ಮಂಗಳವಾರ, ಡಿಸೆಂಬರ್ 16, 2008

ಮೈಲಾರಲಿಂಗೇಶ್ವರ ದೇವಾಲಯ - ಮೈಲಾರ


೦೯-೦೩-೨೦೦೮.

ಮೈಲಾರ ಜಾತ್ರೆಯ ಬಗ್ಗೆ ಬಹಳ ಕೇಳಿದ್ದೆ. ಲಕ್ಷಗಟ್ಟಲೆ ಜನರು ಒಟ್ಟಾಗುವ ಈ ಜಾತ್ರೆ ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲೊಂದು. ಮೈಲಾರದ ಮೈಲಾರಲಿಂಗೇಶ್ವರ ದೇವಾಲಯವನ್ನು ನೋಡಬೆಕೆನ್ನುವ ಆಸೆ ಕೊನೆಗೂ ಈಡೇರಿತು. ಆದರೆ ನಿರಾಸೆಯೂ ಆಯಿತು. ಇದೊಂದು ಪ್ರಾಚೀನ ದೇವಾಲಯವಿರಬಹುದೆಂದು ನಾನು ಊಹಿಸಿದ್ದೆ. ಆದರೆ ಇದು ಅತ್ಯಾಧುನಿಕ ದೇವಾಲಯವಾಗಿತ್ತು.


ಬಣ್ಣಬಣ್ಣದ ಅಷ್ಟೆತ್ತರದ ಸುಂದರ ಸ್ವಾಗತ ಗೋಪುರ, ಅತಿ ವಿಶಾಲ ಪ್ರಾಂಗಣ, ಚಪ್ಪಲಿ ಇಡಲು ಪ್ರತ್ಯೇಕ ಕೌಂಟರ್, ಪ್ರವೇಶ ಶುಲ್ಕ, ಗರ್ಭಗುಡಿಯ ಮೇಲೆ ಇನ್ನಷ್ಟು ಸುಂದರವಾಗಿರುವ ಬಣ್ಣಬಣ್ಣದ ಗೋಪುರ. ಎಲ್ಲೆಲ್ಲೂ ಮಾರ್ಬಲ್! ಗೋಡೆಯಲ್ಲೂ, ನೆಲದಲ್ಲೂ ಎಲ್ಲೆಲ್ಲೂ ಮಾರ್ಬಲ್. ಅಂಗಿ ಕಳಚಿ ಅಂತರಾಳದೊಳಗೆ ಪ್ರವೇಶಿಸಬೇಕೆಂಬ ನಿಯಮ. ಇಲ್ಲದಿದ್ದರೆ ಮಾರ್ಬಲ್ ಹಾಸಿ, ಹೊಳೆಯುವಂತೆ ಮಾಡಲಾಗಿದ್ದ ನವರಂಗದಲ್ಲೇ ನಿಂತು ಮೈಲಾರಲಿಂಗೇಶ್ವರನ ದರ್ಶನ ಮಾಡಿ ತೃಪ್ತಿಪಟ್ಟುಕೊಳ್ಳಬೇಕು.


ದೇವಾಲಯದ ಹೊರಗೆ ಮಹಿಳೆಯೊಬ್ಬಳು ಮೈಲಾರಲಿಂಗೇಶ್ವರನಿಗೆ ಸಾಷ್ಟಾಂಗ ನಮಸ್ಕಾರ ಸೇವೆ ಮಾಡುತ್ತಿದ್ದಳು. ದೇವಾಲಯದ ಸುತ್ತಲೂ ಹಾಸಿರುವ ಚಪ್ಪಡಿಕಲ್ಲಿನ ಮೇಲೆ ಉರಿಬಿಸಿಲಿನಲ್ಲಿ ಈಕೆಯ ದೇಹ ದಂಡಿಸಿಕೊಳ್ಳುವ ಸೇವೆ ನೋಡಿ ದಂಗಾದೆ. ಸಾಷ್ಟಾಂಗ ನಮಸ್ಕಾರ ಮಾಡುವುದು, ನಂತರ ಎದ್ದು ೫ ಹೆಜ್ಜೆ ನಡೆದು ಮತ್ತೆ ಸಾಷ್ಟಾಂಗ ನಮಸ್ಕಾರ! ನಾವು ದೇವಾಲಯವನ್ನು ಸಂಪೂರ್ಣವಾಗಿ ನೋಡಿ ಮುಗಿಸಿದರೂ ಈಕೆ ೨ ಸುತ್ತು ಮಾತ್ರ ಮುಗಿಸಿದ್ದಳು. ಎಷ್ಟು ಸುತ್ತುಗಳ ಸೇವೆಯಿತ್ತೇನೋ. ಅಬ್ಬಾ ಭಕ್ತಿಯೇ!


