ಭಾನುವಾರ, ಜನವರಿ 30, 2011
ಭಾನುವಾರ, ಜನವರಿ 16, 2011
ಪರಸಗಡ

ಪರಸಗಡ ಕೋಟೆಯಲ್ಲಿ ಎದ್ದು ಕಾಣುವುದೇ ಕೋಟೆಯ ಬುರುಜುಗಳು. ಅಸಲಿಗೆ ಈ ಕೋಟೆಯಲ್ಲಿ ಅಳಿದುಳಿದಿರುವುದೇ ಇಲ್ಲಿರುವ ಹಲವಾರು ಬುರುಜುಗಳು ಮಾತ್ರ. ಕೋಟೆಯ ಎರಡು ಮಹಾದ್ವಾರಗಳ ನಡುವಿನ ಅಂಕುಡೊಂಕಾದ ಹಾದಿಯನ್ನು ಕ್ರಮಿಸಿ ಒಳಗೆ ಕಾಲಿಟ್ಟರೆ ವಿಶಾಲವಾದ ಬಟಾಬಯಲು ಪ್ರದೇಶ. ಕಲ್ಲುಬಂಡೆಗಳ ರಾಶಿ.


ಕೋಟೆಯಲ್ಲೀಗ ಅವಶೇಷಗಳೂ ಉಳಿದಿಲ್ಲ ಎನ್ನಬಹುದು. ದ್ವಾರಗಳನ್ನು ದಾಟಿ ಸ್ವಲ್ಪ ಮುನ್ನಡೆದರೆ ಬಲಕ್ಕೆ ಆಂಜನೇಯನ ಒಂದು ಸಣ್ಣ ಗುಡಿ. ಆಂಜನೇಯನಿಗೆ ದಿನಾಲೂ ದೀಪವಿಟ್ಟು ಪೂಜೆ ಸಲ್ಲಿಸಲಾಗುತ್ತದೆ. ಈ ಕೋಟೆಯನ್ನು ರಟ್ಟರು ಕಟ್ಟಿಸಿದ್ದರು ಎನ್ನಲಾಗುತ್ತದೆ. ರಟ್ಟರು ಸುಮಾರು ೩೦೦ ವರ್ಷಗಳ ಕಾಲ ಈ ಪ್ರದೇಶವನ್ನು ಆಳಿದರು. ಈ ಪರಸಗಡ ಕೋಟೆಯಿಂದಲೇ ರಟ್ಟರು ಆಳ್ವಿಕೆಯನ್ನು ನಡೆಸಿದ್ದರು ಎಂದು ಹೇಳುವ ಶಾಸನಗಳು ದೊರೆತಿವೆ.

ಉತ್ತರದಿಂದ ದಕ್ಷಿಣಕ್ಕೆ ೫೦೦ ಮೀಟರ್ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ೩೦೦ ಮೀಟರ್ ಅಳತೆ ಇರುವ ಪರಸಗಡ ಕೋಟೆಯು ೧೭ನೇ ಶತಮಾನದಲ್ಲಿ ಶಿವಾಜಿಯ ಆಳ್ವಿಕೆಗೂ ಒಳಪಟ್ಟಿತ್ತು. ಶಿವಾಜಿಯು ಕೋಟೆಯ ದುರಸ್ತಿ ಮಾಡಿ ಪರಶುರಾಮನ ಸ್ಮರಣಾರ್ಥ ಪರಸಗಡ ಎಂಬ ಹೆಸರಿಟ್ಟ ಎನ್ನಲಾಗುತ್ತದೆ.


ಕೋಟೆಯ ಇನ್ನೊಂದು ತುದಿಯಲ್ಲಿ ಪರಶುರಾಮನ ದೇವಾಲಯ ಮತ್ತು ಶಿವನ ದೇವಾಲಯಗಳಿವೆ. ಆದರೆ ಇಲ್ಲಿ ತಲುಪಬೇಕಾದರೆ ಕಡಿದಾದ ಕೊರಕಲೊಂದನ್ನು ದಾಟಿ ಸಾಗಬೇಕು. ಈ ಕೊರಕಲಿಗೆ ಇಳಿಯಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇಲ್ಲಿಯೇ ವಾನರ ಸೈನ್ಯ ಹೊಂಚು ಹಾಕಿ ಕುಳಿತುಕೊಂಡಿರುತ್ತದೆ. ಕೈಯಲ್ಲಿ ಏನೇ ತಿನಿಸು ಇದ್ದರೂ ಯಾವುದೇ ಮುಲಾಜಿಲ್ಲದೆ ಈ ವಾನರರು ಕಸಿದುಕೊಳ್ಳುತ್ತಾರೆ. ಆದರೆ ನಮಗೆ ಯಾವುದೇ ಹಾನಿ ಉಂಟುಮಾಡುವುದಿಲ್ಲ.



