ಭಾನುವಾರ, ಮೇ 31, 2009

ಅಘೋರೇಶ್ವರ ದೇವಾಲಯ - ಇಕ್ಕೇರಿ


೧೭-೦೨-೨೦೦೮. ಸುಮಾರು ೮೦ ವರ್ಷಗಳ ಕಾಲ ಕೆಳದಿ ಸಾಮ್ರಾಜ್ಯದ ದ್ವಿತೀಯ ರಾಜಧಾನಿಯಾಗಿ ಮೆರೆದಿದ್ದ ಊರು ಇಕ್ಕೇರಿ. ಕೆಳದಿಯಿಂದ ಇಕ್ಕೇರಿಗೆ ರಾಜಧಾನಿಯನ್ನು ಸ್ಥಳಾಂತರಿಸಿದ್ದು ಸದಾಶಿವ ನಾಯಕ ಎಂಬ ದೊರೆ. ಇಕ್ಕೇರಿಯಲ್ಲಿರುವ ಅಘೋರೇಶ್ವರ ದೇವಾಲಯದ ಭವ್ಯತೆಯನ್ನು ನೋಡಿಯೇ ಅನುಭವಿಸಬೇಕು. ನಿರೀಕ್ಷೆಗೂ ಮೀರಿದ ಅಗಾಧ ಆಕಾರ, ವಿಶಾಲ ನವರಂಗ, ಕಲಾತ್ಮಕ ಮುಖಮಂಟಪ, ಮುಖಮಂಟಪದೊಳಗಿನ ನಂದಿಯ ಸುಂದರ ಮೂರ್ತಿ ಇವೆಲ್ಲವನ್ನೂ ನೋಡುತ್ತಿದ್ದರೆ ದೇವಾಲಯದ ಪ್ರಾಂಗಣವನ್ನು ಬಿಟ್ಟು ಬರಲು ಮನಸ್ಸಾಗುವುದಿಲ್ಲ. ದೇವಾಲಯದ ಅಗಾಧ ಗಾತ್ರಕ್ಕೆ ತಕ್ಕಂತೆ ಇದೆ ನಂದಿಯ ಗಾತ್ರ.


ಕೆಳದಿ ಅರಸ ಸದಾಶಿವ ನಾಯಕನ ಪುತ್ರ ಸಂಕಪ್ಪ ನಾಯಕನು ಉತ್ತರ ಭಾರತ ಪ್ರವಾಸದಲ್ಲಿದ್ದಾಗ ಅಲ್ಲಿ ಕಂಡಿದ್ದ ಅಘೋರೇಶ್ವರನ ಸುಂದರ ಮೂರ್ತಿಯಿಂದ ಪ್ರಭಾವಿತನಾಗಿ, ತನ್ನ ರಾಜಧಾನಿಯಲ್ಲಿ ಅದೇ ತರಹದ ಮೂರ್ತಿಯನ್ನು ನಿರ್ಮಿಸಬೇಕೆಂದು ಅದರ ಚಿತ್ರವನ್ನು ಬರೆಸಿಕೊಂಡು ಹಿಂತಿರುಗಿದನೆಂದು ಕೆಳದಿಯ ಗ್ರಂಥ 'ನೃಪವಿಜಯ'ದಲ್ಲಿ ಉಲ್ಲೇಖವಾಗಿದೆ. ಅದೇ ಪ್ರಕಾರ ಇಕ್ಕೇರಿಯಲ್ಲಿ ಬೃಹತ್ತಾದ ಅಘೋರೇಶ್ವರ ಮೂರ್ತಿಯನ್ನು ಶಿಲೆಯಲ್ಲಿ ನಿರ್ಮಿಸಿದನೆಂದು ನೃಪವಿಜಯ ತಿಳಿಸುತ್ತದೆ. ಈಗ ಗರ್ಭಗುಡಿಯಲ್ಲಿ ಮೂಲ ಅಘೋರೇಶ್ವರ ಮೂರ್ತಿ ಇಲ್ಲ. ಸುಮಾರು ನಾಲ್ಕು ಅಡಿ ಎತ್ತರದ ಪೀಠ ಮಾತ್ರ ಈಗ ಉಳಿದಿದೆ. ಇದರ ಮೇಲೆ ಒಂದು ಸಣ್ಣ ಲಿಂಗವನ್ನಿರಿಸಿ ಈಗ ಪೂಜೆ ಸಲ್ಲಿಸಲಾಗುತ್ತಿದೆ.