ದೇವಾಲಯದ ಆಧುನಿಕತೆ ನೋಡಿ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ದೇವಾಲಯ ಇದಾಗಿರಲಾರದು ಎಂಬ ಸಂಶಯ ಬರಲಾರಂಭಿಸಿತು. ಈ ದೇವಸ್ಥಾನದಿಂದ ಅನತಿ ದೂರದಲ್ಲಿ ಸಂಪೂರ್ಣವಾಗಿ ಪಾಳುಬಿದ್ದಿರುವ ತುಂಬಾ ಸಣ್ಣ ದೇವಾಲಯವೊಂದಕ್ಕೆ ಬೇಲಿ ಹಾಕಲಾಗಿತ್ತು. ಅಲ್ಲೇ ಪುರಾತತ್ವ ಇಲಾಖೆಯ ನೀಲಿ ಮತ್ತು ಕೆಂಪು ಬಣ್ಣದ ಫಲಕ! ಹೊರಗಿನಿಂದ ನೋಡಿದರೆ ಎಲ್ಲರೂ ನಿರ್ಲಕ್ಷಿಸಲೇಬೇಕಾದ ದೇವಸ್ಥಾನ. ಇದೇ ಪುರಾತತ್ವ ಇಲಾಖೆ ಮೈಲಾರದಲ್ಲಿ ತನ್ನ ಸುಪರ್ದಿಗೆ ಪಡೆದಿರುವ ಹಳೇ ಮೈಲಾರಲಿಂಗೇಶ್ವರ ದೇವಾಲಯ. ಒಳಗೆಲ್ಲಾ ಕಸಕಡ್ಡಿಗಳ ರಾಶಿ. ಗರ್ಭಗುಡಿಯಲ್ಲಿ ಪಾಣಿಪೀಠ ರಹಿತ ಶಿವಲಿಂಗ, ಅಂತರಾಳ ಮತ್ತು ನವರಂಗ.


ಆದರೆ ಈ ದೇವಾಲಯದಲ್ಲೊಂದು ನನ್ನನ್ನು ಬಹಳ ಗಲಿಬಿಲಿ ಮಾಡಿದ ವೈಶಿಷ್ಟ್ಯತೆಯಿತ್ತು. ಅದೆಂದರೆ ೨ ನಂದಿಗಳು. ಇದರಲ್ಲೇನೂ ದೊಡ್ಡ ವಿಷಯ ಎಂದಿರಾ? ಒಂದು ನಂದಿ ಅಂತರಾಳದಲ್ಲಿದ್ದರೆ ಇನ್ನೊಂದು ನವರಂಗದಲ್ಲಿದೆ. ನವರಂಗದಲ್ಲಿರುವ ನಂದಿ ಗರ್ಭಗುಡಿಗೆ ಮುಖ ಮಾಡಿ ಇದೆ. ಆದರೆ ಅಂತರಾಳದಲ್ಲಿರುವ ನಂದಿ ಗರ್ಭಗುಡಿಗೆ ಬೆನ್ನು ಮಾಡಿ ಆಸೀನನಾಗಿದೆ!!! ಇದೇ ವಿಶೇಷ. ನಂದಿ ಎಂದಾದರೂ ತನ್ನ ಸ್ವಾಮಿ ಶಿವನಿಗೆ ಬೆನ್ನು ಮಾಡಿ ಕೂತಿರುವುದನ್ನು ಕಂಡಿದ್ದೀರಾ? ಆದರೆ ಇಲ್ಲಿ ಹಾಗಿತ್ತು. ಆ ನಂದಿ ಮೊದಲಿನಿಂದಲೂ ಅಲ್ಲೇ ಇತ್ತೋ ಅಥವಾ ನಂತರ ತಂದಿರಿಸಲಾಯಿತೋ ಎಂದು ತಿಳಿಯಲಿಲ್ಲ. ನಂತರ ತಂದಿರಿಸಿದರೂ, ಹೀಗೆ ಶಿವಲಿಂಗಕ್ಕೆ ಬೆನ್ನು ಮಾಡಿ ಯಾಕೆ ಇರಿಸುತ್ತಾರೆ..ಎಂಬ ಪ್ರಶ್ನೆ ಬಹಳ ಕಾಡಿತು. ಈಗಲೂ ಕಾಡುತ್ತಿದೆ.

