ಗುರುವಾರ, ಡಿಸೆಂಬರ್ 04, 2008

ಒಂದು ಶಬ್ದದ ಸುತ್ತ

ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ನನಗುಂಟಾದ ಆಡುಭಾಷೆಯ ಪ್ರಾರಂಭಿಕ ತೊಂದರೆಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರದೇ ಇರದು. ಒಂದೆರಡು, ಆಗ ’ವಿಚಿತ್ರ’ವೆನಿಸಿದ ಶಬ್ದಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡ ಪರಿಯನ್ನು ಇಂದಿಗೂ ನೆನೆಸಿ ಗೆಳೆಯರು ಜೋಕ್ ಮಾಡುತ್ತಾ ಇರುತ್ತಾರೆ. ಬಾಗಲಕೋಟೆಯ ಅನಿಲ್ ಢಗೆ ನನ್ನ ’ರೂಮ್ ಮೇಟ್’ ಆಗಿದ್ದ. ಈ ಮರಾಠ ಹುಡುಗನ ಕನ್ನಡವೇ ವಿಚಿತ್ರವಾಗಿತ್ತು. ಅತ್ತ ಹುಬ್ಬಳ್ಳಿದ್ದೂ ಅಲ್ಲದ, ಇತ್ತ ಬಾಗಲಕೋಟೆಗೂ ಸಲ್ಲದ, ಮಧ್ಯೆ ಬೆಳಗಾವಿಗೂ ಹೊಂದದ ಕನ್ನಡವನ್ನು ಅನಿಲ್ ವಟಗುಟ್ಟುತ್ತಿದ್ದ.

’ಕಟದ’ ಎಂಬುದು ನನಗೆ ಬಹಳ ತೊಂದರೆಯನ್ನುಂಟುಮಾಡಿದ ಶಬ್ದ. ಅರ್ಥ ಯಾವ ಪುಸ್ತಕದಲ್ಲೂ ಸಿಗಲಾರದು. ಪ್ಯೂರ್ ಆಡುಭಾಷೆ. ಸಹಪಾಠಿಯೊಬ್ಬ ವೇಗವಾಗಿ ಬೈಕ್ ಚಲಾಯಿಸಿ ಬಂದಾಗ, ಉಳಿದವರು ’ಏನ್ ಗಾಡಿ ಕಟದ!’ ಎಂದು ಹುಬ್ಬೇರಿಸುವರು. ಸಂಜೆ ರೂಮಿಗೆ ಮರಳಿದ ಬಳಿಕ ನನ್ನದು ಅನಿಲನೆದುರು ಪ್ರಶ್ನೆ - ’ಏನ್ ಗಾಡಿ ಕಟದ!’, ಹಾಗೆಂದರೇನು? ಏನೂ ಅರಿಯದ ಮುಗ್ಧನೊಬ್ಬನಿಗೆ ತಿಳಿಹೇಳುವ ಮಾಸ್ತರನಂತೆ ಅನಿಲ್ ನನಗೆ ೫ ನಿಮಿಷ ವಿವರಿಸಿ ಎಳೆ ಎಳೆಯಾಗಿ ಬಿಡಿಸಿ ತಿಳಿಸುತ್ತಿದ್ದ ’ ಹಾಗೆಂದರೆ, ಆಹ್ ಎನ್ ಫಾಸ್ಟ್ ಆಗಿ ಬೈಕ್ ಬಿಟ್ಕೊಂಡ್ ಬಂದ’ ಎಂದು. ಅಂದ್ರೆ ವೇಗವಾಗಿ ದ್ವಿಚಕ್ರ ವಾಹನವನ್ನು ಚಲಾಯಿಸಿದರೆ ’ಕಟದ’ ಅಂತಾರೆ, ಎಂದು ಹೊಸ ಶಬ್ದ ಕಲಿತಿದ್ದಕ್ಕೆ ಸಂತಸಪಟ್ಟೆ.

