ಮಂಗಳವಾರ, ನವೆಂಬರ್ 17, 2009

ನೇತ್ರಾವತಿ ನದಿ ತಿರುವು ಯೋಜನೆ - ೨

ಈ ಯೋಜನೆಯ ರೂವಾರಿ ಪರಮಶಿವಯ್ಯನವರ ಪ್ರಕಾರ ನೇತ್ರಾವತಿ ನದಿಯಲ್ಲಿ ಪ್ರತಿ ವರ್ಷ ೪೬೪.೬೨ ಟಿ.ಎಂ.ಸಿ ನೀರು ಸಮುದ್ರದ ಪಾಲಾಗುತ್ತಿದೆ.ಇದರಲ್ಲಿ ೧೪೨.೪೬ ಟಿ.ಎಂ.ಸಿ ನೀರನ್ನು ಕಾಲುವೆ ಮುಖಾಂತರ ಬಯಲುಸೀಮೆಯ ೫೭ ತಾಲೂಕುಗಳಿಗೆ ಸರಬರಾಜು ಮಾಡಬಹುದೆಂದು ಲೆಕ್ಕಾಚಾರ. ಉಪನದಿಗಳ ಉಗಮಸ್ಥಾನದ ಸಮೀಪ ಅಲ್ಲಲ್ಲಿ ನೀರನ್ನು ತಡೆದು ೩೬ ಜಲಾಶಯಗಳನ್ನು ನಿರ್ಮಿಸಿ ಕಾಲುವೆ ಮುಖಾಂತರ ಸಾಗಿಸುವುದೆಂದು ಅಂದಾಜು. ಈ ಯೋಜನೆಯ ಎರಡು ಪ್ರಮುಖ ಕಾಲುವೆಗಳ ಹರಿವು ಈ ರೀತಿ ಇದೆ.

ಒಂದನೆಯ ಕಾಲುವೆಯ ಪ್ರಕಾರ ೯೦.೭೩ ಟಿ.ಎಂ.ಸಿ ನೀರನ್ನು ಪಶ್ಚಿಮದಿಂದ ಪೂರ್ವಕ್ಕೆ ಹರಿಸಿ ಹಾಸನ, ಚಿಕ್ಕಮಗಳೂರು, ಮಂಡ್ಯ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಪ್ರದೇಶಗಳಿಗೆ ವಿತರಿಸುವುದು. ಸಮುದ್ರ ಮಟ್ಟದಿಂದ ೯೨೨ ಮೀಟರ್ ಎತ್ತರದಲ್ಲಿ ಕುದುರೆಮುಖದ ಗಂಗಡಿಕಲ್ಲು ಗುಡ್ಡದಿಂದ ಕುದುರೆಮುಖ, ಕೃಷ್ಣಗಿರಿ, ಹಿರಿಮರಿಗುಪ್ಪೆ, ಎಳನೀರು ಘಾಟಿ, ದಿಡುಪೆ, ಬಂಡಾಜೆ, ಚಾರ್ಮಾಡಿ, ನೆರಿಯ, ಶಿಶಿಲ ಮೂಲಕ ಶಿರಾಡಿ ಘಾಟಿಯ ಎತ್ತಿನಹೊಳೆಯವರೆಗೆ ಬಂದು ಅತ್ತ ಸೂರಲ್ಪಿ ಬೆಟ್ಟದಿಂದ ಪ್ರಾರಂಭವಾಗುವ ಇನ್ನೊಂದು ಕಾಲುವೆ ಕುಮಾರ ಪರ್ವತ, ಬಿಸಿಲೆ ಘಾಟಿ, ಯಸಳೂರು ಅರಣ್ಯ ವಲಯದಿಂದ ಶಿರಾಡಿ ಘಾಟಿಯವರೆಗೆ ಬಂದು ಈ ಕಾಲುವೆಯನ್ನು ಸೇರುತ್ತದೆ. ಈ ಎರಡೂ ಕಾಲುವೆಗಳು ಒಟ್ಟಾಗಿ ಸಕಲೇಶಪುರದ ಕಡೆಗೆ ಹರಿಯುತ್ತದೆ. ಸಕಲೇಶಪುರದಿಂದ ೧೬ ಕಿ.ಮಿ ದೂರದಲ್ಲಿ ಈ ಕಾಲುವೆಗೆ ಹೇಮಾವತಿ ನದಿ ಅಡ್ಡವಾಗುತ್ತದೆ. ಹೇಮಾವತಿಗೆ, ನೇತ್ರಾವತಿಯ ಕಾಲುವೆ ನೀರು ಸೇರದಂತೆ ನದಿಯ ಮೇಲೆ ಸೇತುವೆ ಕಟ್ಟಿ ಬೃಹತ್ ಗಾತ್ರದ ಕೊಳವೆಗಳ ಮೂಲಕ ಹರಿಸಲಾಗುತ್ತದೆ.

