕೆಯರು. ಬಾಗಿಲಿನ ಮೇಲ್ಗಡೆ ಗಜಲಕ್ಷ್ಮೀಯ ಮತ್ತೂ ಸುಂದರ ಕೆತ್ತನೆ. ಗಜಲಕ್ಷ್ಮೀಯ ಇಕ್ಕೆಲಗಳಲ್ಲಿರುವ ೬ ಆನೆಗಳ ಕೆತ್ತನೆಯೂ ಆಕರ್ಷಕ.


ನವರಂಗದಲ್ಲಿ ಸುಂದರ ಕೆತ್ತನೆಯಿರುವ ೪ ಕಂಬಗಳು. ಇಲ್ಲಿ ಅಂತರಾಳವಿಲ್ಲ. ನವರಂಗದಿಂದ ನೇರವಾಗಿ ಗರ್ಭಗುಡಿಗೆ ಪ್ರವೇಶ. ಗರ್ಭಗುಡಿಯ ಬಾಗಿಲು ೫ ತೋಳಿನದ್ದು ಮತ್ತು ಮೇಲ್ಗಡೆ ಸುಂದರ ಕೆತ್ತನೆಯನ್ನು ಹೊಂದಿರವಂತದ್ದು. ಪ್ರತಿ ತೋಳಿನಲ್ಲೂ ದ್ವಾರಪಾಲಕೆಯರ ಕೆತ್ತನೆ. ಮಲ್ಲಿಕಾರ್ಜುನನನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಆ ನೂಕುನುಗ್ಗಲಿನ ನಡುವೆ ನಾಲ್ಕಾರು ಚಿತ್ರಗಳನ್ನು ತೆಗೆದರೂ ಯಾವುದೂ ಸರಿ ಬರಲಿಲ್ಲ. ದೇವಾಲಯದಲ್ಲಿ ನಂದಿ ಎಲ್ಲೂ ಕಾಣಬರಲಿಲ್ಲ. ಜನಜಂಗುಳಿಯ ಮಧ್ಯೆ ಎಲ್ಲಿ ಮಾಯವಾಗಿತ್ತೋ ಏನೋ. ದೇವಾಲಯದ ಒಳಗೆ ನಡೆಯುತ್ತಿದ್ದ ಪೂಜೆ, ಹವನ ಇತ್ಯಾದಿಗಳಿಂದ ಹೊರಹೊಮ್ಮುತ್ತಿದ್ದ ಹೊಗೆ ಎಲ್ಲಾ ಕಡೆ ಆವರಿಸಿತ್ತು. ಅಲ್ಲಿಂದ ಓಡಿಹೋದರೆ ಸಾಕೆನಿಸುತ್ತಿತ್ತು.


ಸುತ್ತಮುತ್ತಲಿನ ಹಳ್ಳಿಗಳ ಜನರು/ರೈತರು ತಮ್ಮ ಜಾನುವಾರುಗಳನ್ನು ಸಿಂಗರಿಸಿ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಪೂಜೆ ಅರ್ಪಿಸಲು ಕರೆತಂದಿದ್ದರು. ಜನಜಂಗುಳಿಯ ನಡುವೆ ಜಾನುವಾರುಜಂಗುಳಿ! ಅವುಗಳಿಗೂ ಅದೇನೋ ಸಂಭ್ರಮ. ಈ ಗಲಾಟೆಯಲ್ಲಿ ಗೆಳೆಯ ನಿರಂಜನ ಮತ್ತು ಆತನ ಪತ್ನಿ ಸವಿತಾ ಅದೆಲ್ಲಿ ಮಾಯವಾದರೋ ಏನೋ. ಅವರನ್ನು ಹುಡುಕುತ್ತಾ ದೇವಾಲಯಕ್ಕೊಂದು ಸುತ್ತು ಬಂದರೂ ಇಬ್ಬರದ್ದೂ ಪತ್ತೆಯಿಲ್ಲ. ಇಬ್ಬರನ್ನೂ ಹುಡುಕುತ್ತಾ ದೇವಾಲಯದಿಂದ ದೂರಬಂದು ಪ್ರಮುಖ ಬೀದಿಯಲ್ಲಿ ಸುತ್ತಾಡತೊಡಗಿದೆ. ನಂತರ ನಮ್ಮ ವಾಹನದ ಬಳಿ ಬಂದರೂ ಅಲ್ಲೂ ಇವರಿಬ್ಬರ ಸುಳಿವಿಲ್ಲ. ನಂತರ ಅವರನ್ನು ಹುಡುಕುತ್ತಾ ಕುರುವತ್ತಿಯಲ್ಲಿ ನಾನು ನೋಡಲೇಬೇಕೆಂದಿದ್ದ ತುಂಗಭದ್ರಾ ನದಿ ತಟದತ್ತ ಹೆಜ್ಜೆ ಹಾಕಿದೆ.