ಅಘೋರೇಶ್ವರ ದೇವಸ್ಥಾನದ್ದು ಏಕಕೂಟ ರಚನೆಯಾಗಿದ್ದು, ಬೃಹತ್ ಗರ್ಭಗೃಹ, ಅಂತರಾಳ ಮತ್ತು ವಿಶಾಲ ನವರಂಗಗಳನ್ನು ಹೊಂದಿದೆ. ನವರಂಗವು ೧೬ ಬೃಹತ್ ಆಕಾರದ ಕಲಾತ್ಮಕ ಕಂಬಗಳನ್ನು ಹೊಂದಿದೆ. ದೇವಸ್ಥಾನಕ್ಕಿರುವ ೩ ದ್ವಾರಗಳೂ ನವರಂಗಕ್ಕೇ ತೆರೆದುಕೊಳ್ಳುತ್ತವೆ. ಪ್ರಮುಖ ದ್ವಾರದ ಮುಂದೆನೇ ಮುಖಮಂಟಪವಿದ್ದು, ನಂದಿ ಆಸೀನನಾಗಿದ್ದಾನೆ. ಅಘೋರೇಶ್ವರ ದೇವಸ್ಥಾನದ ಪಕ್ಕದಲ್ಲೇ ಪಾರ್ವತಿಯ ಗುಡಿಯಿದೆ.


ಕೆಳದಿ ವಾಸ್ತುಶೈಲಿಯಲ್ಲಿ ಮಾತ್ರ ಇರುವ ವೈಶಿಷ್ಟ್ಯತೆಯೆಂದರೆ ದೇವಾಲಯದ ಪ್ರಮುಖ ದ್ವಾರದ ಒಳಗೆ ಮತ್ತು ಗರ್ಭಗುಡಿಯ ದ್ವಾರದ ಮುಂದೆ ನೆಲದಲ್ಲಿ ಚಿತ್ರಿಸಲಾಗಿರುವ ಮನುಷ್ಯರ ಉಬ್ಬುಶಿಲ್ಪ ಅಥವಾ ರೇಖಾಚಿತ್ರಗಳು. ಈ ಚಿತ್ರ/ಶಿಲ್ಪ ಗಳು ಯಾವಾಗಲೂ ಎರಡೂ ಕೈಗಳನ್ನು ಜೋಡಿಸಿ ಸ್ವಾಗತಗೈಯುವ ರೂಪದಲ್ಲೇ ಇರುತ್ತವೆ. ದೇವಾಲಯಕ್ಕೆ ಬರುವವರನ್ನು ಸ್ವಾಗತಿಸಲು ಮತ್ತು ದೇವಸ್ಥಾನದಂತಹ ಪವಿತ್ರ ಸ್ಥಳಕ್ಕೆ ಬರುವವರ ಪಾದ ಸೇವೆ ಮಾಡಲೋಸುಗ ದ್ವಾರದ ಮುಂದೆಯೇ ಈ ಶಿಲ್ಪ/ಚಿತ್ರಗಳನ್ನು ಬಿಡಿಸಲಾಗುತ್ತಿತ್ತು. ಒಳಗೆ ಬರುವವರು ಇವುಗಳನ್ನು ತುಳಿದೇ ಮುಂದೆ ಬರಬೇಕಾಗುತ್ತದೆ. ಕವಲೇದುರ್ಗದ ಕೋಟೆಯ ೩ನೇ ಸುತ್ತಿನಲ್ಲಿರುವ ಕೆಳದಿ ರಾಜರೇ ನಿರ್ಮಿಸಿರುವ ಕಾಶಿ ವಿಶ್ವನಾಥ ದೇವಸ್ಥಾನವನ್ನು ಪ್ರವೇಶಿಸುವಾಗಲೂ ದ್ವಾರದ ಒಳಗೆ ಕಾಲಿಟ್ಟೊಡನೆಯೇ ರಾಜನರ್ತಕಿಯ ರೇಖಾಚಿತ್ರವನ್ನು ತುಳಿದೇ ಬರಬೇಕಾಗುತ್ತದೆ. ಅಂತಹ ಸ್ವಾಗತ ದೇವಸ್ಥಾನಕ್ಕೆ ಬರುವವರಿಗೆ! ಕೆಳದಿಯ ರಾಮೇಶ್ವರ ದೇವಸ್ಥಾನದಲ್ಲೂ ಗರ್ಭಗುಡಿಯ ಮುಂದೆ ಇದೇ ರೀತಿಯ ಉಬ್ಬುಶಿಲ್ಪಗಳಿವೆ.


