ಭಾನುವಾರ, ಜುಲೈ 05, 2009

ಕದಂಬೇಶ್ವರ ದೇವಾಲಯ - ರಟ್ಟೀಹಳ್ಳಿ


೦೪-೦೧-೨೦೦೯.

ರಟ್ಟೀಹಳ್ಳಿಯಲ್ಲಿ ನಾಲ್ಕೈದು ಶಿವ ದೇವಸ್ಥಾನಗಳಿವೆ. ಇವುಗಳಲ್ಲಿ ಕದಂಬೇಶ್ವರ ದೇವಾಲಯ ಮಾತ್ರ ಪ್ರಾಚೀನ ಕಾಲದ್ದು. ಉಳಿದವುಗಳು ಆಧುನಿಕ ದೇವಾಲಯಗಳು. ಈ ದೇವಾಲಯವನ್ನೂ ಒತ್ತುವರಿಯ ಸಮಸ್ಯೆ ಕಾಡುತ್ತಿದೆ. ದೇವಸ್ಥಾನದ ಸಮೀಪವೇ ಮಠ ಮತ್ತು ಇನ್ನೊಂದು ಪಾರ್ಶ್ವದಲ್ಲಿ ಮನೆಗಳು ಇವೆ. ಮುಂಭಾಗದಲ್ಲಿ ಮತ್ತು ಇನ್ನೊಂದು ಪಾರ್ಶ್ವದಲ್ಲಿ ಸ್ವಲ್ಪ ಜಾಗವಿದ್ದು ಪುರಾತತ್ವ ಇಲಾಖೆ ಸಣ್ಣ ಉದ್ಯಾನವನ್ನು ನಿರ್ಮಿಸಿದೆ.


ಕದಂಬೇಶ್ವರ ದೇವಾಲಯವು ತ್ರಿಕೂಟಾಚಲವಾಗಿದ್ದು, ಎಡ ಪಾರ್ಶ್ವದ ಗೋಪುರ ಬಿದ್ದುಹೋಗಿದೆ. ಉಳಿದೆರಡು ಗೋಪುರಗಳು ದೃಢವಾಗಿದ್ದು ಸುಂದರ ಕೆತ್ತನೆಗಳನ್ನು ಹೊಂದಿವೆ. ಪ್ರಮುಖ ಗೋಪುರದ ಮುಂಭಾಗದಲ್ಲಿ ಸಳ ಹುಲಿಯನ್ನು ಕೊಲ್ಲುವ ಕೆತ್ತನೆ ಇದೆ ಮತ್ತು ದೇವಾಲಯ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗೃಹಗಳನ್ನು ಹೊಂದಿದೆ. ದಿನಾಲೂ ಪೂಜೆ ನಡೆಯುತ್ತದೆ. ಮುಖಮಂಟಪದಲ್ಲಿ ೧೬ ಕಂಬಗಳಿದ್ದು, ಹೊರಗೋಡೆ ಅರ್ಧಕ್ಕರ್ಧ ಕುಸಿದುಬಿದ್ದಿದೆ.


೫ ತೋಳಿನ ದ್ವಾರವುಳ್ಳ ನವರಂಗದಲ್ಲಿ ನಾಲ್ಕು ಕಂಬಗಳಿದ್ದು, ನಂದಿಯ ದೊಡ್ಡ ಮೂರ್ತಿಯೊಂದಿದೆ. ಅಂತರಾಳದ ದ್ವಾರಕ್ಕೆ ಜಾಲಂಧ್ರಗಳಿದ್ದು ಮೇಲ್ಭಾಗದಲ್ಲಿ ಸುಂದರ ಕೆತ್ತನೆಗಳಿವೆ. ಇಕ್ಕೆಲಗಳಲ್ಲಿ ಕವಾಟಗಳಿದ್ದು, ಅವುಗಳಲ್ಲಿ ಯಾವ ಮೂರ್ತಿಗಳಿದ್ದವೇನೋ... ಈಗ ಖಾಲಿಯಾಗಿವೆ. ಪ್ರಮುಖ ಗರ್ಭಗುಡಿಯಲ್ಲಿ ಸುಂದರ ಶಿವಲಿಂಗವಿದೆ. ಪ್ರಮುಖ ಗರ್ಭಗುಡಿಯ ದ್ವಾರ ಕಮಾನಿನ ಆಕಾರದಲ್ಲಿರುವುದು ಗಮನಾರ್ಹ. ನವರಂಗದ ದ್ವಾರಕ್ಕೆ ಬೀಗ ಹಾಕಿದ್ದರಿಂದ ಉಳಿದೆರಡು ಗರ್ಭಗುಡಿಗಳಲ್ಲಿ ಏನಿತ್ತೋ ಇಲ್ಲವೋ ಎಂದು ತಿಳಿದುಕೊಳ್ಳಲಾಗಲಿಲ್ಲ.