ಎರಡನೇ ಕಾಲುವೆಯ ಪ್ರಕಾರ ಪಶ್ಚಿಮದಿಂದ ಉತ್ತರಕ್ಕೆ ೫೧.೭೦ ಟಿ.ಎಂ.ಸಿ ನೀರನ್ನು ಚಿತ್ರದುರ್ಗ, ತುಮಕೂರು, ದಾವಣಗೆರೆ, ಬಳ್ಳಾರಿ, ಕೋಲಾರ ಜಿಲ್ಲೆಗಳಿಗೆ ರವಾನಿಸಲಾಗುವುದು. ಸಮುದ್ರ ಮಟ್ಟದಿಂದ ೮೫೦ ಮೀಟರ್ ಎತ್ತರದಲ್ಲಿ ಕೋಲ್ಕಲ್ಲು ಬೆಟ್ಟದಿಂದ ಪ್ರಾರಂಭವಾಗುವ ಕಾಲುವೆ ಪುಷ್ಪಗಿರಿ, ದೊಡ್ಡಬೆಟ್ಟ, ಏಣಿಕಲ್ಲು ಬೆಟ್ಟಗಳನ್ನು ದಾಟಿ ನಿಶಾನೆಬೆಟ್ಟ, ಅರೆಬೆಟ್ಟ, ವೆಂಕಟಗಿರಿಯಲ್ಲಿ ಬಂದು ನಡಹಳ್ಳದಿಂದ ಪ್ರಾರಂಭವಾಗಿ ಕುದುರೆಮುಖ ಸಂಸೆಗಳೆಡೆಗೆ ಹರಿದುಬರುವ ಇನ್ನೊಂದು ಕಾಲುವೆಗೆ ಸೇರಿ ಅರಸಿನಮಕ್ಕಿ ಗುಡ್ಡದಲ್ಲಿ ಒಟ್ಟಾಗಿ ಮುಂದಕ್ಕೆ ಹರಿದು ಹೋಗುತ್ತದೆ. ಅಲ್ಲಿ ಈ ಕಾಲುವೆಗೆ ಭದ್ರಾ ನದಿಯು ಅಡ್ಡವಾಗುತ್ತದೆ. ಬಾಳೆಹೊನ್ನೂರು ಬಳಿ ಭದ್ರಾ ನದಿಗೆ ಸೇತುವೆ ಕಟ್ಟಿ ಕೊಳವೆಗಳ ಮೂಲಕ ಸಾಗಿಸಲಾಗುವುದು.