ಕಡಿದಾದ ಮೆಟ್ಟಿಲುಗಳನ್ನು ನೋಡಿ, ’ಛೆ, ಇಷ್ಟೆಲ್ಲಾ ಇಳಿಯುವುದಿದೆ ಎಂದು ಗೊತ್ತಿದ್ದರೆ ನಾವು ಬರ್ತಾನೇ ಇರ್ತಿರ್ಲಿಲ್ಲ’ ಎಂದು ಲೀನಾಳ ಮಾತುಗಳು ಶುರುವಾದವು. ವಾನರ ಸೈನ್ಯ ರಿಲ್ಯಾಕ್ಸ್ ಆಗಿ ಇಳಿಯಲೂ ಬಿಡುತ್ತಿರಲಿಲ್ಲ. ನಮ್ಮ ಭುಜದ ಮೇಲೆ ಕಾಲಿಟ್ಟು ಮತ್ತೊಂದೆಡೆ ಜಿಗಿಯುವುದು, ನಮ್ಮ ತಲೆಯನ್ನೇ ಆಧಾರವಾಗಿಟ್ಟುಕೊಂಡು ಮತ್ತೊಂದೆಡೆ ಹೋಗುವುದು, ಇತ್ಯಾದಿ ಚೇಷ್ಟೆಗಳನ್ನು ಮಾಡುತ್ತಿದ್ದವು. ಆ ಕೊರಕಲನ್ನು ದಾಟಬೇಕಾದರೆ ಮಂಗಗಳ ಹಾವಳಿ ಕಂಡು ಕ್ಯಾಮರಾಗಳನ್ನೆಲ್ಲಾ ಸುರಕ್ಷಿತವಾಗಿ ಬ್ಯಾಗಿನೊಳಗಿಟ್ಟುಕೊಂಡೆ.


ಕೊರಕಲನ್ನು ಇಳಿದು ನಿಸರ್ಗದ ಸಂದರ್ಯವನ್ನು ಮತ್ತು ಕೋಟೆಯ ಅಗಾಧತೆಯನ್ನು ಆನಂದಿಸುತ್ತಾ ಇನ್ನಷ್ಟು ಮೆಟ್ಟಿಲುಗಳನ್ನು ಇಳಿದು ಮುಂದೆ ಸಾಗಿದರೆ ಅದ್ಭುತ ಪರಿಸರದ ನಡುವೆ ಇರುವ ಪರಶುರಾಮ ಹಾಗೂ ಶಿವನ ಸನ್ನಿಧಿಯನ್ನು ತಲುಪುತ್ತೇವೆ.

ಇಲ್ಲೊಂದು ಸಣ್ಣ ಗುಹೆಯಿದ್ದು, ಇದರೊಳಗೆ ಶುದ್ಧ ತಂಪು ನೀರಿನ ಪುಷ್ಕರಿಣಿಯಿದೆ. ಗುಹೆಯೊಳಗೆ ಮೇಲಿನಿಂದ ಜೋತುಬಿದ್ದಿರುವ ಮರವೊಂದರ ಬೇರಿನ ಮೂಲಕ ನೀರು ಸದಾ ಒಂದೇ ಪ್ರಮಾಣದಲ್ಲಿ ಬೀಳುತ್ತಿರುತ್ತದೆ. ಬೇಟಾಸುರ ಎಂಬ ರಾಕ್ಷಸನನ್ನು ಕೊಂದ ಪರಶುರಾಮನು ತನ್ನ ರಕ್ತಸಿಕ್ತ ಕೊಡಲಿಯನ್ನು ಈ ಪುಷ್ಕರಿಣಿಯಲ್ಲಿ ತೊಳೆದಿದ್ದನೆಂದು ನಂಬಲಾಗಿದ್ದು, ಇದೇ ಕಾರಣದಿಂದ ಈ ಪುಷ್ಕರಿಣಿಯನ್ನು ರಾಮತೀರ್ಥ ಎಂದು ಕರೆಯುತ್ತಾರೆ. ಪುಷ್ಕರಿಣಿಗೆ ೧೦-೧೨ ಮೆಟ್ಟಿಲುಗಳನ್ನು ಇಳಿದುಕೊಂಡು ಹೋಗಬೇಕು.


