
ಉಡುಪಿಯ ಸಮೀಪ ಒಂದು ಪ್ರವಾಸಕ್ಕೆ ಹೋಗಿ ಬರೋಣ ಬನ್ನಿ....
ನಮ್ಮ ಒಂದು ದಿನದ ಪ್ರವಾಸದ ಶುಭಾರಂಭ ಉಡುಪಿ ಸಮೀಪದ ಆರೂರು ಎಂಬ ಸಣ್ಣ ಊರಿನ ವಿಷ್ಣುಮೂರ್ತಿ ದೇವಸ್ಥಾನದಿಂದ. ಈ ದೇವಸ್ಥಾನ ಬಹಳ ಹಳೆಯದಂತೆ. ಸಮೀಪದಲ್ಲೇ ಹರಿಯುವ ಮಡಿಸಾಳ ನದಿ ಪ್ರತಿ ಮಳೆಗಾಲದಲ್ಲಿ ದೇವಾಲಯದ ಆವರಣಕ್ಕೆ ದಾಂಗುಡಿಯಿಟ್ಟು ಹಾವಳಿಯೆಬ್ಬಿಸುವ ಕಾರಣ, ಈಗ ದೇವಾಲಯವನ್ನು ನವೀಕರಿಸಿ, ಗರ್ಭಗುಡಿಯ ಸುತ್ತಲೂ ಮುಂಗಟ್ಟನ್ನು ರಚಿಸಿ ನದಿಯ ನೀರು ಒಳಗೆ ಬರದಂತೆ ತಡೆಹಿಡಿಯಲು ಅನೇಕ ಕಸರತ್ತುಗಳನ್ನು ಮಾಡಿದ್ದಾರೆ. ದೇವಾಲಯದ ಹೊರಗೊಂದು ಸಣ್ಣ ಕೊಳ. ಗರ್ಭಗುಡಿಯ ಮಾಡಿನ ಮೇಲೊಂದು ಸ್ವರ್ಣ ಕಲಶ. ದೇವಾಲಯದ ಪ್ರಾಂಗಣದಲ್ಲಿ ಎತ್ತರವಾದ ಸ್ತಂಭ.

ದೇವಾಲಯದ ಹಿಂದೆ ಒಂದೆರಡು ನಿಮಿಷ ನಡೆದರೆ ಪ್ರಶಾಂತವಾಗಿ ಹರಿಯುವ ಮಡಿಸಾಳ ನದಿ. ಜಲಕ್ರೀಡೆಯಾಡಲು ಪ್ರಶಸ್ತವಾದ ಸ್ಥಳ. ಬೆಳ್ಳಂಬೆಳಗ್ಗೆ ಇಲ್ಲಿಗೇ ಬಂದು ಬಿಟ್ಟಿದ್ದೆವು. ಮಧ್ಯಾಹ್ನದ ಸಮಯವಾಗಿದ್ದಲ್ಲಿ ಎಲ್ಲರೂ ನದಿಗೆ ಜಲಕ್ರೀಡೆಯಾಡಲು ಹಾರುತ್ತಿದ್ದರೇನೋ. ಈಗ ಸೌಮ್ಯವಾಗಿ ಕಾಣುತ್ತಿದ್ದ ಮಡಿಸಾಳ, ಮಳೆಗಾಲದಲ್ಲಿ ರೌದ್ರಾವತಾರ ತಾಳಿ, ಅಕ್ಕ ಪಕ್ಕದ ಗದ್ದೆಗಳನ್ನೆಲ್ಲಾ ಮುಳುಗಿಸಿ, ಸುಮಾರು ೧೫೦ ಮೀಟರ್ ದೂರದಲ್ಲಿರುವ ವಿಷ್ಣುಮೂರ್ತಿ ದೇವಾಲಯಕ್ಕೆ ವಾರ್ಷಿಕ ಭೇಟಿ ನೀಡುತ್ತದೆ.