ಚಾಲುಕ್ಯ ದೊರೆ ಒಂದನೇ ಸೋಮೇಶ್ವರ ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದನು. ಇದರಿಂದ ಬೇಸತ್ತ ಸೋಮೇಶ್ವರ ಇಸವಿ ೧೦೬೮ರಲ್ಲಿ ಕುರುವತ್ತಿಯಲ್ಲೇ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಆ ಸ್ಥಳ ನೋಡೋಣವೆಂದು ನದಿತಟಕ್ಕೆ ತೆರಳಿದರೆ ಅಲ್ಲಿ ಕಣ್ಣಿಗೆ ಕಾಣುವಷ್ಟು ದೂರಕ್ಕೂ ಜನರು...ಜಾನುವಾರುಗಳು....ಜಟಕಾ ಬಂಡಿಗಳು!


ಆ ಜಾಗ ನಿರ್ಜನವಾಗಿದ್ದಲ್ಲಿ ಹೇಗೆ ಕಾಣಬಹುದೆಂದು ಕೇವಲ ಕಲ್ಪನೆ ಮಾಡಿ ಸಂತುಷ್ಟನಾದೆ. ಈಗ ನದಿಯ ಹರಿವು, ನದಿಪಾತ್ರದ ನಡುವೆ ಆಳವಾಗಿದ್ದ ಸ್ಥಳಕ್ಕೆ ಮಾತ್ರ ಸೀಮಿತವಾಗಿದೆ. ಸಾವಿರ ವರ್ಷಗಳ ಹಿಂದೆ ಬೇಸಗೆಯಲ್ಲೂ ನದಿಪಾತ್ರದ ಸಂಪೂರ್ಣ ಅಗಲಕ್ಕೂ ತುಂಗಭದ್ರೆ ಹರಿಯುತ್ತಿದ್ದಿರಬಹುದು. ಸೋಮೇಶ್ವರ ನದಿಗೆ ಹಾರಿ ಕೊಚ್ಚಿಹೋದ ದಿಕ್ಕಿನೆಡೆ ಮತ್ತು ಆ ಘಟನೆಗೆ ಮೂಕಸಾಕ್ಷಿಯಾಗಿದ್ದ ದೂರದಲ್ಲಿ ಕಾಣುತ್ತಿದ್ದ ಬೆಟ್ಟಗಳ ಶ್ರೇಣಿಯನ್ನು ನೋಡುತ್ತಾ ಸ್ವಲ್ಪ ಸಮಯ ಕಳೆದೆ. ಆ ದಿನ ಜಾತ್ರೆ ಇರದಿದ್ದರೆ ಅಲ್ಲೊಂದಷ್ಟು ಸಮಯ ಕುಳಿತು ವಿರಮಿಸುತ್ತಿದ್ದೆ... ಅಷ್ಟು ಚೆನ್ನಾಗಿದೆ ಕುರುವತ್ತಿಯ ತುಂಗಭದ್ರಾ ನದಿಯ ತೀರ. ಆಗ ಸವಿತಾಳ ಫೋನು, ’ಕಾರಿನ ಸಮೀಪ ಇದ್ದೀವಿ’ ಎಂದು.