ಕೆಲವು ದಿನಗಳ ಬಳಿಕ ಗೆಳೆಯ ನವೀನ, ’ರಾಜಾ, ನಿನ್ನೆ ರಾತ್ರಿ ಊಟಕ್ ಹೋಗಿದ್ವಿ ದೋಸ್ತ...... ಭಟ್ಟಾ ಕುಂತವ ಏಳ್ಲೇ ಇಲ್ಲ ದೋಸ್ತ....ಕಟದ ಕಟದ ಕಟದ...ಅವನವ್ವನ ಹೀಂಗ್ ಕಟದ ಅಂತೀನಿ’ ಎನ್ನತೊಡಗಿದ. ’ಊಟಕ್ಕೆ ಕೂತಲ್ಲೇ ಭಟ್ಟ ವೇಗವಾಗಿ ಬೈಕ್ ಒಡಿಸಿದ್ನಾ?’ ಎಂದು ಕೇಳಲಿಕ್ಕೆ ಬಾಯಿ ತೆರೆದವ, ಅದು ಹೇಗೆ ಸಾಧ್ಯ ಎಂದೆನಿಸಿ ಸುಮ್ಮನಾದೆ. ಈ ಬಾಗಲಕೋಟೆಯ ಬದ್ಮಾಶ್ ನನಗೇನಾದ್ರು ತಪ್ಪು ಅರ್ಥ ಹೇಳಿಕೊಟ್ಟಿತೊ ಹೇಗೆ? ವಿಚಾರಿಸೋಣ ಎಂದು ರೂಮಿಗೆ ಬಂದೊಡನೆ ಅನಿಲನಿಗೆ ಎಲ್ಲಾ ವಿವರಿಸಿದೆ. ಬಿದ್ದು ಬಿದ್ದು ನಕ್ಕ ಆತ, ’ಹೊಟ್ಟೆಬಾಕನಂತೆ ಊಟ ಮಾಡಿದರೂ’ ಕಟದ ಅಂತಾರೆ ಎಂದು ಮತ್ತೊಂದು ಪಾಠ ಮಾಡಿದ.

ಮುಂದಿನ ದಿನಗಳಲ್ಲಿ, ಚೆನ್ನಾಗಿ ಬಾಡಿ ಹಾಗೂ ಕಟ್ಸ್ ಮೈಂಟೈನ್ ಮಾಡಿಕೊಂಡಿದ್ದ ಸುಪ್ರೀತ್ ತಾನು ಯಾರಿಗೋ ಧಾರವಾಡದಲ್ಲಿ ತದಕಿದ ಬಗ್ಗೆ ’ಹೀಂಗ್ ಕಟದೆ ದೋಸ್ತ ಅವಂಗೆ..... ’ ಅಂದಾಗ, ಇಲ್ಲಿ ಬೈಕ್ ಮತ್ತು ಊಟ ಎರಡೂ ಮ್ಯಾಚ್ ಆಗ್ತಾ ಇಲ್ವಲ್ಲಾ ಎಂದು ಮತ್ತೆ ಅನಿಲನಲ್ಲಿ ಓಡಿದೆ. ಈ ಬಾರಿಯಂತೂ ಆತ, ’ಯೆ ಯಾವ್ವಲೇ ನೀನ’ ಎಂದು ದೊಡ್ಡದಾಗಿ ನಗುತ್ತಾ ’ಚೆನ್ನಾಗಿ ಎರಡೇಟು ಕೊಟ್ಟರೂ ಕಟದ ಅಂತಾರೆ’ ಅಂದ.