ನಂತರದ ಸರದಿ ನೀಲಾವರದ ಮಹಿಷಮರ್ದಿನಿ ದೇವಸ್ಥಾನದ್ದು. ಇದು ಸೀತಾ ನದಿಯ ತಟದಲ್ಲಿದೆ. ದೇವಾಲಯದಲ್ಲಿ ಪೂಜೆ, ಹವನ, ತಕ್ಕಡಿ ಸೇವೆ ಇತ್ಯಾದಿಗಳು ಜೋರಾಗಿ ನಡೆಯುತ್ತಿದ್ದರೂ ಹೊರಗಿನಿಂದ ಏನೂ ಗೊತ್ತಾಗುತ್ತಿರಲಿಲ್ಲ. ಬಹಳ ಶಾಂತ ಮತ್ತು ಸುಂದರ ಪರಿಸರದಲ್ಲಿದೆ ಈ ದೇವಾಲಯ.

ನಂತರ ಅಲ್ಲೇ ಪಕ್ಕದಲ್ಲಿರುವ ಪಂಚಮಿಕಾನನ ಎಂಬಲ್ಲಿಗೆ ತೆರಳಿದೆವು. ಇದು ನಾಗದೇವರ ಸ್ಥಾನ. ಇದೂ ಸೀತಾ ನದಿಯ ತಟದಲ್ಲಿದೆ. ಸುತ್ತಮುತ್ತಲಿನ ಪರಿಸರ ಬಹಳ ಚೆನ್ನಾಗಿದ್ದರಿಂದ ಇಲ್ಲೊಂದಷ್ಟು ಹೊತ್ತು ಸಮಯವನ್ನು ಕಳೆದೆವು.

ನೀಲಾವರದಲ್ಲೊಂದು ಗೋಶಾಲೆಯಿದೆ. ಅನಾಥ ಮತ್ತು ಕಸಾಯಿಖಾನೆಯ ದಾರಿಯಲ್ಲಿರುವಾಗ ರಕ್ಷಿಸಲ್ಪಟ್ಟ ಗೋವು/ರಾಸುಗಳನ್ನು ಇಲ್ಲಿ ಸಾಕಲಾಗುತ್ತಿದೆ. ಇದೊಂದು ಸಣ್ಣ ಮಟ್ಟದ ಗೋಶಾಲೆ. ನಮ್ಮಲ್ಲಿ ಹಲವರು ರಾಮಚಂದ್ರಾಪುರ ಮಠದ ಗೋಶಾಲೆಯೊಂದಿಗೆ ಹೋಲಿಕೆ ಮಾಡಿ ಇದೇನೂ ಚೆನ್ನಾಗಿಲ್ಲ ಎಂಬ ನಿರ್ಧಾರಕ್ಕೆ ಬಂದುಬಿಟ್ಟರು. ನೀಲಾವರ ಗೋಶಾಲೆಯ ಉದ್ದೇಶವೇ ಅನಾಥ/ಅಸಹಾಯಕ/ವೃದ್ಧ ಗೋವುಗಳಿಗೊಂದು ನೆಲೆ ಕೊಡುವುದು. ಆ ಉದ್ದೇಶ ಈಡೇರುತ್ತಿರುವಾಗ ಬೇರೆ ಗೋಶಾಲೆಯೊಂದಿಗೆ ಹೋಲಿಕೆ ಮಾಡಿ ಈ ಗೋಶಾಲೆಯಲ್ಲಿ ಆಗುತ್ತಿರುವ ಉತ್ತಮ ಕೆಲಸವನ್ನು ಕಣ್ಣಿದ್ದೂ ಕಾಣದವರಾಗಿದ್ದರು ನಮ್ಮಲ್ಲಿ ಕೆಲವರು.