ಇನ್ನೊಂದು ವಾದವೆಂದರೆ...ದೇವಾಲಯ ನಿರ್ಮಾಣ ಸಮಯದಲ್ಲಿ ಯಾವುದಾದರು ಪ್ರಾಣಿ/ಜಂತು/ಮನುಷ್ಯ ಮರಣ ಉಂಟಾದರೆ ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಲು ಅರಸರು ತಮ್ಮ ಉಬ್ಬುಶಿಲ್ಪಗಳನ್ನು ನಿರ್ಮಿಸಲು ಆದೇಶ ನೀಡುತ್ತಿದ್ದರು. ದೇವಾಲಯಕ್ಕೆ ಬರುವವರು ಈ ಉಬ್ಬುಶಿಲ್ಪ ಅಥವಾ ರೇಖಾಚಿತ್ರಗಳನ್ನು ತುಳಿದೇ ಬರಬೇಕಾಗುತ್ತಿದ್ದರಿಂದ ಆ ರೀತಿಯಲ್ಲಿ ಪ್ರಾಯಶ್ಚಿತ್ತ ಪಡೆದಂತಾಗುವುದು ಎಂಬ ಅಭಿಪ್ರಾಯ. ಕವಲೇದುರ್ಗದ ದೇವಸ್ಥಾನದಲ್ಲಿ ರಾಜನರ್ತಕಿಯು ತನ್ನ ರೇಖಾಚಿತ್ರವನ್ನು ದೇವಸ್ಥಾನದ ದ್ವಾರದಲ್ಲಿ ರಚಿಸುವಂತೆ ಅರಸರಲ್ಲಿ ನಿವೇದನೆಯಿಟ್ಟಿರಬಹುದು.

ಮಾಹಿತಿ: ಜಯದೇವಪ್ಪ ಜೈನಕೇರಿ

3 ಕಾಮೆಂಟ್‌ಗಳು:

rakesh holla ಹೇಳಿದರು...

Very Nice article..

sunaath ಹೇಳಿದರು...

ರಾಜೇಶ,
ನಿಮ್ಮ ಆಮಂತ್ರಣಕ್ಕೆ ಧನ್ಯವಾದಗಳು.
ನಾನು ಸ್ವತಃ ಹೋಗದೆ ಇದ್ದ ಸ್ಥಳಗಳನ್ನೆಲ್ಲ ನಿಮ್ಮ ಮೂಲಕ
ನೋಡಿದಂತಾಯಿತು.
ನೀವು ಕೊಡುತ್ತಿರುವ ವಿವರಣೆಗಳು ತುಂಬಾ ಚೆನ್ನಾಗಿ ಇವೆ.
ಇವನ್ನೆಲ್ಲ ಸಂಕಲಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದರೆ ಅತ್ಯಂತ ಉಪಯುಕ್ತವಾಗುವದರಲ್ಲಿ ಸಂದೇಹವಿಲ್ಲ.

ರಾಜೇಶ್ ನಾಯ್ಕ ಹೇಳಿದರು...

ರಾಕೇಶ,
ಥ್ಯಾಂಕ್ಸ್.

ಸುನಾಥ್,
ಪುಸ್ತಕದ ಸಹವಾಸ ಸದ್ಯಕ್ಕೆ ಬೇಡ್ರೀ ಸರ. ಪ್ರೋತ್ಸಾಹಕ್ಕೆ ಧನ್ಯವಾದಗಳು.