ಭಾನುವಾರ, ಜನವರಿ 29, 2012

ಶಾಂತೇಶ್ವರ ದೇವಾಲಯ - ತಿಳವಳ್ಳಿ


ಶಾಸನಗಳಲ್ಲಿ ಸಾವಂತೇಶ್ವರ ಎಂದು ಕರೆಯಲಾಗಿರುವ ದೇವಾಲಯವನ್ನು ಇಂದು ಶಾಂತೇಶ್ವರ ಎಂದು ಕರೆಯಲಾಗುತ್ತದೆ. ಪೂರ್ವಾಭಿಮುಖವಾಗಿರುವ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಮತ್ತು ವಿಶಾಲ ಸಭಾಮಂಟಪವನ್ನು ಹೊಂದಿದೆ.


ಈ ದೇವಾಲಯ ಇನ್ನೂ ಸುಸ್ಥಿತಿಯಲ್ಲಿರುವುದು ನಾವೆಲ್ಲಾ ಸಂತೋಷಪಡಬೇಕಾದ ವಿಷಯ. ದೇವಾಲಯಕ್ಕೊಂದು ಪ್ರಾಂಗಣ ರಚಿಸುವುದರಲ್ಲಿ ವಿಳಂಬವಾದ ಕಾರಣ ಸಮೀಪದವರೆಗೂ ಮನೆಗಳಿವೆ. ದೇವಾಲಯ ಸಂಪೂರ್ಣವಾಗಿ ಕಾಣುವಂತೆ ಚಿತ್ರ ತೆಗೆಯಲು ಯಾವ ದಿಕ್ಕಿನಿಂದಲೂ ನನಗೆ ಸಾಧ್ಯವಾಗಲಿಲ್ಲ. ವಿಶಾಲ ಕೋನ ಮಸೂರ ಇರುವ ಛಾಯಾಚಿತ್ರಗ್ರಾಹಿ ಇದ್ದರೆ ಸಾಧ್ಯವಾಗಬಹುದು. ಪ್ರಾಂಗಣದ ಒಳಗೆಲ್ಲಾ ಆಳೆತ್ತರದ ಹುಲ್ಲುಗಳು ಬೆಳೆದುಬಿಟ್ಟಿವೆ. ಇವುಗಳನ್ನು ತೆಗೆದು ಸ್ವಚ್ಛಗೊಳಿಸಿದರೆ ದೇವಾಲಯ ಇನ್ನಷ್ಟು ಆಕರ್ಷಕವಾಗಿ ಕಾಣಬಹುದು.


ಗರ್ಭಗುಡಿಯ ದ್ವಾರ ಸಪ್ತಶಾಖೆಗಳನ್ನು ಹೊಂದಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಈ ಶಾಖೆಗಳಲ್ಲಿರುವ ಕೆತ್ತನೆಗಳು ಅಲಂಕಾರಿಕ ತರಹದ್ದಾಗಿದ್ದು ಸಾಧಾರಣವಾಗಿವೆ. ಶಾಖೆಗಳ ತಳಭಾಗದಲ್ಲಿರುವ ಮಾನವ ರೂಪದ ಕೆತ್ತನೆಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಗರ್ಭಗುಡಿಯಲ್ಲಿ ಎರಡುವರೆ ಅಡಿ ಎತ್ತರದ ಪಾಣಿಪೀಠದ ಮೇಲೆ ಒಂದು ಅಡಿ ಎತ್ತರದ ಶಿವಲಿಂಗವಿದ್ದು, ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.


ಅಂತರಾಳದ ದ್ವಾರವು ಚತುರ್ಶಾಖ ತರಹದ್ದಾಗಿದ್ದು, ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಹೊಂದಿದೆ. ಅಂತರಾಳದ ದ್ವಾರದ ಮೇಲಿರುವ ಅಡ್ಡಪಟ್ಟಿಯಲ್ಲಿ ಹಲವಾರು ನೃತ್ಯಗಾರರು ಮತ್ತು ಸಂಗೀತಗಾರರ ಸಣ್ಣ ಸಣ್ಣ ಕೆತ್ತನೆಗಳಿವೆ. ಅಂತರಾಳದಲ್ಲಿಯೇ ನಂದಿಯ ಮೂರ್ತಿಯಿದೆ.