ಗೋವುಗಳು ಸ್ವೇಚ್ಚೆಯಿಂದ ಓಡಾಡುತ್ತಿದ್ದವು. ಅವುಗಳಿಗೆ ಮೇವು/ನೀರು ಇತ್ಯಾದಿಗಳ ಪೂರೈಕೆ ಸಮರ್ಪಕವಾಗಿಯೇ ಇದೆ. ಹೋಲಿಕೆ ಮಾಡಿ ಕಣ್ಣ ಮುಂದಿರುವ ವಸ್ತುವಿನ/ವಿಷಯದ ಅಂದಗೆಡಿಸುವ ಚಾಳಿಯನ್ನು ನಾವು ಯಾವಾಗ ಬಿಡುತ್ತೇವೆಯೋ!


ನೀಲಾವರದಿಂದ ಮುಂದೆ ನಾವು ತೆರಳಿದ್ದು ’ಮೂಡಲತಾವು’ ಎಂಬ ಸುಮಾರು ೪೦೦ ವರ್ಷಗಳಷ್ಟು ಹಳೆಯ ಮನೆಗೆ. ಒಂದು ತಿಂಗಳ ಹಿಂದೆಯಷ್ಟೇ ಈ ಮನೆಯಲ್ಲೊಂದು ಮದುವೆಯಾಗಿದ್ದರಿಂದ ಮನೆ ಫಳಫಳ ಹೊಳೆಯುತ್ತಿತ್ತು. ಜಗುಲಿಯಲ್ಲಿತ್ತೊಂದು ಪಲ್ಲಕ್ಕಿ.


ಮನೆಯೊಳಗಡೆಯೆಲ್ಲಾ ಸುತ್ತಾಡಿದೆವು. ಒಳಗೆ ಇದ್ದವು ಮರದಿಂದ ಮಾಡಲ್ಪಟ್ಟಿರುವ ಆರಾಮ ಕುರ್ಚಿಗಳು. ಮಾಳಿಗೆಯಲ್ಲೊಂದು ಸುಂದರ ಮಂಚವಿತ್ತು. ಈಗ ಕಣ್ಮರೆಯಾಗುತ್ತಿರುವ ಹಲವಾರು ಹಳೆಯ ಸಂಪ್ರಾದಯಿಕ ಸಾಮಗ್ರಿ/ವಸ್ತುಗಳು ಈ ಮನೆಯಲ್ಲಿದ್ದವು. ಅಂದ ಹಾಗೆ ಕನ್ನಡ ಚಲನಚಿತ್ರ ’ಅಮೇರಿಕಾ ಅಮೇರಿಕಾ’ ಚಿತ್ರೀಕರಣ ನಡೆದದ್ದು ಈ ಮನೆಯಲ್ಲಿಯೇ!


ನಂತರ ಸೂರಾಲು ಎಂಬಲ್ಲಿರುವ ಅರಮನೆ(?)ಯನ್ನು ನೋಡಲು ತೆರಳಿದೆವು. ಸುತ್ತಮುತ್ತಲ ಹಳ್ಳಿಗಳಿಗೆ ಜಮೀನುದಾರರಾಗಿದ್ದವರ ಆಗಿನ ಕಾಲದ ದೊಡ್ಡ (ಅರ)ಮನೆಯಾಗಿತ್ತು ಇದು. ಮುಂದಿನಿಂದ ಕಾಣುವ ಅರಮನೆಯ ದೃಶ್ಯ ಸುಂದರ. ಎರಡು ಹೊಯ್ಸಳ ಶೈಲಿಯ ಸಿಂಹಗಳನ್ನು ಪ್ರಮುಖ ದ್ವಾರದ ಇಕ್ಕೆಲಗಳಲ್ಲಿ ಇರಿಸಲಾಗಿದೆ.


