ಸೋಮವಾರ, ಜನವರಿ 23, 2012

ಉಡುಪಿ ಕೃಷ್ಣ ದೇವಾಲಯದಲ್ಲಿ ’ಭೂತ ಕೋಲ’


ಹಟ್ಟಿಗಳಲ್ಲಿರುವ ಗೋವುಗಳನ್ನು ಆಯಾ ಸೀಮೆಯ ದೈವ(ಭೂತ)ಗಳು ರಕ್ಷಿಸುತ್ತವೆ ಎಂದು ಅನಾದಿ ಕಾಲದಿಂದಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನಂಬಿಕೆ. ಈ ದೈವಗಳಿಗೆ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸಿ ತೃಪ್ತಿಪಡಿಸುವುದೂ ಎಂದಿನಂತೆ ನಡೆದು ಬಂದಿರುವ ಪದ್ಧತಿ.


ಉಡುಪಿ ಕೃಷ್ಣನ ದೇವಸ್ಥಾನದಲ್ಲಿ ನಾಲ್ಕು ದೈವಗಳಿವೆ. ದೇವಾಲಯದಲ್ಲಿ ಹಟ್ಟಿಯೂ ಇದೆ ಅಲ್ಲಿ ಗೋವುಗಳೂ ಇವೆ. ಸಮೀಪದಲ್ಲೇ ಈ ನಾಲ್ಕು ದೈವಗಳ ಸನ್ನಿಧಾನವೂ ಇದೆ. ಅನಾದಿ ಕಾಲದಿಂದಲೂ ಕೃಷ್ಣ ದೇವಾಲಯದಲ್ಲಿ ಈ ದೈವಗಳ ವಾಸ್ತವ್ಯವಿದ್ದರೂ ಅವುಗಳಿಗೆ ಎರಡು ವರ್ಷಗಳ ಮೊದಲವರೆಗೂ ಪೂಜೆ ಸಲ್ಲಿಸಿದ್ದೇ ಇಲ್ಲ!


ಮೊದಲು ದೇವಾಲಯದ ಹಟ್ಟಿಯಲ್ಲಿ ಬಹಳ ತೊಂದರೆಗಳಿದ್ದವು. ಗೋವುಗಳಿಗೆ ತೊಂದರೆಯುಂಟಾಗುತ್ತಿದ್ದವು. ನೋಡಿಕೊಳ್ಳುವವರಲ್ಲಿ ಮನಸ್ತಾಪ, ಜಗಳ ಇತ್ಯಾದಿ ಉಂಟಾಗುತ್ತಿದ್ದವು. ಏನಾದರೊಂದು ತೊಂದರೆ ಆಗಾಗ ತಲೆದೋರುತ್ತಲೇ ಇತ್ತು.


ಹಟ್ಟಿ ನೋಡಿಕೊಳ್ಳುವವರೇ ಪ್ರತಿ ಸಂಕ್ರಾಂತಿಗೆ ಈ ದೈವಗಳಿಗೆ ಸಣ್ಣ ಪ್ರಮಾಣದಲ್ಲಿ ಪೂಜೆ ಮಾಡುತ್ತಿದ್ದರು. ಜನವರಿ ೨೦೧೦ರಲ್ಲಿ ಶಿರೂರು ಮಠದ ಸ್ವಾಮಿಗಳು ಪರ್ಯಾಯ ಪೀಠವನ್ನೇರಿದ ಬಳಿಕ ಕೃಷ್ಣ ದೇವಾಲಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ದೇವಾಲಯದ ವತಿಯಿಂದಲೇ ಈ ನಾಲ್ಕು ದೈವಗಳಿಗೆ ವರ್ಷಕ್ಕೊಮ್ಮೆ ಸಂಕ್ರಾಂತಿಯಂದು ಪೂಜೆ ಸಲ್ಲಿಸುವ ಪದ್ಧತಿಯನ್ನು ಆರಂಭಿಸಿದರು.


ಈಗ ಕೃಷ್ಣನ ಹಟ್ಟಿಯಲ್ಲಿ ತೊಂದರೆಗಳಿಲ್ಲ! ಇದು ಕಾಕತಾಳೀಯವೂ ಇರಬಹುದು. ಆದರೆ ದೇವಾಲಯದ ವತಿಯಿಂದಲೇ ದೈವಗಳಿಗೆ ಪೂಜೆ ಸಲ್ಲಿಸುವ ಪರಿಪಾಠ ಆರಂಭವಾದ ಬಳಿಕ ಹಟ್ಟಿಯಲ್ಲಿನ ತೊಂದರೆಗಳು ನಿವಾರಣೆಗೊಂಡವು.


ಗೆಜ್ಜೆಮಲ್ಲಿ, ಪಂಜುರ್ಲಿ, ವರ್ತೆ ಮತ್ತು ಕುಟ್ಟಿ ಇವೇ ಕೃಷ್ಣ ದೇವಾಲಯದಲ್ಲಿ ವಾಸವಾಗಿರುವ ನಾಲ್ಕು ದೈವಗಳು. ಹಟ್ಟಿಯಲ್ಲಿನ ತೊಂದರೆಗಳು ಕಡಿಮೆಯಾದ ಬಳಿಕ ತಮ್ಮ ಪರ್ಯಾಯ ಅವಧಿಯ ಅಂತಿಮ ದಿನಗಳಲ್ಲಿ ಶಿರೂರು ಶ್ರೀಗಳು ಈ ನಾಲ್ಕು ದೈವಗಳಿಗಾಗಿ ’ಭೂತಕೋಲ’ ವೊಂದನ್ನು ನಡೆಸಿಕೊಟ್ಟರು. ಇದು ಕೃಷ್ಣ ದೇವಾಲಯದ ಇತಿಹಾಸದಲ್ಲಿ ನಡೆದ ಪ್ರಥಮ ಭೂತಕೋಲ.