ನೀರಿನಲ್ಲಿ ಕೈ ಕಾಲು ತೊಳೆದುಕೊಂಡು ಮೇಲಕ್ಕೆ ಬಂದ ಬಳಿಕ ಬೃಹತ್ ಬಂಡೆಯೊಂದರ ಕೆಳಗೆ ಇರುವ ಪರಶುರಾಮನ ಸನ್ನಿಧಿಯೆಡೆ ತೆರಳಬೇಕಾದರೆ ಇನ್ನೊಂದು ೧೫ ಮೆಟ್ಟಿಲುಗಳನ್ನು ಇಳಿಯಬೇಕು. ಪರಶುರಾಮನ ತೊಟ್ಟಿಲನ್ನೂ ಇಲ್ಲಿ ತೂಗುಹಾಕಲಾಗಿದೆ. ಇಲ್ಲಿರುವ ಅರ್ಚಕ ಹಣೆಗೆ ೩ ಅಡ್ಡನಾಮ ಹಾಕಿಯೇ ವಾಪಾಸು ಕಳಿಸುತ್ತಾನೆ. ಮರಳಿ ಮೇಲಕ್ಕೆ ಬಂದು ಬಲಕ್ಕೆ ದೊಡ್ಡ ಬಂಡೆಯೊಂದನ್ನು ಕೊರೆದು ನಿರ್ಮಿಸಲಾಗಿರುವ ಸಣ್ಣ ದ್ವಾರದ ಮೂಲಕ ಬಗ್ಗಿ ಒಳಗೆ ಸಾಗಿದರೆ ಸುಂದರ ಶಿವಲಿಂಗ ಮತ್ತು ನಂದಿ.

ವರ್ಷಕ್ಕೆರಡು ಸಲ - ಬಾಂಧವ ಹುಣ್ಣಿಮೆ ಮತ್ತು ಬಾರತ ಹುಣ್ಣಿಮೆಯ ದಿನಗಳಂದು ಸ್ವಲ್ಪ ಹೆಚ್ಚಿನ ಸಂಖ್ಯೆಯ ಜನರು ಆಗಮಿಸುವುದನ್ನು ಹೊರತುಪಡಿಸಿದರೆ ಉಳಿದ ಸಮಯದಲ್ಲಿ ಇಲ್ಲಿಗೆ ಬರುವವರು ಬಹಳ ವಿರಳ.

ಕೋಟೆಯ ತುಂಬಾ ಅಲ್ಲಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ಒಂದರ ಮೇಲೊಂದರಂತೆ ಪೇರಿಸಿ ಇಡಲಾಗಿತ್ತು. ಕೆಲವೆಡೆ ಎರಡು, ಕೆಲವೆಡೆ ಮೂರು, ಮತ್ತು ಕೆಲವೆಡೆ ನಾಲ್ಕು ಹೀಗೆ. ಇಲ್ಲಿಗೆ ಬರುವ ಭಕ್ತಾದಿಗಳು ಸ್ವಂತ ಮನೆ ಕಟ್ಟಲು ಎಲ್ಲಾ ಅನುಕೂಲವಾಗುವಂತೆ ಮನಸಲ್ಲೇ ದೇವರಿಗೆ ನಮಸ್ಕರಿಸಿ ತೆರಳುವ ಮೊದಲು ಹೀಗೆ ಕಲ್ಲನ್ನಿಟ್ಟು ತೆರಳುವುದು ಪದ್ಧತಿ. ಒಂದೊಂದು ಕಲ್ಲು ಮನೆಯ ಒಂದೊಂದು ಅಂತಸ್ತನ್ನು ಸೂಚಿಸುತ್ತದೆ. ಲೀನಾಳ ಒತ್ತಾಯಕ್ಕೆ ಮಣಿದು ನಾನೂ ೩ ಅಂತಸ್ತಿನ ಮನೆ ನಿರ್ಮಿಸಿ ಬಂದೆ!

ಪರಸಗಡ ಕೋಟೆಯಲ್ಲೀಗ ನೋಡಲು ಅರ್ಹವಾಗಿರುವುದೆಂದರೆ ಪರಶುರಾಮನ ಮತ್ತು ಶಿವನ ಗುಡಿಗಳು. ಈ ದೇವಾಲಯಗಳು ಭಾರೀ ದೇವಾಲಯಗಳೇನಲ್ಲ. ಆದರೆ ಪ್ರಕೃತಿಯ ನಡುವೆ, ಕಲ್ಲು ಬಂಡೆಗಳ ಆಸರೆಯಲ್ಲೇ ತಂಪಾದ ಪರಿಸರದಲ್ಲಿ ಸ್ಥಿತವಾಗಿರುವ ಈ ಸಣ್ಣ ಗುಡಿಗಳಿಗೆ ಭೇಟಿ ನೀಡುವುದಕ್ಕಾಗಿಯೇ ಪರಸಗಡಕ್ಕೆ ತೆರಳಬೇಕು.
ಮಾಹಿತಿ: ವೈ ಬಿ ಕಡಕೋಳ ಹಾಗೂ ಯ ರು ಪಾಟೀಲ
ಶನಿವಾರ, ಜನವರಿ 01, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)