ಒಳಗೆ ಕಾಲಿಟ್ಟ ಕೂಡಲೇ ಭ್ರಮನಿರಸನ. ಎಲ್ಲ ಕಡೆಯಿಂದಲೂ ಪಾಳು ಬೀಳುತ್ತಿದೆ ಸೂರಾಲು ಅರಮನೆ. ಕುಸಿದುಬಿದ್ದ ಮರದ ಸಾಮಗ್ರಿಗಳನ್ನು ಸುತ್ತಲೂ ಪೇರಿಸಿ ಇಡಲಾಗಿದೆ. ಅವನ್ನೆಲ್ಲಾ ಗೆದ್ದಲುಗಳು ಕಬಳಿಸುತ್ತಿವೆ. ಒಂದೆಡೆ ಶ್ರೀಕೃಷ್ಣ ಕೊಳಲು ನುಡಿಸುತ್ತಿರುವ ಮಾಸಿಹೋಗುತ್ತಿರುವ ಚಿತ್ರ ಪರಿಸ್ಥಿತಿಯ ಅಪಹಾಸ್ಯ ಮಾಡುತ್ತಿರುವಂತೆ ಎದ್ದು ಕಾಣುತ್ತಿತ್ತು. ಉಪ್ಪರಿಗೆ ಕುಸಿಯುತ್ತಿದೆ. ಛಾವಣಿ ಈಗಲೋ ಆಗಲೋ ಎಂಬಂತಿದೆ.

ಈ ಅರಮನೆಗೆ ೩೭ ದಾವೆದಾರರಿದ್ದಾರೆ. ತುಳುನಾಡಿನ ಸಂಸ್ಕೃತಿಯ ಪ್ರಮುಖ ಕೊಂಡಿಯಾಗಿರುವ ಈ ಅರಮನೆಯನ್ನು ಉಳಿಸಿಕೊಳ್ಳಲು ಧರ್ಮಸ್ಥಳದ ಹೆಗ್ಗಡೆಯವರು ಮುಂದಾಗಿದ್ದರು. ಆದರೆ ಅರಮನೆಯನ್ನು ಅವರಿಗೆ ಬಿಟ್ಟುಕೊಡಲು ದಾವೆದಾರರಲ್ಲಿ ಭಿನ್ನಮತ. ತಾವೂ ಉದ್ಧಾರ ಮಾಡರು..ಪರರಿಗೂ ಬಿಡರು. ಪರಿಣಾಮ ಸೂರಾಲು ಅರಮನೆ ನಿಧಾನವಾಗಿ ಅವನತಿಯತ್ತ ಸಾಗುತ್ತಿದೆ.

ಅಲ್ಲಿಂದ ಮುಂದೆ ನಮ್ಮ ಸವಾರಿ ಜೋಮ್ಲು ತೀರ್ಥದೆಡೆಗೆ. ಸೀತಾ ನದಿಯ ಹರಿವಿನ ಸುಂದರ ಸ್ಥಳವಿದು. ಇದನ್ನು ಜೋಮ್ಲು ಫಾಲ್ಸ್(!) ಎನ್ನುತ್ತಾರೆ. ಆದರೆ ಫಾಲ್ಸ್ ಸಮೀಪವೇ ನಿಂತು ಫಾಲ್ಸ್ ಎಲ್ಲಿ ಎಂದು ಹುಡುಕುವ ಪರಿಸ್ಥಿತಿ ಇಲ್ಲಿ! ಬೇಸಿಗೆಯಲ್ಲಿ ಬಂದರೆ ಚೆನ್ನ. ನೀರಿನ ಹರಿವು ಕಡಿಮೆ ಇರುವುದರಿಂದ ಕೆಳಗಿಳಿದು ಯಾವುದೇ ಅಪಾಯವಿಲ್ಲದೆ ಮನಸಾರೆ ಜಲಕ್ರೀಡೆಯಾಡಬಹುದು. ಬಂಡೆಗಳೆಡೆಯಲ್ಲಿ ಅಲ್ಲಲ್ಲಿ ವೃತ್ತಾಕಾರದ ದೊಡ್ಡ ದೊಡ್ಡ ರಂಧ್ರಗಳು. ಇವುಗಳೊಳಗೆ ನುಸುಳುತ್ತಾ ನೀರು ಬೀಳುವಲ್ಲಿ ಸಲೀಸಾಗಿ ಸಾಗಿ ಪೂರ್ತಿಯಾಗಿ ಮಜಾ ಮಾಡಿದರು ಎಲ್ಲರೂ.