ಈ ಎರಡೂ ಕಾಲುವೆಗಳಿಗೆ ಬೇಕಾದಲ್ಲಿ ಜಲಾಶಯ ನಿರ್ಮಿಸುವಲ್ಲಿ ರಕ್ಷಿತಾರಣ್ಯವಿದೆ. ಕುದುರೆಮುಖ, ಕೃಷ್ಣಗಿರಿ, ಹಿರಿಮರಿಗುಪ್ಪೆ, ಬಲ್ಲಾಳರಾಯನ ದುರ್ಗ, ಬಂಡಾಜೆ ಜಲಪಾತ, ಹೊಸ್ಮನೆ ಗುಡ್ಡ, ಬಾಳೆಗುಡ್ಡ, ದೊಡ್ಡೇರಿ ಬೆಟ್ಟ, ಏರಿಕಲ್ಲು, ಕುಂಭಕಲ್ಲು, ಮಿಂಚುಕಲ್ಲು, ಸೋಮನಕಾಡು, ಬಾರಿಮಲೆ, ಬಾಂಜಾರುಮಲೆ, ಇಳಿಮಲೆ, ಅಂಬಟಿಮಲೆ, ಅಮೇದಿಕಲ್ಲು, ಎತ್ತಿನಭುಜ, ದೇವರಮಲೆ, ಉಳಿಯಮಲೆ, ಮುಗಿಲಗಿರಿ, ಅರಮನೆ ಬೆಟ್ಟ, ಬೆಂಗಲಾರ್ ಬೆಟ್ಟ, ವೆಂಕಟಗಿರಿ, ಅರೆಬೆಟ್ಟ, ಕನ್ನಡಿಕಲ್ಲು, ಏಣಿಕಲ್ಲು ಬೆಟ್ಟ, ಪಟ್ಲ ಬೆಟ್ಟ, ಕುಮಾರಪರ್ವತ ಇಂತಹ ಪಶ್ಚಿಮ ಘಟ್ಟದ ಪ್ರಮುಖ ಬೆಟ್ಟಗಳೆಲ್ಲ ಹಾನಿಗೊಳಗಾಗುವ ಸಂಭವಗಳಿವೆ.

ನೇತ್ರಾವತಿಯ ಜಲನಾಡಿಗಳಾದ ಬಂಗ್ರಬಲಿಗೆ ಜಲಪಾತ, ಬ್ರಹ್ಮರಗುಂಡಿ, ಬೊಳ್ಳೆ ಜಲಪಾತ, ಆನಡ್ಕ ಜಲಪಾತ, ದಕ್ಷಿಣ ಕನ್ನಡ ಜಿಲ್ಲೆಯ ಅತಿ ಎತ್ತರದ ಜಲಪಾತವಾದ ಬಂಡಾಜೆ ಜಲಪಾತ, ಚಾರ್ಮಾಡಿ ಘಾಟಿಯ ಕಲ್ಲಗುಂಡಿ ಜಲಪಾತ, ಬಾಂಜಾರು ಮಲೆಯ ಕಲ್ಲರ್ಬಿ ಜಲಪಾತ, ದೊಂಡೋಲೆ, ಕಪಿಲಾ, ಪಾರ್ಪಿಕಲ್ಲು, ಕೂಡಳ್ಳ ಜಲಪಾತ, ಶಿರಾಡಿಯ ಕನ್ನಿಕಾಯ ಗುಂಡಿ, ಬಿಸಿಲೆ ಘಾಟಿ ಸಮೀಪದ ಮಲ್ಲಳ್ಳಿ ಜಲಪಾತಗಳು ಮರೆಯಾಗುವ ಸಾಧ್ಯತೆ ಇದೆ.

ಘಾಟಿಗಳುದ್ದಕ್ಕೂ ಪರ್ವತಗಳನ್ನು ಕೊರೆದು ಅರಣ್ಯ ಪ್ರದೇಶವನ್ನು ಸಿಗಿದು ನೀರನ್ನು ಸಂಗ್ರಹಿಸುವುದೆಂದರೆ ಚಾರ್ಮಾಡಿ ಘಾಟಿಯಲ್ಲಿ ಮಂಗಳೂರು ಚಿಕ್ಕಮಗಳೂರು ರಾಜ್ಯ ಹೆದ್ದಾರಿಗೂ, ಶಿರಾಡಿ ಘಾಟಿಯಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೂ, ರೈಲ್ವೇ ರಸ್ತೆಗೂ ಹಾನಿಯಾಗಬಹುದು. ಈ ಯೋಜನೆಯಿಂದ ೫,೫೫೦ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ.