ಅಷ್ಟರಲ್ಲಿ ಹುಡುಗನೊಬ್ಬ ಪ್ರತ್ಯಕ್ಷನಾದ. ’ನಮ್ಮಜ್ಜ ಈ ಗುಡಿ ನೋಡ್ಕೋತಾನ್ರಿ’ ಎಂದ. ’ನಿಮ್ಮಜ್ಜ ಈ ಕಸ ತೆಗೆದು ಗುಡಿ ಸ್ವಚ್ಛ ಮಾಡಲ್ಲೇನು’? ಎಂದು ಕೇಳಿದರೆ.... ’ನಿಮ್ಮಂತ ಮಂದಿ ಬರ್ತಾರ್ರಿ... ಹೊಲಸ್ ಮಾಡ್ತಾರ್ರಿ... ಹಂಗೇ ಹೋಗ್ತಾರ್ರಿ ....ನಮ್ಮಜ್ಜಂದೇನೂ ಇಲ್ರಿ...’ ಎನ್ನಬೇಕೆ. ಎಲಾ ಇವನ ಎಂದೆ. ’ಎಲ್ಲಿ ನಿಮ್ಮಜ್ಜ’ ಎಂದು ಕೇಳಲು...’ಆರಾಮ್ ತಗೊಳಾಕ್-ಹತ್ತಾರ್ರಿ...ಅದ್ಕೆ ನಾನ್ ಇಲ್ಲಿದ್ದೀನ್ರಿ’ ಎಂದ. ದೇವಾಲಯದ ಹೆಸರೇನೆಂದು ಕೇಳಲು, ನಾಗರಾಜ ದೇವಾಲಯವೆಂದ! ’ಏನ್ ಮಾತಾಡ್ತಿಲೇ..ಇಷ್ಟ್ ಮಸ್ತ್ ಶಿವಲಿಂಗ ಐತಿ...ಈಶ್ವರ ಗುಡಿ ಅನ್ನೋದ್ ಬಿಟ್ಟ್ ನಾಗರಾಜ ಗುಡಿ ಅಂತಿಯಲ್ಲೇ’ಎಂದೆ. ’ಏ ಇಲ್ರೀ ಸರ...ನಾಗರಾಜ ಗುಡಿನೇ. ನಮ್ಮಜ್ಜ ನೋಡ್ಯಾನ. ಅಂವ ರಾತ್ರಿ ಇಲ್ಲೇ ಇರ್ತಾನ. ನಾಗ್ರಹಾವು ಬರ್ತದ. ಇಲ್ಲಿ ಕುತ್ಕೊಳ್ತದ’ ಎಂದು ಶಿವಲಿಂಗವನ್ನು ತೋರಿಸಿದ. ’ಬೇರೆ ಯಾರ್ ನೋಡ್ಯಾರ ನಾಗರಹಾವ್ನ..? ಎಂದು ಕೇಳಿದರೆ..’ಏ ಯಾರೂ ನೋಡಿಲ್ರೀ...ನಮ್ಮಜ್ಜ ಮಾತ್ರ ನೋಡ್ಯಾನ..’ಎಂದ. ಅಜ್ಜ ಕಟ್ಟಿದ ಕತೆಯೋ...ಮೊಮ್ಮಗ ಕಟ್ಟಿದ ಕತೆಯೋ ತಿಳಿಯಲೇ ಇಲ್ಲ.