ಮಕ್ಕಳೆಲ್ಲಾ ನೀರು ಕೆಳಗೆ ಬೀಳುವ ಸ್ವಲ್ಪ ಮೊದಲೇ ಇರುವ ಕೊಳದಲ್ಲಿ ಮುಳುಗೇಳುತ್ತಾ ಪರಮಾನಂದ ಅನುಭವಿಸುತ್ತಿದ್ದರು. ಜೋಮ್ಲು ಅಪಾಯದ ಸ್ಥಳ. ನೀರಿನ ಹರಿವು ಹೆಚ್ಚಿರುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆರೇಳು ಜನರು ಇಲ್ಲಿ ಮಡಿದಿದ್ದಾರೆ.


ಯಾವಾಗಲು ನಮ್ಮನ್ನು, ’ಬೇಗ ಬೇಗ..ತಡವಾಗುತ್ತೆ..ಹೊರಡಿ..ಹೊರಡಿ’ ಎಂದು ಅವಸರ ಮಾಡುತ್ತಿದ್ದ ನಮ್ಮ ರಿಂಗ್ ಮಾಸ್ಟರ್ ಅಡಿಗ ಸಾರ್ ಎಲ್ಲೂ ಕಾಣುತ್ತಿಲ್ಲವಲ್ಲ ಎಂದು ನಾವು ನೀರಿಗಿಳಿಯದ ಕೆಲವರು ಮರದ ನೆರಳಿನಲ್ಲಿ ಅಂಗಾತ ಮಲಗಿ ಅಚ್ಚರಿ ಪಡುತ್ತಿದ್ದೆವು. ಆದರೆ ಆಡಿಗ ಸಾರ್ ಬಂಡೆಯ ಸಂದಿಯೊಳಗೆ ನುಗ್ಗಿ ನೀರು ಬೀಳುವಲ್ಲಿ ನಿಂತು ಫುಲ್ ಎಂಜಾಯ್ ಮಾಡುತ್ತಾ ಇರುವಾಗ ಎಲ್ಲಿಯ ಅವಸರ ಯಾರಿಗೆ ಅವಸರ? ಅಡಿಗ ಸಾರ್ ಮತ್ತು ಸಂಗಡಿಗರ ಗಜ ಸ್ನಾನ ಮುಗಿಯುವಷ್ಟರಲ್ಲಿ ನಮ್ಮದೆಲ್ಲಾ ಸಣ್ಣ ನಿದ್ರೆ ಆಯಿತೆನ್ನಿ.

ಉಡುಪಿ ಯೂತ್ ಹಾಸ್ಟೆಲ್ ೨೦೦೮ ಮೇ ತಿಂಗಳ ಕಾರ್ಯಕ್ರಮವಿದು. ಎಲ್ಲಿಗೆ ಹೋಗುವುದು ಎಂದು ಗೊಂದಲಕ್ಕೆ ಬಿದ್ದ ಅಡಿಗ ಸಾರ್ ಕಡೆಗೆ ’ಫ್ಯಾಮಿಲಿ ಟ್ರಿಪ್’ ಎಂದು ಉಡುಪಿಯ ಸಮೀಪದಲ್ಲೇ ಇದ್ದ ಕೆಲವು ಸುಂದರ ಸ್ಥಳಗಳಿಗೆ ನಮ್ಮನ್ನೆಲ್ಲಾ ಕರೆದೊಯ್ದು ಒಂದು ದಿನದ ಸುಂದರ ಕಾರ್ಯಕ್ರಮವನ್ನು ಏರ್ಪಡಿಸಿದರು.