ಈ ಕಾಲುವೆ, ಜಲಾಶಯ ನಿರ್ಮಾಣ, ಪೈಪ್ ಲೈನ್ ಗಳಿಗೆ ಪರ್ವತಗಳನ್ನು ಸೀಳಲು ಬೃಹತ್ ಯಂತ್ರಗಳು ಕಾಡಿನೊಳಗೆ ಹೋಗಬೇಕಾದರೆ ಅರಣ್ಯದುದ್ದಕ್ಕೂ ರಸ್ತೆ ನಿರ್ಮಾಣವಾಗಬೇಕು. ಯಾವುದೇ ಅರಣ್ಯ ಪರ್ವತಗಳಿಗೆ ರಸ್ತೆ ನಿರ್ಮಾಣವಾಯಿತೆಂದರೆ ಅಲ್ಲಿನ ಜೀವವೈವಿಧ್ಯಗಳು, ವನ್ಯಜೀವಿಗಳು, ಮರಗಿಡಗಳು ನಾಶವಾದವೆಂದೇ ಅರ್ಥ. ಕಾಮಗಾರಿ ನಡೆಯುತ್ತಿರುವಾಗ ಪರ್ವತಗಳ ಕಲ್ಲು, ಮಣ್ಣನ್ನು ರಾಶಿ ಹಾಕಿದಾಗ ಅಗಾಧ ಪ್ರಮಾಣದ ಮಳೆಕಾಡು ನಾಶವಾಗುತ್ತದೆ. ಈ ಮಣ್ಣಿನ ರಾಶಿ ಕೆಲವು ಚಿಕ್ಕ ತೊರೆ ಹಳ್ಳಗಳ ಮೇಲೆ ಬಿದ್ದು ಆ ಹಳ್ಳಗಳು ಶಾಶ್ವತವಾಗಿ ಮುಚ್ಚಿಹೋಗುತ್ತವೆ. ಮಣ್ಣಿನ ರಾಶಿ ನದಿಯನ್ನು ಸೇರಿ ಹೂಳು ತುಂಬಿ ನದಿಯ ಆಳ ಕಡಿಮೆಯಾಗಬಹುದು. ಕಾಡಿನೊಳಗೆ ಇರುವ ಚಿಕ್ಕ ಚಿಕ್ಕ ಹಳ್ಳಗಳು ನದಿಯ ಮಟ್ಟಿಗೆ ತುಂಬಾ ಮಹತ್ವದಾಗಿದೆ. ಮಳೆನೀರನ್ನು ನೆಲದಲ್ಲಿ ಇಂಗಿಸಿಕೊಂಡಿರುವಂತಹ ಶೋಲಾಕಾಡುಗಳ ಈ ಹಳ್ಳಗಳು ಮಳೆಗೆ ಮೂಲಾಧಾರವಾಗಿರುತ್ತದೆ.

ನದಿಯನ್ನು ತಡೆದಾಗ ನದಿನೀರಿನ ಖನಿಜಾಂಶಗಳು, ಲವಣಾಂಶಗಳು ಸಮುದ್ರವನ್ನು ಸೇರದಿದ್ದರೆ ಜಲಚರ ಜೀವಿಗಳಿಗೆ ಬೇಕಾದ ಪೋಷಕಾಂಶಗಳು ಕಡಿಮೆಯಾಗಿ ಅಸಂಖ್ಯಾತ ಮೀನುಗಳ ನಾಶವಾದರೆ ಬೆಸ್ತರ ಬದುಕು ದುಸ್ತರವಾದೀತು. ಕಾಡೊಳಗೆ ಹಾಯಾಗಿ ಓಡಾಡುತ್ತಿರುವ ವನ್ಯ ಜೀವಿಗಳು ಬದುಕಲು ನೆಲೆಯಿಲ್ಲದೆ ಕಾಡಿನಿಂದ ನಾಡಿಗೆ ದಾಳಿ ಇಡಬಲ್ಲವು. ಪರ್ವತಗಳ ಅಂಚುಗಳಲ್ಲಿ ನೀರಿನ ಕಾಲುವೆಗಳನ್ನು ನಿರ್ಮಿಸಿದಾಗ ಭೂಕುಸಿತ ಸಂಭವಿಸಲೂಬಹುದು. ಈ ಭೂಕುಸಿತದಿಂದ ಕಾಲುವೆಯ ನೀರು ರಭಸವಾಗಿ ಹರಿದು ಹತ್ತಿರದ ಹಳ್ಳಿಗಳ ಗದ್ದೆ, ತೋಟ, ಮನೆಗಳಿಗೆ ಹಾನಿಯಾಗಬಹುದು.