ಅಂದು - ಇಂದು
ಅಂತರ್ಜಾಲದಲ್ಲಿ ಹುಡುಕಾಡಿದಾಗ ದೇವಾಲಯದ ತುಂಬಾ ಹಳೇ ಚಿತ್ರಗಳು ಸಿಕ್ಕಿದವು. ಅವನ್ನೇ ಇಲ್ಲಿ ಬಳಸಿದ್ದೇನೆ. ಕೆಳಗಿರುವುದು ಕುರುವತ್ತಿ ಮಲ್ಲಿಕಾರ್ಜುನ ದೇವಾಲಯದ 1857ರಲ್ಲಿ ತೆಗೆದ ಚಿತ್ರ ಮತ್ತು 2008ರಲ್ಲಿ ತೆಗೆದ ಚಿತ್ರಗಳು.


ಆಗಲೂ ಒಂದು ಪ್ರಾಂಗಣದೊಳಗೆ ದೇವಾಲಯವಿದ್ದಂತೆ ತೋರುತ್ತಿದೆ.ಗೋಪುರಕ್ಕೆ ಆಗಲೇ ಬಣ್ಣ ಬಳಿಯಲಾಗಿತ್ತು! 150 ವರ್ಷಗಳ ಬಳಿಕವೂ ಅದು ಮುಂದುವರಿದುಕೊಂಡು ಬಂದಿದೆ. ಮುಖಮಂಟಪ ಹಾಗೇ ಇದೆ.


ಮೇಲಿರುವುದು ದೇವಾಲಯದ ಹೋರಗೋಡೆಯಲ್ಲಿರುವ ಭಿತ್ತಿಚಿತ್ರಗಳಲ್ಲೊಂದು. ಹಳೇ ಚಿತ್ರ 1885ರಲ್ಲಿ ತೆಗೆದದ್ದು, ಹೊಸ ಚಿತ್ರ 123 ವರ್ಷಗಳ ಬಳಿಕ. ಕವಾಟದೊಳಗಿದ್ದ ಕೆತ್ತನೆ ಮಾಯವಾಗಿದೆ! ಉಳಿದ ಕೆತ್ತನೆಗಳು ಹಾಗೇ ಉಳಿದುಕೊಂಡಿವೆ.


ಮೇಲಿನ ಚಿತ್ರ 1857ರಲ್ಲಿ ತೆಗೆದದ್ದು. ಈಗ ಈ ಕೆತ್ತನೆಯೇ ಮಲ್ಲಿಕಾರ್ಜುನ ದೇವಾಲಯದಲ್ಲಿಲ್ಲ! ನವರಂಗದ ದ್ವಾರಕ್ಕಿಂತ ಸ್ವಲ್ಪ ಮೊದಲೇ ಈ ಸುಂದರ ಕೆತ್ತನೆ ಇತ್ತು ಎಂಬುದನ್ನು ಗಮನಿಸಬಹುದು.