ಸಭಾಮಂಟಪದಲ್ಲಿ ಒಟ್ಟು ೪೮ ಕಂಬಗಳಿದ್ದು ಸುತ್ತಲೂ ಕಕ್ಷಾಸನವಿದೆ. ಮೂರು ದಿಕ್ಕುಗಳಿಂದ ಪ್ರವೇಶಿಸಬಹುದಾದ ಸಭಾಮಂಟಪದ ಮಧ್ಯಭಾಗದಲ್ಲಿ ಅರ್ಧ ಅಡಿ ಎತ್ತರದ ವೇದಿಕೆ ಮೇಲೆ ೧೨ ಕಂಬಗಳ ನವರಂಗವಿದೆ. ನವರಂಗದ ಭುವನೇಶ್ವರಿಯಲ್ಲಿ ತಲೆಕೆಳಗಾಗಿರುವ ತಾವರೆಯ ಕೆತ್ತನೆ ಇದೆ. ತಾವರೆಯ ಕೆತ್ತನೆ ಸುಂದರವಾಗಿದ್ದರೂ, ಮೊಗ್ಗಿನ ಕೆತ್ತನೆ ಅಪೂರ್ಣವೆನಿಸುತ್ತದೆ. ಈ ತಾವರೆಯ ಸುತ್ತಲೂ ಅಷ್ಟದಿಕ್ಪಾಲಕರನ್ನು ತೋರಿಸಲಾಗಿದೆ.


ಸಭಾಮಂಟಪದಲ್ಲಿ ನಾಲ್ಕು ದೇವಕೋಷ್ಠಗಳಿದ್ದು ಇವುಗಳಲ್ಲಿ ಒಂದು ಖಾಲಿಯಿದೆ. ಉಳಿದ ಮೂರರಲ್ಲಿ ಕ್ರಮವಾಗಿ ಮಹಿಷಮರ್ದಿನಿ, ತಂಬೂರಿ ವಾದಕ ಮತ್ತು ಸಪ್ತಮಾತೃಕೆಯರ ಮೂರ್ತಿಗಳಿವೆ. ಈ ವಿಗ್ರಹಗಳು ಪಾಚಿಗಟ್ಟಿ ಹಾಳಾಗುತ್ತಿವೆ.


ತಿಳವಳ್ಳಿಯಲ್ಲಿ ಕಲ್ಯಾಣ ಚಾಲುಕ್ಯ, ಯಾದವ ಮತ್ತು ವಿಜಯನಗರ ಅರಸರ ಕಾಲದ ೩೦ಕ್ಕೂ ಅಧಿಕ ಶಿಲಾಶಾಸನಗಳು ದೊರಕಿವೆ. ಇವುಗಳಲ್ಲಿ ತಿಳವಳ್ಳಿಯನ್ನು ’ಅನಾದಿ ಅಗ್ರಹಾರ ತಿಳವಳ್ಳಿ’ ಎಂದು ಕರೆಯಲಾಗಿದೆ. ಈ ಶಿಲಾಶಾಸನಗಳು ತಿಳವಳ್ಳಿಯ ಕೆರೆಗೆ ಕಲ್ಲಿನ ಕೆಲಸಕ್ಕೆ ದಾನ ಮಾಡಿದ ಬಗ್ಗೆ, ಆಗ ಇದ್ದ ಹಲವು ದೇವಾಲಯಗಳಿಗೆ ಸಂಬಂಧಿಸಿದಂತೆ ದಾನದತ್ತಿ ವಿವರಗಳು ಮತ್ತು ತಿಳವಳ್ಳಿಯಲ್ಲಿ ನೆಲೆಗೊಂಡಿದ್ದ ಹಲವು ವ್ಯಾಪಾರಿ ಸಮುದಾಯದವರ ಗುಂಪುಗಳ ಬಗ್ಗೆ ವಿವರವಾಗಿ ತಿಳಿಸುತ್ತವೆ.


ದೇವಾಲಯದ ಹೊರಗೆ ಒಂದು ಶಿಲಾಶಾಸನ ಮತ್ತು ವೀರಗಲ್ಲನ್ನು ಇಡಲಾಗಿದೆ. ಈ ಶಿಲಾಶಾಸನದಲ್ಲಿ ದೇವಗಿರಿ ಯಾದವ ವಂಶದ ಪ್ರಸಿದ್ಧ ದೊರೆ ಎರಡನೇ ಸಿಂಘಾನನ ಆಳ್ವಿಕೆಯ ಸಮಯದಲ್ಲಿ ಆತನ ಮಹಾಪಸಾಯಿತನಾಗಿದ್ದ(ಪೋಷಾಕುಗಳ ಜವಾಬ್ದಾರಿ ಹೊತ್ತವನು) ಕಾಳಿದೇವ ಠಾಕೂರ ಎಂಬವನು, ಯುದ್ಧದಲ್ಲಿ ವೀರಮರಣವನ್ನು ಹೊಂದಿದ ತನ್ನ ತಂದೆ ಸಾವಂತ ಠಾಕೂರನ ಸ್ಮರಣಾರ್ಥ ಇಸವಿ ೧೨೩೯ರಲ್ಲಿ ಈ ದೇವಾಲಯವನ್ನು ನಿರ್ಮಿಸಿದನು ಎಂದು ತಿಳಿಸಲಾಗಿದೆ. ಯಾದವರಿಂದ ನಿರ್ಮಿಸಲ್ಪಟ್ಟರೂ ಚಾಲುಕ್ಯ ಶೈಲಿಯನ್ನು ಅನುಕರಿಸಲಾಗಿದೆ.