ಹಾಲು ಕುಡಿಯುತ್ತಿದ್ದ ಮಗುವಿನ ಕೈಯಿಂದ ಹಾಲಿನ ಲೋಟವನ್ನು ಕಿತ್ತು ಇನ್ನೊಂದು ಮಗುವಿಗೆ ಕೊಡುವಾಗ ಹಾಲಿನ ಲೋಟ ಕೆಳಗೆ ಬಿದ್ದು ಚೆಲ್ಲಿ ಹೋಗಿ ಕೊನೆಗೆ ಹಾಲು ಕೊಟ್ಟ ಹಸುವನ್ನೇ ಕೊಂದುಬಿಟ್ಟರೆ ಹೇಗಾಗುವುದೋ ಹಾಗೇ ಈ ಯೋಜನೆ. ಬಯಲುಸೀಮೆಗೆ ನೀರಿನ ಅಭಾವವಿದೆಯೆಂದು ನದಿಯನ್ನು ಅತ್ತಕಡೆ ತಿರುಗಿಸಿ, ಕೊನೆಗೆ ಬಯಲುಸೀಮೆಗೂ ನೀರಿಲ್ಲ, ಕರಾವಳಿಗೂ ನೀರಿಲ್ಲದಂತಾಗಿ, ನೇತ್ರಾವತಿ ನದಿಯನ್ನೇ ಕೊಂದು ಬಿಡುವ ಯೋಜನೆಯಿದು.

ಕಾಡಿರುವಲ್ಲಿ ಕಾಡಿರಬೇಕು. ನದಿ ಸಹಜವಾಗಿ ಹರಿಯುವಲ್ಲೇ ನದಿ ಇರಬೇಕು. ಅದು ಬಿಟ್ಟು ಈ ಕಾಡು, ಈ ನದಿ ಇದೆಲ್ಲಾ ತಮ್ಮ ವೈಯುಕ್ತಿಕ ಆಸ್ತಿ ಎಂದು ಅಟ್ಟಹಾಸಗೈಯುವುದರಿಂದ ಮುಂದೆ ಆಗಲಿರುವ ಅನಾಹುತಗಳಿಗೆ ನಾವೇ ಕಾರಣವಾಗಬೇಕಾದೀತು. ಹೇಗೆ ನಮಗೆ ನದಿಗಳನ್ನು ಸೃಷ್ಟಿಸಲು ಅಸಾಧ್ಯವೋ ಅದೇ ರೀತಿ ನದಿಗಳನ್ನು ತಿರುಗಿಸಲು, ಜೋಡಿಸಲು ಅಧಿಕಾರವಿಲ್ಲ. ನಗರದ ಹೈಟೆಕ್ ಕಟ್ಟಡಗಳ ಹವಾ ನಿಯಂತ್ರಿಯ ಕೊಠಡಿಗಳಲ್ಲಿ ಕುಳಿತು ಪರಿಸರ ಉಳಿಸಿ, ಹಸಿರು ಉಳಿಸಿ, ಕಾಡು ಬೆಳೆಸಿ ಎಂಬ ಚರ್ವಿತ ಚರ್ವಣ ಘೋಷಣೆಗಳನ್ನು ಬದಿಗಿಟ್ಟು ಅರಣ್ಯ, ಪರ್ವತ, ನದಿಗಳನ್ನು ಅವುಗಳ ಯಥಾಸ್ಥಿತಿಯಲ್ಲಿ ಬಿಟ್ಟು, ಅವುಗಳ ನೆಮ್ಮದಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದೇ ನೈಜ ಪರಿಸರ ಸೇವೆ.

ಪೂಜ್ಯ ಭಾವನೆಯಿಂದ ನೋಡಬೇಕಾದ ನದಿಗೆ ನಮ್ಮ ಸಿವಿಲೈಝೇಶನ್, ಮೋಡರ್ನೈಝೇಶನ್ ಎಂಬ ತ್ಯಾಜ್ಯ ವಸ್ತುಗಳನ್ನು ಎರಚಿ ಇಷ್ಟಬಂದಲ್ಲಿಗೆ ನದಿಯನ್ನು ಕೊಂಡೊಯ್ಯುತ್ತೇವೆ ಎನ್ನಲು ನೇತ್ರಾವತಿ ನದಿ ಆಟಿಕೆಯ ವಸ್ತುವಲ್ಲ. ಜನಾಭಿಪ್ರಾಯಕ್ಕೆ ಮಣಿಯದ, ಉಣ್ಣುವ ಬಟ್ಟಲಿಗೆ ವಿಷ ಮೆತ್ತುವ ಈ ಯೋಜನೆಯನ್ನು ಒಕ್ಕೊರಲಿನಿಂದ ಪ್ರತಿಭಟಿಸುವ ಅನಿವಾರ್ಯತೆ ಒದಗಿಬಂದಿದೆ.