ಇನ್ನೇನು ಕಾರು ಸ್ಟಾರ್ಟ್ ಮಾಡಿ ಅಲ್ಲಿಂದ ಹೊರಡಬೇಕೆನ್ನುವಾಗ ರಾಜಭಟರ ದಿರಿಸು ಧರಿಸಿದ ವ್ಯಕ್ತಿಯೊಬ್ಬ ದಾರಿಗಡ್ಡವಾಗಿ ಬಂದುಬಿಟ್ಟ. ಆತನ ಹಿಂದೆ ಮಕ್ಕಳ ಸೈನ್ಯ. ಆ ವ್ಯಕ್ತಿ ನಮ್ಮ ಬಳಿಗೆ ಬಂದು ಹಲ್ಲು ಕಿರಿಯುತ್ತಾ ನಿಂತು ಕೈ ಸನ್ನೆಯಲ್ಲಿ ಏನೇನೋ ಹೇಳತೊಡಗಿದ. ಆತನಿಗೆ ಮಾತು ಬರುವುದಿಲ್ಲ ಎಂದು ತಿಳಿಯಲು ಗೆಳೆಯ ನಿರಂಜನ ಆತನಿಗೆ ಸ್ವಲ್ಪ ಹಣ ಕೊಟ್ಟು ಭುಜ ತಟ್ಟಿದಾಗ ದೊಡ್ಡ ನಗುವನ್ನು ಬೀರಿದ ಆತನ ಪೇಟದ ಬಗ್ಗೆ ಮಾತನಾಡುತ್ತಾ ಹಿರೆಹಡಗಲಿಯತ್ತ ಪ್ರಯಾಣ ಮುಂದುವರಿಸಿದೆವು.

8 ಕಾಮೆಂಟ್‌ಗಳು:

sunaath ಹೇಳಿದರು...

ಎರಡು ನಂದಿಗಳ ವಿಚಿತ್ರ ಸಂಗತಿಯನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು, ರಾಜೇಶ.
ಕರ್ನಾಟಕದ ವಿವಿಧ ಸ್ಥಳಗಳ ಪರಿಚಯ ಮಾಡಿಕೊಡುತ್ತಿದ್ದೀರಿ.
ಓದಲು ಖುಶಿಯಾಗುತ್ತದೆ.

Ashok Uchangi ಹೇಳಿದರು...

ಮೈಲಾರಲಿಂಗೇಶ್ವರ ನಮ್ಮ ಮನೆದೇವರು.ಆದರೆ ನಾನು ಇಲ್ಲಿಗೆ ಹೋಗಿಲ್ಲ.ನಿಮ್ಮ ಮೂಲಕ ದರ್ಶನವಾಯ್ತು.ರಾಣೆಬೆನ್ನೂರು ಸಮೀಪ ಗುಡ್ಡದ ಮೈಲಾರವಿದೆ.ಅದು ನಮ್ಮ ಮೂಲದೇವರಿರುವ ಸ್ಥಳ.
ಮೈಲಾರಲಿಂಗೇಶ್ವರ ದೇವಾಲಯ - ಮೈಲಾರದ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.
ಅಶೋಕ ಉಚ್ಚಂಗಿ
http://mysoremallige01.blogspot.com/

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,
ಥ್ಯಾಂಕ್ಸರೀ ಸರ್.

ಅಶೋಕ್,
ಈಗ ರಾಣೆಬೆನ್ನೂರಿನ ಸಮೀಪದ ಗುಡ್ಡದ ಮೈಲಾರಕ್ಕೆ ಯಾವಾಗಲಾದರೂ ಹೋಗ್ಬೆಕಾಯ್ತಲ್ಲ! ತಿಳಿಸಿದ್ದಕ್ಕೆ ಧನ್ಯವಾದ.

ಶ್ರೀಹರ್ಷ Salimath ಹೇಳಿದರು...