ದೇವಾಲಯದ ಶಿಖರವನ್ನು ೩ ತಾಳಗಳಲ್ಲಿ ನಿರ್ಮಿಸಲಾಗಿದೆ. ಗೋಪುರದ ಪ್ರತಿ ತಾಳದಲ್ಲಿ ಇರಬೇಕಾದ ಕೆತ್ತನೆಗಳು ಬಿದ್ದುಹೋಗಿದ್ದು ಶಿವನ ತಾಂಡವನೃತ್ಯದ ಕೆಲವು ಶಿಲ್ಪಗಳು ಮಾತ್ರ ಉಳಿದುಕೊಂಡಿವೆ. ದೇವಾಲಯದ ಸುತ್ತಲೂ ಕೈಪಿಡಿ ಇದೆ. ಕೈಪಿಡಿಯ ಕೆತ್ತನೆಗಳಲ್ಲೂ ಕೆಲವು ಮಾತ್ರ ಉಳಿದುಕೊಂಡಿವೆ.


ಗರ್ಭಗುಡಿಯ ಹೊರಗೋಡೆಯಲ್ಲಿ ಗೋಪುರಗಳನ್ನು ಹಾಗೂ ದೇವಕೋಷ್ಠಗಳನ್ನು ಕಾಣಬಹುದು. ಇರುವ ೩ ದೇವಕೋಷ್ಠಗಳು ಖಾಲಿಯಿವೆ.


ಕಕ್ಷಾಸನದ ಹೊರಭಾಗದಲ್ಲಿ ಸಣ್ಣ ಸಣ್ಣ ಗೋಪುರಗಳನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಈ ಗೋಪುರಗಳ ಮೇಲಿರುವ ಅಲಂಕಾರಿಕಾ ಬಳ್ಳಿ ಸುರುಳಿಯ ಕೆತ್ತನೆಯಂತೂ ಮನೋಹರವಾಗಿದೆ.


ಸಭಾಮಂಟಪದ ಪ್ರಮುಖ ದ್ವಾರದ ಕಕ್ಷಾಸನದಲ್ಲಿ ನೃತ್ಯಗಾರರನ್ನು ಮತ್ತು ವಾದ್ಯಗಾರರನ್ನು ತೋರಿಸಲಾಗಿದೆ. ದೇವಾಲಯ ಪ್ರವೇಶಿಸುವ ದ್ವಾರದಲ್ಲಿ ಹೆಚ್ಚಿನೆಡೆ ಇಂತಹ ಕೆತ್ತನೆಗಳಿರುತ್ತವೆ. ಉಳಿದೆರಡು ದ್ವಾರಗಳ ಕಕ್ಷಾಸನದಲ್ಲಿ ಕೆಲವು ಮಿಥುನ ಶಿಲ್ಪಗಳನ್ನೂ ಕಾಣಬಹುದು.

ಅಂದು - ಇಂದು:


ಕಪ್ಪು ಬಿಳುಪು ಚಿತ್ರಗಳು ತಿಳವಳ್ಳಿ ಶಾಂತೇಶ್ವರ ದೇವಾಲಯದ ಇಸವಿ ೧೮೮೫ ರಲ್ಲಿ ತೆಗೆದ ಚಿತ್ರಗಳು. ವರ್ಣ ಚಿತ್ರಗಳನ್ನು ೨೦೧೧ರಲ್ಲಿ ತೆಗೆಯಲಾಗಿದೆ. ದೇವಾಲಯ ಅಂದು ಇದ್ದಂತೆ ಇದೆ. ಏನೂ ಹಾನಿಯಾಗದೆ ಉಳಿದುಕೊಂಡಿದೆ. ಇದರ ಶ್ರೇಯ ಪ್ರಾಚ್ಯ ವಸ್ತು ಇಲಾಖೆಗೆ ಸಲ್ಲಬೇಕು.