ಮತ್ತೆ ನನಗೆ ಅರಿವಾಗತೊಡಗಿತು - ಸ್ವಲ್ಪ ಅತಿಯಾಗಿ ಯಾವುದನ್ನು ಮಾಡಿದರೂ ಅದಕ್ಕೆ ’ಕಟದ’ ಶಬ್ದವನ್ನು ಬಳಸಿ ವಾಕ್ಯ ರಚಿಸುತ್ತಾರೆ ಎಂದು. ಕ್ರಿಕೆಟ್ ಪಂದ್ಯದ ಸಮಯದಲ್ಲಿ ಸಚಿನ್ ಚೆನ್ನಾಗಿ ಸ್ಕೋರ್ ಮಾಡಿದ್ರೆ ’ಸಚಿನ್ ಏನ್ ಕಟದ ದೋಸ್ತ’ ಎಂದು, ಐದಾರು ಬಾಳೆಹಣ್ಣು ತಿಂದರೆ ’ ಏನ್ ಬಾಳೆಹಣ್ ಕಟಿತೀಲೆ’ ಎಂದು, ಅತಿಯಾಗಿ ಸ್ವೀಟ್ಸ್ ತಿಂದರೆ ’ಅಂವ, ಖತ್ರು(ಖತರ್ನಾಕ್) ಸ್ವೀಟ್ ಕಟದ ದೋಸ್ತ’ ಎಂದು, ವೇಗವಾಗಿ ಬಸ್ ಚಲಾಯಿಸುವ ಚಾಲಕನಿಗೆ ’ಅಂವ ಏನ್ ಕಟೀತಾನ್ಲೇ’ ಎಂದು, ಭರ್ಜರಿ ಊಟ ಮಾಡಿದರೆ ’ಮದ್ವಿ ಊಟ ಶಿಸ್ತ್ ಕಟದೇವ್’ ಎಂದು ಹೀಗೆ..... ಸಾಗುತ್ತದೆ ’ಕಟದ’ ಎಂಬ ಶಬ್ದದ ಸಾರ್ವಭೌಮತೆ.

13 ಕಾಮೆಂಟ್‌ಗಳು:

Parisarapremi ಹೇಳಿದರು...

nanna kannada vocabulary svalpa improve aaytu..

oLLe kaTada.. :-)

Lakshmi S ಹೇಳಿದರು...

:) :) sakhat !

Srikanth - ಶ್ರೀಕಾಂತ ಹೇಳಿದರು...

ಒಳ್ಳೆ ವಿಚಾರ ತಿಳಿಸಿದ್ದೀರ. ಬೆಂಗಳೂರಿನ ಕಡೆ 'ಹೊಡೆದ' ಅನ್ನೋ ಪದವನ್ನೂ ಹೀಗೇ ಉಪಯೋಗಿಸುವದನ್ನು ನೋಡಬಹುದು.

"ಗಾಡಿ ಹೊಡೆದ... ಹೊಡೆದ... ಹೆಂಗ್ ಹೊಡೆದ ಗೊತ್ತಾ?" ಅಂದರೆ ತುಂಬ ವೇಗವಾಗಿ ಗಾಡಿ ಒಡಿಸಿದ ಅಂತ

"ಊಟ ಸಖತ್ತಾಗಿ ಹೊಡೆದ" ಅಂದರೆ ಸಿಕ್ಕಾಪಟ್ಟೆ ತಿಂದ ಅಂತ
"ಹೆಂಗೆ ಬೊಬ್ಬೆ ಹೊಡೆದ ಗೊತ್ತಾ?" ಅಂದರೆ ಸಿಕ್ಕಾಪಟ್ಟೆ ಕೂಗಿಬಿಟ್ಟ/ಕಿರುಚಿಕೊಂಡ ಅಂತ
"ಅಪ್ಪ ಸಿಕ್ಕಾಪಟ್ಟೆ ಹೊಡೆದರು ಕಣೋ" ಅಂದರೆ ಅಪ್ಪ ಬಹಳ ಏಟು ಕೊಟ್ಟರು ಅಂತ
"ಈ ಕೆಲಸ ಏನು ಮಹಾ? ಎಲ್ಲಾ ಗೊತ್ತಿದ್ದ ಕೆಲಸಾನೇ... ಹೊಡೆದು ಜಾಡಿಸಿಬಿಟ್ಟೆ" ಆಂದರೆ ಅನಾಯಾಸವಾಗಿ ಕೆಲಸ ಮಾಡಿ ಮುಗಿಸಿಬಿಟ್ಟೆ ಅಂತ
"ಸಚಿನ್ ಹೊಡೆದ... ಹೊಡೆದ... ಫ್ಲಿಂಟಾಫಿಗೆ..." ಅಂದರೆ ಸಚಿನ್ ಫ್ಲಿಂಟಾಫ್ ಬೌಲಿಂಗಿನಲ್ಲಿ ಬಹಳ ರನ್ ಗಳಿಸಿದ ಅಂತ