ಅಂತೆಯೇ ಗೆಳೆಯ ಗುರುದತ್ ಈಗ ಕೃಷ್ಣನ ಸೇವೆಯಿಂದ ಬಿಡುಗಡೆ ಹೊಂದಿದ್ದಾನೆ. ಎರಡು ವರ್ಷ ಕಟ್ಟುನಿಟ್ಟಿನ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಪರಿಪಾಲಿಸಿದ ಬಳಿಕ ಈಗ ಮತ್ತೆ ಮೊದಲ ಜೀವನಶೈಲಿಗೆ ಮರಳಲು ಮುಕ್ತನಾಗಿದ್ದಾನೆ. ನಾವೂ ನಿಬ್ಬೆರಗಾಗುವ ರೀತಿಯಲ್ಲಿ ಎರಡು ವರ್ಷದ ಪಥ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾನೆ.


ಶಿರೂರು ಮಠದ ಪರ್ಯಾಯ ಅವಧಿಯ ಸಮಯ ಕಳೆದೆರಡು ವರ್ಷ ಕೃಷ್ಣನ ಪ್ರತಿದಿನದ ಅಲಂಕಾರದ ಜೊತೆಗೆ ದೇವಾಲಯದಲ್ಲಿನ ದೈನಂದಿನ ಆಗುಹೋಗುಗಳ ಚಿತ್ರಗಳನ್ನು ತೆಗೆದು ಶಿರೂರು ಮಠದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ ಮಠಕ್ಕೂ, ಕೃಷ್ಣನಿಗೂ ಮತ್ತು ದೇವಾಲಯದ ದೈನಂದಿನ ಕಾರ್ಯಕ್ರಮಗಳಿಗೂ ಅದ್ಭುತ ಪ್ರಚಾರ ನೀಡುವ ಗುರುದತ್ತನ ವಿನೂತನ ಪ್ರಯತ್ನ ಸಫಲವಾಗಿದೆ.


ಈ ಭೂತಕೋಲದ ಚಿತ್ರಗಳನ್ನೂ ಗುರುದತ್ತನೇ ತೆಗೆದದ್ದು. ಕೆಲವು ಚಿತ್ರಗಳನ್ನು ಮಾತ್ರ ಇಲ್ಲಿ ಪ್ರಕಟಿಸಿದ್ದೇನೆ. ಉಳಿದ ಚಿತ್ರಗಳನ್ನು ಈ ಕೊಂಡಿಯಲ್ಲಿನ ಪುಟದ ಕೊನೆಗೆ ಕಾಣಬಹುದು. ಶಿರೂರು ಮಠದ ಅಂತರ್ಜಾಲ ತಾಣದ ಒಳಹೊಕ್ಕ ಬಳಿಕ ಬಲಭಾಗದಲ್ಲಿ ದೈನಂದಿನ ಚಿತ್ರಗಳ ಕೊಂಡಿ ಇದೆ. ಪರ್ಯಾಯದ ಒಂದೆರಡು ದಿನ ಮೊದಲಿನಿಂದ (ಜನವರಿ ೧೮ರ ಮೊದಲಿನ) ನಡೆದ ಉತ್ಸವಗಳ ಕೆಲವು ಅದ್ಭುತ ಚಿತ್ರಗಳನ್ನು ಅಲ್ಲಿ ಕಾಣಬಹುದು.

5 ಕಾಮೆಂಟ್‌ಗಳು:

sunaath ಹೇಳಿದರು...

ಅದ್ಭುತ ಚಿತ್ರಗಳು. ಥ್ಯಾಂಕ್ಸ.

Wanderer ಹೇಳಿದರು...

ChitragaLu chennagive. Blog kooda tumba chennagide. Nimmannu blogroll madta idini. Nimage ishtavilladiddare dayavittu tiLisi.

Ashok ಹೇಳಿದರು...

Nice information.. I too didn't know about boota kola at Krishna Mutt till now.

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,ಅಶೋಕ್
ಧನ್ಯವಾದ.

ವಾಂಡರರ್,
ಇದರಲ್ಲಿ ಇಷ್ಟವಿರದಿರಲು ಏನು ಕಾರಣವಿರಬಹುದು? ಬ್ಲಾಗ್‍ರೋಲ್ ಮಾಡಿದರೆ ನಾನು ನಿಮಗೆ ಧನ್ಯವಾದ ಹೇಳಬೇಕು. ಧನ್ಯವಾದ.

laxmi prasad ಹೇಳಿದರು...

ಈ ಭೂತಗಳಲ್ಲಿ ಗೆಜ್ಜೆ ಮಲ್ಲಿ ಯ ಫೋಟೋ ಯಾವುದು ?ಗೆಜ್ಜ್ಜೆ ಮಲ್ಲಿ ದೈವದ ಬಗ್ಗೆ ಮಾಹಿತಿ ಇದೆಯೇ ?ಈ ಬಗ್ಗೆ ಯಾರನ್ನು ಸಂಪರ್ಕಿಸಿದರೆ ಮಾಹಿತಿ ಸಿಗಬಹುದು ?ಈ ಬಗ್ಗೆ ಮಾಹಿತಿ ನೀಡಿ pls