ಕರಾವಳಿಯ ಬದುಕಿಗೊಂದು ರೂಪುರೇಷೆ ಕೊಟ್ಟಂತಹ ನೇತ್ರಾವತಿಯ ದಿಕ್ಕನ್ನೇ ಬದಲಿಸಿ ಅಡವಿಯನ್ನು ಕೆಡವಿ ಬಲಿ ಕೊಡುವುದರಿಂದ ಬರವಿಲ್ಲದ ಕರಾವಳಿ ಜಿಲ್ಲೆಗೆ ಬರಗಾಲದ ಆಮಂತ್ರಣ ಬೇಕೇ? ಅಸಂಬದ್ಧ, ಅವ್ಯವಹಾರಿಕ, ಪರಿಸರ ವಿನಾಶಕ ಈ ಯೋಜನೆಯಿಂದ ಅನಾವಶ್ಯಕವಾಗಿ ನದಿಯೊಂದನ್ನು ನಾಶಗೈಯುವ ಅಗತ್ಯವಿದೆಯೇ? ಕಾವೇರಿ ಜಲವಿವಾದದಿಂದ ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ಇನ್ನೂ ಜೀವಂತವಾಗಿರುವಾಗ ಈ ಯೋಜನೆಯಿಂದ ಕರ್ನಾಟಕದೊಳಗೇ ಜಿಲ್ಲೆ ಜಿಲ್ಲೆಗಳ ನಡುವೆ ವ್ಯಾಜ್ಯ ಹರಡಬೇಕೇ? ೧೨,೫೦೦ ಕೋಟಿ ರೂಪಾಯಿ ವ್ಯಯಮಾಡಿ ನೇತ್ರಾವತಿ ನದಿಯನ್ನು ಗಲ್ಲಿಗೇರಿಸಿ ಕೊಲ್ಲುವ ಅಗತ್ಯವಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದವರು ನಾವು-ನೀವು ಎಲ್ಲರೂ.

ದಿನೇಶ್ ಹೊಳ್ಳ.

5 ಕಾಮೆಂಟ್‌ಗಳು:

sunaath ಹೇಳಿದರು...

ಯಾವುದೇ ನದಿಯ ಹರಿವನ್ನು ತಿರುಗಿಸಿದಾಗಲೂ ಆಗಬಹುದಾದ ಭೀಕರತೆಯ ವಿವರಗಳನ್ನು ದಿನೇಶ ಹೊಳ್ಳ ಕ್ಲುಪ್ತವಾಗಿ ನೀಡಿದ್ದಾರೆ. ಅಭಿನಂದನೆಗಳು.

ಸಿಂಧು Sindhu ಹೇಳಿದರು...

ಪ್ರಿಯ ರಾಜೇಶ್,

ನಾವು ಕೂತ ಕೊಂಬೆಯನ್ನೇ ಕಡಿಯುವ ಈ ಕೆಲಸವನ್ನ ಮನುಷ್ಯ ಕುಲ ಬಿಟ್ಟು ಇನ್ಯಾವ ಜೀವಿಗಳೂ ಮಾಡುವುದಿಲ್ಲ.
ಈ ಲೇಖನವನ್ನು ನಾನು ಪುಸ್ತಕದಲ್ಲಿ ಓದಿರಲಿಲ್ಲ. ಪರಿಚಯಿಸಿದ್ದಕ್ಕೆ ತುಂಬ ಧನ್ಯವಾದಗಳು.
ಈ ಬಗೆಗಿನ ಯಾವುದೇ ಹೋರಾಟ ಅಥವಾ ಸಂಚಲನೆಗೆ ನನ್ನ ಎಲ್ಲ ಬೆಂಬಲ. ನಿಮ್ಮ ಯಾವುದೇ ಚಟುವಟಿಕೆಗಳಿ್ಗೆ ನನಗೂ ಒಂದು ಮೈಲ್ ಹಾಕಿ. ನನ್ನ ಮಿತಿಯಲ್ಲಿ ಅಥವಾ ಅದನ್ನು ಮೀರಿಯಾದರೂ ಏನನ್ನು ಮಾಡಲಾಗುತ್ತೋ ಅದನ್ನು ಮಾಡುತ್ತೇನೆ.
ದಿನೇಶರಿಗೆ ನನ್ನ ವಂದನೆಗಳನ್ನು ತಿಳಿಸಿ.