ಈ ದೇವಾಲಯದಲ್ಲಿ ನನ್ನ ಗಮನ ಸೆಳೆದದ್ದು ನವರಂಗದ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರಂತೆ ಇದ್ದ ಸುಮಾರು ೭ ಅಡಿ ಎತ್ತರದ ೨ ಅತ್ಯದ್ಭುತ ಮೂರ್ತಿಗಳು. ಹೊರನೋಟಕ್ಕೆ ಎಲ್ಲಿಂದಲೋ ತಂದು ಅಲ್ಲಿರಿಸಲಾಗಿದೆಯೆಂಬಂತೆ ತೋರುತ್ತದೆ. ಆದರೆ ಈ ಮೂರ್ತಿಗಳನ್ನು ಅದೇ ಜಾಗದಲ್ಲಿ ಕೆತ್ತಿ ಕೂರಿಸಲಾಗಿರುವುದು ಸರಿಯಾಗಿ ಗಮನಿಸಿದರೆ ತಿಳಿಯುತ್ತದೆ (ನನ್ನ ಊಹೆ ತಪ್ಪು ಇರಬಹುದು).


ಈ ಮೂರ್ತಿಗಳಿಗಿರುವ ಪೋಷಾಕು, ಕಿರೀಟ, ತಲೆಯ ಮೇಲೆ ಹಿಂಭಾಗದಲ್ಲಿರುವ ಅಸಾಮಾನ್ಯ ಕೆತ್ತನೆ, ಆಭರಣಗಳು, ೪ ಕೈಗಳಲ್ಲಿರುವ ಆಯುಧಗಳು ಇತ್ಯಾದಿಗಳನ್ನು ನೋಡಿದರೆ ಯಾವುದೋ ದೇವರ ಮೂರ್ತಿಯಿರಬಹುದು ಎಂದೆನಿಸುತ್ತದೆ. ಈ ೨ ಮೂರ್ತಿಗಳ ಮುಖದಲ್ಲಿರುವ ಕಾಂತಿ ಮತ್ತು ಅಂದ ಹೊರಸೂಸುವ ನೈಜತೆಯನ್ನು ನೋಡಿಯೇ ಅನುಭವಿಸಬೇಕು. ಆದರೂ ಕೈಗಳು ಭಗ್ನಗೊಂಡಿದ್ದು, ಮುಖದ ತುಂಬೆಲ್ಲಾ ಯಾವುದೋ ಆಯುಧದಿಂದ ತಿವಿದ ಗುರುತು ಕಾಣಿಸುತ್ತದೆ. ಮುಸಲ್ಮಾನ ದಂಗೆಕೋರರ ಹಾವಳಿಯ ಪ್ರಭಾವ ಇರಬಹುದು. ನನ್ನ ಊಹೆ ಪ್ರಕಾರ ಇದೊಂದು ಹೊಯ್ಸಳ ದೇವಾಲಯವಿರಬಹುದು. ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲೂ ಸಿಗಲಿಲ್ಲ. ಓದುಗರಿಗೆ ಎಲ್ಲಾದರೂ ಮಾಹಿತಿ ಇದ್ದರೆ ದಯವಿಟ್ಟು ತಿಳಿಸುವಿರಾ?

2 ಕಾಮೆಂಟ್‌ಗಳು:

Aravind GJ ಹೇಳಿದರು...

ಈ ದೇವಾಲಯವನ್ನು ಹೊಯ್ಸಳ ರಾಜ ವೀರ ಭಲ್ಲಾಳನ ಕಾಲದಲ್ಲಿ ಕ್ರಿ.ಶ. ೧೧೭೪ ರಲ್ಲಿ ನಿರ್ಮಿಸಲಾಯಿತು...
ಆದರೆ ಕೆಲವು ಉಲ್ಲೇಖಗಳು ಚಾಲುಕ್ಯರು ಕಟ್ಟಿರಬಹುದೆಂದು ಹೇಳುತ್ತವೆ.

ಒಟ್ಟಿನಲ್ಲಿ ಯಾವುದೂ ಖಚಿತವಲ್ಲ!!

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ಮಾಹಿತಿಗಾಗಿ ಧನ್ಯವಾದ. ಬಹಳಷ್ಟು ದೇವಾಲಯಗಳನ್ನು ಚಾಲುಕ್ಯರು ನಿರ್ಮಿಸಿದ್ದು ನಂತರ ಹೊಯ್ಸಳರು ಅಭಿವೃದ್ಧಿಪಡಿದಿದ್ದಾರೆ. ಇಲ್ಲೂ ಹಾಗೇ ಇರಬಹುದು.