ದೇವಾಲಯದ ಸುತ್ತಲೂ ವಿಶಾಲವಾದ ಸ್ಥಳವಿದ್ದು, ಸ್ವಚ್ಛವಾಗಿರುವುದನ್ನು ಚಿತ್ರದಲ್ಲಿ ಕಾಣಬಹುದು. ಇಂದು ಪರಿಸ್ಥಿತಿ ಹಾಗಿಲ್ಲ. ವಿಶಾಲ ಸ್ಥಳವಂತೂ ಇಲ್ಲ. ಆದರೆ ಹೊರಗಡೆಯ ಹುಲ್ಲನ್ನೆಲ್ಲಾ ತೆಗೆದು ಸ್ವಚ್ಛಗೊಳಿಸಿದರೆ ಚೆನ್ನಾಗಿರುವುದು.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

6 ಕಾಮೆಂಟ್‌ಗಳು:

Team G Square ಹೇಳಿದರು...

Thumba chengide ..... Nice to know about this temple . Sadly its not maintained well .

Aravind GJ ಹೇಳಿದರು...

ಸೊಗಸಾದ ಲೇಖನ. ದೇವಾಲಯದ ಮೇಲೂ ಗಿಡಗಳು ಬೆಳೆದಿದೆ!!

Ashok ಹೇಳಿದರು...

Good snaps and information..{}

Srik ಹೇಳಿದರು...

ಅಬ್ಬಾ! ಎಷ್ಟು ಮಾಹಿತಿ! ಬೊಂಬಾಟ್ ಲೇಖನ.

ಈ ದೇವಾಲಯವನ್ನು ಸಂರಕ್ಷಿಸಲು ಇದರ ಬಗ್ಗೆಗಿನ ಮಾಹಿತಿ ಹೊರ ಪ್ರಪಂಚಕ್ಕೆ ತಿಳಿಯುವುದು ಸಹಕಾರಿಯಾಗುವುದು. ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ.

ಧನ್ಯವಾದಗಳು,
ಶ್ರಿಕ್.

ರಾಜೇಶ್ ನಾಯ್ಕ ಹೇಳಿದರು...

ಧೀರಜ್ ಅಮೃತಾ,
ದೇವಾಲಯದ ನಿರ್ವಹಣೆ ನೋಡಿಕೊಳ್ಳಲು ಯಾರನ್ನೂ ನೇಮಿಸಲಾಗಿಲ್ಲ. ದಿನಾಲೂ ಪೂಜೆ ನಡೆಯುವುದರಿಂದ ದೇವಾಲಯದ ಒಳಗಡೆ ಸ್ವಚ್ಛವಾಗಿದೆ. ಸುತ್ತಲೂ ಚೊಕ್ಕಾಚಾರ ಮಾಡಲು ಊರವರಿಗೆ ಅಸಡ್ಡೆ. ಆ ಹುಲ್ಲುಗಳ ನಡುವೆ ನಡೆಯುವಾಗ ಹಾವುಗಳೆಲ್ಲಾದರೂ ಸಿಕ್ಕೆರೆ ಎಂಬ ಭಯ ಕಾಡುತ್ತಿತ್ತು!

ಅರವಿಂದ್,
ಆ ಗಿಡಗಳನ್ನು ಯಾವಾಗ ತೆಗೆದು ಸ್ವಚ್ಛಮಾಡಲಾಗುತ್ತೋ ಎಂದು ಶಾಂತೇಶ್ವರನಿಗೂ ತಿಳಿದಿರಕ್ಕಿಲ್ಲ!

ಅಶೋಕ್,
ಧನ್ಯವಾದ.

ಶ್ರೀಕಾಂತ್,
ಸಂಬಂಧಪಟ್ಟ ಇಲಾಖೆ ಎಲ್ಲಾ ಮಾಹಿತಿ ನೀಡುತ್ತದೆ. ಅಲ್ಲಿಂದ ಎರವಲು ಪಡೆದ ಮಾಹಿತಿಯನ್ನೇ ಇಲ್ಲಿ ಹಾಕಿದ್ದೇನೆ. ಧನ್ಯವಾದ

jayaramaiah kuppur ಹೇಳಿದರು...

Great pictorial information. I liked very much issues related to history. I am mad after historical forts built by anybody anywhere! I hurts to see the bad upkeep of precious historical temples, forts and their surroundings. Government wastes so much of money for populist schemes and useless programmes. Yet it has no money to spend for upkeep of many of our rich cultural and historical heritage beautifully described here. The BJP as a party brags a lot about our tradition and culture. I hope some of them read your article and do something about it. I greatly enjoyed the article. Thank you very much for your nice blog.