ಭಾನುವಾರ, ಏಪ್ರಿಲ್ 10, 2011

ಕಸಮಳಗಿಯ ಪಾರ್ಶ್ವನಾಥ


ಕಸಮಳಗಿ ಹಳ್ಳಿಯ ಶಾಲೆಗೆ ಶೌಚಾಲಯ ಕಟ್ಟಿಸುವ ಸಲುವಾಗಿ ಪಾಯ ಅಗೆಯುತ್ತಿರುವಾಗ ಸಿಕ್ಕಿದ ಅದ್ಭುತ ಮೂರ್ತಿ ಈ ಪಾರ್ಶ್ವನಾಥ ತೀರ್ಥಂಕರರದ್ದು. ಈ ಮೂರ್ತಿಯಿಂದಲೇ ಕಸಮಳಗಿ ರಾಷ್ಟ್ರದ ಜೈನ ಸಮುದಾಯದಲ್ಲಿ ಸಡನ್ನಾಗಿ ಪ್ರಸಿದ್ಧಿ ಪಡೆದುಕೊಂಡಿತು. ಈ ತೀರ್ಥಂಕರರ ವಿಗ್ರಹದ ವೈಶಿಷ್ಟ್ಯವೇನೆಂದರೆ ದಿನಕ್ಕೆ ೩ ಬಾರಿ ಬಣ್ಣ ಬದಲಾಯಿಸುವುದು! ಮಧ್ಯಾಹ್ನದವರೆಗೆ ಸಿಮೆಂಟ್ ಬಣ್ಣದಲ್ಲಿರುವ ವಿಗ್ರಹ, ಮಧ್ಯಾಹ್ನ ಒಂದು ಅಥವಾ ಎರಡು ಗಂಟೆಯ ಸಮಯಕ್ಕೆ ನೀಲಿ ಬಣ್ಣ ಪಡೆಯುತ್ತದೆ. ಮತ್ತೆ ಸಂಜೆ ಐದಾರು ಗಂಟೆಯ ಸಮಯದಲ್ಲಿ ಹಸಿರು ಬಣ್ಣ ಪಡೆದುಕೊಳ್ಳುತ್ತದೆ. ದಿನಕ್ಕೆ ೩ ಬಣ್ಣದಲ್ಲಿ ಕಾಣುವ ಈ ವಿಗ್ರಹವನ್ನು ಕೋಟ್ಯಂತರ ರೂಪಾಯಿ ನೀಡಿ ಖರೀದಿಸಲು ಜೈನ ಸಮುದಾಯದ ಸ್ಥಿತಿವಂತರು ರಾಷ್ಟ್ರದ ಎಲ್ಲೆಡೆಯಿಂದ ಬಂದರೂ, ಕಸಮಳಗಿ ಗ್ರಾಮಸ್ಥರು ವಿಗ್ರಹವನ್ನು ಬಿಟ್ಟುಕೊಡದೇ ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. ವಿಗ್ರಹದ ಸುತ್ತಲೂ ಗಾಜಿನ ಪೆಟ್ಟಿಗೆಯ ತರಹ ರಚಿಸಲಾಗಿರುವುದರಿಂದ ಪ್ರತಿಬಿಂಬ ಕಾಣದಂತೆ ಚಿತ್ರ ತೆಗೆಯಲು ನಾನು ವಿಫಲನಾದೆ.


ಅಲ್ಲೇ ಇದ್ದ ಮಾಹಿತಿ ಫಲಕದ ಚಿತ್ರವನ್ನೇ ಇಲ್ಲಿ ಹಾಕಿದ್ದೇನೆ. ವಿಗ್ರಹದ ಬಗ್ಗೆ ಅದರಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಆದರೆ ೩ ಬಣ್ಣ ಪಡೆಯುವ ಬಗ್ಗೆ ಯಾವುದೇ ಮಾತಿಲ್ಲ! ದಿನಕ್ಕೆ ೩ ಬಣ್ಣ ಪಡೆಯುವ ಚಿತ್ರವಿದೆಯಾ ಎಂದು ಕೇಳಿದರೆ ಅಲ್ಲಿನ ಅರ್ಚಕ ನಗುತ್ತಾ ಇಲ್ಲವೆಂದ. ವಿಗ್ರಹವಂತೂ ಟಾಪ್ ಕ್ಲಾಸ್. ಅದ್ಭುತ ಕೆತ್ತನೆ. ಅಷ್ಟೇ ಸುಂದರ. ನಾವು ಮುಂಜಾನೆ ಸುಮಾರು ೧೧ ಗಂಟೆಯ ಹೊತ್ತಿಗೆ ತೆರಳಿದ್ದರಿಂದ ವಿಗ್ರಹ ಇನ್ನೂ ಸಿಮೆಂಟ್ ಬಣ್ಣದಲ್ಲಿತ್ತು.