ಪಕ್ಕದಲ್ಲೇ ದೇವರಗುಡ್ಡ ಇದೆ. ಹೋಗಿ ಬಂದಿರಾ ? ಮಹಾಂತೇಶನ ಗುಡಿ ಇದೆ. ಅದ್ಭುತ ದೃಶ್ಯ. ಇಲ್ಲಷ್ಟೇ ಅಲ್ಲ ಬೆಂಗಳೂರಿನ ದೊಡ್ಡ ಬಸವನ ಗುಡಿಯಲ್ಲೂ ನಂದಿ ಒಡೆಯನಿಗೆ ಬೆನ್ನು ಮಾಡಿದ್ದಾನೆ! ಅನೇಕ ಕಡೆ ಇದೆ ಈ ರೀತಿ! ಅಲ್ಲಿ ತನಕ ಬಂದಿದ್ದಿರಾ.. ಒಂದು ಒಮ್ಮೆ ಭೇಟಿ ಮಾಡೋದಲ್ವ ? ನನ್ನದು ದಾವಣಗೆರೆ.
ಅಂದ ಹಾಗೆ ಕಂದವಲ್ಲಿಗೆ ಹೋಗಿದ್ರಾ ? ಕುಮುಟಾದಿಂದ ಹೊನ್ನಾವರಕ್ಕೆ ಹೋಗುವ ದಾರಿಯಲ್ಲಿ ಮರಗಾಲ್ ಎಂಬ ಊರು ಸಿಗುತ್ತದೆ. ಎಡಕ್ಕೆ ೪ ಕಿಮಿ ನಡೆದರೆ ಕಂದವಲ್ಲಿ. ಈಶ್ವರ ಭಟ್ಟರ ಮನೆ ಎಂದರೆ ಯಾರಾದರೂ ಹೇಳ್ತಾರೆ... ನೆನಪಾಗದಿದ್ದರೆ ನನ್ನ ಬ್ಲಾಗ್ ನ ೩ ನೆ ಲೇಖನ ನೋಡಿ. ನೀವು ಭೇಟಿ ನೀಡಿ ಕಾಮೆಂಟ್ ಮಾಡಿದ್ದಿರಿ...

ರಾಜೇಶ್ ನಾಯ್ಕ ಹೇಳಿದರು...

ಶ್ರೀಹರ್ಷ,
ದೇವರಗುಡ್ಡದ ಬಗ್ಗೆ ಗೊತ್ತೇ ಇರಲಿಲ್ಲ. ಗೊತ್ತಿದ್ದರೆ ಖಂಡಿತ ಭೇಟಿ ನೀಡುತ್ತಿದ್ದೆ. ದೊಡ್ಡ ಬಸವನ ಗುಡಿಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಆ ಊರಿನ ಹೆಸರು ’ಮರಾಕಲ್’ ಇರಬೇಕು. ಕುಮಟಾದಿಂದ ಸಿದ್ಧಾಪುರಕ್ಕೆ ಹೋಗುವಾಗ ಮರಾಕಲ್ ಸಿಗುತ್ತದೆ. ನಿಮ್ಮ ಬ್ಲಾಗಿನಲ್ಲಿ ಕಂದವಲ್ಲಿಯ ವರ್ಣನೆ ಓದಿ ಹೋಗಬೇಕು ಅನ್ನಿಸಿದೆ. ಅದಕ್ಕೆ ವಿವರ ಕೇಳಿದ್ದು. ಈಗ ಮಾಹಿತಿ ನೀಡಿದ್ದೀರಾ. ಅದಕ್ಕಾಗಿ ಧನ್ಯವಾದಗಳು.

shivu.k ಹೇಳಿದರು...

ರಾಜೇಶ್,

ಮೈಲಾರಲಿಂಗೇಶ್ವರ ನನ್ನ ಮನೆದೇವರು....ನಾನು ನನ್ನಾಕೆಯೊಡನೆ ಕಳೆದ ವರ್ಷ ಮೈಲಾರಕ್ಕೆ ಹೋಗಿದ್ದೆ....ಲೇಖನ ಮತ್ತು ಫೋಟೊ ನೋಡಿ ಮತ್ತೊಮ್ಮೆ ಹೋಗಿ ಬಂದಂಗೆ ಆಯ್ತು....ಥ್ಯಾಂಕ್ಸ್....

Annapoorna Daithota ಹೇಳಿದರು...

ನೀವೇನಾದ್ರೋ ಆ ಹುಡುಗನ ಅಜ್ಜನನ್ನು ಭೇಟಿ ಮಾಡಿದ್ರೆ ‘ನಂದಿ’ ಕಥೆ ತಿಳೀತಿತ್ತೇನೋ ಅಲ್ವ.....

ರಾಜೇಶ್ ನಾಯ್ಕ ಹೇಳಿದರು...

ಶಿವು,
ಧನ್ಯವಾದ.

ಅನ್ನಪೂರ್ಣ,
ತಿಳಿತಿತ್ತೇನೋ....