ಪ್ರೀತಿಯಿಂದ
ಸಿಂಧು

ಹಂಸಾನಂದಿ ಹೇಳಿದರು...

ಚಿತ್ರವನ್ನೂ ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಮಳೆಗಾಲದಲ್ಲಷ್ಟೇ ಹೆಚ್ಚಾದ ನೀರನ್ನು ಹೇಮಾವತಿಯ ಕಡೆಗೆ ಕಳಿಸಬಹುದಾದರೆ, ಈ ಯೋಜನೆ ಉಪಯುಕ್ತ ಆಗಬಹುದು ಅಲ್ಲವೇ? ಘಟ್ಟದ ಪಶ್ಚಿಮದ ಕಡೆ ಆಗುವಷ್ಟು ಮಳೆ ಪೂರ್ವದ ಕಡೆಯಲ್ಲಿ ಆಗದಲ್ಲ? ಪರಿಸರಕ್ಕೆ ಅತಿ ಕಡಿಮೆ ಹಾನಿ ಮಾಡಿ, ಪ್ರವಾಹದ ಸಮಯದಲ್ಲಷ್ಟೇ ನೀರನ್ನು ಸಂಗ್ರಹಿಸುವುದಾದರೆ ಮಾತ್ರ, ಅದರಲ್ಲೇನಾದರೂ ಅರ್ಥ ಇರಬಹುದು.

National Water Development Agency ಯ ಪುಟದಲ್ಲಿ ಇರುವ ವಿವರ ಏನೇನೂ ಸಾಲದು.

Srik ಹೇಳಿದರು...

ಬಹಳ ಗಂಭೀರವಾದ ಚಿಂತನೆಯನ್ನು ಪ್ರಚೋದಿಸುವ ಲೇಖನ. ನಮ್ಮ ಬರದ ಬಯಲು ಸೀಮೆಗೆ ನೇತ್ರಾವತಿ ಹರಿದು ಬರುತ್ತಾಳೆಂದರೆ ಸಂತೋಷದ ಸಂಗತಿಯೇ. ಆದರೆ ಅದರಿಂದಾಗುವೆ ವಿನಾಶ ನಮ್ಮ ಅವನತಿಯ ಮುನ್ನುಡಿ ಎಂದರೆ ತಪ್ಪಾಗಲಾರದು. ಇಂತಹ ಲೇಖನಕ್ಕೆ ಆದಷ್ಟೂ ಪ್ರಚಾರ ಕೊಟ್ಟು ಸಂಬಂಧಿಸಿದ ಅಧಿಕಾರಿಗಳ ಕಣ್ತೆರೆಸುವಂತೆ ಮಾಡುವುದು ನಮ್ಮ ಮುಂದಿರುವ ಜವಾಬ್ದಾರಿ!

ಉತ್ತಮ ಲೇಖನ ಕೊಟ್ಟ ದಿನೇಶರಿಗೆ ನಮಸ್ಕಾರಗಳು.

ಪ್ರಮೋದ ನಾಯಕ ಹೇಳಿದರು...

ರಾಜೇಶ್ ರವರೇ,
ಇಂತಹ ಲೇಖನವನ್ನು ಓದಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ನೀರಿನ ಕೊರತೆಯಿದ್ದವರಿಗೆ ನೀರನ್ನು ಒದಗಿಸಲು ರೂಪಿಸಿದ ಯೋಜನೆಯಾಗಿದ್ದರೂ ಸಹ ಇಷ್ಟೊಂದು ಕಾಡಿನ ನಾಶ ಉಚಿತವಲ್ಲವೆಂದು ತೋರುತ್ತಿದೆ.