ಆದರೆ ಉಡುಪಿಯಲ್ಲಿ ಇದನ್ನು ಗಮನಿಸಿಲ್ಲ.

vijaykannantha ಹೇಳಿದರು...

:-) hosa shabda ondu tiLisiddakke dhanyaavaada...adara yella udaaharaNegaLannu kATadiddeeri...

Keshav Kulkarni ಹೇಳಿದರು...

ನಾಯ್ಕರೇ,
ಕಟ್ಯೂದರ ಬಗ್ಗೆ ಭಾರೀ ಕಟದಿರಿ, ಮತ್ತ ಮತ್ತ ಕಟದಿದ್ದ‍s ಕಟದಿದ್ದು, ಅಷ್ಟ ಛೊಲೊ ಬರೀರಪಾ!

ಕೇಶವ
www.kannada-nudi.blogspot.com

Srik ಹೇಳಿದರು...

ನಮ್ಮ ಕಡೆಯ 'ಬಾರಿಸಿದ', 'ಚಚ್ಚಿದ', 'ತದುಕಿದ', 'ಚಿಂದಿ', 'ಚಿತ್ರಾನ್ನ' ಎಂಬುದು ನಿಮ್ಮ 'ಕಟದ' ಕ್ಕೆ ಹೋಲಿಸಬಹುದು.

"ಊಟ ಹೇಗೆ ಬಾರಿಸಿದ ನೋಡಿದ್ಯಾ!"
"ತೆಂಡುಲ್ಕರ್ ನನ್ಮಗ ಸಕ್ಕತ್ತಾಗಿ ಬಾರಿಸಿದ ಇವತ್ತು"
"ಗೊತ್ತಿದ್ದ ಪ್ರಷ್ಣೆನೇ. ಸರಿಯಾಗಿ ಬಾರಿಸಿ ಬಿಸಾಕಿದೆ ನೋಡು!"
"ಬಲೇ ಸ್ವೀಟ್ ಬಾರಿಸ್ತೀಯಲ್ಲೊ ಮಗ"
"ಏನು ಬಡಪಾಯಿ ಬೈಕು ಸಿಕ್ತು ಅಂತ ಚಚ್ಚಿ ಬಿಸಾಕ್ತಾ ಇದೀಯ?"
"ಆ ಹೀರೂಯಿನ್ ಸಕತ್ ಚಿಂದಿಲೋ..ಸೂಪರ್ ಆಗಿದಾಳೆ"

ಕನ್ನಡ ಈ ರೀತಿ diverse ಆಗಿರೋದಿಕ್ಕೇ ಅದನ್ನು ಕಸ್ತೂರಿ ಎಂದಿರಬೇಕು ಅನ್ನಿಸುತ್ತದೆ!

shreedevi kalasad ಹೇಳಿದರು...

ಇನ್ನೊಂದು ಗೊತ್ತಾ? ನಮ್ಮ ಕಡೆ ಸವತೆಬೀಜ ಕಟಿಯೋದು ಅಂತಾರೆ. ಶಾವಿಗೆ ಎಳೆಎಳೆಯಾಗಿ ಇರತ್ತೆ. ಆದರೆ ಸವತೆಬೀಜ ಅಂದ್ರೆ ಹೆಬ್ಬೆರಳು ತೋರ್‍ಬೆರಳು ನಡುವೆ ಸವತೆಬೀಜದ ಆಕಾರದಲ್ಲಿ ಹಿಟ್ಟನ್ನು ಚಿಕ್ಕದಾಗಿ ಹೊಸೆಯುತ್ತಾರೆ. ನಂತರ ಅದನ್ನು ಬಿಸಿಲಿಗೆ ಒಣಗಿಸಿ ವರ್ಷಪೂರ್ತಿ ಇಟ್ಟುಕೊಂಡು ಬೇಕಾದಾಗ ಪಾಯಸ ಮಾಡಿಕೊಂಡು ತಿನ್ನಬಹುದು.
ನಿಮ್ಮ ಬರೆವಣಿಗೆ ಶೈಲಿ ಇಷ್ಟವಾಯ್ತು

shivu K ಹೇಳಿದರು...

ರಾಜೇಶ್ ಸಾರ್,
ಏನ್ "ಕಟದ" ಬರೀತೀರ್ರೀ...ಅನ್ನಬೇಕನ್ನಿಸುತ್ತದೆ. ಓದುತ್ತಾ ನಗುಬಂತು. ಬರವಣಿಗೆಯ ಶೈಲಿ ಇಷ್ಟವಾಯ್ತು. ಅಂದಹಾಗೆ ನೀವು ನನ್ನ ಕ್ಯಾಮೆರಾ ಹಿಂದೆ ಬ್ಲಾಗಿಗೆ ಮಾತ್ರ ಬರುತ್ತಿದ್ದಿರಿ. ಒಮ್ಮೆ ನನ್ನ ಛಾಯಾಕನ್ನಡಿ ಬ್ಲಾಗಿಗೆ ಬನ್ನಿ ಅಲ್ಲಿ ನಿಮಗಿಷ್ಟವಾದ ಫೋಟೋ ಮತ್ತು ಲೇಖನ ಸಿಗಬಹುದು.
ಆಹಾಂ! ಕ್ಯಾಮೆರಾ ಹಿಂದೆ ಬ್ಲಾಗಿನಲ್ಲಿ ಹಿರಿಯಜ್ಜ ಬಂದಿದ್ದಾನೆ ಬಿಡುವು ಮಾಡಿಕೊಂಡು ಬನ್ನಿ.

sunaath ಹೇಳಿದರು...

ಮಸ್ತ ಕಟದೀರಿ,ರಾಜೇಶ!

ನಾನು ಕಾಲೇಜಿನೊಳಗ ಇದ್ದಾಗ,ಪರೀಕ್ಷೆಗಳ ಬಗೆಗೂ ಇಂಥಾವ dialogues ನಡೀತಿದ್ದವು:

ಒಬ್ಬ ವಿದ್ಯಾರ್ಥಿ: ಏನರ ಕಟದ ಬಂದ್ಯೊ ಇಲ್ಲೊ?
ಇನ್ನೊಬ್ಬ: ಶಿಸ್ತ ಕಟದೇನಿ,ಪೇಪರ ಚೆಕ್ ಮಾಡಾಂವ , ಅದನ್ನ ಹರದ ಒಗದಿರಬೇಕು!

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ತುಂಬಾ ಚೆನ್ನಾಗಿದೆ ನಿಮ್ಮ ಬರವಣಿಗೆ. ತುಂಬಾನೇ ನಗು ಬಂತು.

Shiv ಹೇಳಿದರು...

ರಾಜೇಶ್,

ಕಟದ ಬಗ್ಗೆ ಚೆನ್ನಾಗಿ ಬರಿದೀರಿ..
ಹಿಂಗೆ ಸಾಗಲಿ ನಿಮ್ಮ 'ಕಟದಿವಿಕೆ'!

ಅನಾಮಧೇಯ ಹೇಳಿದರು...

Rajesh,


Nice One, It got back the memories of Belgaum...

vikram

ರಾಜೇಶ್ ನಾಯ್ಕ ಹೇಳಿದರು...

ಅರುಣ್, ಲಕ್ಷ್ಮಿ,
ಪ್ರತಿಕ್ರಿಯೆಗಾಗಿ ಥ್ಯಾಂಕ್ಸ್.

ಶ್ರೀಕಾಂತ್,
ಹೊಡೆದ, ಬಾರಿಸಿದ ಎಂಬ ಶಬ್ದ ಬಳಸಿದರೆ ನನಗೆ ಸುಲಭದಲ್ಲೇ ಅರ್ಥವಾಗುತ್ತಿತ್ತು. ಆದರೆ ಕಟದ?! ಚಾನ್ಸೇ ಇಲ್ಲ.

ವಿಜಯ್, ಕೇಶವ್
ಧನ್ಯವಾದ.

ಶ್ರೀಕಾಂತ್,
ನಿಮ್ಮ ಉದಾಹರಣೆಗಳು ಸೂಪರ್. ಆ ಶಬ್ದಗಳನ್ನೂ ಅರ್ಥಮಾದಿಕೊಳ್ಳಬಲ್ಲೆ. ಆದರೆ ’ಕಟದ’ವನ್ನು ಸುಲಭದಲ್ಲಿ ಅರಗಿಸಿಕೊಳ್ಳಲು ಆಗಲಿಲ್ಲ.

ಶ್ರೀದೇವಿ,
ಈ ’ಸವತೆಬೀಜ ಕಟಿಯೋದು’ ಗೊತ್ತಿರಲಿಲ್ಲ ನೋಡಿ. ಕಟದದ ಮತ್ತೊಂದು ಪದ ಪ್ರಯೋಗದ ಬಗ್ಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್.

ಶಿವು,
ಧನ್ಯವಾದ. ನಿಮ್ಮ ಬ್ಲಾಗುಗಳನ್ನು ನಾನು ಓದುತ್ತಿಲ್ಲ ಎಂದು ಯಾರು ಹೇಳಿದ್ದು ನಿಮ್ಗೆ? ನಿಮ್ಮ ಎರಡೂ ಬ್ಲಾಗುಗಳನ್ನು ತಪ್ಪದೇ ಓದುತ್ತೇನೆ. ಟಿಪ್ಪಣಿ ಬರೆಯಲಿಲ್ಲ ಎಂಬ ಕಾರಣಕ್ಕೆ ಓದಲಿಲ್ಲ ಎಂದು ತಿಳಿದುಕೊಳ್ಳಬೇಡಿ.

ಸುನಾಥ್,
ಹ್ಹ ಹ್ಹ ಅದೂ ಹೌದು. ನನ್ನ ಗೆಳೆಯರೂ ಹಾಗೇ ಮಾತನಾಡಿಕೊಳ್ಳುತ್ತಿದ್ದರು.

ಪ್ರಕಾಶ್,
ಥ್ಯಾಂಕ್ಸ್. ನಿಮ್ಮ ’ಇಟ್ಟಿಗೆ ಸಿಮೆಂಟ್’ ಸ್ಟ್ರಾಂಗ್ ಆಗಿದೆ.

ಆಗಂತುಕ,
ನೀವು ಏನನ್ನು ಸೂಚಿಸಿದ್ದಿರೋ ಅದನ್ನು ಇಲ್ಲಿ ಬರೆಯಲಾಗುವುದಿಲ್ಲ ಎಂದು ಲೇಖನದಲ್ಲಿ ಬರೆಯಲಿಲ್ಲ!

ಶಿವ್,
ಎಲ್ಲಿದ್ದೀರಿ ಸಾರ್. ಅಂತೂ ಇವತ್ತು ಪಾತರಗಿತ್ತಿಯಲ್ಲಿ ಒಂದು ಪೋಸ್ಟ್ ಬಂತು. ಓದಿದೆ.

ವಿಕ್ರಮ್,
ಥ್ಯಾಂಕ್ಸ್. ’ಕಟದ’ದ ಎಲ್ಲಾ ನೆನಪುಗಳು ಆದ್ವೋ?!